ಕಾಪು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ
ಕಾಪು : ಶುಕ್ರವಾರ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಬರ್ಬರವಾಗಿ ಕೊಲೆಗೈದು, ಮನೆಯಂಗಳದಲ್ಲೇ ಸುಟ್ಟು ಹಾಕಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೂಳೂರು ಐದು ಸೆಂಟ್ಸ್ ಕಾಲೊನಿ ನಿವಾಸಿ ಹೇಮಂತ್ ಪೂಜಾರಿ (45) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಆತನನ್ನು ಪುಂಚಲಕಾಡು ನಿವಾಸಿ ಅಲ್ಬನ್ ಡಿ. ಸೋಜ (50) ಕೊಲೆ ನಡೆಸಿದ್ದನು.
ಇಬ್ಬರೂ ಕೂಡಾ ಸ್ನೇಹಿತರಾಗಿದ್ದು, ಜೊತೆಗೂಡಿ ಕುಡಿಯುವ ಛಟ ಹೊಂದಿದ್ದರು. ಶುಕ್ರವಾರ ಸಂಜೆ ಕ್ಷುಲ್ಲಕ ಕಾರಣವೊಂದಕ್ಕೆ ಇಬ್ಬರ ನಡುವೆ ಜಗಳವುಂಟಾಗಿದ್ದು, ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿತ್ತು.
ಕೊಲೆ ಗಡುಕ ಆರೋಪಿಯು ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮನೆಯ ಅಂಗಳದಲ್ಲೇ ಮರದ ತುಂಡುಗಳು ಮತ್ತು ಸೋಗೆ ಮಡಲುಗಳನ್ನು ಹಾಕಿ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದನು.
ಸ್ಥಳೀಯರು ಸಕಾಲಿಕವಾಗಿ ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿ ಹೆಣವನ್ನು ಸುಟ್ಟು ಹಾಕಿ, ಸಾಕ್ಷ್ಯ ನಾಶ ಮಾಡುವ ದುಷ್ಕೃತ್ಯವನ್ನು ತಡೆಹಿಡಿದಿದ್ದರು.
ಸೂರಿ ಶೆಟ್ಟಿ ಕಾಪು ಸುಟ್ಟ ಹೆಣವನ್ನು ತೆಗೆಯಲು ಸಹಕರಿಸಿದರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಶ್ರೀಶೈಲ ಮುರಗೋಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು,
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
