Updated News From Kaup
ಏಪ್ರಿಲ್ 7 (ನಾಳೆ) : ಪಡುಬಿದ್ರಿಯಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

Posted On: 06-04-2024 05:21PM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ, ಇನ್ನರ್ ವ್ಹೀಲ್ ಕ್ಲಬ್ ಪಡುಬಿದ್ರಿ, ರೋಟರಿ ಸಮುದಾಯದಳ ಮತ್ತು ರೋಟರಾಕ್ಟ್ ಕ್ಲಬ್ ಪಡುಬಿದ್ರಿ ಸಂಯುಕ್ತ ಆಶ್ರಯದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ ಓಂಕಾರ ಕಲಾ ಸಂಗಮ ಪಡುಬಿದ್ರಿ ಇಲ್ಲಿ ಏಪ್ರಿಲ್ 7, ಆದಿತ್ಯವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಜರಗಲಿದೆ ಎಂದು ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8105093102 | 8792144608
ಕೆಪಿಸಿಸಿ ಪ್ರಚಾರ ಸಮಿತಿ ಪದಗ್ರಹಣ ; ನೂತನ ರಾಜ್ಯಾಧ್ಯಕ್ಷರಾಗಿ ವಿನಯ ಕುಮಾರ್ ಸೊರಕೆ

Posted On: 06-04-2024 05:17PM
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾಗಿ ನೇಮಕಕೊಂಡ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಪದಗ್ರಹಣ ಮತ್ತು ಕಛೇರಿ ಉದ್ಘಾಟನೆ ಕಾರ್ಯಕ್ರಮ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಎನ್ ಎಸ್ ಯು ಐ ಘಟಕದ ಅಧ್ಯಕ್ಷ ಸೌರಭ್ ಬಲ್ಲಾಳ್, ಪ್ರಶಾಂತ್ ಜತ್ತನ್ನ, ರಮೀಝ್ ಹುಸೇನ್, ಹಮೀದ್ ಯೂಸುಫ್, ಸಾಹುಲ್ ಹಮೀದ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುತ್ಯಾರು ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಯ ಬೇಸಿಗೆ ಶಿಬಿರದಲ್ಲಿ ಗಮನಸೆಳೆದ ತಾಳಮದ್ದಳೆ - ಗುರುದಕ್ಷಿಣೆ

Posted On: 06-04-2024 12:50PM
ಕುತ್ಯಾರು : ಆನೆಗೊಂದಿ ಶ್ರೀ ಸರಸ್ವತಿ ಪೀಠ ಪಡುಕುತ್ಯಾರು ಅಧೀನದ ಶ್ರೀ ಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಐದು ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಕಲಾವಿದರಿಂದ ಗುರುದಕ್ಷಿಣೆ ತಾಳಮದ್ದಳೆ ಜರಗಿತು.
ಭಾಗವತರಾಗಿ ಮೋಹನ ಕಲಂಬಾಡಿ , ಹಿಮ್ಮೆಳದಲ್ಲಿ ಗಣೇಶ ಕಾರಂತ ಪೊಳಲಿ, ವಿಶ್ವನಾಥ್ ಶೆಣೈ,ಮಾ.ಭವಿಷ್ ಕಲಂಬಾಡಿ ಅರ್ಥಧಾರಿಗಳಾಗಿ ಎಂ. ಕೆ ರಮೇಶ ಆಚಾರ್ಯ ತೀರ್ಥಹಳ್ಳಿ (ದ್ರುಪದ) ಕಾಪು ಜನಾರ್ದನ ಆಚಾರ್ಯ ( ಏಕಲವ್ಯ) ರಂಗನಾಥ ಭಟ್ ಕಳತ್ತೂರು (ಅರ್ಜುನ) ದಿವಾಕರ ಆಚಾರ್ಯ ಗೇರುಕಟ್ಟೆ (ದ್ರೋಣ) ಭಾಗವಹಿಸಿದ್ದರು.
ಅಸೆಟ್ ಸದಸ್ಯರಾದ ಜಿ .ಟಿ ಆಚಾರ್ಯ ಮುಂಬೈ, ಹರೀಶ ಆಚಾರ್ಯ, ಸಂಸ್ಥೆಯ ಮುಖ್ಯಸ್ಥರಾದ ಸಂಗೀತ ರಾವ್ ಕಲಾವಿದರನ್ನು ಗೌರವಿಸಿದರು. ಶಿಕ್ಷಕ ಸುಧೀರ್ ನಾಯ್ಕ್ ಸ್ವಾಗತಿಸಿ ಶಿಕ್ಷಕ ಮಂಜುನಾಥ್ ಶೇಟ್ ಮತ್ತು ಪ್ರಶಾಂತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಏಪ್ರಿಲ್ 9 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Posted On: 05-04-2024 10:00PM
ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಏಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಎಂದು ನಿಶ್ಚಯಿಸಿದ್ದು, ಆ ಪ್ರಯುಕ್ತ ಎಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿಯವರು ಹೇಳಿದರು. ಅವರು ದೇವಳದ ಕಛೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಪುವಿನ ಅಮ್ಮನ ದೇಗುಲದ ಕಾಮಗಾರಿಗಳು ಬಹಳಷ್ಟು ಭರದಿಂದ ಸಾಗುತ್ತಿದ್ದು 2024ರ ಎಪ್ರಿಲ್, ಮೇ ತಿಂಗಳಿನಲ್ಲಿಯೇ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಾಡಬಹುದೆಂದು ನಿಶ್ಚಯಿಸಿದ್ದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲು ಹಾಗೂ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಭಾಗವಹಿಸಲು ತೊಂದರೆಯಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಜೂನ್ 12 ರಿಂದ ದಕ್ಷಿಣಾಯಣ ಪ್ರಾರಂಭವಾಗುವುದರಿಂದ ಪ್ರತಿಷ್ಠೆಗೆ ಸೂಕ್ತವಾದ ದಿನಗಳು ಲಭ್ಯವಾಗಿರುವುದಿಲ್ಲ. ಆದುದರಿಂದ ಅಭಿವೃದ್ಧಿ ಸಮಿತಿಯು ಕ್ಷೇತ್ರದ ಪ್ರಧಾನ ತಂತ್ರಿಗಳಾದ ಶ್ರೀ ಕುಮಾರಗುರು ತಂತ್ರಿಯವರೊಂದಿಗೆ ಗಳೊಂದಿಗೆ ಚರ್ಚಿಸಿ 2025ರ ಜನವರಿ 14ರ ನಂತರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಪಡಿಸುವುದೆಂದು ನಿರ್ಧರಿಸಲಾಗಿದೆ. ಈ ಬಗ್ಗೆ ವಿದ್ವಾನ್ ಶ್ರೀ ಕುಮಾರಗುರು ತಂತ್ರಿಯವರ ನಿರ್ದೇಶನದಂತೆ ಇದೇ ಬರುವ ಏಪ್ರಿಲ್ 9ರ ಮಂಗಳವಾರದಂದು ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡುವುದೆಂದು ತೀರ್ಮಾನಿಸಲಾಗಿದೆ. ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ನೂತನ ಆಲಯದಲ್ಲಿ ಪ್ರತಿಷ್ಠಾ ಪೂರ್ವಭಾವಿಯಾಗಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರಾಚೀನ ಶೈಲಿಯಲ್ಲಿ ನಡೆಸುವುದೆಂದು ನಿರ್ಧರಿಸಲಾಗಿದೆ.
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಮ್ಮನ ಭವ್ಯ ಗರ್ಭಗುಡಿಯ ದಿವ್ಯ ಸಾನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡುವ ಮೂಲಕ ನವ ಧಾನ್ಯಗಳ ಬಿತ್ತನೆ ಮಾಡುವುದು. ಮುಂದಿನ 18 ದಿನಗಳಲ್ಲಿ ಧಾನ್ಯಗಳು ಮೊಳಕೆಯೊಡೆದಾಗ ಗೋ ನಿವಾಸಕ್ಕಾಗಿ ಗರ್ಭಗುಡಿಯಲ್ಲಿ 9 ಅಥವಾ 18 ಗೋವುಗಳನ್ನು ಪೂಜಿಸಿ ಅವುಗಳಿಗೆ ಧಾನ್ಯಗಳನ್ನು ಮೇಯಲು ಬಿಡುವುದು. ಗೋವುಗಳು ಸಾನಿಧ್ಯದಲ್ಲಿ 9 ದಿನ ಗೋವಾಸವಿದ್ದು, 9ನೇ ದಿನ ಗೋವುಗಳಿಂದ ಹಾಲನ್ನು ಕರೆದು ಪಂಚಗವ್ಯ ತಯಾರಿಸಿ ಅವುಗಳಿಂದ ದೇವಳದ ಆವರಣವನ್ನು ಸಂಪ್ರೋಕ್ಷಣೆ ಮಾಡಿ ಶುದ್ಧಿಗೊಳಿಸುವುದು. ಏಪ್ರಿಲ್ 9ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರ, ಭೋಜನ ಶಾಲೆ, ಆಡಳಿತ ಕಛೇರಿ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಂಕು ಸ್ಥಾಪನೆ ಮಾಡುವುದೆಂದು ನಿರ್ಧರಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಸಭಾ ಕಾರ್ಯಕ್ರಮಗಳು ನೆರವೇರಲಿದೆ. ಈ ಸಭೆಯಲ್ಲಿ 9 ದಿನಗಳ ಪರ್ಯಂತ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಂತ್ರಿಗಳು ದಿನ ಹಾಗೂ ಸಮಯವನ್ನು ಘೋಷಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುವ ಅಮ್ಮನ ಬ್ರಹ್ಮಕಲಶೋತ್ಸವದ 9 ಜನರ ಪ್ರಧಾನ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಉದ್ಘಾಟನೆಯಾಗಲಿದೆ. ಚರಿತ್ರೆಗೆ ಸೇರಲಿರುವ ಈ ಭವ್ಯ ಸಮಾರಂಭದಲ್ಲಿ ಗಣ್ಯರು, ದಾನಿಗಳು, ಅಮ್ಮನ ಭಕ್ತವೃಂದ, ಎಲ್ಲಾ ಸಮಿತಿಯ ಸದಸ್ಯರು ಹಾಗೂ ಊರ ಪರವೂರ ಮಹನಿಯರೆಲ್ಲರೂ ಭಾಗವಹಿಸಿ ಕಾಪುವಿನ ಅಮ್ಮನ ಕೃಪೆಗೆ ಪಾತ್ರರಾಗಬೇಕೆಂದು ವಾಸುದೇವ ಶೆಟ್ಟಿಯವರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಆರ್ ಪಾಲನ್ ಉಪಸ್ಥಿತರಿದ್ದರು.
ಕುತ್ಯಾರು : ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ - ಬೇಸಿಗೆ ಶಿಬಿರ ಸಮಾರೋಪ

Posted On: 05-04-2024 06:37PM
ಕುತ್ಯಾರು : ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರು ಇಲ್ಲಿ ಏಪ್ರಿಲ್ 5ರಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಸೆಟ್ ನ ಪದಾಧಿಕಾರಿಗಳಾದ ಜಿ.ಟಿ. ಆಚಾರ್ಯ ವಹಿಸಿ ಮಾತನಾಡಿ ಮಕ್ಕಳಿಗೆ ಬೇಸಿಗೆ ಶಿಬಿರದ ಮಹತ್ವ, ಶಿಬಿರದ ಕಲಿತ ವಿಷಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾಪು ಜನಾರ್ಧನ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ, ಭಾರತಿ ದಿವಾಕರ ಆಚಾರ್ಯ, ಹರೀಶ್ ಆಚಾರ್ಯ, ಪ್ರಾಂಶುಪಾಲೆ ಸಂಗೀತಾ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸಂಗೀತಾ ಸ್ವಾಗತಿಸಿದರು. ಶಿಕ್ಷಕಿ ಅನಿತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ವಾಣಿ ವಂದಿಸಿದರು.
ಕಾಪು : ಜೆಡಿಎಸ್ ಪಕ್ಷದ ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಕಾಪು ಶ್ರೀ ದೇವರಾಜ ಕೋಟ್ಯಾನ್ ತೊಟ್ಟಂ ಆಯ್ಕೆ

Posted On: 05-04-2024 01:53PM
ಕಾಪು : ಜನತಾದಳ(ಜಾತ್ಯಾತೀತ)ಪಕ್ಷದ ಕಾಪು ವಿಧಾನಸಭಾ ಕ್ಷೇತ್ರ ಸಮಿತಿಯ ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಕಾಪು ಶ್ರೀ ದೇವರಾಜ ಕೋಟ್ಯಾನ್ ತೊಟ್ಟಂ ಆಯ್ಕೆಯಾಗಿರುತ್ತಾರೆ.
ಕಾಪು ಪಂಚಾಯತ್ ಮಾಜಿ ಸದಸ್ಯ, ಸಾಮಾಜಿಕ, ಧಾರ್ಮಿಕ ಮಂದಾಳು, ಪಕ್ಷ ಸಂಘಟನೆಯಲ್ಲಿ ಸೇವೆಗೈಯುತ್ತಿರುವ ಕಾಪು ಶ್ರೀ ದೇವರಾಜ ಕೋಟ್ಯಾನ್ ತೊಟ್ಟಂರವರನ್ನು ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಅವರು ನೇಮಕ ಮಾಡಿರುತ್ತಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಪಿ ಇಂಜಿನಿಯರಿಂಗ್ ವಿಷಯದ ಕುರಿತು ಉಪನ್ಯಾಸ

Posted On: 04-04-2024 03:17PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ ಹ್ಯಾಪಿ ಇಂಜಿನಿಯರಿಂಗ್ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಇತ್ತೀಚಿಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು.
ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ತಜ್ಞ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಎದುರಿಸುತ್ತಿರುವ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸನ್ನು ಕಾಣಬೇಕಾದರೆ ಅವರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಇದಕ್ಕಾಗಿ ಅವರು ದಿನನಿತ್ಯದ ಜೀವನದಲ್ಲಿ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಒತ್ತಡವನ್ನು ಕಡಿಮೆ ಮಾಡಲು ಬೇಕಾದ ತಂತ್ರಗಳಾದ ಸಾವಧಾನತೆಯ ತಂತ್ರಗಳು, ಸಮಯ ನಿರ್ವಹಣೆಯ ತಂತ್ರಗಳು ಮತ್ತು ಸಾಮಾಜಿಕ ಬೆಂಬಲವನ್ನು ಪಡೆಯುವ ಪ್ರಾಮುಖ್ಯತೆಯನ್ನು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಯ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರವೀಂದ್ರ ಹೆಚ್ ಜೆ ಕಾರ್ಯಕ್ರಮವನ್ನು ಸಂಯೋಜಿಸಿದರು.
ಏಪ್ರಿಲ್ 8 - 17 : ಕಟಪಾಡಿಯಲ್ಲಿ ರಜಾ ಮಜಾ -2024 ಮಕ್ಕಳ ಬೇಸಿಗೆ ಶಿಬಿರ

Posted On: 04-04-2024 03:06PM
ಕಟಪಾಡಿ : ಎಸ್ ವಿ ಎಸ್ ವಿದ್ಯಾವರ್ಧಕ ಸಂಘ (ರಿ.) ಕಟಪಾಡಿ ಇವರು ಪ್ರಸ್ತುತ ಪಡಿಸುವ ರಜಾ ಮಜಾ -2024 ಮಕ್ಕಳ ಬೇಸಿಗೆ ಶಿಬಿರವು ಏಪ್ರಿಲ್ 8 ರಿಂದ ಏಪ್ರಿಲ್ 17 ರ ವರೆಗೆ 10 ದಿನಗಳ ಕಾಲ ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲಾ ವಠಾರದಲ್ಲಿ ಜರಗಲಿದೆ. 6 ರಿಂದ 16 ವರ್ಷದ ಮಕ್ಕಳು ಭಾಗವಹಿಸಲು ಅವಕಾಶವಿದೆ.
10 ದಿನಗಳ ಈ ಶಿಬಿರದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಚಟುವಟಿಕೆಗಳನ್ನು ನಾಡಿನ ಪ್ರಸಿದ್ದ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ತರಬೇತಿಯನ್ನು ನೀಡಲಿದ್ದಾರೆ. ಮುಖ್ಯವಾಗಿ ವೆಂಕಿ ಪಲಿಮಾರು, ರಾಜೇಶ್ ಕಾಮತ್, ರಾಜೇಂದ್ರ ಭಟ್ ಬೆಳ್ಮಣ್, ರಮೇಶ್ ಬಂಟಕಲ್, ರಾಘವ್ ಸೂರಿ ಮಂಗಳೂರು, ಚಂದ್ರಕಲಾ ರಾವ್, ರಮಿತಾ ಶೈಲೇಂದ್ರ ಕಾರ್ಕಳ, ಮನೋಜ್ ಕಾಂಚನ್, ಭಾಗ್ಯಲಕ್ಷ್ಮೀ ಉಪ್ಪೂರು, ದೀಕ್ಷಾ ಸಾಲಿಯಾನ್, ಶ್ರುತಿ ಭಟ್ ಉದ್ಯಾವರ,ಪ್ರಥಮ್ ಕಾಮತ್ ಕಟಪಾಡಿ, ಮುಸ್ತಾಫಾ,ನಾಗೇಶ್ ಕಾಮತ್ ಹಾಗೂ ಇನ್ನಿತರರು ತರಬೇತಿಯನ್ನು ನೀಡಲಿದ್ದಾರೆ. ಶಿಬಿರದ ಮುಖ್ಯ ಆಕರ್ಷಣೆಯಾಗಿ ಅಗ್ನಿಶಾಮಕ ದಳ ಉಡುಪಿ ಇವರಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ವ್ಯಕ್ತಿತ್ವ ವಿಕಸನ ತರಬೇತಿ, ಪಿಕ್ನಿಕ್, ಡ್ರಾಯಿಂಗ್, ಕ್ರಾಫ್ಟ್,ಮ್ಯಾಜಿಕ್, ಫೇಸ್ ಪೈಂಟಿಂಗ್, ಯೋಗ, ನೃತ್ಯ, ಸಂಗೀತ, ಟೆರಾಕೋಟ ಕಲೆ, ಮುಖವಾಡ ತಯಾರಿ, ಕಾಡಿನಲ್ಲಿ ಒಂದು ದಿನ, ಸ್ವಿಮ್ಮಿಂಗ್, ಮನೋರಂಜನಾ ಆಟಗಳು ಇನ್ನೂ ಹಲವು ಕಾರ್ಯಕ್ರಮಗಳು ಇರಲಿವೆ. ಶಿಬಿರದಲ್ಲಿ ಝೀ ಕನ್ನಡ ಪಾರು ಧಾರಾವಾಹಿಯ ಬಾಲನಟಿ ಪ್ರಾನ್ವಿ ಅಕ್ಷಯ್ ಮಂಗಳೂರು ಜೂ. ರಿಷಭ್ ಶೆಟ್ಟಿ ಖ್ಯಾತಿಯ ಪ್ರದೀಪ್ ಆಚಾರ್ಯ ಶಿರ್ವ ಭಾಗವಹಿಸಲಿರುವರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಸಂಚಾಲಕರಾದ ಕೆ ಸತ್ಯೇಂದ್ರ ಪೈ ಯವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ, ಶಿಕ್ಷಕೇತರ ಬಳಗದವರು ಶಿಬಿರದ ಕಾರ್ಯಕ್ರಮವನ್ನು ಸಂಘಟಿಸಲಿದ್ದು, ಕಾರ್ಯಕ್ರಮದ ಸಂಯೋಜನೆಯನ್ನು ಕಲಾವಿದ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ದೇವೇಂದ್ರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 8088143006 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.
ಹೆಜಮಾಡಿ : ಶ್ರೀ ದೈವರಾಜ ಕೋರ್ದಬ್ಬು ದೃೆವಸ್ಥಾನದ ನೂತನ ಕಾರ್ಯಾಲಯದ ಉದ್ಘಾಟನೆ

Posted On: 03-04-2024 02:09PM
ಹೆಜಮಾಡಿ : ಹೆಜಮಾಡಿ ಬಸ್ತಿಪಡ್ಪು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾರ್ಯಾಲಯವನ್ನು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಭಾಸ್ಕರ್ ಭಟ್ ಉದ್ಘಾಟಿಸಿದರು.
ಕ್ಷೇತ್ರದ ಅನುವಂಶಿಕ ಮೋಕ್ತೇಸರ ಅರುಣ್ ಶೆಟ್ಟಿ, ಮೋಕ್ತೇಸರ ಸುರೇಶ್ ಶೆಟ್ಟಿಯವರು ದೀಪ ಪ್ರಜ್ವಲನೆಗೈದರು.
ಈ ಸಂದರ್ಭದಲ್ಲಿ ಅರುಣ್ ಶೆಟ್ಟಿ ಮುಂಬೈ, ವಸಂತ ದೇವಾಡಿಗ, ಕ್ಷೇತ್ರದ ಪ್ರಧಾನ ಅರ್ಚಕ ಜಗ್ನನಾಥ ಮುಖಾರಿ, ಮಹೇಶ್ ಶೆಟ್ಟಿ ಗರಡಿಮನೆ, ಹೆಜಮಾಡಿ ಗ್ರಾ.ಪಂ ಸದಸ್ಯ ಶರಣ್ ಕುಮಾರ್ ಮಟ್ಟು, ಕ್ಷೇತ್ರ ಸಮಿತಿ ಸದಸ್ಯರಾದ ಎಚ್ ಪರಮೇಶ್ವರ್, ಎಚ್ ರಾಜು, ಶೇಖರ್ ಹೆಜಮಾಡಿ, ಗಣೇಶ್ ಎಚ್., ಕೇಶವ ಸಾಲ್ಯಾನ್ ಹೆಜಮಾಡಿ , ಮಧ್ಯಸ್ಥ ರಾಮಚಂದ್ರ ಎಚ್, ಪದ್ಮನಾಭ ಸುವರ್ಣ, ಸಚ್ಚಿದಾನಂದ ಭಟ್ ಮತ್ತು ಹತ್ತು ಸಮಸ್ತರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಪು : ಪಂಜಿನ ಮೆರವಣಿಗೆಯ ಮೂಲಕ ಮತದಾನದ ಜಾಗೃತಿ

Posted On: 02-04-2024 11:10PM
ಕಾಪು : ತಾಲೂಕು ಆಡಳಿತ ಕಾಪು, ತಾಲೂಕು ಪಂಚಾಯತ್ ಕಾಪು, ಪುರಸಭೆ ಕಾಪು ಇವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯ ವರೆಗೆ ಮೆರವಣಿಗೆಯಲ್ಲಿ ಸಾಗಿ ಕಾಪು ತಾಲೂಕು ತಹಶೀಲ್ದಾರ್ ಡಾ| ಪ್ರತಿಭಾ ಆರ್ ರವರು ಮತದಾನದ ಮಹತ್ವ ಮತ್ತು ಮತದಾರರ ಕರ್ತವ್ಯದ ಬಗ್ಗೆ ಮಾತನಾಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಕಾರ್ಯದರ್ಶಿಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.