Updated News From Kaup

ಉಡುಪಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾಟಕ್ಕೆ ಚಾಲನೆ

Posted On: 11-09-2023 12:05PM

ಕಾಪು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಉದ್ಯಾವರ ಇವರ ಜಂಟಿ ಆಶ್ರಯದಲ್ಲಿ ಇಂದು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಉಡುಪಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ "ಖೋ-ಖೋ ಪಂದ್ಯಾಟ"ವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ಈ ಸಂದರ್ಭ ಶಾಸಕರು ಮಾತನಾಡಿ ಕ್ರೀಡೆಗೆ ಜಾತಿ, ಧರ್ಮ ಎಂಬ ಭೇದಭಾವವಿಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ನಾವು ಅದನ್ನು ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಿತೇಂದ್ರ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಕುಮಾರ್, ಸದಸ್ಯರಾದ ಅಜಿತ್ ಕುಮಾರ್ ಶಣೈ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ವಸಂತಿ ಎಸ್, ಪುಷ್ಪಾ ಹಾಗೂ ಮುಕಾಂಬಿಕಾ, ಗುರುಪ್ರಸಾದ್ ಮತ್ತು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸೆಪ್ಟೆಂಬರ್ 13 : ಕಾಪುವಿನ ಕೈಪುಂಜಾಲು ದರ್ಗಾದಲ್ಲಿ ಸಫರ್ ಝಿಯಾರತ್

Posted On: 11-09-2023 09:12AM

ಕಾಪು : ಪೊಲಿಪು ಜಾಮಿಯಾ ಮಸೀದಿಯ ಅಧೀನದಲ್ಲಿರುವ ಕೈಪುಂಜಾಲು ಸಯ್ಯದ್ ಅರಬೀ ವಲಿಯುಲ್ಲಾರವರ ದರ್ಗಾದ ವಾರ್ಷಿಕ ಸಫರ್ ಝಿಯಾರತ್ ಸಮಾರಂಭ ಸೆಪ್ಟೆಂಬರ್ 13ರಂದು ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಬ್ಬಿರ್ ಅಹಮದ್‌ ತಿಳಿಸಿದ್ದಾರೆ.

ಶುಕ್ರವಾರ ಕಾಪು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಈ ದರ್ಗಾದಲ್ಲಿ ಪ್ರತೀ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್‌ ನಡೆಯಲಿದೆ. ಅಂದು ಹಿಂದೂ, ಮುಸ್ಲಿಂ, ಕ್ರೈಸ್ತರು ಜಾತಿ ಮತಭೇದವಿಲ್ಲದೆ ತಮ್ಮ ಹರಕೆ ತೀರಿಸುತ್ತಾರೆ ಎಂದರು.

ಸೆಪ್ಟೆಂಬರ್ 13ರಂದು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಝಿಯಾರತ್‌ ನಡೆಯಲಿದೆ. ಸಫರ್ ಝಿಯಾರತ್‌ಗೆ 11 ಮಂದಿಯ ಉಸ್ತುವಾರಿ ಸಮಿತಿ ರಚಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖ್ಯಸ್ಥ ಶಾಬಾನ್ ಫಕೀರಬ್ಬ, ಸದಸ್ಯರಾದ ರಝಬ್ ಉಮರಬ್ಬ, ಹಾಜಬ್ಬ ಕೊಂಬಗುಡ್ಡೆ, ಕೆ. ಎಂ. ರಝಾಕ್ ಉಪಸ್ಥಿತರಿದ್ದರು.

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹಕ್ಕೆ ಚಾಲನೆ

Posted On: 10-09-2023 08:23AM

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹಕ್ಕೆ ಶನಿವಾರ ಚಾಲನೆ ದೊರೆಯಿತು.

ಜೆಸಿ ಸಪ್ತಾಹದ ಮೊದಲ ದಿನವಾದ ಇಂದು ಅರೋಗ್ಯ ಹಿತದೃಷ್ಟಿಯಿಂದ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯೋಗ ಶಿಕ್ಷಕಿ ಕುಮಾರಿ ಸುಮಿತ್ರ ಇವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು. ಕಾರ್ಯದರ್ಶಿ ಜೆಸಿ ಪ್ರವೀಣ್ ಪೂಜಾರಿ ವಂದಿಸಿದರು.

ಕಾಪು‌ : ಪಾದೂರು - ಪೋಷಣ್ ಅಭಿಯಾನ ಸಪ್ತಾಹ

Posted On: 09-09-2023 09:07PM

ಕಾಪು : ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಸಪ್ತಾಹ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾದೂರು ಮಹಿಳಾ ಮಂಡಲದ ಗೌರವ ಅಧ್ಯಕ್ಷರೂ, ಹಿರಿಯ ಸಮಾಜಸೇವಕರಾದ ಜಯಲಕ್ಷ್ಮಿ ಆಳ್ವರವರು ವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು‌ ಮಹಿಳಾ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯವರು ಕಾಲಕಾಲಕ್ಕೆ ನೀಡುವ ಮಾಹಿತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕುಟುಂಬದ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಕಾಪು ಪ್ರಾ.ಆ.ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಯಶೋದಾ ಪೌಷ್ಟಿಕಾಂಶ ಉಳ್ಳ ಆಹಾರ ವಸ್ತುಗಳು, ಅವುಗಳ ಬಳಕೆ, ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ ಆರೋಗ್ಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪಾದೂರು ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಸಾದ್ ಆಚಾರ್ಯ, ಸಮುದಾಯ ಆರೋಗ್ಯಾಧಿಕಾರಿ ರಮ್ಯಾ, ಸಮಿತಿಯ ಸದಸ್ಯರಾದ ವಿಶಾಲ, ಆಶಾ ಕಾರ್ಯಕರ್ತೆ ಸರಸ್ವತೀ, ಅಂಗನವಾಡಿ ಸಹಾಯಕಿ ಆಶಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವತ್ಸಲಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು.

ಪಡುಬಿದ್ರಿ ಜೇಸಿಐ - ಜೇಸೀ ಸಪ್ತಾಹ ಶೋಧನ-2023 ; ಆರೋಗ್ಯವಂತ ಶಿಶು ಸ್ಪರ್ಧೆ

Posted On: 09-09-2023 05:17PM

ಪಡುಬಿದ್ರಿ : ಇಲ್ಲಿ ಪಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಜೇಸಿಐ ಪಡುಬಿದ್ರಿ ಹಮ್ಮಿಕೊಂಡ ಆರೋಗ್ಯವಂತ ಶಿಶು ಸ್ಪರ್ಧೆ ಹಾಗೂ ಜೇಸೀ ಸಪ್ತಾಹ ಶೋಧನ-2023ನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಉದ್ಯಮಿ, ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶ್ರೀ ಕಿಣಿ ಮಾತನಾಡಿ, ಸ್ಪರ್ಧೆಯು ಅಂದ ಚೆಂದ ನೋಡಿ ನಡೆಯುತ್ತಿಲ್ಲ. ಸರಕಾರದ ನಿಯಮಾವಳಿಯಂತೆ ಆರೋಗ್ಯವಂತ ಶಿಶು ಸ್ಪರ್ಧೆ ಆಯೋಜಿಸಲಾಗಿದ್ದು, ಆರೋಗ್ಯ ಕೇಂದ್ರ ವ್ಯಾಪ್ತಿಯ ಶಿಶುಗಳಿಗಾಗಿ ಸ್ಪರ್ಧೆ ನಡೆಸಲಾಗಿದೆ ಎಂದರು.

ಜೇಸಿಐ ಪಡುಬಿದ್ರಿಯ ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪೂಜಾ ಫಾರ್ಮಾ ವತಿಯಿಂದ ವಿಶೇಷ ಬಹುಮಾನ ವಿತರಿಸಲಾಯಿತು. ಕನ್ನಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶೀನ ಪೂಜಾರಿ, ಕೆಪಿಸಿಸಿ ಕಾರ್ಡಿನೇಟರ್ ನವೀನ್‌ಚಂದ್ರ ಜೆ.ಶೆಟ್ಟಿ, ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಯುವಕ-ಯುವತಿ ವೃಂದದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬ್ರಹ್ಮಾವರ ಪೂಜಾ ಫಾರ್ಮಾದ ದಿನಕರ ಶೆಟ್ಟಿ, ಜೇಸಿಐ ನಿಕಟಪೂರ್ವಾದ್ಯಕ್ಷ ಶರತ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಪೂರ್ವಾಧ್ಯಕ್ಷ ಹರೀಶ್ ಕುಮಾರ್ ಪ್ರಸ್ತಾವಿಸಿದರು. ರವಿರಾಜ್ ಕೋಟ್ಯಾನ್, ಸುರೇಶ್ ಪಡುಬಿದ್ರಿ ಮತ್ತು ಸಂತೃಪ್ತಿ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿನಿ ಪ್ರದೀಪ್ ವಂದಿಸಿದರು.

ಫಲಿತಾಂಶ : 0-1 ವರ್ಷದೊಳಗಿನ ಮಕ್ಕಳು: ಪ್ರಥಮ-ಶ್ರೀಯಾ ವೈ.ಪುತ್ರನ್(ತಾಯಿ-ಸುಮಿತಾ), ದ್ವಿತೀಯ-ದರ್ಶಿಲ್(ಮಿನಿತಾ) ಮತ್ತು ಸುಮದ್ವ-(ಸ್ವಾತಿ ಜೆ.), ತೃತೀಯ-ರಿಯಾಂಶ್(ಮಮತಾ). 1-2ವರ್ಷದೊಳಗಿನ ಮಕ್ಕಳು: ಪ್ರಥಮ-ಯದ್ವಿ(ಸುಜಾತಾ). ದ್ವಿತೀಯ-ಧನ್ವಿತಾ(ಗೀತಾ), ತೃತೀಯ-ಪವಿಶ್(ತುಳಸಿ) ಬಹುಮಾನ ಗಳಿಸಿರುತ್ತಾರೆ.

ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು - 2 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ

Posted On: 09-09-2023 11:20AM

ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ 2 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಕಳತ್ತೂರಿನ ಕುಲಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಜರಗಿತು.

ಅರುಣ್ ಶೆಟ್ಟಿ ಪಾದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತೀರ್ಪುಗಾರರಾಗಿ ಅನಿತಾ ಉಪಾಧ್ಯಾಯ, ಪ್ರತಿಭಾ ಶೆಟ್ಟಿ, ದೇವಿಕಾ ಚೌಟ, ಗೌರವಾಧ್ಯಕ್ಷರಾದ ರಂಗನಾಥ ಶೆಟ್ಟಿ, ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಚನಾ ನಿರೂಪಿಸಿದರು.

ಕಾಪು : ಇನ್ನಂಜೆ‌ಯಲ್ಲಿ ಮೊಸರು ಕುಡಿಕೆ ಕ್ರೀಡಾಕೂಟ -2023 ; ಮುದ್ದುಕೃಷ್ಣ ವೇಷ ಸ್ಪರ್ಧೆ

Posted On: 07-09-2023 11:22AM

ಕಾಪು : ತಾಲೂಕಿನ ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇನ್ನಂಚೆ ಒಕ್ಕೂಟ, ಬಿಲ್ಲವ ಸೇವಾ ಸಂಘ ಇನ್ನಂಜೆ, ಜೇ.ಸಿ.ಐ ಶಂಕರಪುರ ಜಾಸ್ಮಿನ್, ರೋಟರಿ ಸಮುದಾಯ ದಳ ಇನ್ನಂಜೆ, ಇನ್ನಂಜೆ ಯುವತಿ ಮಂಡಲ (ರಿ.) ಇನ್ನಂಜೆ ಇವರ ಸಹಕಾರದೊಂದಿಗೆ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ಇಂದು ಮೊಸರು ಕುಡಿಕೆ ಕ್ರೀಡಾಕೂಟ-2023, ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭ ಮುದ್ದು ಮುದ್ದಾದ ಕೃಷ್ಣ ಆಲ್ಬಮ್ ಸಾಂಗ್ ಅನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಇನ್ನಂಜೆ ಯುವಕ ಮಂಡಲ ಅಧ್ಯಕ್ಷರಾದ ದಿವೇಶ್, ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ಇನ್ನಂಜೆ ಎಸ್.ವಿ.ಎಚ್ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಲಾ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆಯ ನಿರ್ದೇಶಕರಾದ ಶಿವರಾಮ ಪ್ರಭು, ಇನ್ನಂಜೆ ಎಸ್.ವಿ.ಎಚ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಯು. ನಂದನ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನವೀನ್ ಅಮೀನ್ ಹಾಗೂ ಇನ್ನಂಜೆ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ : ಗಾಂಜಾ ಸೇವನೆ - ವ್ಯಕ್ತಿಯೋರ್ವ ವಶಕ್ಕೆ

Posted On: 07-09-2023 11:12AM

ಪಡುಬಿದ್ರಿ : ಇಲ್ಲಿನ ಠಾಣಾ ವ್ಯಾಪ್ತಿಯ ನಂದಿಕೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಶೆಯಲ್ಲಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು‌ ಪಡುಬಿದ್ರಿ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಪಡುಬಿದ್ರಿ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ರೌಂಡ್ಸ್ ನಲ್ಲಿರುವಾಗ ರಕ್ಷಿತ್ ಶೆಟ್ಟಿ(29) ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದುಕೊಂಡು ಮಣಿಪಾಲದ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಮಾದಕ ವಸ್ತುವಾದ ಗಾಂಜಾ ಸೇವಿಸಿರುವ ಬಗ್ಗೆ ವೈದ್ಯರು ದೃಢಪತ್ರವನ್ನು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಡುಬಿದ್ರಿ : ಬಂಟರ ಸಂಘ - ನಿವೃತ್ತ ಶಿಕ್ಷಕರಿಗೆ ಸನ್ಮಾನ

Posted On: 07-09-2023 10:46AM

ಪಡುಬಿದ್ರಿ : ಬಂಟರ ಸಂಘ (ರಿ.) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಪಡುಬಿದ್ರಿ, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇವರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ದಂಪತಿಗಳನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ, ನಿವೃತ್ತ ಶಿಕ್ಷಕ ನಾರಾಯಣಶೆಟ್ಟಿ ದಂಪತಿಗಳನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿಶೆಟ್ಟಿ ಗುಂಡ್ಲಾಡಿ, ಟ್ರಸ್ಟ್ ಅಧ್ಯಕ್ಷರಾದ ಶಶಿಧರ ಶೆಟ್ಟಿ ಎರ್ಮಾಳು, ಸಂಘದ ಉಪಾಧ್ಯಕ್ಷೆ ಅನಿತಾ ವಿಶು ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ಕಾರ್ಯದರ್ಶಿ ವಾಣಿ ರವಿ ಶೆಟ್ಟಿ, ಕೋಶಾಧಿಕಾರಿ ರಶ್ಮಿ ಸುಧಾಕರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮಾಜಿ ಅಧ್ಯಕ್ಷೆ ಶೋಭಾ ಜೆ ಶೆಟ್ಟಿ, ಉಪಾಧ್ಯಕ್ಷೆ ಭಾರತಿ ಬಿ ಶೆಟ್ಟಿ, ಶಾಲಿನಿ ಶಶಿಧರ್ ಶೆಟ್ಟಿ, ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.

ವಿಶ್ವಹಿಂದೂಪರಿಷತ್ ಭಜರಂಗದಳ ಮೂಡುಬೆಳ್ಳೆ ಘಟಕ : ಸ್ಥಾಪನಾ ದಿನಾಚರಣೆ ; ನಾಟಿ ವೈದ್ಯೆಗೆ ಸನ್ಮಾನ

Posted On: 07-09-2023 09:56AM

ಕಾಪು : ವಿಶ್ವಹಿಂದೂಪರಿಷತ್ ಭಜರಂಗದಳ ಮೂಡುಬೆಳ್ಳೆ ಘಟಕದ ವತಿಯಿಂದ ವಿಶ್ವಹಿಂದೂಪರಿಷತ್ ಸ್ಥಾಪನಾ ದಿನಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ನಾಟಿ ವೈದ್ಯೆಯಾದ ಶ್ರೀಮತಿ ವಾರಿಜಾ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವಹಿಂದೂಪರಿಷತ್ ಜಿಲ್ಲಾಸೇವಾಪ್ರಮುಖ್ ವಿಖ್ಯಾತ ಭಟ್, ತಾಲೂಕು ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಮೂಡುಬೆಳ್ಳೆ ಘಟಕ ಅಧ್ಯಕ್ಷರಾದ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ಅಭಿಷೇಕ್ ಆಚಾರ್ಯ, ಸಂಚಾಲಕ್ ಮಿಥುನ್ ಪೂಜಾರಿ, ಮಾತೃಶಕ್ತಿ ಪ್ರಮುಖ್ ಆಶಾ ಶೆಟ್ಟಿ, ದುರ್ಗಾವಾಹಿನಿ ಪ್ರಮುಖ್ ದೀಪಾ ಶೆಟ್ಟಿ , ಭಾಜಪದ ಪ್ರಮುಖರಾದ ರಾಜೇಂದ್ರಶೆಟ್ಟಿ, ಗುರುರಾಜಭಟ್, ರಾಮಚಂದ್ರಭಟ್, ಕೃಷ್ಣಆಚಾರ್ಯ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಶ್ರೀಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.