Updated News From Kaup

ಕುತ್ಯಾರು : ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ - ಬೇಸಿಗೆ ಶಿಬಿರದ ಉದ್ಘಾಟನೆ

Posted On: 02-04-2024 11:07AM

ಕುತ್ಯಾರು : ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರು ಏಪ್ರಿಲ್ 1ರಂದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಬೇಸಿಗೆ ಶಿಬಿರವು ಉದ್ಘಾಟನೆಗೊಂಡಿತು.

ಕುತ್ಯಾರು ಯುವಕ ಮಂಡಲದ ಅಧ್ಯಕ್ಷರಾದ ಸುಶಾಂತ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಬಿರದಲ್ಲಿ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಹಾರೈಕೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೆಟ್ ನ ಕಾರ್ಯಾಧ್ಯಕ್ಷರಾದ ಮೋಹನ್ ಕುಮಾರ್ ಬೆಳ್ಳೂರು ವಹಿಸಿದ್ದರು. ಗುರುರಾಜ್ ಆಚಾರ್ಯ, ದಿವಾಕರ ಆಚಾರ್ಯ, ಪ್ರಭಾರ ಮುಖ್ಯ ಶಿಕ್ಷಕಿ ಅಮಿತಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿ ಅಮಿತಾ ಸ್ವಾಗತಿಸಿದರು.ಶಿಕ್ಷಕಿ ರಮ್ಯಾ ಪ್ರಭು ನಿರೂಪಿಸಿ, ಶಿಕ್ಷಕ ಮಂಜುನಾಥ ಶೇಟ್ ವಂದಿಸಿದರು.

ಪಡುಬಿದ್ರಿ : ಕಲಿಯುಗದಲ್ಲಿ ಸಂಪತ್ತಿಗಿಂತ ಆರೋಗ್ಯ ಎನ್ನುವುದೇ ದೊಡ್ಡ ಭಾಗ್ಯ - ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ

Posted On: 31-03-2024 08:24PM

ಪಡುಬಿದ್ರಿ : ಸಾಮಾಜಿಕ, ಕಲಾ ಕ್ಷೇತ್ರ, ತುಳು ಸಂಸ್ಕೃತಿ ಜೊತೆಗೆ ದೈವಾರಾಧನೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಪಿ.ಕೆ.ಸದಾನಂದ. ಇವರ ಸಾಧನೆಗೆ ಸರಕಾರದ ವತಿಯಿಂದ ಸೂಕ್ತ ಮಾನ್ಯತೆ ದೊರಕಬೇಕಿದೆ. ತುಳುನಾಡಿನ ಪ್ರತಿ ವಿಷಯದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಸಂಪನ್ಮೂಲ ವ್ಯಕ್ತಿ ಇವರಾಗಿದ್ದಾರೆ. ಕಲಿಯುಗದಲ್ಲಿ ಸಂಪತ್ತಿಗಿಂತ ಆರೋಗ್ಯ ಎನ್ನುವುದೇ ದೊಡ್ಡ ಭಾಗ್ಯ ಪಿ ಕೆ ಸದಾನಂದರಿಗೆ ದೇವರು ಆರೋಗ್ಯ ಭಾಗ್ಯ ಕರಣಿಸಲಿ ಎಂದು ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು. ಅವರು ಜಾನಪದ ವಿದ್ವಾಂಸ ಪಿ. ಕೆ. ಸದಾನಂದ ಮತ್ತು ಶಾರದ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು.

ಸನ್ಮಾನ/ಸಾಮಾಜಿಕ ಕಾರ್ಯ : ಕಾರ್ಯಕ್ರಮದಲ್ಲಿ ಹತ್ತು ಪೌರ ಕಾರ್ಮಿಕರು, ಹಿರಿಯ ದಂಪತಿಗಳು, ಹಿರಿಯ ಮತ್ತು ಯುವ ಮೂರ್ತೆದಾರರನ್ನು ಸನ್ಮಾನಿಸಲಾಯಿತು. ವಿಕಲಚೇತನರಿಗೆ ಗಾಲಿ ಕುರ್ಚಿಯನ್ನು ವಿತರಿಸಲಾಯಿತು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ದಂಪತಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಪಿ. ಕೆ. ಸದಾನಂದ ದಂಪತಿಯ ಮಕ್ಕಳಾದ ಶೀಲಾ ನವೀನ್, ಗಣೇಶ್ ಗುಜರನ್ ಕುಟುಂಬಸ್ಥರು ಉಪಸ್ಥಿತರಿದ್ದರು. ಶರತ್ ಅಡ್ವೆ ಕಾರ್ಯಕ್ರಮ ನಿರೂಪಿಸಿದರು.

ಉದ್ಯಾವರ : ಸೌಹಾರ್ದ ಮತ್ತು ವಿಶಿಷ್ಟ ರೀತಿಯಲ್ಲಿ ಈಸ್ಟರ್ ಹಬ್ಬದ ಆಚರಣೆ

Posted On: 31-03-2024 05:41PM

ಉದ್ಯಾವರ : ಸೌಹಾರ್ದ ಸಮಿತಿ ಉದ್ಯಾವರ ಇದರ ಮಾಜಿ ಅಧ್ಯಕ್ಷರು ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಇದರ ಪದಾಧಿಕಾರಿ ಹಾಗೂ ಯುವ ಉದ್ಯಮಿಯಾಗಿರುವಂತ ಲಯನ್ ವಿಲ್ಫ್ರೆಡ್ ಡಿಸೋಜರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಇಂದು ಈಸ್ಟರ್ ಹಬ್ಬವನ್ನು ವಿಶಿಷ್ಟ ಮತ್ತು ಸೌಹಾರ್ದತೆಯಲ್ಲಿ ಆಚರಿಸಿದರು.

ಸರಕಾರದ ಯೋಜನೆಗಳನ್ನು ಜಾತಿ ಮತ ಭೇದವಿಲ್ಲದೆ ಸರ್ವರಿಗೂ ಬಾಗಿಲವರೆಗೂ, ಯಾವುದೇ ಪ್ರಚಾರವಿಲ್ಲದೆ ಜನರ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿಕೊಂಡಿರುವಂತಹ, ಡಿಜಿಟಲ್ ಸೇವಾ ಕೇಂದ್ರದ ಮೂಲಕ ರಾಜ್ಯದಲ್ಲಿಯೇ ವಿಶಿಷ್ಟವಾದ ಸ್ಥಾನಮಾನ ಹೊಂದಿರುವಂತಹ ಉದ್ಯಾವರದ ಸೌಮ್ಯ ಇವರನ್ನು ಅವರ ಪತಿ ಹರಿಶ್ಚಂದ್ರ ರವರ ಉಪಸ್ಥಿತಿಯಲ್ಲಿ ಲಯನ್ ವಿಲ್ಫ್ರೆಡ್ ಡಿಸೋಜರವರು ತಮ್ಮ ಸಂಪಿಗೆ ನಗರದಲ್ಲಿರುವ ಸ್ವಗೃಹದಲ್ಲಿ ಹಬ್ಬದ ಪ್ರಯುಕ್ತ ಅಭಿನಂದಿಸಿ ಗೌರವ ಧನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಯನ್ ವಿಲ್ಫ್ರೆಡ್ ಡಿಸೋಜರವರ ತಾಯಿ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಸೌಹಾರ್ದತೆಯ ನಾಡಿನಲ್ಲಿ ಈಸ್ಟರ್ ಹಬ್ಬದ ಸಂಭ್ರಮದಲ್ಲಿ ನಡೆದಂತಹ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ಮತ್ತು ಮಾದರಿ.

ಕಾಪು : ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಜೆಡಿಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ

Posted On: 30-03-2024 09:11PM

ಕಾಪು : ಕರ್ನಾಟಕ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಮೈತ್ರಿಯ ಮೂಲಕ ಎದುರಿಸಲು ಸನ್ನದ್ಧವಾಗಿರುವ ಸಂದರ್ಭದಲ್ಲಿ ಇದಕ್ಕೆ ಮುನ್ನುಡಿ ಎಂಬಂತೆ ಕಾಪುವಿನ ಜೆಡಿಎಸ್ ಕಚೇರಿಗೆ ಉಡುಪಿ ಚಿಕ್ಕಮಗಳೂರು ಬಿಜೆಪಿ ಜೆಡಿಎಸ್ ಮೈತ್ರಿಯ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಭೇಟಿ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಬಿಜೆಪಿ ಪಕ್ಷದ ಪ್ರಮುಖರನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಡುಪಿ ಚಿಕ್ಕಮಗಳೂರು ಬಿಜೆಪಿ ಜೆಡಿಎಸ್ ಮೈತ್ರಿಯ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ರನ್ನು ಗೌರವಿಸಿದರು.

ಈ ಸಂದರ್ಭ ಜೆಡಿಎಸ್ ಪ್ರಮುಖರು ಈ ಬಾರಿಯ ಚುನಾವಣೆಯನ್ನು ಮೈತ್ರಿಯ ಮೂಲಕ ಎದುರಿಸುವ ಭರವಸೆ ನೀಡಿ, ಪಡುಬಿದ್ರಿ ಚಿಕ್ಕಮಗಳೂರು ರೈಲ್ವೆ ಯೋಜನೆ ಬಗೆಯೂ ಉಡುಪಿ ಚಿಕ್ಕಮಗಳೂರು ಬಿಜೆಪಿ ಜೆಡಿಎಸ್ ಮೈತ್ರಿಯ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯ ಗಮನ ಸೆಳೆದರು.

ಜೆಡಿಎಸ್ ಪ್ರಮುಖರಾದ ವಾಸುದೇವ ರಾವ್, ಗಂಗಾಧರ ಭಿರ್ತಿ, ವೆಂಕಟೇಶ್, ಅಶ್ರಫ್, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ನವೀನ್ ಶೆಟ್ಟಿ ಕುತ್ಯಾರು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರವೀಣ್ ಕುಮಾರ್, ಸತೀಶ್ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಭಾರೀ ಅಂತರದ ಗೆಲುವು ಸಾಧಿಸಲಿದ್ದೇವೆ - ಕೋಟ ಶ್ರೀನಿವಾಸ ಪೂಜಾರಿ

Posted On: 30-03-2024 07:10PM

ಕಾಪು : ಬಿಜೆಪಿ ಪಕ್ಷವು ನಿಶ್ಚಲವಾದ ಬಹುಮತದೊಂದಿಗೆ ಭಾರೀ ಅಂತರದ ಗೆಲುವನ್ನು ಉಡುಪಿ ಚಿಕ್ಕಮಗಳೂರು ಭಾಗದಲ್ಲಿ ಗಳಿಸಲಿದೆ. ಈಗಾಗಲೇ ಪ್ರಥಮ ಸುತ್ತಿನ ಪ್ರಚಾರ ಮುಗಿದಿದೆ. ಏಪ್ರಿಲ್ 3 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಶನಿವಾರ ಕಾಪುವಿನ ಹೋಟೆಲ್ K1 ನಲ್ಲಿ ನಡೆದ ಬಿಜೆಪಿ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಮಂತ್ರಿಯೂ ಆಗಿ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳ. ಮೀನುಗಾರಿಕೆ ಮಂತ್ರಿಯಾಗಿ ಹೆಜಮಾಡಿ ಬಂದರಿಗೆ 181ಕೋಟಿ ರೂ. ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಯಿಂದ ಶಿಲಾನ್ಯಾಸ ಕಾರ್ಯ, 22,000 ಜನ ಮಹಿಳೆಯರಿಗೆ ಸಾಲ ಮನ್ನ ಮಾಡಿಸಿದ ಸಮಾಧಾನವಿದೆ. ಹಿಂದುಳಿದ ವರ್ಗದ ಮಂತ್ರಿಯಾಗಿದ್ದಾಗ 36,000 ಬಡ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ, 4 ನಾರಾಯಣಗುರು ವಸತಿ ಶಾಲೆ, ಉಡುಪಿಯಲ್ಲಿ ಅಗ್ನಿ ಪಥ್ ಶಿಬಿರ ಏರ್ಪಡಿಸಿದ್ದೇನೆ. ಈ ಎಲ್ಲಾ ಕಾರ್ಯಗಳ ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಮಾತನಾಡಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಖಂಡಿತವಾಗಿಯೂ ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಕಾಂಗ್ರೆಸ್ ಪಕ್ಷ ದಿಗ್ಭ್ರಮೆಗೊಂಡಿದೆ. ಜೆಡಿಎಸ್ ಸದಸ್ಯ ಬಲ ಕಡಿಮೆ ಇರಬಹುದು‌ ಆದರೆ ಪಕ್ಷದ ವರಿಷ್ಠರ ಆಣತಿಯಂತೆ ನಿಷ್ಠೆಯಿಂದ ಕೆಲಸ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಗೋಪಾಲಕೃಷ್ಣ ರಾವ್, ಜೆಡಿಎಸ್ ಪ್ರಮುಖರಾದ ವಾಸುದೇವ ರಾವ್ ಮುಂತಾದವರು ಉಪಸ್ಥಿತರಿದ್ದರು.

ಕಾಪು ಪೊಲೀಸ್ ಠಾಣಾ ಮಹಿಳಾ ಸಿಬಂದಿ ನೇಣಿಗೆ ಶರಣು

Posted On: 30-03-2024 01:46PM

ಕಾಪು : ಇಲ್ಲಿನ ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಪೊಲೀಸ್ ಕ್ವಾಟ್ರಸ್ ನಲ್ಲಿಯೇ ನೇಣಿಗೆ ಶರಣಾದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

ಜ್ಯೋತಿ (28) ಮೃತ ಮಹಿಳಾ ಪೊಲೀಸ್ ಸಿಬಂದಿಯಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಶುಕ್ರವಾರ ಎಂದಿನಂತೆ ಕರ್ತವ್ಯ ನಡುವೆ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.

ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು, ಬೆಳಿಗ್ಗೆ ಕರ್ತವ್ಯಕ್ಕೆ ಹೋಗಲೆಂದು ಹೊರಟಿದ್ದು ಈ ವೇಳೆ ಪತ್ನಿ ಜ್ಯೋತಿ ನೇಣಿಗೆ ಕೊರಳೊಡ್ಡಿರುವುದನ್ನು ಗಮನಿಸಿದ್ದರು. ಕಾಪು‌ ಎಸ್ಸೈ ಅಬ್ದುಲ್ ಖಾದರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಹಿ, ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರ್ವ : ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು

Posted On: 29-03-2024 10:43PM

ಶಿರ್ವ: ಗ್ರಾಮದ ದೈವಸ್ಥಾನಕ್ಕೆ ತಡರಾತ್ರಿ ಆಗಮಿಸಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.

ಶಿರ್ವ ಗ್ರಾಮದ ಜಾರಂದಾಯ ದೈವಸ್ಥಾನದಲ್ಲಿ ಜಾತ್ರೆ ಇದ್ದ ಬಗ್ಗೆ ಮಾಹಿತಿ ಆಧರಿಸಿ ರಾತ್ರಿ ಗಂಟೆ 12:30 ಕ್ಕೆ ಚುನಾವಣಾಧಿಕಾರಿ ಹೋದಾಗ ಯಾವುದೇ ಕಾರ್ಯಕ್ರಮ ಇಲ್ಲದೇ ಇದ್ದು ಅಲ್ಲಿ ವಿಚಾರಿಸಿದಾಗ ಆಡಳಿತ ಮಂಡಳಿಯವರು ತಡರಾತ್ರಿಯವರೆಗೆ ಕಾರ್ಯಕ್ರಮ ನಡೆಸಿದ್ದಲ್ಲದೆ, ಈ ಧಾರ್ಮಿಕ ಸ್ಥಳದಲ್ಲಿ ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್‌ ಪಕ್ಷದ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಇವರ ಜೊತೆಗೂಡಿ ಸಭೆ ನಡೆಸಿ ಸಾರ್ವಜನಿಕರಿಗೆ ಪ್ರಭಾವ ಬೀರಿರುವುದು ಕಂಡು ಬಂದಿದೆ.

ಈ ಬಗ್ಗೆ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಗ್ಲ್ಯಾಡಿಸ್ ಆಲ್ಮೇಡಾ ಮತ್ತು ಜೆಡಿಎಸ್ ಪಕ್ಷದ ಸನಾ ಕಾಂಗ್ರೆಸ್ ಸೇರ್ಪಡೆ

Posted On: 29-03-2024 09:57PM

ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗ್ಲ್ಯಾಡಿಸ್ ಅಲ್ಮೇಡಾ ಬಿಜೆಪಿ ಪಕ್ಷವನ್ನು ಮತ್ತು ಸನಾ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ‌ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ‌ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ಉಡುಪಿ ಜಿಲ್ಲಾ ‌ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಶಾಂತಲತಾ ಶೆಟ್ಟಿ, ಸನವರ್, ಪ್ರಶಾಂತ್ ಜತ್ತನ್ನರವರ ನೇತೃತ್ವದಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಕಾಪು : ಕ್ಷೇತ್ರ ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಬಿಳಿಯಾರು ಆಯ್ಕೆ

Posted On: 29-03-2024 09:08PM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಕಾರ್ಯಕರ್ತ, ಕಾಪು ಕುಲಾಲ ಯುವ ವೇದಿಕೆ ಸಕ್ರಿಯ ಸದಸ್ಯ ಹರೀಶ್ ಕುಲಾಲ್ ಬಿಳಿಯಾರು ಶಂಕರಪುರ ಆಯ್ಕೆಯಾಗಿದ್ದಾರೆ.

ಕಾಪು ಕುಲಾಲ ಸಂಘ ಹಾಗೂ ಕಾಪು ಕುಲಾಲ ಯುವ ವೇದಿಕೆ ಇವರಿಗೆ ಅಭಿನಂದನೆ ಸಲ್ಲಿಸಿದೆ.

ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಗುರ್ಮೆ ಸುರೇಶ್ ಶೆಟ್ಟಿ

Posted On: 29-03-2024 07:54PM

ಕಾಪು : ಬಿಜೆಪಿ ಪಕ್ಷದ ಭೈರಂಪಳ್ಳಿ ಶಕ್ತಿ ಕೇಂದ್ರದ ಸಭೆ ಶುಕ್ರವಾರ ಪದ್ಮರಾಜ್ ರಾವ್ ಅವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸಲು ನಾವೆಲ್ಲರೂ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಸಾದ್ ಮಲ್ಯ, ಪೆರ್ಡೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಭೈರಂಪಳ್ಳಿ ಶಕ್ತಿ ಕೇಂದ್ರದ ಸಹ ಸಂಚಾಲಕರಾದ ಸತೀಶ್ ಶೆಟ್ಟಿ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಮರುಳಿಧರ್ ಪೈ, ಭೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.