Updated News From Kaup
ಪಡುಬಿದ್ರಿ : ಕೆಳಗಿನ ಪೇಟೆ ಕೋಳಿ ಅಂಗಡಿಯಲ್ಲಿ ಕಳ್ಳತನ
Posted On: 16 Jun 2024, 12:00 PM
ಪಡುಬಿದ್ರಿ : ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಶನಿವಾರ ವೇಳೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಕ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಕ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ. ಅಂಗಡಿಯ ಒಳ ನುಸುಳಿರುವ ಕಳ್ಳ ನೇರ ಕ್ಯಾಶ್ ಕೌಂಟರ್ ಗೆ ಬಂದಿದ್ದಾನೆ. ಅಲ್ಲೇ ಇರಿಸಲಾಗಿದ್ದ ಸಿಸಿಟಿವಿಯನ್ನು ತಿರುಗಿಸಿ ಅದರ ದಿಕ್ಕು ಬದಲಿಸಿದ್ದಾನೆ. ಈ ವೇಳೆ ಸಿಸಿಟಿವಿಯಲ್ಲಿ ಆತನ ಮುಖ ಸೆರೆಯಾಗಿದ್ದು ಕಳ್ಳನನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಕಾರಿಯಾಗಲಿದೆ. ಇದೇ ಅಂಗಡಿಯಲ್ಲಿ ಈ ಮುನ್ನ ಎರಡು ಬಾರಿ ಕಳ್ಳತನ ಗೈಯ್ಯಲಾಗಿದ್ದು ಇದೀಗ ಮೂರನೇ ಬಾರಿ ಕಳ್ಳರು ಕನ್ನ ಹೊಡೆದಿದ್ದಾರೆ. ಸಿಸಿಟಿವಿ ಇರುವ ಬಗ್ಗೆ ತಿಳಿದಿದ್ದರೂ ಕಳ್ಳರು ಯಾವುದೇ ಭಯವಿಲ್ಲದೆ ಕಳ್ಳತನ ನಡೆಸಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಜಮಾಡಿ : ವಿಶ್ವ ತಂಬಾಕು ವಿರೋಧಿ ದಿನಾಚರಣೆ
Posted On: 15 Jun 2024, 03:27 PM
ಹೆಜಮಾಡಿ : ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಹೆಜಮಾಡಿ ಇಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜರಗಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಕಾಪು ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ದಯಾನಂದ ಹೆಜಮಾಡಿ ಉದ್ಘಾಟಿಸಿದರು. ಈ ಸಂದರ್ಭ ಅವರು ಉತ್ತಮ ಸಂಸ್ಕಾರ ಬೆಳೆಸಿ ಹೆತ್ತವರನ್ನು ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಗಣೇಶ ಆಚಾರ್ಯ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ದುಶ್ಚಟಗಳಿಂದ ಮುಕ್ತರಾಗೋಣ ಎಂಬ ಸಂಕಲ್ಪ ಬೋಧಿಸಿದರು. ಜನಜಾಗೃತಿ ವೇದಿಕೆಯ ಸದಸ್ಯರಾದ ಸುಧಾಕರ ಕರ್ಕೇರ ರವರು ಶೇಕಡಾ 100 ಫಲಿತಾಂಶ ದಾಖಲಿಸಿದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಶುಭ ಹಾರೈಸಿದರು ಹಾಗೂ ಶಿಕ್ಷಕರನ್ನೂ ಅಭಿನಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಳೆದ ಸಾಲಿನ ಹತ್ತನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕರಾದ ಸಂಪಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಒಕ್ಕೂಟದ ಅಧ್ಯಕ್ಷೆ ಪವಿತ್ರಾ ಗಿರೀಶ್, ಯೋಜನಾಧಿಕಾರಿ ಮಮತಾ ಶೆಟ್ಟಿ, ಶಿಕ್ಷಕರು, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ದೀಪಾ ಎನ್. ಉಡುಪ ಸ್ವಾಗತಿಸಿದರು. ಪಡುಬಿದ್ರಿ ವಲಯದ ಮೇಲ್ವಿಚಾರಕಿ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಅನಿತಾ ವಂದಿಸಿದರು.
ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ : ಬಿಲ್ವ ಪತ್ರ ಗಿಡ ನೆಡುವ ಅಭಿಯಾನಕ್ಕೆ ಕ್ಷೇತ್ರದಲ್ಲಿ ಚಾಲನೆ
Posted On: 15 Jun 2024, 03:22 PM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠ ಇದರ ಮುಖ್ಯಸ್ಥರಾದ ಶ್ರೀ ಸಾಯಿ ಈಶ್ವರ ಗುರೂಜಿಯವರ ಸಂಕಲ್ಪದಂತೆ 108 ದಿನಗಳಲ್ಲಿ 108 ದೇವಾಲಯಗಳಿಗೆ ಭೇಟಿ ನೀಡಿ ಬಿಲ್ವ ಪತ್ರ ಗಿಡ ನೆಡುವ ಅಭಿಯಾನಕ್ಕೆ ಜೂ.14 ರಂದು ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ದ್ವಾರಕಾಮಯಿ ಮಠ ಇದರ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ 108 ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿ ಹಿಂದೂ ಧರ್ಮದ ರಕ್ಷಣೆ ಸೈನಿಕರಿಗೆ ಬೆಂಬಲ ಮತ್ತು ಮಹಿಳಾ ಜಾಗೃತಿಯ ಬಗ್ಗೆ ಜನ ಅಭಿಪ್ರಾಯ ಮೂಡಿಸಲಾಗುವುದು ಅಲ್ಲವೇ ಪ್ರತಿ ದೇವಸ್ಥಾನದಲ್ಲಿ ಬಿಲ್ವಪತ್ರೆ ಗಿಡವನ್ನು ನೆಡುವ ಕಾರ್ಯ ನಡೆಯಲಿರುವುದು ಎಂದು ತಿಳಿಸಿದರು. ಜಯಂಟ್ಸ್ ಗ್ರೂಪ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ಮಾತನಾಡಿ ಬಿಲ್ವಪತ್ರೆ ಗಿಡವು ಕೇವಲ ಧಾರ್ಮಿಕ ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಉತ್ತಮವಾಗಿದೆ. ಸಾಕಷ್ಟು ಗಿಡಗಳನ್ನು ಪ್ರಕೃತಿಗೆ ಸಂತಸ ತರುವ ಕಾರ್ಯ ನಾವೆಲ್ಲರೂ ಮಾಡಬೇಕು. ಈ ನಿಟ್ಟಿನಲ್ಲಿ ಸಾಯಿ ಈಶ್ವರ ಗುರೂಜಿ ಈ ಕಲ್ಪನೆ ಉತ್ತಮವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಲ್ವಪತ್ರೆ ಗಿಡಗಳನ್ನು ಹಸ್ತಾಂತರ ಮಾಡಲಾಯಿತು. ಕಾಯ೯ಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಾಜಿ ಮಹಿಳಾ ಮೋಚಾ೯ ಅಧ್ಯಕ್ಷರಾದ ವೀಣಾ ಶೆಟ್ಟಿ, ವಾರಿಜಾ ಕಲ್ಮಾಡಿ, ಸತೀಶ್ ಮುಂತಾದವರು ಉಪಸ್ಥಿತರಿದ್ದರು. ಗಿಡಗಳನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಸುವಣ೯ ಎಂಟರ್ಪ್ರೈಸ್ ರವರ ವತಿಯಿಂದ ನೀಡಲಾಯಿತು. ರಾಘವೇಂದ್ರ ಕವಾ೯ಲು ನಿರೂಪಿಸಿದರು.
ಕಾಪು : ಪೈಪ್ ಲೈನ್ ಅವಾಂತರ - ಕುಸಿಯುವ ಹಂತದಲ್ಲಿ ಸಾರ್ವಜನಿಕ ಬಾವಿ, ಟ್ರಾನ್ಸ್ಫಾರ್ಮರ್
Posted On: 14 Jun 2024, 05:28 PM
ಕಾಪು : ಇಲ್ಲಿನ ಕೊಪ್ಪಲಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಮನೆ ಬಳಿ ಪೈಪ್ ಲೈನ್ ಉದ್ದೇಶಕೋಸ್ಕರ ಗುಂಡಿ ತೆಗೆದಿದ್ದು ಇದರಿಂದ ಸಾರ್ವಜನಿಕ ಬಾವಿ ಜೊತೆಗೆ ಟ್ರಾನ್ಸ್‌ಫಾರ್ಮರ್ ಕೂಡ ಕುಸಿಯುವ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ದರ್ಕಾಸು ಸುಂದರ ಕರ್ಕೇರ ಇವರ ಮನೆಯ ಹತ್ತಿರವಿರುವ ಈ ಬಾವಿಯ ಸಮೀಪ ಗ್ಯಾಸ್, ನೀರಿನ ಪೈಪ್ ಲೈನ್ ಗೆ ಹೊಂಡ ತೋಡಿದ್ದು ಮತ್ತು ಬೋರ್ವೆಲ್ ಕೊರೆಯಲಾಗಿದ್ದು ಇದರಿಂದ ಬಾವಿ ಕುಸಿಯುವ ಹಂತಕ್ಕೆ ತಲುಪಿರುವುದರ ಜೊತೆಗೆ ಟ್ರಾನ್ಸ್‌ಫಾರ್ಮರ್ ನ್ನು ಕೂಡ ಆದಷ್ಟು ಬೇಗ ತೆರವು ಇಲ್ಲವೇ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾಗಿದೆ. ಈ ಬಗ್ಗೆ ಕಾಪು ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ನಿವಾಸಿ ಹರೀಶ್ ತಿಳಿಸಿದ್ದಾರೆ. ಜೊತೆಗೆ ಸಾರ್ವಜನಿಕ ಬಾವಿಯ ನೀರೂ ಕಲುಷಿತವಾಗಿದ್ದು ಅದರ ಬಗ್ಗೆಯೂ ಗಮನಹರಿಸಬೇಕಾಗಿದೆ.
ಉಡುಪಿ : ಸಂಸದ ಕೋಟಾರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಪೈಪೋಟಿ ಶುರು ; ಗೀತಾಂಜಲಿ ಸುವರ್ಣ ಹೆಸರು ಮುಂಚೂಣಿಯಲ್ಲಿ
Posted On: 14 Jun 2024, 07:28 AM
ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗುತ್ತಿದ್ದಂತೆ ಅವರಿಂದ ತೆರವಾದ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೈಪೋಟಿ ಶುರುವಾಗಿದ್ದು ಒಂದೆಡೆ ಜಾತಿ ಲೆಕ್ಕಾಚಾರ ಮತ್ತೊಂದೆಡೆ ಪಕ್ಷದ ಹಿರಿತನ ಜೊತೆಗೆ ತೆರೆಮರೆಯ ಕಸರತ್ತು ನಡೆಯುತ್ತಿದೆ. ಈ ನಡುವೆ ಬಿಲ್ಲವ ಸಮುದಾಯದ ಗೀತಾಂಜಲಿ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಸಾರ್ವಜನಿಕ ವಲಯದಲ್ಲಿ ಬೆರೆಯುತ್ತಾ, ಸಮಾಜ ಸೇವೆಯಲ್ಲಿಯೂ ತಮನ್ನು ತಾವು ತೊಡಗಿಸಿಕೊಳ್ಳುವ ಗುಣ ಅವರಲ್ಲಿದೆ. ಇವರು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ವಹಿಸಿರುವ ಇವರು, 2 ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಜನರ ಕಷ್ಟ ಸುಖದಲ್ಲಿ ಬೆರೆತವರು. ಸಮಾಜ ಸೇವೆಗೆ ದಿನದ 24 ಗಂಟೆಯು ಸ್ಪಂದಿಸುವ ಗೀತಾಂಜಲಿ ಸುವರ್ಣ ಅವರಿಗೆ ಈ ಬಾರಿಯ ವಿಧಾನ ಪರಿಷತ್ ಸದಸ್ಯರಾಗಿ ಅವಕಾಶ ನೀಡಿದರೆ ಮಹಿಳೆಯರಿಗೂ ಪ್ರಾಶಸ್ತ್ಯ ನೀಡಿದಂತಾಗುತ್ತದೆ. ಈ ಬಗ್ಗೆ ಪಕ್ಷದ ಹಿರಿಯರು, ನಾಯಕರು ವರಿಷ್ಟರ ಗಮನಕ್ಕೆ ತರಬೇಕೆಂದು ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ
Posted On: 14 Jun 2024, 07:26 AM
ಕಾಪು : ಇಲ್ಲಿ ನೆಲೆ ನಿಂತಿರುವ ಶ್ರೀ ಮಾರಿಯಮ್ಮ ದೇವಿಯು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ಜಗತ್ತಿನಾದ್ಯಂತ ನೆಲೆಸಿರುವ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದ್ದಾಳೆ. ಇದೀಗ ಕಾಪು ಹೊಸ ಮಾರಿಗುಡಿ ದೇವಸ್ಥಾನವು ಭಕ್ತರ ಮತ್ತು ಅಭಿವೃದ್ಧಿ ಸಮಿತಿಯ ಆಶಯದಂತೆ ಧಾರ್ಮಿಕ ಆಕರ್ಷಕ ಶ್ರದ್ಧಾ ಕೇಂದ್ರವಾಗಿ ನವ ನಿರ್ಮಾಣಗೊಳ್ಳುತ್ತಿದೆ. ನೂತನ ದೇಗುಲದಲ್ಲಿ 2025 ರ ಮಾರ್ಚ್ 2 ರಂದು ಅಮ್ಮನ ದಿವ್ಯ ಗದ್ದುಗೆಯು ಪ್ರತಿಷ್ಠಾಪನೆಗೊಳ್ಳಲಿದ್ದು, ತದನಂತರ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಅಮ್ಮನ ಗದ್ದುಗೆ ಮತ್ತು ಉಚ್ಚಂಗಿ ದೇವಿಯ ಪೀಠ ಸ್ವರ್ಣಮಯವಾಗಬೇಕೆಂಬ ಆಶಯದಿಂದ ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಹೇಳಿದರು. ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಳದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳ ಜೊತೆಗೂಡಿ ಸ್ವರ್ಣ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಭಕ್ತರು ಹೊಸ ಚಿನ್ನದೊಂದಿಗೆ ಉಪಯೋಗಿಸಿದ ಚಿನ್ನದ ಆಭರಣವನ್ನು ಹರಕೆಯ ರೂಪದಲ್ಲಿ ಸಮರ್ಪಿಸುತ್ತಿದ್ದು ಇದಕ್ಕಾಗಿ ಅಮ್ಮನಲ್ಲಿ ನುಡಿಯನ್ನು ಕೇಳಿದಾಗ ಸಂತೋಷದಿಂದ ಸ್ವೀಕರಿಸಿ ಸ್ವರ್ಣ ನೀಡಿದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನನ್ನ ಕಾಲಬುಡಕ್ಕೆ ಹಾಕಿಕೊಳ್ಳುತ್ತೇನೆ ಎಂಬುವುದಾಗಿ ನುಡಿಯಾಗಿದೆ. ಜೂನ್ 25 ರಂದು ಬೆಳಿಗ್ಗೆ ಗಂಟೆ 09:09 ಕ್ಕೆ ಸರಿಯಾಗಿ ದೇವಳದಲ್ಲಿ ಸ್ವರ್ಣಗೌರಿ ಪೂಜೆ ಮತ್ತು ಸ್ವರ್ಣ ಸಮರ್ಪಿಸುವ ಭಕ್ತಾದಿಗಳಿಗೆ ಸ್ವರ್ಣ ಸಂಕಲ್ಪವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸ್ವರ್ಣ ಗದ್ದುಗೆ ಮಾದರಿ ಅನಾವರಣಗೊಳ್ಳಲಿದೆ ಎಂದರು. ಸ್ವರ್ಣ ಸಮರ್ಪಣಾ ಸಮಾರಂಭ ಮತ್ತು ಸನ್ನಿಧಾನದಲ್ಲಿ ಹೊರತುಪಡಿಸಿ ಬೇರೆ ಎಲ್ಲಿಯೂ ಸ್ವರ್ಣವನ್ನು ಪಡೆದುಕೊಳ್ಳಲಾಗುವುದಿಲ್ಲ. ಸ್ವರ್ಣ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತರು ಮುಂಗಡವಾಗಿ ತಮ್ಮ ಹೆಸರನ್ನು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿಯಲ್ಲಿ ನೋಂದಾಯಿಸಬೇಕು. ನಿಗದಿತ ಸ್ವರ್ಣ ಸಮರ್ಪಿಸಿದ ಭಕ್ತಾದಿಗಳಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಪುಣ್ಯ ಅವಕಾಶವನ್ನು ಭಕ್ತರೆಲ್ಲರೂ ಸದುಪಯೋಗಪಡಿಸಿಕೊಂಡು ಸ್ವರ್ಣ ಸಮರ್ಪಣಾ ಸಮಾರಂಭದಲ್ಲಿ ಅಥವಾ ಸನ್ನಿಧಾನದಲ್ಲಿ ಸ್ವರ್ಣ ಸಮರ್ಪಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ ಪ್ರಧಾನ ಕಾರ್ಯಾಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಸನ್ನ ಆಚಾರ್ಯ (ದೇವಿ ಜುವೆಲ್ಲರ್ಸ್ ಕಾಪು), ಕಾರ್ಯದರ್ಶಿ ರವಿ ಭಟ್ ಮಂದಾರ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ್ ಆಚಾರ್ಯ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕೇಂದ್ರಗಳ ಭೇಟಿ
Posted On: 13 Jun 2024, 06:47 AM
ಕಾರ್ಕಳ : ವಾಣಿಜ್ಯ ವಿಭಾಗದ ವಿಧ್ಯಾರ್ಥಿಗಳಿಗೆ ಕಾಲೇಜಿನ ಆರಂಭದ ದಿನದಿಂದಲು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ಕಾರ್ಕಳದ ಪವರ್ ಪಾಯಿಂಟ್ ಬ್ಯಾಗ್ ಇಂಡಸ್ಟ್ರಿ ಹಾಗೂ ಮೂಡಬಿದ್ರೆಯ ಪವರ್ ಪಾಯಿಂಟ್ ಬ್ಯಾಟರಿ ಇಂಡಸ್ಟ್ರಿಗೆ ಭೇಟಿ ನೀಡಿ, ಇಲ್ಲಿ ವಿದ್ಯಾರ್ಥಿಗಳು ಉತ್ಪಾದನಾ ಪ್ರಕ್ರಿಯೆ , ಹೂಡಿಕೆ ಹಾಗೂ ವಿತರಣೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದರು. ಮಕ್ಕಳಲ್ಲಿ ನಮ್ಮ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಯನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಗೆ ಭೇಟಿ ನೀಡಲಾಯಿತು. ಕೈಗಾರಿಕಾ ಭೇಟಿ, ರಾಷ್ಟ್ರೀಯ ಸೇವಾ ಯೋಜನೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಈ ಸಂಸ್ಥೆಯ ವಿಶೇಷ. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಉಮೇಶ್, ಚಂದ್ರಕಾಂತ್, ಮಹೇಶ್ ಶೆಣೈ, ಸುಧಿಕ್ಷಾ ಪೈ, ಕೃಪಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಪಲಿಮಾರು: ವಿದ್ಯುತ್ ಲೈನ್ ಯೋಜನೆ - ಇನ್ನದಲ್ಲಿ ಬೃಹತ್ ಪ್ರತಿಭಟನೆ ; ತಾತ್ಕಾಲಿಕ ಸ್ಥಗಿತಕ್ಕೆ ಆದೇಶ
Posted On: 13 Jun 2024, 06:44 AM
ಪಲಿಮಾರು : ಇನ್ನ ಗ್ರಾಮ ಪಂಚಾಯಿತಿ ಬಳಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಮತ್ತು ಸುತ್ತಮುತ್ತಲಿನ ಯೋಜನಾ ಸಂತ್ರಸ್ಥರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರೈತ ಪರ ಸಂಘ, ಸಂಸ್ಥೆಗಳು ಬುಧವಾರ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಭ ಪ್ರತಿಭನಾಕಾರರು ಹಕ್ಕೊತ್ತಾಯ ಮಂಡಿಸಿದರು. ಪ್ರತಿಭನಾ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್ ಯೋಜನೆಯನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಕೃಷಿಕರಿಗೆ ತೊಂದರೆ ಉಂಟು ಮಾಡುವ ಯಾವುದೇ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಅವರೊಂದಿಗೆ ಮಾತನಾಡುತ್ತೇನೆ. ಆ ಬಳಿಕ ಸಭೆ ಎಲ್ಲರನ್ನೂ ಸೇರಿಸಿ ಸಭೆ ನಡೆಸುವುದಾಗಿ ಹೇಳಿದರು. ಈ ಯೋಜನೆಗೆ ಎರಡು ವರ್ಷಗಳ ಹಿಂದೆಯೇ ಒಪ್ಪಿಗೆ ಸಿಕ್ಕಿತ್ತು. ಇಲ್ಲಿನ ಸ್ಥಳೀಯ ಶಾಸಕರು ಒಪ್ಪಿಗೆ ನೀಡುವ ಸಂದರ್ಭದಲ್ಲಿ ಇಂಧನ ಸಚಿವರಾಗಿದ್ದರು. ಮುಂದಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಬೇಕು. ಆದರೆ ಜನರ ಜೀನವದಲ್ಲಿ ಚೆಲ್ಲಾಟವಾಡುವ ಇಂತಹ ಯೋಜನೆ ಬೇಡ ಎಂದರು. ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಮಾಜಿ ಸಚಿವ ವಿನಯಕುಮಾರ ಸೊರಕೆ, ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ, ನಂದಳಿಕೆ ಟೋಲ್‌ಗೇಟ್ ಹೋರಾಟ ಸಮಿತಿಯ ಆಧ್ಯಕ್ಷ ಸುಹಾಸ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್ ಶೆಟ್ಟಿ, ರಾಜು ಗೌಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ, ವಿವಿಧ ಪಕ್ಷದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತು ಇಲಾಖಾಧಿಕಾರಿಗಳ ಸಭೆ
Posted On: 12 Jun 2024, 06:12 PM
ಉಡುಪಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ದಾರಿ ದೀಪಗಳ ಸಮರ್ಪಕ ನಿರ್ವಹಣೆ ಮಾಡಬೇಕು ಮತ್ತು ಪಡುಬಿದ್ರಿ, ಕಟಪಾಡಿ ಭಾಗದಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚುತ್ತಿದ್ದು ಅಪಘಾತ ತಡೆಗೆ ಬ್ಯಾರಿಕೇಡ್ ಹಾಗೂ ರಿಫ್ಲೆಕ್ಟರ್ ಗಳನ್ನು ಅಳವಡಿಸುವಂತೆ ಮತ್ತು ಹೆಜಮಾಡಿಯ ಕನ್ನಂಗಾರ್ ಸುಜ್ಲಾನ್ ಗೇಟ್ ಬಳಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಗ್ಯಾಸ್ ಪೈಪ್ ಲೈನ್ ಗುಂಡಿಗಳನ್ನು ತೆಗೆದಿದ್ದು ಮಳೆಗಾಲ ಸಮಯದಲ್ಲಿ ಇದರಲ್ಲಿ ನೀರು ತುಂಬಿ ಅಪಘಾತ ಸಂಭವಿಸುತ್ತದೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಸಹಾಯಕ ಆಯುಕ್ತರಾದ ರಶ್ಮಿ, ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ. ಅರುಣ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರಗಜ್ಜನ ಅಭಯ - ಕೈ ಸೇರಿದ ಕಳವಾದ ದ್ವಿಚಕ್ರ ವಾಹನ ; ಭಕ್ತನಿಂದ ನಿತ್ಯವೂ ಸ್ವಚ್ಛತೆಯ ಕಾಯಕದ ಪ್ರಮಾಣ
Posted On: 12 Jun 2024, 04:55 PM
ಉಡುಪಿ : ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕೆಲಸಕಿದ್ದ ಪ್ರವೀಣ್ ಸೇರಿಗಾರ್ ರ ದ್ವಿಚಕ್ರ ವಾಹನ ಕಳವಾಗಿ ಮಾನಸಿಕವಾಗಿ ಕುಗ್ಗಿದಾಗ ಹೋಟೆಲ್ ಪಕ್ಕದ ಅಂಗಡಿಯಾತ ನೀಡಿದ ಸಲಹೆಯಂತೆ ಹತ್ತಿರದ ಕೊರಗಜ್ಜ ಸನ್ನಿಧಿಗೆ ಭೇಟಿಯಿತ್ತು ಹರಕೆ ಹೇಳಿಕೊಂಡಾದ ಬಳಿಕ 15 ದಿವಸದಲ್ಲಿ ಕಳಕೊಂಡ ವಾಹನ ಗೋವಾದಲ್ಲಿ ಪತ್ತೆಯಾದ ಬಗ್ಗೆ ಪೋಲೀಸರು ಮಾಹಿತಿ ನೀಡುತ್ತಾರೆ. ಇದರಿಂದ ಸಂತಸಗೊಂಡ ಆ ವ್ಯಕ್ತಿ ನನಗೆ ದೈವ ಕೈ ಬಿಡ್ಲಿಲ್ಲ ಎಂಬ ಖುಷಿಯಿಂದ ದೈವಸ್ಥಾನಕ್ಕೆ ಭೇಟಿ ಕೊಟ್ಟು ಹೇಳಿದ ಹರಕೆಯನ್ನು ಒಪ್ಪಿಸುತ್ತಾರೆ. ಮುಂದೆ ದಿನನಿತ್ಯ ದೈವಸ್ಥಾನಕ್ಕೆ ಸಂಜೆ 5ಗಂಟೆಗೆ ಬಂದು ದೈವ ಸನ್ನಿಧಿಯ ಸ್ವಚ್ಛತೆಯನ್ನು ಮಾಡುತ್ತಾರೆ. ಇದರಿಂದ ನೆಮ್ಮದಿ ಕೂಡ ಸಿಗುತ್ತದೆ ಎನ್ನುತ್ತಾರೆ. ಪ್ರವೀಣ್ ಸೇರಿಗಾರ್ ರ ಇಷ್ಟಾರ್ಥ ಪೂರೈಸಿದ ಕ್ಷೇತ್ರವೇ ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿ ತೆಂಕು ಪೇಟೆ ವುಡ್ ಲ್ಯಾಂಡ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನವಾಗಿದೆ. ಅಷ್ಟ ಮಠಗಳಿಗೂ ಈ ದೈವಸ್ಥಾನಕ್ಕೆ ನಿಕಟ ಸಂಬಂಧವಿದೆ. ವರ್ಷದಲ್ಲಿ 12 ಸಂಕ್ರಮಣ ಪೂಜೆ, ಎರಡು ಮಾರಿಪೂಜೆ, ಕಾಲಾವಧಿ ಮೂರು ದಿವಸ ನೇಮೋತ್ಸವ ಹಾಗೂ ಭಕ್ತರ ಹರಕೆಯ ದರ್ಶನ ಸೇವೆ ಕೋಲಸೇವೆ ಜರಗುತ್ತದೆ. ಪ್ರತಿ ತಿಂಗಳು ಸಂಕ್ರಮಣ ದಿವಸ ವಿಶೇಷ ಪೂಜೆ ಬೆಳಿಗ್ಗೆ 8:30 ರಿಂದ ಆರಂಭಗೊಂಡು ಮಧ್ಯಾಹ್ನ 2 ಗಂಟೆವರೆಗೆ ದೈವಸ್ಥಾನ ತೆರೆದಿರುತ್ತದೆ ಈ ಸಂದರ್ಭದಲ್ಲಿ ಊರ ಪರ ಊರ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗುತ್ತಾರೆ.
