Updated News From Kaup

ಅನಾರೋಗ್ಯ ಪೀಡಿತ ಮಗುವಿಗೆ ಧನಸಹಾಯ : ಈ ಬಾರಿ ಸೀ ಪೋಕ್ ವೇಷದಲ್ಲಿ ಬರಲಿದ್ದಾರೆ ರವಿ‌ ಕಟಪಾಡಿ

Posted On: 05-09-2023 07:27AM

ಉಡುಪಿ : ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿವರ್ಷ ವಿಶಿಷ್ಟ ವೇಷ ಧರಿಸಿ ಜನರನ್ನು ರಂಜಿಸುತ್ತಿದ್ದ ಸಮಾಜ ಸೇವಕ ರವಿ ಕಟಪಾಡಿ ಈ ಬಾರಿಯೂ‌ ಸಜ್ಜಾಗಿದ್ದಾರೆ.

ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಹಾಕಿ ತಿರುಗಾಟ ನಡೆಸಲಿದ್ದಾರೆ.

ಈ ಬಾರಿ ಕುಂದಾಪುರದ 2 ವರ್ಷದ ಮಗುವಿನ ಚಿಕಿತ್ಸೆಗಾಗಿ ಹಣ ಸಂಗ್ರಹ ಮಾಡಲು ನಿರ್ಧರಿಸಿದ್ದಾರೆ. ಆದರೆ ಈ ಬಾರಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ಜನರ ಬಳಿಗೆ ಹೋಗಿ ಹಣವನ್ನು ಸಂಗ್ರಹ ಮಾಡದೆ, ಇಚ್ಛಾನುಸಾರ ಜನರೇ ವಾಹನದ ಬಳಿ ಬಂದು ಧನಸಹಾಯ ಮಾಡಬಹುದಾಗಿದೆ.

ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ‌ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಲಿದೆ.

ಸೌಜನ್ಯ ಪ್ರಕರಣ : ಮರು ತನಿಖೆಗೆ ಒಳಪಡಿಸುವಂತೆ ದ.ಕ, ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿಗೆ ಮನವಿ

Posted On: 05-09-2023 07:24AM

ಉಡುಪಿ : ಸೌಜನ್ಯ ಪ್ರಕರಣವನ್ನು ಮರು ತನಿಖೆ ಒಳಪಡಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೌಜನ್ಯ ಪ್ರಕರಣವನ್ನು ಮರು ತನಿಖೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ನಾನು ತಿಳಿಸಿದ್ದೇನೆ. ಈಗಾಗಲೇ ಕಾನೂನು ಸಲಹೆಯನ್ನು ನಾನು ಪಡೆದಿರುವುದರಿಂದ ಸೌಜನ್ಯಳ ಪೋಷಕರು ಮೇಲ್ಮನವಿ ಸಲ್ಲಿಸಬಹುದು ಅಥವಾ ಸಿಬಿಐ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ನಿಮ್ಮ ಮನವಿಯಂತೆ ಇನ್ನೊಮ್ಮೆ ನಾನು ಕಾನೂನು ಸಲಹೆ ಪಡೆಯುವುದಾಗಿ ಭರವಸೆ ನೀಡಿದರು.

ಹೆಜಮಾಡಿ : ಪತ್ರಕರ್ತ ಹರೀಶ್ ಹೆಜಮಾಡಿಗೆ ಹುಟ್ಟೂರ ಸನ್ಮಾನ

Posted On: 03-09-2023 06:42AM

ಹೆಜಮಾಡಿ : ಇಂದಿನ ಕಾಲದಲ್ಲಿ ದೇವಾಲಯಗಳೆಂದರೆ ಸರಕಾರಿ ಪ್ರಾಥಮಿಕ ಶಾಲೆಗಳು. ಇದೊಂದು ಪವಿತ್ರ ಕ್ಷೇತ್ರ. ಇಂತಹ ಶಾಲೆಯಲ್ಲಿ ಕಲಿತು ಇಲ್ಲಿಯೇ ಪತ್ರಕರ್ತ ಹರೀಶ್ ಹೆಜಮಾಡಿಯವರಿಗೆ ಊರವರು ಸನ್ಮಾನಗೈಯುತ್ತಿರುವುದು ಅಭಿನಂದನೀಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಕಮಲ ದೇವಿ ಪ್ರಸಾದ ಅಸ್ರಣ್ಣ ಹೇಳಿದರು. ಅವರು ಹೆಜಮಾಡಿ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಹರೀಶ್ ಹೆಜಮಾಡಿ ಇವರ ಹುಟ್ಟೂರ ಸನ್ಮಾನ ಸಮಿತಿ ಹೆಜಮಾಡಿ ಇವರ ಸಹಯೋಗದಲ್ಲಿ ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪತ್ರಕರ್ತ ಹರೀಶ್ ಹೆಜಮಾಡಿ ಇವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಂಗಾ‌ರ್ ಜುಮ್ಮಾ ಮಸೀದಿಯ ಖತೀಬರಾದ ಜವಾಬ್ ಅಶ್ರಫ್ ಸಖಾಫಿ ಕಿನ್ಯ ಮಾತನಾಡಿ ಧರ್ಮ, ಅನಾಚಾರದ ಸುದ್ದಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಸಮನ್ವಯ ಸಾಧಿಸುವ ಮೂಲಕ ಸಮಾಜದ ಹಿತಚಿಂತನೆಯ ಕಾರ್ಯ ಪತ್ರಿಕೆಗಳಿಂದ ಆಗಬೇಕಾಗಿದೆ ಎಂದರು. ಕಾರ್ನಾಡು ಮುಲ್ಕಿ, ಅಮಲೋದ್ಭವ ಮಾತಾ ಚರ್ಚ್ ನ ಧರ್ಮ ಗುರು ವಂ| ಫಾ| ಸಿಲ್ವೆಸ್ಟರ್ ಡಿ ಕೋಸ್ತ ಮಾತನಾಡಿ ಇಂದು ಊರ ಸಂಘ ಸಂಸ್ಥೆಗಳಿಂದ ತಮ್ಮ ಊರಿನ ವ್ಯಕ್ತಿ ಎಂಬ ಪ್ರೀತಿ, ಆತ್ಮೀಯಯೆಯಿಂದ ಪಡೆಯುವ ಸನ್ಮಾನ ಅತ್ಯಂತ ಮಹತ್ವದ್ದಾಗಿದೆ ಎಂದರು.

ಸನ್ಮಾನ : ಹೆಜಮಾಡಿ ಗ್ರಾಮದ ವಿವಿಧ ‌ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮದ ನಾಗರಿಕರು ಸೇರಿ ಪತ್ರಕರ್ತ ಹರೀಶ್ ಹೆಜಮಾಡಿಯವರನ್ನು ಸನ್ಮಾನಿಸಿದರು. ಇದೇ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಮಾಜಿ ಅಧ್ಯಕ್ಷರಾದ ಪಾಂಡುರಂಗ ಸಿ ಕರ್ಕೇರ, ಅಲ್ ಅಝಾರ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಹಾಜಿ ಶೇಖಬ್ಬ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ ಸಮಿತಿಯ ಅಧ್ಯಕ್ಷರಾದ ಪೌಲ್ ರೋಲ್ಫಿ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಶಿಕ್ಷಕ ಸಂಜೀವ ಟಿ ಪ್ರಾರ್ಥಿಸಿದರು. ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶೇಖರ ಹೆಜಮಾಡಿ ಪ್ರಸ್ತಾವನೆಗೈದರು. ಸನಾ ಇಬ್ರಾಹಿಂ ವಂದಿಸಿದರು.

ಸನ್ಮಾನ ಕಾರ್ಯಕ್ರಮದ ಮುನ್ನ ಗಣ್ಯರ ಸಹಿತ ಸನ್ಮಾನಿತರನ್ನು ಹೆಜಮಾಡಿ ಜಂಕ್ಷನ್ ನಿಂದ ವೇದಿಕೆಗೆ ಚಿಣ್ಣರ ಸ್ವಾಗತದ ಜೊತೆಗೆ ಚಂಡೆಯ ನಿನಾದದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಸ.ಮಾ.ಹಿ.ಪ್ರಾ. ಶಾಲೆ ಹಾಗೂ ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ಜರಗಿತು.

ಯುವಕ ಮಂಡಲ ಪೆರಂಪಳ್ಳಿ : 15ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ

Posted On: 02-09-2023 11:01PM

ಉಡುಪಿ : ನಗರಸಭಾ ವ್ಯಾಪ್ತಿಯ ಪೆರಂಪಳ್ಳಿಯ ಸಾಮಾಜಿಕ ಸಂಸ್ಥೆಯಾಗಿರುವ ಯುವಕ ಮಂಡಲ ಪೆರಂಪಳ್ಳಿ ಇದರ ಆಶ್ರಯದಲ್ಲಿ 15ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯು ಸಪ್ಟೆಂಬರ್ 3, ಆದಿತ್ಯವಾರ ಮಧ್ಯಾಹ್ನ 3:30ಕ್ಕೆ ದಿ. ಮಂಜುನಾಥ ಶಿವತ್ತಾಯ ರಂಗಮಂದಿರ ಪೆರಂಪಳ್ಳಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ವಿಭಾಗ ಒಂದರಲ್ಲಿ ಮೂರು ವರ್ಷದವರೆಗಿನ ಚಿಣ್ಣಾರಿಗಾಗಿ ಮೂರು ನಿಮಿಷ ಮತ್ತು ಮೂರು ವರ್ಷಕ್ಕೆ ಮೇಲ್ಪಟ್ಟು 6 ವರ್ಷದವರೆಗಿನ ಪುಟಾಣಿಗಳಿಗಾಗಿ ಮೂರು ನಿಮಿಷದ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. ಎರಡು ವಿಭಾಗಗಳಲ್ಲಿ ನಗದು ಬಹುಮಾನವಿದ್ದು, ಆಸಕ್ತ ಮಕ್ಕಳು ಹೆಸರು ನೋಂದಾಯಿಸಲು ಅವಕಾಶವಿದೆಯೆಂದು ಸಂಘಟಕರು ತಿಳಿಸಿದ್ದಾರೆ.

ಬಂಟಕಲ್ಲು : ಬೀಳುವ ಮನೆಗೆ ಆಸರೆಯಾಗಿ ನಿಂತ ಹೇರೂರು ಫ್ರೆಂಡ್ಸ್ ಕ್ಲಬ್

Posted On: 01-09-2023 06:38PM

ಬಂಟಕಲ್ಲು : 92ನೇ ಹೇರೂರು ಶ್ರೀಮತಿ ಆಶಾಲತಾ ಆಚಾರ್ಯರವರ ಮನೆ ಬೀಳುವ ಹಂತದಲ್ಲಿದ್ದ ಸಂದರ್ಭದಲ್ಲಿ 92ನೇ ಹೇರೂರು ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರು ಕ್ರಿಕೆಟ್ ಪಂದ್ಯಾಟ ನಡೆಸಿ ಅದರ ಉಳಿಕೆಯ ಹಣದೊಂದಿಗೆ ಮತ್ತು ದಾನಿಗಳ ಸಹಕಾರದಿಂದ ಬೀಳುವ ಹಂತದಲ್ಲಿದ್ದ ಮನೆಯನ್ನು ಸಮಗ್ರ ರೀತಿಯಲ್ಲಿ ದುರಸ್ತಿಗೊಳಿಸಿ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ರಾಜೇಶ್ ಜೋಗಿ, ಕಾರ್ಯದರ್ಶಿ ಕುಮಾರಿ ದೀಕ್ಷಾ ಮತ್ತು ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಸುಧೀರ್ ಹೇರೂರು ಇವರ ಮಾರ್ಗದರ್ಶನದಲ್ಲಿ ಈ ದುರಸ್ತಿ ಕಾರ್ಯ ನಡೆದಿದ್ದು ಪ್ರಾಸ್ತಾವಿಕ ಮಾತು ಶ್ರೀ ವಿಜಯ ಧೀರಜ್ ರವರು ನೀಡಿದರು. ಕಾರ್ಯಕ್ರಮವನ್ನು ದೀಪಕ್ ನಿರೂಪಿಸಿದರು.

ನೂತನವಾಗಿ ಉದ್ಘಾಟನೆಗೊಂಡ ಹೇರೂರು ಫ್ರೆಂಡ್ ಕ್ಲಬ್ ನ ಕನಸಿನ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಜಮಾಡಿ : ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ

Posted On: 01-09-2023 07:05AM

ಹೆಜಮಾಡಿ : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಜಮಾಡಿ ಆಶ್ರಯದಲ್ಲಿ ರಾಜೀವ ಗಾಂಧಿ ಕ್ರೀಡಾಂಗಣ ಹೆಜಮಾಡಿ ಇಲ್ಲಿ ಉಡುಪಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಜರಗಿತು.

ಹೆಜಮಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರೇಷ್ಮಾ ಮೆಂಡನ್ ರವರ ಅಧ್ಯಕ್ಷತೆಯಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಪಾಂಡುರಂಗ ಕರ್ಕೇರಾ ಉದ್ಘಾಟಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿ, ಶೇಕ್ ಸಿರಾಜ್ ಹೆಜಮಾಡಿ, ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಶಾಲಾ ಎಸ್ ಡಿ‌ ಎಮ್ ಸಿ ಅಧ್ಯಕ್ಷ ಸತೀಶ್ ನಾಯಕ್, ರಿತೇಶ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ಈಶ್ವರ್ ಉಪಸ್ಥಿತರಿದ್ದರು.

ಸಂಸ್ಥೆಯ ಹಿರಿಯ ಶಿಕ್ಷಕಿ ಸಂಪಾವತಿ ಸ್ವಾಗತಿಸಿದರು. ಸಹ ಶಿಕ್ಷಕಿ ದೀಪ ಉಡುಪ ಹಾಗೂ ಅನಿತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಮಂಜುನಾಥ ಪಿ ವಂದಿಸಿದರು.

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನ

Posted On: 31-08-2023 06:06PM

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಭಾರತೀಯ ಜನ ಔಷಧಿ ಕೇಂದ್ರ ಮತ್ತು ಸುವರ್ಣ ಎಂಟರ್ಪ್ರೈಸಸ್ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಅಜ್ಜರಕಾಡು ಜನ ಔಷಧಿ ಕೇಂದ್ರದಲ್ಲಿ ಪಂಚ ಪವಿತ್ರ ಗಿಡಗಳ ವಿತರಣಾ ಅಭಿಯಾನ ಕಾರ್ಯಕ್ರಮ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಂಕರಪುರ ದ್ವಾರಕಾಮಯಿ ಸಾಯಿ ಮುಖ್ಯಪ್ರಾಣ ದೇವಾಲಯದ ಮುಖ್ಯಸ್ಥರಾದ ಸಾಯಿ ಈಶ್ವರ ಗುರೂಜಿ, ನಾರಾಯಣ ಗುರುಗಳು ಸಮಾಜದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದವರು ಪ್ರಕೃತಿಗೆ ಹೆಚ್ಚಿನ ಒತ್ತನ್ನು ನೀಡಿದ ಅವರು ಬಹಳಷ್ಟು ಸಾಮಾಜಿಕ ಸುಧಾರಣಾ ಕಾರ್ಯವನ್ನು ಮಾಡಿದವರು ಅವರ ಜಯಂತಿಯನ್ನು ಈ ಮೂಲಕ ಆಚರಣೆ ಮಾಡಿದ್ದು, ಅಭಿನಂದನಾಹ೯ ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಸರ್ಜನ್ ಡಾ. ವೀಣಾ ಮಾತನಾಡಿ ನಾವೆಲ್ಲರೂ ಪ್ರಕೃತಿಗೆ ನಾವು ಗಿಡವನ್ನು ನೆಡುವ ಮೂಲಕ ಕೊಡುಗೆ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಯಂಟ್ಸ್ ಗ್ರೂಪ್ ಅಧ್ಯಕ್ಷರಾದ ವಿವೇಕಾನಂದ ಕಾಮತ್, ಪೂರ್ವ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕರಾದ ಮಧುಸೂದನ್ ಹೇರೂರು ಪ್ರಸ್ತಾವನೆಗೈದರು. ಈ ಸಂದಭ೯ದಲ್ಲಿ ವಿವಿಧ ಧಾಮಿ೯ಕ ಸ್ಥಳಗಳಲ್ಲಿ ನೆಡಲು ಧಾಮಿ೯ಕ ಮುಖಂಡರುಗಳಿಗೆ ಪಂಚ ಪವಿತ್ರ ಗಿಡಗಳನ್ನು ವಿತರಿಸಲಾಯಿತು. ಜಯಂಟ್ಸ್ ಪದಾಧಿಕಾರಿಗಳಾದ ಮಿಲ್ಟನ್ ಒಲಿವೇರಾ, ಶ್ರೀನಾಥ್ ಕೋಟ, ರೊನಾಲ್ಡ್ ಡಯಾಸ್, ರವಿರಾಜ್ ಹೆಚ್.ಪಿ, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

ಶಿರ್ವ : ಹಿಂದೂ ಜೂನಿಯರ್‌ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

Posted On: 31-08-2023 05:30PM

ಶಿರ್ವ: ಇಲ್ಲಿನ ಹಿಂದೂ ಜೂನಿಯರ್‌ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮುದ್ದು ಶೆಟ್ಟಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳ ದತ್ತು ಸ್ವೀಕಾರ‌ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಹಳೆ ವಿದ್ಯಾರ್ಥಿಗಳಿಂದ ಕೊಡುಗೆ : ವಿದ್ಯಾರ್ಥಿಗಳಿಗೆ 2 ಲ.ರೂ. ವಿದ್ಯಾರ್ಥಿ ವೇತನ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟ, ವಾರ್ಷಿಕೋತ್ಸವ ಮತ್ತು ನಿರ್ವಹಣಾ ಕೆಲಸಗಳಿಗೆ ಒಟ್ಟು 4 ಲಕ್ಷ ರೂಪಾಯಿಗಳ ಕೊಡುಗೆಗಳನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾಯಿತು. ಸಮ್ಮಾನ : ನಿವೃತ್ತ ಉಪನ್ಯಾಸಕ ವಿಷ್ಣು ಭಟ್‌ ದಂಪತಿ ಮತ್ತು ಕಳೆದ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್‍ಯಾಂಕ್‌ ಗಳಿಸಿದ ಅಂಶಿ ಎಸ್‌. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಜೇಸಿಐ ರಾಷ್ಟ್ರೀಯ ತರಬೇತುದಾರ ಇನ್ನಾ ರಾಜೇಂದ್ರ ಭಟ್‌ ದಿಕ್ಸೂಚಿ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಮುಂಬೈ ಸಮಿತಿಯ ಗೌರವ ಸಲಹೆಗಾರ ಕುತ್ಯಾರು ಕಿಶೋರ್‌ ಕುಮಾರ್‌ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಸೊರ್ಕಳ, ಉಪಾಧ್ಯಕ್ಷ ಶಿರ್ವ ಕೋಡು ಜಯಪ್ರಕಾಶ ಹೆಗ್ಡೆ, ಕೋಶಾಧಿಕಾರಿ ಉಮೇಶ್‌ ಆಚಾರ್ಯ, ಸಂಸ್ಥೆಯ ಪ್ರಾಂಶುಪಾಲ ಭಾಸ್ಕರ ಎ. ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಬಾಯಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಹಿರಿಯ ಸದಸ್ಯರು, ಕಾಲೇಜಿನ ಸಹ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಪ್ರಸ್ತಾವನೆಗೈದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್‌ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಂಜ ಪವನ್‌ ಶೆಟ್ಟಿ ವಂದಿಸಿದರು.

ಕಾಪು : ಶಾಸಕರ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ  ಜಯಂತಿ ಆಚರಣೆ

Posted On: 31-08-2023 05:08PM

ಕಾಪು: ತಾಲ್ಲೂಕು ಆಡಳಿತ ಸೌಧದಲ್ಲಿರುವ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರ ಕಛೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ನಡೆಯಿತು.

ಶಾಸಕರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಂದೇ ಮತವನ್ನು ಸಾರಿದ ದಾರ್ಶನಿಕರು. ಅವರ ತತ್ವ ಸಿದ್ದಾಂತ ಅನುಕರಣೀಯ, ಆದರ್ಶಯುತವಾಗಿದೆ ಎಂದರು.

ಜಿಲ್ಲಾ ಬಿಜೆಪಿ ಮಹಿಳಾ ಘಟಕಾಧ್ಯಕ್ಷೆ ವೀಣಾ  ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಬಿಲ್ಲವ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಾಪು : ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Posted On: 30-08-2023 06:00PM

ಕಾಪು : ತಾಲೂಕು ಆಡಳಿತ, ತಾಲೂಕು ಪಂಚಾಯತ್ ಕಾಪು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಕಾಪು ಇವರ ಸಹಯೋಗದಲ್ಲಿ ಬುಧವಾರ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಕಾಪು ತಹಸೀಲ್ದಾರ್ ನಾಗರಾಜ ವಿ ನಾಯ್ಕಡ ಚಾಲನೆ ನೀಡಿದರು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರವು ತನ್ನ 100 ದಿನದ ಕಡಿಮೆ ಕಾಲಾವಧಿಯಲ್ಲಿ ಮೂರು ಭರವಸೆಯನ್ನು ಈಡೇರಿಸಿದೆ. ಕೆಲವೇ ಸಮಯದಲ್ಲಿ ಇನ್ನೂ ಎರಡು ಭರವಸೆಯನ್ನು ಪೂರ್ಣಗೊಳಿಸಲಿದೆ ಎಂದರು.

ಈ ಸಂದರ್ಭ ಪುರಸಭಾ ಸದಸ್ಯರಾದ ಹರಿಣಾಕ್ಷಿ, ವಿದ್ಯಾಲತಾ, ಉಮೇಶ್ ಕರ್ಕೆರ, ಮೋಹಿನಿ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ವಿಜಯ, ಯೋಜನಾಧಿಕಾರಿ ವೀಣಾ ವಿವೇಕಾನಂದ, ಪುರಸಭಾ ಮುಖ್ಯ ಅಧಿಕಾರಿ ಸಂತೋಷ್ ಎಸ್ ಟಿ ಮತ್ತಿತರರು ಉಪಸ್ಥಿತರಿದ್ದರು.