Updated News From Kaup

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ತಾರನಾಥ್ ಗಟ್ಟಿ ಕಾಪಿಕಾಡ್ ಆಯ್ಕೆ

Posted On: 16-03-2024 05:55PM

ಮಂಗಳೂರು :ತುಳು ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ತಾರನಾಥ್ ಗಟ್ಟಿ ಕಾಪಿಕಾಡ್ ಅವರನ್ನು ನೇಮಕ ಮಾಡಲಾಗಿದೆ.

ತುಳು ಅಕಾಡೆಮಿಯ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಭೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ನೇಮಕಗೊಂಡಿದ್ದಾರೆ.

ಮಾರ್ಚ್ 17(ನಾಳೆ): ಪೈಯಾರು ಶ್ರೀ ಮಲೆ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಮಂಜ

Posted On: 16-03-2024 01:35PM

ಕುತ್ಯಾರು : ಇಲ್ಲಿನ ಪೈಯಾರು ಶ್ರೀ ಮಲೆ ಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಮಂಜ (ಭೋಗ) ಮಾರ್ಚ್ 17, ಭಾನುವಾರ ರಾತ್ರಿ ಅನ್ನದಾನದೊಂದಿಗೆ ನಡೆಯಲಿದೆ.

ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿರುವರು.

ಮಾ. 16-17 : ನಿರಂತರ್ ಉದ್ಯಾವರ - ಕೊಂಕಣಿ ನಾಟಕ ; ಕತ್ತಲಹಾಡು ಕಾರ್ಯಕ್ರಮ

Posted On: 15-03-2024 05:35PM

ಉದ್ಯಾವರ : ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ನಿರಂತರ್ ಉದ್ಯಾವರದ ನೇತೃತ್ವದಲ್ಲಿ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಮಾರ್ಚ್ 16 ಮತ್ತು 17ರಂದು ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವಠಾರದಲ್ಲಿ ಸಂಜೆ ಗಂಟೆ 6:30ಕ್ಕೆ ಸರಿಯಾಗಿ ನಡೆಯಲಿದೆ.

ಮಾರ್ಚ್ 16ರಂದು ಮಂಗಳೂರಿನ ಅಸ್ತಿತ್ವ (ರಿ) ಇವರಿಂದ ವo.ಫಾ. ಆಲ್ವಿನ್ ಸೆರಾವೊ ಬರೆದಂತಹ ಕೊಂಕಣಿ ನಾಟಕ 'ಹಿಮ್ಟೊ' ಮತ್ತು ಮಾರ್ಚ್ 17 ಆದಿತ್ಯವಾರದಂದು ಪ್ರಖ್ಯಾತ ನಾದ ಮಣಿನಾಲ್ಕೂರು ಇವರಿಂದ 'ಕತ್ತಲ ಹಾಡು' ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಅಧ್ಯಕ್ಷ ರೋಶನ್ ಕ್ರಾಸ್ಟೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಸಂಪರ್ಕ ಸಾಧನ ಆಯೋಗ, ಐಸಿವೈಎಂ ಉದ್ಯಾವರ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಸೌಹಾರ್ದ ಸಮಿತಿ ಉದ್ಯಾವರ ಸಹಭಾಗಿತ್ವದಲ್ಲಿ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಕರ್ನಾಟಕ ರಾಜ್ಯದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮಾಚ್೯ 16: ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ

Posted On: 15-03-2024 05:28PM

ಶಂಕರಪುರ : ಶ್ರೀ ಸಾಯಿ ಈಶ್ವರ್ ಗುರೂಜಿರವರ ಪುಣ್ಯ ಮಹಾ ಸಂಕಲ್ಪದಂತೆ ಪ್ರತಿ ವರ್ಷ ಮಾರ್ಚ್ 16 ರಂದು ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ ಆಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಶಂಕರಪುರದ ಆವರಣದಲ್ಲಿ ಇರುವ ಪ್ರಾಣಿ ಪಕ್ಷಿ ಮೋಕ್ಷ ಕಟ್ಟೆಗೆ ನೀರು/ಹಾಲೆರೆದು ಗಂಟೆ ಕಟ್ಟಬಹುದು. ನಾವು ಸಾಕಿ ಬೆಳೆಸಿದ ಪ್ರಾಣಿ ಪಕ್ಷಿಗಳು ಮೃತಪಟ್ಟಿದ್ದರೆ ಅವುಗಳ ನೆನಪು ಸದ್ಗತಿ-ಮೋಕ್ಷಕ್ಕಾಗಿ ಪ್ರಾರ್ಥಿಸಲು ಅವಕಾಶವಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಧಾರ್ಮಿಕ ಪರಿಷತ್ ಸದಸ್ಯರಾಗಿ ಸದಾನಂದ ಪೂಜಾರಿ ಆಯ್ಕೆ

Posted On: 15-03-2024 05:24PM

ಕಾಪು : ಕರ್ನಾಟಕ ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸದಾನಂದ ಪೂಜಾರಿ ಆಯ್ಕೆಗೊಂಡಿರುತ್ತಾರೆ.

ಬೆಳಪು ಸ್ಪೋರ್ಟ್ಸ್ ಕ್ಲಬ್ : 30 ನೇ ವರ್ಷದ ಸಂಭ್ರಮ

Posted On: 14-03-2024 10:06AM

ಬೆಳಪು : ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಇದರ 30ನೇ ವರ್ಷದ ಸಂಭ್ರಮದ ಅಂಗವಾಗಿ 2024ನೇ ಸಾಲಿನ ಸಾಮಾಜಿಕ ಕಾರ್ಯಚಟುವಟಿಕೆಯ ಭಾಗವಾಗಿ ಬೆಳಪು ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಘಟಕ ಮತ್ತು ಕಪಾಟನ್ನು ಹಸ್ತಾಂತರಿಸಲಾಯಿತು.

ಬೆಳಪು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರು ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಬೆಳಪು ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಸಾಮಾಜಿಕ, ಶಿಕ್ಷಣ, ಕ್ರೀಡೆಗಳಿಗೆ ಮಹತ್ವವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದರು.

ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ಶಾನಾವಾಝ್ ಫಝಲುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಶಾಹೀದ್‌ ನವಾಜ್‌, ಕಾರ್ಯದರ್ಶಿ ರಿಯಾನ್‌ ಅನ್ಸಾರ್‌, ಜೊತೆ ಕಾರ್ಯದರ್ಶಿ ಸಕ್ಲೆನ್ ಅಹಮ್ಮದ್, ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರುಗಳಾದ ಅಲ್ತಾಫ್ ಅಬ್ದುಲ್ ಘನಿ, ಸಹೀದ್‌ ಅಹ್ಮದ್, ಅಕ್ರಮ್‌ ಮಹತಾಬ್‌ ಉಪಸ್ಥಿತರಿದ್ದರು. ಅಂಗನವಾಡಿಯ ಶಿಕ್ಷಕಿಯರಾದ ಪ್ರಿಯ, ಆಶಾಲತಾ ಭಾಗವಹಿಸಿದ್ದರು. ಖಾಲಿದ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

ಈದು : ಸಾಮೂಹಿಕ ಶನೈಶ್ಚರ ಪೂಜೆ, ಕುಣಿತ ಭಜನಾ ಕಾರ್ಯಕ್ರಮ, ಹಿಂದೂ ಧರ್ಮ ಜಾಗೃತಿ ಸಭೆ

Posted On: 12-03-2024 09:53PM

ಕಾರ್ಕಳ : ಶ್ರೀ ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಈದು, ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಿಳಾ ಜಾಗರಣ, ಭಗತ್ ಸಿಂಗ್ ಘಟಕ ಈದು ಇದರ ಆಶ್ರಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ, ಕುಣಿತ ಭಜನಾ ಕಾರ್ಯಕ್ರಮ ಮತ್ತು ಹಿಂದೂ ಧರ್ಮ ಜಾಗೃತಿ ಸಭೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶ್ರೀ ಗುರುದೇವ ದತ್ತ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರುರವರು ಆಶೀರ್ವಚನಗೈದರು. ಉಪನ್ಯಾಸಕರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಪ್ರಮುಖ್ ಆಗಿರುವ ಕೇಶವ ಬಂಗೇರ ಪ್ರಧಾನ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆಂಡ್ ಸ್ಟೋನ್ ಕ್ರಷರ್ ಮಾಲಕರ ಸಂಘ ಹಾಗೂ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ಸಂಚಾಲಕರಾದ ಗುರುಪ್ರಸಾದ್ ನಾರಾವಿ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಭಜನಾ ತರಬೇತುದಾರ ಅಶೋಕ್ ಕಳಸಬೈಲು, ಜೈ ತುಳುನಾಡು ವೇದಿಕೆಯ ಅಧ್ಯಕ್ಷರಾದ ವಿಶು ಶ್ರೀಕೇರ, ವಸಂತ ಪಡ್ಡಾಯಿ ಪಾಪು, ಎಸ್ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಸುದರ್ಶನ್, ಈದು ಮೂಕಾಂಬಿಕಾ ಯುವಕ ಸಂಘದ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಈದು ಹಿಂದೂ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕದ ಅಧ್ಯಕ್ಷರಾದ ಪ್ರಸಾದ್ ಶರ್ಮ, ಈದು ಮಹಿಳಾ ಜಾಗರಣ ವೇದಿಕೆ ಘಟಕದ ಅಧ್ಯಕ್ಷೆ ಪ್ರೇಮಾ, ಹಿಂದೂ ಮಹಿಳಾ ಜಾಗರಣ ವೇದಿಕೆ ಭಗತ್ ಸಿಂಗ್ ಘಟಕ ಈದು ಇದರ ಸಹಸಂಚಾಲಕರಾದ ಲಾವಣ್ಯ ಈದು ರಾಮಾಂಜನೇಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭಜನಾ ತರಬೇತುದಾರ ದೀನ್ ರಾಜ್ ಕಳವಾರ್ ಉಪಸ್ಥಿತರಿದ್ದರು.

ಕಾಪು : ಎ.ಆರ್.ಕೆ ಡೆವಲಪರ್ಸ್ ವತಿಯಿಂದ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಕಿಟ್ ವಿತರಣೆ

Posted On: 12-03-2024 10:03AM

ಕಾಪು : ಎ.ಆರ್.ಕೆ ಡೆವಲಪರ್ಸ್ ಮತ್ತು ಕನ್ಸ್ಟ್ರಕ್ಷನ್ ಕಂಪನಿ ಕಾಪು ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಕಿಟ್ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ರಂಜಾನ್ ಉಪವಾಸದಲ್ಲಿರುವ ಅತೀ ಬಡತನದ 100 ಮನೆಯನ್ನು ಗುರುತಿಸಿ ಅವರ ಮನೆಗೆ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ಪಡಿತರ ಕಿಟ್ ನ್ನು ಕಾಪುವಿನ ಆಸು ಪಾಸಿನ ಕುಟುಂಬದ ಮನೆಗಳಿಗೆ ಒದಗಿಸಲಾಯಿತು. ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು ಮಲ್ಲಾರು ಗುರುಗಳಾದ ಅಶ್ರಫ್ ಮದನಿ ಮಜೂರು ದುವಾವನ್ನು ನೆರವೇರಿಸಿದರು.

ನಂತರ ಮಾತನಾಡಿದ ಎ.ಆರ್.ಕೆ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕಂಪನಿ ಮಾಲಕರಾದ ಅಸ್ಲಾಂ ಪರ್ಕಳ ನಾನು ನನ್ನ ದಿವಂಗತ ತಂದೆಯ ಸವಿನೆನಪಿಗಾಗಿ ಸುಮಾರು 5 ವರ್ಷಗಳಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರವರ ಮಾರ್ಗದರ್ಶನದಲ್ಲಿ ಆಯ್ದ 100 ಅತಿ ಬಡತನ ಕುಟುಂಬಕ್ಕೆ ರಂಜಾನ್ ಕಿಟ್ ನೀಡುತ್ತಿದ್ದೇನೆ ಎಂದು ತಿಳಿಸಿದರು ದೇವರು ರಂಜಾನ್ ತಿಂಗಳು ಎಲ್ಲಾ ಜನರಿಗೆ ಸುಖ ಸಂಪತ್ತು ನೀಡಲಿ ಎಂದು ಶುಭ ಹಾರೈಸಿದರು.

ಫಾರೂಕ್ ಚಂದ್ರನಗರ ಮಾತನಾಡಿ ಅಸ್ಲಾಂ ಪರ್ಕಳ ಹಾಗೂ ರಿಯಾಜ್ ಸೌದಿ ಅರೇಬಿಯಾ ಹಾಗೂ ಅವರ ಸಹೋದರರು ಅನಿವಾಸಿ ಭಾರತೀಯರಗಿದ್ದು ಇಲ್ಲಿಯೂ ಡೆವಲಪರ್ಸ್ ಕನ್ಸ್ಟ್ರಕ್ಷನ್ ಕೆಲಸ ಮಾಡಿಕೊಂಡು ರಂಜಾನ್ ಕಿಟ್ ಅಂತೆಯೇ ನಾನು ಮಾಡುವ ಹಲವಾರು ಸಮಾಜ ಸೇವೆಗೆ ಅವರು ನನಗೆ ಬೆನ್ನುಲುಬಾಗಿ ನಿಂತು ಬಡವರ ಸೇವೆ ಮಾಡುವುದರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಉಸ್ಮಾನ್ ಶಿರ್ವ, ಆರಿಫ್ ಕಾಪು, ನಾಸಿರ್ ಅಬ್ದುಲ್ ಉಸ್ಮಾನ್, ಶಂಶುದ್ದಿನ್ ಇಸ್ಮಾಯಿಲ್ ಕರಂದಾಡಿ, ಅರಫ್ ಮಣಿಪಾಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಉಡುಪಿ : ಸಾರ್ವಜನಿಕ ಪ್ರದೇಶ, ವಾಣಿಜ್ಯ ಮಳಿಗೆಗಳಲ್ಲಿ ತುಳು ಭಾಷೆಯ ನಾಮಫಲಕ ಅಳವಡಿಸಲು ಮನವಿ

Posted On: 11-03-2024 02:41PM

ಉಡುಪಿ : ತುಳು ಭಾಷೆ ಲಿಪಿಯ ಅಕ್ಷರಗಳನ್ನು ಸಹ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಳವಡಿಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದೇಶ ಹೊರಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಮೊಯಿದೀನ್ ಬಾವ ಹಾಗೂ ಎಲ್ಲಾ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ತುಳುನಾಡಿನ ಜನರ ಪರವಾಗಿ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಯಿತು.

ಉಡುಪಿ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ 2024 ರಲ್ಲಿ ತಿಳಿಸಿರುವಂತೆ ಕನ್ನಡ ಭಾಷೆಯನ್ನು ಶೇಕಡ 60 ರ ಬದಲಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೌರವಾನ್ವಿತ ನ್ಯಾಯಾಲಯದ ಕನ್ನಡ ನಾಮಫಲಕಗಳಿಗೆ ಕನಿಷ್ಠ ಶೇಕಡ 50 ನ್ನು ನಮೂದಿಸಿ ಹಾಗೂ 2500 ವರ್ಷಗಳ ಇತಿಹಾಸ ಹೊಂದಿರುವ ಸ್ವಂತ ಲಿಪಿ ಹೊಂದಿರುವ ತುಳು ಲಿಪಿಯ ಅಕ್ಷರಗಳಿಗೆ ಶೇಕಡ 30 ರಷ್ಟು ಅವಕಾಶ ನೀಡಬೇಕು ಮತ್ತು ಉಳಿದ ವ್ಯಾವಹಾರಿಕ ಭಾಷೆಗಳಿಗೆ ಶೇಕಡ 20 ರಷ್ಟನ್ನು ತುಳುನಾಡಿನ 2 ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೂಡಲೇ ವಿಶೇಷ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಆಕಾಶ್ ರಾಜ್ ಜೈನ್, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ತುಳು ಪರ ಹೋರಾಟಗಾರರಾದ ರೋಷನ್ ರೆನೋಲ್ಡ್, ಜೈ ತುಳುನಾಡು ಸಂಘಟನೆ ಅಧ್ಯಕ್ಷರಾದ ವಿಷು ಶ್ರೀಕೆರಾ, ತುಳುನಾಡು ಒಕ್ಕೂಟದ ಪ್ರಮುಖ ಮುಖಂಡರುಗಳು, ಉಡುಪಿ ರಾಜಕೀಯ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಅವರು, ಸೇರಿದಂತೆ ಎಲ್ಲಾ ತುಳು ಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

ಮಾಚ್೯ 11 : ಕಾಪು ಪುರಸಭಾ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮ

Posted On: 10-03-2024 08:39PM

ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾಪು, ಕಾಪು ಪುರಸಭೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಾಪು, ಜೆಸಿಐ ಕಾಪು ಮತ್ತು ಯಾರ್ಡ್ ಫ್ರೆಂಡ್ಸ್ ಉಳಿಯಾರಗೋಳಿ ಇವರ ಜಂಟಿ ಆಶ್ರಯದಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ ಮಾ. 11 ರಂದು ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ನಾಯಿಗಳಿಂದ ರೇಬಿಸ್ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಪು ಪುರಸಭೆ ಆವರಣ, ಉಳಿಯಾರಗೋಳಿ ಯಾರ್ಡ್ ಬೀಚ್, ಮಲ್ಲಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಆವರಣ ಹಾಗೂ ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ಆವರಣದಲ್ಲಿ ಬೆಳಿಗ್ಗೆ 10.30 ರಿಂದ 12.00ಗಂಟೆಯ ವರೆಗೆ ಏಕಕಾಲದಲ್ಲಿ ಲಸಿಕೆ ವಿತರಣೆ ನಡೆಯಲಿದೆ.

ಕಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕರು ಲಸಿಕಾ ಅಭಿಯಾನಕ್ಕಾಗಿ ಸಾಕು ನಾಯಿಗಳನ್ನು ನಿಗದಿತ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತಂದು ಲಸಿಕೆ ಹಾಕಿಸಿಕೊಳ್ಳ ಬಹುದಾಗಿದೆ. ಈ ಅಭಿಯಾನದ ಯಶಸ್ಸಿಗೆ ಕಾಪು ಪುರಸಭೆ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಕಾರ್ಯಕ್ರಮ ಸಂಯೋಜಕರು ವಿನಂತಿಸಿದ್ದಾರೆ.