Updated News From Kaup

ಕಾಪು : ತಾಲೂಕಿನಾದ್ಯಂತ ನಾಗರಪಂಚಮಿ ಆಚರಣೆ

Posted On: 21-08-2023 01:05PM

ಕಾಪು : ತಾಲೂಕಿನಾದ್ಯಂತ ನಾಗರಪಂಚಮಿಯನ್ನು ಇಂದು ಆಚರಿಸಲಾಯಿತು. ಎಲ್ಲೆಲ್ಲೂ ನಾಗಸನ್ನಿಧಿಯಲ್ಲಿ ಭಕ್ತ ವರ್ಗ ನಾಗದೇವರಿಗೆ ವರ್ಷಂಪ್ರತಿಯ ಸೇವೆಯನ್ನು ನೀಡಿದರು.

ಕರಾವಳಿಯಲ್ಲಿ ನಾಗಾರಾಧನೆಗೆ ತನ್ನದೇ ಆದ ಮಹತ್ವವಿದೆ. ತುಳುನಾಡ ಜನರ ಪಾಲಿನ ಮೊದಲ ಹಬ್ಬ ನಾಗರ ಪಂಚಮಿ. ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರಪಂಚಮಿಯಂದು ತನು ತಂಬಿಲ ಸೇವೆ ಭಕ್ತರು ನೀಡುತ್ತಾರೆ.

ಶಿರ್ವ : ಕುತ್ಯಾರು ಯುವಕ ಮಂಡಲ ಅಧ್ಯಕ್ಷರಾಗಿ ಸುಶಾಂತ್ ಶೆಟ್ಟಿ ಆಯ್ಕೆ

Posted On: 20-08-2023 05:55PM

ಶಿರ್ವ : ಇಲ್ಲಿನ ಕುತ್ಯಾರು ಯುವಕ ಮಂಡಲದ 2023-2025 ನೇ ಸಾಲಿನ ಅಧ್ಯಕ್ಷರಾಗಿ ಸುಶಾಂತ್ ಶೆಟ್ಟಿ ಆಯ್ಕೆ ಆಗಿರುತ್ತಾರೆ.

ಉಪಾಧ್ಯಕ್ಷರಾಗಿ ಭಾರ್ಗವ ತಂತ್ರಿ, ಕಾರ್ಯದರ್ಶಿ ಮನೋಜ್ ಕುಲಾಲ್, ಜತೆ ಕಾರ್ಯದರ್ಶಿ ಧೀರಜ್, ಕೋಶಾಧಿಕಾರಿ ಧೀರಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಡಿ ಆಚಾರ್ಯ, ಉಪ ಕ್ರೀಡಾ ಕಾರ್ಯದರ್ಶಿ ನಜೀರ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೇಯಸ್ ಆಚಾರ್ಯ, ಉಪ ಸಾಂಸ್ಕೃತಿಕ ಕಾರ್ಯದರ್ಶಿ ನಿಖಿಲ್, ಸಂಘಟನಾ ಕಾರ್ಯದರ್ಶಿ ಪವನ್ ಶೆಟ್ಟಿ, ಉಪ ಸಂಘಟನಾ ಕಾರ್ಯದರ್ಶಿ ಪ್ರಥ್ವಿರಾಜ್, ಲೆಕ್ಕ ಪರಿಶೋಧಕರಾಗಿ ಧೀರಜ್ ಕುಲಾಲ್, ಸ್ವಚ್ಛತೆ ಮಹೇಶ್ ವಿ ಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸದಾಶಿವ ಆಚಾರ್ಯ, ಧೀರಜ್ ಶೆಟ್ಟಿ, ಸುಜಿತ್, ಶೈಲೇಶ್, ಅಭಿಜಿತ್, ಪ್ರವೀಣ್, ಅಕ್ಷಯ್, ಪ್ರಕಾಶ್ ಕುಲಾಲ್, ಆದರ್ಶ, ದರ್ಶನ್, ಅಜಿತ್ ಶೆಟ್ಟಿ, ವಿಶ್ವನಾಥ್ ಹಾಗೂ ನಿಖಿಲ್ ಮೂಲ್ಯ ಆಯ್ಕೆಯಾಗಿದ್ದಾರೆ.

'ಲೋಕಪ್ರಿಯ' ನಾಗನ ಆರಾಧನಾ ಪರ್ವ : 'ನಾಗರ ಪಂಚಮಿ'

Posted On: 20-08-2023 05:46PM

ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ.ಪ್ರಾಣಿ - ಮನುಷ್ಯ ಸಂಬಂಧವೂ ಪ್ರಾಚೀನವಾದುದು.ನಿಯಂತ್ರಣವನ್ನು ಮೀರಿ ತನಗೆ ಮಾರಕವಾಗಬಲ್ಲ ಶಕ್ತಿಯಾಗಿ ಸವಾಲೆಸೆಯಬಲ್ಲ ಪ್ರಾಣಿಗಳ ಕುರಿತಾಗಿ ಮನುಷ್ಯನಿಗಿದ್ದ ಭಯವು ಅಷ್ಟೇ ಪುರಾತನವಾದುದು, ಇಲ್ಲಿ ಅಡಗಿದೆ , ಭಯದಿಂದ ಭಕ್ತಿಯಾಗಿ ಆರಾಧನೆಯಾಗಿ ರೂಪಾಂತರಗೊಂಡ ಪ್ರಾಣಿಪೂಜೆಯ ಮೂಲ. ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ. ನಿಸರ್ಗದ ರಮ್ಯಾದ್ಭುತ ,ಅಷ್ಟೇ ಭಯ ಆತಂಕಕಾರಿ ಪರಿತಾಪ ಮತ್ತು ಸುಪ್ರಸನ್ನ ಪರಿಣಾಮಗಳನ್ನು ಗಮನಿಸುತ್ತಾ ಬದುಕು ಕಟ್ಟಿದ ನಮ್ಮ ಪೂರ್ವಜರು‌ ಪ್ರಕೃತಿಯೊಂದಿಗೆ ಪ್ರಕೃತಿ ಜನ್ಯ ಪ್ರತ್ಯಕ್ಷ - ಪರೋಕ್ಷ ಚೈತನ್ಯಗಳನ್ನು ಭಯದಿಂದ ಒಪ್ಪಿದರು, ಉಪಕೃತರಾಗಿ ಪ್ರೀತಿಯಿಂದ ಸ್ವೀಕರಿಸಿದರು .ಇಲ್ಲಿ‌ ವಿನೀತಭಾವದೊಂದಿಗೆ ಶ್ರದ್ಧೆಯ ಒಪ್ಪಂದಗಳಿವೆ, ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳಿದ ಮನುಕುಲದ ಇತಿಹಾಸವಿದೆ. ಜೀವನ ಪೂರ್ತಿ ಹಾಲುಕೊಡುವ ಭಾರತೀಯ ಸಂಸ್ಕೃತಿಯಯಲ್ಲಿ ಅತ್ಯುಚ್ಚವಾದ ದೈವೀ ಸಾನ್ನಿಧ್ಯವುಳ್ಳ ಹಾಗೂ ತಾಯಿ ಸಮಾನವಾದ ದನವೊಂದು ತೀರಿಕೊಂಡಾಗ ಅದಕ್ಕೆ ದಫನ ಮಾಡಿ ಕೊಡುತ್ತಿದ್ದ ಹಾಲಿನ ಪ್ರಮಾಣವನ್ನು ಹಾಗೂ‌ ದನದ ಗುಣ ವಿಶೇಷಗಳನ್ನು ಹೊಗಳುತ್ತಾ ಕೆಲವು ದಿನಗಳಲ್ಲಿ ಮರೆತು ಬಿಡುತ್ತೇವೆ.ಆದರೆ ನಾಗನ ಶವವೊಂದು ದಾರಿಯಲ್ಲಿ ಸಿಕ್ಕಿದರೂ ಎಂತಹ ಆತಂಕ,ಭಯ.ನಮ್ಮ ಹಿರಿಯರು ತೀರಿಕೊಂಡಾಗ ನೆರವೇರಿಸುವ ಅಂತ್ಯವಿಧಿ ನಿರ್ವಹಣೆ ಹಾಗೂ ಸೂತಕ ಆಚರಣೆ ,ಸಂಸ್ಕಾರಗಳನ್ನು ನಡೆಸುತ್ತೇವೆ. ಹಾಗಾದರೆ ನಾಗ ಯಾರು ? ನಮಗೂ ನಾಗನಿಗೂ ಏನು ಸಂಬಂಧ ? ನಾಗ ನಮ್ಮ ಪೂರ್ವಸೂರಿ ಅಥವಾ ನಮ್ಮವ ಎಂಬ ಸ್ವೀಕಾರ ಯಾಕೆ ರೂಢಿಗೆ ಬಂತು ? ( ಈ ಶ್ರದ್ಧೆ ವೈದಿಕ ಚಿಂತನೆಯಾದರೂ ಆಲೋಚಿಸಲೇ ಬೇಕಾದ ಸಂಗತಿ.ಸಂಪ್ರದಾಯವಾಗಿ ಅಷ್ಟೇ ಶ್ರದ್ಧೆಯದ್ದಾಗಿ ರೂಢಿಯಲ್ಲಿರುವುದು ಅಷ್ಟೇ ಸತ್ಯ.). ನಾಗ - ಮನುಷ್ಯ ಭಾವನಾತ್ಮಕ ಸಂಬಂಧವು , ನಾಗ ನಮ್ಮವ ,ನಮಗಿಂತ ಮೊದಲು ಈ ಭೂಭಾಗದಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿದ್ದವನು ,ಅವನು ಬಿಟ್ಟು ಕೊಟ್ಟ ಭೂಪ್ರದೇಶ ಇದು.ಆದುದರಿಂದ ನಾಗನಿಗೆ ನಾವು ಸದಾ ಕೃತಜ್ಞರಾಗಿಯೇ ಇದ್ದೇವೆ ,ಇರಬೇಕು.

ತುಳುವರ 'ಎಡ್ಡೆಂದಿನವು' : ಉಳಿದಂತೆ ಉರಗ ಜಾತಿಯ ಸಹಸ್ರಾರು ಪ್ರಬೇಧಗಳಿವೆ. ಅವುಗಳೊಂದಿಗೆ ಯಾಕೆ ನಾಗನೊಂದಿಗೆ ಇರುವ ಭಾವನಾತ್ಮಕ ಸ್ವೀಕಾರ ಯಾಕಿಲ್ಲ ? ನಾಗ ನಮ್ಮವ ,ತುಳುವರು ಹೇಳುವಂತೆ "ಎಡ್ಡೆಂದಿನವು". ನೆಲತವು,ಪರಪ್ಪುನವು ಮುಂತಾದ ಹೆಸರುಗಳಿಂದ ಒಪ್ಪಿತನಾದವ. ಜನಪದರಲ್ಲಿ 'ನಾಗ' ಅಥವಾ 'ಸರ್ಪ' ಎಂಬ ಸಂಬೋಧನೆಯೇ ಇಲ್ಲ. ಇದು ಕರಾವಳಿಯ ತುಳುವರ ಶ್ರದ್ಧೆ. ನಾಗ ಉಪಾಸನೆ ನಂಬಿಕೆ ,ಭಯದ ಮೂಲದಿಂದ ಹುಟ್ಟಿರಬಹುದಾದರೂ ನಾಗ - ಮಾನವ ಸಂಬಂಧ ಗಾಢವಾದುದು.ಇಲ್ಲಿ 'ಮೂಲದ' ಅನಾವರಣವಿದೆ."ಮೂಲದ ನಾಗ" ಎಂಬ ಪ್ರಚಲಿತ ಮಾತಿದೆ.ಈ ಅವಲೋಕನ ಮಾನವ - ನಾಗ ಬಂಧುತ್ವವನ್ನು‌ ಗಟ್ಟಿಯಾಗಿಸುತ್ತದೆ. ನಾಗ ಭೂಮಿ‌ಪುತ್ರನೆಂಬ ಒಡಂಬಡಿಕೆ ಇದೆ. ಹುತ್ತದಿಂದ ಮೇಲೆದ್ದು ಬರುವ ನಾಗ ಹಾಗೂ ಹೆಡೆಯರಳಿಸಿ ಬಾಲದಲ್ಲಿ ನಿಲ್ಲುವ ನಾಗನ ಕಣ್ಣ‌ನೋಟ ಹಾಗೂ ಹೆಡೆ ,ಶರೀರ ವಿನ್ಯಾಸ ಭಯವನ್ನು ,ಆತಂಕವನ್ನು ಸೃಷ್ಟಿಸುತ್ತದೆ.ಈ ನೋಟ ಕಾರಣವಾಗಿ ನಾಗ ಸಂಬಂಧವಾದ ಭಯ ಹಾಗೂ ರೋಚಕ ಕಥೆಗಳು ಹುಟ್ಟಿಕೊಂಡುವು. ನಾಗ ಅಥವಾ ಸರ್ಪ ಸಂತತಿಯ ಜೀವನ ವಿಧಾನವನ್ನು ಗಮನಿಸಿದ ಮನುಷ್ಯ ನಾಗನ ವಾಸ ಹುತ್ತದ ಆಳದಲ್ಲಿ‌ ಎಂದು ತಿಳಿದುಕೊಂಡ.ಹುತ್ತದ ಆಳದಲ್ಲಿ ನೀರು ಇರುತ್ರದೆ ಎಂಬ ಸಾಮನ್ಯ ಜ್ಞಾನದಿಂದ ನಾಗ ತಂಪನ್ನು ಬಯಸುತ್ತದೆ,ತಂಪನ್ನು ಆಶ್ರಯಿಸುತ್ತದೆ ಎಂದು ಅರ್ಥೈಸಿಕೊಂಡ.ಹಾಗೆ ಆರಂಭವಾಗಿದ್ದಿರಬೇಕು ತನು ಎರೆಯುವ ಪದ್ಧತಿ. ನಾಗ - ವೃಕ್ಷ ಅವಳಿ ಚೇತನಗಳು.ಮರದ ಬುಡದಲ್ಲಿ ತಂಪಿರುತ್ತದೆ.ಮರ ಗಿಡಗಳ ಸಮೂಹ ಮತ್ತಷ್ಟು ತಂಪಾದ ಬನವಾಗಿರುತ್ತದೆ.ಈ ಕಲ್ಪನೆಯ ಸಾಕಾರ ರೂಪವೇ ನಾಗಬನಗಳು.ನಾಗನ ವಾಸಸ್ಥಾನ ಎಂಬ ನಂಬಿಕೆ ಅಥವಾ ಪ್ರತ್ಯಕ್ಷ ಪ್ರಮಾಣವು ಕಾರಣ ಹಾಗೂ ನಾಗ ಸಂತತಿಯನ್ನು ಹಾಗೂ ಮರಿ ಮೊಟ್ಟೆಗಳಿರುವ ತಾಣ ಎಂಬ ಶ್ರದ್ದೆ ಕಾರಣವಾಗಿ ನಾಗ ಬನವನ್ನು ರಕ್ಷಿಸಲಾಯಿತು. ಮಾನವ ಅಭಿಯೋಗವಾಗದ ಒಂದು ನಾಗಬನದಲ್ಲಿ 50 - 60 ಕ್ಕೂಹೆಚ್ಚು ಮರ ಗಿಡ ಬಳ್ಳಿಗಳ ಪ್ರಬೇಧಗಳಿವೆ.ಕನಿಷ್ಠ 15 - 20 ಔಷಧೀಯ ಸಸ್ಯಗಳು,ಬಳ್ಳಿಗಳು,ಮರಗಳನ್ನು ಗುರುತಿಸಲಾಗಿದೆ.ಈ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಇರಬಹುದು( ಪ್ರಾದೇಶಿಕವಾಗಿ).ಒಂದಷ್ಟು ಹುಳು,ಹುಪ್ಪಟಿಗಳು ,ಪಕ್ಷಿಸಂಕುಲಗಳಿಗೆ ಬನ ವಾಸಸ್ಥಾನ. ನಾಗ ನಂಬಿಕೆ - ಆರಾಧನೆಗಳು ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿರುವುದನ್ನು ಕಾಣಬಹುದು. ವೈದಿಕವು ಕರೆನಾಡಿಗೆ ಬಂದ ಮೇಲೆ ಬಹಳಷ್ಟು ಬದಲಾವಣೆಗಳನ್ನು ನಾಗ ಶ್ರದ್ಧೆ - ಉಪಾಸನಾ ಕ್ರಮಗಳಲ್ಲಿ ಕಾಣಬಹುದಾಗಿದೆ.ಇದನ್ನು ವೈದಿಕದ ಪ್ರಭಾವ ಎನ್ನಬಹುದೇ ಹೊರತು ಅಭಿಯೋಗವಲ್ಲ. ಇದು ಎರಡು ಭಿನ್ನ ಆಲೋಚನೆಗಳ ಸುಗಮ‌ ಸಮಾಗಮವೇ ಆಗಿದೆ. ಆದರೆ ಪ್ರಾಚೀನ ವಿಧಿಗಳು ನೆರವೇರುವ ನಾಗ ಬನಗಳನ್ನು ಗುರುತಿಸಲಾಗಿದೆ.ರೋಚಕ ವಿಧಿಗಳ ವಿಲಕ್ಷಣ ಆರಾಧನೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೂಲದ ನಾಗನಿಗೆ ಮೂಲಿಗರಿಂದ ನಡೆಯುವ ಪೂಜಾ ಕ್ರಮಗಳ ಕುರಿತು ವರದಿ ಮಾಡಿಯಾಗಿದೆ. ಕರ್ನಾಟಕ ಕರಾವಳಿಯಲ್ಲಿ‌ ನಾಗಾರಾಧನೆಯ ಮೂಲದ ಸ್ವರೂಪವನ್ನು ಅಂದಾಜಿಸಲಾಗಿದೆ. ಆದಿಮ ನಾಗಪೂಜಾ ವಿಧಾನಕ್ಕೆ ವೈದಿಕದ ಪ್ರತಿಷ್ಠಾ ವಿಧಿ ನೆರವೇರಿರುವುದರ ಬಗ್ಗೆ ಪತ್ರಿಕಾ ವರದಿಗಳು ಪ್ರಕಟವಾಗಿವೆ.ಅಪೂರ್ವ,ಅರ್ಥಪೂರ್ಣ ನಾಗಾರಾಧನೆಯಾಗಿ ಬೇಸಗೆಯ ತನು ಸೇವೆಗಳು ನೆರವೇರುತ್ತವೆ. ವರ್ಷಕ್ಕೆ ಒಂದು ದಿನ ಮಾತ್ರ ಈ ಬನಗಳಲ್ಲಿ ಪೂಜೆ ನೆರವೇರುತ್ತದೆ.ಕುಟುಂಬ ಸೇರಿ ಮೂಲದ ನಾಗನಿಗೆ ತಂಪೆರೆದು ತಂಬಿಲ ಕಟ್ಟಿ ವಿವಿಧ ಕಟ್ಟುಕಟ್ಟಳೆಗಳನ್ನು ನಡೆಸುತ್ತಾರೆ. ಕೆಲವೆಡೆ ನಾಗ ದರ್ಶನವೂ ಇರುತ್ತದೆ.ಹರಕೆ ಸಂದಾಯ ಹಾಗೂ ವಿಶಿಷ್ಟ ತಾಂತ್ರಿಕ ವಿಧಿಗಳನ್ನು ನಿರ್ವಹಿಸಿ ಕೇಳಿಕೆಗಳನ್ನು‌ ಈಡೇರಿಸುವ ಪದ್ಧತಿಗಳು ನಡೆಯುತ್ತವೆ. ನಾಗಬನ - ಮರದ ಬುಡದಲ್ಲಿ ನಾಗನೆಂದು ನಂಬಿದ ಕೆಂಪು ಕಲ್ಲು ಅಥವಾ ಶಿಲೆ ಅಥವಾ ನಾಗ ಶಿಲಾಪ್ರತೀಕಗಳನ್ನು ಇರಿಸಿ ಅಥವಾ "ನಾಗನಿಗೆ ಕಲ್ಲು ಹಾಕಿ" ನಂಬುವ ನಾಗ ಬನವು ರೂಪಾಂತರಗೊಳ್ಳುವ ಸ್ವರೂಪವನ್ನೂ ಗಮನಿಸಲಾಗಿದೆ. ನಾಗಬನ - ನಾಗ ವೇದಿಕೆ - ನಾಗನಿಗೆ ಗುಡಿ - ನಾಗ ಮಂದಿರ - ನಾಗ ದೇವಸ್ಥಾನ ,ಅವು ಹೀಗಿವೆ. ಪರಿಸರ ರಕ್ಷಿಸಲು ನಾಗಬನ ಉಳಿಸೋಣ.ಈ ಮಾತಿಗೆ ಕಾರಣ "ನಾಗಬನ - ನಾಗಾರಾಧನೆ ಆಶಯ ವಿರೂಪಗೊಳ್ಳುತ್ತಿವೆ".ಯಾವ ನಂಬಿಕೆಯಲ್ಲಿ ನಾಗನ ಆರಾಧನೆಗಳು ನೆರವೇರುತ್ತವೆ.ಈ ನಂಬಿಕೆಯಲ್ಲಾದ ಬದಲಾವಣೆಗಳಲ್ಲಿ ಸ್ಪಷ್ಟತೆ ಇವೆ.ವಿವರಣೆಯೂ ಇವೆ.

ನಾಗರಪಂಚಮಿ : ನಾಗರ ಪಂಚಮಿಯನ್ನು ನಾವು ಸ್ವೀಕರಿಸಿದ ಕ್ರಮದಲ್ಲಿ ಜನಪದ - ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮವಾದಂತೆ ಕಾಣುತ್ತದೆಯೇ ಹೊರತು ವೈದಿಕದ ಅಭಿಯೋಗವಾದಂತೆ ಅನ್ನಿಸುವುದಿಲ್ಲ . ಆಟಿ - ಕರ್ಕಾಟಕ ಮಾಸದಲ್ಲಿ ಒದಗಿಬರುವ ಅಮಾವಾಸ್ಯೆಯಂದು ಬನಗಳಲ್ಲಿ‌ ಹೆಚ್ಚುವರಿ ಗೆಲ್ಲು , ಬೀಳಲು , ಅಪಾಯಕಾರಿ ಮರಗಳ ಗೆಲ್ಲುಗಳನ್ನು ಮಾತ್ರ ಕಡಿಯುವ ಸಂಪ್ರದಾಯ . ಮುಂದೆ ಐದನೇ ದಿನಕ್ಕೆ ಶ್ರಾವಣದ ಶುದ್ಧ ಪಂಚಮಿ " ನಾಗರ ಪಂಚಮಿ" . ಈ ಆಚರಣೆಯಲ್ಲಿ ಸಂಸ್ಕೃತಿಗಳ ಸುಗಮ ಹಾಗೂ ಪರಸ್ಪರ ಒಪ್ಪಿತವಾದ ಹೊಕ್ಕುಬಳಕೆ ನಿಚ್ಚಳ. ನಾಡಿಗೆ ದೊಡ್ಡ ಹಬ್ಬ , ವರ್ಷದ ಸಂಭ್ರಮಗಳೆಲ್ಲ ತೆರೆದುಕೊಳ್ಳುವ ಪ್ರಾರಂಭದ ಹಬ್ಬ . ಆದುದರಿಂದ ತುಳುನಾಡಿನಲ್ಲೂ ಆಚರಣೆ ಪ್ರಶಸ್ತವೇ .ಆಗಮಿಸಿದವುಗಳಲ್ಲಿ ಹಲವು ವಿಚಾರಧಾರೆಗಳು ಒಪ್ಪಿತವಾಗಿವೆ , ಕೆಲವು ತಿರಸ್ಕರಿಸಲ್ಪಟ್ಟಿವೆ . ಅದರಲ್ಲಿ ನಾಗರಪಂಚಮಿ ಒಪ್ಪಿತವಾದುದು .ಏಕೆಂದರೆ ನಾಗ ಲೋಕಪ್ರಿಯ , ಮಾನವನಿಂದ ಮೊತ್ತಮೊದಲು ದೈವತ್ವಕ್ಕೆ ಏರಿದವ . ತನು - ತಂಬಿಲದಂತಹ ಪುರಾತನ ಕ್ರಮವನ್ನು ನಾವು ಬಿಟ್ಟವರಲ್ಲ . ನಾಗರಪಂಚಮಿಗೂ ನಮ್ಮ ಆರಾಧನೆ ತನು - ತಂಬಿಲವೇ . ಇಷ್ಟಕ್ಕೆ ನಮ್ಮ ಶ್ರದ್ಧೆ . ನಮ್ಮ ಭರವಸೆ ಮತ್ತು ವಿಶ್ವಾಸಗಳ ಮೂರ್ತ ಸ್ವರೂಪವಾದ ನಂಬಿಕೆಯೇ ನಾಗ ಉಪಾಸನೆಯ ಮೂಲ . ನಾಗ ಸಂತಾನ , ಸಂಪತ್ತು , ಕೃಷಿಸಮೃದ್ಧಿ ಅನುಗ್ರಹಿಸುವ ದೇದರು . ಹಾಗೆಯೇ ಚರ್ಮವ್ಯಾಧಿಗಳನ್ನು ನಿವಾರಿಸುವ ದೈವ .

ಬನ ಪುನಾರಚಿಸೋಣ : ನಾಗ ಬನಗಳು ನಾಶವಾಗುತ್ತಿವೆ . ಇದಕ್ಕೆ ಕಾರಣಗಳು ಹಲವು . ಆದರೆ ನಾಗಬನಗಳ ಪುನಾರಚನೆ ಈ ಕಾಲಘಟ್ಟದ ಅನಿವಾರ್ಯತೆ . ನಾಗನ ವಾಸಸ್ಥಾನವನ್ನು ಪುನಾರಚಿಸುವುದರಿಂದ ನಾಗ ಮಾತ್ರ ತೃಪ್ತಿಪಡುವುದಲ್ಲ . ಆ ಮೂಲಕ ಪರಿಸರ ನಾಶವಾಗದೆ ವೃದ್ಧಿಯಾಗುತ್ತದೆ . ಮನುಕುಲಕ್ಕೆ , ಪಕ್ಷಿ ಸಂಕುಲಕ್ಕೆ ಶ್ರೇಯಸ್ಸಾಗುತ್ತದೆ . ಸ್ವಚ್ಛಗಾಳಿ ಲಭಿಸುತ್ತದೆ , ಅಂತರ್ಜಲ ಹೆಚ್ಚುತ್ತದೆ . ಅದಕ್ಕಾಗಿ ನಾಗರ ಪಂಚಮಿಯಂದು ಮೂಲದ ನಾಗನ ದರ್ಶನಕ್ಕೆ ಹಾಲು ,ಸೀಯಾಳ , ಹಣ್ಣುಕಾಯಿಗಳೊಂದಿಗೆ ಹೋಗುವಾಗ ಒಂದು ಗಿಡ ಕೊಂಡೊಯ್ಯುವ , ಆ ಮೂಲಕ ನಾಶವಾಗದಿದ್ದರೆ ಬನ ವೃದ್ಧಿಯಾಗಲಿ , ನಾಶಗೊಂಡು ನಾಗವೇದಿಕೆ , ನಾಗಗುಡಿ , ನಾಗಮಂದಿರವಾಗಿದ್ದರೆ ಅದರ ಸುತ್ತಲೂ ಗಿಡ ನೆಡುವ ಕಾರ್ಯ ಮಾಡೋಣ ಬನದ ( ವನ) ಪುನಾರಚನೆಗೆ ಗಿಡ ನೆಡುವ .ಇದು ಖಂಡಿತ ನಾಗ ಪ್ರೀತ್ಯರ್ಥವಾಗಿಯೇ ಆಗಿರುತ್ತದೆ . ಇದಕ್ಕೆ ಜ್ಯೋತಿಷ್ಯದ ನಿರ್ದೇಶನ ಬೇಕಾ ಇದು ಪ್ರತ್ಯಕ್ಷ ಸತ್ಯತಾನೆ . ಲೇಖನ : ಕೆ.ಎಲ್.ಕುಂಡಂತಾಯ

ಸಂತ ಆಗ್ನೇಸ್ ಕಾಲೇಜಿನಲ್ಲಿ ಕೊಂಕಣಿ ಮಾನ್ಯತಾ ದಿನ ಆಚರಣೆ

Posted On: 20-08-2023 05:21PM

ಮಂಗಳೂರು : ಸಂತ ಆಗ್ನೇಸ್ ಕಾಲೇಜಿನಲ್ಲಿ 'ಕೊಂಕಣಿ ಮಾನ್ಯತಾ ದಿನ' ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಕ್ಣೊಂ ಕೊಂಕಣಿ ಪತ್ರದ ಸಂಪಾದಕರಾದ ವಂ. ಫಾ. ರೂಪೇಶ್ ಮಾಡ್ತಾ, ಕೊಂಕಣಿ ಭಾಷೆಯನ್ನು ಪ್ರೀತಿಸಿ ಮನೆ ಮನಗಳಲ್ಲಿ ಮಾತನಾಡಲು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರೋಯ್ ಕ್ಯಾಸ್ತಲಿನೋ ಕೊಂಕಣಿ ಭಾಷೆ ವಿವಿಧ ಹಂತಗಳಲ್ಲಿ ನಡೆದು ಬಂದ ರೀತಿಯನ್ನು ವಿವರಿಸಿ, ಮಾತೃ ಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಂಕಣಿ ಸಂಘದ “ಅಂಕರ್” ವಾರ್ಷಿಕ ಅಂಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಭಗಿನಿ ಡಾ. ವೆನಿಸ್ಸಾ ಎ.ಸಿ ಮಾತನಾಡಿ, ಕೊಂಕಣಿ ಸಂಘದಿಂದ ಆಯೋಜಿಸಿದ ವಿವಿಧ ಕಾರ್ಯಗಳಿಗೆ ಅಭಿನಂದಿಸಿದರು ಹಾಗೂ ಕೊಂಕಣಿ ಭಾಷೆಯ ಮೇಲೆ ಇಟ್ಟ ಆಭಿಮಾನಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೊಂಕಣಿ ಸಂಸ್ಕೃತಿಯ ಗುಮ್ಟಾಂ ಗಾಯನ ಕೊಂಕಣಿ ಸಂಘದ ಸದಸ್ಯರಿಂದ ನಡೆಯಿತು. ಸಂಯೋಜಕರಾದ ಎಲ್ಸನ್ ಹಿರ್ಗಾನ ಸ್ವಾಗತಿಸಿ, ಕಾರ್ಯದರ್ಶಿ ಗ್ಲೆನಿಟಾ ಡೇಸಾ ವಂದಿಸಿದರು, ಭಗಿನಿ ವೆಲೆಂಟಿನಾ ಕಾರ್ಯಕ್ರಮ ನಿರೂಪಿಸಿದರು.

ಸಹಾಯಕ್ಕೆ ಜಾತಿ, ಧರ್ಮವಿಲ್ಲ : ಐವನ್ ಡಿಸೋಜ

Posted On: 20-08-2023 05:16PM

ಮುದರಂಗಡಿ‌ : ಜನರ ಕಷ್ಟ ಅರಿತು ಅದನ್ನು ಪರಿಹರಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಧರ್ಮ, ಜಾತಿ ಮುಖ್ಯವಲ್ಲ ಸಹಾಯದ ನಿರೀಕ್ಷೆಯಲ್ಲಿರುವ ಜನರಿಗೆ ಉಪಕಾರ ಮಾಡಿದಾಗ ಮಾತ್ರ ದೇವರು ಮೆಚ್ಚುವನು ಎಂದು ಮಾಜಿ ವಿಧಾನಪರಿಷತ್ ಸದಸ್ಯರು, ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿಸೋಜ ಹೇಳಿದರು. ಅವರು‌ ತಮ್ಮ ಹೆತ್ತವರಾದ ದಿವಂಗತ ಸಿಂಪ್ರಿಯನ್ ಮತ್ತು ಲಿಲ್ಲಿ ಡಿಸೋಜ ದಂಪತಿಗಳ ಸ್ಮರಣಾರ್ಥವಾಗಿ ಸಹೋದರ ಮೈಕಲ್ ‌ರಮೇಶ್ ಡಿಸೋಜರಿಂದ ಸುಮಾರು‌ 6 ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಮನೆಯನ್ನು ಭಾನುವಾರ ಬೆಳಿಗ್ಗೆ ವಿದ್ಯಾನಗರ ಅಂಗನವಾಡಿ ರಸ್ತೆಯ ಸುರೇಖ ಆಚಾರ್ಯ ಕುಟುಂಬಕ್ಕೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಸತಿ ಮಾನವನ ಜೀವನದ ಮುಖ್ಯ ವಿಷಯ. ಸ್ವಂತ ಮನೆ ಹಲವರ ಕನಸು. ಬೇರೆಯವರ ಕನಸು ನನಸು ಮಾಡುವವರು ವಿರಳ. ಮೈಕಲ್ ಡಿಸೋಜ ಈ ಕಾರ್ಯ ಮಾಡಿದ್ದಾರೆ. ಆದರೆ ತಂದೆ ತಾಯಿ ಹಾಕಿದ ಸಮಾಜಮುಖಿ ಚಿಂತನೆಯನ್ನು ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಸಂತ ಫ್ರಾನ್ಸಿಸ್ ಕ್ಸೇವಿಯರ್ ಚಚ್೯ ಧರ್ಮಗುರು ರೆ|ಫಾ| ಫೆಡ್ರಿಕ್ ಡಿಸೋಜ ಹೇಳಿದರು. ಅವರು‌ ಮನೆ ಹಸ್ತಾಂತರದ ಬಳಿಕ‌ ಆಶೀರ್ವಚನ ನೀಡಿದರು.

ಧನಸಹಾಯ :ಕಂಪೋರ್ಶನೇಟ್ ಫ್ರೆಂಡ್ಸ್ ಅಸೋಸಿಯೇಷನ್ ಮುದರಂಗಡಿ ವತಿಯಿಂದ ಕ್ಯಾನ್ಸರ್ ಪೀಡಿತ ವ್ಯಕ್ತಿಯೋರ್ವರಿಗೆ 25 ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು. ಮೈಕಲ್ ರಮೇಶ್ ಡಿಸೋಜ ವತಿಯಿಂದ ಸುರೇಖ ಆಚಾರ್ಯರ ಪುತ್ರಿಗೆ ವಿದ್ಯಾರ್ಥಿವೇತನ ‌ನೀಡಲಾಯಿತು.

ಈ ಸಂದರ್ಭ ಸಮಾಜ ಸೇವಕ ಸಾಯಿನಾಥ್ ಶೆಟ್ಟಿ ಅಬ್ಬೆಟ್ಟು ಗುತ್ತು ಕುತ್ಯಾರು, ಸರಕಾರಿ ಪದವಿಪೂರ್ವ ಕಾಲೇಜು ಮುಚ್ಚೂರಿನ ಪ್ರಾಂಶುಪಾಲ ರಘುನಾಥ್ ನಾಯಕ್, ಶಿರ್ವ ರೋಟರಿ ಮಾಜಿ ಅಧ್ಯಕ್ಷ ವಿಠ್ಠಲ್ ನಾಯಕ್, ಉಡುಪಿ ತಾಲೂಕು ಪಂಚಾಯತ್ ಮಾಜಿ‌ ಅಧ್ಯಕ್ಷೆ ಅನಿತಾ ಡಿಸೋಜ, ಎಲ್ಲೂರು ಗ್ರಾಮ ಪಂಚಾಯತ್ ಮಾಜಿ‌ ಅಧ್ಯಕ್ಷ ಯಶವಂತ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶೇಖಬ್ಬ, ಮೈಕಲ್ ರಮೇಶ್ ಡಿಸೋಜ, ಗ್ಲಾಡಿಸ್ ಐಡಾ ಡಿಸೋಜ ಉಪಸ್ಥಿತರಿದ್ದರು. ಮೈಕಲ್ ರಮೇಶ್ ಡಿಸೋಜ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ಶೆಣೈ ಪಿಲಾರು ನಿರೂಪಿಸಿ, ವಂದಿಸಿದರು.

ಎಸ್ ಕೆ ಪಿ ಎ ಕಾಪು ವಲಯ : ವಿಶ್ವ ಛಾಯಾಗ್ರಹಣ ದಿನಾಚರಣೆ ; ಕುಟುಂಬ ಸಮ್ಮಿಲನ ಕಾರ್ಯಕ್ರಮ

Posted On: 20-08-2023 08:52AM

ಕಾಪು : ಸೌತ್ ಕೆನರಾ ಫೋಟೋಗ್ರಾಫಸ್೯ ಆಸೋಸಿಯೇಶನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ಕಾಪು ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಶನಿವಾರ ಕಾಪು ಹೋಟೆಲ್ K1 ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಕೆ ಪಿ ಎ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಆನಂದ ಎನ್ ಬಂಟ್ವಾಳ ಉದ್ಘಾಟಿಸಿದರು. ಈ ಸಂದರ್ಭ ‌ಮಾತನಾಡಿದ ಅವರು ಕಾಪು ವಲಯದ ಫೋಟೋಗ್ರಾಫಸ್೯ಗಳ ಸಂಘಟಿತ ಪ್ರಯತ್ನದಿಂದ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರುತ್ತಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್ ಕೆ ಪಿ ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಕಟಪಾಡಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಕಟಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ರಾವ್, ಫೋಟೋ ಪ್ಯಾಲೇಸ್ ಉಡುಪಿ ಯ ರವಿರಾಜ್ ಕಿದಿಯೂರು, ಎಸ್ ಕೆ ಪಿ ಎ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಕಾರ್ಯದರ್ಶಿ ನಿತಿನ್ ಬೆಳುವಾಯಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮ್ಮಾನ : ಹಿರಿಯ ಛಾಯಾಚಿತ್ರಕಾರರಾದ ಹರೀಶ್ ದೇವಾಡಿಗ ಹೆಜಮಾಡಿ, ತುಕಾರಾಂ ಪಡುಬಿದ್ರಿ, ರವಿಕುಮಾರ್ ಕಟಪಾಡಿ ಇವರನ್ನು ಸಮ್ಮಾನಿಸಲಾಯಿತು.

ಎಸ್ ಕೆ ಪಿ ಎ ಕಾಪು ವಲಯ ಅಧ್ಯಕ್ಷ ವಿನೋದ್ ಕಾಂಚನ್ ‌ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ ಕೆ ಪಿ ಎ ಕಾಪು ವಲಯ ಗೌರವಾಧ್ಯಕ್ಷ ರವಿಕುಮಾರ್ ಕಟಪಾಡಿ, ಉಪಾಧ್ಯಕ್ಷರುಗಳಾದ ಸಚಿನ್ ಉಚ್ಚಿಲ, ರವಿರಾಜ್ ಶೆಟ್ಟಿ ಬೆಳ್ಮಣ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಶಂಕರಪುರ, ಕೋಶಾಧಿಕಾರಿ ರಾಘವೇಂದ್ರ ಭಟ್, ಕಾರ್ಯಕ್ರಮ ಸಂಯೋಜಕ‌ ಸತೀಶ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.

ಕುಟುಂಬ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ವಿವಿಧ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಭಾರಿ ಪ್ರಶಂಸೆಗೆ ಪಾತ್ರವಾದ ರೆಟ್ರೋ ಮಾದರಿಯ ರಿತ್ಯಾ ಬೊಟಾನ್ ಕೊಂಕಣಿ ಆಲ್ಬಂ ಹಾಡು

Posted On: 19-08-2023 10:29PM

ಕಾಪು : ಡಿ.ಎಲ್ ಪ್ರೊಡಕ್ಷನ್ ನಿರ್ಮಾಣದ ರಿತ್ಯಾ ಬೊಟಾನ್ ಎಂಬ ಕೊಂಕಣಿ ಆಲ್ಬಂ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡು ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಅವಿತ್ ಲೋಬೋ ನಿರ್ಮಾಣದಲ್ಲಿ ಮೂಡಿ ಬಂದಂತಹ ಈ ಆಲ್ಬಂ ಹಾಡು ಡಿಜೆ ಮರ್ವಿನ್ ಇವರು ನಿರ್ದೇಶಿಸಿದ್ದಾರೆ.

ಮಂಗಳೂರು ಸುತ್ತಮುತ್ತಲು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು ರೆಟ್ರೋ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಅತ್ಯುತ್ತಮವಾಗಿ ಹಾಡು ಮೂಡಿಬಂದಿದ್ದು ಸಂಗೀತವನ್ನು ರೋಶನ್ ಡಿ.ಸೋಜಾ ಅಂಜೆಲೋರ್ ನೀಡಿದ್ದು, ಸಾಹಿತ್ಯ ವಿಲ್ಸನ್ ಕಟೀಲ್ ಇವರ ಕೈಯಲ್ಲಿ ಮೂಡಿದ್ದು ಹಾಡನ್ನು ಅಶ್ವಿನ್ ಡಿಕೊಸ್ಟಾ ಮತ್ತು ಜೋಷನ್ ಸ್ವೀಡಾ ಡಿ ಸೋಜಾ ಇವರು ಹಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಲೊಯ್ ವೆಲಂಟೈನ್ ನಿರ್ವಹಿಸಿದ್ದು ಅತ್ಯಂತ ಸುಂದರವಾಗಿ ಚಿತ್ರೀಕರಣವನ್ನ ಪ್ರಜ್ವಲ್ ಸುವರ್ಣ ಇವರು ಮಾಡಿದ್ದು ಜೊತೆಗೆ ಸಂಕಲನ, ಕಲರಿಂಗ್, ವಿ.ಎಫ್.ಎಕ್ಸ್ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ.

ಹಾಡಿನ ಕಥೆಯನ್ನ ನೊರ್‌ಬರ್ಟ್ ಜಾನ್ ಇವರು ರಚಿಸಿದ್ದು, ಚಿತ್ರಕಥೆಯನ್ನು ಪ್ರಜ್ವಲ್ ಸುವರ್ಣ ಮತ್ತು ಡಿ.ಜೆ ಮರ್ವಿನ್ ರಚಿಸಿದ್ದಾರೆ. ಪೋಸ್ಟರ್ ಡಿಸೈನ್ ಸುಹೈಲ್ ಇವರು ನಿರ್ವಹಿಸಿದ್ದಾರೆ. ಹಾಗೆಯೇ ಈ ಕೊಂಕಣಿ ಹಾಡಿನಲ್ಲಿ ಎಲ್ಟನ್ ಮಸ್ಕರೇನಸ್, ವೆನ್ಸಿಟಾ ಡಾಯಸ್, ಡೊಲ್ಲ ಮಂಗಳೂರು, ಸುಜಾತಾ ಶಕ್ತಿನಗರ, ರೋಶನ್ ಫೆರ್ನಾಂಡಿಸ್ ಇವರು ಅಧ್ಭುತವಾಗಿ ನಟಿಸಿದ್ದಾರೆ. ಬಹಳಷ್ಟು ಜನರ ಸಹಕಾರದೊಂದಿಗೆ ಕೊಂಕಣಿ ಹಾಡು ಉತ್ತಮವಾಗಿ ಮೂಡಿಬಂದಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಹೇಮಚಂದ್ರ ಆಯ್ಕೆ

Posted On: 19-08-2023 10:19PM

ಪಡುಬಿದ್ರಿ: ಇಲ್ಲಿನ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಶಿಕಲಾ ಹಾಗೂ ಉಪಾಧ್ಯಕ್ಷರಾಗಿ ಹೇಮಚಂದ್ರ ಆಯ್ಕೆಯಾಗಿದ್ದಾರೆ.

ಶನಿವಾರ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. 34 ಸದಸ್ಯ ಬಲದ ಪಡುಬಿದ್ರಿ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಶಿಕಲಾ ಹಾಗೂ ಕಾಂಗ್ರೆಸ್‌ ಬೆಂಬಲಿತೆ ಸುನಂದ ಸಾಲ್ಯಾನ್ ಅವರು ಸ್ಪರ್ಧಿಸಿದ್ದರು. ಶಶಿಕಲಾ ಅವರು 23 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸುನಂದ ಸಾಲ್ಯಾನ್ 11 ಮತಗಳು ಪಡೆದಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಹೇಮಚಂದ್ರ ಹಾಗೂ ಕಾಂಗ್ರೆಸ್ ಬೆಂಬಲಿತ ಖಲಂದರ್ ಶಫಿ ಸ್ಪರ್ಧಿಸಿದ್ದರು. ಹೇಮಚಂದ್ರ 20 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಖಲಂದರ್ ಶಫಿ 14 ಮತಗಳನ್ನು ಪಡೆದರು.

ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ವರುಣ್ ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಕೆರಿಮಠ್ ಸಹಕರಿಸಿದ್ದರು.

ಇದೀಗ ಹೊಸ ಆಡಳಿತದೊಂದಿಗೆ ಕಾಪುವಿನ ಹೋಟೆಲ್ ಮಯೂರ

Posted On: 19-08-2023 07:42PM

ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಲಾಡ್ಜಿಂಗ್ ಜೊತೆಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಇನ್ನಿತರ ಖಾದ್ಯಗಳನ್ನು ಉಣ ಬಡಿಸುತ್ತಿರುವ ಕಾಪುವಿನ ಹೋಟೆಲ್ ಮಯೂರ ಇಂದಿನಿಂದ ಹೊಸ ಆಡಳಿತದೊಂದಿಗೆ ಮುನ್ನಡೆಯಲಿದೆ. ಸಂಜಿತ್ ಶೆಟ್ಟಿ ಕಲ್ಯಾಲು ಇವರು ಪಾಲುದಾರರಾಗಿ ಮತ್ತು ನಿರ್ವಾಹಕರಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಮತ್ತು ರೂಮ್ಸ್ ಜೊತೆಗೆ ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳಿಗೆ ಸಭಾಂಗಣ ಹಾಗೂ ಕ್ಯಾ ಟರಿಂಗ್ ವ್ಯವಸ್ಥೆಯನ್ನು ಕೂಡಾ ಒದಗಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 87924 48087

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ - ಶಿರ್ವ ಶಾಖೆ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

Posted On: 19-08-2023 06:17PM

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಂದು ಆಕ್ಸಿಲಿಯಂ ನಿವಾಸದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭ ಶಿರ್ವ ಆರೋಗ್ಯ ಮಾತಾ ಚಚ್೯ ಪ್ರಧಾನ ಧರ್ಮ ಗುರುಗಳು ವಂ| ಫಾ| ಲೆಸ್ಲಿ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಅರನ್ನಾ, ಉದ್ಯಮಿ ಕೆ ಶ್ರೀಧರ ಕಾಮತ್, ಕಾನ್ವೆಂಟಿನ ಮೇಲ್ವಿಚಾರಕಿ ಲೀಮಾ, ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.