Updated News From Kaup
ಅಕ್ಟೋಬರ್ 15 - 24 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

Posted On: 13-10-2023 06:30PM
ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅ.15ರಂದು ಭಾನುವಾರ ಬೆಳಿಗ್ಗೆ ಗಂಟೆ 09:09ಕ್ಕೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ನವಶಕ್ತಿ ವೈಭವ ವೇಷ ಭೂಷಣ/ ನೃತ್ಯರೂಪಕ ಸ್ಪರ್ಧೆಯೊಂದಿಗೆ ಮೊದಲ್ಗೊಂಡು ಅ. 24 ರವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು ಜರಗಲಿದೆ. ಇದರೊಂದಿಗೆ ಅ. 17ರಂದು ಚಂಡಿಕಾಯಾಗ ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಸಂಪನ್ನಗೊಳ್ಳಲಿದೆ.
ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಅ.15ರಿಂದ ಮೊದಲ್ಗೊಂಡು ಅ. 24ರವರೆಗೆ ಪ್ರತೀ ದಿನ ಮಂಗಳ ವಾದ್ಯ, ಉಷಾಃ ಕಾಲ ಕಲ್ಪೋಕ್ತ ಪೂಜೆ, ಗಣಯಾಗ, ಶಕ್ತಿಯಾಗ, ಲಲಿತಾರ್ಚನೆ, ಸುವಾಸಿನಿ ಪೂಜೆ, ರಾತ್ರಿ ಪೂಜೆ ಮತ್ತು ಏಕಾಂತ ಸೇವೆ ನಡೆಯಲಿದೆ. ಹಾಗೂ ಭಜನೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಅ. 15ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಅ. 16ರಂದು ಬೆಳಗ್ಗೆ 9.9ಕ್ಕೆ ಜೀರ್ಣೋದ್ಧಾರ ಸಮಿತಿಯ ಗ್ರಾಮ ಸಮಿತಿಯ ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಸಾಮೂಹಿಕ ನವದುರ್ಗಾ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಅ. 17ರಂದು ಕದಿರು ಕಟ್ಟುವುದು, ಮಧ್ಯಾಹ್ನ 11.30ಕ್ಕೆ ಚಂಡಿಕಾಯಾಗ, ಪೂರ್ಣಾಹುತಿ, ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಶ್ರೀ ದೇವಿ ದರ್ಶನ, ಕವಾಟ ಪೂರಣ, ಮಧ್ಯಾಹ್ನ ದೇವಿ ದರ್ಶನ ನಡೆಯಲಿದೆ. ಅ. 24 ರಂದು ಸಮಷ್ಠಿ ಪೂಜೆ, ಮಂಗಳ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅ. 15ರಂದು ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ ಗಂಟೆ 9.9 ರಿಂದ ಆಹ್ವಾನಿತ ತಂಡಗಳಿಗೆ ನವಶಕ್ತಿ ವೈಭವ ನೃತ್ಯ ಸ್ಪರ್ಧೆ, ಅ. 19ರಂದು ಸಂಜೆ 7 ಗಂಟೆಯಿಂದ ಆನಿದ ಮನದಾನಿ ತುಳು ನಾಟಕ, ಅ. 21ರಂದು ಸಂಜೆ 7 ಗಂಟೆಗೆ ನೃತ್ಯ ಕಾರ್ಯಕ್ರಮ, ಅ. 22ರಂದು ಸಂಜೆ 7 ಗಂಟೆಯಿಂದ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ತುಳುನಾಡ ಸಿರಿ ತುಳು ಯಕ್ಷಗಾನ ನಡೆಯಲಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಮೂಡುಬೆಳ್ಳೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

Posted On: 13-10-2023 05:09PM
ಶಿರ್ವ : ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪಾಡುಬೆಳ್ಳೆ ಪಾಪನಾಶಿನಿ ನದಿಯ ಗುಂಡಿಯಲ್ಲಿ ಇಂದು ಅ.13ರ ಶುಕ್ರವಾರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಅವರ ಪುತ್ರಿ ವಿನಿತಾ (22) ಮೃತ ಯುವತಿಯಾಗಿದ್ದಾಳೆ. ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಸೇತುವೆಯ ಸಮೀಪದ ನದಿ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಕೊಳೆತ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದು, ಮರಣೋತ್ತರ ಶವ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಅ. 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಹೋದವರು ಹಿಂತಿರುಗದ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿ.ಕಾಂ. ಪದವೀಧರೆಯಾಗಿದ್ದ ವಿನಿತಾ ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು. ನಾಪತ್ತೆಯಾದ ಬಳಿಕ ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರ, ಸ್ನೇಹಿತರ ಮನೆ, ಅಸುಪಾಸಿನಲ್ಲಿ ಹುಡುಕಾಡಿದ್ದು ಎಲ್ಲೂ ಪತ್ತೆಯಾಗಿರಲಿಲ್ಲ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 16 : ಕಾಪು ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಜನತಾ ದರ್ಶನ

Posted On: 13-10-2023 07:30AM
ಕಾಪು : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 16 ರಂದು ಬೆಳಗ್ಗೆ 10 ಗಂಟೆಗೆ ಕಾಪು ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾಪು ತಾಲೂಕು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಹಾಗೂ ಗ್ರಾಮಸ್ಥರು ತಮ್ಮ ಅಹವಾಲು ಅಥವಾ ಅರ್ಜಿಗಳನ್ನು ಕಾರ್ಯಕ್ರಮದಲ್ಲಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟಕಲ್ಲು : ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

Posted On: 12-10-2023 05:58PM
ಬಂಟಕಲ್ಲು : ಶ್ರೀ ಕ್ಷೇತ್ರ ಬಂಟಕಲ್ಲು ಶ್ರೀದೇವಿಯ ಸನ್ನಿಧಿಯಲ್ಲಿ ಬಂಟಕಲ್ಲಿನಲ್ಲಿ ನಡೆಯಲಿರುವ ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆಗೊಳಿಸುವುದು ಸಂತಸ ತಂದಿದೆ. ಸಮ್ಮೇಳನವು ನಿರ್ವಿಘ್ನವಾಗಿ ಜರುಗಲಿ ಎಂದು ಶ್ರೀದುರ್ಗಾಪರಮೇಶ್ವರೀ ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಲೆ ನುಡಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನವೆಂಬರ್ ೪, ಶನಿವಾರ ಜರುಗಲಿರುವ "ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ"ದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮೂಡುಬೆಳ್ಳೆಯಲ್ಲಿ ಜರುಗಿದ ಎರಡನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಮಾತನಾಡಿ ಕಾಪು ತಾಲೂಕಿನಲ್ಲಿ ನಿರಂತರವಾಗಿ ಐದನೆಯ ಸಮ್ಮೇಳನ ಜರುಗುತ್ತಿದ್ದು, ಪ್ರತೀಯೊಂದು ಸಮ್ಮೇಳನವು ವಿಶಿಷ್ಟ "ಪರಿಕಲ್ಪನೆ"ಯೊಂದಿಗೆ ಅರ್ಥಪೂರ್ಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು. ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಸಮ್ಮೇಳನದ ಆಶಯ ಹಾಗೂ ಹೊಸ ತಾಲೂಕು ಕಾಪುವಿನಲ್ಲಿ ಪ್ರತೀ ವರ್ಷವೂ ಮಾದರಿಯಾಗಿ ಸಮ್ಮೇಳನ ನಡೆಯುತ್ತಿರುವುದು ತಾಲೂಕು ಘಟಕದ ಸಂಘಟನಾ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್, ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಟಪಾಡಿಯಲ್ಲಿ ಜರುಗಿದ ನಾಲ್ಕನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಖ್ಯಾತ ಕವಯತ್ರಿ, ಲೇಖಕಿ ಕ್ಯಾಥರಿನ್ ರೊಡ್ರಿಗಸ್, ಜಿಲ್ಲಾ ಸಮಿತಿಯ ಗೌರವ ಕೋಶಾಧ್ಯಕ್ಷರಾದ ಮನೋಹರ ಪಿ, ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿನಾಯಕ ಭಟ್, ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ತಾ.ಪಂ.ಮಾಜಿ ಸದಸ್ಯೆ ಗೀತಾ ವಾಗ್ಲೆ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್, ನಿವೃತ್ತ ಅಂಚೆಪಾಲಕ ಬಿ.ಭಾಸ್ಕರ ಶೆಟ್ಟಿ, ಕೃಷ್ಣಕುಮಾರ್ ರಾವ್ ಮಟ್ಟು, ದೇವದಾಸ್ ಪಾಟ್ಕರ್ ಮುದರಂಗಡಿ, ಡಿ.ಆರ್.ನೊರೋನ್ಹಾ ಕುರ್ಕಾಲು, ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಸಾಪ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಕಾಪು ಘಟಕದ ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.
ಉಚ್ಚಿಲ ದಸರಾ ವೈಭವ : ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆ -2023 - ಪೋಸ್ಟರ್ ಬಿಡುಗಡೆ

Posted On: 12-10-2023 05:01PM
ಉಚ್ಚಿಲ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಕಾಪು ವಲಯದ ಆಶ್ರಯದಲ್ಲಿ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ ಸಹಯೋಗದೊಂದಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಮಹೋತ್ಸವದ ಪ್ರಯುಕ್ತ ಉಚ್ಚಿಲ ದಸರಾ ವೈಭವ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆ -2023 ಪೋಸ್ಟರನ್ನು ಗುರುವಾರ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕ್ಷೇತ್ರ ಆಡಳಿತ ಅಧ್ಯಕ್ಷ ವಾಸುದೇವ ಸಾಲಿಯನ್, ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಸತೀಶ್ ಪಡುಕೆರೆ, ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ, ಅರುಲ್ ಡಿಸೋಜಾ, ಅನಂತ್ ರಾಜ್ ಭಟ್, ಕೃಷ್ಣರಾವ್, ಸುಬ್ರಮಣ್ಯ ಐತಲ್, ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ವೀರೇಂದ್ರ ಶಿರ್ವ ಸ್ವಾಗತಿಸಿದರು. ರಾಘವೇಂದ್ರ ಭಟ್ ವಂದಿಸಿದರು.
ಶಿರ್ವ : ಮೂಡುಬೆಳ್ಳೆ ಯುವತಿ ನಾಪತ್ತೆ

Posted On: 12-10-2023 02:21PM
ಶಿರ್ವ: ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ವಿನಿತಾ (22) ಅ. 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಅಕ್ಕನಲ್ಲಿ ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿ ತನ್ನ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಬಿ.ಕಾಂ. ಪದವೀಧರೆಯಾಗಿದ್ದ ಈಕೆ ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜ್ ಬಳಿಯ ಎಲೆಕ್ಟ್ರಿಕಲ್ ಬೈಕ್ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು.
ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು,ಆಕೆಯ ಸ್ನೇಹಿತರಲ್ಲಿ,ಸಂಬಂಧಿಕರ ಮನೆಯಲ್ಲಿ, ಆಸುಪಾಸಿನಲ್ಲಿ ಹುಡುಕಾಡಿದ್ದು, ಈ ತನಕ ಪತ್ತೆಯಾಗಿರುವುದಿಲ್ಲ ಎಂದು ಎಂದು ಸಹೋದರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 13-14 : ದೇಸಿ ಕ್ರ್ಯೂ ಉದ್ಯೋಗ ಮೇಳ

Posted On: 11-10-2023 07:19PM
ಕಾಪು : ಇಲ್ಲಿನ ಉಳಿಯಾರಗೋಳಿ ದಂಡತೀರ್ಥ ಶಾಲೆಯ ಬಳಿಯಿರುವ ದೇಸಿ ಕ್ರ್ಯೂ ಸಂಸ್ಥೆಯಿಂದ ಅಕ್ಟೋಬರ್ 13 ಮತ್ತು 14 ರಂದು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ನಡೆಯಲಿದೆ.
ಯಾವುದೇ ಪದವಿ, ಡಿಪ್ಲೊಮಾ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6361171305
ಕಾಪು : ನೈಋತ್ಯ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ವಿಧಾನಪರಿಷತ್ ಚುನಾವಣೆಯ ಪೂರ್ವ ಸಿದ್ಧತಾ ಸಭೆ

Posted On: 11-10-2023 07:08PM
ಕಾಪು : ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ವಿಧಾನಪರಿಷತ್ ಚುನಾವಣೆಯ ಕುರಿತು ಬುಧವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪೂರ್ವ ಸಿದ್ಧತಾ ಸಭೆ ಜರಗಿತು.
ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ನೋಂದಾವಣೆ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಆರಂಭಿಸಿ ಗರಿಷ್ಠ ಮತದಾರ ಪಟ್ಟಿಯನ್ನು ತಯಾರಿಸುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ನಿಕಟಪೂರ್ವ ಶಾಸಕರಾದ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್ ಹಾಗೂ ಮುರಳಿಧರ್ ಪೈ, ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಅಕ್ಟೋಬರ್ 24 : ಶಿರ್ವ ಸಾರ್ವಜನಿಕ ಶಾರದೋತ್ಸವ - ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 11-10-2023 06:56PM
ಶಿರ್ವ : ಸಾರ್ವಜನಿಕ ಶಾರದೋತ್ಸವ ಸೇವಾ ಸಮಿತಿ, ಶಿರ್ವ ಇದರ ವತಿಯಿಂದ ಅಕ್ಟೋಬರ್ 24 ರಂದು ಜರುಗಲಿರುವ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಕುತ್ಯಾರು ಕೇಂಜ ಶ್ರೀದರ್ ತಂತ್ರಿ ಮತ್ತು ಭಾರ್ಗವ ತಂತ್ರಿಯವರ ದಿವ್ಯ ಹಸ್ತ ದಿಂದ ಬಿಡುಗಡೆ ಮಾಡಲಾಯಿತು.
ಈ ಸಂದರ್ಭ ಸಮಿತಿಯ ಅದ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾಪು : ಬಸ್ ನಿಲ್ದಾಣ ಬಳಿ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಆಸೀಫ್ ಆಪತ್ಭಾಂದವ ಮತ್ತು ತಂಡ

Posted On: 11-10-2023 06:45PM
ಕಾಪು : ಕಳೆದ ಎರಡು ದಿನದಿಂದ ಹೊಸ ಮಾರಿಗುಡಿ ಬಳಿಯ ಬಸ್ ನಿಲ್ದಾಣದ ಹತ್ತಿರ ಅನಾಥವಾಗಿ ಬಿದ್ದುಕೊಂಡಿದ್ದ ವ್ಯಕ್ತಿಯೋರ್ವರನ್ನು ಮೈಮುನಾ ಫೌಂಡೇಶನ್ (ರಿ.) ಇದರ ಆಸೀಫ್ ಆಪತ್ಭಾಂದವ ಮತ್ತು ತಂಡ ಅವರನ್ನು ಸ್ನಾನ ಮಾಡಿಸಿ, ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಿದರು.
ವ್ಯಕ್ತಿಯು ಶಂಕರಪುರ ನಿವಾಸಿ ಶಿವಪ್ಪ ಕುಲಾಲ್ ಎಂದು ಹೇಳಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಯೋಗೀಶ್ ಕೈಪುಂಜಾಲು ಉಪಸ್ಥಿತರಿದ್ದರು.