Updated News From Kaup
ಅಕ್ಟೋಬರ್ 15 : ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ

Posted On: 11-10-2023 06:26PM
ಕಾಪು : ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಯುವ ಸೇನೆಯ ನೇತೃತ್ವದಲ್ಲಿ ಉಡುಪಿಯಲ್ಲಿ ಅಕ್ಟೋಬರ್ 15ರಂದು ಆಚರಿಸಲಿರುವ ಮಹಿಷಾ ದಸರಾ ಆಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ ಎಂದು ಸಮಿತಿಯ ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿಯವರು ಬುಧವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾವು ಯಾರ ಆಚರಣೆ ವಿರೋಧಿಸುತ್ತಿಲ್ಲ. ನಾವು ಧರ್ಮ ವಿರೋಧಿಗಳಲ್ಲ. ಯಾರ ಭಾವನೆಗಳಿಗೂ ಧಕ್ಕೆ ತರುವುದಿಲ್ಲ. ಸರಕಾರ ಆದೇಶ ನೀಡಿಲ್ಲ. ಆದರೂ ನಾವು ವಿಚಾರ ಸಂಕೀರ್ಣ ನಿಲ್ಲಿಸುವುದಿಲ್ಲ ಎಂದರು.
ಉಡುಪಿಯಲ್ಲಿ ಅಂಬೇಡ್ಕರ್ ಯುವ ಸೇನೆಯ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು, ಪ್ರಗತಿಪರರು, ಚಿಂತಕರು, ವಿಚಾರವಾದಿಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಆನಂದ್ ಬ್ರಹ್ಮಾವರ, ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಗೌರವಾಧ್ಯಕ್ಷ ಪಿ ಕೃಷ್ಣ ಬಂಗೇರ ಉಪಸ್ಥಿತರಿದ್ದರು.
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದಿಂದ ಕುತ್ಯಾರು ಆನೆಗುಂದಿ ಗೋಶಾಲೆಗೆ ಹಿಂಡಿ, ಹಸಿ ಹುಲ್ಲು ಸಮರ್ಪಣೆ

Posted On: 10-10-2023 04:32PM
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಆನೆಗುಂದಿ ಮಠದ ಗೋಶಾಲೆಗೆ ಹಿಂಡಿ ಮತ್ತು ಹಸಿ ಹುಲ್ಲನ್ನು ಸಮರ್ಪಿಸಲಾಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಆನೆಗುಂದಿ ಮಠದ ಶ್ರೀಗಳು ಬದುಕಿನಲ್ಲಿ ಗೋಮಾತೆಯ ಸೇವೆ ಪ್ರತಿ ವರ್ಷ ಮಾಡುವ ನಿಮ್ಮ ಸಂಸ್ಥೆಗೆ ಗೋಮಾತೆಯ ಆಶೀರ್ವಾದದೊಂದಿಗೆ 33 ಕೋಟಿ ದೇವತೆಗಳ ಆಶೀರ್ವಾದ ಇರಲಿ ಎಂದು ಆಶೀರ್ವದಿಸಿದರು.
ಗೋಮಾತೆಗಾಗಿ ದಾನ ನೀಡಿದ ಎಲ್ಲರಿಗೂ ಅಧ್ಯಕ್ಷರಾದ ಉಮೇಶ ಆಚಾರ್ಯರು ಪ್ರತಿ ವರ್ಷ ಗೋಮಾತೆಯ ಸೇವೆ ಮಾಡುವ ಭಾಗ್ಯ ನಮಗೆ ದೇವರು ಕರುಣಿಸಲಿ ಎಂದು ದಾನಿಗಳಿಗೆ ಕೃತಜ್ಞತೆ ಅರ್ಪಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ವಂದಿಸಿದರು.
ಉಡುಪಿ : ಯುವ ರೆಡ್‌ಕ್ರಾಸ್ ಘಟಕದ ಕಾಲೇಜು ವಿದ್ಯಾರ್ಥಿ ನಾಯಕರುಗಳಿಗೆ ತರಬೇತಿ

Posted On: 10-10-2023 04:21PM
ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಜಂಟಿ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಯುವರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿ ನಾಯಕರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವು ರೆಡ್‌ಕ್ರಾಸ್ ಭವನದಲ್ಲಿ ಸೋಮವಾರ ನಡೆಯಿತು.
ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್.ಬಿ ವಿಜಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರು ಉತ್ತಮ ಪ್ರಜೆಗಳಾಗಿ ಆರೋಗ್ಯಯುತ ಜೀವನ ನಡೆಸಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯೂತ್ ರೆಡ್‌ಕ್ರಾಸ್ ಘಟಕಗಳ ಮೂಲಕ ನಡೆಸಲಾಗುವ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಯುವಜನರು ಒಳ್ಳೆಯ ಕನಸನ್ನು ಕಂಡು ಅದನ್ನು ಈಡೇರಿಸುವ ಕಡೆ ಗಮನಹರಿಸಬೇಕು. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯ, ಧೋರಣೆ ಹಾಗೂ ಸೇವೆಗಳು ಅತ್ಯಮೂಲವಾಗಿದ್ದು, ಅಂಗಸಂಸ್ಥೆಯಾದ ಯೂತ್ ರೆಡ್‌ಕ್ರಾಸ್ ಸಂಸ್ಥೆಯ ವಿದ್ಯಾರ್ಥಿಗಳು ಇದನ್ನು ಪಾಲಿಸಬೇಕು ಎಂದರು.
ದೇಶದಲ್ಲಿ ಯುವ ಜನತೆಯ ಸಂಖ್ಯೆ ಹೆಚ್ಚಿದ್ದು, ಸ್ವಸ್ಥ್ಯ ರಾಷ್ಟ್ರ ನಿರ್ಮಾಣಕ್ಕೆ ಯುವ ಜನರ ಕೊಡುಗೆ ಅಪಾರ. ಸ್ವಯಂ ಶಿಸ್ತು, ಆತ್ಮವಿಶ್ವಾಸ, ಜೀವನದಲ್ಲಿ ಮಾನವೀಯತೆ ನೆಲೆಯಲ್ಲಿ ಸಮಾಜಕ್ಕೆ ಸೇವೆ ಮಾಡುವಂತಹ, ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವ, ಮಾದಕ ದ್ರವ್ಯಗಳನ್ನು ನಾಶಪಡಿಸಲು ಮುಂದಾಗುವುದು, ವಿರ್ಮಶಾತ್ಮಕ ಚಿಂತನೆ, ಗುರಿಯೆಡೆ ಮುನ್ನುಗ್ಗುವುದು, ತಮ್ಮ ಆರೋಗ್ಯದ ಜೊತೆಗೆ ಕುಟುಂಬದ ಆರೋಗ್ಯ ಕಾಪಾಡುವ ಧ್ಯೇಯವನ್ನು ಯುವ ರೆಡ್ ಕ್ರಾಸ್ನ ವಿದ್ಯಾರ್ಥಿಗಳು ದೃಢ ಸಂಕಲ್ಪದಿಂದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ಪಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸದಸ್ಯರುಗಳು, 74 ವಿವಿಧ ಕಾಲೇಜುಗಳ ಯೂತ್‌ರೆಡ್ ಕ್ರಾಸ್ ವಿದ್ಯಾರ್ಥಿ ನಾಯಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿ, ಗೌರವ ಖಜಾಂಜಿ ರಮಾದೇವಿ ವಂದಿಸಿದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಐ.ಆರ್.ಸಿ.ಎಸ್ ಪ್ರಥಮ ಚಿಕಿತ್ಸೆಯ ಟ್ರೈನರ್ ಡಾ. ಕೀರ್ತಿ ಪ್ರಥಮ ಚಿಕಿತ್ಸೆಯ ಬಗ್ಗೆ ಮತ್ತು ಕುಂದಾಪುರ ಐ.ಆರ್.ಸಿ.ಎಸ್ ಬ್ಲಡ್‌ಬ್ಯಾಂಕ್ನ ತಾಂತ್ರಿಕ ಮುಖ್ಯಸ್ಥ ವಿರೇಂದ್ರ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ನವೆಂಬರ್ 4 : ಕಾಪು ತಾಲ್ಲೂಕು ಘಟಕದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ - ಶ್ರೀಧರಮೂರ್ತಿ ಶಿರ್ವ ಸರ್ವಾಧ್ಯಕ್ಷತೆ

Posted On: 10-10-2023 07:12AM
ಬಂಟಕಲ್ಲು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲ್ಲೂಕು ಘಟಕದ 5ನೇ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 4, ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಲಿದೆ.
ಈ ಸಮ್ಮೇಳನಕ್ಕೆ ನಿವೃತ್ತ ಉಪನ್ಯಾಸಕರೂ, ಕನ್ನಡ ಸಂಘಟಕರೂ, ಹವ್ಯಾಸಿ ಯಕ್ಷಗಾನ - ರಂಗ ಕಲಾವಿದರೂ ಆಗಿರುವ ಶಿರ್ವ ಪರಿಸರದ ಕನ್ನಡದ ಸಾಕ್ಷಿಪ್ರಜ್ಞೆ ಕೆ.ಎಸ್. ಶ್ರೀಧರಮೂರ್ತಿ ಶಿರ್ವ ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ಕು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿಕೇಂದ್ರಿತ ಪರಿಕಲ್ಪನೆಯಾದ 'ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆಯ ಆಸಕ್ತಿಯನ್ನು ಹಾಗೂ ಕನ್ನಡತನವನ್ನು ಬೆಳೆಸುವಲ್ಲಿ ಅವಿರತ ಶ್ರಮಿಸಿದವರು. ಬಡಗುತಿಟ್ಟು ಯಕ್ಷಗಾನದಲ್ಲಿ ಹವ್ಯಾಸಿ ವೇಷಧಾರಿ, ಅರ್ಥಧಾರಿ ಆಗಿರುವ ಅವರ ಬರಹಗಳು ಪತ್ರಿಕೆಗಳಲ್ಲಿ (ವಿಡಂಬನೆ, ವ್ಯಕ್ತಿ ಚಿತ್ರಣ, ವೈಚಾರಿಕತೆ) ಪ್ರಕಟವಾಗಿವೆ. ಗಮಕದಲ್ಲಿ ವ್ಯಾಖ್ಯಾನಕಾರರಾಗಿ, ಅಷ್ಟಾವಧಾನದಲ್ಲಿ ಪ್ರಚ್ಛಕರಾಗಿ ಅವರು ಗಮನಸೆಳೆದಿದ್ದಾರೆ. ಕೃಷಿ, ಹೈನುಗಾರಿಕೆಗಳಲ್ಲೂ ಆಸಕ್ತಿ, ಅನುಭವಿ. ಕನ್ನಡ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ ಕನ್ನಡದ ಕಟ್ಟಾಳು ಶ್ರೀಧರ ಮೂರ್ತಿಯವರು, ವಿದ್ಯಾರ್ಥಿಕೇಂದ್ರಿತವಾಗಿ ಕಮ್ಮಟ, ಕಾರ್ಯಕ್ರಮ, ರಂಗಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ. ಪರಿಸರದಲ್ಲಿ ಕನ್ನಡ ಹಾಗೂ ಸಾಹಿತ್ಯ-ಸಂಸ್ಕೃತಿಗೆ ಪೂರಕ ವಿವಿಧ ಸಂಘಟನೆಗಳ ರೂವಾರಿಗಳೂ ಆಗಿದ್ದಾರೆ.
ಈ ಬಾರಿಯ ಸಮ್ಮೇಳನವು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ, ಅವರಲ್ಲಿ ಕನ್ನಡ ಪ್ರೀತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದ್ದು, ಇದಕ್ಕೆ ಪೂರಕವಾಗಿ ಶಿರ್ವಾ ಪರಿಸರದಲ್ಲಿ ಹಲವಾರು ಕನ್ನಡ ಮನಸ್ಸುಗಳನ್ನು ಪ್ರೇರೇಪಿಸಿದ, ಅಪಾರ ಅಭಿಮಾನಿ ಶಿಷ್ಯವೃಂದ ಹೊಂದಿರುವ ಕೆ.ಎಸ್. ಶ್ರೀಧರಮೂರ್ತಿಗಳು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಕ.ಸಾ.ಪ. ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಕುತ್ಯಾರು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ,ಕಟಪಾಡಿ - ಗುರು ಸೇವಾ ಪರಿಷತ್ತು ಪ್ರಮುಖರ ಸಭೆ

Posted On: 10-10-2023 07:07AM
ಪಡುಕುತ್ಯಾರು : ಆನೆಗುಂದಿ ಗುರು ಸೇವಾ ಪರಿಷತ್ತಿನ ವಿವಿಧ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರುಗಳ ಮತ್ತು ಪದಾಧಿಕಾರಿಗಳು ಸಭೆಯು ನಡೆಯಿತು.
ಮಹಾಸಂಸ್ಥಾನದ ಕುಲಗುರು ಪರಂಪರೆ, ಆನೆಗುಂದಿ ಗುರುಸೇವಾ ಪರಿಷತ್ ಜವಾಬ್ದಾರಿ. ಕರ್ತವ್ಯಗಳು ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಆನೆಗುಂದಿ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್ ವಿವರಣೆ ನೀಡಿದರು. ಆನೆಗುಂದಿ ಗುರು ಸೇವಾ ಪರಿಷತ್ ನ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಸಲಹೆ ನೀಡಿದರು.
ಸಭೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಹಾಗೂ ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ,ಹಾಗೂ ವಿಶ್ವಕರ್ಮ ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ನಿಟ್ಟೆ ಸುರೇಶ್ ಆಚಾರ್ಯ ಕಾರ್ಕಳ ಸವಿವರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಮಹಾ ಸಂಸ್ಥಾನದ ಸಹ ಟ್ರಸ್ಟ್ ಗಳಾದ ಅಸೆಟ್ ಅಧ್ಯಕ್ಷ ಬಿ ಸೂರ್ಯಕುಮಾರ್ ಹಳೆಯಂಗಡಿ, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು ಮತ್ತು ಸಮಿತಿಗಳಾದ ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾ ಸಂಸ್ಥಾನ ಸರಸ್ವತಿ ಪೀಠ ಪಂಚ ಸಿಂಹಾಸನ ವಿಕಾಸ ಸಮಿತಿ ಗಂಗಾವತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಕೋಟೆಕಾರು ಪ್ರಭಾಕರ ಆಚಾರ್ಯ ಮಧೂರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ತ್ರಾಸಿ ಸುಧಾಕರ ಆಚಾರ್ಯ, ಜಯಕರ ಆಚಾರ್ಯ ಕರಂಬಳ್ಳಿ,ಗುರುರಾಜ್ ಕೆ ಜೆ ಆಚಾರ್ಯ, ರಾಘವೇಂದ್ರ ಆಚಾರ್ಯ ಉಡುಪಿ, ರತ್ನಾಕರ ಆಚಾರ್ಯ ಉದ್ಯಾವರ, ಗಣೇಶ್ ಆಚಾರ್ಯ ಕೋಟ, ವಾದಿರಾಜ ಆಚಾರ್ಯ ಮಂಗಳೂರು, ಕಾಟುಕುಕ್ಕೆ ವಾಸುದೇವ ಆಚಾರ್ಯ ಹರೀಶ್ ಆಚಾರ್ಯ ಹರೆಕಳ, ಜಗದೀಶ್ ಆಚಾರ್ಯ ತೊಕ್ಕೊಟ್ಟು, ಉಳ್ಳಾಲ ಮಂಜೇಶ್ವರ, ವಿಠಲ ಆಚಾರ್ಯ ಪಣಿಯೂರು,ಕಾಪು, ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಯೋಗೀಶ್ ಆಚಾರ್ಯ ಕರಂಬಳ್ಳಿ, ದಯಾನಂದ ಆಚಾರ್ಯ ಉಡುಪಿ, ತೆಂಕನಿಡಿಯೂರು, ಪುರುಷೋತ್ತಮ ಆಚಾರ್ಯ ಪುತ್ತೂರು, ಪುರಂದರ ಆಚಾರ್ಯ ವಿಟ್ಲ, ಯುವರಾಜ ಆಚಾರ್ಯ ಬಂಟ್ವಾಳ, ಶೇಖರ ಆಚಾರ್ಯ ಮಂಗಳೂರು, ಸುಂದರ ಆಚಾರ್ಯ ಮರೋಳಿ, ನಿತಿನ್ ಆಚಾರ್ಯ ಮುಂಡ್ಕೂರು, ದೇವಪ್ಪ ಆಚಾರ್ಯ ಸುಳ್ಯ, ಉದಯ ಆಚಾರ್ಯ ಕಿನ್ನಿಗೋಳಿ, ದಿನೇಶ್ ಆಚಾರ್ಯ ಮಂಜೇಶ್ವರ, ಅಶೋಕ್ ಆಚಾರ್ಯ ಮಂಗಲ್ಪಾಡಿ, ಜನಾರ್ದನ ಆಚಾರ್ಯ ಬಜಕೂಡ್ಲು, ಯೋಗೀಶ್ ಆಚಾರ್ಯ ಕೊಯಂಬತ್ತೂರು, ವಸಂತ ಆಚಾರ್ಯ ಮಜೂರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.
ಆನೆಗುಂದಿ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರ್ ಸ್ವಾಗತಿಸಿದರು. ಲೋಲಾಕ್ಷ ಶರ್ಮ ಪಡುಕುತ್ಯಾರು ವಂದಿಸಿದರು.
ಪಡುಕುತ್ಯಾರು : ಆನೆಗುಂದಿ ಶ್ರೀ ಚಾತುರ್ಮಾಸ್ಯ ಕೃತಜ್ಞತಾ ಸಮರ್ಪಣಾ ಸಭೆ

Posted On: 10-10-2023 07:04AM
ಪಡುಕುತ್ಯಾರು :ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ-2023 ಜುಲೈ 3ರಿಂದ ಸೆಪ್ಟಂಬರ್ 29 ತನಕ ಯಶಸ್ವಿಯಾಗಿ ಸಂಪನ್ನಗೊಂಡ ಬಗ್ಗೆ ಸೇವಾ ಕಾರ್ಯಕರ್ತರಿಗೆ ಕೃತಜ್ಞತಾ ಸಮರ್ಪಣಾ ಸಭೆ ನಡೆಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆದ ಸಭೆಯಲ್ಲಿ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಸೇವಾ ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರಿಗೂ ಫಲ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.
ಸಭೆಯಲ್ಲಿ ಚಾತುರ್ಮಾಸ್ಯದ ವರದಿಯನ್ನು ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್ ಮಾಡಿದರು. ಚಾತುರ್ಮಾಸ್ಯದ ಆಯವ್ಯಯವನ್ನು ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಮಂಡಿಸಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ ಉಪಸ್ಥಿತರಿದ್ದರು.
ಅಕ್ಟೋಬರ್ 15 ರಿಂದ 24 : ಉಚ್ಚಿಲ ದಸರಾ - 2023

Posted On: 09-10-2023 06:51PM
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಬಾರಿಯೂ ಉಚ್ಚಿಲ ದಸರಾವು ಅಕ್ಟೋಬರ್ 15 ರಿಂದ 24 ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್ ಹೇಳಿದರು. ಅವರು ಸೋಮವಾರ ಉಚ್ಚಿಲ ಮೊಗವೀರ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಕ್ಟೋಬರ್ 15ರಂದು ಶಾಲಿನಿ ಡಾ| ಜಿ.ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆಯೊಂದಿಗೆ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ ನೀಡುವರು. ಅಂದು ಮಹಾಲಕ್ಷ್ಮಿ ಅನ್ನಛತ್ರ ಕಟ್ಟಡ, ಅತಿಥಿಗೃಹ ಉದ್ಘಾಟನೆಯೂ ನಡೆಯಲಿದೆ. ಗಣ್ಯರ ಉಪಸ್ಥಿತಿಯಲ್ಲಿ ದೇವಿಗೆ ಭೂತಾಯಿ ಮೀನಿನ ಬಂಗಾರದ ಹಾರದ, ಬೆಳ್ಳಿ ಕಿರೀಟ, ಬೆಳ್ಳಿ ತಂಬೂರಿ ಸಮರ್ಪಣೆ ನಡೆಯಲಿದೆ. ಈ ಬಾರಿ ದಸರಾ ವಿಶೇಷ ಆಕರ್ಷಣೆಯಾಗಿ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಶತವೀಣಾವಲ್ಲರಿ, ಧಾರ್ಮಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ನಡೆಯಲಿದೆ.
ಶೋಭಾಯಾತ್ರೆಯು ದೇವಳದಿಂದ ಪ್ರಾರಂಭಗೊಂಡು ರಾಷ್ಟ್ರೀಯ ಹೆದ್ದಾರಿಯ ಮೂಲಕ ಎರ್ಮಾಳು ಜನಾರ್ಧನ ದೇವಳದವರೆಗೆ ಸಾಗಿ ಅಲ್ಲಿಂದ ಕೊಪ್ಪಲಂಗಡಿ ಮೂಲಕ ಕಾಪು ದೀಪಸ್ತಂಭದ ಬಳಿ ಸಮುದ್ರ ಕಿನಾರೆಯಲ್ಲಿ ನವದುರ್ಗೆ, ಶಾರದಾ ಮೂರ್ತಿಯ ಜಲಸ್ತಂಭನ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಅಂಬಾರಿ ಹೊತ್ತ ಕೃತಕ ಆನೆ, ಭಜನಾ ತಂಡಗಳು, ಹುಲಿವೇಷ, ವಿವಿಧ ವೇಷಭೂಷಣ ಇರಲಿದೆ. ಸಮುದ್ರ ಕಿನಾರೆಯ ಬಳಿ ಕಾಶಿಯ ಅರ್ಚಕರಿಂದ ಗಂಗಾರತಿ ಬೆಳಗುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ , ಜೀಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕು ಪಟ್ಣ ಅಧ್ಯಕ್ಷೆ ಸುಗುಣ ಕರ್ಕೇರ, ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ್ ಕುಂದರ್, ಅನಿಲ್ ಕುಮಾರ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು, ದಿನೇಶ್ ಎರ್ಮಾಳು, ಸತೀಶ್ ಬಾರ್ಕೂರು, ಮನೋಜ್ ಕಾಂಚನ್, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು.
ಕಟಪಾಡಿ ಚಿಲ್ಮಿ ಶ್ರೀಮತಿ ಮಾಲತಿ ಕಾಮತ್ ನಿಧನ

Posted On: 09-10-2023 03:02PM
ಉಡುಪಿ : ಕಟಪಾಡಿ ಚಿಲ್ಮಿ ಶ್ರೀಮತಿ ಮಾಲತಿ ಕಾಮತ್ (51) ಅವರು ಅಲ್ಪ ಕಾಲದ ಅಸೌಖ್ಯದಿಂದ ಅಕ್ಟೋಬರ್ 8 ರಂದು ನಿಧನರಾದರು.
ಅಪಾರ ದೈವ ಭಕ್ತೆ, ಜನನುರಾಗಿಯಾಗಿದ್ದರು. ಇವರು ಕಟಪಾಡಿ ಕಾಮತ್ ಸ್ನಫ್ ವರ್ಕ್ಸ್ ಇದರ ಮಾಲಕರಾದ ಶ್ರೀಧರ್ ಕಾಮತ್ ಇವರ ಧರ್ಮಪತ್ನಿ ಇವರು ಪತಿ, ಮಗಳು ಅಳಿಯ ಹಾಗೂ ಅಪಾರ ಬಂಧು, ಬಾಂಧವರನ್ನು ಅಗಲಿದ್ದಾರೆ.
ಉಡುಪಿ : ತುಳು ಲಿಪಿ ನಾಮ ಫಲಕ ಅನಾವರಣ

Posted On: 09-10-2023 02:43PM
ಉಡುಪಿ : ಜೈ ತುಲುನಾಡ್(ರಿ.) ಉಡುಪಿ ವಲಯದ ವತಿಯಿಂದ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಾದ ತುಳುನಾಡಿನ ನೆಲದ ಭಾಷೆಯಾದ ತುಳು ಲಿಪಿಯ ನಾಮಫಲಕ ವನ್ನು ತುಳುಕೂಟ(ರಿ.) ಉಡುಪಿ ಇದರ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ ಇವರು ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದಾಖಲೆ ಆಧಾರದ ಮೇಲೆ ಕಂದಾಯ ಅಧಿಕಾರಿ ನಮಗೆ ಮಾತೃ ಭಾಷೆ ತುಳು ಎಂದು ಸರ್ಟಿಫಿಕೆಟ್ ನೀಡಿದರೆ ಆ ಸರ್ಟಿಫಿಕೇಟ್ ಮೇಲೆ ನೀಟ್, ಸಿಇಟಿಯಲ್ಲಿ ತುಳು ಕೋಟಾದಲ್ಲಿ ರಿಸರ್ವೇಶನ್ ಲಭಿಸುತ್ತದೆ ಹಾಗಾಗಿ ಲಕ್ಷಾಂತರ ರೂಪಾಯಿ ಅನುದಾನ ನೀಡುವುದು ತಪ್ಪುತ್ತದೆ. ಹೆಚ್ಚಿನವರಿಗೆ ನಾನು ಇದರ ಮಾಹಿತಿ ನೀಡಿದ್ದೇನೆ. ಹೆಚ್ಚಿನ ನಮ್ಮ ಸ್ಥಳೀಯ ಮಕ್ಕಳಿಗೆ ಹಾಗೂ ಪೋಷಕರಿಗೆ ಇದರ ಮಾಹಿತಿ ಇಲ್ಲ. ಶಾಲಾ ದಾಖಲಾತಿಯ ಸಮಯದಲ್ಲಿ ಮಾತೃಭಾಷೆ ತುಳು ಎಂದು ನಮೂದಿಸಿದರೆ ಇದರ ಸದುಪಯೋಗ ಪಡೆಯಬಹುದು ಹಾಗೂ ಜೈ ತುಲುನಾಡು(ರಿ.) ಸಂಘಟನೆಯವರು ತುಳು ಭಾಷೆ ಸಂಸ್ಕೃತಿ ಉಳಿವಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸುತ್ತಿದೀರಿ ಇದಕ್ಕೆ ನಾನು ಆಭಾರಿಯಾಗಿದ್ದೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ತಾರಾ ಉಮೇಶ್ ಆಚಾರ್ಯ, ತುಳುನಾಡ ಧ್ವನಿಯ ಸಂಪಾದಕರಾದ ಯಶೋಧಾ ಕೇಶವ್, ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ನಾಯ್ಕ್ , ಜೈ ತುಲುನಾಡ್(ರಿ.) ಇದರ ಉಪಾಧ್ಯಕ್ಷರಾದ ಉದಯ ಪೂಂಜಾ, ಕೋಶಾಧಿಕಾರಿ ಸಂತೋಷ್.ಎನ್.ಎಸ್ ಕಟಪಾಡಿ ಹಾಗೂ ಜೈ ತುಲುನಾಡು(ರಿ.) ಉಡುಪಿ ವಲಯದ ಸದಸ್ಯರಾದ ಸುಪ್ರೀತಾ ದೇವಾಡಿಗ, ಕಿನ್ನು ಒಡಿಪು, ರಾಜೇಶ್ ತುಳುವ, ಸುರೇಶ್ ಹಾವಂಜೆ, ಸಾಗರ್ ಭಂಡಾರಿ, ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಸ್ವಾತಿಸುವರ್ಣ ಕೊಡವೂರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾಪು : ಮಲ್ಲಾರು ಶಾಲೆಯ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Posted On: 09-10-2023 02:17PM
ಕಾಪು : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನಲ್ಲಿ ನಡೆದ ಇನ್‌ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾಪು ತಾಲೂಕಿನ ಮಲ್ಲಾರು ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಬೇಬಿ ರಿಶಾನ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವರು ತಯಾರಿಸಿದ ಮನೆಯಲ್ಲಿ ಉಪಯೋಗಿ ಸಬಹುದಾದ “ದಹನಕಾರಕ' ಮಾದರಿಗೆ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ಅಕ್ಟೋಬರ್ 9ರಿಂದ 11ರವರೆಗೆ ದಿಲ್ಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಜೋಯ್ಸ ಎಂ. ಅಲ್ಫೋನ್ಸೋ ಮಾರ್ಗದರ್ಶಕ ನೋಡಲ್ ಶಿಕ್ಷಕಿಯಾಗಿ ಪಾಲ್ಗೊಳ್ಳಲಿದ್ದಾರೆ.