Updated News From Kaup

ಪಡುಕುತ್ಯಾರು : ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ

Posted On: 24-09-2023 06:40PM

ಪಡುಕುತ್ಯಾರು : ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜವನ್ನು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆ ಕಾರಣದಿಂದಾಗಿ ನಮ್ಮ ಮಠ ಮಂದಿರಗಳು, ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಗುರುಗಳು, ನಮ್ಮ ಸಂಸ್ಕಾರದ ಕಾರಣದಿಂದ ಉನ್ನತಿಯನ್ನು ಸಾಸುತ್ತಿರುವ ನಮ್ಮ ದೇಶಕ್ಕೆ ಪ್ರಾಪಂಚಿಕವಾಗಿ ಗೌರವ ಸಲ್ಲುತ್ತಿದೆ. ಹಾಗಾಗಿ ಮಕ್ಕಳಲ್ಲೂ ಧಾರ್ಮಿಕ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಯನ್ನು ತುಂಬುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ ಎಂದು ಭಾರತ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು. ಅವರು ಭಾನುವಾರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ವೀಕ್ಷಣೆ ನಡೆಸಿ ಬಳಿಕ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಸ್ವಾಮೀಜಿಯವರಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಡಿ ಮೊದಲ ಬಾರಿ ವಿಶ್ವ ನಿರ್ಮಾಣ ಕರ್ತೃ ವಿಶ್ವಕರ್ಮರ ಹೆಸರು ಪ್ರಥಮ ಬಾರಿಗೆ ಜೋಡಣೆಯಾಗಿದೆ. ಮೊದಲ ಹಂತದಲ್ಲಿ 13,000 ಕೋಟಿ ರೂ. ಕಾರ್ಯಕ್ರಮ ಇದಾಗಿದೆ. ವಂಶವಾಹಿನಿಯಾಗಿ ಕರಗತವಾಗಿರುವ ಕುಲಕಸುಬಿನಲ್ಲಿ ಶ್ರಮ ಕಡಿಮೆ ಮಾಡಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಸೂಕ್ತ ತರಬೇತಿ ಪಡೆದು ಸೂಕ್ಷ್ಮ ಆಕರ್ಷಣೀಯ ಕೆಲಸಗಳ ಮೂಲಕ ವಿದೇಶಿಗರ ಬೇಡಿಕೆಯ ಮಟ್ಟದ ಉತ್ಪನ್ನಗಳು ಲಾಭದಾಯಕವಾಗಲಿದೆ. ವೇದಾಧ್ಯಯನದ ಮೂಲಕ ಸಂಸ್ಕಾರವನ್ನು ಕೊಡುವ ವಿಶ್ವಬ್ರಾಹ್ಮಣ ಸಮಾಜದ ಜೊತೆ ನಾವಿದ್ದೇವೆ. ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವ ಕೆಲಸ ನಮ್ಮ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಸಾಕಾರಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತೆ ನಮಗಿರಲಿ ಎಂದರು.

ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶದ ಸಂಸ್ಕಾರಕ್ಕೆ ವಿಶ್ವ ತಲೆ ಬಾಗುತ್ತಿದೆ. ಸಂಸ್ಕಾರದ ಸ್ಪರ್ಶದಿಂದ, ಆಧ್ಯಾತ್ಮದ ಚಿಂತನೆಯಿಂದ ದೇಹವೇ ದೇವಾಲಯವಾಗುತ್ತದೆ. ಧರ್ಮಪರ ಚಿಂತನೆಯನ್ನು ಮಾಡುವ ವಿಶ್ವಬ್ರಾಹ್ಮಣ ಸಮಾಜದ ಗುರುಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರನ್ನು ಸಮಸ್ತ ಹಿಂದೂ ಧರ್ಮ ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಎಂದರು. ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಧಾರ್ಮಿಕ ಶಕ್ತಿಯೇ ನಮ್ಮ ಅಭಿವೃದ್ಧಿ ಏಳಿಗೆಯ ಮೂಲ ಮಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ, ಸಮಾಜಕ್ಕಾಗಿ ನಡೆಸಿದ ಚಾಕಚಕ್ಯತೆ, ಕಾರ್ಯದಕ್ಷತೆ, ದೂರದೃಷ್ಟಿತ್ವದ ಯೋಜನೆಗಳ ಬಗ್ಗೆ ಹೆಮ್ಮೆ ಇದೆ. ಹಲವು ಸಂತರ ತಪಸ್ಸಿನ ಫಲದಿಂದ ಮನಸ್ಸಿಗೆ ಕಾವಿಯನ್ನು ತೊಟ್ಟಂತಹ ಪ್ರಧಾನ ಮಂತ್ರಿ ನಮ್ಮ ದೇಶಕ್ಕೆ ಒದಗಿದ್ದಾರೆ. ಆರಾಧ್ಯಮೂರ್ತಿ ವಿಶ್ವಕರ್ಮ ದೇವರ ಹೆಸರಿನ ವಿಶ್ವಕರ್ಮ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ. ಕುಸುರಿ ಕೆಲಸದ ವೈಶಿಷ್ಟ್ಯತೆಯೊಂದಿಗೆ ಪರಂಪರೆಯನ್ನು ಉಳಿಸುವ ಪ್ರಧಾನಿಯವರ ಈ ಯೋಜನೆಯಡಿ ವಿಶ್ವಬ್ರಾಹ್ಮಣರ ಪಂಚಕಸುಬುಗಳಿಗೆ ಒಳಮೀಸಲಾತಿ ನೀಡಬೇಕಿದೆ. ಶೂನ್ಯ ಬಡ್ಡಿದರದ ಸಾಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದ್ದು, ಪರಂಪರೆಯ ಶಿಲ್ಪವನ್ನು ವಿದೇಶಿಗರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸಲು ಅಸಾಧ್ಯವಾಗಿದ್ದು, ಆಧುನಿಕ ಶಿಲ್ಪಗಳ ಮೂಲಕ ವಿದೇಶೀಗರ ಆಕರ್ಷಣೀಯ ಉತ್ಪನ್ನಗಳ ಸಿದ್ಧಪಡಿಸಲು ಯೋಜನೆಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ಭಾರತದ ಪ್ರವಾಸೋದ್ಯಮ ಇಲಾಖೆಗೆ ಬರುವ ವಿದೇಶೀ ಆದಾಯದ ಶೇ.90 ಪಾಲು ವಿಶ್ವ ಬ್ರಾಹ್ಮಣರ ಶಿಲ್ಪಿಗಳ ಕೊಡುಗೆಯಿಂದ ಸಾಧ್ಯವಾಗಿದೆ ಎಂದರು. ಮಹಾಸಂಸ್ಥಾನದ ವತಿಯಿಂದ ಹಾಗೂ ಮಾತೃಮಂಡಳಿ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗೀತಾಂಜಲಿ ಎಂ.ಸುವರ್ಣ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಎಸ್. ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸುಮಾ ಯು. ಶೆಟ್ಟಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷರಾದ ಜನಾರ್ದನ ಆಚಾರ್ಯ, ಮಾಜಿ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಕೃಷಿ ಅಧಿಕಾರಿ ಮೋಹನ್ರಾಜ್, ಪ್ರತಿಷ್ಠಾನದ ಕೋಶಾಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷರಾದ ಬಿ. ಸೂರ್ಯಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷರಾದ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಮೂಲ ಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಗುರುಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಗೋವು ಟ್ರಸ್ಟ್ನ ದಿನೇಶ್ ಆಚಾರ್ಯ ಕಿನ್ನಿಗೋಳಿ , ವಿವೇಕ ಆಚಾರ್ಯ ಮಂಚಕಲ್, ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ಮಾತೃಮಂಡಳಿಯ ರಮಾ ನವೀನ್ ಕಾರ್ಕಳ, ಕವಿತಾ ಹರೀಶ್ ಕಾರ್ಕಳ, ದೀಪಾ ಸುರೇಶ್ ಕಟಪಾಡಿ, ಗೀತಾ ಚಂದ್ರ ಕಾರ್ಕಳ, ಗುರುರಾಜ್ ಕೆ.ಜೆ., ರಾಘವೇಂದ್ರ ಆಚಾರ್ಯ ಉಡುಪಿ, ಹರೀಶ್ ಆಚಾರ್ಯ ಕಾರ್ಕಳ, ಹರೀಶ್ ಆಚಾರ್ಯ ಹರೇಕಳ, ಜಗದೀಶ್ ಆಚಾರ್ಯ ತೊಕ್ಕೊಟ್ಟು, ಯೋಗೀಶ್ ಆಚಾರ್ಯ ಮುಡಿಪು, ಉಳ್ಳಾಲ ಮಂಜೇಶ್ವರ ಪೇಟೆ ಕೂಡುವಳಿಕೆಯವರು, ಗುರುಸೇವಾ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತಿ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಉಡುಪಿ : ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆಗಳ ಸಮರ್ಪಣೆ

Posted On: 24-09-2023 02:22PM

ಉಡುಪಿ‌ : ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಕಾರ್ಯಕ್ರಮವನ್ನು ಇಂದು ಮಣಿಪಾಲ ಜಿಲ್ಲಾಧಿಕಾರಿಗಳ ಅಟಲ್ ಬಿಹಾರಿ ವಾಜಪೇಯಿ ಆಡಿಟೋರಿಯಂನಲ್ಲಿ ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕಾಪು ಶಾಸರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಅಪರ ಜಿಲ್ಲಾಧಿಕಾರಿಗಳಾದ ಮಮತಾ ದೇವಿ, ಸಹಾಯಕ ಆಯುಕ್ತರಾದ ರಶ್ಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆಪ್ಟೆಂಬರ್ 25 : ಜನತಾ ದರ್ಶನ ಕಾರ್ಯಕ್ರಮ

Posted On: 24-09-2023 10:34AM

ಉಡುಪಿ : ರಾಜ್ಯದ ವಿವಿಧ ಭಾಗಗಳಿಂದ ನಾಗರೀಕರು ಬೆಂಗಳೂರಿಗೆ ಆಗಮಿಸಿ ಹಲವಾರು ರೀತಿ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ, ಅಹವಾಲುಗಳನ್ನು ಸಲ್ಲಿಸುತ್ತಿದ್ದು, ಸದ್ರಿ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತೀ ತಿಂಗಳು "ಜನತಾದರ್ಶನ" ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಸಲುವಾಗಿ ಮಾನ್ಯ ಮುಖ್ಯಮಂತ್ರಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೆಪ್ಟಂಬರ್ 25 ರಂದು ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ "ಜನತಾದರ್ಶನ" ಕಾರ್ಯಕ್ರಮವನ್ನು ನಡೆಸಲು ನಿರ್ದೇಶನ ನೀಡಿರುತ್ತಾರೆ.

ಸರ್ಕಾರದ ಆದೇಶದಂತೆ, ಜಿಲ್ಲೆಯಲ್ಲಿ ನಾಗರಿಕರಿಂದ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಜಿಲ್ಲೆಯಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸೆಪ್ಟಂಬರ್ 25 ರಂದು ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.

ಜಿಲ್ಲೆಯ ಸಾರ್ವಜನಿಕರು ಸರ್ಕಾರಿ ಕೆಲಸದ ಸಂಬಂಧ ತಮ್ಮ ಅಹವಾಲುಗಳೇನಾದರೂ ಇದ್ದರೆ, ತಾವು ಖುದ್ದಾಗಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 25 : ಕಾಪು ಕುಲಾಲ ಯುವ ವೇದಿಕೆ, ಕುಲಾಲ ಸಂಘದಿಂದ ರಾಜೇಶ್ ಕುಲಾಲ್ ಕುಟುಂಬಕ್ಕೆ ಆರ್ಥಿಕ‌‌ ನೆರವು ಹಸ್ತಾಂತರ ಕಾರ್ಯಕ್ರಮ

Posted On: 23-09-2023 05:18PM

ಕಾಪು : ಗ್ಯಾಂಗ್ರಿನ್ ಕಾಯಿಲೆಯಿಂದ ತನ್ನ ಒಂದು ಕಾಲು ಕಳೆದು, ಇನ್ನೊಂದು ಕಾಲು ಉಳಿಸಲು ಪ್ರಯತ್ನ ಮಾಡುತ್ತಲಿರುವ ಕಾಪು ಅದಮಾರು ನಿವಾಸಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಕಾಪು ಕುಲಾಲ ಯುವ ವೇದಿಕೆ ಹಾಗೂ ಕುಲಾಲ ಸಂಘ (ರಿ.) ಕಾಪು ವಲಯದ ವತಿಯಿಂದ ಸಂಗ್ರಹ ಗೊಂಡ ಧನಸಹಾಯವನ್ನು 25, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದಾನಿಗಳು, ಹಿತೈಷಿಗಳ ಸಹಭಾಗಿತ್ವದಲ್ಲಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಸ್ವಜಾತಿ ಮಿತ್ರರು, ಹಿತೈಷಿಗಳು ಅಂದು ನಮ್ಮೊಡನೆ ಭಾಗಿಯಾಗಿ ಎಂದು ಕಾಪು ಕುಲಾಲ ಯುವ ವೇದಿಕೆ ಪ್ರಮುಖರು ಉದಯ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿರುವರು.

ಶಂಕರಪುರ : ಬಿಲ್ವ ಪತ್ರ ಗಿಡ ವಿತರಣಾ ಅಭಿಯಾನ

Posted On: 22-09-2023 08:31PM

ಶಂಕರಪುರ : ದ್ವಾರಕಾಮಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಶಂಕರಪುರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ ಗುರುವಾರ ಜಯಂಟ್ಸ್ ಸಪ್ತಾಹದ ಅಂಗವಾಗಿ ಬಿಲ್ವ ಪತ್ರ ಗಿಡ ವಿತರಣಾ ಅಭಿಯಾನ ಕಾಯ೯ಕ್ರಮವನ್ನು ಶ್ರೀ ಸಾಯಿ ಈಶ್ವರ್ ಗುರೂಜಿ ಉದ್ಘಾಟಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಬಿಲ್ವಪತ್ರ ಗಿಡದಿಂದ ನಮ್ಮ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ವಿಶೇಷವಾದ ಲಾಭವಿದೆ. ಈ ಗಿಡವನ್ನು ನೆಟ್ಟು ನಮ್ಮ ಆರೋಗ್ಯವನ್ನು ಮತ್ತು ಆಧ್ಯಾತ್ಮಿಕವಾಗಿ ನಮ್ಮ ಸಮಾಜವನ್ನು ಕೂಡ ಕಾಪಾಡಬಹುದು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಅಧ್ಯಕ್ಷ ವಿವೇಕಾನಂದ ಕಾಮತ್, ನಿಕಟ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಸುನೀತಾ ಮಧುಸೂಧನ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತಾಗಿ ಜಯಂಟ್ಸ್ ಗ್ರೂಪ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು ಬಿಲ್ವ ಪತ್ರ ಅಭಿಯಾನದ ಕುರಿತಾಗಿ ಮಾಹಿತಿ ನೀಡಿದರು. ಈ ಸಂದರ್ಭ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀರಾಮು ಇವರು ಕೊಡ ಮಾಡಿದ ಸಾಯಿ ಮುಖ್ಯಪ್ರಾಣ ಭಾವಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು. ಸುಮಾರು 300 ಜನರಿಗೆ ಗಿಡಗಳನ್ನು ವಿತರಿಸಲಾಯಿತು.

ಉಚ್ಚಿಲ ದಸರಾ-2023: ಯುವ ನೃತ್ಯೋತ್ಸವಕ್ಕಾಗಿ ಸಾರ್ವಜನಿಕರಿಂದ ಆಡಿಶನ್ ರೌಂಡ್‌ಗೆ ಆಹ್ವಾನ

Posted On: 22-09-2023 12:33PM

ಉಚ್ಚಿಲ : ದ.ಕ.ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ಯುವ ದಸರಾ -2023ರ ಅಂಗವಾಗಿ ಹಮ್ಮಿಕೊಂಡಿರುವ ನೃತ್ಯೋತ್ಸವ ಸಲುವಾಗಿ ಸಾರ್ವಜನಿಕರಿಂದ ನೃತ್ಯ ಸ್ಪರ್ಧೆಯ ಆಡಿಶನ್ ರೌಂಡ್‌ಗಾಗಿ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ.

ಅಕ್ಟೋಬರ್ 8ರಂದು ಸಂಜೆ 3 ಗಂಟೆಯಿಂದ 6 ಗಂಟೆವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ಆಡಿಶನ್ ರೌಂಡ್ ಸ್ಪರ್ಧೆ ನಡೆಯಲಿದೆ.

ಆಡಿಶನ್ ಸುತ್ತಿನ ಸ್ಪರ್ಧಾ ನಿಯಮಗಳು: ಸ್ಪರ್ಧೆಯಲ್ಲಿ ಪ್ರತಿಯೊಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನರಿಗೆ ಅವಕಾಶ. ಯಾವುದೇ ವಯಸ್ಸಿನ ಮಿತಿ ಇಲ್ಲ, ತಂಡವೊಂದಕ್ಕೆ 5(4+1) ನಿಮಿಷದ ಅವಕಾಶ. ಆಡಿಶನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್ (ವೇಷಭೂಷಣ) ಅಗತ್ಯವಿಲ್ಲ. ಆಡಿಶನ್ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಅಕ್ಟೋಬರ್ 15ರಂದು ನಡೆಯುವ ಯುವ ದಸರಾ ಉತ್ಸವದ ನೃತ್ಯ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ಆಡಿಶನ್ ಸುತ್ತಿನಲ್ಲಿ ಒಬ್ಬ ಸ್ಪರ್ಧಿ ಬೇರೆ ಬೇರೆ ತಂಡಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಯಾವುದೇ ಭಾಷೆ ಅಥವಾ ನೃತ್ಯ ಪ್ರಾಕಾರದ ನಿರ್ಬಂಧವಿಲ್ಲ.

ಫೈನಲ್ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಸಹಿತ ಪ್ರಥಮ ಬಹುಮಾನ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 15ಸಾವಿರ ರೂ., ಚತುರ್ಥ 10 ಸಾವಿರ ರೂ. ಹಾಗೂ 5 ತಂಡಗಳಿಗೆ ತಲಾ 5ಸಾವಿರ ರೂ. ನಂತೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.

ಹೆಜಮಾಡಿ : ವಿಶ್ವ ಹಿಂದೂ ಪರಿಷತ್ - 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ; ಸಭಾ ಕಾರ್ಯಕ್ರಮ

Posted On: 19-09-2023 09:43PM

ಹೆಜಮಾಡಿ : ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಇದರ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಲುವಾಗಿ ಸೆಪ್ಟೆಂಬರ್ 19ರಂದು ಸಭಾ ಕಾರ್ಯಕ್ರಮ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಹೆಜಮಾಡಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸುಧಾಕರ ಕರ್ಕೇರ, ರಾಷ್ಟ್ರಮಟ್ಟದ ತರಬೇತುದಾರರಾದ ರಾಜೇಂದ್ರ ಭಟ್ ಕೆ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಶ್ಮಾ ಎ ಮೆಂಡನ್, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀಹರಿ ಭಟ್, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್, ಹೆಜಮಾಡಿ ಘಟಕ ಭಜರಂಗದಳದ ಸಂಚಾಲಕರಾದ ನವೀನ್ ಕೋಟ್ಯಾನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ ಉಪಸ್ಥಿತರಿದ್ದರು.

ಉಡುಪಿ : ಮಹಿಳಾ ಮೀಸಲಾತಿ ಮಾಜಿ‌ ಪ್ರಧಾನಿ ದೇವೇಗೌಡರ ಕನಸಿನ ಕೂಸು - ಯೋಗೀಶ್ ವಿ ಶೆಟ್ಟಿ

Posted On: 19-09-2023 09:40PM

ಉಡುಪಿ : ಲೋಕಸಭೆ ಮತ್ತು ರಾಜ್ಯವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33% ಮೀಸಲಾತಿ ನೀಡುವ ವಿಚಾರವನ್ನು 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಪ್ರಸ್ತಾವನೆ ಮಾಡಿದ್ದರು. ಇದು ದೇವೇಗೌಡರ ಕನಸಿನ ಕೂಸು. ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೂ ಆ ಸಂದರ್ಭ ಲೋಕಸಭೆ ಸದಸ್ಯರಾಗಿದ್ದರು. ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇದರ ಬಗ್ಗೆ ಪ್ರಸ್ತಾವನೆ ಮಾಡಿದ್ದು ಸಂತೋಷ ತಂದಿರುತ್ತದೆ. ಇದು ಆದಷ್ಟು ಶೀಘ್ರದಲ್ಲಿ ಜಾರಿಗೆ ಬರಲಿ. ಇದು ಅಭಿವೃದ್ಧಿ ಸಮಾಜ ಸುಧಾರಣೆಯ ಹೊಸ ಹೆಜ್ಜೆ ಮಹಿಳಾ ಮೀಸಲಾತಿಗೆ ಮರು ಜೀವ ತಂದದ್ದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಪು : ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ

Posted On: 19-09-2023 12:27PM

ಕಾಪು : ಮೊದಲ ಪೂಜಿತ ದೇವ ಗಣಪತಿಯ ಆರಾಧನಾ ಮಹೋತ್ಸವ ಗಣೇಶ ಚತುರ್ಥಿಯ ಸಂಭ್ರಮವನ್ನು ‌ಕಾಪು ತಾಲೂಕಿನಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮೂಲಕ 14 ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಕಾಪು ತಾಲೂಕಿನ ದೇವಳಗಳಲ್ಲಿ ವಿಶೇಷ ಪೂಜೆಯೊಂದಿಗೆ, ಉಚ್ಚಿಲದಲ್ಲಿ 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಕಾಪುವಿನಲ್ಲಿ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಪಾದೂರಿನಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, 20 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪಣಿಯೂರು, 36 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಎರ್ಮಾಳು ಸೇರಿದಂತೆ ಪಡುಬಿದ್ರಿ ಇನ್ನಿತರ ಭಾಗಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶೋತ್ಸವವು ಆಚರಿಸಲಾಗುತ್ತಿದೆ.

ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ವ್ಯಕ್ತಿಗೆ ಸಹಾಯಗೈದ ಕುಲಾಲ್ಸ್ ದೋಹಾ ಸದಸ್ಯರು

Posted On: 18-09-2023 11:23PM

ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ಕಾಪು ತಾಲೂಕಿನ ಅದಮಾರುವಿನ ರಾಜೇಶ್ ಕುಲಾಲ್ ಅವರ ಮನವಿಗೆ ದೋಹಾ ಕತಾರ್ ಕುಲಾಲ ಮಿತ್ರರು ಸ್ಪಂದಿಸಿ ಅವರಿಗೆ 25 ಸಾವಿರ ರೂಪಾಯಿ ಸಹಾಯ ನೀಡಿದ್ದಾರೆ.