Updated News From Kaup

ನಮ್ಮ ನಾಡ ಒಕ್ಕೂಟ - ಕಾಪು ತಾಲೂಕು ಘಟಕದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಸನ್ಮಾನ

Posted On: 18-09-2023 10:35PM

ಕಾಪು : ಮನುಕುಲದ ಸೇವೆಯೆ ಭಗವಂತನ ಸೇವೆ ಎಂಬ ಧ್ಯೇಯ ವಾಕ್ಯವನ್ನು ನಂಬಿಕೊಂಡು ಜಾತಿ ಮತ ಬೇದವಿಲ್ಲದೆ ಸಮಾಜ ಸೇವೆಯಲ್ಲಿ ಜನರಿಗೆ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತ ಉತ್ತಮ ಸಮಾಜ ಸೇವಕರಾಗಿ ಗುರುತಿಸಿ ಅನೇಕ ಸಂಘ ಸಂಸ್ಥೆಗಳಿಂದ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಡೆದ ಫಾರೂಕ್ ಚಂದ್ರನಗರರನ್ನು ನಮ್ಮ ನಾಡ ಒಕ್ಕೂಟ (ರಿ.) ಕಾಪು ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಪಡುಬಿದ್ರಿ, ಉಪಾಧ್ಯಕ್ಷರಾದ ಮಹಮ್ಮದ್ ಇರ್ಫಾನ್ ಕಾಪು, ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಕೋಶಾಧಿಕಾರಿ ಯು.ಎ ರಶೀದ್, ಸದಸ್ಯ ರಝಾಕ್ ಉಚ್ಚಿಲ ಉಪಸ್ಥಿತರಿದ್ದರು.

ಪಣಿಯೂರು : ಶೈನಿಂಗ್ ಫ್ರೆಂಡ್ಸ್ ಖಾನ - 4ನೇ ವರ್ಷದ ಹುಲಿವೇಷ

Posted On: 18-09-2023 07:05PM

ಪಣಿಯೂರು : ಇಲ್ಲಿನ ಖಾನ ಶೈನಿಂಗ್ ಫ್ರೆಂಡ್ಸ್ ವತಿಯಿಂದ ಗಣೇಶ ಚತುರ್ಥಿಯ ಸಂದರ್ಭದಲ್ಲಿ 4 ನೇ ವರ್ಷದ ಹುಲಿ ವೇಷ, ಊದು ಸೇವೆ ನಡೆಯಲಿದೆ.

ಸಂಗ್ರಹದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಅಶಕ್ತರಿಗೆ ಹಂಚಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುವರು.

ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ : 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Posted On: 18-09-2023 06:59PM

ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ ಇಲ್ಲಿಯ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 19, ಮಂಗಳವಾರ ಶ್ರೀ ಬಾವು ಬಬ್ಬರ್ಯ ದೈವಸ್ಥಾನದ ಬಳಿ, ಕೈಪುಂಜಾಲು ಇಲ್ಲಿ ಜರಗಲಿದೆ.

ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು

ಬೆಳಿಗ್ಗೆ ಗಂಟೆ 7ಕ್ಕೆ ಗಣಹೋಮ, 8 ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ ಗಂಟೆ 11:30 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 2ಕ್ಕೆಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 3 ಕ್ಕೆ ಪ್ರಸಾದ ವಿತರಣೆ, ಸಂಜೆ ಗಂಟೆ 5:30 ಕ್ಕೆ ವಿಸರ್ಜನಾ ಪೂಜೆ, ಸಾಯಂಕಾಲ ಗಂಟೆ 4ಕ್ಕೆ ವಿಸರ್ಜನಾ ಮೆರವಣಿಗೆ ಜರಗಲಿದೆ ಎಂದು‌ ಪ್ರಕಟನೆ ತಿಳಿಸಿದೆ.

ನೇರ ಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ

Posted On: 18-09-2023 05:08PM

ಪಡುಬಿದ್ರಿ : ವ್ಯಕ್ತಿಯೊಬ್ಬ ತನ್ನ ದುರ್ಗುಣಗಳನ್ನು ಬದಲಾಯಿಸಿಕೊಂಡು ಸತ್ಪ್ರಜೆಯಾಗಿ ಬಾಳಿದರೆ ಸಮಾಜದ ಪರಿವರ್ತನೆ ಸಾಧ್ಯ. ಆ ಪರಿವರ್ತನೆಯ ಪಥವನ್ನು ಯುವವಾಹಿನಿಯ ಪ್ರತಿಜ್ಞಾ ವಿಧಿಯಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಬೈಂದೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಕೋಟ್ಯಾನ್ ಹೇಳಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭವನ್ನು ಉದ್ಘಾಟಿಸಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅವರು ಅವಿಭಜಿತ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಯುವವಾಹಿನಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ಗತಸಾಲಿನ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ಘಟಕದ ಉಪಾಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಅಡ್ವೆ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಯುವವಾಹಿನಿಯ ಸಂಘಟನಾ ಕಾರ್ಯದರ್ಶಿ ಉದಯ ಕಾವೂರು ಉಪಸ್ಥಿತರಿದ್ದರು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾಪು : 33 ನೇ ವರ್ಷದ ಸಂಭ್ರಮದಲ್ಲಿ ಕಳತ್ತೂರು ಗಣೇಶೋತ್ಸವ

Posted On: 18-09-2023 04:50PM

ಕಾಪು : ಇಲ್ಲಿಯ ಕುತ್ಯಾರು ಭಾಗದ ಕಳತ್ತೂರು ಪುಂಚಲಕಾಡು ಇಲ್ಲಿ 33 ನೇ ಗಣೇಶೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, 8 ಗಂಟೆಗೆ ಮೆರವಣಿಗೆ ಮುಖೇನ ಮಂಗಳ ಮೂರ್ತಿಯ ಜಲಾದಿವಾಸ ಕಳತ್ತೂರು ಅರಬಿಕಟ್ಟೆ ಬಳಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ : ನಾನಿಲ್ತಾರು ಕುಲಾಲ ಸಂಘದ 35ನೇ ವರ್ಷದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 18-09-2023 04:45PM

ಕಾರ್ಕಳ : ಇಲ್ಲಿಯ ಕುಲಾಲ ಸಂಘ ನಾನಿಲ್ತಾರು ಮುಲ್ಲಡ್ಕ ಮುಂಡ್ಕೂರು ಇದರ ಅಕ್ಟೋಬರ್ 1, ಆದಿತ್ಯವಾರದಂದು ನಡೆಯುವ 35ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಧ್ವನಿವರ್ಧಕ ಕೊಡುಗೆ, ಅಭಿನಂದನಾ ಕಾರ್ಯಕ್ರಮ, ವೈದ್ಯಕೀಯ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ದಿನೇಶ್ ಕುಲಾಲ್, ಮಾಜಿ ತಾ.ಪ.ಉಪಾಧ್ಯಕ್ಷರು ಗೋಪಾಲ್ ಮೂಲ್ಯ, ಆಶಾ ವರದರಾಜ್, ಹರ್ಷಿತ, ಲೋಕೇಶ್, ಅನೀಶ್ ಉಪಸ್ಥಿತರಿದ್ದರು.

ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

Posted On: 17-09-2023 01:11PM

ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ರವಿವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು.

ಈ ಸಂದರ್ಭ ಶಾಸಕರು ಮಾತನಾಡಿ ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇತ್ತೀಚಿಗೆ ನಡೆದ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿ ಸಮರ್ಥ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು ಪ್ರಪಂಚದಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯದರಲ್ಲಿ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ರಾವ್, ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ. ವೀಣಾ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಹಿರಿಯರು, ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗೌರಿ-ಗಣೇಶ : ವಿಲಕ್ಷಣ ತಾಯಿ-ಮಗ

Posted On: 17-09-2023 12:19PM

ಸ್ತ್ರೀ ತನ್ನ ಬಯಕೆಯನ್ನು ಪುರುಷ ಸಂಬಂಧವಿಲ್ಲದೆ ನೆರವೇರಿಸಿಕೊಳ್ಳುತ್ತಾಳೆ, ಮಗುವನ್ನು ಪಡೆಯುತ್ತಾಳೆ. ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ,ಅಸೂಯೆಗೊಳ್ಳುತ್ತಾನೆ, ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ. ಪ್ರಕರಣ ಸುಖಾಂತ್ಯವಾಗುತ್ತದೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ. ಇದು ಅನಿವಾರ್ಯವಾಗಿಯಲ್ಲ, ಪ್ರೀತಿಪೂರ್ವಕವಾಗಿ. ಗೌರಿ-ಗಣೇಶ ಇವರ ತಾಯಿ-ಮಗ ಸಂಬಂಧ ಇದು ಸ್ವಾರಸ್ಯಕರವಾದುದು, ಅಪ್ರಾಕೃತವಾದುದು. ಅಂತೂ ದಂಪತಿಗಳ ಸಹಜ ಸಂಬಂಧದಿಂದ ಒದಗಿ ಬಂದವನಲ್ಲ 'ಗಣೇಶ'. ಪ್ರಕೃತಿ - ಪುರುಷ ಸಮಾಗಮವಿಲ್ಲದೆಯೂ ಪ್ರಕೃತಿಯೊಂದಿಗೆ ಎಷ್ಟು ಆಳವಾದ ದೇಹ ಸಂಬಂಧದ ಅವಿನಾಭಾವವಿರುತ್ತದೊ ಅಷ್ಟೇ ಪ್ರಮಾಣದ ಭಾವ ತೀವ್ರತೆಯನ್ನು ಅಥವಾ ಅನುರಾಗವನ್ನು ಪುರುಷನೊಂದಿಗೆ ಹೊಂದಿ 'ಗಣನಾಥ'ನಾದದ್ದು, ವಿಘ್ನೇಶನಾದದ್ದು ಆದಿಪೂಜಿತನಾದದ್ದು. ನಿಗ್ರಹಿಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ, ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು.ಎಷ್ಟು ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ. ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ. ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಪಡಿಮೂಡಿದೆ.

ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿಯ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ. ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೂ ಕಾಲವಲ್ಲದ ಕಾಲದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ. ಈ ಘಟನೆ ಭೂಮಿ-ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ. ಪ್ರಕೃತಿ-ಮಣ್ಣಿನೊಂದಿಗೆ ಗಾಢವಾದ ಸ್ನೇಹ ಮಣ್ಣಿನಮಗ ಮಹಾಕಾಯನಾದ ಮಹಾಗಣಪತಿಯ ಬಿಂಬ ಕಲ್ಪನೆಯಲ್ಲಿ ಸ್ಪಷ್ಟವಾಗುತ್ತದೆ. ಗೌರಿಗೆ ಮಗನಾದರೂ ರುದ್ರ ಪುತ್ರನಾದರೂ ಗಣಪ 'ಮಣ್ಣಿನ ಮಗನೆ'. ಅದು ಅಂದಿಗೂ ಸರಿ,ಇಂದಿಗೂ ಪ್ರಸ್ತುತ. ಆದುದರಿಂದ ಈ ಮಣ್ಣಿನ ಮಕ್ಕಳಿಗೆ ಆತ ಪ್ರಿಯನಾಗುತ್ತಾನೆ, ಬಂಧುವಾಗುತ್ತಾನೆ.

ಮನುಷ್ಯ ಬೇಟೆಯಾಡಿ ಬದುಕುತ್ತಿದ್ದ ಕಾಲದಿಂದಲೂ ಅಡ್ಡಿ ಆತಂಕಗಳ, ಕಾರ್ಯಭಂಗಗಳ ಕುರಿತು ಆಲೋಚನೆ ಇತ್ತು. ಮುಂದೆ ಕೃಷಿ ಸಂಸ್ಕೃತಿ ತೊಡಗಿದಾಗ ಎಲ್ಲವೂ ನಿರಾತಂಕವಾಗಿ ನಡೆಯಬೇಕು. ಕೃಷಿ ಸಮೃದ್ಧಿ ಪರಿಪೂರ್ಣವಾಗಿ ಒದಗಬೇಕು ಎಂಬ ಆಸೆ ಇತ್ತು. ಎಲ್ಲಿ ಕೈಗೂಡುವುದಿಲ್ಲವೊ ಎಂಬ ಆತಂಕವಿತ್ತು. ಮುಂದೆ ನಾಗರಿಕತೆ ಬೆಳೆದಂತೆ ತನ್ನ ಬದುಕು ವಿಸ್ತೃತವಾಗಿ ಅನಾವರಣಗೊಂಡಾಗ ಬಾಳು ಸುಂದರ, ನಿರರ್ಗಳವಾಗಿರಬೇಕೆಂದು ಬಯಸಿದ ಮನುಷ್ಯ ವಿಘ್ನ ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿಸಿದ ,ವಿಘ್ನ ನಿವಾರಕ ದೇವರೊಂದು ಅನಿವಾರ್ಯವಾಯಿತು. ಈಗ ಪ್ರಾಚೀನ - ಅರ್ವಾಚೀನಗಳನ್ನು ಬೆಸೆಯುತ್ತಾ ಗಣಪತಿ ಮತ್ತೆ ಸಾಕಾರಗೊಂಡ. ವಿಘ್ನ ನಿವಾರಕ (ಮೊದಲೇ ಶಿವನಿಂದ ಅನುಗ್ರಹಿತನಾದ)ಎಂದೆನಿಸಿಕೊಂಡ. ಜಾತಿ - ಮತ-ಪಂಥ-ಆಸ್ತಿಕ-ನಾಸ್ತಿಕ ಬೇಧವಿಲ್ಲದೆ ಬಹುಮಾನ್ಯನಾದ. ಏಕೆಂದರೆ ವಿಘ್ನ ಬರುವುದು ಸಹಜ ತಾನೆ? ವೈದಿಕವು ವಿನಾಯಕನ ಮೂಲವನ್ನು ಋಗ್ವೇದದಷ್ಟು ಪ್ರಾಚೀನತೆಗೆ ಒಯ್ಯುತ್ತದೆ. ವೈದಿಕ ವಿದ್ವಾಂಸರು 'ಗಣಾನಾಮ್ ಗಣಪತಿಮ್ ಹವಾಮಹೇ...'ಎಂಬ ಮಂತ್ರವನ್ನೂ ಆಧಾರವಾಗಿ ನೀಡುತ್ತಾರೆ.ಮುಂದಿನ ಪುರಾಣ ಮತ್ತು ಮಹಾಕಾವ್ಯಗಳು ಪ್ರಸ್ತುತ ನಾವು ಕಾಣುವ ಸ್ವರೂಪವನ್ನು ಗಜಾನನಿಗೆ ನೀಡಿದುವು. ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಅಂಶಗಳಿಗನುಸಾರವಾಗಿ ಗಣಪತಿಯ ಪರಿಕಲ್ಪನೆಗಳು, ರಹಸ್ಯ ಅರ್ಥಗಳು ರೂಪಾಂತರಗೊಂಡು ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ಗಜವದನ, ಗಣೇಶ, ವಿಘ್ನೇಶ್ವರ ರೂಪವನ್ನು ಪಡೆದವು. ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ವಾಚಸ್ಪತಿ-ಬ್ರಹ್ಮಸ್ಪತಿ ಆಗುವುದು. ಜ್ಞಾನದ ಸಂಕೇತವಾಗಿ ಸ್ಪಷ್ಟಗೊಂಡಿದ್ದು ಮೂರ್ತಿ ಲಕ್ಷಣಗಳನ್ನು ಹೊಂದಿ ಬಂಗಾರ, ಕೆಂಪು ಬಣ್ಣ ಹಾಗೂ ಆಯುಧಗಳನ್ನು ಪಡೆದನು. ಗಣ = ಗುಂಪು, ಇಂತಹ ಹಾಡುವವರ, ನರ್ತಿಸುವವರ ಗುಂಪಿನಲ್ಲಿ ಇರುವವನು ಎಂಬುದು ಸೇರಿಕೊಂಡ ಕಲ್ಪನೆ. ಋಗ್ವೇದದ ಇನ್ನೊಂದು ವಿಭಾಗದಲ್ಲಿ ಮರುತರು ಅಥವಾ 'ಮರುದ್ಗಣ'ಗಳೆಂದು ಉಲ್ಲೇಖಿಸಲ್ಪಡುವ ಶಕ್ತಿಗಳನ್ನು ರುದ್ರನ ಮಕ್ಕಳೆಂದು ಹೆಸರಿಸಲಾಗಿದ್ದು, ಮೇಲಿನ ಗುಣಧರ್ಮವನ್ನೇ ಆರೋಪಿಸಲಾಗಿದೆ. ಸಿದ್ಧಿ ಮತ್ತು ಬುದ್ಧಿಯರನ್ನು ಹೊಂದಿರುವ ಗಣಪತಿ ಪರಿಕಲ್ಪನೆಯು ಸಿದ್ಧಿ ಮತ್ತು ಬುದ್ಧಿಗಳಿಗೆ ಈತನು ಕಾರಕನೆಂಬುದನ್ನು ಪ್ರತಿಪಾದಿಸುತ್ತದೆ. ಜನಪ್ರಿಯವಾಗಿರುವ ಕತೆಗಳು ಗಜಮುಖ ರೂಪದ ಹಿನ್ನೆಲೆಯಲ್ಲಿವೆ. ಆನೆಮುಖವನ್ನು ಹೊಂದಿರುವ ಗಜಮುಖ ಶಬ್ದವನ್ನು (ಗಜಮುಖ = ಜಾನಪದ ಮೂಲದ್ದು, ಬೇಟೆ ಸಂಸ್ಕೃತಿಯಿಂದ ಬಂದದ್ದು) ತತ್ತ್ವಜ್ಞಾನಿಗಳು ವಿಶ್ವದ ಆದಿ, ಗತಿ, ಐಕ್ಯವನ್ನು ಸಾಂಕೇತಿಸುವ ವಿರಾಟ್ ಸ್ವರೂಪವನ್ನು ವ್ಯಾಖ್ಯಾನಿಸುತ್ತಾರೆ.

ಗಣಪತಿಯ ಆಯುಧಗಳಾದ ಪಾಶವನ್ನು ರಾಗ, ಅಂಕುಶವನ್ನು ಕ್ರೋಧವೆಂದು ಅರ್ಥೈಸಿರುವ ವಿದ್ವಾಂಸರು ರಾಗ ಮತ್ತು ಕ್ರೋಧಗಳ‌ ನಿರಂಕುಶ ನಿಯಂತ್ರಣದಿಂದ ಹೊರಬರಲು ಅವುಗಳನ್ನು ಧರಿಸಿರುವ ದೇವರೇ ಅನುಗ್ರಹಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಈ ನಂಬಿಕೆ, ಶ್ರದ್ಧೆ ಭಗವದ್ಭಕ್ತರಲ್ಲಿದೆ. ಬೇಟೆ ಸಂಸ್ಕೃತಿಯಿಂದ ತೊಡಗಿದ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ. ಈ ನಡುವೆ ಇತಿಹಾಸಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ. ಬಳಿಕ ಇಲಿಯ ಸಾಂಗತ್ಯ ಸಿಗುತ್ತದೆ. ಕೃಷಿ ಸಂಸ್ಕೃತಿ ಬಹುವಾಗಿ ಪೂಜಿಸುತ್ತದೆ. ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ-ದಾರುಶಿಲ್ಪಗಳಲ್ಲಿ ಲಭ್ಯ. ಸರ್ವಮಾನ್ಯ ಸುಮುಖ ಸರ್ವ ವಿಘ್ನಗಳನ್ನು ನಿವಾರಿಸಿ ಲೋಕಕ್ಕೆ ಮಂಗಳವನ್ನು ಅನುಗ್ರಹಿಸಲಿ. ಆಶಯ ಮರೆಯದೆ ಗಣಪತಿಯ ಆರಾಧನೆ ನಡೆಯಲಿ. ವೈಭವೀಕರಣ ಮಿತಿಮೀರಿ ಉಪಾಸನಾ ಸತ್ಯ ಮರೆಯದಿರೋಣ. ಲೇಖನ : ಕೆ.ಎಲ್.ಕುಂಡಂತಾಯ

ಭಾರತದ ನವ ನಿಮಾ೯ಣದ ಕೆಲಸ ಮಾಡುವ ಕನಸುಗಾರ ಮೋದಿ

Posted On: 17-09-2023 07:05AM

ಮೋದಿ ಅವರು ಪ್ರಧಾನಿಯಾಗಿ ಸಾಥ೯ಕ ಒಂಬತ್ತು ವರ್ಷ ಪೂರ್ಣಗೊಳಿಸಿದ್ದಾರೆ. ಅವರಿಗೆ ಸಿಕ್ಕಿರುವ ಪ್ರಶಂಸೆಯ ಮಾತುಗಳು, ಅವರ ಮಾತುಗಳಿಗೆ ಇರುವ ವಿಶೇಷ ಮನ್ನಣೆ ಜಗತ್ತಿನ ವಿವಿಧ ದೇಶಗಳೊಂದಿಗೆ ಇರುವ ರಾಜತಾಂತ್ರಿಕ ಸಂಬಂಧಗಳು ರಾಷ್ಟ್ರನಾಯಕರಾಗಿದ್ದ ಅವರನ್ನು ವಿಶ್ವನಾಯಕ ಆಗಿ ಪರಿವರ್ತನೆ ಮಾಡಿವೆ. ಮೋದಿ ಅವರ ಜನಪ್ರಿಯತೆ ಎಷ್ಟಿದೆಯೆಂದರೆ, ತಮಗೆ ಮೋದಿ ಅವರ ಹಸ್ತಾಕ್ಷರ ಕೇಳಬೇಕು ಅನ್ನಿಸುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಬೈಡನ್ ಇತ್ತಿಚೆಗೆ ಸಭೆಯಲ್ಲಿ ಹೇಳಿದ್ದರು ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಮೆರಿಕದ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್‌ ಅವರಿಗೂ ಸಿಡ್ನಿ ಕ್ರೀಡಾಂಗಣದಲ್ಲಿ ಮೋದಿ ಅವರಿಗೆ ಸಿಕ್ಕಂತಹ ಸ್ವಾಗತ ದೊರೆತಿರಲಿಲ್ಲ ಎಂದು ಆಸ್ಟೇಲೀಯಾ ಪ್ರಧಾನಿ ಆಲ್ಬನೀಸ್ ಹೇಳಿದರು. ಕ್ರೀಡಾಂಗಣದಲ್ಲಿ ಸೇರಿದ್ದ 20 ಸಾವಿರ ಜನರ ಎದುರು ಆಲ್ಬನೀಸ್ ಅವರು ಮೋದಿ ಅವರನ್ನು ‘ದಿ ಬಾಸ್’ ಎಂದು ಕರೆದಿದ್ದರು ಇದು ಮೋದಿಯವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ ಯಾಗಿದೆ.

ಇವರಿಬ್ಬರ ಮಾತುಗಳಿಗಿಂತ ಹೆಚ್ಚು ಆಶ್ಚರ್ಯ ಉಂಟುಮಾಡಿದ್ದು ಜಿ.20 ಸಭೆಯಲ್ಲಿ ಅಪ್ರಿಕಾದ ಮರಪೆ ಅವರ ನಡೆ. ಅವರು ಮೋದಿ ಅವರ ಕಾಲು ಮುಟ್ಟಿ ಗೌರವ ಸಮರ್ಪಿಸಿದರು. ಈ ನಡೆಯು ಭಾರತೀಯರನ್ನು ಬೆರಗಾಗಿಸಿತು. ಏಕೆಂದರೆ ಭಾರತದ ಪ್ರಧಾನಿಗೆ ಬೇರೆ ದೇಶಗಳ ನಾಯಕರು ಯಾವತ್ತೂ ಈ ರೀತಿಯಲ್ಲಿ ಗೌರವ ಸಮರ್ಪಿಸಿದ್ದನ್ನು ಕಂಡಿರಲಿಲ್ಲ. ಭಾರತದ ಹಿಂದಿನ ಯಾವ ಪ್ರಧಾನಿಯ ಬಗ್ಗೆಯೂ ಜಾಗತಿಕ ನಾಯಕರು ಈ ರೀತಿಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ ನಿದರ್ಶನವಿಲ್ಲ. ಭಾರತದ ವಿದೇಶಾಂಗ ನೀತಿಗೆ ಸ್ಪಷ್ಟ ದಿಕ್ಕು ತೋರಿಸಿದ್ದಕ್ಕೆ ಹಾಗೂ ಜಾಗತಿಕ ವೇದಿಕೆಗಳಲ್ಲಿ ತಾವು ನಡೆದುಕೊಂಡ ಬಗೆಗೆ ಮೋದಿ ಅವರಿಗೆ ಶ್ರೇಯಸ್ಸು ಸಲ್ಲಬೇಕು. ಅನಿವಾಸಿ ಭಾರತೀಯರ ಪಾಲಿಗೆ ಹಿರೋ : ನ್ಯೂಯಾರ್ಕ್‌, ಟೆಕ್ಸಾಸ್‌, ಸಿಡ್ನಿ... ಹೀಗೆ ಬೇರೆ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಹಾಗೂ ಭಾರತ ಮೂಲದವರು ಭಾರತದ ಯಾವ ಪ್ರಧಾನಿಯನ್ನೂ ಇಷ್ಟೊಂದು ಉತ್ಸಾಹದಿಂದ ಸ್ವಾಗತಿಸಿದ ಉದಾಹರಣೆ ಇಲ್ಲ. ಈಗ ಆಗುತ್ತಿರುವುದು ನಿಜಕ್ಕೂ ಅಭೂತಪೂರ್ವ. ಆರು ವರ್ಷಗಳ ಹಿಂದೆ ಅಮೆರಿಕದ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಹೋಗಿದ್ದಾಗ ಮೋದಿ ಅವರನ್ನು ಅಲ್ಲಿನ ಸದಸ್ಯರು ಎದ್ದು ನಿಂತು ಆರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಈ ಘಟನೆಗೆ ಜನತೆ ಮರೆಯಲು ಅಸಾಧ್ಯ. ಮೋದಿ ಅವರಿಗೆ ಸಿಕ್ಕ ಗೌರವವನ್ನು ನೋಡಿಯೇ ನಂಬಬೇಕಿತ್ತು. ಇವೆಲ್ಲವುಗಳ ಅರ್ಥವೇನು? ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಅವರು ಜನಪ್ರಿಯತೆಯ ಏಣಿಯನ್ನು ನಿಧಾನವಾಗಿ ಹಾಗೂ ದೃಢವಾಗಿ ಏರಿದ್ದಾರೆ.

ಮಾದರಿಯಾದ ವಿದೇಶಾಂಗ ನೀತಿ : ಮೋದಿ ಅವರು ಭಾರತದ ವಿದೇಶಾಂಗ ನೀತಿಯನ್ನು ‘ಭಾರತಕ್ಕೆ ಹೆಚ್ಚು ಸೂಕ್ತವಾಗುವ’ ರೀತಿಯಲ್ಲಿ ಬದಲಾಯಿಸಿರುವುದು; ರಷ್ಯಾ ಮತ್ತು ಅಮೆರಿಕದ ಜೊತೆ ಭಾರತದ ಸಂಬಂಧವನ್ನು ತೂಗಿಸಿಕೊಂಡು ಹೋಗುತ್ತಿರುವುದು; ಚೀನಾವನ್ನು ಅವರು ನಿಭಾಯಿಸುತ್ತಿರುವ ಬಗೆ; ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಯನ್ನು ಕಾಯುವ ಉದ್ದೇಶದಿಂದ ಕ್ವಾಡ್ ಒಕ್ಕೂಟಕ್ಕೆ ತೋರಿರುವ ಬದ್ಧತೆ, ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ಹಾಗೂ ರಕ್ಷಣಾ ಉಪಕರಣಗಳ ತಯಾರಿಕೆಯು ಭಾರತದಲ್ಲಿಯೇ ಆಗಬೇಕು ಎಂಬ ಗುರಿ... ಇವೆಲ್ಲ ನಿಜಕ್ಕೂ ಅಸಾಮಾನ್ಯ ಹಾಗೂ ಅಭೂತಪೂರ್ವ. ರಕ್ಷಣಾ ವಲಯದಲ್ಲಿ ಬೇರೆ ಬೇರೆ ದೇಶಗಳಿಂದ‘ ರಕ್ಷಣಾ ಸಾಮಾಗ್ರಿ ಗಳನ್ನು ತರಿಸಿಕೊಳ್ಳಲಾಗುತ್ತಿತ್ತು ಆದರೆ ಇಂದು ಆ ಸ್ಥಿತಿ ಇಲ್ಲ ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮವು ಈ ಹಿಂದೆ ಇಷ್ಟೊಂದು ಆದ್ಯತೆಯನ್ನು ಪಡೆದಿರಲೇ ಇಲ್ಲ. ಉಕ್ರೇನ್‌ ಬಿಕ್ಕಟ್ಟನ್ನು ಮೋದಿ ಅವರು ನಿಭಾಯಿಸಿದ ರೀತಿಯು ನಿಜಕ್ಕೂ ಗುರುತಿಸಬೇಕಾದಂಥದ್ದು. ಅಮೆರಿಕವು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿದ್ದರೂ, ರಷ್ಯಾದ ಜೊತೆಗಿನ ಸ್ನೇಹವನ್ನು ಕಾಪಾಡಿಕೊಂಡು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯು ಸ್ಥಿರವಾಗಿ ಇರುವಂತೆ ಮೋದಿ ನೋಡಿಕೊಂಡಿದ್ದಾರೆ. ಇದು ತಂತಿಯ ಮೇಲಿನ ನಡಿಗೆಯೇ ಸೈ. ಅಲ್ಲದೆ, ಮೋದಿ ಅವರು ಉಕ್ರೇನ್‌ಗೆ ಮಾನವೀಯ ನೆರವು ಒದಗಿಸುವ ವಿಚಾರದಲ್ಲಿ ಬದ್ಧತೆ ತೋರಿದ್ದಾರೆ. ನೆರವಿನ ಹಸ್ತಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್‌ನ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮೋದಿ ಅವರಿಗೆ ಧನ್ಯವಾದ ಹೇಳಿದ್ದನ್ನು ಮರೆಯುವಂತಿಲ್ಲ.

ದೆಹಲಿ ಜಿ.20 ಸಭೆ ಹೊಸ ಮೈಲಿಗಲ್ಲು : ದೆಹಲಿ ಯಲ್ಲಿ ನಡೆದ ಜಿ.20 ಸಭೆ ಮೋದಿಯವರ ಇವೆಂಟ್ ಮ್ಯಾನೆಜ್ ಮೆಂಟ್ ಗೆ ಹಿಡಿದ ಕನ್ನಡಿಯಾಗಿದೆ.ದೆಹಲಿ ಸೂಚಿಗೆ ಎಲ್ಲರ. ಒಪ್ಪಿಗೆ ಪಡೆದಿದ್ದು, ದಾಖಲೆಯೇ ಸರಿ ಅದೇ ರೀತಿ ಭಾರತದ ಗತ ವೈಭವದ ಇತಿಹಾಸ ಸಾರುವ ವಿವಿಧ ಮಾದರಿಗಳ ಎದುರು ಸಭೆ ಎಲ್ಲವೂ ಅದ್ಬುತ. ಕಾಶ್ಮೀರ 370 ವಿಧಿ ತೆಗೆದಿರುವುದು, ಒಂದೇ ಭಾರತ ರೈಲು ಸೇವೆ, ದೇಶದಲ್ಲಿ ರೈಲು, ರಸ್ತೆ, ವಿಮಾನ ನಿಲ್ದಾಣ ನಿಮಾ೯ಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಯ೯ಕ್ರಮಗಳು ಅವರ ಕಾಯ೯ ಶೈಲಿಗೆ ಉತ್ತಮ ಉದಾಹರಣೆ. ಸಾಧನೆ ಮಾತಾಗಿದೆ : ನೆಹರೂ ಚಿಂತನೆಗಳ ನೆಲೆಯಲ್ಲಿ ದಶಕಗಳಿಂದ ಬೆಳೆದುಬಂದಿರುವ ಭಾರತೀಯ ವಿದೇಶಾಂಗ ಸೇವೆಯಲ್ಲಿನ ಆಲೋಚನಾ ಕ್ರಮವನ್ನು ಕೂಡ ಮೋದಿ ಅವರು ಬದಲಾಯಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಮಾತು ಹಾಗೂ ಅವರ ನಡೆಯಲ್ಲಿ ಈ ಹೊಸ ಆಲೋಚನಾ ಕ್ರಮವು ಸ್ಪಷ್ಟವಾಗಿ ಕಾಣಿಸುತ್ತಿದೆ. ಜೈಶಂಕರ್ ಅವರು ಪಾಕಿಸ್ತಾನ ಹಾಗೂ ಚೀನಾದ ಸ್ವೀಕಾರಾರ್ಹವಲ್ಲದ ನಡೆಗಳ ಬಗ್ಗೆ ಹಲವು ವೇದಿಕೆಗಳಲ್ಲಿ, ಹಲವು ಸಂದರ್ಭಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಅವರನ್ನು ವಿರೋಧಿಸುವವರ ಮನಃಸ್ಥಿತಿ ಅದೆಷ್ಟು ಕೆಟ್ಟದ್ದಾಗಿ ಇದೆಯೆಂದರೆ, ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಯಶವಂತ ಸಿನ್ಹಾ ಅವರು ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಪುವಾ ನ್ಯೂ ಗಿನಿಯಿಂದ ಬಿಜೆಪಿ ಟಿಕೆಟ್ ಕೇಳುವುದಾಗಿ ವ್ಯಂಗ್ಯವಾಡಿದ್ದಾರೆ. ಮೋದಿ ಅವರು ಪ್ರಧಾನಿಯಾದ ಹೊತ್ತಿನಿಂದ ವಿರೋಧ ಪಕ್ಷಗಳ ಟೀಕೆಗಳಲ್ಲಿ ನಕಾರಾತ್ಮಕತೆ ತುಂಬಿಕೊಂಡಿದೆ. 2014ರಲ್ಲಿ ಮೋದಿ ಅವರು ಮ್ಯಾನ್ಮಾರ್‌ಗೆ ಭೇಟಿ ನೀಡಿ, ಅಲ್ಲಿ 20 ಸಾವಿರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾಗ ವಿರೋಧ ಪಕ್ಷದ ನಾಯಕರೊಬ್ಬರು, ‘ಮೋದಿ ಅವರು ಚಪ್ಪಾಳೆ ತಟ್ಟಲು ಭಾರತದಿಂದ ಜನರನ್ನು ಕರೆದೊಯ್ದಿದ್ದಾರೆ’ ಎಂದು ಹೇಳಿದ್ದರು. ಕೈಗೆಟುಕದ ದ್ರಾಕ್ಷಿ ಹುಳಿ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಮೋದಿ ಅವರ ಅವಧಿಯಲ್ಲಿನ ಭಾರತವು ಆತ್ಮನಿರ್ಭರವಾಗಿದೆ. ಭಾರತ ಇದೀಗ ಚಂದ್ರಲೋಕಕ್ಕೂ ಕಾಲಿಟ್ಟಿದೆ.ಜಗತ್ತಿನ ಯಾವುದೇ ದೇಶಗಳಿಗೂ ಪೈಪೋಟಿ ನೀಡುವಂತಹ ಸಾಧನೆ ಅವರಿಂದಾಗಿದೆ. ಒಟ್ಟಾಗಿ ಮೋದಿಯವರಿಗೆ ಸಾಟಿ ಯಾಗುವ ನಾಯಕ ಯಾರೂ ಇಲ್ಲ. ಸೆ.17 ಅವರ ಜನ್ಮದಿನ ಈ ದಿನ ಅವರಿಗೆ ಅಭಿನಂದನೆ ಸಲ್ಲಿಸುತ್ತಾ , ಮೋದಿಯವರ ವ್ಯಕ್ತಿತ್ವ ನಮಗೆ ಮಾದರಿಯಾಗಲಿ ಜೈ ಹೋ' ✍ ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಸಂ.ಕಾಯ೯ದಶಿ೯ ಕ .ಸಾ.ಪ ಉಡುಪಿ

ಗಣೇಶ ಚತುರ್ಥಿ : ಉಡುಪಿ, ದ.ಕ ಜಿಲ್ಲೆಯಲ್ಲಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ

Posted On: 16-09-2023 04:25PM

ಗಣೇಶ ಚತುರ್ಥಿ : ಉಡುಪಿ, ದ.ಕ ಜಿಲ್ಲೆಯಲ್ಲಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ

ಮೊದಲು ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಾಗಿತ್ತು. ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ.

ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆಪ್ಟೆಂಬರ್ 19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.