Updated News From Kaup

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ - ಬಿರುವೆರ್ ಕಾಪು ಟ್ರೋಫಿ -2023 ; ಕ್ರಿಕೆಟ್ ಪಂದ್ಯಾಟದ ವಿಜ್ಞಾಪನ ಪತ್ರ ಬಿಡುಗಡೆ

Thumbnail
Posted On: 19 Nov 2023, 12:30 PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ಕಾಪುವಿನ ದಂಡತೀರ್ಥ ಶಾಲಾ ಮೈದಾನದಲ್ಲಿ ಡಿಸೆಂಬರ್ 30 - 31 ರಂದು ಬಿರುವೆರ್ ಕಾಪು ಟ್ರೋಫಿ -2023 ಕ್ರಿಕೆಟ್ ಪಂದ್ಯಾಕೂಟ ನಡೆಯಲಿದ್ದು ಇದರ ವಿಜ್ಞಾಪನ ಪತ್ರವನ್ನು ಕಾಪು ಜೆಸಿ ಭವನದಲ್ಲಿ‌ ನವೆಂಬರ್ ‌18ರಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಕ್ರಿಕೆಟ್ ಪಂದ್ಯಾಟದ ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾಗಿ ದೀಪಕ್ ಕುಮಾರ್ ಎರ್ಮಾಳು ಇವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಕಾರ್ಯತಂತ್ರ ರೂಪಿಸಲು ಸಂಸ್ಥೆಯ ಅಧ್ಯಕ್ಷರನ್ನೊಳಗೊಂಡ ಸದಸ್ಯರನ್ನೂ ನೇಮಿಸಲಾಯಿತು. ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳ್, ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಮಸ್ಕತ್, ರಾಕೇಶ್ ಕುಂಜೂರು, ರವಿರಾಜ್ ಶಂಕರಪುರ, ಯೋಗೀಶ್ ಪೂಜಾರಿ ಕಾಪು , ಪ್ರಶಾಂತ್ ಪೂಜಾರಿ ಕಾಪು , ಪ್ರಸಾದ್ ಪೂಜಾರಿ ಅದಮಾರ್ , ಯಾದವ ಪೂಜಾರಿ ಕಾಪು , ಸುಜನ್ ಎಲ್ ಸುವರ್ಣ ಶಿರ್ವ, ಅನಿಲ್ ಅಮೀನ್ ಕಾಪು, ಕಾರ್ತಿಕ್ ವಿ ಸುವರ್ಣ ಮೂಳೂರು, ವರುಣ್ ಬಿ ಕೋಟ್ಯಾನ್ ಕಲ್ಯಾಲ್, ಸಂಧ್ಯಾ ಬಿ ಕೋಟ್ಯಾನ್ ಕಲ್ಯಾಲ್ ಆನ್ ಲೈನ್ ಮೂಲಕ ಭಾಸ್ಕರ ಅಂಚನ್ ಕಲ್ಲುಗುಡ್ಡೆ ಕುವೈಟ್, ಗಣೇಶ್ ಕೋಟ್ಯಾನ್ ಮಲ್ಲಾರ್ ಕುವೈಟ್ ಉಪಸ್ಥಿತಿಯಿದ್ದರು.

ಕಾಪು : ದಿವಾಕರ ಶೆಟ್ಟಿಗೆ ಸಹಕಾರಿ ಕ್ಷೇತ್ರದ ಸಹಕಾರ ರತ್ನ ಪ್ರಶಸ್ತಿ

Thumbnail
Posted On: 19 Nov 2023, 12:13 PM

ಕಾಪು : ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳಿಯ ರಾಜ್ಯ ನಿರ್ದೇಶಕ, ಕೃಷಿ, ಸಹಕಾರಿ ಮತ್ತು ಉದ್ಯಮ ಕ್ಷೇತ್ರದ ಸಾಧಕ ಕಾಪು ದಿವಾಕರ ಶೆಟ್ಟಿ ಅವರಿಗೆ ಸಹಕಾರಿ ಕ್ಷೇತ್ರದ ರಾಜ್ಯಮಟ್ಟದ ಅತ್ಯುನ್ನತ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ. ವಿಜಯಪುರದಲ್ಲಿ ನವೆಂಬರ್ 20ರಂದು ನಡೆಯಲಿರುವ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾಪು ಕೋತ್ವಾಲ್‌ ಗುತ್ತು ನಿವಾಸಿಯಾಗಿರುವ ಅವರು ದೀರ್ಘ ಕಾಲ ದ.ಕ. ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಎರಡು ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರವರ್ತಕ, ಉಳಿಯಾರಗೋಳಿ ಹಾಲು ಉತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದು, ಕಳೆದ 33 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಾಪು ಸಹಕಾರಿ ವ್ಯವಸಾಯ ಸಂಘದ ಅಧ್ಯಕ್ಷರಾಗಿ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿದ್ದಾರೆ. ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕಾಪು ಜನಾರ್ದನ ದೇವಸ್ಥಾನ, ಕಾಪು ಮೂರನೇ ಮಾರಿಗುಡಿಗಳ ಟ್ರಸ್ಟಿ, ಉಳಿಯಾರಗೋಳಿ ಗ್ರಾಪಂ ಅಧ್ಯಕ್ಷ, ದಕ್ಷಿಣ ರೈಲ್ವೆ ಮತ್ತು ದ.ಕ. ಜಿಲ್ಲಾ ಟೆಲಿಕಾಂ ಸಲಹಾ ಮಂಡಳಿ ಸದಸ್ಯ, ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಅತ್ಯುತ್ತಮ ಸಹಕಾರಿ ಪ್ರಶಸ್ತಿ, ಅತ್ಯುತ್ತಮ ಹೈನುಗಾರ ಪ್ರಶಸ್ತಿ ಹಾಗೂ ಅಂತಾರಾಷ್ಟ್ರೀಯ ಆರ್ಯಭಟ ಭಾಜನರಾಗಿದ್ದಾರೆ.

ಪಡುಬಿದ್ರಿ : ಪಂಚಾಯತ್ ಸದಸ್ಯನಿಂದ ಅಧಿಕಾರಿಗೆ ಬೆದರಿಕೆ

Thumbnail
Posted On: 19 Nov 2023, 11:18 AM

ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರಿಗೆ ಪಂಚಾಯತ್ ಸದಸ್ಯರೋರ್ವರು ಬೆದರಿಕೆ ಹಾಕಿರುವ ಘಟನೆ ನವೆಂಬರ್ 17ರಂದು ಪಡುಬಿದ್ರಿ ಪಂಚಾಯತ್ ನಲ್ಲಿ ನಡೆದಿದೆ. ಕಾಪು ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ರವರು ತನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಪಡುಬಿದ್ರಿ ಗ್ರಾಮ ಪಂಚಾಯತ್‌ನ ಸದಸ್ಯ ಮಯ್ಯದ್ದಿ ಎಂಬುವವರು ಕಛೇರಿಗೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಮಂಜುನಾಥರವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನವೆಂಬರ್ 20 : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ

Thumbnail
Posted On: 18 Nov 2023, 06:36 PM

ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ ಕೇಂದ್ರ ಕಚೇರಿ ಸಹಕಾರ ಸಂಗಮದ ವೈ ಲಕ್ಷ್ಮಣ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ಹಾಗೂ ಸಹಕಾರ ಶಿಕ್ಷಣ, ತರಬೇತಿ ಪರಿಷ್ಕರಣೆ ದಿನ, ಸೊಸೈಟಿಯ ನವೀಕೃತ ಹವಾನಿಯಂತ್ರಿತ ಸಭಾಂಗಣ ಉದ್ಘಾಟನೆ, ಸನ್ಮಾನ, ಕೃಷಿ ಸಹಾಯ ಧನ ವಿತರಣಾ ಸಮಾರಂಭ ಜರಗಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್‌ ಕುಮಾರ್ ಹೇಳಿದರು. ಅವರು ಶನಿವಾರ ಪಡುಬಿದ್ರಿ ಸೊಸೈಟಿಯ ಸಭಾಂಗಣದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 70 ನೇ ಅಖಿಲ ಭಾರತ ಸಹಕಾರ ಸಪ್ತಾಹವು ನವೆಂಬರ್ 14ರಂದು ಪ್ರಾರಂಭಗೊಂಡಿದ್ದು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 20, ಸೋಮವಾರ ಪಡುಬಿದ್ರಿಯಲ್ಲಿ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ನಡೆಯಲಿದೆ. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ ಸುಧೀರ್‌ ಕುಮಾರ್ ಅಧ್ಯ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನವೀಕೃತ ಹವಾನಿಯಂತ್ರಿತ ವೈ ಲಕ್ಷ್ಮಣ ಸಭಾಂಗಣವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಅರ್. ಮೆಂಡನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಹೆಚ್. ಎನ್., ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ದಿಕ್ಸೂಚಿ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ್ ಎಕ್ಕಾರ್ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಅಪ್ರತಿಮ ಸಾಧಕರಾದ ಡಾ. ಎಮ್.ಎನ್. ರಾಜೇಂದ್ರ ಕುಮಾರ್, ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಶಿಕಲಾ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹರೀಶ್ ಹೆಜ್ಮಾಡಿ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿಯಾಗಿ ನಿಯೋಜಿತಗೊಂಡು ಸೊಸೈಟಿಯಲ್ಲಿ ವಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡಿರುವ ಬಾಲಕೃಷ್ಣ ರಾವ್‌ರವರನ್ನು ಸನ್ಮಾನಿಸಲಾಗುವುದು. ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ರೈತರಿಗೆ ಸಹಕಾರಿಯಾಗುವಂತೆ ಸೊಸೈಟಿಯು ಪ್ರಾರಂಭಿಸಿರುವ ಸಂಗಮ ಕೃಷಿ ನಿಧಿಯಿಂದ 1.25 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಬೆಳೆಯುತ್ತಿರುವ ಸೊಸೈಟಿ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ರೈತರಿಗೆ ಕಳೆದ ಸಾಲಿನಂತೆ ಈ ವರ್ಷವೂ ಕೃಷಿ ಸಹಾಯಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪಡುಬಿದ್ರಿ ಶ್ರೀ ಮಹಾಗಣಪತಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಬಳಕೆಗೆ 25 ಕುರ್ಚಿಗಳ ಹಸ್ತಾಂತರ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಮುಖ್ಯಕಾರ್ಯನಿರ್ವಾಹಣಾಕಾರಿ ಹಾಲಪ್ಪ ಕೋಡಿಹಳ್ಳಿ, ನಿರ್ದೇಶಕರು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ರಾಜಾರಾಮ್ ರಾವ್, ವೈ.ಜಿ.ರಸೂಲ್, ಯಶವಂತ್ ಪಡುಬಿದ್ರಿ, ಮಾಧವ ಆಚಾರ್ಯ, ಸ್ಟಾನ್ಲಿ ಕ್ವಾಡ್ರಸ್, ಸುಚರಿತಾ ಎಲ್.ಅಮೀನ್, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.

ನವೆಂಬರ್ ೧೮ : ಎರ್ಮಾಳುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾಮಪ್ಪ ಜಿ. ಸಾಲಿಯಾನ್ ಸಂಸ್ಮರಣೆ

Thumbnail
Posted On: 17 Nov 2023, 11:06 AM

ಎರ್ಮಾಳು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ "ಅಮೃತ ಭಾರತಿಗೆ ಕನ್ನಡದ ಆರತಿ" ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ.ರಾಮಪ್ಪ ಜಿ. ಸಾಲಿಯಾನ್‌ರವರ ಸಂಸ್ಮರಣೆ "ಅಮೃತಾಂಜಲಿ" ಕಾರ್ಯಕ್ರಮ ನವೆಂಬರ್ ೧೮ ಶನಿವಾರ ಸಾಯಂ ಗಂಟೆ ೪ ಕ್ಕೆ ಬಡ ಗ್ರಾ.ಪಂ.ವ್ಯಾಪ್ತಿಯ ಎರ್ಮಾಳುವಿನಲ್ಲಿ ಹೋರಾಟಗಾರರ ಹಿರಿಯ ಮಗಳು ಶಾರದಾ ಆರ್ ಸಾಲಿಯಾನ್ ಇವರ ನಿವಾಸ "ಸಿದ್ಧಿವಿನಾಯಕ"ದಲ್ಲಿ ಜರುಗಲಿದೆ. ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ತಿರುಮಲೇಶ್ವರ ಭಟ್ ಇವರು ಹೋರಾಟಗಾರರಾದ ದಿ.ಆರ್.ಜಿ.ಸಾಲಿಯಾನ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸುವರು. ಶಾರದಾ ಆರ್ ಸಾಲಿಯಾನ್ ನುಡಿ ನಮನ ಸಲ್ಲಿಸುವರು. ಮುಖ್ಯ ಅಭ್ಯಾಗತರಾಗಿ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜ್ಮಾಡಿ, ಮೋಹನ್ ಬಂಗೇರ ಕಾಪು, ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಭಾಗವಹಿಸುವರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು.ಕಲ್ಯಾ ಕಾರ್ಯಕ್ರಮ ಸಂಯೋಜಿಸುವರು ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ ತಿಳಿಸಿದೆ.

ಉಡುಪಿ : ಕೆ.ಪಿ.ಸಿ.ಸಿ ವಕ್ತಾರರಾಗಿ ನೂತನವಾಗಿ ಆಯ್ಕೆಯಾದ ಇರ್ಷಾದ್ ಅಹ್ಮದ್ ಶೇಖ್ ರಿಗೆ ಸನ್ಮಾನ

Thumbnail
Posted On: 17 Nov 2023, 11:03 AM

ಉಡುಪಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಗೆ ವಕ್ತಾರರಾಗಿ ನೂತನವಾಗಿ ಆಯ್ಕೆಯಾದ ಇರ್ಷಾದ್ ಅಹ್ಮದ್ ಶೇಖ್ ರಿಗೆ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಗಳಾದ ಫಾರೂಕ್ ಚಂದ್ರನಗರ ಹಾಗೂ ಹಸನ್ ಮಣಿಪುರ ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಉಡುಪಿ : ನೇಜಾರು ಪ್ರಕರಣ - ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಗಳಿಂದ ಮನವಿ

Thumbnail
Posted On: 16 Nov 2023, 09:13 PM

ಉಡುಪಿ : ನೆಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಜನರ ಹತ್ಯೆ ಪ್ರಕರಣದ ಆರೋಪಿಯ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ ಅಬ್ದುಲ್ ಜಬ್ಬಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಉಡುಪಿಯ ಕಾಂಗ್ರೆಸ್ ಮುಖಂಡರು, ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಗಳಾದ ಫಾರೂಕ್ ಚಂದ್ರನಗರ ಹಾಗೂ ಹಸನ್ ಶೇಕ್ ಮಣಿಪುರ ನಿನ್ನೆ ಕೆ.ಪಿ.ಸಿ.ಸಿ ಕಚೇರಿ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಸಭೆಯಲ್ಲಿ ಮನವಿ ನೀಡಿದರು. ಆರೋಪಿಯ ಈ ತರ ಕೃತ್ಯ ಸಮಾಜದಲ್ಲಿ ಜನರು ಬೆಚ್ಚಿ ಬಿಳಿಸುವಂತಾಗಿದೆ. ಅವನ ಹಿಂದೆ ಯಾರು ಇದ್ದಾರೆ ಅವನ ದುರುದ್ದೇಶ ಬಯಲು ಮಾಡಿ ಸಮಾಜದಲ್ಲಿ ಶಾಂತಿ ಉಂಟಾಗಬೇಕು ಇನ್ನೊಬ್ಬರಿಗೆ ಇದು ಪಾಠವಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಅಲ್ಪ ಸಂಖ್ಯಾತ ಜಿಲ್ಲಾ ಅಧ್ಯಕ್ಷರು, ಹಾಗೂ ರಾಜ್ಯ ಕೆ.ಪಿ.ಸಿ.ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ : ಅತ್ತೂರು ಬಾಸಿಲಿಕ ವಠಾರದಲ್ಲಿ ಹಣತೆ ಬೆಳಗಿಸಿದ ಕ್ರೈಸ್ತ ಬಾಂಧವರು

Thumbnail
Posted On: 16 Nov 2023, 12:54 PM

ಕಾರ್ಕಳ : ಅತ್ತೂರಿನ ಪ್ರತಿಷ್ಠಿತ ಸಂತ ಲಾರೆನ್ಸರ ಬಾಸಿಲಿಕದ ಆವರಣ ಮತ್ತು ಮುಂಭಾಗದಲ್ಲಿ ಐಸಿವೈಎಂ ಯುವಕರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಿಂದೂ-ಮುಸ್ಲಿಂ- ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ಯಾಂಡಲ್ ಹೊತ್ತಿಸಿ ಹರಕೆ ಹಾಕುವುದು ಇಲ್ಲಿ ಮಾಮೂಲು. ಆದರೆ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಐಸಿವೈಎಂ ಯುವ ಸಂಘಟನೆಯ ಸದಸ್ಯರು ಮತ್ತು ಕ್ರೈಸ್ತ ಬಾಂಧವರು ಹಣತೆ ಹಚ್ಚುವ ಮೂಲಕ ದೀಪಾವಳಿ ಹಬ್ಬದ ಸೌಹಾರ್ದತೆಯ ಮಹತ್ವವನ್ನು ಜಗತ್ತಿಗೆ ಸಾರಿದರು. ಅತ್ತೂರು ಬಾಸಿಲಿಕಾದ ನಿರ್ದೇಶಕರಾದ ವo. ಫಾ. ಆಲ್ಬನ್ ಡಿಸೋಜ ಮತ್ತು ಫಾ. ಲ್ಯಾರಿ ರವರ ಮಾರ್ಗದರ್ಶನದಲ್ಲಿ ಐಸಿವೈಎಂ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಮತ್ತು ಆವರಣದಲ್ಲಿ ಹಣತೆ ಹಚ್ಚಿ, ಸರ್ವಧರ್ಮದ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಸುಡುಮದ್ದು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಐಸಿವೈಎಂ ಸಲಹೆಗಾರ ರೋಷನ್, ಅಧ್ಯಕ್ಷ ಆರೋನ್ ಮತ್ತು ಯುವ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಅಂಡರ್ - 19 ಕ್ರಿಕೆಟಿಗೆ ಕಟಪಾಡಿಯ ತೇಜಸ್ವಿನಿ

Thumbnail
Posted On: 16 Nov 2023, 11:55 AM

ಕಟಪಾಡಿ : ಬಿಸಿಸಿಐ ನಡೆಸುವ ಅಂಡರ್-19 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿ ಜಿಲ್ಲೆಯ ಕಟಪಾಡಿಯ ಕೆಆರ್ ಎಸ್ ಕ್ರಿಕೆಟ್ ಅಕಾಡೆಮಿಯ ತೇಜಸ್ವಿನಿ ಉದಯ್ ಆಯ್ಕೆಯಾಗಿದ್ದಾರೆ.ಇವರು ಆರಂಭಿಕ ಆಟಗಾರ್ತಿ ಮತ್ತು ಮಧ್ಯಮ ವೇಗಿ ಆಗಿದ್ದು,ಭರವಸೆಯ ಬ್ಯಾಟಿಂಗ್ ಮೂಲಕ ರಾಜ್ಯ ತಂಡಕ್ಕೆ ಪ್ರವೇಶ ಮಾಡಿದ್ದಾರೆ. 5ನೇ ವಯಸ್ಸಿನಲ್ಲಿ ಬಿಳಿ ಜೆರ್ಸಿ ತೊಟ್ಟು ಕ್ರಿಕೆಟ್ ಆಡಬೇಕೆಂದು ಹಠಹಿಡಿದ ತೇಜಸ್ವಿನಿಗೆ ಬ್ಯಾಟ್ ಹಿಡಿಯಲು ಹೇಳಿಕೊಟ್ಟು ಶುಭ ಹಾರೈಸಿದ್ದು ಭಾರತದ ಮಾಜಿ ಆಟಗಾರ ಸೈಯದ್ ಕಿರ್ಮಾನಿ ಎಂಬುದು ವಿಶೇಷ. ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ತೇಜಸ್ವಿನಿ,ಕಳೆದ ವರ್ಷ ರಾಜ್ಯ ಸಂಭಾವ್ಯ ತಂಡದಲ್ಲಿದ್ದರು.ಆದರೆ ಪ್ರಧಾನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಈ ವರ್ಷ ಲಭಿಸಿದ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡರು. ತಂದೆ ಉದಯ್ ಕುಮಾರ್ ಅವರ ಶಿಸ್ತಿನ ತರಬೇತಿ ಕೂಡ ಆಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ತೇಜಸ್ವಿನಿ ಇತ್ತೀಚೆಗೆ ಶೈನ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ 90 ಎಸೆತಗಳಿಂದ ಶತಕ ಬಾರಿಸಿದ್ದರು. ಇದರಲ್ಲಿ 20 ಬೌಂಡರಿ ಸೇರಿತ್ತು. ವಿವಿಧ ಪಂದ್ಯಗಳಲ್ಲಿ 350ಕ್ಕೂ ಹೆಚ್ಚು ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತೇಜಸ್ವಿನಿಯ ಆಯ್ಕೆ ಕರಾವಳಿಯ ಯುವ ಮಹಿಳಾ ಕ್ರಿಕೆಟಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಸಾಮಾನ್ಯವಾಗಿ ರಾಜ್ಯ ತಂಡಕ್ಕೆ ಬೆಂಗಳೂರು ವಲಯದ ಆಟಗಾರರು ಆಯ್ಕೆಯಾಗುವುದೇ ಹೆಚ್ಚು ಉಡುಪಿ ಜಿಲ್ಲೆಯಿಂದ ಮಹಿಳಾ ಕ್ರಿಕೆಟಿಗರೊಬ್ಬರು ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರು ಕಟಪಾಡಿಯ ಶ್ರೀಶೈಲ ಹಾಗೂ ಉದಯ್ ಕುಮಾರ್ ದಂಪತಿ ಪುತ್ರಿ.

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ - 9 ನೇ ವರ್ಷದ ಅಶ್ವತ್ಥ ಪೂಜೆ, ಸಾಮೂಹಿಕ ಗೋ ಪೂಜೆ

Thumbnail
Posted On: 14 Nov 2023, 05:37 PM

ಕಾರ್ಕಳ : ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ.) ಸೂಡ ಇವರ ವತಿಯಿಂದ ಒಂಬತ್ತನೇ ವರ್ಷದ ಅಶ್ವತ್ಥ ಪೂಜೆ, ಸಾಮೂಹಿಕ ಗೋ ಪೂಜೆಯು ಸೂಡ ಸುಬ್ರಹ್ಮಣ್ಯ ಅನುದಾನಿತ ಶಾಲಾ ಬಳಿಯ ಅಶ್ವತ್ಥ ವೃಕ್ಷದ ಬಳಿ, ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಶ್ರೀಶ ಭಟ್ ರವರ ನೇತೃತ್ವದಲ್ಲಿ ಶ್ರೀ ವಿಷ್ಣುಸಹಸ್ರನಾಮ ಮತ್ತಿತರ ಧಾರ್ಮಿಕ ಕಾರ್ಯಗಳೊಂದಿಗೆ ನೆರವೇರಿತು. ಗ್ರಾಮಸ್ಥರು ತಮ್ಮ ಗೋ ಮಾತೆಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋ ಮಾತೆಗೆ ಕಡುಬು, ಬಾಳೆ ಹಣ್ಣು, ಹಿಂಡಿ ತಿನ್ನಿಸುವುದರೊಂದಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಸೂಡ ಸರಕಾರಿ ಪ್ರೌಢ ಶಾಲಾ ಮುಂಬಾಗದ ಮೈದಾನದಲ್ಲಿ ಸಾಮೂಹಿಕ ವಾಹನ ಪೂಜೆಯನ್ನು ನೆರವೇರಿಸಲಾಯಿತು. ರಾಜೇಶ್ ಭಟ್, ವಸುಧೀಶ್ ಭಟ್, ವಿಭುಧೇಶ್ ಭಟ್ ರವರು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಸಂಘದ ಅಧ್ಯಕ್ಷರಾದ ರವಿರಾಜ್ ಕುಲಾಲ್, ಕಾರ್ಯದರ್ಶಿ ರೋಶನ್, ಮತ್ತು ಸರ್ವ ಸದಸ್ಯರು, ಜನನಿ ಮಹಿಳಾ ಮಂಡಳಿ ಸೂಡ ಇದರ ಅಧ್ಯಕ್ಷೆ ವಿದ್ಯಾಲಕ್ಷ್ಮಿ ಆರ್ ಭಟ್, ಗೌರವಾಧ್ಯಕ್ಷೆ ದೀಪಿಕಾ ಅಶೋಕ್ ಮತ್ತು ಸದಸ್ಯರು ಉಪಸ್ಥಿತರಿದ್ದರು.