Updated News From Kaup

ಉಡುಪಿ ಜಿಲ್ಲೆಯಾದ್ಯಂತ ಪಡಿತರ ಕಾರ್ಡು ತಿದ್ದುಪಡಿ, ಸ್ವೀಕೃತವಾಗದ ಗೃಹಲಕ್ಷ್ಮಿ ಅರ್ಜಿ, ತಾಂತ್ರಿಕ ಸಮಸ್ಯೆ ಸರಿಪಡಿಸಿ : ಕಾಪು ಜಯರಾಮ ಆಚಾರ್ಯ

Posted On: 13-08-2023 12:11PM

ಉಡುಪಿ : ಜಿಲ್ಲೆಯಾದ್ಯಂತ ತಿಂಗಳ ಹಿಂದೆ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡವರು, ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಇದನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ ಆಗ್ರಹಿಸಿದ್ದಾರೆ.

ಪಡಿತರ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಹೆಸರನ್ನು ಬದಲಾವಣೆ ಮಾಡಿಸಿಕೊಂಡಿರುವವರು ಮತ್ತು ಮೃತರ ಹೆಸರನ್ನು ಪಡಿತರ ಕಾರ್ಡ್ ನಿಂದ ತೆಗೆಸಿದವರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಅರ್ಜಿ ಸ್ವೀಕಾರ ಆಗುತ್ತಿಲ್ಲ.ಇದರಿಂದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಪ್ರಮುಖವಾದ ದಾಖಲೆ. ಕುಟುಂಬದ ಯಜಮಾನಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ಸಾಧ್ಯ. ಈ ಕಾರಣಕ್ಕೆ ಸಾಕಷ್ಟು ಪಡಿತರ ಚೀಟಿಗಳು ಕಳೆದ ಒಂದು ತಿಂಗಳಿಂದ ತಿದ್ದುಪಡಿಯಾಗಿವೆ. ಈ ರೀತಿ ತಿದ್ದುಪಡಿ ಆದ ಪಡಿತರ ಚೀಟಿಗಳು ಜಿಲ್ಲಾವಾರು ನೀಡಿರುವ ಅಂಕಿ ಸಂಖ್ಯೆಗಳಲ್ಲಿ ತಿದ್ದುಪಡಿಯಾಗದ ಕಾರಣ ಗೃಹಲಕ್ಷ್ಮಿ ಅರ್ಜಿಗಳು ಸ್ವೀಕ್ರತವಾಗುವುದಿಲ್ಲ ಎಂದು ನೋಂದಣಿ ಕೇಂದ್ರಗಳ ಸಿಬ್ಬಂದಿ ಹೇಳುತ್ತಿದ್ದಾರೆ.

ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ನೀಡಿರುವ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪಡಿತರ ಕಾರ್ಡ್ ತಿದ್ದುಪಡಿ ಆಗಿರುವ ಅಂಕಿ ಸಂಖ್ಯೆಗಳನ್ನು 2ನೇ ಹಂತದಲ್ಲಿ ಪಡೆದು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯವನ್ನು ಶೀಘ್ರ ಮಾಡಕೊಡಬೇಕು. ಆದಷ್ಟು ಶೀಘ್ರ ಈ ಲೋಪ ವನ್ನು ಸರಿಪಡಿಸಿ ಉಡುಪಿ ಜಿಲ್ಲೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಭಿಸುವಂತೆ ಮಾಡಬೇಕು. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ನೋಡಲ್ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಮಹಿಳೆಯರಿಗೆ ಈ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಅಖಂಡ ಭಾರತ ಸಂಕಲ್ಪ ದಿನ - ಪಂಜಿನ ಮೆರವಣಿಗೆ ಸಂಪನ್ನ

Posted On: 13-08-2023 11:55AM

ಪಡುಬಿದ್ರಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪಡುಬಿದ್ರಿ ವಲಯದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜರಗಿದ ಪಂಜಿನ ಮೆರವಣಿಗೆಗೆ ಶನಿವಾರ ಪಡುಬಿದ್ರಿ ಬೀಡು ಬಳಿಯ ಕಣ್ಣಂಗಾರು ಬ್ರಹ್ಮ ಬೈದರ್ಕಳ ಗರಡಿಯ ಮುಂಭಾಗ ಚಾಲನೆ ನೀಡಲಾಯಿತು.

ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್ ಹೆಗ್ಡೆ, ಎಲ್ಲದಡಿ ಶಿವಪ್ರಸಾದ್ ಶೆಟ್ಟಿ, ರವಿ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.

ಕಾಪು ವೃತ್ತ ಮಟ್ಟದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟ ಸಮಾರೋಪ

Posted On: 12-08-2023 06:12PM

ಕಾಪು : ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರಕಾರಿ ಸಂಯುಕ್ತ ಪ್ರೌಢ ಶಾಲೆ (ಪ್ರಾಥಮಿಕ ವಿಭಾಗ) , ಬೆಳಪು ಇವರ ಆಶ್ರಯದಲ್ಲಿ ಶನಿವಾರ ಕಾಪು ವೃತ್ತ ಮಟ್ಟದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟವು ಜರಗಿತು.

ಸಮಾರೋಪ ಸಮಾರಂಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬೆಳಪು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾಪು : ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ ಆಷಾಢ ಮಾಸದ ಆಚರಣೆ

Posted On: 12-08-2023 05:12PM

ಕಾಪು : ಶ್ರೀ ದುರ್ಗಾ ಮಹಿಳಾ ಮಂಡಳಿ ಪಡುಕುತ್ಯಾರು ಮತ್ತು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಇದರ ವತಿಯಿಂದ ಆಷಾಢ ಮಾಸದ ಆಚರಣೆಯು ಶ್ರೀ ದುರ್ಗಾ ದೇವಿ ಮಂದಿರದಲ್ಲಿ ಆಗಸ್ಟ್ 6ರಂದು ಜರಗಿತು.

ಆಷಾಢ ಮಾಸದ ಆಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಹಿಳಾ ಮಂಡಳಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಆಚಾರ್ಯರವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ತುಳುನಾಡಿನ ಸಂಸ್ಕೃತಿಯಂತೆ ವಿವಿಧ ಖಾದ್ಯಗಳಲ್ಲಿ ಔಷಧೀಯ ಗುಣಗಳು ಹೊಂದಿದ್ದು ಆರೋಗ್ಯಕ್ಕೆ ಒಳ್ಳೆಯದು, ಮಕ್ಕಳು ಈ ವಿಚಾರವನ್ನು ತಿಳಿದುಕೊಂಡು ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ ಎoದು ತಿಳಿಸಿದರು.

ಜ್ಯೋತಿ ಪಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಷಾಢ ಮಾಸದ ಆಚರಣೆಯ ಪ್ರಾಮುಖ್ಯತೆಯನ್ನು ಬಗ್ಗೆ ಹಲವಾರು ಸದಸ್ಯರು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ತಿಳಿಸಿದರು. ಸಭೆಯಲ್ಲಿ ಕೂಡುವಳಿಕೆಯ ಎಲ್ಲಾ ಸದಸ್ಯರು, ಸಂಘದ ಪದಾಧಿಕಾರಿಗಳು ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 30 ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು.

ವೇದಿಕೆಯಲ್ಲಿ ಪಡುಕುತ್ಯಾರು ಗ್ರಾಮ ಮೋಕ್ತೇಸರರು, ಸಂಘದ ಗೌರವ ಸಲಹೆಗಾರರಾದ ಪ್ರಕಾಶ ಆಚಾರ್ಯ, ಶ್ರೀ ವಿಶ್ವಕರ್ಮಸಮಾಜ ಸೇವಾ ಸಂಘದ ಅಧ್ಯಕ್ಷರಾದ ನಾಗೇಶ್ ಆರ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಕಾಪು ಜಯರಾಮ ಆಚಾರ್ಯ, ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಕಲ ಎನ್ ಆಚಾರ್ಯ, ಕಾರ್ಯದರ್ಶಿ ಸುನೀತಾ ಎಸ್ ಆಚಾರ್ಯ, ಹಿರಿಯ ಮಹಿಳಾ ಸದಸ್ಯರಾದ ಶಾರದಾ ಎಸ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ, ಶಕುಂತಲಾ ಜಿ ಆಚಾರ್ಯ ಉಪಸ್ಥಿತರಿದ್ದರು. ಸುನಿತಾ ಎಸ್ ಆಚಾರ್ಯರವರ ಸ್ವಾಗತಿಸಿದರು. ಶ್ರೀಲತಾ ಪಿ ಆಚಾರ್ಯ ವಂದಿಸಿದರು. ಸೌಮ್ಯ ಡಿ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಬೆಳಪು ವ್ಯವಸಾಯ ಸಹಕಾರಿ ಸಂಘ : ವಜ್ರ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ, ಸಹಕಾರಿ ಮಹಲ್ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 12-08-2023 04:54PM

ಬೆಳಪು : ಇಲ್ಲಿನ ವ್ಯವಸಾಯ ಸಹಕಾರಿ ಸಂಘ ಪಣಿಯೂರು ಸ್ವತಂತ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘವಾಗಿದೆ. ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ಧೇಶ ಹೊಂದಿ ಸ್ಥಾಪಿತವಾದ ಸಂಸ್ಥೆ ಇದಾಗಿದೆ. ಸಹಕಾರಿ ಸಂಘವು 4,350 ಸದಸ್ಯರನ್ನು ಹೊಂದಿದ್ದು, 50 ಕೋಟಿ ಠೇವಣಾತಿ ಹೊಂದಿ, 48 ಕೋಟಿ ರೂಪಾಯಿ ಸಾಲವನ್ನು ನೀಡಿದೆ. ಎ ಶ್ರೇಣಿಯ ಬ್ಯಾಂಕಿಂಗ್ ಮಾನ್ಯತೆ ಹೊಂದಿದ ಸಹಕಾರಿ ಸಂಘವಾಗಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘ ಪಣಿಯೂರು ಇದರ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಪಣಿಯೂರು ಸಹಕಾರಿ ಸಂಘದ ಸಭಾಂಗಣದಲ್ಲಿ ಮಾಹಿತಿ ನೀಡಿದರು.

ಅವರು ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ವಜ್ರ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಜ್ರ ಮಹೋತ್ಸವ ಸವಿ ನೆನಪಿನ ಕಟ್ಟಡ ಸಹಕಾರಿ ಮಹಲ್, ಡಾ| ಎಂ ಎನ್ ರಾಜೇಂದ್ರ ಕುಮಾರ್ ಕಾನ್ಪರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿ ಉದ್ಘಾಟನೆ, ಸಂಸ್ಥೆಯ ಆರಂಭದಿಂದ ಇಂದಿನವರೆಗಿನ ಮಾಹಿತಿಯನ್ನೊಳಗೊಂಡ ವಜ್ರದರ್ಪಣ ಸ್ಮರಣ ಸಂಚಿಕೆ ಬಿಡುಗಡೆಯು ನಡೆಯಲಿದೆ ಎಂದರು.

ಈ ಸಂದರ್ಭ ನಿರ್ದೇಶಕರುಗಳಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್ ಭಟ್, ಬಾಲಕೃಷ್ಣ ಎಸ್ ಆಚಾರ್ಯ, ಶೋಭಾ ಬಿ ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ.ಕ.ಜಿ.ಕೇ.ಸ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಉಚ್ಚಿಲ ಶಾಖಾ ಪ್ರಬಂಧಕ ನವೀನ್ ಕುಮಾರ್, ಸತೀಶ್ ಗುಡ್ಡೆಚ್ಚಿ ಉಪಸ್ಥಿತರಿದ್ದರು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಿ.ಎಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Posted On: 11-08-2023 06:40PM

ಕಾರ್ಕಳ : ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್‌ ಮಂಜುನಾಥ ಭಟ್‌, ಶ್ರೀಯಾ ಕೆ ಎಸ್‌, ಶ್ರಾವ್ಯ ಭಟ್‌ ಎಸ್‌, ಪ್ರಣೀತಾ, ಧನುಷ್‌ ಡಿ ಡಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್‌ ಮತ್ತು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಸಂಯೋಜಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಪಡುಬಿದ್ರಿ : ತ್ಯಾಜ್ಯ ಸಮಸ್ಯೆ - ಪಡುಬಿದ್ರಿ ಗ್ರಾಪಂ ಎದುರು ಕಾಂಗ್ರೆಸ್‌ ಪ್ರತಿಭಟನೆ

Posted On: 11-08-2023 06:33PM

ಪಡುಬಿದ್ರಿ: ಕಾಂಗ್ರೆಸ್ ಸ್ಥಾನೀಯ ಸಮಿತಿಯು ತನ್ನ ಸ್ಥಳೀಯ ನಾಯಕರು, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರ ಬೆಂಬಲದೊಂದಿಗೆ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸುವಂತೆ, ಮುಂದೆ ಎಂದೂ ಗ್ರಾ. ಪಂ. ಆವರಣದಲ್ಲಿ ತ್ಯಾಜ್ಯಗಳ ರಾಶಿಯನ್ನು ಪರಿಸರ ಮಾಲಿನ್ಯವಾಗುವ ರೀತಿಯಲ್ಲಿ ಪೇರಿಸಿಡಕೂಡದೆಂಬಂತೆ ಪ್ರತಿಭಟನೆಯನ್ನು ಶುಕ್ರವಾರದಂದು ಹಮ್ಮಿಕೊಂಡಿತ್ತು.

ಪಡುಬಿದ್ರಿ ಗ್ರಾ. ಪಂ. ಆವರಣದಲ್ಲಿನ ತ್ಯಾಜ್ಯ ಮುಕ್ತಿಗಾಗಿ ಕಾಂಗ್ರೆಸ್ ಪ್ರತಿಭಟನೆಯ ಕಾವನ್ನರಿತ ಬಿಜೆಪಿ ಬೆಂಬಲಿತ ಪಡುಬಿದ್ರಿ ಗ್ರಾ. ಪಂ. ಆಡಳಿತವು ಬೆಳ್ಳಂಬೆಳಿಗ್ಗಿನಿಂದಲೇ ಪಂಚಾಯತ್ ಎದುರಿನ ತ್ಯಾಜ್ಯಗಳನ್ನು ತೆರವುಗೊಳಿಸಲು ಮುಂದಾಯಿತು.

ಆಗ ಕಾಂಗ್ರೆಸ್ ನಾಯಕರೂ ಪ್ರತಿಭಟನೆಯನ್ನು ಸೌಮ್ಯಗೊಳಿಸಿ ಮುಂದೆ ಪಡುಬಿದ್ರಿಯ ನಾಗರಿಕರಿಗೆ ಅನ್ಯಾಯವಾಗುವಂತೆ ಕಸದ ರಾಶಿಯನ್ನು ಪಂಚಾಯತ್ ಮುಂದೆ ಹಾಕಕೂಡದು. ಆದರೂ ಅದೇ ಚಾಳಿಯನ್ನು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್‌ಗೆ ಬೀಗ ಜಡಿದು ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ಮನವಿಯೊಂದನ್ನು ಸ್ಥಳಕ್ಕಾಗಮಿಸಿದ ಕಾಪು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹಾಗೂ ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಅವರಿಗೆ ಸಲ್ಲಿಸಿದರು.

ಪಡುಬಿದ್ರಿ ಗ್ರಾ. ಪಂ. ತನ್ನ ತ್ಯಾಜ್ಯ ವಿಲೇವಾರಿಗಾಗಿ 15ಲಕ್ಷ ರೂ. ಅಂದಾಜು ಮೌಲ್ಯದ ಸ್ಕ್ರಬ್ಬರ್ ಯಂತ್ರವನ್ನು ಶೀಘ್ರವೇ ಅಳವಡಿಸಿಕೊಳ್ಳಲಿದೆ ಎಂದೂ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಕಾಂಗ್ರೆಸ್ ಧುರೀಣರಿಗೆ ಆಶ್ವಾಸನೆಯನ್ನಿತ್ತರು. ಪಡುಬಿದ್ರಿ ಗ್ರಾ. ಪಂ. ಧರಣಿಯ ವೇಳೆ ಕೆಪಿಸಿಸಿ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ವೈ. ಸುಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಝ್ ಹುಸೈನ್, ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ, ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಮಹಿಳಾ ಘಟಕಾಧ್ಯಕ್ಷೆ ಸುಚರಿತಾ ಅಮೀನ್, ನವೀನ್ ಎನ್. ಶೆಟ್ಟಿ, ಮಾಜಿ ಗ್ರಾ. ಪಂ. ಅಧ್ಯಕ್ಷೆ ಸಂಜೀವಿ ಪೂಜಾರ್ತಿ, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಜತೆಗಿದ್ದರು.

ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ

Posted On: 09-08-2023 09:40PM

ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ ಸಂಪನ್ನಗೊಂಡಿತು. ಮಾತೃ ವಂದನಾ ಕಾರ್ಯಕ್ರಮವನ್ನು ಪುರೋಹಿತರಾದ ಮೌನೇಶ್ ಶರ್ಮ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ, ವಿಧಾನಗಳಿಂದ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ಕುಮಾರ್ ಬೆಳ್ಳೂರು ವಹಿಸಿದ್ದರು. ಮಾತೃ ವಂದನಾ ಕಾರ್ಯಕ್ರಮದ ಮಹತ್ವವನ್ನು ಲೋಲಾಕ್ಷರವರು ಸಮರ್ಪಕವಾಗಿ ತಿಳಿಸಿದರು. ಶಾಲಾ ತ್ರೈಮಾಸಿಕ ಚೊಚ್ಚಲ ಪತ್ರಿಕೆ ಚೈತನ್ಯವಾಣಿಯನ್ನು ಬಿಡುಗಡೆ ಗೊಳಿಸಲಾಯಿತು. ತ್ರೈಮಾಸಿಕ ಪತ್ರಿಕೆಯ ಮಹತ್ವವನ್ನು ರಮ್ಯಾ ತಿಳಿಸಿದರು.

ಸಂಸ್ಥೆಯ ಗೌರವಾಧ್ಯಕ್ಷರಾದ ಶಂಭುದಾಸ್ ಗುರೂಜಿ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕೋಶಾಧಿಕಾರಿ ಸೂರ್ಯ ಕುಮಾರ್, ಕಾರ್ಯದರ್ಶಿಯಾದ ಗುರುರಾಜ್ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ್ ಆಚಾರ್ಯ, ಮಾತೃ ಮಂಡಳಿಯ ಅಧ್ಯಕ್ಷರಾದ ಲತಾ ಸಂತೋಷ್ ಮತ್ತು ಪದಾಧಿಕಾರಿಗಳು, ಶಿಕ್ಷಕರು, ಮಾತೆಯರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಭಾಗಿಯಾಗಿದ್ದರು.

ಪ್ರಾಂಶುಪಾಲೆ ಸಂಗೀತಾ ಸ್ವಾಗತಿಸಿದರು. ಸುಧೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಶೇಟ್ ವಂದಿಸಿದರು.

ಆಗಸ್ಟ್ 11 : ಕಾಪುವಿನ ರಾಣ್ಯಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Posted On: 09-08-2023 09:34PM

ಕಾಪು : ಇಲ್ಲಿನ ರಾಣ್ಯಕೇರಿ ಅಂಗನವಾಡಿ ಹತ್ತಿರ ಮಾರಿಗುಡಿ ಹಾಲ್ ನಲ್ಲಿ ಆಗಸ್ಟ್ 11, ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ (ಬಿಪಿ, ಶುಗರ್, ಮೂತ್ರ, ಪ್ರೊಟೀನ್ ಮತ್ತು ಕಿಡ್ನಿ ಪರೀಕ್ಷೆ) ಜರಗಲಿದೆ.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಗೌರವ ಸಲಹೆಗಾರರಾಗಿ ಫಾರೂಕ್ ಚಂದ್ರನಗರ ಆಯ್ಕೆ

Posted On: 09-08-2023 10:45AM

ಕಾಪು : ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಇದರ ಗೌರವ ಸಲಹೆಗಾರರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ.