Updated News From Kaup
ಬಂಟಕಲ್ಲು : ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

Posted On: 26-08-2023 08:10PM
ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 10ನೇ ಪದವಿ ಪ್ರದಾನ ಸಮಾರಂಭವು ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ಉಡುಪಿ ಕಾಣಿಯೂರು ಮಠದ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಸದ್ಗುಣವಂತ ಪದವೀಧರರು ಸಮಾಜದ ನಿಜವಾದ ಆಸ್ತಿ. ಜೀವನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಾಳಿ ನೈತಿಕತೆ ಮತ್ತು ಉತ್ತಮ ಚಾರಿತ್ರ್ಯ ವನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನ -3ರ ಸಫಲತೆಯನ್ನು ಉಲ್ಲೇಖಿಸಿ ಈ ಸಂಸ್ಥೆಯ ಪದವೀಧರರು ಇಸ್ರೋದ ವಿಜ್ಞಾನಿಗಳಂತೆ ಆವಿಷ್ಕಾರ ಹಾಗೂ ಸಾಧನೆಗಳನ್ನು ಮಾಡಲಿ ಎಂದು ಆಶೀರ್ವದಿಸಿದರು. ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲರ್ಸ್ ಪ್ರಶಾಂತ್ ಶೇಟ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅನ್ವಿತಾ, ಗಣಕಯಂತ್ರ ವಿಭಾಗದ ವೈಷ್ಣವಿ ಡಿ, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಕ್ಷತಾ ಅನಿಲ್ ಕುಮಾರ್ ರೆಂಜಾಲ್ ಮತ್ತು ಮೆಕ್ಯಾನಿಕಲ್ ವಿಭಾಗದ ರತನ್ ಪಾಟ್ಕರ್ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.
ಈ ಸಮಾರಂಭದಲ್ಲಿ ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೆರಾಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಸಮಾರಂಭದ ವಿಶೇಷ ಉಪನ್ಯಾಸ ನೀಡಿದರು. ಮಂಗಳೂರಿನ ಕಂಬಳ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸೋಮನಾಥ ಜೋಗಿ ಇವರು ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀರತ್ನಕುಮಾರ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುಧೀರ್ ಅವರು ಸ್ವಾಮಿಜಿಯವರನ್ನು ಪರಿಚಯಿಸಿದರು. ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು.
ಡಾ. ಸುದರ್ಶನ್ ರಾವ್ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಪಡೆದವರ ಹೆಸರನ್ನು ಹಾಗೂ ವಿಭಾಗ ಮುಖ್ಯಸ್ಥರು ಪದವೀಧರರ ಹೆಸರನ್ನು ಘೋಷಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವೀಂದ್ರ ಹೆಚ್ ಜೆ ವಂದಿಸಿದರು. ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಲಹರಿ ವೈದ್ಯ ಮತ್ತು ಪೂಜಶ್ರೀ ನಿರೂಪಿಸಿದರು.
ಸೆಪ್ಟೆಂಬರ್ 2 : ಬೆಳಪು ಸಹಕಾರಿ ಸಂಘದ ಅಮೃತ ಮಹೋತ್ಸವ ; ಸಹಕಾರಿ ಮಹಲ್ ಉದ್ಘಾಟನೆ

Posted On: 26-08-2023 05:38PM
ಉಚ್ಚಿಲ : ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಈಗಾಗಲೇ 5 ಶಾಖೆಗಳನ್ನು ಹೊಂದಿದ್ದು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದೆ. ಈ ನಿಮಿತ್ತ ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ಅಮೃತ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭ ಮತ್ತು ಸಹಕಾರಿ ರಂಗದ ಅಗ್ರಗಣ್ಯ ನಾಯಕ ಡಾ| ಎಂ.ಎನ್. ಆರ್ ರವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅವರು ಬೆಳಪು ಪಣಿಯೂರು ಸಹಕಾರಿ ಸಂಘದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಉಚಿಲದಲ್ಲಿ, ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಫರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿಯು ಸೆ. 2ರಂದು, ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‌ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ.
ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಸಹಕಾರಿ ಮಹಲ್‌ನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ|ಎಂ.ಎನ್.ಆರ್ ಕಾನ್ಫರೆನ್ಸ್ ಹಾಲ್‌ನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ನಬಾರ್ಡ್ ಡಿಡಿಎಂ ಸಂಗೀತಾ ಎಸ್ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ದ.ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾ. ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಬಾರ್ಡ್ ಸಹಭಾಗಿತ್ವದಲ್ಲಿ ಸುಮಾರು 3.70 ಕೋಟಿ ವೆಚ್ಚದಲ್ಲಿ, ನಿರ್ಮಾಣಗೊಂಡಿರುವ ಸಹಕಾರಿ ಮಹಲ್ ಬೆಳಪು ವ್ಯವಸಾಯ ಸಹಕಾರಿ ಸಂಘದ ಕೀರ್ತಿಯನ್ನು ಹೆಚ್ಚಿಸಲಿದೆ. ಸದ್ರಿ ಮಹಲ್‌ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗ್ರಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪನೆಗೊಳ್ಳಲಿದ್ದು ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನ ಮಂತ್ರಿ ಜನೌಷಧಾಲಯ ಪ್ರಾರಂಭಗೊಳ್ಳಲಿದೆ ಎಂದರು.
ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿ ಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ, ಎಸ್. ಆಚಾರ್ಯ, ಶೋಭಾ ಬಿ, ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾಪು : ಕೊಪ್ಪಲಂಗಡಿಯಲ್ಲಿ ನೈಟ್ರೋಜನ್ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಳ ; ಸಾರ್ವಜನಿಕರಲ್ಲಿ ಆತಂಕ

Posted On: 26-08-2023 11:18AM
ಕಾಪು : ಇಲ್ಲಿನ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಳ್ಳಾರಿಯ ಹೊಸಪೇಟೆಯಿಂದ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ ಸಾಗಿಸುತ್ತಿದ್ದ ನೈಟ್ರೋಜನ್ ಅನಿಲ ಟ್ಯಾಂಕರ್ ನಲ್ಲಿ ಒತ್ತಡ ಹೆಚ್ಚಾದ ಪರಿಣಾಮ ಅದರ ಚಾಲಕರು ನೈಟ್ರೋಜನ್ ಬಿಡುಗಡೆಗೊಳಿಸಿದ ಘಟನೆ ಶನಿವಾರ ಬೆಳಗ್ಗೆ ಘಟಿಸಿದೆ.
ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹಾಗೂ ಸ್ಥಳೀಯರು ಆತಂಕಿತರಾಗಿದ್ದು ಕಂಡು ಬಂದಿದೆ.
ಈ ಮಧ್ಯೆ ಪತ್ರಕರ್ತರು ಟ್ಯಾಂಕರ್ ಚಾಲಕರಲ್ಲಿ ವಿಚಾರಿಸಿದಾಗ ಜನರು ಆತಂಕ ಪಡುವ ವಿಷಯ ಏನಿಲ್ಲ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ನೈಟ್ರೋಜನ್ ನ ಒತ್ತಡ ಹೆಚ್ಚಾದ ಪರಿಣಾಮ ನಾವು ಅದನ್ನು ಸ್ವಲ್ಪ ಮಟ್ಟಿಗೆ ಬಿಡುಗಡೆಗೊಳಿಸುತ್ತಿದ್ದೇವೆ ಎಂದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ “ಕೆಸರ್ಡೊಂಜಿ ದಿನ” : ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ

Posted On: 26-08-2023 07:26AM
ಕಾರ್ಕಳ : ಇಲ್ಲಿನ ಹಿರ್ಗಾನ ಗ್ರಾಮದಲ್ಲಿರುವ ʼಬೆಂಗಾಲ್ʼ ಕೃಷಿ ಭೂಮಿಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನದೊಂದಿಗೆ ಕೆಸರಿನಲ್ಲಿ ಜೀವನದ ಕಲಿಕೆ ಮತ್ತು ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ ʼಕೈಕೆಸರಾದರೆ ಬಾಯಿ ಮೊಸರುʼ ಎಂಬ ಮಾತಿನಂತೆ ಇಂದು ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಒಬ್ಬ ಕೃಷಿಕ ಪಡುವ ಕಷ್ಟ, ಬೆಳೆ ಬೆಳೆದು ರೈತನ ಕೈ ಸೇರಬೇಕಾದರೆ ತುಂಬಾ ದಿನಗಳು ಬೇಕಾಗುತ್ತದೆ. ಆಧುನಿಕತೆಯ ಭರಾಟೆಯ ಮಧ್ಯೆ ನಾವು ನಮ್ಮ ಮೂಲ ಕಸುಬಾದ ಕೃಷಿ, ಉಳುಮೆಯನ್ನೇ ಮರೆಯುತ್ತಿದ್ದೇವೆ. ಮುಂದೊಂದು ದಿನ ಆಹಾರದ ಕೊರತೆ ಉಂಟಾಗುವ ಸಂದರ್ಭ ಎದುರಾಗಬಹುದು ಅದಕ್ಕಾಗಿ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ಕೆಸರಿನಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ನುಡಿದರು. ಸಂಸ್ಥಾಪಕರಲ್ಲಿ ಒಬ್ಬರಾದ ಅಮೃತ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿಪರ ಕೃಷಿಕ ಜಗದೀಶ್ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು.
ಕುಮಾರಿ ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಕುಮಾರಿ ಸಾನ್ವಿ ರಾವ್ ನಿರೂಪಿಸಿ ವಂದಿಸಿದರು. ನಂತರ ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಣೆ ನಡೆಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಠ್ಠಲ್ ಕುಲಾಲ್, ಗೋಕುಲ್ ದಾಸ್ ವಾಗ್ಳೆಯವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭ : ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ ಯೋಗೀಶ್ ಕಿಣಿಯವರು ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು ಹಾಗೂ ಪತ್ರಕರ್ತ ರಾಮ್ ಅಜೆಕಾರ್ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ರವರು ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಂಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಎಂದು ಹಾರೈಸಿದರು. ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡುತ್ತಾ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್ ರೈ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು, ರಾಘವೇಂದ್ರ ರಾವ್ ಸ್ವಾಗತಿಸಿದರು, ಉಮೇಶ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಕಾಂತ ಆಚಾರ್ಯ ವಂದಿಸಿದರು.
ಮುದರಂಗಡಿ ಅಂಗನವಾಡಿ ಎದುರು ಅಪಾಯಕಾರಿ ಸ್ಥಿತಿಯಲ್ಲಿ ಮರಗಳು ; ಅರಣ್ಯ ಇಲಾಖೆಯ ವಿಳಂಬ ನೀತಿ ; ಶೀಘ್ರ ತೆರವಿಗೆ ಆಗ್ರಹ

Posted On: 26-08-2023 07:02AM
ಕಾಪು : ತಾಲೂಕಿನ ಮದರಂಗಡಿ ಗ್ರಾಮ ಪಂಚಾಯಿತಿಯ ಸಾಂತೂರು ಗ್ರಾಮದ ಚರ್ಚ್ ಎದುರಿರುವ ಅಂಗನವಾಡಿಯ ಎದುರು ನಾಲ್ಕು ಬೃಹತ್ ಮರಗಳಿದ್ದು, ಮರ ತೆರವುಗೊಳಿಸಲು ಅರಣ್ಯ ಇಲಾಖೆ ವಿಳಂಬವಹಿಸುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.
ಇಪ್ಪತ್ತಕ್ಕೂ ಅಧಿಕ ಮಕ್ಕಳಿದ್ದ ಅಂಗನವಾಡಿಯಲ್ಲಿ ಈಗ ಕೇವಲ 10 ಮಕ್ಕಳು ಮಾತ್ರ ಇದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಹಲವಾರು ಬಾರಿ ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಅರಣ್ಯ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕೆಲಸ ಬಾಕಿ ಉಳಿದಿದೆ. ಗಾಳಿ, ಮಳೆಗೆ ಯಾವ ಹೊತ್ತಿನಲ್ಲೂ ಮರ ಅಂಗನವಾಡಿ ಕೇಂದ್ರದ ಮೇಲೆ ಉರುಳಿ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಶರತ್ ಶೆಟ್ಟಿ ಹಾಗೂ ಶಿವರಾಮ್ ಭಂಡಾರಿ ಅವರು ಆಕ್ರೋಶಿತರಾಗಿ ಮಾತನಾಡಿದ್ದಾರೆ. ಮುದರಂಗಡಿ ಗ್ರಾಮ ಪಂಚಾಯತ್ ಪಿಡಿಓ ಮುತ್ತುರವರು ಪ್ರತಿಕ್ರಿಯಿಸಿ, ಈಗಾಗಲೇ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅವರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದರು. ಅಂಗನವಾಡಿಯಲ್ಲಿರುವ ಮಕ್ಕಳ ಪಾಲಕರು ಶೀಘ್ರ ಮರ ತೆರವಿಗೆ ಆಗ್ರಹಿಸಿದ್ದಾರೆ.
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಶಿರ್ವ ಶಾಖೆಯಿಂದ ವಿಶೇಷ ಶಾಲೆಗೆ ಅಗತ್ಯ ವಸ್ತುಗಳ ವಿತರಣೆ

Posted On: 25-08-2023 09:51PM
ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸ ವಿಶೇಷ ಶಾಲೆ ಪಾಂಬೂರು ಇಲ್ಲಿನ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ನ್ಯಾಯವಾದಿ ಮೆಲ್ವಿನ್ ಡಿಸೋಜ, ಸಮಾಜ ಸೇವಕರಾದ ಹಸನ್ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಶಾಂತ್ ಜತ್ತನ್ನ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಮುಗ್ಧ ಮಕ್ಕಳಿಗೆ ಉಡುಗೊರೆ ನೀಡುವ ಮೂಲಕ ದೇವರ ಮೆಚ್ಚುಗೆಗೆ ಪಾತ್ರವೆಂದು ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಮೆಲ್ವಿನ್ ಡಿಸೋಜ ಮಾತನಾಡಿ ಶಿರ್ವ ಶಾಖೆಯ ಜನಸ್ನೇಹಿ ಸೇವೆಯನ್ನು ಸ್ಮರಿಸುತ್ತಾ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಸಂಸ್ಥೆಯಿಂದ ನಡೆಯಲಿ ಎಂದು ಆಶಿಸಿದರು.
ಈ ವೇಳೆ ಶಾಲಾ ಪ್ರಾಂಶುಪಾಲೆ ಸಿ| ಅನ್ಸಿಲ್ಲಾ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಶಿರ್ವ ಶಾಖೆಯ ತೃಪ್ತಿ, ಹರ್ಷಿತಾ, ಬೆಸ್ಸಿ, ಮನೀಶ್ ರವರು ಸಹಕರಿಸಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮೆನೆಜಸ್ ಸ್ವಾಗತಿಸಿದರು. ಶಾಖಾ ಪ್ರಬಂಧಕಿ ಪ್ರಮೀಳಾ ಲೋಬೋ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾನಸ ಸಂಸ್ಥೆಯ ಶಿಕ್ಷಕಿ ಶಶಿಕಲ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸಹಾಯಕ ವ್ಯವಸ್ಥಾಪಕರಾದ ವಿಲ್ಸನ್ ಪ್ರಿತೇಶ್ ವಂದಿಸಿದರು.
ಆಗಸ್ಟ್ 27: ಪೆರ್ಡೂರು ಕುಲಾಲ ಸಂಘದಲ್ಲಿ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ, ಕುಂಭ ಕಲಾ ಸಂಭ್ರಮ

Posted On: 25-08-2023 09:32PM
ಪೆರ್ಡೂರು : ತಾಲೂಕಿನ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಮುದಾಯ ಭವನದಲ್ಲಿ ಆಗಸ್ಟ್ ತಿಂಗಳ 27 ರಂದು 15 ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಕುಂಭ ಕಲಾ ಸಂಭ್ರಮ -2023 ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ

Posted On: 25-08-2023 04:36PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ದೇವಳದ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆ ಶುಕ್ರವಾರ ಸಂಪನ್ನಗೊಂಡಿತು.
ವೇದಮೂರ್ತಿ ಶ್ರೀ ಕೆ ವಿ ರಾಘವೇಂದ್ರ ಉಪಾಧ್ಯಾಯ, ಕೆ ವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ, ವೇದ ಮೂರ್ತಿ ಶ್ರೀಶ ಭಟ್‌ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಾಜನ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ ಬೋಳೂರು, ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಚಂದಮಾಮನ ಬಳಿ ಭಾರತ - ಚಂದ್ರಯಾನ

Posted On: 25-08-2023 07:21AM
ಚಂದ್ರನ ದಕ್ಷಿಣ ದ್ರುವಕ್ಕೆ ಕಾಲಿಟ್ಟ ಜಗತ್ತಿನ ಏಕೈಕ ದೇಶ ನಮ್ಮ ಭಾರತ 'ಚಂದ್ರಯಾನ 3 ಅತ್ಯಂತ ಯಶಸ್ವಿಯಾಗಿದೆ. ಬಹು ನಿರೀಕ್ಷಿತ ವಿಕ್ರಂ ಲ್ಯಾoಡರ್ ಚಂದ್ರನ ನೆಲದಲ್ಲಿ ಲ್ಯಾಂಡ್ ಆಗುದ ರೊಂದಿಗೆ ಈ ಸಾಧನೆ ಮಾಡಿದೆ. 2008ರ ಪ್ರಥಮ ಚಂದ್ರಯಾನ ಮಿಶನ್ನಲ್ಲಿ ಭಾರತ ಸೋತರೂ ಚಂದ್ರನಲ್ಲಿ ನೀರಿದೆ ಎನ್ನುವುದನ್ನು ಪತ್ತೆ ಹಚ್ಚಿ ಅದನ್ನು ಜಗತ್ತಿಗೆ ಸಾರಿದೆ. ಅಲ್ಲಿಂದೀಚೆಗೆ ಭಾರತ ಸದ್ದಿಲ್ಲದೇ ಮಾತು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅಮೇರಿಕಾ ದೇಶವು ಭಾರತ ಇನ್ನು ಕಣ್ಣು ಬಿಡುವ ಮುಂಚೆಯೇ ಚಂದ್ರನ ಮೇಲೆ ಕಾಲಿಟ್ಟ ದೇಶವಾಗಿತ್ತು. ಐವತ್ತು ವರ್ಷಗಳ ನಂತರ ಭಾರತ ಅಮೇರಿಕಾ ದೇಶವನ್ನೂ ಹಿಂದಿಕ್ಕುವ ಪ್ರಮುಖ ಪ್ರತಿ ಸ್ಪರ್ಧಿಯಾಗಿ ಹೊರಹೊಮ್ಮಿದೆ.
ಪ್ರಯತ್ನ ಗೆದ್ದಿತು : ಚಂದ್ರಯಾನ 2 ರಲ್ಲಿ ಸೋಲು ಉಂಟಾದರೂ ಎದೆಗುಂದದೆ ರಾತ್ರಿ ಹಗಲೆನ್ನದೆ ಸತತ ಪ್ರಯತ್ನದ ಕಾಯ೯ ಮಾಡಿದ ನಮ್ಮ ವಿಜ್ಞಾನಿಗಳು ಅಭಿನಂದನಾಹ೯ರು. ಅಮೇರಿಕಾ 50 ವರ್ಷದ ನಂತರ ಮತ್ತೆ ಚಂದ್ರನ ಮೇಲೆ ತನ್ನ ಜನರನ್ನು ಕಳಿಸಲು ಹವಣಿಸುತ್ತಿದೆ. ಚೀನಾ ಮತ್ತು ರಷ್ಯಾ ಕೂಡ ಸ್ಪರ್ಧೆಗೆ ಬಿದ್ದವರಂತೆ ಪ್ರಯತ್ನವನ್ನು ಪಡುತ್ತಿದ್ದಾರೆ. ಇಲ್ಲಿಯವರೆಗೆ 11 ದೇಶಗಳು ಚಂದ್ರನ ಮೇಲೆ ತಮ್ಮ ನೌಕೆಗಳನ್ನು ಕಳುಹಿಸಿದ್ದಾರೆ. ರಷ್ಯಾ ಇಲ್ಲಿಯವರೆಗೆ 23 ಮಿಷನ್ ಮುಗಿಸಿದೆ. ಮೊನ್ನೆ ವಿಫಲವಾದದ್ದು ದೊಡ್ಡ ಸುದ್ದಿಯಾಯ್ತು . ಆದರೆ ಈಗಾಗಲೇ ಅಮೇರಿಕಾ 32, ರಷ್ಯಾ 23 ಮತ್ತು ಚೀನಾ 7 ಬಾರಿ ತಮ್ಮ ಮಿಷನ್ ಗಳಲ್ಲಿ ಯಶಸ್ಸನ್ನು ಕಂಡಿದೆ. ಆದರೆ ಒಂದು ಅಂಶವನ್ನು ಗಮನಿಸಬೇಕಾಗುತ್ತದೆ. ಅವೆಲ್ಲವೂ ಚಂದ್ರನ ಇತರ ಭಾಗಗಳಲ್ಲಿ ಇಳಿದಿವೆ. ಭಾರತದ ಈ ಸಾಧನೆಯಲ್ಲಿ ನಮ್ಮ ಕೇಂದ್ರ ಸಕಾ೯ರದ ಉತ್ತಮ ಬೆಂಬಲ ವಿಜ್ಞಾನಿಗಳ ಅವಿರತ ಶ್ರಮ ಮುಖ್ಯವಾದದ್ದು, ಕೆಲವರು ಈ ಸಾಧನೆಯನ್ನು ಟೀಕಿಸಿ ಗೇಲಿ ಮಾಡಿದರೂ ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ಮೂಲಕ ಇಸ್ರೋ ಸಂಸ್ಥೆ ಜಗತ್ತಿನಲ್ಲಿ ಗುರುತಿಸಿಕೊಂಡಿದೆ.
ಚಂದ್ರಯಾನದಿಂದ ನಮಗೆ ಸಿಗುವ ಸೌಲಭ್ಯ : ಚಂದ್ರನ ಮೇಲೆ ಯಥೇಚ್ಛವಾಗಿ ಬಿಲ್ಡಿಂಗ್ ಮೆಟೀರಿಯಲ್ಸ್, ನೀರು, ಆಮ್ಲಜನಕಳು ಸಿಗುತ್ತವೆ. ಅವುಗಳಲ್ಲಿ ಬಹಳಷ್ಟು ಬಳಸುವುದಕ್ಕೆ ಮುಂಚೆ ಪ್ರೋಸೆಸ್ ಮಾಡುವ ಅವಶ್ಯಕತೆಯಿದೆ. ಚಂದ್ರನ ಮೇಲಿರುವ ಹಿಮವು ಚಂದ್ರನ ಮೇಲೆ ಜೀವರಾಶಿಯನ್ನು ಬೆಳೆಸಲು , ಅಲ್ಲೊಂದು ವಸಹಾತು ಕಟ್ಟಲು, ಲಾಭದಾಯಕ ಲೂನಾರ್ ಎಕಾನಮಿ ಕಟ್ಟಲು ಬಹಳಷ್ಟು ಸಹಾಯವನ್ನು ಮಾಡಲಿದೆ. ಹೀಲಿಯಂ-3 ಚಂದ್ರನಲ್ಲಿ ಹೇರಳವಾಗಿ ಸಿಗುತ್ತದೆ. ಆದರೆ ಇದು ಭೂಮಿಯ ಮೇಲೆ ಅಷ್ಟಾಗಿ ಸಿಗುವುದಿಲ್ಲ. ಮುಂಬರುವ ದಿನಗಳಲ್ಲಿ ನ್ಯೂಕ್ಲಿಯರ್ ಫ್ಯೂಶನ್ ರಿಯಾಕ್ಟರ್ ಗೆ ಬೇಕಾಗುವ ಇಂಧನವನ್ನು ತಯಾರು ಮಾಡಲು ಈ ಹೀಲಿಯಂ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಜಗತ್ತಿಗೆ ಮುಂದಿನ ದಿನದಲ್ಲಿ ಬೇಕಾಗುವ ಎನರ್ಜಿ ಉತ್ಪತ್ತಿಯಾಗುವುದು ನ್ಯೂಕ್ಲಿಯರ್ ಎನರ್ಜಿಯಿಂದ ಎನ್ನುವುದು ಇಂದಿಗೆ ಎಲ್ಲರಿಗೂ ಗೊತ್ತಿರುವ ವಿಷಯ. ಹೀಲಿಯಂ ಸಹಿತ ಇನ್ನಿತರ ಸಂಪನ್ಮೂಲಗಳನ್ನು ಚಂದ್ರನ ಮೇಲೆ ಗಣಿಗಾರಿಕೆ ಮಾಡುವುದರ ಮೂಲಕ ನಾವು ಪಡೆದುಕೊಳ್ಳಬಹುದು. ಇದರಿಂದ ಭೂಮಿಯ ಮೇಲಿನ ಜನರ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸಬಹುದು. ಹೊಸ ತಂತ್ರಜ್ಞಾನದ ಸಹಾಯದಿಂದ ಚಂದ್ರನ ಮೇಲಿನ ಗಣಿಗಾರಿಕೆ ಅತಿ ಶೀಘ್ರದಲ್ಲಿ ಶುರುವಾಗುತ್ತದೆ. ಒಂದು ಕೇಜಿ ಹೀಲಿಯಂ ಉತ್ಪಾದನೆ ಮಾಡಿದರೆ ಭೂಮಿಯ ಮೇಲೆ ಸಂಪತ್ತು 3 ಮಿಲಿಯನ್ ಡಾಲರ್ ಹೆಚ್ಚಾದಂತೆ ! ರೇರ್ ಅರ್ಥ್ ಮೆಟಲ್ಸ್ ಗಳು ಇಂದಿನ ಎಲ್ಲಾ ಎಲೆಕ್ಟ್ರಾನಿಕ್ಸ್ , ಬ್ಯಾಟರಿಗಳು , ಎಲೆಕ್ಟ್ರಿಕ್ ಮೋಟರ್ಸ್ ಒಟ್ಟಾರೆ ಇಂದಿನ ಜೀವನಕ್ಕೆ ಬೇಕಾದ ಮುಕ್ಕಾಲು ಪಾಲು ಎಲ್ಲಾ ಪದಾರ್ಥಗಳಲ್ಲಿ ಬಳಕೆಯಾಗುತ್ತದೆ. ಚಂದ್ರನಲ್ಲಿ ದೊರೆಯಬಹುದಾದ ಸಂಭಾವ್ಯ ಸಂಪನ್ಮೂಲಗಳನ್ನು , ಭೂಮಿಯ ಮೇಲಿನ ಗಣಿಗಾರಿಕೆಗಿಂತ ಕಡಿಮೆ ವೆಚ್ಚದಲ್ಲಿ ಮಾಡಬಹುದು ಎನ್ನುವ ಅಂದಾಜು , ಅಮೇರಿಕಾ , ರಷ್ಯಾ , ಚೀನಾ ಮತ್ತು ಭಾರತಕ್ಕೆ ಆಗಲೇ ಸಿಕ್ಕಿದೆ. ಈ ನಿಟ್ಟಿನಲ್ಲಿ ಸಹ ಚಂದ್ರಯಾನ ಭಾರತಕ್ಕೆ ಭಾಗ್ಯದ ಬಾಗಿಲಾಗುವ ಸಾಧ್ಯತೆಯಿದೆ.
ಡೇಟಾ ಮೈನಿಂಗ್ : ಇವತ್ತು ಮಾಹಿತಿ ಹಣಕ್ಕಿಂತ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆ. ಭಾರತ , ಚಂದ್ರನ ಮೇಲೆ ನೀರಿದೆ ಎಂದು ಹೇಳಿದ ಪ್ರಥಮ ರಾಷ್ಟ್ರ , ಇಂದಿಗೆ ಭಾರತ , ಜಗತ್ತಿನ ಅತಿರಥ ಮಹಾರಥ ದೇಶಗಳಿಗೆ ಸೆಡ್ಡು ಹೊಡೆದು ನಿಲ್ಲುವ ಮಟ್ಟಕ್ಕೆ ಬೆಳದಿದೆ. ನಾವು ಮೊದಲಿಗರಾದರೆ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಬಳಿ ಹೆಚ್ಚಿನ ಮಾಹಿತಿ ದೊರಕುತ್ತದೆ. ಇವತ್ತು ಡೇಟಾ ಇದ್ದವರೆ ಅಧಿಪತಿಗಳು. ಅಲ್ಲಿ ನೆಲೆ ನಿಲ್ಲಲು ಬೇಕಾಗುವ ಕಟ್ಟಡಗಳನ್ನು ಕಟ್ಟಲು , ಮೂನ್ ಕ್ವೆಕ್ , ನೆಲದ ಸ್ಟಬಿಲಿಟಿ , ರೇಡಿಯೇಷನ್ ಬ್ಲಾಸ್ಟ್ಸ್ , ಎಲೆಕ್ಟ್ರೋಮ್ಯಾಗ್ನಟಿಕ್ ಇಂಟರ್ಫೆರೆನ್ಸ್ , ಹೀಗೆ ಇವುಗಳಲ್ಲೆವೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ನಮಗಿನ್ನೂ ಗೊತ್ತಿಲ್ಲ. ಇವುಗಳೆಲ್ಲವನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಯಾರು ಮೊದಲು ಟಾಲಾ ಊರುತ್ತಾರೆ , ಅವರಿಗೆ ಹೆಚ್ಚಿನ ಶಕ್ತಿ , ಅಡ್ವಾಂಟೇಜ್ ಸಿಗುತ್ತದೆ. ಈ ಅರ್ಥದಲ್ಲಿ ಭಾರತದ ಇಂದಿನ ಚಂದ್ರಯಾನದ ಫಲಿತಾಂಶ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಲೂನಾರ್ ರಿಯಲ್ ಎಸ್ಟೇಟ್ ಬಿಸಿನೆಸ್ : ನಾವಿರುವ ಭೂಮಿ ಬಿಟ್ಟರೆ ನಾವು ಸದ್ಯಕ್ಕೆ ಚಂದ್ರನ ಮೇಲೆ ಸೈಟ್ ಮಾಡಿ ಮಾರಬಹುದು ನೋಡಿ ! ಮುಂದಿನ ಹತ್ತು ವರ್ಷದಲ್ಲಿ ಇಂದೊಂದು ಸಾಧ್ಯವಾಗಬಲ್ಲ ಕನಸು. 2025ರ ವೇಳೆಗೆ ಜನರನ್ನು ಚಂದ್ರಯಾನ ಮಾಡಿಸಿ ವಾಪಸ್ಸು ಕರೆದುಕೊಂಡು ಬರಲು ಸಿದ್ಧತೆ ನಡೆಸಲಾಗುತ್ತಿದೆ. ಭೂಮಿಯ ಮೇಲಿನ ಅತ್ಯುತ್ತಮ ಜನ , ಮನೆತನೆಗಳು ಅಲ್ಲಿ ಮನೆ ಮಾಡಿ , ಭೂಮಿಗೆ ಬಂದು ಹೋಗಿ ಮಾಡುವ ದಿನಗಳು ಬರಬಹುದು. ಹಾಗೊಮ್ಮೆ ಆದರೆ , ಭಾರತ ಆ ಆಟದಲ್ಲಿ ಖಂಡಿತ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಂದಿನ ಫಲಿತಾಂಶ ಹಲವು ಕಾರಣಗಳಿಂದ ಮುಖ್ಯವಾಗಿದೆ. ಕೊನೆಮಾತು : ಅಮೇರಿಕಾದ ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ ಏಜನ್ಸಿ (DARPA ) ಎನ್ನುವ ಸಂಸ್ಥೆ ಅಮೆರಿಕಾದ ಮಿಲಿಟರಿಗೆ ಬೇಕಾದ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸಲು ಶ್ರಮಿಸುತ್ತದೆ. ಇದು ಮುಂದಿನ ಹತ್ತು ವರ್ಷದಲ್ಲಿ ಚಂದ್ರನ ಮೇಲೆ ಒಂದು ಹೊಸ ಎಕಾನಮಿ ಸೃಷ್ಟಿಸುವ ಕೆಲಸವನ್ನು ಹೊತ್ತಿದೆ. ಅದಕ್ಕೆ ಲೂನಾರ್ ಎಕಾನಮಿ ಎನ್ನುವ ನಾಮಕರಣವನ್ನು ಸಹ ಮಾಡಿದೆ. ಇಂದಿಗೆ ಜಗತ್ತಿನ ನಾಲ್ಕು ದೇಶಗಳು ಚಂದ್ರನ ಮೇಲಿನ ಹಿಡಿತಕ್ಕೆ ಸ್ಪರ್ಧೆಗೆ ಇಳಿದಿವೆ. ಐವತ್ತು ವರ್ಷದ ಹಿಂದೆ ಈ ಸ್ಪರ್ಧೆಯಲ್ಲಿ ಭಾರತವೂ ಇರುತ್ತದೆ ಎನ್ನುವ ಮಾತನ್ನು ಕೇಳಿದ್ದರೆ ಸಾಕು ಜಗತ್ತು ನಕ್ಕಿರುತ್ತಿತ್ತು , ಭಾರತವೂ ನಂಬುತ್ತಿರಲಿಲ್ಲ. ಐದು ದಶಕದಲ್ಲಿ ಭಾರತ ಸಂಪೂರ್ಣ ಬದಲಾಗಿ ಹೋಗಿದೆ. ಅಮೃತ ಕಾಲದಲ್ಲಿ ನಮಗೆ ಸಿಕ್ಕ ದೊಡ್ದ ಗಿಫ್ಟ್ ಅಭಿನಂದನೆಗಳು ಇಸ್ರೋ ' ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಸಹಕಾರ: ರಂಗಸ್ವಾಮಿ
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನ

Posted On: 25-08-2023 07:17AM
ಪಡುಬಿದ್ರಿ : ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2022-23ನೇ ಸಾಲಿನ ಮಹಾಸಭೆಯಲ್ಲಿ, ಉಡುಪಿ ಜಿಲ್ಲೆಯಲ್ಲಿಯೇ 13 ವರ್ಷಗಳಿಂದ ಸತತವಾಗಿ 25% ಡಿವಿಡೆಂಡ್ ನೀಡುತ್ತಿರುವ ಏಕೈಕ ಸಂಸ್ಥೆಯಾಗಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.)ಗೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಗಳಿಸಿದ ಪ್ರಗತಿಯನ್ನು ಗುರುತಿಸಿ 2022-23ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ಮಂಗಳೂರು ಕೊಡಿಯಾಲ್ ಬೈಲ್‌ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ) ದೀಪಕ್‌ಸಾಲ್ಯಾನ್ ರವರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಉಭಯ ಜಿಲ್ಲೆಗಳ ಸಹಕಾರಿಸಂಘಗಳ ಉಪನಿಬಂಧಕ ರಮೇಶ್ ಎಚ್. ಎನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಜಯಕರಶೆಟ್ಟಿ ಇಂದ್ರಾಳಿ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕರುಗಳಾದ ಗಿರೀಶ್ ಪಲಿಮಾರು, ಶಿವರಾಮ ಎನ್ ಶೆಟ್ಟಿ, ವಾಸುದೇವ, ಮಾಧವಆಚಾರ್ಯ, ಯಶವಂತ, ಸುಚರಿತ ಉಪಸ್ಥಿತರಿದ್ದರು.