Updated News From Kaup
ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರ ಪ್ರಯಾಣ

Posted On: 17-07-2023 04:55PM
ಉಡುಪಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14 ರ ವರೆಗೆ ಇದುವರೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ಈ ಎಲ್ಲಾ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು 25 ರಿಂದ 30 % ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಜೂನ್30 ರ ವರೆಗೆ ಉಡುಪಿ ಘಟಕದಲ್ಲಿ , ನಗರ ಸಾರಿಗೆ ಬಸ್ ಗಳಲ್ಲಿ 100838 ಮಹಿಳಾ ಪ್ರಯಾಣಿಕರು ಸಂಚರಿಸಿ 1470793 ರೂ, ವೇಗದೂತ ಬಸ್ ಗಳಲ್ಲಿ 94998 ಮಹಿಳಾ ಪ್ರಯಾಣಿಕರು ಸಂಚರಿಸಿ 7409003 ರೂ, ಸಾಮಾನ್ಯ ಬಸ್ ಗಳಲ್ಲಿ 40232 ಮಹಿಳಾ ಪ್ರಯಾಣಿಕರು ಸಂಚರಿಸಿ 794933 ರೂ, ಆದಾಯ ಬಂದಿದ್ದರೆ, ಕುಂದಾಪುರ ಘಟಕದಲ್ಲಿ ವೇಗದೂತ ಬಸ್ ಗಳಲ್ಲಿ 71410 ಮಹಿಳಾ ಪ್ರಯಾಣಿಕರು ಸಂಚರಿಸಿ 6325419 ರೂ, ಸಾಮಾನ್ಯ ಬಸ್ ಗಳಲ್ಲಿ 241497 ಮಹಿಳಾ ಪ್ರಯಾಣಿಕರು ಸಂಚರಿಸಿ 4352614 ರೂ, ಆದಾಯ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ. ಜುಲೈ 14 ರ ವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ ಆದಾಯ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ ಬಸ್ ಗಳು 68 ಬಸ್ ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ. ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಶಕ್ತಿ ಯೋಜನೆಯು ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಲು ನೆರವಾಗುವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಸಹ ನೆರವು ನೀಡುತ್ತಿದ್ದು, ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಸಂಖ್ಯೆಯೂ ಸಹ ಅಧಿಕಗೊಂಡಿದ್ದು, ನಷ್ಟದಲ್ಲಿದ್ದ ರಾಜ್ಯದ ಎಲ್ಲಾ ಸರ್ಕಾರಿ ಸಾರಿಗೆ ನಿಗಮಗಳು ಸಹ ಲಾಭದಾಯಕವಾಗಿ, ಶೀಘ್ರದಲ್ಲಿಯೇ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲಿವೆ.
ಬಂಟಕಲ್ಲು : ಆಟಿಡೊಂಜಿದಿನ ಸಂಭ್ರಮ

Posted On: 16-07-2023 10:45PM
ಬಂಟಕಲ್ಲು : ಶ್ರೀ ವಿಶ್ವಕರ್ಮ ಸಂಘ ಬಂಟಕಲ್ಲು ಇದರ ಗಾಯತ್ರಿ ಮಹಿಳಾ ಬಳಗದ ವತಿಯಿಂದ ಅಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜರಪಲ್ಕೆ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗಾಯತ್ರಿ ಅಶೋಕ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮುಂದಿನ ಜನಾಂಗದ ಏಳಿಗೆಗಾಗಿ ನಮ್ಮ ಬದುಕಿನ ಚಿತ್ರಣ, ಕಷ್ಟದ ಜೀವನದ ಬದುಕು ತಿಳಿಯಬೇಕಿದ್ದರೆ ನಮ್ಮ ಆಚರಣೆಗಳು ತಿಳಿಸುವುದು ಅತ್ಯವಶ್ಯಕ ಅಂತ ಕಾರ್ಯಕ್ರಮ ರೂಪಿಸುವ ಸಂಸ್ಥೆಗೆ ನಾವು ತಲೆಬಾಗಲೇಬೇಕು ಶಾಲೆಗೆ ಕಳಿಸುವುದು ಪಾಠವಲ್ಲ ಅದನ್ನು ನಮ್ಮ ಜೀವನದ ಬದುಕು ಮಕ್ಕಳಿಗೆ ತಿಳಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರು ಜವಾಬ್ದಾರಿಯುತರಾಗಿರಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಗಣಪತಿ ಆಚಾರ್ಯರು ಹಿಂದಿನ ಕಷ್ಟ ಕಾಲದ ಬದುಕು ಇಂದಿಲ್ಲ. ಮುಂದಿನ ಜನಾಂಗಕ್ಕೆ ಜೀವನ ಚಿತ್ರಣ ನೀಡುವ ಉತ್ತಮ ಕಾರ್ಯಕ್ರಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 12 ವರ್ಷ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸಿದ ವಸಂತಿ ಅಶೋಕ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಶಾಲಿನಿ ದಾಮೋದರಾಚಾರ್ಯ ಆಚಾರ್ಯ ಪ್ರಾರ್ಥಿಸಿದರು. ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಶ್ರೀಮತಿ ವಿನುತಾ ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಆಶಾ ಆನಂದ ಆಚಾರ್ಯ ವಂದಿಸಿದರು. ಸುಮಾರು 35 ಬಗೆಯ ತಿನಿಸುಗಳನ್ನು ಉಣಬಡಿಸಲಾಯಿತು
ಉಚ್ಚಿಲ : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಆಚರಣೆ

Posted On: 16-07-2023 07:56PM
ಉಚ್ಚಿಲ : ನಮ್ಮೊಳಗಿನ ನಮ್ಮನ್ನು ಅರಿತುಕೊಳ್ಳಲು, ಲೌಕಿಕ ಸಮಸ್ಯೆಗಳನ್ನು ನಿವಾರಿಸಲು ಆಧ್ಯಾತ್ಮವು ಸಕಾರಾತ್ಮಕ ದಾರಿಯಾಗಿದ್ದು, ನಾವೆಲ್ಲರೂ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು. ದ.ಕ, ಉಡುಪಿ ಮತ್ತು ಉ.ಕ ವ್ಯಾಪ್ತಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರು ಪೂರ್ಣಿಮಾ ಆಚರಣೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ಗ್ರಹಚಾರಾಧಿ ಸಂಕಷ್ಟ ನಿವಾರಣೆ, ಸಾಮಾಜಿಕ ಒಳಿತು ಹಾಗೂ ಆಧ್ಯಾತ್ಮಿಕ ಜಾಗೃತಿಗಾಗಿ ಮಹಾ ಮೃತ್ಯುಂಜಯ ಹೋಮ, ಸರ್ವೈಷ್ವರ್ಯ ಸೌಭಾಗ್ಯ ಪೂಜೆ, ಗುರು ಪೂಜೆ, ಸರ್ವ ಮಂಗಳ ಪೂಜೆ ಏಕ ಕಾಲದಲ್ಲಿ ನೆರವೇರಿದ್ದು ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದರು.
ಇದೇ ಸಂದರ್ಭ ಪರಿಸರ ಜಾಗೃತಿ ಮತ್ತು ಸಹಭಾಗಿತ್ವದ ನೆಲೆಯಲ್ಲಿ ಸುಮಾರು 2 ಸಾವಿರ ಸಸಿಗಳನ್ನು ವಿತರಿಸಲಾಯಿತು. ಮಂಗಳೂರಿನ ಅಮೃತಾ ವಿದ್ಯಾಲಯಂ ನ ವಿದ್ಯಾರ್ಥಿಗಳು ಸಾಮೂಹಿಕ ಮಂತ್ರ ಪಠಣೆ ಮಾಡಿದರು. 25 ವರುಷಗಳ ಕಾಲ ಆಧ್ಯಾತ್ಮಿಕವಾಗಿ ನಿಸ್ವಾರ್ಥ ಸೇವೆ ಮಾಡಿದ 35 ಹಿರಿಯ ಭಕ್ತರಿಗೆ ಮಠದ ವತಿಯಿಂದ ಗೌರವಿಸಿ ಪ್ರಸಾದ ನೀಡಲಾಯಿತು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಆನಂದ್ ಸಿ. ಕುಂದರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಪ್ರಸಾದ್ ರಾಜ್ ಕಾಂಚನ್, ಭರತ್ ಏರ್ಮಾಳ್, ಮಂಗಳೂರು ಅಧ್ಯಕ್ಷ ಡಾ ವಸಂತ್ ಕುಮಾರ್ ಪೆರ್ಲ, ಸುರೇಶ್ ಅಮೀನ್, ಕುಂದಾಪುರ ಅಧ್ಯಕ್ಷ, ಸುರೇಶ್ ಬೆತ್ತಿನ್, ಉಡುಪಿ ಅಧ್ಯಕ್ಷ ಯೋಗೀಶ್ ಬೈಂದೂರು, ಸುಬ್ರಹ್ಮಣ್ಯ ಅಧ್ಯಕ್ಷ ಚಂದ್ರಶೇಖರ್ ನಾಯರ್, ಮೂಲ್ಕಿ ಅಧ್ಯಕ್ಷ ವೈ.ಎನ್ ಸಾಲ್ಯಾನ್, ಕಾರವಾರ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಡಾ. ಅಶೋಕ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
ಬ್ರಹ್ಮಾವರ : ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ

Posted On: 16-07-2023 05:46PM
ಬ್ರಹ್ಮಾವರ : ವಿದ್ಯಾಮಂದಿರ ಶಾಲಾ ಹಳೆ ವಿದ್ಯಾಥಿ೯ ಸಂಘ, ಸಾವ೯ಜನಿಕ ಗಣೇಶೋತ್ಸವ ಸಮಿತಿ ಹಾರಾಡಿ- ಸಾಲಿಕೇರಿ, ಕಾಮಧೇನು ಕಲ್ಪತರು ಸೇವಾ ಸಮಿತಿ ಹಾರಾಡಿ, ಜಿ.ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್, ರೋಟರಿ ರೋಯಲ್ ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘ, ಕುಂದಾಪುರ ರೂರಲ್ ಆಯುವೇ೯ದ ಮೆಡಿಕಲ್ ಕಾಲೇಜು, ರಕ್ತನಿಧಿ ಕೇಂದ್ರ, ಮಿಷನ್ ಆಸ್ಪತ್ರೆ, ಎಸ್.ಎಸ್.ಎಫ್ ಹೊನ್ನಾಳ ಇದರ ಜಂಟಿ ಆಶ್ರಯದಲ್ಲಿ ಜುಲೈ 16ರಂದು ಹಾರಾಡಿ ಜಿ.ಎಂ ವಿದ್ಯಾನಿಕೇತನದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ನಡೆಯಿತು.
ಕಾಯ೯ಕ್ರಮವನ್ನು ಜಿ.ಎಂ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಚಂದ್ರ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜ್ಞಾನ ವಸಂತ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಸಂಸ್ಥೆಗಳ ಪದಾಧಿಕಾರಿಗಳಾದ ರಾಘವ ಶೆಟ್ಟಿ, ಅಭಿರಾಮ ನಾಯಕ್,ವಿವೇಕಾನಂದ ಕಾಮತ್, ಮಧುಸೂಧನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ, ಪ್ರಸನ್ನ ಕಾರಂತ್, ಡಾ. ಪ್ರಸನ್ನ ಐತಾಳ, ಡಾ. ವಿನಾಯಕ್ ಅಂಚನ್, ಡಾ. ಗಣೇಶ್ ಕಾಮತ್, ಆಯುವೇ೯ದ ಕಾಲೇಜಿನ ವೈದ್ಯರು ಉಪಸ್ಥಿತರಿದ್ದರು.ಸುಮಾರು 200ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.
ಜುಲೈ 17 (ನಾಳೆ) : ಪಡುಬಿದ್ರಿಯಲ್ಲಿ ಆಟಿ ಕಷಾಯ ವಿತರಣೆ

Posted On: 16-07-2023 04:18PM
ಪಡುಬಿದ್ರಿ : ಆಟಿ ಅಮಾವಾಸ್ಯೆಯ ಪ್ರಯುಕ್ತ ಜುಲೈ 17, ಸೋಮವಾರದಂದು ಬೆಳಿಗ್ಗೆ 6 ಗಂಟೆಯಿಂದ 7.30 ರ ವರೆಗೆ ವರ್ಷಂ ಪ್ರತಿಯಂತೆ ಶ್ರೀ ಸಾಯಿ ಆರ್ಕೇಡ್ ಪಡುಬಿದ್ರಿಯಲ್ಲಿ ದಿವ್ಯ ಕೇಟರರ಼್ಸ್ ರವರ ಸಹಕಾರದೊಂದಿಗೆ ಆಟಿ ಕಷಾಯ ವಿತರಣೆ ನಡೆಯಲಿದೆ ಎಂದು ಪಡುಬಿದ್ರಿ ಮೂರ್ತೆದಾರರ ಸಂಘದ ಅಧ್ಯಕ್ಷರಾದ ಪಿ. ಕೆ. ಸದಾನಂದರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಶಿರ್ವ : ಪಡುಕುತ್ಯಾರು ಆನೆಗುಂದಿ ಶ್ರೀ ಜನ್ಮವರ್ಧಂತಿ ಹಾಗೂ ವಿದ್ಯಾರ್ಥಿ ಭವನ ಉದ್ಘಾಟನಾ ಸಮಾರಂಭ

Posted On: 16-07-2023 10:59AM
ಶಿರ್ವ : ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರ ಜನ್ಮವರ್ಧಂತಿ ಹಾಗೂ ವಿದ್ಯಾರ್ಥಿಭವನ ಉದ್ಘಾಟನಾ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ನಡೆಯಿತು. ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ನಾಗ ಧರ್ಮೇಂದ್ರ ಸರಸ್ವತಿ ವಿದ್ಯಾರ್ಥಿ ಭವನವನ್ನು ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಮಾತನಾಡಿ, ಕುತ್ಯಾರು ಗ್ರಾಮೀಣ ಪ್ರದೇಶದಲ್ಲಿ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಆನೆಗುಂದಿ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ನಿಟ್ಟಿನಲ್ಲಿ ಸರಕಾರದ ಅನುದಾನ ಒದಗಿಸಲಾಗುವುದು. ಸರ್ವ ಜನಾಂಗಕ್ಕೆ ಒಳಿತು ಬಯಸುವ ಕಾಳಹಸ್ತೇಂದ್ರ ಸ್ವಾಮೀಜಿ ಸರ್ವರಸ್ವಾಮೀಜಿಯಾಗಿ ಮೂಡಿಬಂದಿದ್ದಾರೆ ಎಂದರು.
ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ದೀಪ ಪ್ರಜ್ವಲನಗೊಳಿಸಿದರು. ಆನೆಗುಂದಿ ಪ್ರತಿಷ್ಠಾನದ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಅಚಾರ್ಯ ವಡೇರಹೋಬಳಿ ಅಧ್ಯಕ್ಷತೆ, ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ಧರ್ಮದರ್ಶಿ ವಡೇರ ಆನಂದ, ಸಮಾಜ ಸೇವಕರಾದ ಮಿಥುನ್ ಎಂ ರೈ, ಕ್ಯಾ| ಬ್ರಿಜೇಶ್ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಸ್ಥಾನ ವಿದ್ವಾನ್ ಪದವಿ ಪ್ರದಾನ : ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಜನ್ಮವರ್ಧಂತಿ ಉತ್ಸವದ ಧರ್ಮ ಪ್ರಯುಕ್ತ ಸಂಸತ್ತಿನಲ್ಲಿ ಮಹಾಸಂಸ್ಥಾನದ ವಿದ್ವಾನ್ ಮಂಡಳಿಗೆ ವೈದಿಕ, ಗುರು ಪರಂಪರೆಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಶಂಕರಾಚಾರ್ಯ ಕಡ್ಡಾಸ್ಕರ್ ಪಂಡಿತ್ ಹುಬ್ಬಳ್ಳಿ ಅವರಿಗೆ ಆಸ್ಥಾನ ವಿದ್ವಾನ್ ಪದವಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಪ್ರಧಾನ ಮಾಡಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಸೂರ್ಯ ಆಚಾರ್ಯ ಹಳೆಯಂಗಡಿ, ಅನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಸರಸ್ವತಿ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಅಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಅಚಾರ್ಯ ಉಡುಪಿ, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಎಸ್ ಕುತ್ಯಾರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ನಾಗ ಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಆಸ್ಥಾನ ವಿದ್ವಾಂಸರುಗಳಾದ ಪಂಜ ಭಾಸ್ಕರ್ ಭಟ್, ಬಾಲಚಂದ್ರ ಭಟ್, ಚಂದು ಕೂಡ್ಲು, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಹರಿಶ್ಚಂದ್ರ ಎನ್. ಆಚಾರ್ಯ, ಕಾಳಿಕಾಂಬಾ ವಿಶ್ವಕರ್ಮ ದೇವಾಲಯಗಳ ಪ್ರಧಾನ ಧರ್ಮದರ್ಶಿಗಳು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ಸ್ವಾಗತಿಸಿದರು. ಗೀತಾ ಚಂದ್ರ ಕಾರ್ಕಳ, ಗಂಗಾಧರ ಕೊಂಡೆವೂರು, ಸುರೇಶ್ ಆಚಾರ್ಯ ನಿರೂಪಿಸಿದರು. ಅರವಿಂದ ವೈ ಆಚಾರ್ಯ ವಂದಿಸಿದರು.
ಕಾಪು : ಈ ಮೀಡಿಯಾ ಕನ್ನಡ ನ್ಯೂಸ್ ವೆಬ್ ಪೋರ್ಟಲ್ ಲೋಕಾರ್ಪಣೆ

Posted On: 16-07-2023 10:17AM
ಕಾಪು : ಸುದ್ದಿಯ ಧಾವಂತದ ಈ ಕಾಲಘಟ್ಟದಲ್ಲಿ ನಮ್ಮ ಸುತ್ತಮುತ್ತಲಿನ, ದೇಶ, ವಿದೇಶದ ಸುದ್ದಿಗಳು ನಮ್ಮನ್ನು ಕ್ಷಣ ಮಾತ್ರದಲ್ಲಿ ತಲುಪುತ್ತಿವೆ. ಸುದ್ದಿಯು ಸಾಮಾಜಿಕ ಬದಲಾವಣೆಯ ಜೊತೆಗೆ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮಾಧ್ಯಮವಾದಾಗ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ. ಮುಂದಿನ ದಿನಗಳಲ್ಲಿ ಈ ಮೀಡಿಯಾ ಕನ್ನಡ ಸಂಸ್ಥೆಯು ಕೂಡ ಜನಮನ ಗೆಲ್ಲಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಅವರು ಕಾಪುವಿನಲ್ಲಿ ಜರಗಿದ ಈ ಮೀಡಿಯಾ ಕನ್ನಡ ವೆಬ್ ಪೋರ್ಟಲ್ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ, ಸಂಸ್ಥೆಯ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಊರಿನ ಸುದ್ದಿ ಮಾಧ್ಯಮಗಳ ಜೊತೆಗೆ ಮುಂಬಯಿಯಲ್ಲಿ ಪ್ರಸಾರಿತ ಪತ್ರಿಕೆಯಲ್ಲಿ ದುಡಿಯುತ್ತಿರುವ ಅನುಭವಿ ಹಿರಿಯ ಪತ್ರಕರ್ತ ಬಾಲಕೃಷ್ಣ ಪೂಜಾರಿಯವರು ಅಂತರ್ಜಾಲದಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಈ ಮೀಡಿಯಾ ಕನ್ನಡ ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭ ಉಡುಪಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಷರೀಫ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾಪು ವಲಯದ ಅಧ್ಯಕ್ಷರಾದ ವಿನೋದ್ ಕಾಂಚನ್, ಗೀತಾ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಈ ಮೀಡಿಯಾ ಕನ್ನಡ ವೆಬ್ ಪೋರ್ಟಲ್ ಆಡಳಿತ ನಿರ್ದೇಶಕರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ ವಹಿಸಿದ್ದರು. ಬಾಲಕೃಷ್ಣ ಪೂಜಾರಿ ಉಚ್ಚಿಲ ಸ್ವಾಗತಿಸಿದರು. ವಿಜಯ ಆಚಾರ್ಯ ಉಚ್ಚಿಲ ನಿರೂಪಿಸಿ, ಶ್ರೀನಿವಾಸ್ ಐತಾಳ್ ವಂದಿಸಿದರು.
ಕಾಪು : ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯಲ್ಲಿ ಯಕ್ಷಗಾನ ತರಬೇತಿಗೆ ಚಾಲನೆ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 15-07-2023 02:56PM
ಕಾಪು : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಕಾಪು ವಿಧಾನಸಭಾ ಕ್ಷೇತ್ರದ ಇದರ ವತಿಯಿಂದ ಕಾಪುವಿನ ಉಳಿಯಾರಗೋಳಿಯ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯ ಫ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಗೆ ಶನಿವಾರ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಅವರ ವಾಕ್ ಚಾತುರ್ಯವನ್ನು ಹೆಚ್ಚಿಸಿಕೊಳ್ಳಲು ಜೊತೆಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಕ್ಷಗಾನ ಒಂದು ಉತ್ತಮ ವೇದಿಕೆಯಾಗಿದೆ. ಯಕ್ಷ ಶಿಕ್ಷಣ ಟ್ರಸ್ಟ್ ರಿ. ಉಡುಪಿ ಇವರ ಮೂಲಕ ಈ ವರ್ಷದಿಂದ ಕಾಪು ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 15 ಶಾಲೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ದಂಡತೀರ್ಥ ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ. ಕೆ. ಪ್ರಶಾಂತ್ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ವಿ.ಜಿ ಶೆಟ್ಟಿ, ಯಕ್ಷ ಶಿಕ್ಷಣ ಟ್ರಸ್ಟ್ ರಿ. ಉಡುಪಿ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಧುಕರ್, ಪ್ರಾಂಶುಪಾಲರಾದ ಮರೀನ ಸರೋಜ, ಮುಖ್ಯೋಪಾಧ್ಯಾಯರಾದ ಚಿತ್ರಲೇಖ ಟಿ ಶೆಟ್ಟಿ, ಯಕ್ಷಗಾನ ಗುರುಗಳಾದ ಮಂಜುನಾಥ್, ಶಿವಣ್ಣ ಬಾಯರ್ ಉಪಸ್ಥಿತರಿದ್ದರು.
ಕಾಪು : ಕಳತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವನಮಹೋತ್ಸವ

Posted On: 15-07-2023 02:47PM
ಕಾಪು : ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಳತ್ತೂರು, ಅರಣ್ಯ ಇಲಾಖೆ, ಕಳತ್ತೂರು ಗ್ರಾಮ ಪಂಚಾಯತ್, ಧರಣಿ ಸಮಾಜ ಸೇವಾ ಸಂಘ, ಕಾಪು ಇವರ ಜಂಟಿ ಸಹಯೋಗದೊಂದಿಗೆ ಶನಿವಾರ ಕಳತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಜರಗಿತು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ, ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಲೀಲಾಧರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅನಿತಾ ಬಿ, ಉಡುಪಿ ವಲಯ ಅರಣ್ಯಾಧಿಕಾರಿಗಳಾದ ಸುಬ್ರಮಣ್ಯ ಆಚಾರ್ಯ, ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಪ್ರಾಂಶುಪಾಲರಾದ ಉಮಕಾಂತ್ ಗೌಡ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದು ಮರೆಯಲಾಗದ ಅನುಭವ : ಕೂರ್ಮಾರಾವ್ ಎಂ

Posted On: 15-07-2023 02:41PM
ಉಡುಪಿ : ಜಿಲ್ಲೆಯ ಜಿಲ್ಲಾಧಿಕಾರಿಯಾಗಿ 1 ವರ್ಷ 10 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದು ಅತ್ಯುತ್ತಮ ರೀತಿಯ ಮರೆಯಲಾಗದ ಅನುಭವ ನೀಡಿದೆ, ಜಿಲ್ಲೆಯ ಅಭಿವೃದ್ದಿಗಾಗಿ ಮುಂದಿನ ದಿನದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ತನ್ನಿಂದ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲೇ ಸದಾ ಮಾದರಿ ಜಿಲ್ಲೆಯನ್ನಾಗಿ ಮಾಡುವ ತುಡಿತ ಜಿಲ್ಲೆಯ ಸಾರ್ವಜನಿಕರು ಮತ್ತು ನೌಕರರ ವಲಯದಲ್ಲಿದೆ. ಈ ಸ್ಪೂರ್ತಿ ಸದಾ ಕಾಲ ಇದೇ ರೀತಿ ಮುಂದುವರೆಯಬೇಕು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಜಿಲ್ಲೆಯ ಜನತೆ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದು, ಎಲ್ಲರ ಸಹಕಾರದಿಂದ ಒಂದು ತಂಡದ ರೀತಿಯಲ್ಲಿ ಜಿಲ್ಲೆಯ ಪ್ರಗತಿಗೆ ಕಾರ್ಯನಿರ್ವಹಿಸಲು ಸಾದ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ವಿದ್ಯಾವಂತ ಮತ್ತು ಬುದ್ದಿವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲಿನ ಹಲವು ಸವಾಲುಗಳನ್ನು ಜಿಲ್ಲಾಧಿಕಾರಿಯಾಗಿದ್ದ ಕೂರ್ಮಾರಾವ್ ಎಂ. ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಮತ್ತು ಪ್ರಾಮಾಣಿಕ ಸೇವೆ ನೀಡುವ ನಿಟ್ಟಿನಲ್ಲಿ , ಜಿಲ್ಲೆಯ ಪ್ರಮುಖ ಇಲಾಖೆಗಳಾದ ಕಂದಾಯ, ಜಿಲ್ಲಾ ಪಂಚಾಯತ್ ಮತ್ತು ಪೊಲೀಸ್ ಇಲಾಖೆಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಿದೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಪ್ರಗತಿಗೆ ಒಟ್ಟಾಗಿ ಶ್ರಮಿಸೋಣ ಎಂದರು. ಜಿ.ಪಂ. ಸಿಇಓ ಪ್ರಸನ್ನ ಮಾತನಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ತಾಳ್ಮೆಯ ಗುಣ, ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣ ಎಲ್ಲಾ ಅಧಿಕಾರಿಗಳಿಗೆ ಮಾದರಿಯಾಗಬೇಕು. ಜಿಲ್ಲಾ ಪಂಚಾಯತ್ ನ ಹಲವು ಯಶಸ್ವಿ ಯೋಜನೆಗಳಿಗೆ ಉತ್ತಮ ಸಹಕಾರ ನೀಡಿದ್ದು, ಚುನಾವಣೆಯಲ್ಲಿ ಸ್ವೀಪ್ ಮೂಲಕ ರಾಜ್ಯ ಮತ್ತು ದೇಶದಲ್ಲೇ ಗಮನ ಸೆಳೆಯುವಂತಹ ಕಾರ್ಯಕ್ರಮಗಳನ್ನು ಇವರ ಮಾರ್ಗದರ್ಶನದಲ್ಲಿ ಮಾಡಲಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದಿರುವ ಇವರಿಂದ ಎನ್.ಐ.ಸಿ. ಮೂಲಕ ಕಂದಾಯ ಇಲಾಖೆಗೆ ವಿವಿಧ ರೀತಿಯ ಬಹುಪಯೋಗಿಯ 3 ನೂತನ ತಂತ್ರಾಂಶಗಳನ್ನು ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಎಸ್ಪಿ ಅಕ್ಷಯ್ ಎಂ ಹಾಕೆ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಎಲ್ಲಾ ಅಗತ್ಯ ಬೆಂಬಲ ಮತ್ತು ಸಹಕಾರ ನೀಡಿದ್ದಾರೆ, ಉಡುಪಿಯನ್ನು ಸೇಫ್ ಸಿಟಿ ಮಾಡುವ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ನಿರ್ವಹಣೆ ಮೂಲಕ ಸ್ಮಾರ್ಟ್ ಸಿಟಿ ಮಾಡಲು ಒತ್ತು ನೀಡಿದ್ದರು ಎಂದರು. ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಜಿಲ್ಲಾ ಪಿಎಫ್ ಆಯುಕ್ತ ಅಭಿಷೇಕ್ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಸ್ವಾಗತಿಸಿದರು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳಿOದ ಅಭಿನಂದನೆ ನಡೆಯಿತು.