Updated News From Kaup
ಕಾಪು : ಆದ್ರಾ೯ ಮಳೆ ಆರ್ಭಟ ; ವಿವಿದೆಡೆ ಜಲಾವೃತ
.jpg)
Posted On: 05-07-2023 08:41PM
ಕಾಪು : ತಾಲೂಕಿನ ವಿವಿದೆಡೆ ಇಂದು ಸುರಿದ ಭಾರೀ ಮಳೆಗೆ ಹಲವು ಪ್ರದೇಶ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನ ತೆಂಕಗ್ರಾಮದ ಗುಣವತಿ ಎಂಬವರ ವಾಸ್ತವ್ಯದ ಪಕ್ಕ ಮನೆಗೆ ಮರ ಬಿದ್ದು ಅಂದಾಜು 20,000 ನಷ್ಟ ಸಂಭವಿಸಿರುತ್ತದೆ. ಕಾಪು ಕೈಪುಂಜಾಲಿನ ಬಟತೋಟದ ಪ್ರದೇಶ, ಪಡುಬಿದ್ರಿಯ ಕೆಳಗಿನ ಪೇಟೆಯ ಯೂನಿಯನ್ ಬ್ಯಾಂಕ್ ಬಳಿ ತೋಡು - ರೋಡು ಒಂದಾಗಿ ಜನರು ನಡೆದಾಡಲು ಹರಸಾಹಸ ಪಟ್ಟರು. ಉಳಿದಂತೆ ಹಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆಯಿಂದ ಜಲಾವೃತವಾಗಿದೆ.


ಜುಲೈ 8 : ರಾಜ್ಯದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Posted On: 05-07-2023 06:33PM
ಉಡುಪಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಸಮಿತಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಾಜ್ಯದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ -2023 ಕಾರ್ಯಕ್ರಮವನ್ನು ಜು.8ರಂದು ಮಧ್ಯಾಹ್ನ 2 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯಕ್ರಮವನ್ನು ಕರ್ನಾಟಕದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿರುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿರುವರು ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಶಾಸಕ ಯಶ್ಪಾಲ್ ಎಸ್.ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್, ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಭಾಗವಹಿಸಲಿರುವರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮಧ್ಯಾಹ್ನ 1.30ಕ್ಕೆ ಕಲಾ ಮಯಂ ತಂಡದಿಂದ ಜಾನಪದ ಹಾಡುಗಾರಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರ ಮಕ್ಕಳು, ಹೆತ್ತವರು, ಜಿಲ್ಲಾ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು 300 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜುಲೈ 8ರಂದು ಬೆಳಿಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಉಡುಪಿ ಜಿಲ್ಲಾ ಸಂಘದ ಆತಿಥ್ಯದಲ್ಲಿ ಉಡುಪಿ ಐಎಂಎ ಭವನದಲ್ಲಿ ಜರಗಲಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.
ಪಡುಬಿದ್ರಿ : ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ; ತುರ್ತು ಕ್ರಮಕ್ಕೆ ಸೂಚನೆ

Posted On: 05-07-2023 06:13PM
ಪಡುಬಿದ್ರಿ : ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗಿ, ಅಪಾಯದ ಅಂಚಿಗೆ ತಲುಪಿರುವ ಕಾಡಿಪಟ್ಣ ಪಡುಬಿದ್ರಿ ಬೀಚ್ ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಬುಧವಾರ ಭೇಟಿ ನೀಡಿದರು.
ಈ ಸಂದರ್ಭ ಪರಿಶೀಲನೆ ನಡೆಸಿ, ಸಂಬಂಧ ಪಟ್ಟ ಇಲಾಖೆಯ ಅಭಿಯಂತರರಿಗೆ ಕರೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ಅಶೋಕ್ ನಾಯರಿ, ರಾಹುಲ್ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಹೆದ್ದಾರಿ ಇಲಾಖೆಯ ಅಸಮರ್ಪಕ ಕಾಮಗಾರಿ ; ಮನೆಯೊಳಗೆ ನುಗ್ಗುವ ಚರಂಡಿ ನೀರು

Posted On: 05-07-2023 05:55PM
ಪಡುಬಿದ್ರಿ : ಇಲ್ಲಿನ ಕೆಳಗಿನ ಪೇಟೆಯ ಮನೆಯೊಂದಕ್ಕೆ ಈ ವರ್ಷವೂ ಹೆದ್ದಾರಿ ಇಲಾಖೆಯ ಅವ್ಯವಸ್ಥೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಮನೆಯೊಳಗೆ ಸೇರುವ ಸ್ಥಿತಿ ಉಂಟಾಗಿದೆ.

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೂಕ್ತ ಸರ್ವಿಸ್ ರಸ್ತೆ ಒಂದೆಡೆ ಇಲ್ಲ. ಇನ್ನೊಂದೆಡೆ ಅರೆಬರೆ ಕಾಮಗಾರಿಯ ದ್ಯೋತಕವಾಗಿ ಸರಾಗವಾಗಿ ಹರಿಯಲು ಸರಿಯಾದ ಪೈಪ್ ವ್ಯವಸ್ಥೆ ಮಾಡದೆ ಚರಂಡಿ ನೀರು ಮನೆ, ಬಾವಿ ಸೇರುವಂತಾಗಿದೆ.
ಕಳೆದ ವರ್ಷ ಈ ಬಗ್ಗೆ ಸ್ಥಳೀಯ ಪಂಚಾಯತ್, ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲ. ಈ ಬಾರಿ ಮತ್ತದೇ ಸಮಸ್ಯೆಯಾಗಿದೆ. ಮನೆಗೆ ನೀರು ನುಗ್ಗದಂತೆ ಆವರಣ ಗೋಡೆ ಅಥವಾ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾಗಿದೆ ಎಂದು ಸಮಸ್ಯೆಯೊಳಗಾದ ಮನೆಯ ವೀರೇಂದ್ರ ಎನ್ ಪೂಜಾರಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸರ್ವಿಸ್ ರಸ್ತೆಯ ಇನ್ನೊಂದು ಪಾಶ್ವ೯ದಲ್ಲಿ ಚರಂಡಿ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಉಡುಪಿ ಜಿಲ್ಲೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಸೂಕ್ತ ಕ್ರಮವಹಿಸಲು ಸೂಚಿಸಿದ್ದರು. ಆದರೂ ಸಮಸ್ಯೆ ಬಗೆಹರಿದಂತಿಲ್ಲ.
ಕಟಪಾಡಿ : ತ್ರಿಶಾ ಸಂಸ್ಥೆ - ಗುರು ಪೌರ್ಣಮಿ ಆಚರಣೆ

Posted On: 05-07-2023 03:10PM
ಕಟಪಾಡಿ : ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ಮಹತ್ವವಾದದ್ದು, ಮತ್ತು ಸರಿಯಾದ ಗುರುವಿನ ಮಾರ್ಗದರ್ಶನದಿಂದ ಮಾತ್ರ ವಿದ್ಯಾರ್ಥಿಯ ಬದುಕು ಯಶಸ್ಸಿನತ್ತ ಮುಖ ಮಾಡಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ತ್ರಿಶಾ ಸಂಸ್ಥೆಯಲ್ಲಿ ನಡೆದ ಗುರು ಪೂರ್ಣಿಮೆ ಆಚರಣೆಯಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುಗಳ ಮಹತ್ವದ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಧ್ಯಾಪಕರುಗಳ ಮೇಲೆ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿ, ಸಿಬ್ಬಂದಿಗಳಿಗೆ ಉಡುಗೊರೆ ನೀಡುವ ಮೂಲಕ ಆಚರಿಸಿದರು.
ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಕಾಲು ತೊಳೆದು, ಅವರಿಗೆ ಉಡುಗೊರೆಯನ್ನು ಕೊಡುವುದರ ಮೂಲಕ ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಗುರುಪ್ರಸಾದ್ ರಾವ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಇಂದುರೀತಿ, ತ್ರಿಶಾ ವಿದ್ಯಾ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಡಲ್ಕೊರೆತ ; ಕಡಲೊಡಲು ಸೇರಿದ 6 ತೆಂಗಿನಮರ, ಅಪಾಯದಲ್ಲಿ ಕೈರಂಪಣಿ ಗೋದಾಮು

Posted On: 05-07-2023 02:33PM
ಪಡುಬಿದ್ರಿ : ಕರಾವಳಿಯಾದ್ಯಂತ ಮಳೆ ಬಿರುಸುಗೊಂಡಿದ್ದು ಕಡಲಾರ್ಭಟವು ಮುಂದುವರೆದಿದೆ. ಪಡುಬಿದ್ರಿ ಮುಖ್ಯ ಬೀಚ್ ಸೇರಿದಂತೆ ಕಾಡಿಪಟ್ಣ ಭಾಗದಲ್ಲಿ ಕಡಲ್ಕೊರೆತದ ಪ್ರಭಾವ ಹೆಚ್ಚಾಗಿದೆ. ಈಗಾಗಲೇ 6 ತೆಂಗಿನಮರಗಳು ಕಡಲ ಒಡಲು ಸೇರಿದೆ. ಮುಖ್ಯ ಬೀಚ್ ನ ಇಂಟರ್ಲಾಕ್, ಕೈರಂಪಣಿ ಗೋದಾಮು ಸಮುದ್ರ ಪಾಲಾಗುವ ಅಪಾಯದಲ್ಲಿದೆ.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್, ಬ್ಲ್ಯೂ ಫ್ಲಾಗ್ ಮಾನ್ಯತೆ ದೊರಕಿದ ಬೀಚ್ ಸರ್ವನಾಶವಾಗುತ್ತಿದೆ. ಜಿಲ್ಲಾಡಳಿತ ಇದಕ್ಕೆ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸುಶೀಲ್ ಕಾಂಚನ್ ರವರಿಗೆ ಸೇರಿದ ತೆಂಗಿನಮರಗಳು ಸಮುದ್ರ ಪಾಲಾಗಿದೆ. ಕೈರಂಪಣಿ ಗೋದಾಮು, ಪ್ರವಾಸಿಗರು ಆಸೀನವಾಗಲಿಕ್ಕಿರುವ ಮಂಟಪ ಅಪಾಯದ ಭೀತಿಯಲ್ಲಿದೆ. ಇಲ್ಲಿ 2-3 ವರ್ಷದಿಂದ ಆಗುತ್ತಿರುವ ಸಮಸ್ಯೆ. ತೌಖ್ತೆ ಚಂಡಮಾರುತದ ಸಮಯದಲ್ಲಿಯೂ ಇಲ್ಲಿಗೆ ಭೇಟಿ ನೀಡಿದ ಕಂದಾಯ ಸಚಿವರಾದ ಅಶೋಕ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಶಾಸಕರಿಗೂ ಮನವಿ ಮಾಡಿದರೂ ಸ್ಪಂದನೆಯಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಈ ಬಗ್ಗೆ ತುರ್ತು ಕ್ರಮಕ್ಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ - ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆ

Posted On: 05-07-2023 10:52AM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯನ್ನು ಏರ್ಪಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಮಾತನಾಡಿ, ಇಂದು ನಾವು ದಿನನಿತ್ಯದ ಜೀವನದಲ್ಲಿ ಕೆಲವು ಅಂಗಡಿಯಿಂದ ಸಣ್ಣಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ತರುತ್ತಿದ್ದೇವೆ. ಇಂಥ ಪ್ಲಾಸ್ಟಿಕ್ ವಸ್ತುವಿನ ಮರುಬಳಕೆ ಮಾಡಲಾಗದೆ ಅವುಗಳನ್ನು ಎಸೆಯುವುದರಿಂದ ನಮ್ಮ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಂತ ಐಡಿ ಎಸ್ಎಸ್ಸಿ ಐಜಿಸಿ ಕ್ಯಾಂಪಲ್ಲಿ ಭಾಗವಹಿಸಿದ ಕೆಡೆಟ್ ಪೂಜಾ ಶೆಟ್ಟಿ, ಮೈಸೂರಲ್ಲಿ ನಡೆದಂತ ಏಕ್ ಭಾರತ ಶ್ರೇಷ್ಠ ಭಾರತ್ಕ್ಯಾಂಪಲ್ಲಿ ವಿಜೇತರಾದ ಸೋನಾಲಿಕುಲಾಲ್,ಉಳಿದ್ರಾ ಖುಷಿರವರನ್ನು ಅಭಿನಂದಿಸಲಾಯಿತು ಹಾಗೂ ಕೆಡೆಟ್ಗಳಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕರಪತ್ರಗಳನ್ನು ನೀಡಲಾಯಿತು. ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹಾಗೂ ಪರಿಸರ ಕಾಳಜಿಯ ವಿವಿಧ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಯುವಕರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಮಾಡಲು ಶ್ರಮಿಸಬೇಕೆಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕರೆ ನೀಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಫಸ್ಟ್ ಆಫೀಸರ್ ಜಾನ್ ವಿಲಿಯಂ ವೇಗಸ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು. ಕೆಡೆಟ್ ಕೃತಿಕಾ ಸ್ವಾಗತಿಸಿ , ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದಿತಿ ಆಚಾರ್ಯ ವಂದಿಸಿದರು. ಕೆಡೆಟ್ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರನಟ ಉಪೇಂದ್ರ ನಿವಾಸಕ್ಕೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭೇಟಿ

Posted On: 05-07-2023 10:30AM
ಉಡುಪಿ : ಜಿಲ್ಲೆಯ ಅಷ್ಟ ಮಠಗಳಲ್ಲಿ ಒಂದಾದ ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಖ್ಯಾತ ಚಿತ್ರನಟರಾದ ಉಪೇಂದ್ರ ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿದರು.
ಈ ಸಂದರ್ಭ ಉಪೇಂದ್ರ ಅವರು ಕೇಳಿದ ಆಧ್ಯಾತ್ಮದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು, ಉಪೇಂದ್ರ ಅವರನ್ನು ರಜತಪೀಠಪುರಕ್ಕೆ ಹಾಗೂ ಪಲಿಮಾರಿನ ಮೂಲ ಮಠಕ್ಕೆ ಭೇಟಿ ನೀಡುವಂತೆ ಆಹ್ವಾನವಿತ್ತರು.
ಈ ಸಂದರ್ಭದಲ್ಲಿ ಪಲಿಮಾರು ಮಠದ ಪಿ.ಆರ್.ಓ ಕಡೆಕಾರು ಶ್ರೀಶ ಭಟ್, ಗಿರೀಶ್ ಉಪಾಧ್ಯಾಯ, ಶ್ರೀನಿವಾಸ ಭಟ್ ಮತ್ತಿತರು ಉಪಸ್ಥಿತರಿದ್ದರು.
ಕಳತ್ತೂರು ಕುಲಾಲ ಒಕ್ಕೂಟ : ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Posted On: 05-07-2023 10:01AM
ಕಾಪು : ಕುಲಾಲ ಬಾಂಧವರು ಕಳತ್ತೂರು ಇದರ ವತಿಯಿಂದ ರವಿವಾರ ಜರಗಿದ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.
ಕುಲಾಲ ಬಾಂಧವರು ಕಳತ್ತೂರು ಒಕ್ಕೂಟದ ಅಧ್ಯಕ್ಷರು ರಾಜೇಶ್ ಕುಲಾಲ್ ಪೈಯ್ಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತನಿಸ್ಕ, ರಕ್ಷಿತಾ, ಚಿರಾಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಕ್ತಿ ಆರ್ ಕುಲಾಲ್, ಕೋಶಾಧಿಕಾರಿ ಹರೀಶ್ ಕೆ ಮೂಲ್ಯ , ಸಮಾಜದ ಹಿರಿಯರಾದ ತೊತು ಮೂಲ್ಯ, ಪಾಂಡು ಮೂಲ್ಯ, ಶಂಕರ ಮೂಲ್ಯ, ಬಾಡು ಮೂಲ್ಯ, ಸಂಜೀವ ಕುಲಾಲ್, ಒಕ್ಕೂಟದ ಹಿರಿಯ ಗುರಿಕಾರರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಜುಲೈ 5 (ನಾಳೆ) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 04-07-2023 09:58PM
ಉಡುಪಿ : ಜಿಲ್ಲೆಯಲ್ಲಿ ಮಳೆಯ ಅಬ್ಬರವಿರುವ ಹಿನ್ನೆಲೆಯಲ್ಲಿ ಜುಲೈ 5 ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಅದರಂತೆ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್.ಎಂ ರಜೆ ಘೋಷಿಸಿದ್ದಾರೆ.