Updated News From Kaup

ಕಳತ್ತೂರು ಕುಲಾಲ ಒಕ್ಕೂಟ : ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Posted On: 05-07-2023 10:01AM

ಕಾಪು : ಕುಲಾಲ ಬಾಂಧವರು ಕಳತ್ತೂರು ಇದರ ವತಿಯಿಂದ ರವಿವಾರ ಜರಗಿದ ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.

ಕುಲಾಲ ಬಾಂಧವರು ಕಳತ್ತೂರು ಒಕ್ಕೂಟದ ಅಧ್ಯಕ್ಷರು ರಾಜೇಶ್ ಕುಲಾಲ್ ಪೈಯ್ಯಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತನಿಸ್ಕ, ರಕ್ಷಿತಾ, ಚಿರಾಗ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಕ್ತಿ ಆರ್ ಕುಲಾಲ್, ಕೋಶಾಧಿಕಾರಿ ಹರೀಶ್ ಕೆ ಮೂಲ್ಯ , ಸಮಾಜದ ಹಿರಿಯರಾದ ತೊತು ಮೂಲ್ಯ, ಪಾಂಡು ಮೂಲ್ಯ, ಶಂಕರ ಮೂಲ್ಯ, ಬಾಡು ಮೂಲ್ಯ, ಸಂಜೀವ ಕುಲಾಲ್, ಒಕ್ಕೂಟದ ಹಿರಿಯ ಗುರಿಕಾರರು, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜುಲೈ 5 (ನಾಳೆ) : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Posted On: 04-07-2023 09:58PM

ಉಡುಪಿ : ಜಿಲ್ಲೆಯಲ್ಲಿ ಮಳೆಯ ಅಬ್ಬರವಿರುವ ಹಿನ್ನೆಲೆಯಲ್ಲಿ ಜುಲೈ 5 ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಅದರಂತೆ ನಾಳೆ ಉಡುಪಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್.ಎಂ ರಜೆ ಘೋಷಿಸಿದ್ದಾರೆ.

ಇಲಾಖಾ ದರದಲ್ಲಿ ತೋಟಗಾರಿಕೆ ಸಸಿಗಳು ಲಭ್ಯ

Posted On: 04-07-2023 11:26AM

ಉಡುಪಿ : ತೋಟಗಾರಿಕೆ ಇಲಾಖೆಯ ವತಿಯಿಂದ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕೆ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಉಡುಪಿ ತಾಲೂಕಿನ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ 2,667, ಕಾಳುಮೆಣಸು 4,328 ಹಾಗೂ ತೆಂಗು 458 ಗಿಡಗಳು ಸೇರಿದಂತೆ ಒಟ್ಟು 7,453 ಸಸಿಗಳು ಮತ್ತು ಕಾರ್ಕಳ ತಾಲೂಕಿನ ರಾಮಸಮುದ್ರ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಡಿಕೆ 9,000, ಗೋಡಂಬಿ 5,683 ಹಾಗೂ 15,266 ಕಾಳುಮೆಣಸು ಸಸಿಗಳು ಸೇರಿದಂತೆ ಒಟ್ಟು 29,949 ಉತ್ತಮ ಗುಣಮಟ್ಟದ ಗಿಡಗಳು ಲಭ್ಯವಿರುತ್ತದೆ.

ಅಡಿಕೆ (ರೂ. 20), ಕಸಿ ಗೇರು (ರೂ. 32), ಕಾಳುಮೆಣಸು (ರೂ.11) ಹಾಗೂ ತೆಂಗು ತಳಿ (ರೂ. 170) ಗಿಡಗಳನ್ನು ಖರೀದಿಸಲು ವರುಣ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಮೊ.ನಂ 7892326323 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ - ಚಾತುರ್ಮಾಸ್ಯ ವ್ರತಾಚರಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Posted On: 03-07-2023 10:44PM

ಕಾಪು : ಸನ್ಯಾಸಿಗಳು ನಡೆಸುವ ಚಾತುರ್ಮಾಸ್ಯಕ್ಕೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ಆತ್ಮೋನ್ನತಿಗೆ ಬೇಕಾದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸಮಾಜದ ಜನರಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದಕ್ಕಾಗಿ ಕಠಿಣ ಪ್ರಯತ್ನಗಳು ನಡೆಯಲಿವೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು. ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಸೋಮವಾರ ಆರಂಭವಾದ ಚಾತುರ್ಮಾಸ್ಯ ವ್ರತಾಚರಣೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪ್ರತೀಯೊಬ್ಬ ವ್ಯಕ್ತಿಗೂ ಗುರು ಪರಂಪರೆ ಮತ್ತು ಚಾತುರ್ಮಾಸ್ಯದ ಕುರಿತಾಗಿ ಅರಿವು, ಜ್ಞಾನ ಹೆಚ್ಚಿಸುವುದಕ್ಕಾಗಿ ನಮ್ಮ ಪ್ರಯತ್ನ ಜಾರಿಯಲ್ಲಿರುತ್ತದೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿ ಈ ಬಾರಿಯ ಚಾತುರ್ಮಾಸ್ಯವನ್ನು ನಡೆಸಲಾಗುವುದು. ಪಾಶ್ಚಾತ್ಯ ಸಂಸ್ಕೃತಿಯ ಮೇಲಿನ ವ್ಯಾಮೋಹದಿಂದಾಗಿ ಜನರು ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಅನುಸರಿಸಿ, ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಅನುಸರಣೆಯೇ ನಮಗೆ ಸಮಾಜದಲ್ಲಿ ಸುಸಂಸ್ಕೃತರಾಗಿ ಬಾಳಿ ಬದುಕಲು ದಾರಿದೀಪವಾಗಿದೆ ಎಂದರು.

ಸ್ವಾಮೀಜಿಯವರಿಂದ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಹಾಗೂ ಚಿತ್ರ ನಟ ಸತೀಶ್ ಆಚಾರ್ಯ ಪೆರ್ಡೂರು, ಹುಟ್ಟು ಮತ್ತು ಸಾವುಗಳ ನಡುವಿನ ಜೀವನ ಯಶಸ್ವಿಯಾಗಿ ಮುನ್ನಡೆಯುವಲ್ಲಿ ಗುರುಗಳ ಅನುಗ್ರಹ, ಆಶೀರ್ವಚನ ಮತ್ತು ಮಾರ್ಗದರ್ಶನ ಅತೀ ಅಗತ್ಯವಾಗಿದೆ. ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರನ್ನು ಗುರುಗಳನ್ನಾಗಿ ಪಡೆದಿರುವ ನಮ್ಮ ಸಮಾಜ ಧನ್ಯವಾಗಿದೆ. ಗುರು ಪರಂಪರೆ, ಗುರು ತತ್ವ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಇನ್ನಷ್ಟು ಒತ್ತು ನೀಡುವ ಮೂಲಕ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳೋಣ ಎಂದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಶ್ರೀ ನಾಗ ಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಪ್ರಧಾನ ಸಂಚಾಲಕ ಬಿ. ಸೂರ್ಯಕುಮಾರ ಆಚಾರ್ಯ ಹಳೆಯಂಗಡಿ, ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್ ಆಚಾರ್ಯ ಬೆಂಗಳೂರು, ಅಸ್ಸೆಟ್ ಅಧ್ಯಕ್ಷ ಮೋಹನ್‌ಕುಮಾರ್ ಬೆಳ್ಳೂರು, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು, ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಗಜಾನನ ಎನ್ ಆಚಾರ್ಯ ಭಟ್ಕಳ, ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಬಾಲಕೃಷ್ಣ ಆಚಾರ್ಯ ಬೆಳಪು, ಶೇಖರ ಆಚಾರ್ಯ ಕಾಪು, ಸುಂದರ ಆಚಾರ್ಯ ಕೋಟೆಕಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ನ್ಯಾಯವಾದಿ ಕೆ ಪ್ರಭಾಕರ ಆಚಾರ್ಯ ಕೋಟೆಕಾರು, ಸಿಎ ಶ್ರೀಧರ ಆಚಾರ್ಯ ಪನ್ವೇಲ್, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ತ್ರಾಸಿ ಸುಧಾಕರ ಆಚಾರ್ಯ, ಜಯಕರ ಆಚಾರ್ಯ ಕರಂಬಳ್ಳಿ, ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ. ಗಂಗಾಧರ ಆಚಾರ್ಯ ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿದರು.

ಉಡುಪಿ : ನಿಖಿತಾ ಕುಲಾಲ್ ಸಾವಿನ ಪ್ರಕರಣ - ಪರಿಹಾರಕ್ಕಾಗಿ ಮನವಿ

Posted On: 03-07-2023 09:24PM

ಉಡುಪಿ : ಕಾಪು ತಾಲೂಕಿನ ಎಲ್ಲೂರು ಬಂಡಸಾಲೆ ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ಅಸಹಜ ಸಾವನಪ್ಪಿದ್ದು ನಿಖಿತಾ ಮನೆಯವರಿಗೆ ಸೂಕ್ತ ನ್ಯಾಯ ಒದಗಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಆಸ್ಪತ್ರೆಯ ಮುಖ್ಯ ವೈದ್ಯರಿಗೆ ಹಾಗೂ ಆಡಳಿತ ಮಂಡಳಿಗೆ ಜಿಲ್ಲಾ ಕುಲಾಲ ಸಂಘಟನೆಯ ಪ್ರಮುಖರು ಸೇರಿ ಮನವಿ ನೀಡಿದರು.

ಮನವಿಗೆ ಸ್ಪಂದಿಸಿ ಮಾತಾಡಿದ ವೈದ್ಯರು ಆಸ್ಪತ್ರೆಯ ಬಗ್ಗೆ ಈಗಾಗಲೇ ದೂರು ದಾಖಲಾಗಿದುದರಿಂದ ಇನ್ನು 15 ದಿನಗಳ ಬಳಿಕ ತನಿಖೆಯ ವರದಿ ಬರಲಿದ್ದು ಅಲ್ಲಿಯ ತನಕ ಕಾಯಿರಿ, ನಂತರ ನಿಖಿತಾ ಕುಲಾಲ್ ಮನೆಯವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಾತು ತಪ್ಪಿದಲ್ಲಿ ಎಲ್ಲಾ ಸ್ವಜಾತಿ ಬಾಂಧವರುಗಳನ್ನು ಒಟ್ಟು ಗೂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಸಂದೀಪ್ ಬಂಗೇರ ಶಂಕರಪುರ, ಉದಯ್ ಕುಲಾಲ್ ಕಳತ್ತೂರು, ಸುಧಾಕರ್ ಕುಲಾಲ್ ಪಟ್ಲ, ಸಂತೋಷ್ ಕುಲಾಲ್ ಪದವು, ದಿವಾಕರ್ ಬಂಗೇರ, ವಸಂತ್ ಕುಲಾಲ್ ಎರ್ಲಪಾಡಿ, ಬಸವರಾಜ್ ಕುಲಾಲ್, ಸತೀಶ್ ಕುಲಾಲ್ ನಡೂರು, ಕೃಷ್ಣಪ್ಪ ಕುಲಾಲ್ ಪೆರ್ಡೂರು, ಶಂಕರ್ ಕುಲಾಲ್ ಪೆರಂಪಳ್ಳಿ, ದಿನೇಶ್ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹರೀಶ್ ಕುಲಾಲ್ ಹಂದಿಬೆಟ್ಟು ಉಪಸ್ಥಿತರಿದ್ದರು.

ಉಡುಪಿ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು - ಕ್ರಿಯೇಟಿವ್‌ ಸಮಾಗಮ

Posted On: 03-07-2023 07:29PM

ಉಡುಪಿ : ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್‌ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂನ್ 30 ರಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ "ಕ್ರಿಯೇಟಿವ್‌ ಸಮಾಗಮ" ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಅಶ್ವತ್ ಎಸ್‌ ಎಲ್‌ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪಿಯುಸಿ ಹಂತಕ್ಕೆ ಬಂದಿದ್ದು, ಬದುಕಿನ ದಿಕ್ಕನ್ನೇ ಬದಲಾಯಿಸುವ ಈ ಹಂತ ಜೀವನದ ಅಮೂಲ್ಯವಾದ ಘಟ್ಟ. ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾರ್ಥಕತೆಗೊಳಿಸುವಲ್ಲಿ ಶ್ರದ್ಧಾಪೂರ್ವಕವಾಗಿ ಸಕ್ರಿಯವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ. ವಿದ್ಯಾರ್ಥಿಗಳು ತಮ್ಮ ಸರ್ವಾಂಗೀಣ ಬೆಳವಣಿಗೆಯಲ್ಲಿ ಸಿದ್ದಗೊಳಿಸುವಲ್ಲಿ ನಮ್ಮ ಕ್ರಿಯೇಟಿವ್‌ ಸಂಸ್ಥೆ ಸದಾ ತಮ್ಮ ಜೊತೆಗಿರುತ್ತದೆ ಎಂದು ಆಶಯದ ನುಡಿಗಳನ್ನಾಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಸ್ಟ್ಯಾನಿ ಲೋಬೊ ರವರು ಸ್ವಾಗತ ಭಾಷಣವನ್ನು ಮಾಡುತ್ತಾ “ಸಂಸ್ಥೆಯ ಏಳಿಗೆಗೆ ಸಂಸ್ಥಾಪಕರುಗಳು ಹಗಲಿರುಳು ದುಡಿದು ಕಟ್ಟಿದ್ದರ ಫಲವಾಗಿ ಇಂದು ಹೆಮ್ಮರವಾಗಿ ಬೆಳೆದಿದೆ. ಒಂದು ಸುಸಜ್ಜಿತ ಕಾಲೇಜು ನಿರ್ಮಾಣದಲ್ಲಿ ಅವರ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶೃದ್ಧೆ, ಸಂಯಮವನ್ನು ಬೆಳೆಸಿಕೊಂಡಾಗ ಭವ್ಯ ಭಾರತ ದಿವ್ಯ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ಕಲಿಕೆಯಲ್ಲಿ ಪ್ರಥಮ ,ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಜಿಲ್ಲಾಮಟ್ಟದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದ ವಿದ್ಯಾರ್ಥಿಗಳ ತಂಡವನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ಅಭಿನಂಧಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬಂಟಕಲ್ಲು : ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘದಿಂದ ವೈದ್ಯರಿಗೆ ಅಭಿನಂದನೆ

Posted On: 02-07-2023 10:38PM

ಬಂಟಕಲ್ಲು : ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘ (ರಿ.) ಬಂಟಕಲ್ಲು ಇದರ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ಬಂಟಕಲ್ಲು ಆಸುಪಾಸಿನಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಪ್ರಕಾಶ್ ಭಟ್, ಡಾ. ಸಂದೀಪ್, ಡಾ. ಚಿತ್ರಲೇಖ ಇವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಮಾಧವ ಕಾಮತ್, ಸಂಸ್ಥೆಯ ಪದಾಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಕಾಪು : ಮಟ್ಟಾರುವಿನಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನೆ

Posted On: 02-07-2023 09:10PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ಘಟಕದ ವತಿಯಿಂದ ಮಟ್ಟಾರಿನಲ್ಲಿ ಬಾಲ ಸಂಸ್ಕಾರ ಕೇಂದ್ರವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಟ್ಟಾರು ಇದರ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ವಿಶ್ವ ಹಿಂದೂ ಪರಿಷದ್ ಮಟ್ಟಾರು ಇದರ ಅಧ್ಯಕ್ಷರಾದ ಜಗದೀಶ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದುರ್ಗಾವಾಹಿನಿ ದಕ್ಷಿಣ ಪ್ರಾಂತ ಪ್ರಮುಖ್ ಸುರೇಖಾ ರಾಜ್ ಬಾಲ ಸಂಸ್ಕಾರ ಕೇಂದ್ರದ ಅವಶ್ಯಕತೆಯ ಬಗ್ಗೆ ಮಾತನಾಡಿದರು.

ಮಾತೃಶಕ್ತಿ ಉಡುಪಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್, ಕಾಪು ಪ್ರಖಂಡ ಪ್ರಮುಖ್ ವಾಣಿ ಆಚಾರ್ಯ, ದುರ್ಗಾವಾಹಿನಿ ಕಾಪು ಪ್ರಖಂಡ ಸಂಚಾಲಕಿ ನೀಕ್ಷಿತಾ ಪೂಜಾರಿ, ಬಜರಂಗದಳ ಮಟ್ಟಾರು ಸಂಚಾಲಕ ಸುರೇಶ ಆಚಾರ್ಯ, ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್, ದುರ್ಗಾವಾಹಿನಿ ಸಂಚಾಲಕಿ ಶ್ವೇತಾ ರಾವ್, ಬಾಲ ಸಂಸ್ಕಾರ ಪ್ರಮುಖ್ ಪವಿತ್ರಾ ಮಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷರಾದ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ಪ್ರಖಂಡ ಸಹ ಕಾರ್ಯದರ್ಶಿ ವಿಖ್ಯಾತ್ ಭಟ್ ಸ್ವಾಗತಿಸಿದರು. ಹರೀಶ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ, ರಂಜಿತ್ ಶೆಟ್ಟಿ ವಂದಿಸಿದರು.

ಬ್ರಹ್ಮಾವರ : ವನಮಹೋತ್ಸವ ಕಾರ್ಯಕ್ರಮ

Posted On: 02-07-2023 07:08PM

ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಸುವಣ೯ ಎಂಟರ್ಪ್ರೈಸಸ್ ಇವರ ವತಿಯಿಂದ ಬ್ರಹ್ಮಾವರ ಆಡಳಿತ ಸೌಧ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ಜುಲೈ 1 ರಂದು ನಡೆಯಿತು.

ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂತಿ೯ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.

ಅರಣ್ಯಧಿಕಾರಿ ಹರೀಶ್ ಕೆ, ಜಯಂಟ್ಸ್ ಅಧ್ಯಕ್ಷ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೆರಾ, ಸುಂದರ ಪೂಜಾರಿ ಮೂಡುಕುಕ್ಕುಡೆ, ಸುವಣ೯ ಎಂಟರ್ಪ್ರೈಸಸ್ ಪ್ರಮುಖರಾದ ಸುನೀತಾ ಮಧುಸೂಧನ್, ಶ್ರೀನಾಥ್ ಕೋಟ, ಡೋರಿಸ್, ವಿಲ್ಸನ್, ಮಮತಾ ಪ್ರಕಾಶ್ಚಂದ್ರ, ರಾಘವೇಂದ್ರ ಪ್ರಭು,ಕವಾ೯ಲು , ಕಾಯ೯ಕ್ರಮದ ಅಯೋಜಕ ಮತ್ತು ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಮುಂತಾದವರಿದ್ದರು.

ಜುಲೈ 8 : ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಅವರಿಗೆ ಅಭಿನಂದನೆ

Posted On: 02-07-2023 10:16AM

ಮಂಗಳೂರು : ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ, 194 ಪುಸ್ತಕಗಳನ್ನು ಹೊರತಂದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರ ಸಪ್ತತಿ ಪ್ರಯುಕ್ತ ಸಾರ್ವಜನಿಕ ಅಭಿನಂದನ ಸಮಾರಂಭ ಜು.8 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ ಎಂದು ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದ ಸಮಿತಿ ಸಂಚಾಲಕ ಸಂಪತ್ ಬಿ. ಸುವರ್ಣ ತಿಳಿಸಿದ್ದಾರೆ. ಅವರು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ, 1953 ರಲ್ಲಿ ಪುತ್ತೂರಿನ ಪೋಳ್ಯದಲ್ಲಿ ಜನಿಸಿದ ರಾಮಕೃಷ್ಣ ಶಾಸ್ತ್ರಿಅವರು ಎಳವೆಯಲ್ಲಿಯೇ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನೆಲೆಸಿದ್ದು ತನ್ನ 11 ನೆಯ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ್ದರು. 7 ನೆಯ ತರಗತಿವರೆಗೆ ಮಾತ್ರ ಶಾಲಾ ವಿದ್ಯಾಭ್ಯಾಸ ಮಾಡಿದ್ದರೂ ಶಾಲೆ, ಪದವಿ ತರಗತಿಗೆ ಪಠ್ಯವಾಗುವಷ್ಟು ಸಮಗ್ರ ಬರವಣಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಆ ದಿನ ಅಪರಾಹ್ನ 2 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಪ್ರಾಚಾರ್ಯ ಡಾ| ಎನ್. ಎಂ. ಜೋಸೆಫ್ ನೀಡಲಿದ್ದಾರೆ. ಯಕ್ಷಗಾನಾಮೃತದಲ್ಲಿ ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಯಪದವು, ಹಿಮ್ಮೇಳದಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಶಿತಿಕಂಠ ಭಟ್ ಉಜಿರೆ, ನಿರೂಪಣೆಯಲ್ಲಿ ಬಿ. ಎನ್. ಗಿರೀಶ್ ಹೆಗ್ಡೆ ಧರ್ಮಸ್ಥಳ ಭಾಗವಹಿಸುತ್ತಾರೆ.

ಅಪರಾಹ್ನ 3.30 ರಿಂದ ಪ. ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಂ. ಪಿ. ಶ್ರೀನಾಥ್ ಉಜಿರೆ ವಹಿಸಲಿದ್ದಾರೆ. ಪತ್ರಿಕಾ ಲೇಖನ ವಿಷಯದ ಕುರಿತು ಉದಯವಾಣಿ ನಿವೃತ್ತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ ಮಣಿಪಾಲ, ಸಮಗ್ರ ಸಾಹಿತ್ಯ ಕುರಿತು ಸ.ಪ್ರ.ದ.ಕಾಲೇಜು ಬೆಳ್ತಂಗಡಿ ಉಪನ್ಯಾಸಕ ಡಾ| ಕೃಷ್ಣಾನಂದ ಪಿ.ಎಂ. ಗರ್ಡಾಡಿ, ಮಕ್ಕಳ ಸಾಹಿತ್ಯ ಕುರಿತು ಬೆಳ್ತಂಗಡಿಯವರೇ ಆದ ಸಾಹಿತಿ ಡಾ| ದೀಪಾ ಪಡ್ಕೆ ಬೆಂಗಳೂರು ಮಾತನಾಡಲಿದ್ದಾರೆ. ಸಂಜೆ 5 ರಿಂದ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಪುಸ್ತಕ ಬಿಡುಗಡೆ, ಅಭಿನಂದನೆ, ಗೌರವ ಸಾನ್ನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಜನಪದ ವಿವಿ ಹಾವೇರಿಯ ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಅಭಿನಂದಿತರಾಗುವ ಪ.ರಾಮಕೃಷ್ಣ ಶಾಸ್ತ್ರಿಮಚ್ಚಿನ, ಅವರ ಪತ್ನಿ ಶಾರದಾ ಆರ್. ಶಾಸ್ತ್ರಿಉಪಸ್ಥಿತರಿರುತ್ತಾರೆ. ಸಮಾರಂಭದಲ್ಲಿ ಲಕ್ಷ್ಮೀ ಮಚ್ಚಿನ ಬರೆದ ಬದುಕು ಬರಹ ಬವಣೆ: ಪ. ರಾಮಕೃಷ್ಣ ಶಾಸ್ತ್ರಿಹೆಜ್ಜೆ ಗುರುತುಗಳು, ಪ. ರಾಮಕೃಷ್ಣ ಶಾಸ್ತ್ರಿ ಅವರು ಬರೆದ - ಮಳೆ ಮಳೆ (ಲೇಖನಗಳ ಸಂಗ್ರಹ), ನಟನ ಮನೋಹರಿ (ಕಾದಂಬರಿ), ರೋಚಕ ಲೋಕ (ತರಂಗ ಲೇಖನಗಳ ಸಂಗ್ರಹ), ಪ್ರಪಂಚದ ಸೋಜಿಗಗಳು (ತರಂಗ ಲೇಖನಗಳ ಸಂಗ್ರಹ) ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.

ಮಕ್ಕಳ ಕತೆ ಇವರ ಜನಪ್ರಿಯ ಮಾಧ್ಯಮವಾದರೂ ಕತೆ, ಲೇಖನ, ಕಾದಂಬರಿ, ಕವಿತೆ, ವಿಡಂಬನೆ, ನಾಟಕ, ಹನಿಗವನ ಹೀಗೆ ಎಲ್ಲ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನದಲ್ಲೂ ಕಾರ್ಯಕ್ರಮಗಳು ಪ್ರಸಾರವಾಗಿವೆ. ಲೇಖನಗಳು, ಕತೆಗಳು ತುಳು, ಇಂಗ್ಲಿಷ್, ಮಲಯಾಳ, ಹಿಂದಿ ಭಾಷೆಗೆ ಅನುವಾದಗೊಂಡಿವೆ. ಸಮಾಜಸೇವೆ, ಅಭಿವೃದ್ಧಿಯ ಪುರೋಗಾಮಿ ಚಿಂತನೆ, ಸಹಕಾರಿ ಕ್ಷೇತ್ರದಲ್ಲೂ ಅನುಭವ, ಯಕ್ಷಗಾನ ಕ್ಷೇತ್ರದಲ್ಲೂ ಭಾಗವಹಿಸುವಿಕೆ ಇದೆ. ಹೀಗೆ ಎಲ್ಲ ರಂಗದಲ್ಲಿ ತೊಡಗಿಸಿಕೊಂಡವರು. ಈ ನಿಟ್ಟಿನಲ್ಲಿ ಅವರ ಅಭಿನಂದನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ನಡೆಸಬೇಕೆಂಬ ಇರಾದೆಯಿಂದ ಆತ್ಮೀಯರು ಒಟ್ಟಾಗಿ ಈ ಸಮಾರಂಭ ಆಯೋಜಿಸಲಾಗಿದೆ. ಶಾಸ್ತ್ರಿಯವರ ಒಡನಾಡಿಗಳು, ಆತ್ಮೀಯರು, ಬಂಧುಗಳು, ಸಾಹಿತ್ಯದ ಪರಿಚಾರಕರು, ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಿ ಸಾಹಿತ್ಯ ಪರಿಚಾರಕರ ಈ ಸಮಾರಂಭವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕೆಂದು ಸಮಿತಿಯ ಸರ್ವಸದಸ್ಯರ ಅಪೇಕ್ಷೆಯಾಗಿದೆ ಎಂದರು.

ಈ ಸಂದರ್ಭ ಸಂಪತ್ ಬಿ. ಸುವರ್ಣ, ಸಂಚಾಲಕರು, ಪ.ರಾ.ಶಾಸ್ತ್ರಿಅಭಿನಂದನ ಸಮಿತಿ ಎನ್. ಅಶೋಕ ಭಟ್ ಉಜಿರೆ, ಸಂಚಾಲಕರು, ಕುರಿಯ ವಿಠಲಶಾಸ್ತ್ರಿಸಾಂಸ್ಕೃತಿಕ ಪ್ರತಿಷ್ಠಾನ ಡಾ. ಶ್ರೀನಾಥ್ ಎಂ.ಪಿ., ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ದ.ಕ. ಜಿಲ್ಲೆ, ಯದುಪತಿ ಗೌಡ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ಘಟಕ ಉಪಸ್ಥಿತರಿದ್ದರು.