Updated News From Kaup
ಜುಲೈ 16 : ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಬೆಳಪು - ವಿದ್ಯಾರ್ಥಿವೇತನ ವಿನಿಯೋಗ ಕಾರ್ಯಕ್ರಮ

Posted On: 15-07-2023 07:20AM
ಕಾಪು : ಶ್ರೀ ಪಂಚಾಕ್ಷರಿ ಯಕ್ಷಗಾನ ಮಂಡಳಿ, ಎಲ್ಲೂರು ಟೆಕ್ ಸೆಲ್ ಅಟೋಮೇಶನ್ ಪ್ರೈ. ಲಿ. ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜುಲೈ 16, ಆದಿತ್ಯವಾರ ಸಂಜೆ 4 ಗಂಟೆಗೆ ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಬೆಳಪು ಇಲ್ಲಿ ವಿದ್ಯಾರ್ಥಿವೇತನ ವಿನಿಯೋಗ ಕಾರ್ಯಕ್ರಮ ಜರಗಲಿದೆ.
ಬೆಂಗಳೂರಿನ 'ಟೆಕ್ ಸೆಲ್" ಅಟೋಮೇಶನ್ ಪ್ರೈ.ಲಿ. ಸಂಸ್ಥೆಯು ಎಲ್ಲೂರು ಪರಿಸರದ ಒಂಬತ್ತು ಶಾಲೆಗಳ ಮೂವತ್ತೈದು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷದ ಹತ್ತುಸಾವಿರ ರೂಪಾಯಿ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಲಿದೆ.
ಟೆಕ್ ಸೆಲ್ ಅಟೋಮೇಶನ್ ಎಂ.ಡಿ ಆರ್.ಆರ್. ಹರೀಶ್ ರಾವ್ ಮತ್ತು ರೂಪಾ ಹರೀಶ್ ರಾವ್ ವಿದ್ಯಾರ್ಥಿ ವೇತನದ ಪ್ರಾಯೋಜಕರಾಗಿದ್ದು, ಶ್ರೀ ದುರ್ಗಾ ದೇವಸ್ಥಾನ, ಕುಂಜೂರು ಅಧ್ಯಕ್ಷರಾದ ದೇವರಾಜ ರಾವ್, ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪಟೇಲ್ ಪ್ರಕಾಶ ರಾವ್, ಬ್ರಾಹ್ಮಣ ಸಂಘ, ಬೆಳಪು ವಲಯದ ಅಧ್ಯಕ್ಷರಾದ ನಡಿಮನೆ ವಾದಿರಾಜ ರಾವ್, ರಾಘವೇಂದ್ರ ರಾವ್ ಎಲ್ಲೂರು, ಕೆ.ಎಲ್.ಕುಂಡಂತಾಯ ಕುಂಜೂರು ಉಪಸ್ಥಿತಿಯಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಕ್ಷರೀ ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಕೆ. ಶ್ರೀನಿವಾಸ ಉಪಾಧ್ಯಾಯ ವಹಿಸಲಿದ್ದಾರೆ.
ಕಾರ್ಯಕ್ರಮದ ಸಂಯೋಜನೆ, ನಿರ್ವಹಣೆ ಗಣೇಶ್ ರಾವ್ ಎಲ್ಲೂರು ಮಾಡಲಿದ್ದು, ಅಂದು ಬೆಳಗ್ಗೆ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೇ.ಮೂ. ಗೋಪಾಲ ಭಟ್,ವೇ. ಮೂ. ಶ್ರೀ ಕೃಷ್ಣಮೂರ್ತಿ ಭಟ್, ಹಾಗೂ ವೇ.ಮೂ.ಸುಬ್ರಾಯ ಭಟ್ ಅವರನ್ನು ಹಾಗೂ ಶ್ರೀ ಬಡಿಕೇರಿ ಹರದಾಸ ರಾವ್ ಅವರನ್ನು ಅವರವರ ಮನೆಗೆ ಹೋಗಿ ಸಮ್ಮಾನಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ನೂತನ ಜಿಲ್ಲಾಧಿಕಾರಿಯನ್ನು ಅಭಿನಂದಿಸಿದ ಕಾಪು ಶ್ರೀ ಹೊಸ ಮಾರಿಗುಡಿ ದೇವಳ ಸಮಿತಿ

Posted On: 15-07-2023 06:46AM
ಕಾಪು : ಈ ಹಿಂದೆ ಉಡುಪಿ ಜಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ವಿದ್ಯಾ ಕುಮಾರಿ ಅವರು ಶುಕ್ರವಾರ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ ದೇವಳದ ವತಿಯಿಂದ ಅಭಿನಂದಿಸಿದರು.
ಕಾಪು : ಜೈನಮುನಿಗಳ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳನ್ನು ಖಂಡಿಸಿ ಬಿಜೆಪಿಯ ನೇತೃತ್ವದಲ್ಲಿ ಪ್ರತಿಭಟನಾ ಸಭೆ

Posted On: 13-07-2023 08:46PM
ಕಾಪು : ಚಿಕ್ಕೋಡಿಯಲ್ಲಿ ಜೈನ ಮುನಿಗಳ ಅಮಾನುಷ ಹತ್ಯೆ ಸರಣಿ ಹತ್ಯೆಗಳನ್ನು ಖಂಡಿಸಿ ರಾಜ್ಯ ಸರಕಾರದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಖಂಡಿಸಿ ಪ್ರತಿಭಟನಾ ಸಭೆ ಕಾಪು ಬಿಜೆಪಿ ಕಚೇರಿ ಬಳಿ ನಡೆಯಿತು.
ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿ ನಾವು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ ಪ್ರಾಧಾನ್ಯತೆಯಿಂದ ಪ್ರೇರಿತರಾದ ಸಮಾಜಘಾತುಕ ಶಕ್ತಿಗಳು ಜೈನ ಮುನಿಯ ಅಮಾನುಷ ಹತ್ಯೆ ಮಾಡಿದ್ದು, ಇದರ ಹಿಂದೆ ಮೂಲಭೂತವಾದಿಗಳ ಜೆಹಾದಿ ಶಕ್ತಿಗಳ ಕೈವಾಡ ಇರುವ ಸಾಧ್ಯತೆ ಇದ್ದು ಇದರ ತನಿಖೆ ಸಿಬಿಐ ಗೆ ವಹಿಸಬೇಕು. ಇದರೊಂದಿಗೆ ರಾಜ್ಯದಲ್ಲಿ ನಡೆದ ವೇಣುಗೋಪಾಲ್ ಹತ್ಯೆ, ಬೆಂಗಳೂರಿನಲ್ಲಿ ನಡೆದ ಸರಣಿ ಹತ್ಯೆಗಳನ್ನು ಖಂಡಿಸಲಾಗಿ ರಾಜ್ಯದಲ್ಲಿ ಹಿಂದೂಗಳಿಗೆ ಭಯದಲ್ಲಿ ಓಡಾಡುವ ವಾತಾವರಣ ನಿರ್ಮಾಣವಾಗುತ್ತಿದ್ದು ಮುಖ್ಯಮಂತ್ರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಕೂಡಲೇ ಗ್ರಹ ಇಲಾಖೆಗೆ ಆದೇಶ ನೀಡಬೇಕೆಂದು ಆಗ್ರಹಿಸಲಾಯಿತು. ತುಷ್ಟೀಕರಣ ನೀತಿಯನ್ನು ಕೈ ಬಿಡದಿದ್ದರೆ ಮುಂದೆ ಮತ್ತೆ ಬೀದಿಗಿಳಿದು ಹೋರಾಟ ಮಾಡುವೆವು ಎಂದರು. ಪಂಚ ಗ್ಯಾರಂಟಿಗಳ ಅವ್ಯವಸ್ಥೆಯಿಂದ ಜನ ರೋಸಿಹೋಗಿದ್ದಾರೆ. ಕೂಡಲೇ ಇದನ್ನು ಸರಿಪಡಿಸಿ ಜನರಿಗೆ ಕೊಟ್ಟ ಮಾತಿನಂತೆ ಎಲ್ಲ ಗ್ಯಾರಂಟಿಗಳನ್ನು ಒದಗಿಸಲು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಮಾತನಾಡಿ ಸರಕಾರ ಅಲ್ಪಸಂಖ್ಯಾತರ ಪುಷ್ಟೀಕರಣ ಮಾಡುವಲ್ಲಿ ಮೊದಲ ಹೆಜ್ಜೆಯಾಗಿ ಶಿಕ್ಷಣದಲ್ಲಿ ಕೋಮುವಾದ ತುಂಬಿದೆ. ನಂತರ ಬಜೆಟ್ ನಲ್ಲಿ ಅವರಿಗೆ ಮಾತ್ರ ಸಾಕಷ್ಟು ಘೋಷಣೆಗಳನ್ನು ಮಾಡಿದೆ. ಇಷ್ಟಲ್ಲದೆ ವರ್ಗಾವಣೆ ಧಂದೆ ಮೂಲಕ ಕೋಟ್ಯಂತರ ರೂಪಾಯಿ ಹಣದ ವ್ಯವಹಾರ ಮಾಡಿ ಹೇಸಿಗೆ ಹುಟ್ಟಿಸುತ್ತದೆ. ಮತ್ತೆ ಮತ್ತೆ ಹಿಂದೂಗಳ ಹತ್ಯೆ ನಡೆದರೆ ಸುಮ್ಮನೆ ಕುಳಿತುಕೊಳ್ಳಲಾಗದು ಎಂದರು.
ಸಭೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಉಪಾಧ್ಯಕ್ಷರಾದ ಸುಧಾಮ ಶೆಟ್ಟಿ, ಮಂಡಲ ಕಾರ್ಯದರ್ಶಿ ಲತಾ ಆಚಾರ್ಯ, ಪೂರ್ಣಿಮಾ ಚಂದ್ರಶೇಖರ್, ಮಹಿಳಾ ಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ, ಮಹಾಶಕ್ತಿಕೇಂದ್ರಗಳ ಅಧ್ಯಕ್ಷರುಗಳಾದ ವಿಶ್ವನಾಥ ಕುರ್ಕಾಲು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಪ್ರಮುಖರಾದ ಶಶಿಧರ್ ವಾಗ್ಳೆ, ಸುರೇಖ ಶೈಲೇಶ್, ಪದ್ಮನಾಭ ಕೊಡಂಗಳ, ಸುಬ್ರಹ್ಮಣ್ಯ ಪಾಂಗಳ, ಶಕ್ತಿಕೇಂದ್ರ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ದ.ಕ, ಉಡುಪಿ ಸಹಿತ ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Posted On: 13-07-2023 03:22PM
ಉಡುಪಿ : ಹವಾಮಾನ ಇಲಾಖೆ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದ್ದು, ಆರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿಯ ಬಹುತೇಕ ಕಡೆ ಹಾಗೂ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕೆಲವೆಡೆಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಗಂಟೆಗೆ 40–45 ಕಿ.ಮೀ.ನಿಂದ 55 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ಕೆ. ನೇಮಕ

Posted On: 13-07-2023 12:48PM
ಉಡುಪಿ : ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ.ಕೆ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಅವರು ವರ್ಗಾವಣೆಗೊಂಡಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ವಿದ್ಯಾಕುಮಾರಿ ಕೆ ಅವರು ಈ ಹಿಂದೆ ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ರಾಜ್ಯ ಸರಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಸೆಪ್ಟೆಂಬರ್ 2021 ರಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಇಂದು ವರ್ಗಾವಣೆಗೊಂಡಿದ್ದಾರೆ
ಉಡುಪಿ : ಅಗ್ನಿಪಥ್ ಸೇನಾ ನೇಮಕಾತಿ ರ‌್ಯಾಲಿಗೆ ವ್ಯವಸ್ಥಿತ ಸಿದ್ಧತೆ ಕೈಗೊಳ್ಳಿ - ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

Posted On: 12-07-2023 09:25PM
ಉಡುಪಿ : ಇಲ್ಲಿನ ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ‌್ಯಾಲಿಯು ಜುಲೈ 17 ರಿಂದ 25 ರ ವರೆಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ತಿಳಿಸಿದರು. ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸೇನಾ ನೇಮಕಾತಿ ರ‌್ಯಾಲಿಗೆ ಈಗಾಗಲೇ ಆನ್ಲೈನ್ ಮೂಲಕ ಹೆಸರು ನೊಂದಾಯಿಸಿಕೊಂಡಿರುವ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದು, ರ‌್ಯಾಲಿಗೆ ಇದುವರೆಗೆ 6,800 ಕ್ಕೂ ಅಧಿಕ ಮಂದಿ ನೊಂದಣಿ ಮಾಡಿಕೊಂಡಿದ್ದಾರೆ ಎಂದರು. ನೇಮಕಾತಿ ರ‌್ಯಾಲಿಗೆ ಪ್ರತಿದಿನ ಸುಮಾರು 1000 ಮಂದಿ ಆಗಮಿಸಲಿದ್ದು, ಇವರಿಗೆ ಮೂಲಭೂತ ಅವಶ್ಯಕತೆಯಾಗಿ ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ರೀಡಾಂಗಣದ ಸುತ್ತಲೂ ಸ್ಚಚ್ಛತೆಯನ್ನು ಕಾಪಾಡಲು ಸಾಕಷ್ಟು ಸಂಖ್ಯೆಯ ಮೊಬೈಲ್ ಟಾಯ್ಲೆಟ್ಗಳ ವ್ಯವಸ್ಥೆಯನ್ನು ಮಾಡುವುದರ ಮೂಲಕ ಸ್ವಚ್ಛತೆಗೆ ಅತ್ಯಂತ ಗರಿಷ್ಠ ಆದ್ಯತೆಯನ್ನು ನೀಡಿ, ಪ್ರತಿದಿನ ಈ ಬಗ್ಗೆ ಪರಿಶೀಲಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಸೂಚನೆ ನೀಡಿದರು.
ರ‌್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಮತ್ತು ರಾತ್ರಿ ವೇಳೆಯಲ್ಲಿ ರಸ್ತೆ ಬದಿಗಳಲ್ಲಿ ಅಭ್ಯರ್ಥಿಗಳು ಮಲಗದಂತೆ, ಕ್ರೀಡಾಂಗಣ ಸುತ್ತಮುತ್ತ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಮೆಸ್ಕಾಂ ವತಿಯಿಂದ ರ‌್ಯಾಲಿ ನಡೆಯುವ ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಮತ್ತು ಅಪಾಯಕಾರಿ ಮರದ ಕೊಂಬೆಗಳು ಮತ್ತು ವಿದ್ಯುತ್ ತಂತಿಗಳಿದ್ದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಬಿ.ಎಸ್.ಎನ್.ಎಲ್ ವತಿಯಿಂದ ಸೇನಾ ಕಾರ್ಯಗಳನ್ನು ನಿರ್ವಹಿಸಲು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ರ‌್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಪರಿಶೀಲನೆ ನಡೆಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ರ‌್ಯಾಲಿ ನಡೆಯುವ ಸ್ಥಳದಲ್ಲಿ ತುರ್ತು ಆರೋಗ್ಯ ಸಹಾಯಕ್ಕಾಗಿ ಆಂಬುಲೆನ್ಸ್ ಒಳಗೊಂಡ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು. ಈ ನೇಮಕಾತಿ ರ‌್ಯಾಲಿಗೆ ಸಂಬಂಧಿಸಿದಂತೆ ಏಪ್ರಿಲ್ 17 ರಿಂದ ನೊಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್, ಅಗ್ನಿವೀರ್ ಕ್ಲಕ್/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಈ ಮೇಲ್ ಮೂಲಕ ಕಳುಹಿಸಲಾಗಿದೆ.
ಸಭೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ನಗರಸಭೆಯ ಪೌರಾಯುಕ್ತ ರಾಯಪ್ಪ, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ : ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

Posted On: 12-07-2023 09:08PM
ಉಡುಪಿ : ಲೋಕಾಯುಕ್ತ ಪೊಲೀಸ್ ವಿಭಾಗದ ವತಿಯಿಂದ ಬ್ರಹ್ಮಾವರ ತಾಲೂಕು ಸಾರ್ವಜನಿಕ ಅಹವಾಲು ಕಾರ್ಯಕ್ರಮವು ಇಂದು ಚಾಂತಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 10 ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 9 ನ್ನು ಸ್ಥಳದಲ್ಲಿ ಇತ್ಯರ್ಥಪಡಿಸಲಾಯಿತು. 1 ದೂರು ಅರ್ಜಿಗೆ ಸಂಬಂಧಿಸಿದಂತೆ ಪ್ರಪತ್ರ 1 & 2 ನ್ನು ನೀಡಲಾಯಿತು. ಸಾರ್ವಜನಿಕರ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೇ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಹಾಗೂ ಸೂಕ್ತ ಕಾರಣವಿಲ್ಲದೇ ತಿರಸ್ಕಾರ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಮಳೆಗಾಲ ಪ್ರಾರಂಭವಾಗಿದ್ದು, ಜೋರಾಗಿ ಮಳೆಬಂದು ಪ್ರವಾಹ ಉಂಟಾಗಿ ಜೀವಹಾನಿ ಹಾಗೂ ಬೆಳೆಹಾನಿ ಉಂಟಾಗುವ ಸಾಧ್ಯತೆಯಿರುವುದರಿಂದ ಕೂಡಲೇ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಹಾಗೂ ಪರಿಹಾರ ನೀಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸಾಂಕ್ರಮಿಕ ಕಾಯಿಲೆಗಳು ಹರಡುವ ಸಾಧ್ಯತೆಯಿರುವುದರಿಂದ ಸೂಕ್ತ ಮುನ್ನಚ್ಚೆರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸರ್ವೆ ಇಲಾಖೆಯಿಂದ ಸರ್ವೆ ವಿಳಂಬವಾಗುತ್ತಿರುವ ಬಗ್ಗೆ ಹಾಗೂ ನಕ್ಷೆ ನೀಡದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಮಳೆಗಾಲದಲ್ಲಿ ವಿದ್ಯುತ್ ತಂತಿಗಳು ಹರಿದು ಬೀಳುವ ಸಾಧ್ಯತೆಯಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿ ಜೀವಹಾನಿಯಾಗುವ ಸಾಧ್ಯತೆಯಿರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಇಲಾಖೆಗೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್.ಕೆ.ಸಿ, ಪೊಲೀಸ್ ನಿರೀಕ್ಷಕ ಜಯರಾಮ.ಡಿ.ಗೌಡ, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮಂಜುನಾಥ ಶೇಪೂರ, ಬ್ರಹ್ಮಾವರ ಎಡಿಎಲ್ಆರ್ ತಿಪ್ಪರಾಯ ತೊರವಿ, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ ನಾಯ್ಕ, ಚಾಂತಾರು ಪಿಡಿಓ ಸತೀಶ ನಾಯ್ಕ್, ಬ್ರಹ್ಮಾವರ ತಾಲೂಕು ಪಂಚಾಯತ್ ಯೋಜನಾಧಿಕಾರಿ ಸಂದೇಶ್ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್, ಬ್ರಹ್ಮಾವರ ತೋಟಗಾರಿಕೆ ಅಧಿಕಾರಿ ಮಹಾಂತೇಶ ಕಾಂಬಳೆ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿಯ ಹಿರಿಯ ಮೇಲ್ವಿಚಾರಕಿ ಭಾಗಿರಥಿ ಆಚಾರ್ಯ, ಮೆಸ್ಕಾಂ ಸಹಾಯಕ ಅಭಿಯಂತರ ಅಶೋಕ್ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬಿ.ಬಿ, ಬ್ರಹ್ಮಾವರ ಪಶು ಸಂಗೋಪನೆ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರದೀಪ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕುಲಾಲ ಚಾವಡಿ ವಾಟ್ಸಪ್ ಬಳಗದಿಂದ ಪುಟ್ಟ ಕಂದ ವರ್ಷಿತ್ ಕುಲಾಲ್ ಗೆ ವೈದಕೀಯ ನೆರವು

Posted On: 12-07-2023 08:56PM
ಕಾಪು : ಹೃದಯ ಭಾರವಾದಂತೆ ತೇವಗೊಂಡ ಆ ಕಣ್ಣಂಚಲಿ ಭರವಸೆಯ ಬೆಳಕೊಂದು ಮಿಂಚಿ ಮರೆಯಾಯಿತು. ಭಾವುಕ ಮನಸ್ಸಿನಲ್ಲಿ ಭಾವೋದ್ವೇಗವು ಕಟ್ಟೆಯೊಡೆದು ಸಂತಸ, ದುಃಖ ಏಕಕಾಲಕ್ಕೆ ಪ್ರಕಟಗೊಂಡು ಗಂಟಲು ಗದ್ಗದಿತವಾಗಿ ಮಾತು ತಡವರಿಸಿತು. ಅರೆಕ್ಷಣದ ಮೌನ ಸಾವಿರ ಸಾವಿರ ಕೃತಜ್ಞತೆ ಸಲ್ಲಿಸುವ ಭಾವಕ್ಕೆ ಸಾಕ್ಷಿಯಾಯಿತು. "ಈ ನೋವಿಗಿಂತ ಮಕ್ಕಳಿಲ್ಲದ ಬದುಕೇ ಲೇಸು" ಎನ್ನುವ ಮಾತೃ ಹೃದಯದ ಅಂತರಾಳದ ನುಡಿ ಆ ಮಗುವಿನ ಆರೋಗ್ಯಕ್ಕಾಗಿ ಪಟ್ಟ ಪಡಿಪಾಟಲಿನ ತೆರೆದ ಪುಸ್ತಕವಾಯಿತು. ಚಾವಡಿ ಬಂಧುಗಳು ಪುಟ್ಟ ಕಂದ ವರ್ಷಿತ್ ನ ಆರೋಗ್ಯಕ್ಕಾಗಿ ನಲ್ಲೂರು ಗ್ರಾಮದ ನೆಲ್ಲಿಕಾರಿನ ಪೇರಳ್ಕೆ ನಿವಾಸಿ ಜಯಶ್ರೀಯವರ ಮನೆಯಂಗಳ ತಲುಪಿದಾಗಿನ ಕ್ಷಣದ ಭಾವನಾತ್ಮಕ ಸನ್ನಿವೇಶದ ತುಣುಕಿದು.
ಆ ತಾಯಿ ಪಟ್ಟ ಬವಣೆಗಳೆಲ್ಲಾ ಪದಗಳಾಗಿ ವೇದನೆಯ ನುಡಿಗಳಾದಾಗ ಮೌನವಾಗಿ ತಲೆ ಅಲ್ಲಾಡಿಸುವ ಸರದಿ ನಮ್ಮದು. ಒಂದು ವರ್ಷ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಚಿಕಿತ್ಸೆಯನ್ನೇ ನಿಲ್ಲಿಸಿದ್ದೆವು ಎನ್ನುವ ಆ ತಾಯಿಯ ಅಸಹಾಯಕತೆಯ ಮಾತಿನಲ್ಲಿ ಸ್ಪಷ್ಟವಾದ ಪಶ್ಚಾತ್ತಾಪದ ಛಾಯೆಯಿತ್ತು. ಗಂಡು ದಿಕ್ಕಿಲ್ಲದ ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ತನ್ನೆಲ್ಲ ಹರೆಯದ ಆಸೆ ಆಕಾಂಕ್ಷೆಗಳ ಬದಿಗಿರಿಸಿ ದೇವರು ಕೊಟ್ಟ ಕರುಳ ಕುಡಿಯ ಆರೋಗ್ಯಕ್ಕೆ ಸರ್ವವನ್ನೂ ತ್ಯಾಗ ಮಾಡಿದ ಆ ಮಾತೃ ಹೃದಯದ ಕೂಗು ಕೊನೆಗೂ ಆ ಭಗವಂತನ ಬಡಿದೆಬ್ಬಿಸಿದೆ. ಪರಿಣಾಮ ಸತತ ಐದು ವರ್ಷಗಳ ನಿರಂತರವಾದ ಅವರ ಶ್ರಮ ಫಲಿಸಿದೆ. ಸದ್ಯದ ಸ್ಥಿತಿಯಲ್ಲಿ ಮಗುವಿನ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಆಗುತ್ತಿದ್ದು ಗಳಿಗೆಗೊಮ್ಮೆ ಅಪಸ್ಮಾರದ ಪ್ರಭಾವಕ್ಕೆ ಮೈ ಸುರುಟಿ ಕೊಳ್ಳುತ್ತಿದ್ದ ಮಗುವಿನಲ್ಲಿ ಬಹುತೇಕ ಈ ಲಕ್ಷಣಗಳು ಕಾಣುತ್ತಿಲ್ಲ. ಶಬ್ದ ಮತ್ತು ಸ್ಪರ್ಶದ ಅರಿವಿಲ್ಲದೆ ಜಡತ್ವದ ಸ್ಥಿತಿಯಲ್ಲಿದ್ದ ಮಗು ಈಗ ಒಂದೆರಡು ಚಹರೆಗಳ ಗುರುತಿಸಿ ಕಿರುನಗುವ ಬೀರುತ್ತಿದೆ. ಇದನ್ನು ಕಾಣುತ್ತಿರುವ ಆ ತಾಯಿಯಲ್ಲೂ ಭರವಸೆಯ ಧೃಡ ಹೆಜ್ಜೆಗಳು ಮತ್ತಷ್ಟು ಬಲಗೊಳ್ಳತೊಡಗಿವೆ.
ಚಾವಡಿ ಬಂಧುಗಳ ನೂರು,ಇನ್ನೂರಿಂದ ಪ್ರಾರಂಭಗೊಂಡ ಅಂತರಾಳದ ಹಾರೈಕೆ ನೂರು ಪ್ರತಿಶತ ಸಾರ್ಥಕ್ಯ ಪಡೆಯಿತು ಎಂಬ ಭರವಸೆ ತುಂಬಿದ ಆ ಕ್ಷಣಕ್ಕೆ ಸಾಕ್ಷಿಯಾದ ಸಂತೃಪ್ತಿ ಒಂದೆಡೆಯಾದರೆ ಸಂಕಷ್ಟಗಳಿಂದ ಜೀವಕೋಟಿ ಮುಕ್ತವಾಗಲಿ "ಲೋಕಾ ಸಮಸ್ತ ಸುಖಿನೋ ಭವಂತು" ಎನ್ನುವುದೇ ಭಗವಂತನಲ್ಲಿ ನಮ್ಮ ನಿತ್ಯ ಪ್ರಾರ್ಥನೆ. ವರ್ಷಿತ್ ನ ಚಿಕಿತ್ಸಾ ವೆಚ್ಚವಾಗಿ ಒಗ್ಗೂಡಿದ ₹57865/-ರೂ ಗಳಲ್ಲಿ ₹57000/-ವನ್ನು ವರ್ಷಿತ್ ತಾಯಿಗೆ ನೀಡಲಾಗಿದೆ.
ಕುಲಾಲ ಚಾವಡಿಯು "ಅಶಕ್ತರ ಆಶಾದೀಪ ಮಾನವೀಯತೆಯ ವಿಶ್ವರೂಪ" ಎಂಬ ಘೋಷವಾಕ್ಯದಡಿ ಒಂದು ಸಂತುಲಿತ ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಜವಾಬ್ದಾರಿ ಮೆರೆದಿದೆ.
ಉಡುಪಿ : ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಯುವ ಪ್ರತಿಭೆ, ವಿದ್ಯಾರ್ಥಿ ವೇತನ ಪ್ರಶಸ್ತಿಗೆ ನೇಹಾ ಹೊಳ್ಳ ಆಯ್ಕೆ

Posted On: 12-07-2023 08:08PM
ಉಡುಪಿ : ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ, ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿ ಸಿ ಆರ್ ಟಿ) ನಡೆಸಿದ , 2020-2021 ಭಾರತದ ಯುವ ಪ್ರತಿಭಾ ಶೋಧದಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಯುವ ಪ್ರತಿಭೆ, ವಿದ್ಯಾರ್ಥಿ ವೇತನ ಪ್ರಶಸ್ತಿಗೆ, ಉಡುಪಿ ಜಿಲ್ಲೆಯಿಂದ ಏಕೈಕ ಅಭ್ಯರ್ಥಿಯಾಗಿ ಮಣೂರು ಗ್ರಾಮದ ನೇಹಾ ಹೊಳ್ಳ ಆಯ್ಕೆಯಾಗಿದ್ದಾರೆ.
ಇವರು ಮಣೂರು ಡಾ ಎಂ ವಿ ಹೊಳ್ಳ , ಶಾರದಾ ಹೊಳ್ಳ ಇವರ ಪುತ್ರಿ .ಇವರು ಕಳೆದ 9 ವರ್ಷಗಳಿಂದ ವಿದ್ವಾನ್ ಸತೀಶ್ ಭಟ್ ಮಾಳಕೊಪ್ಪ ಇವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2023 ಮಾರ್ಚ್ ನಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದ ಸೀನಿಯರ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿರುತ್ತಾರೆ.
ಜುಲೈ 14 : ಮಿನಿ ಉದ್ಯೋಗ ಮೇಳ

Posted On: 11-07-2023 09:37PM
ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಜುಲೈ 14 ರಂದು ಬೆಳಗ್ಗೆ 10.30 ಕ್ಕೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.