Updated News From Kaup
ಜುಲೈ 9 (ನಾಳೆ) : ಕಾಪು ಹೊಸಮಾರಿಗುಡಿ ದೇವಸ್ಥಾನ - ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಮಹಾಅಭಿಯಾನಕ್ಕೆ ಚಾಲನೆ

Posted On: 08-07-2023 04:28PM
ಕಾಪು : ಇಲ್ಲಿನ ಹೊಸಮಾರಿಗುಡಿ ದೇವಸ್ಥಾನವು ಸಂಪೂರ್ಣ ಇಳಕಲ್ ಕೆಂಪು ಶಿಲೆಯೊಂದಿಗೆ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಪ್ರಥಮ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಜೀರ್ಣೋದ್ಧಾರದ ಅಂಗವಾಗಿ 9 ಶಿಲಾಸೇವೆ ಸಮರ್ಪಿಸಿ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸದಸ್ಯರನ್ನು ಸೇರ್ಪಡೆ ಗೊಳಿಸುವ ಮಹಾಅಭಿಯಾನಕ್ಕೆ ಜುಲೈ 9 ರಂದು ಅಮ್ಮನ ಸನ್ನಿಧಿಯಲ್ಲಿ ಚಾಲನೆ ನೀಡಲಾಗುವುದು. ಮಹಾಅಭಿಯಾನದ ಮೂಲಕ 9 ಶಿಲಾ ಸೇವೆ ಸಮರ್ಪಿಸುವ ಕನಿಷ್ಟ ಒಂಭತ್ತು ಸದಸ್ಯರನ್ನು ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಗೊಳಿಸುವ ಸಮಿತಿ ಸದಸ್ಯರು ದೀಕ್ಷಾ ದೀಪ ಪ್ರಜ್ವಲನೆ ನಡೆಸಿ ಸಂಕಲ್ಪ ಸ್ವೀಕರಿಸಲಿದ್ದಾರೆ.

ಪ್ರಪಂಚದಾದ್ಯಂತ 99,999 ಸದಸ್ಯರನ್ನು ಸೇರ್ಪಡೆಗೊಳಿಸಿ 9,99,999 ಶಿಲಾ ಸೇವೆ ಸಮರ್ಪಿಸುವ ಗುರಿಯೊಂದಿಗೆ ಅಮ್ಮನ ಸಂಪೂರ್ಣ ಶಿಲಾಮಯ ಮಾರಿಗುಡಿ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಅಭಿಯಾನವು ಜುಲೈ 9 ರಿಂದ ಅಕ್ಟೋಬರ್ 15ರವರೆಗೆ ಅಂದರೆ 99 ದಿನಗಳವರೆಗೆ ನಡೆಯಲಿದೆ. ಪೂರ್ವಭಾವಿಯಾಗಿ ಮುಂಬಯಿ - ಪುಣೆ - ಬೆಂಗಳೂರು ಹಾಗೂ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಮೂಲಕವಾಗಿ ಪ್ರಪಂಚದಾದ್ಯಂತ ಇರುವ ಅಮ್ಮನ ಭಕ್ತರು 9 ಶಿಲಾಸೇವೆಯ ಬಾಬ್ತು 9,999 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಶಿಲೆಯನ್ನು ನೀಡಿ, ಶಿಲಾಪುಷ್ಪವನ್ನು ಅರ್ಪಿಸಿ, “ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಗೊಳಿಸುವ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಕಳೆದ ಜೂನ್ 12 ರಂದು ಕಾಪು ಹೊಸಮಾರಿಗುಡಿಯ ಮಾರಿಯಮ್ಮ ದೇವಿಯ ಸಾನಿಧ್ಯ ಚಲನೆ ಮತ್ತು ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಟೆ ಕಾರ್ಯಕ್ರಮ ನಡೆದಿರುತ್ತದೆ. ಮುಂದಿನ ನವರಾತ್ರಿ ಸಂದರ್ಭ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ ನಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಗೆ ಮೊದಲು ಮಾರಿಯಮ್ಮನ ಗುಡಿ ಸಮರ್ಪಣೆಗೆ ಯೋಜನೆ ರೂಪಿಸಲಾಗಿದೆ.

ಕಾಪು ಶಾಸಕ, ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಎಲ್ಲ ಸಮಾಜದ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೊಳಿಸಿ, ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆ ಮಹಾಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಹಾಗೂ ದೀಕ್ಷೆ ಸ್ವೀಕರಿಸಲಿರುವ ಸಂಯೋಜಕರು ಪಾಲ್ಗೊಳ್ಳಲಿದ್ದಾರೆ ಎಂದು ಕಾಪು ಹೊಸಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ಹಾಗೂ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಗೆ ಮಾತೃ ವಿಯೋಗ

Posted On: 08-07-2023 11:26AM
ಕಾಪು : ಮಾಜಿ ಸಚಿವರು ಹಾಗೂ ಮಾಜಿ ಸಂಸದರು ಆಗಿರುವಂತಹ ವಿನಯ್ ಕುಮಾರ್ ಸೊರಕೆ ರವರ ತಾಯಿ ಶ್ರೀಮತಿ ಸುನೀತಿ ಅಚ್ಯುತ ಸೊರಕೆ (91) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಶ್ರೀಮತಿ ಸುನೀತಿ ಅಚ್ಯುತ ಸೊರಕೆ (91)ರವರು ಮೂರು ಜನ ಪುತ್ರರು, ಎರಡು ಜನ ಪುತ್ರಿಯರು, ಎಂಟು ಮೊಮ್ಮಕ್ಕಳು,ಹಾಗೂ ಮೂರು ಮರಿ ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಇಂದು ಮದ್ಯಾಹ್ನ 1.30 ರ ನಂತರ ತಮ್ಮ ಸ್ವಗೃಹವಾದ ಪುತ್ತೂರು ತಾಲೂಕಿನ ಸರ್ವೇ ಗ್ರಾಮದ ಸೊರಕೆಯಲ್ಲಿ ನಡೆಯುವುದು ಎಂದು ತಿಳಿಸಲಾಗಿದೆ.
ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ - ವನಮಹೋತ್ಸವ

Posted On: 07-07-2023 07:47PM
ಕಾಪು : ದೇಸಿಕ್ರ್ಯೂ ಸೊಲ್ಯೂಷನ್ಸ್ ಸರ್ವಿಸ್ ಪ್ರೈ.ಲಿಮಿಟೆಡ್ ಇವರ ಆಶ್ರಯದಲ್ಲಿ ಕಾಪುವಿನಲ್ಲಿ ವನಮಹೋತ್ಸವ ಆಚರಿಸಲಾಯಿತು.

ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಮತ್ತು ಮಂಜುನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು. ಜೀವನ್ ದಾಸ್ ಶೆಟ್ಟಿ ಮರಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಸಂಸ್ಥೆಯ ವಿನೋದ್ ರಾವ್ ವನಮಹೋತ್ಸವದ ಕುರಿತು ಮಾತನಾಡಿದರು. ಈ ಸಂದರ್ಭ ಸಂಸ್ಥೆಯ ಉದ್ಯೋಗಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಸಂಸ್ಥೆಯ ಉದ್ಯೋಗಿಗಳಿಗೆ ಹೂವಿನ ಮತ್ತು ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಆಯೋಜಕರಾದ ಸಂಸ್ಥೆಯ ರಶ್ಮಿ ಎಸ್ ಎಮ್ ಸ್ವಾಗತಿಸಿದರು. ವೀಣಾ ಶೆಟ್ಟಿ ವಂದಿಸಿದರು.
ಪಡುಬಿದ್ರಿ : ಕಡಲ್ಕೊರೆತ ; ಕೈರಂಪಣಿ ಗೋದಾಮು ಸಮುದ್ರ ಪಾಲು

Posted On: 07-07-2023 07:31PM
ಪಡುಬಿದ್ರಿ : ಮಳೆ ಅಬ್ಬರ ಕೊಂಚ ಕಡಿಮೆಯಾದರೂ ಕಡಲಾರ್ಭಟ ಇನ್ನೂ ನಿಂತಿಲ್ಲ. ಪಡುಬಿದ್ರಿಯ ಕಾಡಿಪಟ್ಣ ಮುಖ್ಯ ಬೀಚ್ ನಲ್ಲಿರುವ ಇಂಟರ್ಲಾಕ್ ಮತ್ತು ತೆಂಗಿನ ಮರಗಳು ಕಡಲ್ಕೊರೆತದ ಹಾವಳಿಗೆ ಸಿಲುಕಿವೆ.

ಇನ್ನೊಂದೆಡೆ ಕೈ ರಂಪಣಿ ಗೋದಾಮು ಕಡಲಲೆಗಳಿಗೆ ಸಿಲುಕಿ ನೆಲಸಮವಾಗಿದೆ. ಇನ್ನೂ ಮುಂದುವರಿದಂತೆ ಮೀನುಗಾರಿಕಾ ರಸ್ತೆಯು ಅಪಾಯದ ಅಂಚಿನಲ್ಲಿದೆ.
ಜುಲೈ 7 (ನಾಳೆ) : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Posted On: 06-07-2023 08:55PM
ಉಡುಪಿ : ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟ ಬುಧವಾರ ಕೂಡ ಮುಂದುವರಿದಿದ್ದು, ಮುಂಜಾಗೃತ ಕ್ರಮವಾಗಿ ಜುಲೈ 7 (ಶುಕ್ರವಾರ) ರಂದು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಸುತ್ತೋಲೆ ಪ್ರಕಟಿಸಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕೆರೆ, ನದಿ , ಸಮುದ್ರಗಳಿಗೆ ಮಕ್ಕಳು ತೆರಳದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೇಂದ್ರ ಸ್ಥಾನದಲ್ಲಿದ್ದು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈಗ ನೀಡಿದ ರಜೆಯನ್ನು ಶನಿವಾರ ಪೂರ್ಣ ದಿನ ಅಥವಾ ಭಾನುವಾರ ತರಗತಿಗಳನ್ನು ನಡೆಸಿ ಸರಿದೂಗಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕಾಪು : ತಾಲೂಕಿನ ಜಲಾವೃತಗೊಂಡ ಸ್ಥಳದಲ್ಲಿದ್ದ ಕುಟುಂಬಗಳ ಸ್ಥಳಾಂತರ

Posted On: 06-07-2023 08:43PM
ಕಾಪು : ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದ್ದು ಈ ಭಾಗದಲ್ಲಿದ್ದ ಕುಟುಂಬಗಳನ್ನು ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಗಳ ಮುತುವರ್ಜಿಯಿಂದ ಸ್ಥಳಾಂತರಗೊಳಿಸಲಾಗಿದೆ.

ಕೆಲವೆಡೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ತೊಡಕಾಗಿತ್ತು. ಕೆಲವೆಡೆ ರಸ್ತೆ ಸಂಚಾರ ನಿರ್ಬಂಧಿಸಲಾಗಿತ್ತು.

ಕಾಪು ತಾಲೂಕಿನ ಪಾಂಗಾಳ, ಉಳಿಯಾರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರು, ಮೂಡಬೆಟ್ಟು, ಏಣಗುಡ್ಡೆ, ಬೆಳಪು, 92 ಹೇರೂರು, ನಡ್ಸಾಲು, ಬೆಳ್ಳೆ, ಕುರ್ಕಾಲು ಗ್ರಾಮಗಳ 64 ಕುಟುಂಬಗಳ ಒಟ್ಟು 258 ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಈ ಸಂದರ್ಭ ಕಾಪು ತಹಶೀಲ್ದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಆಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗೃಹ ರಕ್ಷಕ ದಳ ವಿಪತ್ತು ನಿರ್ವಹಣಾ ತಂಡ ಮತ್ತು ಕರಾವಳಿ ಪಡೆಯ ಸದಸ್ಯರುಗಳು, ಸ್ಥಳೀಯರು ಸಹಕರಿಸಿದ್ದರು.
ಕಾಪು : ಜಲಾವೃತವಾದ ಪ್ರದೇಶಗಳಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

Posted On: 06-07-2023 07:52PM
ಕಾಪು : ಧಾರಾಕಾರ ಮಳೆಯಿಂದ ಕಟಪಾಡಿಯ ಮಟ್ಟು ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಈ ಪ್ರದೇಶಕ್ಕೆ ಮತ್ತು ತಾಲೂಕಿನ ಮಜೂರು ಬ್ರಹ್ಮ ಬೈದರ್ಕಳ ಗರಡಿ ಇಲ್ಲಿಗೆ ಹೋಗುವ ದಾರಿ ಹಾಗೂ ಗರಡಿಯು ಸಂಪೂರ್ಣ ಜಲಾವೃತಗೊಂಡಿದ್ದು ಅಪಾಯ ಮಟ್ಟದಲ್ಲಿದ್ದು ಇಲ್ಲಿಗೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆರವರು ಇಂದು ಭೇಟಿ ನೀಡಿ ಸುತ್ತಮುತ್ತಲಿನ ಜನರಿಗೆ ಜಾಗೃತರಾಗಿರುವಂತೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.

ಈ ಸಂದರ್ಭ ಮಾಜಿ ಸಚಿವರೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಅಮೀರ್ ಕಾಪು, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಸುನಿಲ್ ಬಂಗೇರ, ಆಶೋಕ್ ನಾಯರಿ, ರಾಹುಲ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಕಾಪು : ಮೂಡುಬೆಳ್ಳೆಯಲ್ಲಿ ಟೀಂ ಭಗ್ವ ಯುವಕರ ತಂಡದ ಉದ್ಘಾಟನೆ

Posted On: 06-07-2023 07:14PM
ಕಾಪು : ಸಮಾಜದಲ್ಲಿರುವ ಅಶಕ್ತ ಕುಟುಂಬಕ್ಕೆ ನೆರವಾಗಲು, ಹಿಂದುತ್ವಕ್ಕೆ ಧಕ್ಕೆಯಾದಲ್ಲಿ ಪ್ರತಿಭಟಿಸಲು, ಸಮಾಜದಹಿತಕ್ಕಾಗಿ ಹಿಂದೂ ಸಮಾಜದ ಪರವಾಗಿ ಟೀಂ ಭಗ್ವ ಎಂಬ ಯುವಕರ ತಂಡವೊಂದು ರಚನೆಗೊಂಡಿದ್ದು ತಂಡದ ಉದ್ಘಾಟನೆಯನ್ನು ಜುಲೈ 5 ರಂದು ಮೂಡುಬೆಳ್ಳೆಯಲ್ಲಿ ಕಾಪು ಉದ್ಯಮಿ ಸುಧೀರ್ ಸೋನು ಹಾಗೂ ಸಂಘಟನೆಯ ಪ್ರಮುಖರಾದ ವಿಖ್ಯಾತ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಗ್ವ ತಂಡದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲ್ಯ ಯೋಗೀಶ್ ಶೆಟ್ಟಿ ಸ್ವಾಗತಿಸಿದರು. ಮೂಳೂರು ಶ್ರವಣ್ ದೇವಾಡಿಗ ವಂದಿಸಿದರು.
ಕಾಪು : ಅಮ್ಮನ ಆಲಯ ನಿರ್ಮಾಣ - ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಿತಿಯಿಂದ ಬೆಳ್ಳೆ ಗ್ರಾಮದ ಪ್ರಮುಖರ ಭೇಟಿ

Posted On: 05-07-2023 11:12PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ "ಅಮ್ಮನ ಆಲಯ ನಿರ್ಮಾಣದ" ಬಗ್ಗೆ ದೇವಳದ ಸಮಿತಿಯ ಪ್ರಮುಖರು ಜುಲೈ 5 ರಂದು ಬೆಳ್ಳೆ ಗ್ರಾಮದ ಪ್ರಮುಖರನ್ನು ಭೇಟಿಯಾಗಿ ಬೆಳ್ಳೆ ಗ್ರಾಮದಲ್ಲಿ ಸಭೆಯನ್ನು ಮಾಡಿ ಗ್ರಾಮ ಸಮಿತಿಯನ್ನು ರಚಿಸುವ ಬಗ್ಗೆ ಕಾರ್ಯಪ್ರವೃತರಾಗುವಂತೆ ತಿಳಿಸಿ ಜೀರ್ಣೋದ್ಧಾರದ ಮನವಿಯನ್ನು ನೀಡಲಾಯಿತು.
ಗ್ರಾಮದ ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರಾದರೂ ಒಂಬತ್ತು ಶಿಲೆ ಅಥವಾ ಅದಕ್ಕಿಂತ ಹೆಚ್ಚಿನ ಶಿಲಾಸೇವೆಯನ್ನು ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗ್ರಾಮ ಸಮಿತಿಯ ಮುಖ್ಯ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ್ ಶೆಟ್ಟಿ ಕಲ್ಯಾ, ಬೆಳ್ಳೆ ಗ್ರಾಮದ ಪ್ರಮುಖರಾದ ಬೆಳ್ಳೆ ಶಿವಾಜಿ ಸುವರ್ಣ, ಹರೀಶ್ ಶೆಟ್ಟಿ ಕಕ್ರಮನೆ, ರಂಜಿನಿ ಹೆಗ್ಡೆ ಮತ್ತು ಸುಜಾತ ಸುವರ್ಣ ಉಪಸ್ಥಿತರಿದ್ದರು.
ಪಡುಬಿದ್ರಿ : ಅಂಬ್ಯುಲೆನ್ಸ್ ಡಿಕ್ಕಿ ; ಗಂಭೀರ ಗಾಯಗೊಂಡ ವ್ಯಕ್ತಿ

Posted On: 05-07-2023 10:48PM
ಪಡುಬಿದ್ರಿ : ಪೇಟೆಯ ಕಾರ್ಕಳ ಜಂಕ್ಷನ್ ಬಳಿ ಅಂಬ್ಯುಲೆನ್ಸ್ ವಾಹನವೊಂದು ರಾಜು ಪೂಜಾರಿ ಎಂಬುವವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜುಲೈ 4ರಂದು ನಡೆದಿದೆ.
ತೆಂಕ ಎರ್ಮಾಳು ಗ್ರಾಮದ ನಿವಾಸಿಯಾದ ರಾಜು ಪೂಜಾರಿ ತೆಂಗಿನ ಮರದಿಂದ ಶೇಂದಿ ತೆಗೆಯುವ ಕೆಲಸ ಮಾಡಿಕೊಂಡಿದ್ದು, ಅವರು ಎಂದಿನಂತೆ ಶೇಂದಿಯನ್ನು ಪಡುಬಿದ್ರಿಯ ಮಾರ್ಕೆಟ್ ರಸ್ತೆಯಲ್ಲಿರುವ ಶೇಂದಿ ಅಂಗಡಿಗೆ ಮಾರಾಟ ಮಾಡಿ ವಾಪಾಸ್ಸು ಪಡುಬಿದ್ರಿ ಪೇಟೆಯಲ್ಲಿರುವ ಅಂಗಡಿಗೆ ಹೋಗಲು ಕಾರ್ಕಳ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ದಾಟಿ ಪೂರ್ವ ಅಂಚಿನ ಬಳಿ ತಲುಪಿದಾಗ ಅಂಬ್ಯುಲೆನ್ಸ್ ವಾಹನದ ಚಾಲಕ ಶಫೀಕ್ ಕೆರೂರಿ ಎಂಬಾತನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ ರಾಜು ಪೂಜಾರಿರವರು ರಸ್ತೆಗೆ ಬಿದ್ದಿದ್ದು ಅವರ ತಲೆಗೆ, ಕಣ್ಣಿನ ಬದಿ, ಕೈಗೆ ಪೆಟ್ಟಾಗಿದ್ದು, ಮೂಗಿನಲ್ಲಿ ರಕ್ತ ಬಂದಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.