Updated News From Kaup
ಕಾಪು : ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ, ಕುಟುಂಬ ಸಮ್ಮಿಲನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Posted On: 28-05-2023 07:51AM
ಕಾಪು : ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಕಾಪುವಿನಲ್ಲಿ ಜರಗಿತು.

ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಾಪು ಕ್ಷೇತ್ರವನ್ನು ಮಾದರಿಯಾಗಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಲಹೆ ಅವಶ್ಯ. ಸಾಮಾಜಿಕ ಬದ್ಧತೆಯ ಮೂಲಕ ಕ್ಷೇತ್ರದ ಬಗೆಗೆ ಕಾಳಜಿಯಿರುವವರು ಪತ್ರಕರ್ತರು. ನಾಗರಿಕರ ಧ್ವನಿಯಾಗಿ ಸಮಾಜದ ಬೇಕು ಬೇಡಗಳನ್ನು ಸುದ್ದಿಯ ಮೂಲಕ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಕಾಪು ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಪೋರೇಟ್ ವ್ಯವಹಾರಗಳು ಯುಪಿಸಿಎಲ್, ಅದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ ಮಾಧ್ಯಮಗಳ ಜೀವಂತಿಕೆಯಿಂದ ಸಮಾಜದ ಉನ್ನತಿ ಸಾಧ್ಯ. ಅದಾನಿ ಸಂಸ್ಥೆಯ ಮೂಲಕ ಸಾಮಾಜಿಕ ಜವಾಬ್ದಾರಿಯುತ ಕಾರ್ಯಗಳು ನಡೆದಿದೆ. ಸೂಕ್ತ ಕಟ್ಟಡ ಸೌಲಭ್ಯಕ್ಕಾಗಿ ಸಿ ಎಸ್ ಆರ್ ಯೋಜನೆ ಮೂಲಕ ಕಾಪು ಪತ್ರಕರ್ತರ ಸಂಘಕ್ಕೂ ಆರ್ಥಿಕ ನೆರವು ನೀಡಲಾಗುವುದು ಎಂದರು.
ಸಮ್ಮಾನ/ ಪ್ರತಿಭಾ ಪುರಸ್ಕಾರ/ಬಹುಮಾನ ವಿತರಣೆ : ಕಾಪು ಪತ್ರಕರ್ತರ ಸಂಘದ ವತಿಯಿಂದ ನೂತನ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು, ಕಲಿಕೆ/ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಿತು.
ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಝಿಯಾನ್ ಕನ್ ಸ್ಟ್ರಕ್ಷನ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಗುಲಾಂ ಮೊಹಮ್ಮದ್ , ಉದ್ಯಮಿ ಹರೀಶ್ ನಾಯಕ್, ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷರಾದ ಹರೀಶ್ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.
ಕಾಪು : ಸೋಲಿನ ಪರಾಮರ್ಶೆ ನಡೆಸಿ, ಪಕ್ಷ ಬಲವರ್ಧನೆಗೆ ಪಣ ತೊಡೋಣ - ವಿನಯ್ ಕುಮಾರ್ ಸೊರಕೆ

Posted On: 27-05-2023 06:05PM
ಕಾಪು : ಸೋಲು- ಗೆಲುವು ಎಲ್ಲಾ ರಂಗಗಳಲ್ಲಿಯೂ ಸಹಜ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮೂಲಕ, ಸೋಲಿನ ಪರಾಮರ್ಶೆ ನಡೆಸಿ ಎಲ್ಲಿ ಎಡವಿದ್ದೇವೆಯೋ ಅಲ್ಲಿ ಎಚ್ಚೆತ್ತು ಕ್ರೀಡಾಸ್ಫೂರ್ತಿಯೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷ ಬಲವರ್ಧನೆಗೆ ಪಣ ತೊಡೋಣ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಶನಿವಾರ ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ ರಾಜೀವ್ ಭವನದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಕಾರ್ಯದಲ್ಲಿ ಅವಿರತ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾರ್ಪಣಾ ಸಭೆಯಲ್ಲಿ ಮಾತಾಡಿದರು.
ಕರ್ನಾಟಕ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದರೆ, ಕರಾವಳಿ ಭಾಗದಲ್ಲಿ ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬಂದಿರುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿಯಾಗಿದೆ. ಚುನಾವಣಾ ಕಾರ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠೆ ಮತ್ತು ಅಭಿಮಾನದಿಂದ ಅವಿರತ ಶ್ರಮವಹಿಸಿದ್ದಾರೆ, ಆದರೆ ಮತದಾರರ ಮನ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸು ಕಾಣಲು ವಿಫಲರಾಗಿರುವುದು ಹಾಗೂ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಹಣಬಲದ ಮುಂದೆ ನಮ್ಮ ಪ್ರಾಮಾಣಿಕ ಜನಸೇವೆ ಮಂಕಾಗಿ ಹೋಯಿತು.
ಸೋಲಾಯಿತೆಂದು ಕಾರ್ಯಕರ್ತರು ಯಾರೂ ವಿಚಲಿತರಾಗದೆ ಯಾವುದೇ ಸಂದರ್ಭದಲ್ಲಿಯೂ ಎದೆಗುಂದಬೇಡಿ, ನಾನಂತೂ ನಿಮ್ಮೊಂದಿಗೆ ಈ ಹಿಂದೆ ಯಾವ ರೀತಿಯಲ್ಲಿ ನಿಮಗೆ ಸಹಕರಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುತ್ತಿದ್ದೇನೋ ಇನ್ನು ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು. ನಿಮ್ಮ ಸಹಕಾರ, ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ಪಕ್ಷದ ಕಾರ್ಯಕರ್ತರ ಜೊತೆಗೆ ನನಗಿರುವ ಅವಿನಾಭಾವ ಸಂಬಂಧವನ್ನು ನಾನು ಯಾವತ್ತಿಗೂ ಕಡಿದು ಕೊಳ್ಳುವುದಿಲ್ಲ, ಕಾರ್ಯಕರ್ತರ ಪ್ರೀತಿ-ಅಭಿಮಾನವೇ ನಾನು ರಾಜಕೀಯದಲ್ಲಿ ಸಂಪಾದಿಸಿರುವ ಬಹುದೊಡ್ಡ ಆಸ್ತಿ ಎಂದು ಭಾವನಾತ್ಮಕವಾಗಿ ಹೇಳಿದರು. ಕಾಪು ಕ್ಷೇತ್ರದಲ್ಲಿ ನಮಗೆ ಸೋಲಾಗಿರಬಹುದು, ಆದರೆ ರಾಜ್ಯದ ಸರ್ಕಾರ ಕಾಂಗ್ರೆಸ್ ನದ್ದಾಗಿದೆ, ಹಾಗಾಗಿ ಅದರ ಪ್ರಯೋಜನವನ್ನು ಪಡೆದು ಅಭಿವೃದ್ಧಿಯ ದೃಷ್ಟಿಕೋಣ ದೊಂದಿಗೆ ಮುಂದೆ ಸಾಗೋಣ, ಸರ್ಕಾರದ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸೋಣ ಈ ಮೂಲಕ ಮುಂಬರಲಿರುವ ತಾಲೂಕು ಪಂಚಾಯತ್/ ಜಿಲ್ಲಾಪಂಚಾಯತ್ ಹಾಗೂ 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಎಸ್. ಸುವರ್ಣ ವಹಿಸಿ ಮಾತನಾಡಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಗಫೂರ್, ರಾಜ್ ಶೇಖರ್ ಕೋಟ್ಯಾನ್, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಜೆ.ಶೆಟ್ಟಿ, ರಾಜ್ಯ ಹಿಂ. ವ. ಘಟಕಗಳ ಸಮಿತಿಯ ಕಾರ್ಯದರ್ಶಿ ಶಿವಾಜಿ ಸುವರ್ಣ ಬೆಳ್ಳೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್ , ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿಕ್ರಂ ಕಾಪು, ಜಿಲ್ಲಾ ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ವಹಿದ್ ಶೇಖ್, ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ, ಯುವ ಕಾಂ. ಸ. ಅಧ್ಯಕ್ಷ ರಮೀಜ್ ಹುಸೇನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ದೀಪಕ್ ಎರ್ಮಾಳ್, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಸರಸು ಡಿ.ಬಂಗೇರ, ಪ್ರಭಾ ಬಿ.ಶೆಟ್ಟಿ, ವೈ.ಸುಧೀರ್, ಹಸನಬ್ಬ ಶೇಖ್, ರತನ್ ಶೆಟ್ಟಿ, ಕಿಶೋರ್ ಅಂಬಾಡಿ, ಇಂದಿರಾ ಆಚಾರ್ಯ, ಸಿಮ್ಮಿ ಡಿಸೋಜ, ಯು.ಸಿ.ಶೇಕಬ್ಬ, ಆಶಾ ಅಂಚನ್ ಕಟಪಾಡಿ, ಸುನಿಲ್ ಡಿ.ಬಂಗೇರ, ಎಚ್.ಅಬ್ದುಲ್ಲಾ, ಅಬ್ದುಲ್ ಹಮೀದ್ ಮೂಳೂರು, ದಿವಾಕರ್ ಡಿ.ಶೆಟ್ಟಿ, ರಾಜೇಶ್ ಕುಲಾಲ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ ಆನಂದ್, ಸತೀಶ್ ಚಂದ್ರ ಮೂಳೂರು, ಶ್ರೀಕರ್ ಅಂಚನ್, ಮಹೇಶ್ ಪೂಜಾರಿ ಕಟಪಾಡಿ, ಕೆ.ಎಚ್.ಉಸ್ಮಾನ್, ಹಮೀದ್ ಯೂಸುಫ್, ಶೇಖರ್ ಹೆಜಮಾಡಿ, ಕೇಶವ ಸಾಲ್ಯಾನ್,ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಸುಧೀರ್ ಕರ್ಕೇರ, ಮೊಹಮ್ಮದ್ ನಯಿಮ್, ಯಶವಂತ ಫಲಿಮಾರು, ಗೋಪಾಲ್ ಪೂಜಾರಿ ಮತ್ತಿತರ ಪ್ರಮುಖ ನಾಯಕರು, ಬ್ಲಾಕ್ ಪದಾಧಿಕಾರಿಗಳು, ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು/ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಬೂತ್ ಸಮಿತಿಯ ಅಧ್ಯಕ್ಷರು/ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸೊರಕೆಯವರ ಹಿತೈಷಿಗಳು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ಫಲಿಮಾರು ವಂದಿಸಿದರು.
ಕಟಪಾಡಿ : ಕನ್ನಡ ಚಲನಚಿತ್ರ - ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ

Posted On: 27-05-2023 05:47PM
ಕಟಪಾಡಿ : ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಕನ್ನಡ ಚಲನಚಿತ್ರ ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ ಶುಕ್ರವಾರ ಕಟಪಾಡಿ ಶ್ರೀ ವೆಂಕಟರಮಣ ದೇವಳದಲ್ಲಿ ಜರಗಿತು.

ಈ ಸಂದರ್ಭ ಗಣ್ಯರು ಶುಭ ಹಾರೈಸಿದರು.

ಈ ಸಂದರ್ಭ ಕಿರುತೆರೆ ನಟ ಪ್ರದೀಪ್ ಚಂದ್ರ ಕುದ್ಪಾಡಿ, ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ಕಟಪಾಡಿಯ ಗಣೇಶ್ ಕಿಣಿ, ಮಂಗಳೂರಿನ ಉದ್ಯಮಿ ಹರ್ಷಮಣಿ ರೈ, ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿಯ ಪ್ರಾಂಶುಪಾಲರಾದ ಡಾ. ದಯಾನಂದ ಪೈ, ಚಲನಚಿತ್ರ ನಟ ರಘು ಪಾಂಡೇಶ್ವರ, ಎಸ್ ವಿ ಎಸ್ ಪ್ರೌಢಶಾಲೆ ಕಟಪಾಡಿಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕ ದಯಾನಂದ ಎಸ್ ರೈ, ಬಾಸುಮ ಕೊಡಗು, ಶೇಖರ ಅಜೆಕಾರು, ಪುರುಷೋತ್ತಮ ಪೈ, ಸುದರ್ಶನ್ ಎಸ್ ಪುತ್ತೂರು, ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ, ಬಾಲಕೃಷ್ಣ ಶೆಟ್ಟಿ, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಪ್ರಕಾಶ್ ಸುವರ್ಣ, ನಾಗೇಶ್ ಕಾಮತ್ ಉಪಸ್ಥಿತರಿದ್ದರು.
ಮೇ 29 : ಮಿನಿ ಉದ್ಯೋಗ ಮೇಳ

Posted On: 27-05-2023 07:30AM
ಉಡುಪಿ : ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮೇ 29 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ : ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್ ನಲ್ಲಿ ಕ್ರಿಯೇಟಿವ್ ಕಾಲೇಜಿಗೆ 2 ರ್ಯಾಂಕ್

Posted On: 27-05-2023 07:16AM
ಕಾರ್ಕಳ : ಮೇ 2023 ರಲ್ಲಿ ನಡೆದ ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ವರುಣ್ ಜಿ ನಾಯಕ್ ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ 656 ನೇ ಸ್ಥಾನ ಗಳಿಸಿದ್ದಾರೆ ಹಾಗೂ ಸುಮುಖ್ ಶೆಟ್ಟಿ ಜೆ.ಎಸ್ ಬಿ.ಆರ್ಕ್ ನಲ್ಲಿ 609 ನೇ ರ್ಯಾಂಕ್ ಗಳಿಸಿದ್ದಾರೆ.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಹಾಗೂ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಅನುಭವಿ ಉಪನ್ಯಾಸಕರಿಂದ ತರಬೇತಿ ಲಭ್ಯವಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆಇಇ ಸಂಯೋಜಕರಾದ ಸುಮಂತ್ ದಾಮ್ಲೆ ಅಭಿನಂದಿಸಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ : ನೋಂದಣಿಗೆ ಸೂಚನೆ

Posted On: 25-05-2023 07:07AM
ಉಡುಪಿ : ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಮೇ 30 ರ ಒಳಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ದೂ.ಸಂಖ್ಯೆ: 0821-2515944 ಅನ್ನು ಸಂಪರ್ಕಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕ.ರಾ.ಮು.ವಿ ಕುಲಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

Posted On: 25-05-2023 07:04AM
ಉಡುಪಿ : ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆ ಹಾಗೂ ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಹೆಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರ ವರೆಗೆ ಒಟ್ಟು 61 ದಿನಗಳ ಕಾಲ ನಿಷೇಧಿಸಲಾಗಿದೆ.
ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಮೀನುಗಾರಿಕೆ ನಿಷೇಧದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986 ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ, ಒಂದು ವರ್ಷದ ಅವಧಿಗೆ ಡೆಲಿವರಿ ಪಾಯಿಂಟ್ನಲ್ಲಿ ರಾಜ್ಯ ಮಾರಾಟಕರ ರಹಿತ ಡೀಸಿಲ್ ಪಡೆಯಲು ಅನರ್ಹರಾಗುತ್ತಾರೆ.
ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಯುವಕರು - ದೂರು ದಾಖಲು

Posted On: 24-05-2023 11:54AM
ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಯುವಕರು ಮೋಜಿಗಾಗಿ ತಮ್ಮ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಸಾಗುತ್ತಿದ್ದುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಈ ಬಗ್ಗೆ ಪೋಲಿಸರು ಯುವಕರ ವಿರುದ್ಧ ದೂರು ದಾಖಲಿಸಿ ಮತ್ತು ಕಾರನ್ನು ವಶಕ್ಕೆ ಪಡೆದ ಘಟನೆ ಕಾಪುವಿನಲ್ಲಿ ನಡೆದಿದೆ.
ನೀಲಿ ಬಣ್ಣದ ಮಹೀಂದ್ರಾ ಜೀಪ್, ಕಪ್ಪು ಬಣ್ಣದ ಕ್ರೆಟಾ ಕಾರು, ಬಿಳಿ ಬಣ್ಣದ ಫಾರ್ಚುನರ್ ಕಾರು ಮತ್ತು ಬಿಳಿ ಬಣ್ಣದ ಸ್ವಿಫ್ಟ್ ಕಾರು ಮತ್ತದರ ಚಾಲಕರನ್ನು ಪೊಲೀಸರು ಪತ್ತೆ ಹಚ್ಚಿದ್ದು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಆರೋಪಿಗಳಾದ ಅಯಾನ್, ಮಿಷಾಲುದ್ದೀನ್, ಶನೂನ್ ಡಿಸೋಜಾ ಮತ್ತು ವಿವೇಕ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತುಂಬಾ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆ ಸಹಾಯಕ ಆಯುಕ್ತರಾಗಿ ಪ್ರಶಾಂತ್ ಕುಮಾರ್ ಶೆಟ್ಟಿ ನೇಮಕ

Posted On: 23-05-2023 05:14PM
ಉಡುಪಿ : ಜಿಲ್ಲೆಯ ವಿವಿಧ ದೇವಳಗಳಲ್ಲಿ ಆಡಳಿತ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಕುಮಾರ್ ಶೆಟ್ಟಿ ಪ್ರಸ್ತುತ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ಆಯುಕ್ತರಾಗಿ ಮುಂಭಡ್ತಿ ಪಡೆದಿದ್ದಾರೆ.
ಇವರು ಕಾಪು ಹೊಸ ಮಾರಿಗುಡಿ ದೇವಳದ ಕಾರ್ಯನಿರ್ವಹಣಾಧಿಕಾರಿಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದರು.
ಇವರ ಉತ್ತಮ ಸೇವೆಯು ಹೀಗೆಯೇ ಮುಂದುವರೆಯಲಿ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಸಿಬ್ಬಂದಿ ವರ್ಗ ಮತ್ತು ಅಭಿವೃದ್ಧಿ ಸಮಿತಿ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ : ಯುಎಸ್ಎ ಘಟಕ ಉದ್ಘಾಟನೆ

Posted On: 22-05-2023 11:05AM
ಕಾಪು : ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಂತಾರಾಷ್ಟ್ರೀಯ ಘಟಕವನ್ನು ಯುಎಸ್ಎ ಸಮಿತಿಯ ಅಧ್ಯಕ್ಷ ಅಖಿಲ ಅಮೇರಿಕಾ ತುಳು ಅಸೋಸಿಯೇಶನ್ನ ಸಂಸ್ಥಾಪಕ ಭಾಸ್ಕರ ಶೇರಿಗಾರ್ ಬೋಸ್ಟನ್, ಶೈಲಶ್ರೀ ಶೇರಿಗಾರ್, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರು ಅಮೆರಿಕದ ಬೋಸ್ಟನ್ನಲ್ಲಿ ಮೇ 14 ರಂದು ಉದ್ಘಾಟಿಸಿದರು.

ಪ್ರಸ್ತವಾನೆಗೈದ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಪ್ರಪಂಚದಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿದೆ. 17ನೇ ಶತಮಾನದ ಕೆಳದಿ ಅರಸರ ಕಾಲದ ಇತಿಹಾಸವನ್ನು ಹೊಂದಿರುವ ಮಾರಿಗುಡಿಯ ಪುನರುತ್ಥಾನ ಯೋಜನೆಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿವೆ. ಜೀರ್ಣೋದ್ಧಾರಕ್ಕೆ ಪೂರಕವಾಗಿ 18 ಕ್ಕೂ ಅನೇಕ ದೇಶಗಳಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಹಸ್ರಮಾನದಲ್ಲೊಮ್ಮೆ ಸಿಗಬಹುದಾದ ಮಾರಿಗುಡಿ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಯುಎಇ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮಾತನಾಡಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಾದ್ಯಂತ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿಯ ಸಂದೇಶವನ್ನು ಹರಡುವುದರ ಜತೆಗೆ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮತ್ತು ಬೆಂಬಲಿಸುವುದಾಗಿ ಭರವಸೆ ನೀಡಿದರು.
ಅಮೇರಿಕಾ ಸಮಿತಿಯ ಸದಸ್ಯ ಶರತ್ ಅಮೀನ್, ಬೋಸ್ಟನ್ ತುಳುಕೂಟದ ಸಂಸ್ಥಾಪಕ ಅಧ್ಯಕ್ಷ ಮತ್ತು ಬೋಸ್ಟನ್ ಕನ್ನಡ ಕೂಟದ ಮಾಜಿ ಅಧ್ಯಕ್ಷ ಡಾ| ಸುಧಾಕರ ರೇವನ್, ಶಿರೀಶ್ ಶೆಟ್ಟಿ ಅಟ್ಲಾಂಟಾ, ಡಿಜಿಟಲ್ ಕ್ಯೂಬ್ಸ್ನ ಸಿಇಒ ಸಂತೋಷ್ ಉಡುಪಿ ಮಿಚಿಗನ್, ರಾಮದಾಸ್ ಕುಲಾಲ್ ನ್ಯೂಯಾರ್ಕ್, ಆಟಾದ ಅಧ್ಯಕ್ಷೆ ಶ್ರೀವಲ್ಲಿ ರೈ ಫ್ಲೋರಿಡಾ, ಸಿದ್ಧಾರ್ಥ್ ಶೆಟ್ಟಿ ಟೆಕ್ಸಾಸ್, ಸುಷ್ಮಾ ಜಯಚಂದ್ರ ಪೆನ್ಸಿಲ್ವೇನಿಯಾ, ತುಳುವೆರೆ ಚಾವಡಿ ಸಂಸ್ಥಾಪಕ ಉಮೇಶ್ ಅಸೈಗೋಳಿ ಉತ್ತರ ಕೆರೊಲಿನಾ ಉಪಸ್ಥಿತರಿದ್ದರು. ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಯುಎಇ, ಯುಎಇ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ, ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ ಸಹಿತ ವಿವಿಧ ಸಮಿತಿಗಳ ಪ್ರಮುಖರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ನವದುರ್ಗೆಯರನ್ನು ಪ್ರತಿನಿಧಿಸುವ ಒಂಬತ್ತು ಸುಮಂಗಲಿಯರಾದ ಪೂಜಾ ಶೆಟ್ಟಿ, ಡಾ| ಉಷಾ ರಾವ್, ರಮ್ಯಾ ಜೈನ್, ಲಕ್ಷ್ಮೀ ಪುರಾಣಿಕ್, ಮಧು ಗೌಡ, ಚಂದ್ರಿಕಾ ರಾವ್, ಚಂದ್ರ ಬಿಸ್ವಾಸ್, ಶೈಲಶ್ರೀ ಶೇರಿಗಾರ್ ಮತ್ತು ಸೌಮ್ಯಾ ಕರುಣಾಕರ್ ಒಂಬತ್ತು ದೀಪಗಳನ್ನು ಬೆಳಗಿಸಿದರು. ಸಂಘಟಕರಾದ ಶೈಲಶ್ರೀ ಭಾಸ್ಕರ ಶೇರಿಗಾರ್ ಸ್ವಾಗತಿಸಿದರು. ಶಿರೀಶ್ ಶೆಟ್ಟಿ ಅಟ್ಲಾಂಟಾ ವಂದಿಸಿದರು. ಡಾ| ಸುಧಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.