Updated News From Kaup

ಎಸ್ ಕೆ ಪಿ ಎ ಕಾಪು ವಲಯ : ವಿಶ್ವ ಛಾಯಾಗ್ರಹಣ ದಿನಾಚರಣೆ ; ಕುಟುಂಬ ಸಮ್ಮಿಲನ ಕಾರ್ಯಕ್ರಮ

Thumbnail
Posted On: 20 Aug 2023, 08:52 AM

ಕಾಪು : ಸೌತ್ ಕೆನರಾ ಫೋಟೋಗ್ರಾಫಸ್೯ ಆಸೋಸಿಯೇಶನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ಕಾಪು ವಲಯದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಶನಿವಾರ ಕಾಪು ಹೋಟೆಲ್ K1 ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಕೆ ಪಿ ಎ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಆನಂದ ಎನ್ ಬಂಟ್ವಾಳ ಉದ್ಘಾಟಿಸಿದರು. ಈ ಸಂದರ್ಭ ‌ಮಾತನಾಡಿದ ಅವರು ಕಾಪು ವಲಯದ ಫೋಟೋಗ್ರಾಫಸ್೯ಗಳ ಸಂಘಟಿತ ಪ್ರಯತ್ನದಿಂದ ಒಳ್ಳೆಯ ಕಾರ್ಯಕ್ರಮಗಳು ಮೂಡಿ ಬರುತ್ತಿದೆ. ಮುಂದೆಯೂ ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್ ಕೆ ಪಿ ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಕಟಪಾಡಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಕಟಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ರಾವ್, ಫೋಟೋ ಪ್ಯಾಲೇಸ್ ಉಡುಪಿ ಯ ರವಿರಾಜ್ ಕಿದಿಯೂರು, ಎಸ್ ಕೆ ಪಿ ಎ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಕಾರ್ಯದರ್ಶಿ ನಿತಿನ್ ಬೆಳುವಾಯಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮ್ಮಾನ : ಹಿರಿಯ ಛಾಯಾಚಿತ್ರಕಾರರಾದ ಹರೀಶ್ ದೇವಾಡಿಗ ಹೆಜಮಾಡಿ, ತುಕಾರಾಂ ಪಡುಬಿದ್ರಿ, ರವಿಕುಮಾರ್ ಕಟಪಾಡಿ ಇವರನ್ನು ಸಮ್ಮಾನಿಸಲಾಯಿತು. ಎಸ್ ಕೆ ಪಿ ಎ ಕಾಪು ವಲಯ ಅಧ್ಯಕ್ಷ ವಿನೋದ್ ಕಾಂಚನ್ ‌ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ ಕೆ ಪಿ ಎ ಕಾಪು ವಲಯ ಗೌರವಾಧ್ಯಕ್ಷ ರವಿಕುಮಾರ್ ಕಟಪಾಡಿ, ಉಪಾಧ್ಯಕ್ಷರುಗಳಾದ ಸಚಿನ್ ಉಚ್ಚಿಲ, ರವಿರಾಜ್ ಶೆಟ್ಟಿ ಬೆಳ್ಮಣ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಶಂಕರಪುರ, ಕೋಶಾಧಿಕಾರಿ ರಾಘವೇಂದ್ರ ಭಟ್, ಕಾರ್ಯಕ್ರಮ ಸಂಯೋಜಕ‌ ಸತೀಶ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು. ಕುಟುಂಬ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ವಿವಿಧ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಭಾರಿ ಪ್ರಶಂಸೆಗೆ ಪಾತ್ರವಾದ ರೆಟ್ರೋ ಮಾದರಿಯ ರಿತ್ಯಾ ಬೊಟಾನ್ ಕೊಂಕಣಿ ಆಲ್ಬಂ ಹಾಡು

Thumbnail
Posted On: 19 Aug 2023, 10:29 PM

ಕಾಪು : ಡಿ.ಎಲ್ ಪ್ರೊಡಕ್ಷನ್ ನಿರ್ಮಾಣದ ರಿತ್ಯಾ ಬೊಟಾನ್ ಎಂಬ ಕೊಂಕಣಿ ಆಲ್ಬಂ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡು ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಅವಿತ್ ಲೋಬೋ ನಿರ್ಮಾಣದಲ್ಲಿ ಮೂಡಿ ಬಂದಂತಹ ಈ ಆಲ್ಬಂ ಹಾಡು ಡಿಜೆ ಮರ್ವಿನ್ ಇವರು ನಿರ್ದೇಶಿಸಿದ್ದಾರೆ. ಮಂಗಳೂರು ಸುತ್ತಮುತ್ತಲು ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು ರೆಟ್ರೋ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ. ಅತ್ಯುತ್ತಮವಾಗಿ ಹಾಡು ಮೂಡಿಬಂದಿದ್ದು ಸಂಗೀತವನ್ನು ರೋಶನ್ ಡಿ.ಸೋಜಾ ಅಂಜೆಲೋರ್ ನೀಡಿದ್ದು, ಸಾಹಿತ್ಯ ವಿಲ್ಸನ್ ಕಟೀಲ್ ಇವರ ಕೈಯಲ್ಲಿ ಮೂಡಿದ್ದು ಹಾಡನ್ನು ಅಶ್ವಿನ್ ಡಿಕೊಸ್ಟಾ ಮತ್ತು ಜೋಷನ್ ಸ್ವೀಡಾ ಡಿ ಸೋಜಾ ಇವರು ಹಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಲೊಯ್ ವೆಲಂಟೈನ್ ನಿರ್ವಹಿಸಿದ್ದು ಅತ್ಯಂತ ಸುಂದರವಾಗಿ ಚಿತ್ರೀಕರಣವನ್ನ ಪ್ರಜ್ವಲ್ ಸುವರ್ಣ ಇವರು ಮಾಡಿದ್ದು ಜೊತೆಗೆ ಸಂಕಲನ, ಕಲರಿಂಗ್, ವಿ.ಎಫ್.ಎಕ್ಸ್ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಹಾಡಿನ ಕಥೆಯನ್ನ ನೊರ್‌ಬರ್ಟ್ ಜಾನ್ ಇವರು ರಚಿಸಿದ್ದು, ಚಿತ್ರಕಥೆಯನ್ನು ಪ್ರಜ್ವಲ್ ಸುವರ್ಣ ಮತ್ತು ಡಿ.ಜೆ ಮರ್ವಿನ್ ರಚಿಸಿದ್ದಾರೆ. ಪೋಸ್ಟರ್ ಡಿಸೈನ್ ಸುಹೈಲ್ ಇವರು ನಿರ್ವಹಿಸಿದ್ದಾರೆ. ಹಾಗೆಯೇ ಈ ಕೊಂಕಣಿ ಹಾಡಿನಲ್ಲಿ ಎಲ್ಟನ್ ಮಸ್ಕರೇನಸ್, ವೆನ್ಸಿಟಾ ಡಾಯಸ್, ಡೊಲ್ಲ ಮಂಗಳೂರು, ಸುಜಾತಾ ಶಕ್ತಿನಗರ, ರೋಶನ್ ಫೆರ್ನಾಂಡಿಸ್ ಇವರು ಅಧ್ಭುತವಾಗಿ ನಟಿಸಿದ್ದಾರೆ. ಬಹಳಷ್ಟು ಜನರ ಸಹಕಾರದೊಂದಿಗೆ ಕೊಂಕಣಿ ಹಾಡು ಉತ್ತಮವಾಗಿ ಮೂಡಿಬಂದಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಹೇಮಚಂದ್ರ ಆಯ್ಕೆ

Thumbnail
Posted On: 19 Aug 2023, 10:19 PM

ಪಡುಬಿದ್ರಿ: ಇಲ್ಲಿನ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶಶಿಕಲಾ ಹಾಗೂ ಉಪಾಧ್ಯಕ್ಷರಾಗಿ ಹೇಮಚಂದ್ರ ಆಯ್ಕೆಯಾಗಿದ್ದಾರೆ. ಶನಿವಾರ ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. 34 ಸದಸ್ಯ ಬಲದ ಪಡುಬಿದ್ರಿ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಶಿಕಲಾ ಹಾಗೂ ಕಾಂಗ್ರೆಸ್‌ ಬೆಂಬಲಿತೆ ಸುನಂದ ಸಾಲ್ಯಾನ್ ಅವರು ಸ್ಪರ್ಧಿಸಿದ್ದರು. ಶಶಿಕಲಾ ಅವರು 23 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸುನಂದ ಸಾಲ್ಯಾನ್ 11 ಮತಗಳು ಪಡೆದಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಹೇಮಚಂದ್ರ ಹಾಗೂ ಕಾಂಗ್ರೆಸ್ ಬೆಂಬಲಿತ ಖಲಂದರ್ ಶಫಿ ಸ್ಪರ್ಧಿಸಿದ್ದರು. ಹೇಮಚಂದ್ರ 20 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಖಲಂದರ್ ಶಫಿ 14 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ವರುಣ್ ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ ಕೆರಿಮಠ್ ಸಹಕರಿಸಿದ್ದರು.

ಇದೀಗ ಹೊಸ ಆಡಳಿತದೊಂದಿಗೆ ಕಾಪುವಿನ ಹೋಟೆಲ್ ಮಯೂರ

Thumbnail
Posted On: 19 Aug 2023, 07:42 PM

ಕಳೆದ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಲಾಡ್ಜಿಂಗ್ ಜೊತೆಗೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಇನ್ನಿತರ ಖಾದ್ಯಗಳನ್ನು ಉಣ ಬಡಿಸುತ್ತಿರುವ ಕಾಪುವಿನ ಹೋಟೆಲ್ ಮಯೂರ ಇಂದಿನಿಂದ ಹೊಸ ಆಡಳಿತದೊಂದಿಗೆ ಮುನ್ನಡೆಯಲಿದೆ. ಸಂಜಿತ್ ಶೆಟ್ಟಿ ಕಲ್ಯಾಲು ಇವರು ಪಾಲುದಾರರಾಗಿ ಮತ್ತು ನಿರ್ವಾಹಕರಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಮತ್ತು ರೂಮ್ಸ್ ಜೊತೆಗೆ ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳಿಗೆ ಸಭಾಂಗಣ ಹಾಗೂ ಕ್ಯಾ ಟರಿಂಗ್ ವ್ಯವಸ್ಥೆಯನ್ನು ಕೂಡಾ ಒದಗಿಸಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 87924 48087

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ - ಶಿರ್ವ ಶಾಖೆ ವತಿಯಿಂದ ಅಗತ್ಯ ವಸ್ತುಗಳ ವಿತರಣೆ

Thumbnail
Posted On: 19 Aug 2023, 06:17 PM

ಶಿರ್ವ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಂದು ಆಕ್ಸಿಲಿಯಂ ನಿವಾಸದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ಮತ್ತು ಸಿಹಿತಿಂಡಿ ವಿತರಿಸಲಾಯಿತು. ಈ ಸಂದರ್ಭ ಶಿರ್ವ ಆರೋಗ್ಯ ಮಾತಾ ಚಚ್೯ ಪ್ರಧಾನ ಧರ್ಮ ಗುರುಗಳು ವಂ| ಫಾ| ಲೆಸ್ಲಿ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಅರನ್ನಾ, ಉದ್ಯಮಿ ಕೆ ಶ್ರೀಧರ ಕಾಮತ್, ಕಾನ್ವೆಂಟಿನ ಮೇಲ್ವಿಚಾರಕಿ ಲೀಮಾ, ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಕಾನ್ವೆಂಟಿನ ಧರ್ಮ ಭಗಿನಿಯರು ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಪು : ಹೆಚ್.ಕೆ.ಟೈಲರ್( ಕಾಂತರ ಮೂಲ್ಯ )ಪುಂಚಲಕಾಡು ವಿಧಿವಶ

Thumbnail
Posted On: 19 Aug 2023, 05:42 PM

ಕಾಪು : ಕಳತ್ತೂರುವಿನ ಪುಂಚಲಕಾಡು ಪರಿಸರದಲ್ಲಿ ಎಚ್ ಕೆ ಟೈಲರ್ ಎಂದೇ ಹೆಸರುವಾಸಿಯಾಗಿದ್ದ ಕಾಂತರ ಮೂಲ್ಯ ಇಂದು ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಅವರ ಸ್ವಗ್ರಹದಲ್ಲಿ ನಡೆಯಲಿದೆ.

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶಿವಕುಮಾರ್ ಮೆಂಡನ್, ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆ

Thumbnail
Posted On: 18 Aug 2023, 06:47 PM

ಉಚ್ಚಿಲ : ಬಡಾ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಮತ್ತು ಉಪಾಧ್ಯಕ್ಷರಾಗಿ ದೀಪಕ್ ಕುಮಾರ್ ಆಯ್ಕೆಯಾಗಿದ್ದಾರೆ. 21 ಸದಸ್ಯ ಬಲದ ಬಡಾ ಗ್ರಾ.ಪಂ. ನಲ್ಲಿ 11 ಬಿಜೆಪಿ, 6 ಕಾಂಗ್ರೆಸ್, 4 ಎಸ್.ಡಿ‌.ಪಿ.ಐ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತರಾಗಿ ಎ. ಶಿವ ಕುಮಾರ್ ಮೆಂಡನ್ ಮತ್ತು ಕಾಂಗ್ರೆಸ್ ಬೆಂಬಲಿತರಾದ ಮಹಮ್ಮದ್ ರಫೀಕ್ ದೀವ್ ಹಾಗೂ ಉಪಾಧ್ಯಕ್ಷ ಹುದ್ದೆಗೆ ಬಿಜೆಪಿ ಬೆಂಬಲಿತ ದೀಪಕ್ ಕುಮಾರ್ ಮತ್ತು ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಮಜೀದ್ ಸ್ಪರ್ಧಿಸಿದ್ದರು. ಚುನಾವಣೆ ನಡೆದು ಅಂತಿಮವಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್ ಮೆಂಡನ್ ಅವರಿಗೆ 12 ಮತ್ತು ಉಪಾಧ್ಯಕ್ಷ ದೀಪಕ್ ಕುಮಾರ್ ಅವರು 11 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಒಂದು ಮತ ಅಸಿಂಧು ಆಗಿದ್ದು, ಮತ್ತೋರ್ವ ಸದಸ್ಯೆ ಮತದಾನ ನಡೆಸಲು ತಡವಾಗಿ ಆಗಮಿಸಿ, ಮತದಾನ ಪ್ರಕ್ರಿಯೆಯಿಂದ ವಂಚಿತರಾಗಿದ್ದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಸತೀಶ್ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗಂಗಾಧರ್ ಸುವರ್ಣ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಶಕುಂತಳ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ವಳದೂರು, ಉಪಾಧ್ಯಕ್ಷೆಯಾಗಿ ಮಂಜುಳಾ ಆಚಾರ್ಯ ಆಯ್ಕೆ  

Thumbnail
Posted On: 18 Aug 2023, 06:34 PM

ಕಾಪು : ಇಲ್ಲಿನ ಮಜೂರು ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಪ್ರಸಾದ್ ಶೆಟ್ಟಿ ವಳದೂರು ಮತ್ತು ಉಪಾಧ್ಯಕ್ಷರಾಗಿ ಮಂಜುಳಾ ಆಚಾರ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ವರುಣ್ ಜೆ. ಚುನಾವಣಾಧಿಕಾರಿಯಾಗಿದ್ದು, ಪಿಡಿಒ ವಿಲಾಸಿನಿ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. 13 ಸದಸ್ಯ ಬಲದ ಮಜೂರು ಗ್ರಾ.ಪಂ. ನಲ್ಲಿ 9 ಬಿಜೆಪಿ, 4 ಕಾಂಗ್ರೆಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಮಾಜಿ ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಗಂಗಾಧರ್ ಸುವರ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಸಂದೀಪ್ ರಾವ್, ನಿಕಟಪೂರ್ವ ಅಧ್ಯಕ್ಷೆ ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷ ಮಧುಸೂದನ್ ಸಾಲಿಯನ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಆಗಸ್ಟ್ 19 : ಉಡುಪಿ ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ

Thumbnail
Posted On: 17 Aug 2023, 09:53 PM

ಉಡುಪಿ : ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆಗಸ್ಟ್ 19ರಂದು ಮಧ್ಯಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. ಲಯನ್ಸ್ ಕ್ಲಬ್‌ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಲಯನ್ಸ್ ಜಿಲ್ಲೆ 317ಸಿ ವ್ಯಾಪ್ತಿಯಲ್ಲಿ ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಕಂದಾಯ ಜಿಲ್ಲೆಗಳಲ್ಲಿ ಒಳಗೊಂಡು 3 ಸಾವಿರ ಸದಸ್ಯರು ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ‘ಲೀವ್ ಟೂ ಲೀಡ್’ ಎಂಬ ಘೋಷಣೆಯೊಂದಿಗೆ 'ಬೆಳಕು' ಜಿಲ್ಲಾ ಕಾರ್ಯಕ್ರಮದಡಿಯಲ್ಲಿ ಹಲವಾರು ಸೇವಾ ಚಟುವಟಿಕೆಗಳ ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಈಗಾಗಲೆ ತುರ್ತು ನೆರೆ ಪರಿಹಾರ ನಿಧಿಯನ್ನು ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುವುದು. ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಲಯನ್ಸ್ ಸಂಪುಟ ಕಾರ್ಯದರ್ಶಿ ರವಿರಾಜ ನಾಯಕ್, ಖಜಾಂಚಿ ರೀಚರ್ಡ್ ಡಯಾಸ್, ಮಾರ್ಕೇಟಿಂಗ್ ಸಂವಹನ-ಮಾಹಿತಿ ಅಧಿಕಾರಿಗಳಾದ ಸಿದ್ಧರಾಜು, ಡಾ. ಜಗದೀಶ್ ಹೊಳ್ಳ, ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇನ್ನಂಜೆ ಗ್ರಾಮ ಪಂಚಾಯತ್ : ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸುರೇಖಾ ಶೆಟ್ಟಿ ಅವಿರೋಧ ಆಯ್ಕೆ

Thumbnail
Posted On: 17 Aug 2023, 05:35 PM

ಕಾಪು : ಇನ್ನಂಜೆ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಸುರೇಖಾ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. 13 ಸದಸ್ಯ ಬಲದ ಇನ್ನಂಜೆ ಗ್ರಾ.ಪಂ. ನಲ್ಲಿ 9 ಬಿಜೆಪಿ, 3 ಕಾಂಗ್ರೆಸ್, 1 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ತೋಟಗಾರಿಕಾ ಇಲಾಖೆಯ ಅಧಿಕಾರಿ ವರುಣ್ ಜೆ. ಚುನಾವಣಾಧಿಕಾರಿಯಾಗಿದ್ದು, ಪಿಡಿಒ ಚಂದ್ರಕಲಾ ಸಹ ಚುನಾವಣಾಧಿಕಾರಿಯಾಗಿ ಸಹಕರಿಸಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ರವರು ಅಧ್ಯಕ್ಷೆ ಮಾಲಿನಿ ಶೆಟ್ಟಿ ಹಾಗೂ ಉಫಾಧ್ಯಕ್ಷೆ ಸುರೇಖಾ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಇನ್ನಂಜೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.