Updated News From Kaup
ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ಬಿ ರಾಘವೇಂದ್ರ ರಾವ್ ಅವರ 56ನೇ ಕೃತಿ ಹಾವಿನ ಮನೆ ಬಿಡುಗಡೆ

Posted On: 24-06-2023 07:41PM
ಕಾರ್ಕಳ : ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) ಅವರ ʼಹಾವಿನ ಮನೆʼ ಮಹತ್ವದ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು, ಯುವ ಲೇಖಕರಾಗಿ ಪ್ರಸಿದ್ಧಿಗೊಂಡು. ಅನೇಕ ಪತ್ರಿಕೆಗಳಲ್ಲಿ ನಿರಂತರವಾಗಿ ಧಾರಾವಾಹಿಯಾಗಿ ಪ್ರಕಟಗೊಂಡ ಕಥೆಗಳ ಕರ್ತೃವಾಗಿ, ಗುರುತಿಸಿಕೊಂಡು ತಮ್ಮದೇ ಅನುಭವದ ವಿಶೇಷ ಶೈಲಿಯ ಕಥೆಗಳನ್ನು ಪೋಣಿಸಿದ ಲೇಖಕ ರಾಘವೇಂದ್ರ ರಾವ್ ಅವರು. ಅನುಬೆಳ್ಳೆ ಎಂಬ ಕಾವ್ಯನಾಮದಿಂದಲೇ ಹೆಚ್ಚಿನ ಓದುಗರಿಗೆ ಪರಿಚಿತರು. ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಕಥೆಗಾರರು. ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಓದುಗ ವರ್ಗವನ್ನು ಹೊಂದಿದ್ದಾರೆ. ಕೃತಿಕಾರ ರಾಘವೇಂದ್ರ ರಾವ್ ಅವರು ಪ್ರಸ್ತುತ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಲೇಖಕ ಬಿ ರಾಘವೇಂದ್ರ ರಾವ್ ಅವರನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಶಿರ್ವ : ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

Posted On: 24-06-2023 02:21PM
ಶಿರ್ವ : ಇಂದಿನ ವಿವಿಧ ಕ್ಷೇತ್ರಗಳಲ್ಲಿ ದತ್ತಾಂಶ ಸಮಸ್ಯೆಗಳನ್ನು, ಪರಿಹರಿಸಲು ಡೇಟಾ ವಿಜ್ಞಾನವನ್ನು ಬಳಸುವ ಮೂಲಕ ದತ್ತಾಂಶ ಗಣಿಗಾರಿಕೆ, ಯಂತ್ರ ಕಲಿಕೆ ಮತ್ತು ಅಂಕಿಅಂಶಗಳ ವಿಶ್ಲೇಷಣೆಯ ಸಂಯೋಜನೆಯಾಗಿದೆ. ಯುವಕರು ಇಂತಹ ಡೇಟಾ ವಿಜ್ಞಾನದ ಕೌಶಲ್ಯಗಳನ್ನು ಕಲಿಯುವ ಮೂಲಕ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳಿಗೆ ಉತ್ತಮ ನಿರ್ಧಾರಗಳನ್ನು ನೀಡುವ ಮೂಲಕ ಉತ್ತಮ ಉಪಾದಿಗಳನ್ನು ಪಡೆಯಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಏರ್ಪಡಿಸಿದ ಡಿಜಿಟಲ್ ಟೆಕ್ನಾಲಜಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ,ಡೇಟಾ ಸೈನ್ಸ್ ಮತ್ತು ಉದ್ಯೋಗ ಅವಕಾಶಗಳು ಎಂಬ ವಿಶೇಷ ಉಪನ್ಯಾಸದಲ್ಲಿ ಮಂಗಳೂರಿನ ಕಾಗ್ನೆಟಿವ್ ಸೊಲ್ಯೂಷನ್ಸ್ ನ ಅಸಿಸ್ಟೆಂಟ್ ಹೆಚ್ ಆರ್ ಲೀಡರ್ಟೀಮ್ ಕುಮಾರಿ ಕೃತಿಕಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆಗಳಿಂದಾಗಿ ಕಂಪ್ಯೂಟರ್ ಪದವೀಧರರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲೇ ಉದ್ಯಮ ಕೌಶಲ್ಯಗಳನ್ನು ಕಲಿಯುವ ಮೂಲಕ ಉದ್ಯಮದ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.

ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರವನ್ನು ಕಂಪ್ಯೂಟರ್ ಪದವೀಧರರು ಅರ್ಥ ಮಾಡಿಕೊಂಡು ಸಮಾಜಕ್ಕೆ ಬೇಕಾಗಿರುವ ತಂತ್ರಾಂಶ ಬಳಕೆಯನ್ನು ರೂಪಿಸುವಲ್ಲಿ ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಕಿವಿಮಾತು ನೀಡಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಫಾಧಿ , ಕಾಗ್ನಿಟಿವ್ ಸೊಲ್ಯೂಷನ್ ಮಂಗಳೂರಿನ ವ್ಯಾಪಾರ ಕಾರ್ಯಾಚರಣೆಯ ತಂಡದ ಮುಖ್ಯಸ್ಥರು ಸಂಪನ್ಮೂಲ ವ್ಯಕ್ತಿಯಾಗಿ ಅಧಿವೇಶನವನ್ನು ನಡೆಸಿದರು ಮತ್ತು ಸೆಮಿನಾರ್ನಲ್ಲಿ ವಿವಿಧ ವ್ಯಾಪಕವಾದ ಜ್ಞಾನವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗ್ಲೋ ಟಚ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಶೆಟ್ಟಿ ತರುಣ್ ರಮೇಶ್, ಎಲ್ರುಷಾ ಮಿಲಿನಾ ಡಿ'ಸಾ, ಪ್ರಸಿದ್ಧ್ ಗೋಪಾಲ್ ಅಂಚನ್ ಇವರನ್ನು ಅಭಿನಂದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರ ಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು. ದೀಪ್ತಿ ಮತ್ತು ಬಳಗ ಪ್ರಾರ್ಥಿಸಿದರು. ಚಂದನ ಸ್ವಾಗತಿಸಿ, ನಿವೇದಿತಾ ನಿಖಿಲ್ ಪೂಜಾರಿ ವಂದಿಸಿದರು. ಎಲ್ರುಷಾ ಮಿಲಿನಾ ಡಿ'ಸಾ ಕಾರ್ಯಕ್ರಮ ಸಂಯೋಜಿಸಿದರು.
ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು - ಫೋಕಸ್ 360 ಬ್ಯಾಚ್ ವಿದ್ಯಾಥಿಗಳ ಶಿಕ್ಷಕ-ರಕ್ಷಕ ಭೇಟಿ

Posted On: 24-06-2023 11:14AM
ಕಟಪಾಡಿ : ಪದವಿ ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ಜ್ಞಾನವನ್ನು ಹೊಂದುವುದಲ್ಲ. ವ್ಯವಹಾರ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳು ಹಾಗೂ ಜ್ಞಾನವನ್ನು ಹೊಂದುವುದೂ ಮುಖ್ಯವಾಗುತ್ತದೆ. ಇಲ್ಲವಾದರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಲೆ ಗುಂಪಾಗಿ ಬಿಡುತ್ತೇವೆ. ಅದಲ್ಲದೆ ವಿದ್ಯಾರ್ಥಿಯನ್ನು ಸತ್ಪ್ರಜೆಯನ್ನಾಗಿ ಮಾಡೋದು ವಿದ್ಯಾ ಸಂಸ್ಥೆಯ ಜೊತೆಗೆ ಹೆತ್ತವರ ಜವಾಬ್ದಾರಿಯೂ ಆಗಿದೆ ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ಅವರು ತ್ರಿಶಾ ಸಂಸ್ಥೆಯ 'ಬಿ.ಕಾಂ ಫೋಕಸ್ 360' ಮಕ್ಕಳ ಶಿಕ್ಷಕ-ರಕ್ಷಕ ಭೇಟಿಯಲ್ಲಿ ಹೇಳಿದರು.
ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರುಪ್ರಸಾದ್ ರಾವ್ ಅವರು ಫೋಕಸ್ 360 ಬ್ಯಾಚ್ ನ ಕಾರ್ಯವೈಖರಿ ಹಾಗೂ ಮುಂದೆ ಬರುವ ಯೋಜನೆಗಳನ್ನು ಸವಿಸ್ತಾರವಾಗಿ ಪರಿಚಯಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ನಿರೂಪಿಸಿದರು.
ಕಾರ್ಕಳ : ಪರಶುರಾಮ ಥೀಂ ಪಾರ್ಕ್ ಭೇಟಿ - ತಾತ್ಕಾಲಿಕ ನಿಷೇಧ

Posted On: 24-06-2023 09:06AM
ಕಾರ್ಕಳ : ತಾಲೂಕು ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕ್ನಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಗೆ ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಜೂನ್ 26 ರಿಂದ ಸೆಪ್ಟಂಬರ್ ಅಂತ್ಯದವರೆಗೆ ಪರಶುರಾಮ ರ್ಥೀಂ ಪಾರ್ಕ್ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ : ಶಾಸಕರಿಂದ ಬಂದರು ಕಾಮಗಾರಿ ಪರಿಶೀಲನೆ

Posted On: 24-06-2023 07:02AM
ಹೆಜಮಾಡಿ : ಇಲ್ಲಿ 188 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಶೇಕಡಾ 60 ರಷ್ಟು ಪೂರ್ಣಗೊಂಡಿರುವ ಬಂದರಿನ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಲಾಖಾಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭ ಶಾಸಕರು ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಬಾಕಿ ಇರುವ ಅನುದಾನದ ಬಿಡುಗಡೆಯ ಬಗ್ಗೆ ಮೀನುಗಾರಿಕಾ ಸಚಿವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಾಣೇಶ್ ಹೆಜಮಾಡಿ, ಶರಣ್ ಮಟ್ಟು, ಜಗನ್ನಾಥ್, ನಳಿನಿ, ಸುಜಾತ, ಬಬಿತಾ, ಹೆಜಮಾಡಿ ಮೀನುಗಾರಿಕ ಬಂದರು ಸಮಿತಿಯ ಅಧ್ಯಕ್ಷರಾದ ಸದಾಶಿವ ಕೋಟ್ಯಾನ್, ಉಪಾಧ್ಯಕ್ಷರಾದ ರವಿ ಕುಂದರ್, ಪ್ರಧಾನ ಕಾರ್ಯದರ್ಶಿಗಳಾದ ವಿಜಯ ಬಂಗೇರ, ಮೀನುಗಾರ ಮುಖಂಡರಾದ ಹರೀಶ್ ಚಂದ್ರ ಮೆಂಡನ್, ನಾರಾಯಣ ಮೆಂಡನ್, ದಿವಾಕರ ಮೆಂಡನ್ ಮತ್ತು ಬಂದರು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್ ಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಉದಯ್ ಕುಮಾರ್, ಸಹಾಯಕ ಅಭಿಯಂತರರಾದ ಜಯರಾಜ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಉಡುಪಿ : ಮಿತ್ರ ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ ರೆ ವಿಭಾಗ ಉದ್ಘಾಟನೆ

Posted On: 24-06-2023 06:59AM
ಉಡುಪಿ : ಇಲ್ಲಿನ ಮಿತ್ರ ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸ್ ರೆ ವಿಭಾಗವನ್ನು ಡಾ. ಬಿ.ಜಿ. ಆಚಾರ್ಯ ಮತ್ತು ಡಾ. ಶ್ರೀಪತಿ ಎಂ ಭಟ್ ಶುಕ್ರವಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಸಚಿನ್ ಹೊಳ್ಳ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಶ್ಮಿ ಹೊಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸಾಧನ ಹೊಳ್ಳ ವಂದಿಸಿದರು.
ಬೈರಂಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅಭಿನಂದನೆ

Posted On: 23-06-2023 05:45PM
ಕಾಪು : ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಬೈರಂಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಇಂದು ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಅಭಿನಂದನಾ ಸಮಾರಂಭ ನೆರವೇರಿತು.
ಈ ಸಂದರ್ಭ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಸಾರ್ವಜನಿಕರ ದೂರುಗಳ ನಿವಾರಣೆಗೆ ವಿಳಂಬ ಮಾಡದೆ ತಕ್ಷಣದಲ್ಲಿ ಸ್ಪಂದಿಸಬೇಕು. ವೃತ್ತಿ ಹಾಗೂ ಪ್ರವೃತ್ತಿ ಬೇರೆ ಇರಬಹುದು ಆದರೆ ಈ ಸಮಾಜದ ಕಟ್ಟ ಕಡೆಯ ಜನರಿಗೆ ನಾವು ಧ್ವನಿ ಆಗಬೇಕು ಜೊತೆಗೆ ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕಾರ್ಯ ನಮ್ಮಿಂದಾಗಬೇಕು. ಸರಕಾರದ ಮತ್ತು ಸಮಾಜದ ಒಬ್ಬ ಸೇವಕನಾಗಿ, ಪ್ರತಿನಿಧಿಯಾಗಿ ಸೇವೆ ಮಾಡುವಂತಹ ಅವಕಾಶ ನನಗೆ ಭಗವಂತ ನೀಡಿದ್ದಾರೆ. ಹಾಗಾಗಿ ನಾವು ನೀವೆಲ್ಲರೂ ಒಟ್ಟಾಗಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಬೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ಉಪಾಧ್ಯಕ್ಷರಾದ ಸುಚೇತಾ, ಬೈರಂಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ ಹಾಗೂ ಬೈರಂಪಳ್ಳಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಕಾಪು : ವೈದ್ಯರ ನಿರ್ಲಕ್ಷ್ಯ ಆರೋಪ - ಕೆಮುಂಡೇಲ್ ಯುವತಿ ಸಾವು

Posted On: 22-06-2023 10:07PM
ಕಾಪು : ವಿದ್ಯಾರ್ಥಿ ಜೀವನದಲ್ಲಿದ್ದು ಮುಂದೆ ಬಾಳಿ ಬದುಕಬೇಕಾಗಿದ್ದ ಯುವತಿಯೋರ್ವಳು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಘಟನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕೆಮುಂಡೇಲ್ ನ ಜನಾರ್ದನ ಮೂಲ್ಯ ಹಾಗೂ ಶೋಭಾ ಅವರ ಏಕೈಕ ಪುತ್ರಿ ನಿಖಿತ ಕುಲಾಲ್ (20)ಮೃತಪಟ್ಟ ದುರ್ದೈವಿ. ಕೆಪಿಟಿಯಲ್ಲಿ ದ್ವೀತಿಯ ವರ್ಷದ ಡಿಪ್ಲೋಮ ವಿದ್ಯಾರ್ಥಿನಿಯಾಗಿದ್ದರು.
ಜೂ.13ರ ಸೋಮವಾರ ರಾತ್ರಿ ನಿಖಿತ ವಿಪರೀತ ವಾಂತಿಯಿಂದ ಬಳಲಿ ಅಸ್ವಸ್ಥಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ಸ್ಕ್ಯಾನಿಂಗ್ ನಡೆಸಿದರೂ ಸರಿಯಾದ ಕಾರಣ ಪತ್ತೆಹಚ್ಚಲಾಗಲಿಲ್ಲ, ಬೇರೆ ಆಸ್ಪತ್ರೆಗೆ ಸೇರಿಸಲು ಆಸ್ಪತ್ರೆಯವರು ಬಿಡಲಿಲ್ಲ ಎಂದು ವಿದ್ಯಾರ್ಥಿನಿಯ ಚಿಕ್ಕಮ್ಮ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಪತ್ರೆಯ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾವಿನ ತನಿಖೆಗೆ ಆಗ್ರಹಿಸಿ ಶುಕ್ರವಾರ ಎಬಿವಿಪಿ ಸಂಘಟನೆ ಆಸ್ಪತ್ರೆಯ ಎದುರು ಪ್ರತಿಭಟನೆಗೆ ಕರೆ ಕೊಟ್ಟಿದೆ. ಕಾಪು ಕುಲಾಲ ಸಂಘ ಮತ್ತು ಕಾಪು ಕುಲಾಲ ಯುವವೇದಿಕೆ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ಜೂನ್ 24 : ಕಾಪುವಿನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

Posted On: 22-06-2023 02:02PM
ಕಾಪು : ದೇಸಿಕ್ರೂ ಕಾಪು ಪ್ರೈ.ಲಿ., ಜೇಸಿಐ ಕಾಪು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಜೂನ್ 24, ಶನಿವಾರ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇಸೀ ಕ್ರೂ ಪ್ರೈ. ಲಿ., N.H. 66, ದಂಡತೀರ್ಥ, ಉಳಿಯಾರಗೋಳಿ, ಕಾಪು ಇಲ್ಲಿ ನಡೆಯಲಿದೆ.
ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಗ್ಲುಕೋಮಾ ಹಾಗೂ ಕಣ್ಣಿನ ಇತರ ಚಿಕಿತ್ಸೆಗಳನ್ನು ನಡೆಸಲಾಗುವುದು. ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಅದೇ ದಿನಾಂಕದಂದು ಆಸ್ಪತ್ರೆಯಿಂದ ಉಚಿತ ವಾಹನ ಸೌಲಭ್ಯವಿದೆ. ಶಸ್ತ್ರ ಚಿಕಿತ್ಸೆಯ ನಂತರ, ಮರು ತಪಾಸಣೆಗೆ ತಿಳಿಸಿದ ದಿನಾಂಕದಂದು ಶಿಬಿರ ನಡೆದ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದು. ರೆಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಪ್ರತಿಯನ್ನು ತರಬೇಕು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9448501172, 9326012660
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ

Posted On: 21-06-2023 02:19PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ವಿಶ್ವ ಯೋಗ ದಿನಾಚರಣೆಯನ್ನು ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಆಯುಷ್ ಮಂತ್ರಾಲಯ ನೀಡಿದ ಯೋಗ ವಿಡಿಯೋ ಪ್ರಾಯೋಗಿಕ ಪ್ರದರ್ಶನವನ್ನು ಅನುಸರಿಸಿ ಆಚರಿಸಲಾಯಿತು .

ಇಂದಿನ ಬಿಡುವಿಲ್ಲದ ಜೀವನದಲ್ಲಿ ಯುವಕರು ಯೋಗದತ್ತ ಗಮನಹರಿಸಬೇಕು, ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಕಾಪಾಡಿಕೊಳ್ಳಲು ಯೋಗ ಮುಖ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿ, ಶುಭ ಹಾರೈಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.

ಯೋಗವು ಮೂಲಭೂತವಾಗಿ ಭಾರತದ ಉಪಖಂಡದಲ್ಲಿ ಹುಟ್ಟಿಕೊಂಡಿತು. ಪ್ರಾಚೀನ ಕಾಲದಿಂದಲೂ ಯೋಗವನ್ನು ಯೋಗಿಗಳು ನಿರ್ವಹಿಸುತ್ತಾರೆ. ಯೋಗದ ಪದದ ಅರ್ಥ ಒಕ್ಕೂಟ ಮತ್ತು ಶಿಸ್ತು ಎಂದು ಸಂಸ್ಕೃತದಿಂದ ಅನುವಾದಿಸುತ್ತದೆ. ಯೋಗವು ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. ಹೀಗಾಗಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯೋಗದ ಬಗ್ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ ಎಂದು ಕ್ಯಾಡೆಟ್ ಆಶಿಕಾ ತಿಳಿಸಿ, ವಿಶ್ವ ಯೋಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು.ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ಅಲಿಸ್ಟರ್ ಸುಜಾಯ್ ಡಿಸೋಜಾ ಸಹಕರಿಸಿದರು.

ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಸ್ವಾಗತಿಸಿ , ಕೆಡೆಟ್ ಕೃತಿಕಾ ವಂದಿಸಿದರು. ಕೆಡೆಟ್ ಸೋನಾಲಿ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.