Updated News From Kaup
ಉದ್ಯಾವರ : ಆಟೋ ಚಾಲಕರ ಮಾಲಕರ ಸಂಘದ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ ನಿಧನ

Posted On: 20-06-2023 08:09PM
ಉದ್ಯಾವರ : ಎಸ್.ಡಿ.ಎಂ. ಆಟೋ ಚಾಲಕರ ಮಾಲಕರ ಸಂಘ ಕುತ್ಪಾಡಿ ಉದ್ಯಾವರ ಇದರ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ (55) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.
32ಕ್ಕೂ ಅಧಿಕ ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಎಸ್.ಡಿ.ಎಂ. ಆಟೋ ಚಾಲಕರ ಮತ್ತು ಮಾಲಕರ ಸಂಘದಲ್ಲಿ ಸಕ್ರಿಯರಾಗಿದ್ದು, ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಾಲ್ಕು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಪ್ರತಿಷ್ಠಿತ ಯಶೋಧ ಆಟೋ ಯೂನಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಅತ್ಯಂತ ಶ್ರಮಜೀವಿಯಾಗಿದ್ದರು.
ಎಸ್ ಡಿ ಎಂ ಆಟೋ ಚಾಲಕರ ಮತ್ತು ಮಾಲಕರ ನಿಲ್ದಾಣಕ್ಕೆ ಅಗತ್ಯವಿದ್ದ ಮೇಲ್ಚಾವಣಿಯನ್ನು ಅಂದಿನ ಸಚಿವ ಪ್ರಮೋದ್ ಮಧ್ವರಾಜ್‍ರವರ ಮೂಲಕವಾಗಿ ದೊರಕಿಸಿಕೊಳ್ಳಲು ಅತ್ಯಂತ ಶ್ರಮಪಟ್ಟು ಯಶಸ್ವಿಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಾಪು : ರವಿಶಂಕರ್ ಗುರೂಜಿ ಭೇಟಿಯಾದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 20-06-2023 08:03PM
ಕಾಪು : ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದರು.
ಈ ಸಂದರ್ಭ ಸುರೇಶ್ ಶೆಟ್ಟಿಯವರ ಸಹೋದರ ಹರೀಶ್ ಶೆಟ್ಟಿ, ಸಂಬಂಧಿಕರಾದ ಆಶಾ ಶೆಟ್ಟಿ, ಬೆಂಗಳೂರು ಹೋಟೆಲ್ ಉದ್ಯಮಿ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಪಡುಬಿದ್ರಿ : ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರ - ಸೌಮ್ಯ ನಿತೇಶ್

Posted On: 19-06-2023 11:56AM
ಪಡುಬಿದ್ರಿ : ಯುವವಾಹಿನಿ ಸದಸ್ಯರ ನಡುವಿನ ಬಾಂಧವ್ಯ ಗಟ್ಟಿಯಾಗಲು ಕುಟುಂಬ ಕಲರವದಂತಹ ಕಾರ್ಯಗಳು ಅನಿವಾರ್ಯ. ಹಿರಿಯರ ಜೊತೆ ಕಿರಿಯರು ಒಟ್ಟಾದಾಗ ಸಂಸ್ಥೆಯ ಭವಿಷ್ಯ ಭದ್ರವಾಗುತ್ತದೆ. ಯುವವಾಹಿನಿ ಪಡುಬಿದ್ರಿ ಘಟಕದಿಂದ ಇನ್ನಷ್ಟು ಕಾರ್ಯಗಳು ನಡೆಯಲಿ ಎಂದು ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ಸೌಮ್ಯ ನಿತೇಶ್ ಹೇಳಿದರು. ಅವರು ರವಿವಾರ ಪಡುಬಿದ್ರಿ ಸುಜ್ಲಾನ್ ಕಾಲೋನಿಯ ಸಭಾಗೃಹದಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ಕುಟುಂಬ ಕಲರವ - 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾದ ಡಾ. ಎನ್. ಟಿ. ಅಂಚನ್ ಮಾತನಾಡಿ ಯುವವಾಹಿನಿ ಸಂಸ್ಥೆಯ ಮೂಲ ಉದ್ದೇಶವಾದ ವಿದ್ಯೆ, ಉದ್ಯೋಗ, ಸಂಪರ್ಕದ ನೆಲೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕವಾಗಿ ಯುವವಾಹಿನಿ ಸಂಸ್ಥೆ ದುಡಿಯುತ್ತಿದೆ. ಯುವವಾಹಿನಿಯ ಕಾರ್ಯಕ್ರಮಗಳಲ್ಲಿ ಕಿರಿಯರಿಂದ ಹಿರಿಯರಾದಿಯಾಗಿ ಮುತುವರ್ಜಿಯ ಭಾಗವಹಿಸುವಿಕೆ ನೋಡಲು ಸಾಧ್ಯ. ಸಮಾಜದಲ್ಲಿ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಸಮಾಜಕ್ಕೆ ಬೆಳಕಾಗುವ ಶಕ್ತಿ ಮೂಡಲು ಸಾಧ್ಯ. ಯುವವಾಹಿನಿ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಘಟಕದ ಸುದೀಪ್ ಎಸ್ ಕೋಟ್ಯಾನ್ ಮತ್ತು ಸ್ನೇಹರನ್ನು ಸನ್ಮಾನಿಸಲಾಯಿತು. ಘಟಕದ ಕುಟುಂಬದ ಸದಸ್ಯರಿಗಾಗಿ ನಡೆದ ವಿವಿಧ ಮನೋರಂಜನಾತ್ಮಕ ಆಟಗಳ ಬಹುಮಾನ ವಿತರಿಸಲಾಯಿತು.

ಪಡುಬಿದ್ರಿ ಘಟಕದ ಉಪಾಧ್ಯಕ್ಷರಾದ ಅಶ್ವಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಉದಯ್ ಕಾವೂರು, ಕಾರ್ಯಕ್ರಮ ಸಂಚಾಲಕ ಪ್ರಜ್ವಲ್, ಘಟಕದ ಕಾರ್ಯದರ್ಶಿ ಡಾ. ಐಶ್ವರ್ಯ ಸಿ ಅಂಚನ್ ಉಪಸ್ಥಿತರಿದ್ದರು.

ಘಟಕದ ಸದಸ್ಯೆ ಸುಗಂಧಿ ಶ್ಯಾಮ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಪ್ರಸ್ತಾವಿಸಿದರು. ಮಾಜಿ ಅಧ್ಯಕ್ಷರಾದ ರವಿರಾಜ್ ಎನ್. ಕೋಟ್ಯಾನ್ ಮತ್ತು ಜೊತೆ ಕಾರ್ಯದರ್ಶಿ ಪೂರ್ಣಿಮ ವಿಧಿತ್ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕರಾದ ಪ್ರಜ್ವಲ್ ವಂದಿಸಿದರು.
ಉಚ್ಚಿಲ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಅಭಿನಂದನೆ

Posted On: 16-06-2023 08:53PM
ಉಚ್ಚಿಲ : ಮೊಗವೀರ ಮಹಾಜನ ಸಂಘದ ವತಿಯಿಂದ ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಶುಕ್ರವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಜರಗಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ಎಸ್ ವೈದ್ಯ, ಜಿ ಶಂಕರ್ ರವರ ದಾನ ಧರ್ಮದಿಂದ ಸಮಾಜದ ಆಶೀರ್ವಾದ ಅವರ ಮೇಲಿದೆ. ಹೆಜಮಾಡಿ ಬಂದರು ಕಾಮಗಾರಿಗೆ ಬಾಕಿ ಅನುದಾನ ಬಿಡುಗಡೆ ಮಾಡಿ ಸಂಪೂರ್ಣ ಮಾಡಲು ಸರಕಾರ ಬದ್ಧವಾಗಿದೆ. ಪಕ್ಷ ಬೇಧ ಮರೆತು ಕರಾವಳಿಯ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೀನುಗಾರರಿಗೆ ಸರಿಯಾದ ಸವಲತ್ತು ಸರಕಾರದಿಂದ ಲಭಿಸಲು ಸಚಿವರು ಶ್ರಮಿಸಬೇಕು. ಮೀನುಗಾರಿಕಾ ಸಮುದಾಯದವರಾದ ಸಚಿವರಿಗೆ ಮೀನುಗಾರರ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿಲ್ಲ. ಅತಿ ಹೆಚ್ಚು ಮೀನುಗಾರರಿರುವ ಜಿಲ್ಲೆ ಉಡುಪಿ. ಮೀನುಗಾರರ ಶ್ರೇಯೋಭಿವೃದ್ಧಿಗೆ ಸರಕಾರ ಸಹಕರಿಸಬೇಕು. ಕರಾವಳಿಯ ೩ ಜಿಲ್ಲೆಯ ಮೀನುಗಾರರಿಗೆ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಸಿಗುವಂತಾಗಬೇಕು. ಡ್ರೆಜ್ಜಿಂಗ್, ಸೀ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ ಜಿ. ಶಂಕರ್ ವಹಿಸಿದ್ದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಆನಂದ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.
ಕಟಪಾಡಿ : ತ್ರಿಶಾ ವಿದ್ಯಾ ಪಿ.ಯು ಕಾಲೇಜು - ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ

Posted On: 16-06-2023 12:41PM
ಕಟಪಾಡಿ : ಸತತ ಪರಿಶ್ರಮ ಇದ್ದಾಗ ಮಾತ್ರ ಗೆಲುವು ಸಾಧ್ಯ. ಪ್ರಸ್ತುತ ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಅವಕಾಶಗಳು ಬಹಳಷ್ಟಿವೆ. ಅದನ್ನು ಸಾಧಿಸಲು ಛಲ ಹಾಗೂ ಪ್ರಯತ್ನ ಬೇಕು. ಶಿಕ್ಷಣ ಮಾತ್ರ ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವಂತದ್ದು. ಜೊತೆಗೆ ಬದಲಾವಣೆಗಳಿಗೆ ಹೊಂದಿಕೊಂಡು ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತೇವೆ ಅನ್ನುವುದು ನಿರ್ಣಾಯಕ. ದೈಹಿಕ ಹಾಗೂ ಮಾನಸಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ವಿದ್ಯಾರ್ಥಿಯು ಪ್ರಬುದ್ಧನಾಗಲು ಸಾಧ್ಯ ಎಂದು ತ್ರಿಶಾ ಸಂಸ್ಥೆಯ ಸಂಸ್ಥಾಪಕ ಸಿ. ಎ ಗೋಪಾಲಕೃಷ್ಣ ಭಟ್ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪುನಶ್ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕುರಿತು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ ರವರು ತ್ರಿಶಾ ಕಾಲೇಜು ಕಟಪಾಡಿ ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಕೇವಲ ಪಾಠಗಳಷ್ಟೇ ಅಲ್ಲದೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ಕಾಲೇಜಿನ ವಿಶೇಷವೇ ಸರಿ. ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ಧಾಂತ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ. ಭಟ್ ಉಪಸ್ಥಿತರಿದ್ದರು.
ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಂತ್ ಪೈ ರವರು,ವಿಜ್ಞಾನದಲ್ಲಿ ಪಿ.ಸಿ.ಎಂ.ಬಿ ಹಾಗೂ ಪಿ.ಸಿ.ಎಂ.ಸಿ ವಿಭಾಗದ ಮಹತ್ವದ ಜೊತೆಗೆ ಜೆ.ಇ.ಇ, ಎನ್.ಇ.ಇ.ಟಿ ತಯಾರಿಯ ಬಗೆಗೆ ಹೇಳಿದರು. ಅಲ್ಲದೆ ವಾಣಿಜ್ಯ ವಿಭಾಗದಲ್ಲಿ ಬಿ.ಎ.ಎಂ.ಎಸ್. ಕೋರ್ಸ್ ನ ಮಹತ್ವ ಹಾಗೂ ಸಿ.ಎ, ಸಿ.ಎಸ್ ನ ತಯಾರಿಯ ಬಗೆಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಂತ್ ಪೈ ಸ್ವಾಗತಿಸಿ, ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿ, ಪ್ರಾಧ್ಯಾಪಕಿ ವರ್ಷ ಧನ್ಯವಾದ ಸಮರ್ಪಿಸಿದರು.
ಕಾಪು : ಎರ್ಮಾಳು ತೆಂಕ ಪೂಂದಾಡುವಿನಲ್ಲಿ ಕಂಡುಬಂದ ಚಿರತೆಗೆ ಬೋನಿಟ್ಟ ಅರಣ್ಯಾಧಿಕಾರಿಗಳು

Posted On: 15-06-2023 09:22PM
ಕಾಪು : ತಾಲೂಕಿನ ತೆಂಕ ಎರ್ಮಾಳು ಪೂಂದಾಡು ರೈಲ್ವೆ ಸೇತುವೆ ಬಳಿ ರಾತ್ರಿ ಮನೆಯೊದರ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅರಣ್ಯಾಧಿಕಾರಿಗಳು ಪೂಂದಾಡುವಿನಲ್ಲಿ ಚಿರತೆ ಬೇಟೆಗೆ ಬೋನನ್ನು ಇಟ್ಟಿದ್ದಾರೆ.
ಈ ಸಂದರ್ಭ ಮಾಹಿತಿ ನೀಡಿದ ಅರಣ್ಯಾಧಿಕಾರಿ ಅಭಿಲಾಶ್, ಮೇಲಾಧಿಕಾರಿಗಳ ಆದೇಶದಂತೆ ಈ ಕಾರ್ಯಾಚರಣೆ ಮಾಡಲಾಗುತ್ತಿದೆ. ಚಿರತೆ ಬೇಟೆಗೆ ಇಟ್ಟ ಬೋನಿನಲ್ಲಿ ನಾಯಿ ಒಂದನ್ನು ಇಡಲಾಗಿದೆ. ನಾಯಿಗೆ ಯಾವುದೇ ತೊಂದರೆ ಆಗದಂತೆ ಕಬ್ಬಿಣದ ಬೇಲಿಯನ್ನು ಅಳವಡಿಸಲಾಗಿದೆ. ಚಿರತೆ ಬೋನಿಗೆ ಬಿದ್ದ ಕೂಡಲೇ ನಮಗೆ ಮಾಹಿತಿ ನೀಡಿದರೆ ಅದನ್ನು ಮುಂದೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದರು.
ಈ ಸಂದರ್ಭ ತೆಂಕ ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಶೆಟ್ಟಿ, ಸ್ಥಳೀಯರಾದ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಪ್ರದೀಪ್ ಅದಮಾರು, ಸುಬ್ರಮಣ್ಯ ಭಟ್, ರವೀಂದ್ರ ಉಪಸ್ಥಿತರಿದ್ದರು.
ಕಾಪು : ಮೂಳೂರಿನಲ್ಲಿ ಕಡಲ ಕೊರೆತ ತೀವ್ರ - ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಅಧಿಕಾರಿಗಳ ಭೇಟಿ

Posted On: 15-06-2023 08:58PM
ಕಾಪು : ತಾಲೂಕಿನ ಮೂಳೂರು ತೊಟ್ಟಂ ಪ್ರದೇಶದಲ್ಲಿ ಕಡಲ ಕೊರೆತ ತೀವ್ರಗೊಂಡಿದ್ದು, ಗುರುವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಡಲ ಕೊರೆತ ವೀಕ್ಷಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಈ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ತುರ್ತು ಸ್ಪಂದಿಸುವಂತೆ ಮನವಿ ಮಾಡುತ್ತೇವೆ. ಈ ಬಗ್ಗೆ ಶುಕ್ರವಾರ ಸಂಜೆ ಉಚ್ಚಿಲಕ್ಕೆ ಆಗಮಿಸಲಿರುವ ಮೀನುಗಾರಿಕಾ ಬಂದರು ಸಚಿವರ ಗಮನಕ್ಕೆ ತರಲಾಗುವುದು. ಬರುವ ವಾರದಲ್ಲಿ ಬರುವ ವಿಧಾನ ಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಕಾಪು ಪುರಸಭಾ ಅಧಿಕಾರಿ ಸಂತೋಷ್ ಕುಮಾರ್, ಮುಖ್ಯ ಇಂಜಿನಿಯರ್ ನಯನ ತಾರಾ ಮತ್ತಿತರ ಅಧಿಕಾರಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಉಡುಪಿ : ಸಫಾಯಿ ಕರ್ಮಚಾರಿಗಳಿಗೆ ಸರಕಾರದ ಯೋಜನೆಗಳ ಪ್ರಯೋಜನ ಒದಗಿಸಿ - ಜಿಲ್ಲಾಧಿಕಾರಿ

Posted On: 15-06-2023 11:53AM
ಉಡುಪಿ : ಸಫಾಯಿ ಕರ್ಮಚಾರಿಗಳಿಗೆ ಸರಕಾರದ ವಿವಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಫಲಾನುಭವಿಗಳನ್ನಾಗಿಸಿ ಅವರುಗಳು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಫಾಯಿ ಕರ್ಮಚಾರಿಗಳ ಪುರ್ನವಸತಿ ಸೇರಿದಂತೆ ಅವರುಗಳು ಕಲ್ಯಾಣಾಭಿವೃದ್ದಿಗಾಗಿ ಸರಕಾರದ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಇದರ ಲಾಭವನ್ನು ಅವರುಗಳು ಪಡೆದುಕೊಳ್ಳುವಂತೆ ಮಾಡುವ ಕೆಲಸವಾಗಬೇಕಿದೆ ಎಂದರು. ಖಾಸಗಿ, ಗುತ್ತಿಗೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳು ಸ್ಚಚ್ಚತಾ ಕಾರ್ಯಗಳನ್ನು ನಿರ್ವಹಿಸುವಾಗ ತಪ್ಪದೇ ಸುರಕ್ಷತಾ ಸಾಧನಗಳನ್ನು ಬಳಸಬೇಕು ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಸಫಾಯಿ ಕರ್ಮಚಾರಿಗಳ ಆರೋಗ್ಯ ತಪಾಸಣೆಯನ್ನು ಸರ್ಕಾರದ ನಿಯಮಾನುಸಾರ ಆಗಿಂದಾಗ್ಗೆ ಮಾಡಿಸಬೇಕು,ಒಂದೊಮ್ಮೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಅವರಿಗೆ ಸೂಕ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದರು.
ಸಫಾಯಿ ಕರ್ಮಚಾರಿಗಳಿಗೆ ಪ್ರತಿಯೊಬ್ಬರಿಗೂ ಗುರುತಿನ ಚೀಟಿಗಳನ್ನು ನಿಗಮದ ವತಿಯಿಂದಲೇ ಶೀಘ್ರದಲ್ಲಿ ವಿತರಣೆ ಮಾಡಬೇಕು ಎಂದ ಅವರು ಸಮುದಾಯ ಭವನ ನಿರ್ಮಾಣಕ್ಕೆ ಮಣಿಪಾಲದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದ್ದು ಇದರ ಮಂಜೂರಾತಿಯನ್ನು ಪಡೆದು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು . ಸರ್ಕಾರ ಸಫಾಯಿ ಕರ್ಮಚಾರಿಗಳ ಸಂಘ ಸಂಸ್ಥೆಗಳಿಗೆ ಶೇ.40 ರ ಸಹಾಯಧನದೊಂದಿಗೆ ಸಕ್ಕಿಂಗ್ ಯಂತ್ರ ಖರೀದಿಗೆ ಅವಕಾಶವಿದೆ ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಅಕ್ಷಯ್ ಎಂ ಹಾಕೆ,ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ರಕ್ತದಾನಿಗಳ ದಿನಾಚರಣೆಯಿಂದ ಹೊಸ ರಕ್ತದಾನಿಗಳಿಗೆ ಪ್ರೇರಣೆ : ಡಾ. ನಾಗಭೂಷಣ ಉಡುಪ

Posted On: 15-06-2023 11:49AM
ಉಡುಪಿ : ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಸಾಕಷ್ಟಿದ್ದು, ತುರ್ತು ಸಂದರ್ಭಗಳಲ್ಲಿ ಇವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನಿಗಳ ದಿನಾಚರಣೆಯು ಹೊಸ ರಕ್ತದಾನಿಗಳಿಗೆ ಪ್ರೇರಣೆ ನೀಡಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು. ಅವರು ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಭಾವಪ್ರಕಾಶ ಆಡಿಟೋರಿಯಂನಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಲಕ್ಷö್ಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್ಕ್ರಾಸ್ ಘಟಕ ಮತ್ತು ಎನ್.ಎಸ್.ಎಸ್ ಘಟಕ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವ ರಕ್ತದಾನಿಗಳ ದಿನಾಚರಣೆಯ ಧ್ಯೇಯವಾಕ್ಯವಾದ ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳಿ ಎಂಬ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು, ರಕ್ತದಾನ ಮಾಡುವುದರಿಂದ ಈ ಕಾರ್ಯಕ್ರಮವು ಸಾರ್ಥಕತೆ ಪಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ರಕ್ತದ ಕೊರತೆಯಿಂದ ಹಲವಾರು ಮನುಷ್ಯ ಜೀವಗಳು ಸಾವನ್ನಪ್ಪುತ್ತಿದ್ದು, ಯುವಜನತೆ ರಕ್ತದ ಅವಶ್ಯಕತೆಯನ್ನು ಮನಗಂಡು ರಕ್ತದಾನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾದ ರಕ್ತವನ್ನು ಜಾತಿ, ಮತ, ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಗೂ ನೀಡುತ್ತಿದ್ದು, ಒಬ್ಬ ವ್ಯಕ್ತಿಯು ರಕ್ತವನ್ನು ದಾನ ಮಾಡುವುದರಿಂದ ಕನಿಷ್ಠ ನಾಲ್ಕು ಜನರ ಜೀವ ಉಳಿಸಬಹುದಾಗಿದೆ ಎಂದರು.

ಯುವಜನರು ಹೆಚ್ಚಾಗಿ ರಕ್ತದಾನದಲ್ಲಿ ತೊಡಗಿಸಿಕೊಂಡು ತಾವು ರಕ್ತದಾನ ಮಾಡುವಂತೆ, ಇತರರಿಗೂ ಜಾಗೃತಿ ಮೂಡಿಸಿ ರಕ್ತದಾನ ಮಾಡಲು ಪ್ರೇರೇಪಿಸುವಂತೆ ತಿಳಿಸಿದ ಅವರು, ಮಹಿಳೆಯರು ಕೂಡ ಹೆಚ್ಚಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಶಾಲಾ-ಕಾಲೇಜುಗಳ ರಜೆಯ ಕಾರಣ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದ್ದು, ಅಂತಹ ಸಮಯದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರಗಳಿಗೆ ಹಾಗೂ ರಕ್ತದಾನ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡುವಂತೆ ತಿಳಿಸಿದರು. ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸಹಾಯಕ ಪ್ರಾಧ್ಯಾಪಕ ಡಾ. ಸಂದೇಶ್ ಕುಮಾರ್ ಶೆಟ್ಟಿ, ಸುಹಾಸ್ ಹೆಗಡೆ, ರಾಕೇಶ್ ಸುವರ್ಣ, ಅನುರಾಧ ಉದ್ಯಾವರ ಹಾಗೂ ಆಶಾ ಶಿವರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಕ್ತದಾನಿಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾಕುಮಾರಿ ರಕ್ತದಾನ ಮತ್ತು ರಕ್ತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಸರ್ಜನ್ ಡಾ. ಸುದೇಶ್ ಕುಮಾರ್, ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್, ಲಯನ್ಸ್ ಕ್ಲಬ್ ಉಡುಪಿ ಲಕ್ಷö್ಯದ ಅಧ್ಯಕ್ಷ ಲಯನ್ಸ್ ರಮೇಶ್ ಕೆ ಶೆಟ್ಟಿ, ಉಡುಪಿ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದ ಯೂತ್ ರೆಡ್ಕ್ರಾಸ್ನ ಅಸೋಸಿಯೇಟ್ ಡೀನ್ ಡಾ. ಮೊಹಮ್ಮದ್ ಫೈಸಲ್, ವಿವಿಧ ಇಲಾಖೆಗಳ ಮುಖ್ಯಸ್ಥರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಕಮ್ಯುನಿಟಿ ಸರ್ವೀಸ್ ಡೀನ್ ಡಾ. ವಿದ್ಯಾಲಕ್ಷ್ಮಿ ಕೆ ಸ್ವಾಗತಿಸಿ, ವಿದ್ಯಾರ್ಥಿನಿ ಸಿರಿ ಮರವಂತೆ ನಿರೂಪಿಸಿದರೆ, ಅಸೋಸಿಯೇಟ್ ಡೀನ್ ಡಾ. ಯೋಗೀಶ್ ಆಚಾರ್ಯ ವಂದಿಸಿದರು.
ಕಾಪು : ಬೆಳ್ಳೆ ಗ್ರಾಮದ ದಲಿತರಿಗೆ ಸಂಬಂಧಿಸಿದ ಭೂಮಿಯ ಕಡತ ಸರಕಾರಕ್ಕೆ ಸಲ್ಲಿಕೆಯಾಗದೆ ವಿಳಂಬ

Posted On: 14-06-2023 11:05PM
ಕಾಪು : ತಾಲ್ಲೂಕು ಬೆಳ್ಳೆ ಗ್ರಾಮದ ದಲಿತರಿಗೆ ಸಂಬಂಧಿಸಿದ ಭೂಮಿಯ ಕಡತ ತೀರಾ ಕ್ಷುಲ್ಲಕ ಕಾರಣಕ್ಕೆ ಸರಕಾರಕ್ಕೆ ಸಲ್ಲಿಕೆಯಾಗದೆ 2014 ರಿಂದ ಜಿಲ್ಲೆ- ತಾಲ್ಲೂಕು ಹಂತದಲ್ಲಿ ಅಲೆದಾಡುತ್ತಿದೆ. ಈ ಬಗ್ಗೆ ಆ ದಿನಾಂಕದಿಂದ ಈ ವರೆಗೆ ವಿಳಂಬಕ್ಕೆ ಕಾರಣರಾದ ಅತ್ಯಂತ ಗೌರವಯುತ ಸರಕಾರಿ ಅಧಿಕೃತರನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಮತ್ತು ಶ್ರೀರಾಮ ದಿವಾಣ ಮೂಡುಬೆಳ್ಳೆ ತಿಳಿಸಿದ್ದಾರೆ.
ಕಡತ ಸಂಖ್ಯೆ: ಎಲ್.ಎನ್.ಡಿ./ಪಿಪಿಡಿಆರ್/ಸಿಆರ್/69/2022. ಹಲವು ಮನವಿಗಳನ್ನು ಸಲ್ಲಿಸಿದರೂ ಜಿಲ್ಲಾಡಳಿತದಿಂದ ಈ ವರೆಗೆ ಕನಿಷ್ಟ ಒಂದು ಉತ್ತರವೂ ಇಲ್ಲ. ಸರಕಾರ ಇದೂ ಸೇರಿ ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡ ಕಡತಗಳನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.