Updated News From Kaup

ಜೂನ್ 15 : ತ್ರಿಶಾ ಕ್ಲಾಸಸ್ - ಸಿ.ಎಸ್.ಇ.ಇ.ಟಿ ವಿದ್ಯಾರ್ಥಿಗಳ ಮಾಹಿತಿ ಕಾರ್ಯಗಾರ

Posted On: 14-06-2023 06:33PM

ಕಟಪಾಡಿ : ಸತತ ಇಪ್ಪತ್ತೈದು ವರ್ಷಗಳಿಂದ ವಾಣಿಜ್ಯ ವಿಭಾಗದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೂತನ ಸಿ.ಎಸ್.ಇ.ಇ.ಟಿ ಕುರಿತಾದ ಮಾಹಿತಿ ಕಾರ್ಯಗಾರವು ಜೂನ್ 15 ಗುರುವಾರದಂದು ಸಂಜೆ 6 ರಿಂದ 7:30ರ ವರೆಗೆ ಆನ್ಲೈನ್ ಮುಖಾಂತರ ನಡೆಯಲಿದೆ.

ಪ್ರಸ್ತುತ ಸಾಲಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಆದ ಕಂಪೆನಿ ಸೆಕ್ರೆಟರಿ ಬಗ್ಗೆ ತಿಳಿದುಕೊಳ್ಳಲು ಈ ಮಾಹಿತಿ ಕಾರ್ಯಾಗಾರವು ಉಪಯುಕ್ತವಾಗಲಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕೋರ್ಟ್ ಮುಂಭಾಗದ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಮಂಗಳೂರಿನ ಅಳಕೆಯ ಶ್ರೀನಿಧಿ ಕಾಂಪ್ಲೆಕ್ಸ್ ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಸೈನ್ : ನೂತನ ಅಧ್ಯಕ್ಷರಾಗಿ ಪ್ರೇಮ್ ಮಿನೇಜಸ್ ಆಯ್ಕೆ

Posted On: 14-06-2023 06:27PM

ಉದ್ಯಾವರ : ಲಯನ್ಸ್ ಜಿಲ್ಲೆ 317C ಗೆ ಒಳಪಟ್ಟ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2023- 24ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಲಯನ್ ಪ್ರೇಮ್ ಮಿನೇಜಸ್ ಆಯ್ಕೆಯಾಗಿದ್ದಾರೆ.

ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಲಯನ್ ಕ್ಲಬ್ ಉದ್ಯಾವರ ಸನ್ ಸೈನ್, ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು. ಮಮ್ಮಿ ಡಿಜಿಟಲ್ ಸ್ಟುಡಿಯೋ ಮಾಲಕರಾಗಿರುವ ಲಯನ್ ಪ್ರೇಮ್ ಮಿನೇಜಸ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಡಿಜಿಟಲ್ ಸೇವಾ ಕೇಂದ್ರ ಇದರ ಲಯನ್ ಹರೀಶ್ಚಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಲಯನ್ ರೋಷನ್ ಕ್ರಾಸ್ಟೋ ಕೋಶಾಧಿಕಾರಿಯಾಗಿ ಮರು ಆಯ್ಕೆಯಾಗಿದ್ದು, ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗಿದೆ.

ಚುನಾವಣಾ ಅಧಿಕಾರಿಯಾಗಿ ಮಾಜಿ ಅಧ್ಯಕ್ಷ ಲಯನ್ ಜೋನ್ ಫೆರ್ನಾಂಡಿಸ್ ಪದಾಧಿಕಾರಿಗಳ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಲಯನ್ ಅನಿಲ್ ಲೋಬೊ, ಕಾರ್ಯದರ್ಶಿ ಲಯನ್ ಸ್ಟೀವನ್ ಕುಲಾಸೊ, ಕೋಶಾಧಿಕಾರಿ ಲಯನ್ ರೋಷನ್ ಕ್ರಾಸ್ಟೋ ಉಪಸ್ಥಿತರಿದ್ದರು.

ಕಾರ್ಕಳ :ನೀಟ್‌ ಫಲಿತಾಂಶ ಪ್ರಕಟ, ಕ್ರಿಯೇಟಿವ್‌ನ ಜಾಗೃತಿ ಕೆ ಪಿ ಗೆ ಆಲ್‌ ಇಂಡಿಯಾ 23 ನೇ ರ‍್ಯಾಂಕ್‌

Posted On: 14-06-2023 06:11PM

ಕಾರ್ಕಳ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ‍್ಯಾಂಕ್‌ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್‌ 625, ಶ್ರೇಯಸ್‌ ಎಸ್‌ ಚಿಕಾಲೇ 612, ಸಾತ್ವಿಕ್‌ ಎಸ್‌ ಶೆಟ್ಟಿ 609, ಚಂದನ ಹೆಚ್‌ ಎಂ 605, ಸಾಕ್ಷಿತ್‌ ಶೆಟ್ಟಿ 604, ಸ್ವೀಕೃತಿ ಶೆಟ್ಟಿ 596, ಗೌರಿ ಸಿ ಸಂಕೊಲ್‌ 595, ಮನೋಜ ಪಾಲನ್ಕರ್‌ 592,ಪ್ರೀತಮ್ ಎಸ್ ಜಿ 584, ಪ್ರಶಿನ್‌ ಶೆಟ್ಟಿ 578,ಚಮನ್ ಜಿ 576, ಜ್ಞಾನದೀಪ್‌ ಕೆ ಆರ್‌ 555, ಸಾನ್ವಿ ಎಂ ಆರ್‌ 548, ಶ್ರೀಗಂಗಾ 547, ಜೀವನ್‌ ಎ 545, ನೇಹಾ ಬಿ ಜಿ 543, ಮಿಂಚು ಪಿ ಆರ್‌ 535, ಅವಿನ್‌ ಫ್ರಾನ್ಸೀಸ್‌ ಡಿಸೋಜಾ 531, ಅಭಯ್‌ ಕೆ ಆರ್‌ 525, ಶ್ರೇಯಸ್‌ ಎಸ್‌ ಶೆಟ್ಟಿ 521, ಆದಿತ್ಯ ಮಹೇಶ್‌ ಶೇಟ್‌ 517, ಭರತ್‌ ವಿ 516, ಪ್ರವೀಣ್‌ ಆರ್ ಎಮ್ಮಿ 515 ಅಂಕಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್‌ ಸೀಟ್‌ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಸುಮಾರು 25 ವಿದ್ಯಾರ್ಥಿಗಳು 500 ಕ್ಕಿಂತ ಅಧಿಕ ಅಂಕ, 68 ವಿದ್ಯಾರ್ಥಿಗಳು 400 ಕ್ಕಿಂತ ಅಧಿಕ ಅಂಕ, 110 ವಿದ್ಯಾರ್ಥಿಗಳು 300 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 209 ವಿದ್ಯಾರ್ಥಿಗಳು ನೀಟ್ ಅರ್ಹತೆ ಪಡೆದುಕೊಂಡಿದ್ದು ಮುಂದಿನ ಕೌನ್ಸೆಲಿಂಗ್ ಹಂತದಲ್ಲಿ ಮೆಡಿಕಲ್ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ನೀಟ್ ಸಂಯೋಜಕರಾದ ಲೋಹಿತ್‌ ಎಸ್‌ ಕೆ ಅಭಿನಂದಿಸಿದ್ದಾರೆ.

ಜೂನ್ 15 : ಫ್ರೀ ಓನ್ಡ್ ವೈಕಲ್ಸ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ವತಿಯಿಂದ ಗಿಡ ನೆಡುವ ಮತ್ತು ವಿತರಣಾ ಕಾರ್ಯಕ್ರಮ

Posted On: 14-06-2023 08:53AM

ಉಡುಪಿ : ಇಲ್ಲಿನ ಫ್ರೀ ಓನ್ಡ್ ವೈಕಲ್ಸ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇದರ ವತಿಯಿಂದ ಜೂನ್ 15ರಂದು ಬೆಳಿಗ್ಗೆ 10 ಗಂಟೆಗೆ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಒಂದು ವಿನೂತನ ಕಾಯ೯ಕ್ರಮದ ಚಾಲನೆ ದೊರಕಲಿದೆ.

ಒಂದು ಸಾವಿರಕ್ಕೂ ಮಿಕ್ಕಿ ಲಕ್ಷ್ಮಣ ಫಲ ಗಿಡ ಮತ್ತು ಇನ್ನಿತರ ಪರಿಸರಕ್ಕೆ ಪೂರಕವಾದ ಗಿಡಗಳನ್ನು ಉಚಿತವಾಗಿ ನೀಡಿ ಸಾರ್ವಜನಿಕ ಪ್ರದೇಶಗಳಲ್ಲಿ ನೆಟ್ಟು ರಕ್ಷಣಾ ಬೇಲಿ ಹಾಕಿ ಪೋಷಿಸುವ ಕಾರ್ಯಕ್ರಮ ಇದಾಗಿದ್ದು, ಇದರ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ನಗರಸಭೆಯ ಪೌರಾಯುಕ್ತರಾದ ರಮೇಶ್ ಪಿ ನಾಯ್ಕ್, ರವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ವಹಿಸಲಿದ್ದು ,ಮುಖ್ಯ ಅತಿಥಿಯಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ, ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರ್ಯ ,ಖ್ಯಾತ ಮಕ್ಕಳ ತಜ್ಞರಾಗಿರುವ ಡಾ||ಮನೋಹರ್ ಬೋಳೂರು, ಪರಿಸರವಾದಿ ರಾಘವೇಂದ್ರ ಪ್ರಭು, ಕವಾ೯ಲು , ಮುಂತಾದವರು ಭಾಗವಹಿಸಲಿರುವರು ಎಂದು ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಹಾಗೂ ಪ್ರ.ಕಾರ್ಯದರ್ಶಿ ಉದಯ್ ಕಿರಣ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ : ಶ್ರೀಕ್ಷೇತ್ರ ಕೇಮಾರಿನಲ್ಲಿ "ಟೆಲಿಬರವು" ತಂತ್ರಾಂಶ ಲೋಕಾರ್ಪಣೆ

Posted On: 12-06-2023 07:41PM

ಕಾರ್ಕಳ : ತುಳುನಾಡಿನ ಜನರಿಗೆ ಜಾತಿಗಿಂತ ತುಳು ಸಂಸ್ಕೃತಿ ಮುಖ್ಯ, ದೇಶ ವಿದೇಶಕ್ಕೂ ಹೋದರೂ ತುಳು ಸಂಸ್ಕೃತಿಯನ್ನು ಮರೆಯಬಾರದು. ಆದರೆ ತುಳು ಭಾಷೆಯನ್ನು ಎಂಟನೇ ಪರೀಚ್ಛೇಧದಲ್ಲಿ ಸೇರಿಸುವಲ್ಲಿ ಈ ತನಕವೂ ಆಗದೇ ರಾಜಕಾರಣಿಗಳು ಕೇವಲ ಬಂಡಲ್ ಬಿಡುವಲ್ಲೇ ಕಾಲ ಕಳೆದರು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು. ಜೈ ತುಲುನಾಡ್(ರಿ.) ಇದರ ನೇತೃತ್ವದಲ್ಲಿ ಶ್ರೀಕ್ಷೇತ್ರ ಕೇಮಾರಿನಲ್ಲಿ ಭಾನುವಾರ 'ಟೆಲಿಬರವು' ಎಂಬ ಆಪ್ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಈ ವೇಳೆ 'ಟೆಲಿಬರವು' ತಂತ್ರಾಂಶದ ರಚನೆಕಾರರಾದ ಜ್ಙಾನೇಶ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಈ ತಂತ್ರಾಂಶದಲ್ಲಿ ಕನ್ನಡದಲ್ಲಿ ಬರೆದಂತಹ ಅಕ್ಷರಗಳು ತುಳು ಲಿಪಿಗೆ ಪರಿವರ್ತನೆಯಾಗುತ್ತದೆ ಎಂದು ಸನ್ಮಾನಿತರಾದ ಜ್ಞಾನೇಶ್ ಹೇಳಿದರು. ಸುಮಂತ್ ಹೆಬ್ರಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭ ಕೇಮಾರ್ ಕ್ಷೇತ್ರದ ನಾಮಫಲಕವನ್ನು ತುಲುಲಿಪಿಯಲ್ಲಿ ಅಳವಡಿಸಿ ಉದ್ಘಾಟಿಸಲಾಯಿತು.

ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷ ವಿಶು ಶ್ರೀಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷ ಉದಯ್ ಪೂಂಜಾ ಉಪಸ್ಥಿತರಿದ್ದರು. ಪೂರ್ಣಿಮಾ ಬಂಟ್ವಾಳ ಸನ್ಮಾನ ಪತ್ರ ವಾಚಿಸಿದರು. ಪವಿತ್ರ ಪೂಜಾರಿ ಸ್ವಾಗತಿಸಿ, ಅಕ್ಷತ ಧನ್ಯವಾದ ಅರ್ಪಿಸಿದರು. ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.

ಶಿರ್ವ : ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ವಿಷಯದ ಕುರಿತು ಅಭಿಯಾನ

Posted On: 12-06-2023 05:45PM

ಶಿರ್ವ : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ ಮತ್ತು ಪರಿಸರ ಕ್ಲಬ್ ಜಂಟಿಯಾಗಿ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಮತ್ತು ವಿಶ್ವಪರಿಸರ ದಿನದ ಅಂಗವಾಗಿ “ಪ್ಲಾಸ್ಟಿಕ್ ವಿರುದ್ಧ ಜಾಗೃತಿ” ಅಭಿಯಾನವನ್ನು ಆಯೋಜಿಸಿತ್ತು. ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಈ ಅಭಿಯಾನದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ ಶಂಕರಪುರ ಮತ್ತು ಉಡುಪಿಯಲ್ಲಿರುವ ಮೆಡಿಕಲ್ ಶಾಪ್ ಮತ್ತು ದಿನಸಿ ಅಂಗಡಿಗಳಿಗೆ ತಾವು ತಯಾರಿಸಿದ ಪೇಪರ್ ಬ್ಯಾಗ್ ಮತ್ತು ಕವರ್‌ಗಳನ್ನು ವಿತರಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದು, ಮರುಬಳಕೆ ಮಾಡುವುದು ಮತ್ತು ಮರು ಉತ್ಪಾದಿಸುವುದು ಎಂಬ ವಿಷಯವನ್ನು ಕೇಂದ್ರಿಕರಿಸುವ ಮೂಲಕ ತ್ಯಾಜ್ಯವನ್ನು ಕಡಿಮೆಗೊಳಿಸುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಅಂತೆಯೇ ಕಾಗದದವಸ್ತುಗಳನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ವಿದ್ಯಾರ್ಥಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ನಾಗರಾಜ್ ರಾವ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್, ಗಣೇಶ್ ಶೆಟ್ಟಿ, ಜಯರಾಮ್ ನಾಯಕ್, ರುಕ್ಮಿಣಿ ಭಟ್ ಮತ್ತು ಅರ್ಚನಾ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ಶಿರ್ವ : ಹಿಂದೂ ಪದವಿ ಪೂರ್ವ ಕಾಲೇಜು - ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Posted On: 12-06-2023 04:48PM

ಶಿರ್ವ : 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂದು ಹಿಂದೂ ಪದವಿ ಪೂರ್ವ ಕಾಲೇಜಿನಲ್ಲಿ ಗೌರವಾರ್ಪಣೆ ನಡೆಯಿತು.

ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಗೌರವಿಸಿದರು.

ಗೌರವಾರ್ಪಣೆ : ಕಾರ್ಯಕ್ರಮದಲ್ಲಿ 2022-23 ಸಾಲಿನ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂಕಿ ಎಸ್ ಶೆಟ್ಟಿ (594/600), ಮಂಜುಳಾ ಕಾಮತ್ (573/600) ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಇಳಾ ಕೆಳಮನೆ (578/600), ಸಿಧ್ಧೀಶ್ ಎಸ್ ಪ್ರಭು (573-600), ಕಲಾ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರಾವ್ಯ ಪ್ರಭು (534/600), ಆರ್ ಶ್ರಾವ್ಯ (533/600) ಹಾಗೂ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಪೂರ್ತಿ (575/625), ಶ್ರೀಗೌರಿ (562/625) ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘ (ರಿ), ಶಿರ್ವದ ಆಡಳಿತಾಧಿಕಾರಿಗಳಾದ ಪ್ರೊ. ವೈ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿಗಳಾದ ಸುಬ್ಬಯ್ಯ ಹೆಗ್ಡೆ, ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಭಾಸ್ಕರ ಎ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕರಾದ ವಸಂತಿ ಉಪಸ್ಥಿತರಿದ್ದರು.

ಉಡುಪಿ : ಯಾವುದೇ ಇಲಾಖೆಯಲ್ಲಿ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಅಶಿಸ್ತು, ವಿಳಂಬ ಸಹಿಸುವುದಿಲ್ಲ - ಲಕ್ಷ್ಮೀ ಹೆಬ್ಬಾಳ್ಕರ್

Posted On: 12-06-2023 02:24PM

ಉಡುಪಿ : ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಆಶಿಸ್ತು ಕಂಡುಬಂದಲ್ಲಿ ಅಂತಹ ಅಧಿಕಾರಿಗಳು ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು. ಅವರು ಇಂದು ಉಡುಪಿಯ ತಾಲೂಕು ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರಸ್ತುತ ನೂತನ ಸರ್ಕಾರ ಜಾರಿಗೆ ಬಂದಿದೆ, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಸರಕಾರಕ್ಕೆ ಒಳ್ಳೆಯ ಹೆಸರು ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಕಾರ್ಯದಲ್ಲಿ ಅನಗತ್ಯ ವಿಳಂಬ ಹಾಗೂ ಅಶಿಸ್ತು ತೋರಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಸೂಚನೆ ನೀಡಿದರು. ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನಬಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯಲ್ಲಿ ಅರ್ಹರಿರುವ ಫಲಾನುಭವಿಗಳ ಸಂಖ್ಯೆ, ಹಾಗೂ ಯೋಜನೆಯನ್ನು ಅವರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ವಿವರಗಳನ್ನು ಸಿದ್ದಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದ ಅವರು, ಯಾವುದೇ ಸಂದರ್ಭದಲ್ಲಿ ಅಧಿಕಾರಿಗಳು ಮೊಬೈಲ್ ನ್ನು ಸ್ವಿಚ್ ಆಫ್ ಮಾಡದೇ , ಕೇಂದ್ರಸ್ಥಾನದಲ್ಲೇ ಇದ್ದು, ಅಗತ್ಯ ಸಂದರ್ಭದಲ್ಲಿ ತಕ್ಷಣವೇ ಸಂಪರ್ಕಕ್ಕೆ ಸಿಗುವಂತಿರಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಾಗ ಅನಗತ್ಯ ವಿಳಂಬ ಹಾಗೂ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಿದೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರಿಗೆ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ತಿಳಿಸಿದರು. ಪ್ರಸ್ತುತ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ, ಪ್ರಾಕೃತಿಕ ವಿಕೋಪ ಎದುರಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಿದ್ದತೆಗಳು, ಸಮುದ್ರ ಕೊರೆತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಸಚಿವರು, ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಾಗೂ ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಶೀಘ್ರದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ನಿರ್ಮಾಣ ಕಾರ್ಯ ಕೈಗೊಳ್ಳುವಂತೆ , ಗಂಟುರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ಹಾಗೂ ಮಳೆಗಾಲದಲ್ಲಿ ರೈತರಿಗೆ ಭಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯದಂತೆ ಎಚ್ಚರವಹಿಸುವಂತೆ ಮತ್ತು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃಧ್ದಿಗೆ ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು , ಸಮನ್ವಯದಿಂದ ಜನಪರ ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಮ್ ಹಾಕೆ, ಕಾರ್ಕಳ ವಿಭಾಗದ ಡಿಎಫ್ ಓ ಗಣಪತಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ , ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು : ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ತಾತ್ಕಾಲಿಕ ಗುಡಿಯ ಸಾನ್ನಿಧ್ಯ ಚಾಲನಾ ಸಮಾರಂಭ

Posted On: 12-06-2023 11:54AM

ಕಾಪು : ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ತಾತ್ಕಾಲಿಕ ಗುಡಿಗೆ ಸಾನ್ನಿಧ್ಯ ಚಾಲನಾ ಸಮಾರಂಭ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಇಂದು ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಜರಗಿತು.

ಜ್ಯೋತಿರ್ವಿವಿದ್ವಾನ್ ಕೆ.ಜಿ ರಾಘವೇಂದ್ರ ತಂತಿ ಕೊರಂಗ್ರಪಾಡಿ ಆಶೀರ್ವಚಿಸಿ ಜ್ಯೋತಿರ್ವಿವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶುಭಾಶಂಸನೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮುಂಬೈ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಪುಣೆ ಮಾಧವ ಶೆಟ್ಟಿ, ಮುಂಬೈ ಕೃಷ್ಣ ಪ್ಯಾಲೇಸ್ ಗ್ರೂಪ್ ನ ಕೃಷ್ಣ ಶೆಟ್ಟಿ, ವಿಶ್ವನಾಥ ಕ್ಷೇತ್ರ ಕಟಪಾಡಿ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷರಾದ ಬಿ.ಎನ್ ಶಂಕರ್ ಪೂಜಾರಿ, ಮೊಗವೀರ ಮಹಾಸಭಾ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷರಾದ ಧರ್ಮಪಾಲ ಯು ದೇವಾಡಿಗ, ಉಡುಪಿ ತಿರುಮಲ ಜುವೆಲರ್ಸ್ ನ ಗಂಗಾಧರ ಆಚಾರ್ಯ, ದಕ್ಷಿಣ ಕನ್ನಡ ಪದ್ಮಶಾಲಿ ಮಹಾಸಭಾ ಅಧ್ಯಕ್ಷರಾದ ರಾಮದಾಸ್ ಶೆಟ್ಟಿಗಾರ್, ಶ್ರೀ ಮಾಲ್ತಿದೇವಿ ದೇವಸ್ಥಾನ, ಬಬ್ಬುಸ್ವಾಮಿ ಮೂಲಕ್ಷೇತ್ರ ಕಚ್ಚೂರಿನ ಧರ್ಮದರ್ಶಿಗಳಾದ ಗೋಕುಲ್ ದಾಸ್, ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ ಮಲ್ಲಾರು, ರಾಣ್ಯಕೇರಿ ಗುರಿಕಾರರಾದ ಜಯ ರಾಣ್ಯ, ಸೂರ್ಯ ಸಾಲಿಯಾನ್ ಮುಂಬೈ, ಪ್ರಭಾಕರ ಶೆಟ್ಟಿ ಮುಂಬೈ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯಾವರ : ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ

Posted On: 11-06-2023 09:08PM

ಉದ್ಯಾವರ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ (ರಿ) ಪಿತ್ರೋಡಿ, ಉದ್ಯಾವರ ಇವರ ನೇತೃತ್ವದಲ್ಲಿ ಇತ್ತೀಚಿಗೆ ನಿಧನರಾಗಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ, ಪ್ರಖ್ಯಾತ ಟೆನ್ನಿಸ್ ಬಾಲ್ ಕ್ರಿಕೆಟಿಗ ಸಿಎ ಮಲ್ಲೇಶ್ ಬಂಗೇರ ಇವರ ಸ್ಮರಣಾರ್ಥ ಶುದ್ಧ ಕುಡಿಯುವ ನೀರಿನ ಘಟಕದ ಲೋಕಾರ್ಪಣೆ ನಡೆಯಿತು.

ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದಿವಂಗತ ಮಲ್ಲೇಶ್ ರವರ ತಾಯಿ ಬೇಬಿ ಬಂಗೇರ ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ದಿವಂಗತ ಮಲ್ಲೇಶ್ ಬಂಗೇರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಚಿಕ್ಕ ಪ್ರಾಯದಲ್ಲಿ ಮಕ್ಕಳಿಗೆ ಹಿರಿಯರು ಸಂಸ್ಕಾರದ ಬಗ್ಗೆ ಪಾಠ ಕಲಿಸಬೇಕು. ಇದರಿಂದ ಮಕ್ಕಳು ತಪ್ಪು ದಾರಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯ. ಯುವಕರು ಮಧ್ಯವ್ಯಸನಿ ಯಾಗದೆ ಸಮಾಜದ ಅಭಿವೃದ್ಧಿಯತ್ತ ಚಿತ್ತ ವಹಿಸಬೇಕು. ಯುವಕರಾಗಿದ್ದ ಮಲ್ಲೇಶ್ ಎಲ್ಲ ಯುವಕರಿಗೆ ಮಾದರಿ ಎಂದರು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ , ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ, ಸರಕಾರಿ ಪ್ರೌಢಶಾಲೆಯ ನಿಕಟ ಪೂರ್ವ ಮುಖ್ಯೋಪಾಧ್ಯಾಯನಿ ಉಮಾ ಕೃಷ್ಣ, ತಂಡದ ಗೌರವಾಧ್ಯಕ್ಷ ಗೋಪಾಲ ಅಮೀನ್, ವೆಂಕಟರಮಣ ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರಾ, ಪ್ರಮುಖರಾದ ದಿವಾಕರ ಕುಂದರ್, ನವೀನ್ ಸಾಲ್ಯಾನ್, ವಿಜಯ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಟೆನ್ನಿಸ್ ಬಾಲ್ ವೀಕ್ಷಣೆ ವಿವರಣೆಕಾರ ವಿನಯ್ ಉದ್ಯಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಉಮೇಶ್ ಕರ್ಕೆರ ವಂದಿಸಿದರು. ಇದೇ ಸಂದರ್ಭದಲ್ಲಿ ಸಮನ್ವಯ ಶಿಕ್ಷಣ ಕೇಂದ್ರ ಉಡುಪಿ ಇಲ್ಲಿಯ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.