Updated News From Kaup

ಕಾಪು : ಆಗಸ್ಟ್ 27 ರಂದು ಪೊಲಿಪುವಿನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Thumbnail
Posted On: 07 Aug 2023, 10:53 PM

ಕಾಪು : ಶತ ವಜ್ರ ಸ್ವರ್ಣ ಸಂಭ್ರಮ ಸಮಿತಿ ಪೊಲಿಪು, ಮುಂಬೈ, ಗುರ್ಮೆ ಫೌಂಡೇಶನ್, ಗುರ್ಮೆ ಕಳತ್ತೂರು ಇವರ ಆಶ್ರಯದಲ್ಲಿ, ಪೊಲಿಪು ಮೊಗವೀರ ಮಹಾಸಭೆ, ಪೊಲಿಪು, ಮುಂಬೈ, ಪೊಲಿಪು ಹಳೆ ವಿದ್ಯಾರ್ಥಿ ಸಂಘ, ಪೊಲಿಪು, ಮುಂಬೈ, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪೊಲಿಪು ಇವರ ಸಹಭಾಗಿತ್ವದೊಂದಿಗೆ ಶ್ರೀನಿವಾಸ ವೈದ್ಯಕೀಯ ಕಾಲೇಜು, ಮುಕ್ಕ, ಸುರತ್ಕಲ್, ಮಂಗಳೂರು ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಗಸ್ಟ್ 27, ಆದಿತ್ಯವಾರ ಬೆಳಗ್ಗೆ ಗಂಟೆ 9ರಿಂದ ಸ.ಹಿ.ಪ್ರಾ.ಶಾಲೆ, ಪೊಲಿಪು ಇಲ್ಲಿ ಜರಗಲಿದೆ. ಆಸುಪಾಸಿನ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 78293 58105, 95353 68155

ಎರ್ಮಾಳು : ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

Thumbnail
Posted On: 07 Aug 2023, 06:44 PM

ಎರ್ಮಾಳು : ಶ್ರೀ ಕುದ್ರೊಟ್ಟು ಬ್ರಹ್ಮ ಬೈದರ್ಕಳ ಗರಡಿಯ ಕೋಟಿ ಚೆನ್ನಯ ಯುವ ಬಳಗ ಹಾಗೂ ಬೈದಶ್ರೀ ಮಹಿಳಾ ಮಂಡಳಿಯ ಆಯೋಜನೆಯಲ್ಲಿ ಎರ್ಮಾಳು ಬಾಕ್ಯಾರು ಗದ್ದೆಯಲ್ಲಿ ಕೆಸರ್ಡ್‌ ಒಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗರು ಹಾಗೂ ಗರಡಿಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉದ್ಘಾಟಿಸಿದರು. ಗರಡಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಅಂಚನ್ ಮಾತನಾಡಿ, ಪ್ರಥಮ ಬಾರಿಗೆ ನಾವು ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಗ್ರಾಮದ ಎಲ್ಲಾ ಯುವ ಪೀಳಿಗೆಗೆ ಕೆಸರಿನ ಗದ್ದೆ ಹಾಗೂ ಕೃಷಿಯ ಬಗ್ಗೆ ತಿಳಿಸಿ ಕೊಡುವ ಉದ್ದೇಶವಾಗಿದೆ ಎಂದರು. ಕೋಟಿ ಚೆನ್ನಯ ಯುವ ಬಳಗದ ಅಧ್ಯಕ್ಷ ಕೃಷ್ಣ ಕುಮಾರ್‌ ಪೊಲ್ಯ, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಮಮತಾ ಪೂಜಾರಿ, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ವಾಲಿಬಾಲ್, ಹಗ್ಗ ಜಗ್ಗಾಟ, ಒಂದು ಕಾಲು ಓಟ, ಹುಲಿ ಕುಣಿತ ಸಹಿತ ಹತ್ತು ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. 500 ಕ್ಕೂ ಅಧಿಕ ಪುರುಷ, ಮಹಿಳೆ ಹಾಗೂ ಮಕ್ಕಳು ಭಾಗವಹಿಸಿದ್ದರು.

ಕಾಪು : ಮುಂಬೈ ಮಹಾನಗರಪಾಲಿಕೆ ಸಹ ಆಯುಕ್ತರಿಂದ ಹೊಸ ಮಾರಿಗುಡಿಗೆ ಶಿಲಾ ಸೇವೆ ಸಮರ್ಪಣೆ

Thumbnail
Posted On: 07 Aug 2023, 06:34 PM

ಕಾಪು : ಇಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮುಂಬೈ ಮಹಾನಗರಪಾಲಿಕೆ ಸಹ-ಆಯುಕ್ತರಾದ ಪಾರ್ಥ್ ಭಾಗ್ಯಶ್ರೀ ಕಪ್ಸೆ "ಕೌಸ್ತುಬ್ ಪ್ಲಾಟಿನಂ" ಬೋರಿವಿಲಿ, ಮುಂಬೈ ಆಗಮಿಸಿ 9 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಿಸಿ ದೇವಳದ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅವರು ನಾವು ಕ್ಷೇತ್ರಕ್ಕೆ ಬಂದಿರುವುದು ನಮ್ಮ ಪುಣ್ಯ. ಸೇವೆ ನೀಡುತ್ತಿರುವುದು ನಮ್ಮ ಭಾಗ್ಯ ಹಾಗಾಗಿ ಇನ್ನು ಹೆಚ್ಚಿನ ಶಿಲಾಸೇವೆಯನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.

ಕಳತ್ತೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಜೀರ್ಣೋದ್ಧಾರ ಪೂರ್ವಭಾವಿ ಸಭೆ

Thumbnail
Posted On: 06 Aug 2023, 04:06 PM

ಕಾಪು : ಕಳತ್ತೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ಜೀರ್ಣೋದ್ಧಾರದ ಕುರಿತು ರವಿವಾರ ಪೂರ್ವಭಾವಿ ಸಭೆ ಜರಗಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಕಳತ್ತೂರು ಶ್ರೀ ಬ್ರಹ್ಮಬೈದರ್ಕಳ ಗರೋಡಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು, ಹಿರಿಯರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದರು.

ಕಾಪು : ಬಡವರ ಹಿತದೃಷ್ಟಿಯ ಕಾನೂನು ನಾವು ಆರಿಸಿ ಕಳಿಸಿದ ಪ್ರಜಾ ಪ್ರತಿನಿಧಿಗಳ ಪ್ರಯತ್ನದಿಂದ ಆಗಬೇಕಿದೆ - ಕೆ. ಮಹಾಂತೇಶ

Thumbnail
Posted On: 06 Aug 2023, 03:01 PM

ಕಾಪು : ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದಿಂದ 19ನೇ ವಾರ್ಷಿಕ ಮಹಾಸಭೆ ಕಾಪುವಿನ K1 ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಜರಗಿತು. ಕಾರ್ಯಕ್ರಮನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ 45 ಲಕ್ಷ ಮಂದಿ ನೋಂದಾಯಿತರಾಗಿದ್ದಾರೆ. ಆದರೆ ನಿಜವಾದ ನಿರ್ಮಾಣ ವಲಯದ ಕಾರ್ಮಿಕರ ನೋಂದಾಯಿತವಾಗಿಲ್ಲ. ಸ್ವಾತಂತ್ರ್ಯಬಂದ ಮೇಲೆ ಅಂದರೆ 1996 ರಲ್ಲಿ ಕಾರ್ಮಿಕರಿಗಾಗಿ ಕಾನೂನು ಬಂತು. 2007 ಕರ್ನಾಟಕದಲ್ಲಿ ಜಾರಿಯಾಯಿತು. ಬಡವರ ಹಿತದೃಷ್ಟಿಯ ಕಾನೂನು ಜಾರಿಯಾಗುವುದು ಬೀದಿಯಲ್ಲಿ ಮಾತನಾಡಿ ಅಲ್ಲ ನಾವು ಆರಿಸಿ ಕಳಿಸಿದ ಪ್ರಜಾ ಪ್ರತಿನಿಧಿಗಳ ಪ್ರಯತ್ನದಿಂದಾಗಬೇಕಾಗಿದೆ. ಅವರು ಕಾರ್ಮಿಕರ ಪರ ಮಾತನಾಡಬೇಕಾಗಿದೆ. ಕೇಂದ್ರ ಸರಕಾರ ಕಾರ್ಮಿಕರ ಬಗೆಗಿನ ಕೆಲವು ಯೋಜನೆಗಳನ್ನು ರದ್ದು ಮಾಡಲೆತ್ನಿಸಿದೆ. ಸರಕಾರಗಳು ಶ್ರೀಮಂತರ ಪರವಾಗಿದೆ. ಬಡವರಿಗೆ ತೊಂದರೆಯಾಗಿದೆ. ಎಲ್ಲಾ ಕಾರ್ಮಿಕರ ಸಂಘಗಳ ಸಂಘಟಿತ ಪ್ರಯತ್ನದಿಂದ ಕಾನೂನನ್ನು ರದ್ದು ಮಾಡಲು ಬಿಡಲಿಲ್ಲ. ಕಟ್ಟಡ ಕಾರ್ಮಿಕರ ಬಗೆಗೆ ಚರ್ಚೆ ಉಡುಪಿ ದಕ್ಷಿಣಕನ್ನಡದಲ್ಲಿ ಆಗುತ್ತಿಲ್ಲ. ಬದಲಾಗಿಲ್ಲ ವಿಡಿಯೋ, ಹಿಜಾಬ್ ಇತ್ಯಾದಿಗಳ ಬಗ್ಗೆ ಆಗುತ್ತಿದೆ. ದುಡಿಯೋ ಜನರು ಜಾತಿ ಧರ್ಮದ ಹೆಸರಿನಲ್ಲಿ ಇರಬಾರದು. ಇಲ್ಲಿ ಎಲ್ಲರೂ ಒಂದೇ. ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಶೇಖರ ಬಂಗೇರ ವಹಿಸಿದ್ದರು. ಈ ಸಂದರ್ಭ ಸಿ.ಐ.ಟಿ.ಯು. ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾ| ಸುರೇಶ ಕಲ್ಲಾಗರ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಖಜಾಂಜಿ ಕಾ| ರೊನಾಲ್ಡ್ ರಾಜೇಶ್, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷರಾದ ದಯಾನಂದ ಕೋಟ್ಯಾನ್, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಗಣೇಶ ನಾಯಕ್, ಕಾಪು ಘಟಕದ ಅಧ್ಯಕ್ಷ ರಾಮ ಸಾಲ್ಯಾನ್, ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್, ಸಾಲಿಗ್ರಾಮ ಶಶಿಕಲ, ಶಶಿಧರ್, ಮತ್ತಿತರರು ಉಪಸ್ಥಿತರಿದ್ದರು. ಸಭೆಗೂ ಮುನ್ನ ಜನತೆಯ ಸೌಹಾರ್ದತೆ - ಕಟ್ಟಡ ಕಾರ್ಮಿಕರ ಒಗ್ಗಟ್ಟಿಗಾಗಿ, ಕಲ್ಯಾಣ ಮಂಡಳಿ ಬಲ ಪಡಿಸಲು ಒತ್ತಾಯಿಸಿ ಸಿ ಐ ಟಿ ಯು ಬೆಂಬಲದೊಂದಿಗೆ ಕಾಪು ಸರಕಾರಿ ಆಸ್ಪತ್ರೆಯ ಬಳಿಯಿಂದ K1 ಹೋಟೆಲ್ ವರೆಗೆ ಮೆರವಣಿಗೆ ನಡೆಯಿತು.

ಪಡುಬಿದ್ರಿ : ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಂಪನ್ನ

Thumbnail
Posted On: 06 Aug 2023, 02:42 PM

ಪಡುಬಿದ್ರಿ : ಜೆಸಿಐ ಪಡುಬಿದ್ರಿ, ಹಠಯೋಗ ಶಿಕ್ಷಣ ಸಮಿತಿ ಪಡುಬಿದ್ರಿ, ಶ್ರೀ ಸುಬ್ರಹ್ಮಣ್ಯ ಯುವಕ ಯುವತಿ ವೃಂದ, ಪಾದೆಬೆಟ್ಟು, ರೋಟರಿ ಕ್ಲಬ್ ಪಡುಬಿದ್ರಿ, ಪಡುಬಿದ್ರಿ ವಲಯದ ಎಲ್ಲಾ ಕ್ರಿಕೆಟ್ ತಂಡಗಳು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಪಡುಬಿದ್ರಿ ಘಟಸಮಿತಿ, ಉಡುಪಿ ಬೆಳ್ಮಣ್ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ರವಿವಾರ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಪಡುಬಿದ್ರಿ ದುರ್ಗಾ ಕ್ಲಿನಿಕ್ ವೈದ್ಯೆ ಡಾ| ಪಯಸ್ವಿನಿ ಶೆಟ್ಟಿಗಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಜೆಸಿಐ ಅಧ್ಯಕ್ಷರಾದ ಯಶೋದ ವಹಿಸಿದ್ದರು. ಕಾರ್ಯಕ್ರಮಲ್ಲಿ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ, ಪಾದಬೆಟ್ಟು, ಕೆ.ಪಿ.ಎಸ್ ಪಡುಬಿದ್ರಿ ಮುಖ್ಯ ಶಿಕ್ಷಕ ಕೃಷ್ಣಯ್ಯ, ಶ್ರೀ ಸುಬ್ರಹ್ಮಣ್ಯ ಯುವಕ ಯುವತಿ ವೃಂದ ಪಾದೆಬೆಟ್ಟು ಅಧ್ಯಕ್ಷರಾದ ಪ್ರಕಾಶ್ ‌ಶೆಟ್ಟಿ ಪಾದೆಬೆಟ್ಟು, ಶ್ರೀ ಸುಬ್ರಹ್ಮಣ್ಯ ಯುವತಿ ವೃಂದ ಪಾದೆಬೆಟ್ಟು ಅಧ್ಯಕ್ಷೆ ಗೀತಾ ಪ್ರಭಾಕರ್, ಹಠಯೋಗ ಶಿಕ್ಷಣ ಸಮಿತಿ ಪಡುಬಿದ್ರಿ ಅಧ್ಯಕ್ಷ ಡಾ| ಮನೋಜ್ ಶೆಟ್ಟಿ, ರೋಟರಿ ಕ್ಲಬ್, ಪಡುಬಿದ್ರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಉಡುಪಿ ಜಿಲ್ಲಾ ಟೆನ್ನಿಸ್‌ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಗೌರವಾಧ್ಯಕ್ಷ ಶರತ್ ಶೆಟ್ಟಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಡುಬಿದ್ರಿ ಅಧ್ಯಕ್ಷೆ ಪುಷ್ಪಲತಾ ಗಂಗಾಧರ್, ಜೆಸಿಐ ರಾಷ್ಟ್ರೀಯ ಆಡಳಿತ ಸದಸ್ಯ ವೈ ಸುಕುಮಾರ್, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮತ್ತಿತರರು ಉಪಸ್ಥಿತರಿದ್ದರು. ಪಡುಬಿದ್ರಿ ಜೆಸಿಐ ಅಧ್ಯಕ್ಷರಾದ ಯಶೋದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ವಂದಿಸಿದರು. ರಕ್ತದಾನ ಶಿಬಿರದಲ್ಲಿ 56 ಮಂದಿ ರಕ್ತದಾನ ಮಾಡಿದರು.

ಶಿರ್ವ : ಕುತ್ಯಾರು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

Thumbnail
Posted On: 06 Aug 2023, 09:17 AM

ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ .ನಿ, ಶಿರ್ವ ಹಾಗೂ ಸಹಕಾರ ಭಾರತಿ ಕಾಪು ತಾಲೂಕು ಸಹಯೋಗದಲ್ಲಿ ಕುತ್ಯಾರು ವಿದ್ಯಾದಾಯಿನಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜರಗಿತು. ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಕೇ೦ಜ ಶ್ರೀಧರ ತಂತ್ರಿ ಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಹಕಾರ ಭಾರತಿ ಕಾಪು ತಾಲೂಕು ಪ್ರಮುಖರಾದ ಶಶಿಧರ ವಾಗ್ಲೆ ಬೆಳ್ಳೆಯವರು ಸಸಿ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಹಕಾರಿ ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವಾರಿಜಾ ಆರ್.ಕಲ್ಮಾಡಿ ಹಾಗೂ ಮುಖ್ಯ ಶಿಕ್ಷಕಿ ಶರ್ಮಿಳಾ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಅವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಅಶೋಕ್ ರಾವ್, ನಾರಾಯಣ ನಾಯಕ್, ವಿಲಿಯಂ ಬ್ಯಾಪ್ಟಿಸ್ಟ್ ಮಚಾದೋ, ವಿಜಯ ಪೂಜಾರಿ ಮತ್ತು ಹರಿಣಾಕ್ಷ ಶೆಟ್ಟಿ ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮಾವಿನ ಸಸಿಗಳನ್ನು ವಿತರಿಸಲಾಯಿತು.

ಮಟ್ಟಾರು : ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣ ಮತ್ತು ಎಳ್ಳುಗಂಟು ದೀಪ ಪ್ರಜ್ವಲನಾ ಕಾರ್ಯಕ್ರಮ

Thumbnail
Posted On: 05 Aug 2023, 10:15 PM

ಮಟ್ಟಾರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಭೂಮಿ ಪೂಜನಾ ದಿವಸದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಪಠಣ ಮತ್ತು ಎಳ್ಳುಗಂಟು ದೀಪ ಪ್ರಜ್ವಲನೆ ಕಾರ್ಯಕ್ರಮ ನಡೆಯಿತು. ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಮಧ್ವರಾಜ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉಧ್ಘಾಟಿಸಿದರು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಅಧ್ಯಕ್ಷ ಜಗದೀಶ ಆಚಾರ್ಯ, ಬಜರಂಗದಳ ಸಂಚಾಲಕ ಸುರೇಶ ಆಚಾರ್ಯ, ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್, ದುರ್ಗಾವಾಹಿನಿ ಸಂಚಾಲಕಿ ಶ್ವೇತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ದೀಪ ಪ್ರಜ್ವಲನೆ ಮತ್ತು ಶ್ರೀರಾಮ ತಾರಕ ಮಂತ್ರ ಪಠಣ ನಡೆಯಿತು.

ಕಟಪಾಡಿ : ಎಸ್.ವಿ.ಎಸ್ ಹೈಸ್ಕೂಲ್ ಹಳೆವಿದ್ಯಾರ್ಥಿ ಸಂಘದಿಂದ 70,000 ರೂ. ಮೌಲ್ಯದ ಸಮವಸ್ತ್ರ, ಶಾಲಾ ಶುಲ್ಕ ಕೊಡುಗೆ

Thumbnail
Posted On: 05 Aug 2023, 04:55 PM

ಕಟಪಾಡಿ : ಎಸ್.ವಿ.ಎಸ್ ಹೈಸ್ಕೂಲ್ ಕಟಪಾಡಿಯ ಹಳೆವಿದ್ಯಾರ್ಥಿ ಸಂಘದ ಅಮೃತ ಮಹೋತ್ಸವದ ಪ್ರಯುಕ್ತ ಎಸ್.ವಿ.ಎಸ್ ಹೈಸ್ಕೂಲ್ ನ ವಿದ್ಯಾರ್ಥಿಗಳಿಗೆ ಸುಮಾರು 70000 ರೂ. ಮೌಲ್ಯದ ಸಮವಸ್ತ್ರ ಹಾಗೂ ಶಾಲಾ ಶುಲ್ಕವನ್ನು ಸಂಘದ ಅಧ್ಯಕ್ಷರಾದ ಪ್ರೇಮ್ ಕುಮಾರ್ ಮುಂದಾಳುತ್ವದಲ್ಲಿ ಎಸ್.ವಿ.ಎಸ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೀಡಲಾಯಿತು. ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಆಡಳಿತಮಂಡಳಿಯ ಸತ್ಯೇಂದ್ರ ಪೈ, ನಿತ್ಯಾನಂದ ಶೆಣೈ, ವೆಂಕಟರಮಣ ಭಟ್,ಗಣೇಶ್ ಕಿಣಿ, ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ಉಪಾಧ್ಯಾಯರು, ಹಳೆ ವಿದ್ಯಾರ್ಥಿಗಳಾದ ಪಂಚಾಯತ್ ಉಪಾಧ್ಯಕ್ಷರಾದ ಪ್ರಭಾ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ರಾವ್, ಖಜಾಂಚಿ ಮಹೇಶ್ ಅಂಚನ್, ಜಯಶ್ರೀ, ಶಶಿಕಲಾ, ಪ್ರದೀಪ್, ಸತೀಶ್ ಕುಮಾರ್ ಕೇದಾರ್ ಸುಕುಮಾರ್, ಸಂತೋಷ್.ಎನ್.ಎಸ್ ಕಟಪಾಡಿ, ಬಿ. ಬಿ. ಸಾಫುರಾ ಉದ್ಯಾವರ ಉಪಸ್ಥಿತರಿದ್ದರು.

ಪಡುಬಿದ್ರಿ : ಶಾಲಾ ವಿವಿಧ ಸಂಘಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ವಿಕಸನಕ್ಕೆ ಉತ್ತಮ ವೇದಿಕೆ - ಬಿ.ಪುಂಡಲೀಕ ಮರಾಠೆ

Thumbnail
Posted On: 04 Aug 2023, 07:47 PM

ಪಡುಬಿದ್ರಿ : ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟ ಶಕ್ತಿಯನ್ನು ಲೋಕಮುಖಕ್ಕೆ ತೋರಿಸಲು ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಬೇಕಾದದ್ದು ಶಿಕ್ಷಣ ಸಂಸ್ಥೆಗಳ ಕರ್ತವ್ಯವೇ ಆಗಿದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ವಿಕಾಸದ ಆಶಯದೊಂದಿಗೆ ಪಡುಬಿದ್ರಿ ಗಣಪತಿ ಪ್ರೌಢ ಶಾಲೆ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ವಿದ್ಯಾರ್ಥಿಗಳು ಸಾಹಿತ್ಯ, ಸಂಗೀತ, ಕ್ರೀಡೆ, ಚಿತ್ರಕಲೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭಾ ಸಂಪನ್ನರಾಗಿ ಜೀವನವನ್ನು ಸಾರ್ಥಕಗೊಳಿಸಿ ಯಶಸ್ಸಿನ ಪಥದಲ್ಲಿ ಸಾಗಬೇಕು. ಶಾಲಾ ವಿವಿಧ ಸಂಘಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದರು. ಅವರು ಶುಕ್ರವಾರ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಮತ್ತು ಶ್ರೀಬ್ರಹ್ಮ ವಿದ್ಯಾಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಪಡುಬಿದ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಶಾಲಾ ಪಠ್ಯಪೂರಕ ಚಟುವಟಿಕೆಗಳ ವಿವಿಧ ಸಂಘಟನೆಗಳನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಶ್ರೀಶ ಬಾಯರಿ, ಚಂದ್ರಕಾಂತ್, ವಸಂತಿ, ನಮಿತಾ, ಭಾರತಿ, ಸಂಗೀತಾ, ಸ್ವಾತಿ, ದೀಪಕ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಅನುರಾಧಾ ಪಿ.ಎಸ್.ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕರಾದ ಡಾ.ರಾಘವೇಂದ್ರ ರಾವ್ ಆಶಯನುಡಿಯಲ್ಲಿ ಶಾಲೆಯಲ್ಲಿ ಪ್ರಾರಂಭಿಸಲಾಗುತ್ತಿರುವ ವಿವಿಧ ಸಂಘಗಳು ಮತ್ತು ಹಿನ್ನೆಲೆಯನ್ನು ವಿವರಿಸಿದರು. "ನನ್ನ ಶಾಲೆಯ ಸ್ವಚ್ಛತೆ ನನ್ನ ಕರ್ತವ್ಯ" ಹಿನ್ನೆಲೆಯಲ್ಲಿ ಏರ್ಪಡಿಸಿದ ಚಟುವಟಿಕಾ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಚಿತ್ರಕಲಾ ಶಿಕ್ಷಕ ನರೇಂದ್ರ ಎಚ್.ಎನ್ ಗೌರವಾರ್ಪಣೆ ಮಾಡಿದರು. ವಿಜ್ಞಾನ ಶಿಕ್ಷಕಿ ಅಕ್ಷತಾ ಎಸ್.ನಿರೂಪಿಸಿದರು. ಅನ್ವಿತಾ, ಭೂಮಿಕಾ ಪ್ರಾರ್ಥಿಸಿದರು. ಶಿಕ್ಷಕಿ ಅನಿತಾ ಆಚಾರ್ಯ ವಂದಿಸಿದರು.