Updated News From Kaup

ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಕಲಾವಿದ ನಲ್ಕ ಜಗದೀಶ ನಿಧನ

Posted On: 07-04-2023 03:36PM

ಮುಲ್ಕಿ : ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಹಿರಿಯ ಕಲಾವಿದ ನಲ್ಕ ಜಗದೀಶ ( 56 ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಮಾರು 21 ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಲಾವಿದನಾಗಿ ದುಡಿದಿರುವ ಇವರು ಭಗವತಿ ಮೇಳದ ಪ್ರಸಿದ್ಧ ಪ್ರಸಂಗ ಭಗವತಿ ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರನ ಪಾತ್ರ, ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರ ನಿರ್ವಹಿಸಿದ್ದರು.

ಕಾಸರಗೋಡು ತಾಲೂಕಿನ ನಲ್ಕದಲ್ಲಿ ಜನಿಸಿದ ಇವರು ಸಣ್ಣ ಪ್ರಾಯದಲ್ಲಿಯೇ ಯಕ್ಷಗಾನದ ಕಡೆಗೆ ಆಕರ್ಷಿತರಾಗಿದ್ದರು. ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು ಮತ್ತು ಗಂಡು ಮಗುವನ್ನು ಅಗಲಿದ್ದಾರೆ.

ನಲ್ಕ ಜಗದೀಶರವರ ಅಕಾಲಿಕ ನಿಧನಕ್ಕೆ ಶ್ರೀ ಭಗವತೀ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಪ್ರಮುಖರು, ಮೇಳದ ಸಂಚಾಲಕರು, ಸಹಕಲಾವಿದರು, ಯಕ್ಷಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 11 ರಂದು ವಿದ್ಯುತ್ ವ್ಯತ್ಯಯ

Posted On: 07-04-2023 12:05PM

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಎಪ್ರಿಲ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

33/11 ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ತಲ್ಲೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಹಾಗೂ 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಎಂ.ಯು.ಎಸ್.ಎಸ್ ನಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಮಾರ್ಗಗಳಾದ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಶಿರ್ವ, ಮಟ್ಠಾರು, ಪದವು, ಪಾಂಬೂರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು, ಬಡಾ ಮೂಳೂರು, ಬೆಳಪು, ಮಲ್ಲಾರು, ಅಬ್ಬೆಟ್ಟು, ಪಾದೂರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಚೇರ್ಕಾಡಿ, ಉಪ್ಪೂರು, ಹೊನ್ನಾಳ, ಕೊಳಲಗಿರಿ ಫೀಡರ್ ಮಾರ್ಗ ಹಾಗೂ 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಶಾಂತಿವನ ಫೀಡರ್ ಮಾರ್ಗ ಮತ್ತು 110/11 ಕೆ.ವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಮಂದಾರ್ತಿ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ.ರೋಡ್, ಕೋಟೆರೋಡ್, ನಿಡಂಬಳ್ಳಿ, ಕಲ್ಯಾಣಪುರ, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೇಲ್ಬೆಟ್ಟು, ಜಾತಾಬೆಟ್ಟು, ಹಾವಂಜೆ, ಮಂದಾರ್ತಿ, ಕಾಡೂರು, ತಂತ್ರಾಡಿ, ಹೆಗ್ಗುಂಜೆ, ಕಾಡೂರು, ನಡೂರು, ಹೆಬ್ಬಾಡಿ, ಗೋಪಾಲಪುರ, ಶಾಂತಿವನ, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಪ್ರಿಲ್ 11 : ಮಿನಿ ಉದ್ಯೋಗ ಮೇಳ

Posted On: 07-04-2023 11:51AM

ಉಡುಪಿ : ಯುಕ್ತ ಕೌಶಲ್ಯ ತರಬೇತಿ ಕೇಂದ್ರ, ಪ್ರಕಾಶ್ ರಿಟೇಲ್, ಎಸ್.ಬಿ.ಐ ಲೈಫ್ ಇನ್ಶೂರೆನ್ಸ್, ಏಂಜೆಲ್ ಬ್ರೋಕಿಂಗ್ ಪ್ರೈ.ಲಿ. ಮತ್ತು ಮೆಡ್ ಪ್ಲಸ್ ಕಂಪನಿಗಳ ವತಿಯಿಂದ ಎಪ್ರಿಲ್ 11 ರಂದು ಬೆಳಗ್ಗೆ 10.30 ಕ್ಕೆ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ. ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ : ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

Posted On: 07-04-2023 11:45AM

ಉಡುಪಿ : ಇಲ್ಲಿನ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಎಪ್ರಿಲ್ 12 ರಂದು ಬೈಂದೂರು ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಕಾರ್ಯಕ್ರಮ ನಡೆಸಲಿದ್ದಾರೆ.

ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ದೂ.ಸಂಖ್ಯೆ: 0820-2536661 ಅಥವಾ ಅರ್ಜಿದಾರರು ನಮೂನೆ 1 ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ ಸಹ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ : ನಿಯಮ ಉಲ್ಲಂಘಿಸುವ ಪ್ರಿಂಟಿಂಗ್ ಪ್ರೆಸ್ ಗಳ ವಿರುದ್ದ ಕಠಿಣ ಕ್ರಮ - ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 06-04-2023 11:42AM

ಉಡುಪಿ : ಪ್ರಸ್ತುತ ವಿಧಾನಸಭಾ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಸೂಚಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿ, ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮುದ್ರಿಸಿದಲ್ಲಿ ಅಂತಹ ಮುದ್ರಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರಪತ್ರ, ಫಲಕ ಪೋಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಯಾವುದೇ ಧರ್ಮ, ಜಾತಿ, ಭಾಷೆ, ಜನರ ಭಾವನೆಗೆ ಧಕ್ಕೆಯಾಗುವಂತಹ ವಿಷಯಗಳನ್ನು ಮುದ್ರಿಸಬಾರದು ಎಂದು ತಿಳಿಸಿದರು. ಮುದ್ರಕರು ಪಾಂಪ್ಲೇಟಗಳು ಮತ್ತು ಪೋಸ್ಟರಗಳನ್ನು ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ದೃಢೀಕರಣ ಪಡೆದಿರಲೇಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ತಾವು ಮುದ್ರಿಸುವ ಒಂದು ಪ್ರತಿಯನ್ನು, ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ (ಆರ್‌ಓ) ಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು. ಮುದ್ರಣ ಕುರಿತ ಸೂಕ್ತ ಬಿಲ್ ಗಳನ್ನು ಇಟ್ಟುಕೊಂಡಿರಬೇಕು, ಮುದ್ರಣ ವೆಚ್ಚವನ್ನು ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಖರ್ಚು ವೆಚ್ಚಗಳಿಗೆ ಸೇರ್ಪಡೆ ಮಾಡುವುದರಿಂದ, ಅಗತ್ಯವಿದ್ದಲ್ಲಿ ಅವುಗಳನ್ನು ಹಾಜರುಪಡಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತರಬೇತಿ ನಿರತ ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಯತೀಶ್, ಉಪಸ್ಥಿತರಿದ್ದರು. ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ , ಮುದ್ರಣ ಮತ್ತು ಪ್ರಿಂಟಿಂಗ್ ಚುನಾವಣಾ ಆಯೋಗವು ಸೂಚಿಸಿರುವ ಮಾನದಂಡಗಳ ಕುರಿತಂತೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಪ್ರಿಂಟಿಂಗ್ ಪ್ರೆಸ್ ಗಳ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಉಡುಪಿ : ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಲ್ಲಿ ಶಿಸ್ತು ಕ್ರಮ ಜಾರಿ

Posted On: 05-04-2023 07:32PM

ಉಡುಪಿ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣೆ ಮತ್ತು ಪ್ರಚಾರ ಕಾರ್ಯಗಳಲ್ಲಿ ರಾಜಕೀಯ ಪಕ್ಷದವರು ಚುನಾವಣೆ ರ್ಯಾಲಿಯಲ್ಲಿ, ಕರಪತ್ರ ಹಂಚುವಿಕೆ ಕೆಲಸದಲ್ಲಿ, ಪ್ರಚಾರ ಕಾರ್ಯಗಳಲ್ಲಿ ಮತ್ತು ಇತರೆ ಕೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಈ ಆದೇಶಕ್ಕೆ ವ್ಯತಿರಿಕ್ತವಾಗಿ ಮಕ್ಕಳನ್ನು ಬಳಸಿಕೊಂಡಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತ್ಯಜಿತ್ ಸುರತ್ಕಲ್ ಗೆ ಪೊಲೀಸ್ ಭದ್ರತಾ ಸಿಬ್ಬಂದಿ ನಿಯೋಜಿಸಿ : ಉಡುಪಿ ಜಿಲ್ಲಾ ಶ್ರೀ ನಾರಾಯಣ ಗುರು ವಿಚಾರವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ

Posted On: 05-04-2023 12:08PM

ಉಡುಪಿ : ಶ್ರೀ ನಾರಾಯಣ ಗುರು ವಿಚಾರವೇದಿಕೆ ಕರ್ನಾಟಕ ಇದರ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರಿಗೆ ಕಳೆದ 16 ವರ್ಷ ಗಳಿಂದ ನೀಡಲಾಗಿದ್ದ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದಿರುವ ವಿಚಾರವಾಗಿ ಅವರಿಗೆ ಹಿಂಪಡೆದ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಮತ್ತೆ ನಿಯೋಜಿಸಬೇಕಾಗಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಮಾನ್ಯ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಕೋಟೆ, ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ರಾಜು ಪೂಜಾರಿ ಉಪ್ಪೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಪಳ್ಳಿ, ಉಡುಪಿ ತಾಲೂಕು ಅಧ್ಯಕ್ಷರಾದ ಶಶಿಧರ್ ಅಮೀನ್,, ಕಾರ್ಕಳ ತಾಲೂಕು ಅಧ್ಯಕ್ಷರಾದ ಗಂಗಾಧರ ಪಣಿಯೂರು, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಕರುಣಾಕರ ಪೂಜಾರಿ ಹಂದಾಡಿ, ಬನ್ನಂಜೆ ಬಿಲ್ಲವರ ಸಂಘದ ಅಧ್ಯಕ್ಷರಾದ ಮಾಧವ ಬನ್ನಂಜೆ, ಜಿಲ್ಲಾ ಉಪಾಧ್ಯಕ್ಷರಾದ ಕಾಮರಾಜ್ ಜಿ, ಜಿಲ್ಲಾ ಕೋಶಾಧಿಕಾರಿ ಆದ ವೀರೇಶ್ ಸುವರ್ಣ, ವಿನಯ್ ಪಡುಕೆರೆ, ಸತೀಶ್ ಬಂಗೇರ, ಜಿಲ್ಲಾ ಜೊತೆ ಕಾರ್ಯದರ್ಶಿಯಾದ ರಿತೇಶ್ ಕೋಟ್ಯಾನ್, ಲೋಕೇಶ್ ಪೂಜಾರಿ ಹೆರ್ಗ, ಸಂತೋಷ ಪೂಜಾರಿ ಹೆರ್ಗ, ಅರವಿಂದ ಕೋಟ್ಯಾನ್, ಕುಶಾಲ್ ಜತ್ತನ್, ಅಶೋಕ್ ಅಮೀನ್, ಸತೀಶ್ ಬಂಗೇರ ಹೇರೂರು, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಪೂಜಾರಿ ಕಲ್ಯಾಣಪುರ ಉಪಸ್ಥಿತರಿದ್ದರು.

ಕಾಪು : ಕಿರು ಸೇತುವೆಯ ಕೆಳ ದಂಡೆಗೆ ಡಿಕ್ಕಿ ಹೊಡೆದ ಸ್ಕೂಟರ್ ; ಸವಾರ ಆಸ್ಪತ್ರೆಗೆ ದಾಖಲು

Posted On: 05-04-2023 10:33AM

ಕಾಪು : ತಾಲೂಕಿನ ಮಲ್ಲಾರಿನ ಯುವಕನೋರ್ವನ ಅಜಾಗರೂಕತೆಯ ಸ್ಕೂಟರ್ ಚಾಲನೆಯಿಂದ ಹೆಜಮಾಡಿ ಗ್ರಾಮದ ನರ್ಸರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಿರು ಸೇತುವೆಯ ಕೆಳ ದಂಡೆಗೆ ಡಿಕ್ಕಿ ಹೊಡೆದು, ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ತಲೆ, ಬೆನ್ನಿಗೆ ಗಂಭೀರ ಗಾಯವಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಪಡುಬಿದ್ರಿಯ ಕೇಬಲ್ ಸಂಸ್ಥೆಯಲ್ಲಿ ಟೆಕ್ನೀಷಿಯನ್ ಆಗಿ ವೃತ್ತಿ ಮಾಡುತ್ತಿದ್ದ ಶಿವಪ್ರಸಾದ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌‌‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಮನೆಗೆ ವಾಪಾಸ್ಸು ಹೋಗುತ್ತಾ ತಾನು ಚಲಾಯಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರನ್ನು ಹೆಜಮಾಡಿಯಿಂದ ಕಾಪು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಈ ಘಟನೆ ನಡೆದಿದೆ.

ಗಾಯಾಳುವನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಕ್ರಾಂತಿ ನಡೆಸಿ, ಜನರನ್ನು ಒಗ್ಗೂಡಿಸಿದ ಮಹಾನ್ ದಾರ್ಶನಿಕ - ವಿಖ್ಯಾತಾನಂದ ಸ್ವಾಮೀಜಿ

Posted On: 04-04-2023 08:53PM

ಕಾಪು : ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಸ್ತ ಹಿಂದೂ ಸಮಾಜದ ಏಳಿಗೆಗಾಗಿ ಸಾಮಾಜಿಕ ಕ್ರಾಂತಿಯನ್ನು ನಡೆಸಿ, ಜನರನ್ನು ಒಗ್ಗೂಡಿಸಿದ ಮಹಾನ್ ದಾರ್ಶನಿಕರು. ಅವರ ಹೆಸರಿನಲ್ಲಿ ಮುನ್ನಡೆಯುತ್ತಿರುವ ಸಂಘ ಸಂಸ್ಥೆಗಳು ಮತ್ತು ಗುರು ಮಂದಿರಗಳ ಮೂಲಕವಾಗಿ ಸಮಾಜದ ಯುವಜನರನ್ನು ಶೈಕ್ಷಣಿಕವಾಗಿ ಉನ್ನತ ಮಟ್ಟದವರೆಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯಬೇಕಿವೆ ಎಂದು ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು. ಅವರು ಎಪ್ರಿಲ್ 2 ರಂದು ಕಾಪು ಬಿಲ್ಲವರ ಸಹಾಯಕ ಸಂಘದ ನವೀಕೃತ ಶಿಲಾಮಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಮೂರ್ತಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀವರ್ಚನ ನೀಡಿದರು.

ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಜೆ. ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಮುಂಬಯಿ ಬಿಲ್ಲವ ಚೇಂಬರ್ಸ್ ಆಫ್ ಕಾಮರ್ಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಕಾಪು ಸಿ.ಎ. ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮುಂಬೈಯ ಉದ್ಯಮಿ ಉಮೇಶ್ ಕಾಪು, ಕಾಪು ಪುರಸಭೆ ಸದಸ್ಯೆ ಸರಿತಾ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ, ವಾಸ್ತುತಜ್ನ ತ್ರಿವಿಕ್ರಮ ಭಟ್, ಶಿಲ್ಪಿಗಳಾದ ನರಸಿಂಹ ಆಚಾರ್ಯ, ಸುಧಿರ್ ಆಚಾರ್ಯ, ಇಂಜಿನಿಯರ್ ಶಶಿಧರ್ ಸುವರ್ಣ, ವೇಣುಕೃಷ್ಣ, ರಾಘು ಪೂಜಾರಿ ಕಲ್ಮಂಜೆ ಹಾಗೂ ಇಪ್ಪತ್ತೈದು ಸಾವಿರ ಮೇಲ್ಪಟ್ಟು ಧನಸಹಾಯ ನೀಡಿದ ದಾನಿಗಳು, ಮಂದಿರದ ವಿವಿಧ ಕಾಮಗಾರಿಗಳ ವೆಚ್ಚವನ್ನು ಭರಿಸಿದ ದಾನಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಅರ್ಚಕ ಚರಣ್ ಶಾಂತಿ ಕಟಪಾಡಿ, ಮಹೇಶ್ ಶಾಂತಿ ಹೆಜಮಾಡಿ, ಗೌ. ಪ್ರ. ಕಾರ್ಯದರ್ಶಿ ವಿಠಲ ಬಿ. ಸಾಲ್ಯಾನ್, ಉಪಾಧ್ಯಕ್ಷರಾದ ಐತಪ್ಪ ಎಸ್. ಕೋಟ್ಯಾನ್, ಸಖೇಂದ್ರ ಸುವರ್ಣ, ಮಧು ಪಾಲನ್, ಕೋಶಾಽಕಾರಿ ಉದಯ ಸನಿಲ್, ಮಹಿಳಾ ಬಳಗದ ಸಂಚಾಲಕಿ ಆಶಾ ಶಂಕರ್, ದಳಪತಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು ಸ್ವಾಗತಿಸಿ, ಜತೆ ಕಾರ್ಯದರ್ಶಿ ಅನಿಲ್ ಕುಮಾರ್ ವಂದಿಸಿದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.

ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು : ಮಕ್ಕಳಿಗಾಗಿ‌ ಕಿಡ್ಸ್ ಸಮ್ಮರ್ ಕ್ಯಾಂಪ್ - 2023

Posted On: 04-04-2023 07:25PM

ಮಕ್ಕಳಿಗಾಗಿ ಬೇಸಿಗೆಯ ರಜೆಯನ್ನು ಮಜವನ್ನಾಗಿಸುವ ನಿಟ್ಟಿನಲ್ಲಿ 4 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಮನೋರಂಜನಾತ್ಮಕ ಮತ್ತು ಕ್ರಿಯಾತ್ಮಕತೆ ಜೊತೆಗೆ ಹೊರಾಂಗಣದ ಚಟುವಟಿಕೆಗಳಿಂದ ಕೂಡಿದ ಕಿಡ್ಸ್ ಸಮ್ಮರ್ ಕ್ಯಾಂಪ್ - 2023ನ್ನು ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು ಇವರು ಕಾಪುವಿನ ಜನಾರ್ಧನ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ 2 ಬ್ಯಾಚ್ ಗಳ ಮೂಲಕ ಆಯೋಜಿಸಿರುತ್ತಾರೆ.

ಏಪ್ರಿಲ್ 10 ರಿಂದ 28 ರವರೆಗೆ ಮೊದಲ ಬ್ಯಾಚ್ ಮತ್ತು ಮೇ 1 ರಿಂದ 20ರವರೆಗೆ ಎರಡನೆಯ ಬ್ಯಾಚ್ ಜರಗಲಿದೆ.

ಮಕ್ಕಳಿಗಾಗಿ ಕತೆ ಹೇಳುವುದು, ನೃತ್ಯ, ಮನೋರಂಜನಾ ಆಟಗಳು, ಕರಾಟೆ, ಯಕ್ಷಗಾನ, ಯೋಗ ಮತ್ತು ಧ್ಯಾನ, ಹೊರ ಪ್ರವಾಸ ಇತ್ಯಾದಿ ಅನೇಕ ಚಟುವಟಿಕೆಗಳು ಇರಲಿದೆ. ಕೆಲವೇ ಸೀಟುಗಳು ಬಾಕಿ ಇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971735243