Updated News From Kaup

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪಡುಬೆಳ್ಳೆ ಘಟಕ - ಗೋಗ್ರಾಸ ಸಮರ್ಪಣೆ

Posted On: 19-03-2023 02:51PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಪಡುಬೆಳ್ಳೆ ಘಟಕದ ನೇತೃತ್ವದಲ್ಲಿ ನೀಲಾವರ ಗೋಶಾಲೆಗಾಗಿ ಗೋಗ್ರಾಸ ಇಂದು ನೀಡಲಾಯಿತು.

ಈ ಪ್ರಯುಕ್ತ ಪಡುಬೆಳ್ಳೆ ದೊಡ್ಡಮನೆಯ ಗದ್ದೆಯಲ್ಲಿ ಬಿತ್ತನೆ ಮಾಡಿದ್ದ ಜೋಳದ ಬೆಳೆಯನ್ನು ಇಂದು ಕಟಾವು ಮಾಡಿ ಗೋಶಾಲೆಗೆ ಸಮರ್ಪಿಸಲಾಯಿತು.

ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ಶಿರ್ವ ಮತ್ತು ಪಾಂಗಾಳ ಘಟಕಗಳಿಂದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ

Posted On: 19-03-2023 02:45PM

ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಿರ್ವ ವಿಷ್ಣುಮೂರ್ತಿ ಘಟಕ ಮತ್ತು ಪಾಂಗಾಳ ಘಟಕ ವತಿಯಿಂದ ಸಾಮಾಜಿಕ ಕಾರ್ಯಗಳು ಇಂದು ಜರಗಿತು.

ಶಿರ್ವ ವಿಷ್ಣುಮೂರ್ತಿ ಘಟಕ ವತಿಯಿಂದ ಶಿರ್ವ ಹಿಂದೂ ರುದ್ರಭೂಮಿ ಮತ್ತು ಪಾಂಗಾಳ ಘಟಕ ವತಿಯಿಂದ ಪಾಂಗಾಳ ಗಾಂಧಿನಗರದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ ನಡೆಯಿತು.

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಷಷ್ಠಮ ವರ್ಷದ ಸನ್ನಿಧಾನದೆಡೆಗೆ ನಮ್ಮ‌ ನಡಿಗೆ ಪಾದಯಾತ್ರೆ

Posted On: 19-03-2023 02:32PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಷಷ್ಠಮ ವರ್ಷದ ಸನ್ನಿಧಾನದೆಡೆಗೆ ನಮ್ಮ‌ ನಡಿಗೆ ಪಾದಯಾತ್ರೆ ಮಟ್ಟಾರು ಬಬ್ಬರ್ಯ ಕಟ್ಟೆ ಬಳಿಯಿಂದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ ಇಂದು ನಡೆಯಿತು.

ಕಾಪು : ಓಂ ಬಬ್ಬು ಸ್ವಾಮಿ ಟ್ರೋಫಿ -2023 ; ಸಿ ಎಫ್ ಸಿ ಚಂದ್ರನಗರ ಪ್ರಥಮ, ಅರಫಾ ಬಾಯ್ಸ್ ಹೆಜಮಾಡಿ ದ್ವಿತೀಯ

Posted On: 19-03-2023 12:52PM

ಕಾಪು : ಓಂ ಶ್ರೀ ಬಬ್ಬು ಸ್ವಾಮಿ ಕ್ರಿಕೆಟರ್ಸ್ ಪಾದೂರು ಇವರ ಆಶ್ರಯದಲ್ಲಿ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಓಂ ಬಬ್ಬು ಸ್ವಾಮಿ ಟ್ರೋಫಿ -2023 ಪಂಜತ್ತೂರು ಮೈದಾನದಲ್ಲಿ ಮಾಚ್೯ 18 ಹಾಗೂ 19ರಂದು ನಡೆಯಿತು.

ಪ್ರಥಮ ಸ್ಥಾನವನ್ನು ಟ್ರೋಫಿ ಸಹಿತ ನಗದು ರೂ. 33,333ನ್ನು ಸಿ ಎಫ್ ಸಿ ಚಂದ್ರನಗರ ತಂಡ, ದ್ವಿತೀಯ ಸ್ಥಾನವನ್ನು ಟ್ರೋಫಿ ಸಹಿತ ನಗದು ರೂ.22,222ನ್ನು ಅರಫಾ ಬಾಯ್ಸ್ ಹೆಜಮಾಡಿ ತಂಡ ಪಡೆದುಕೊಂಡಿದೆ.

ಪಡುಬಿದ್ರಿ ಜಾತ್ರೆ ; ಕಾಪು ಮಾರಿಪೂಜೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅನುಮತಿ ನೀಡದಂತೆ ಹಿಂದು ಪರ ಸಂಘಟನೆಗಳಿಂದ ಮನವಿ

Posted On: 19-03-2023 09:25AM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಮಾಚ್೯ 21 ಮತ್ತು 22 ರಂದು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅನುಮತಿ ನೀಡದಂತೆ ಪಡುಬಿದ್ರಿ ವಿಶ್ವಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರು ದೇವಳದ ಕಾರ್ಯನಿರ್ವಹಣಾಧಿಕಾರಿ ಮತ್ತು ಅನುವಂಶಿಕ ಮೊಕ್ತೇಸರರಿಗೆ ಮನವಿ ನೀಡಿರುತ್ತಾರೆ.

ಕಾಪುವಿನಲ್ಲಿಯೂ ಮಾಚ್೯ 21 ಮತ್ತು 22 ರಂದು ಜರಗುವ ಮಾರಿಪೂಜೆಯಲ್ಲಿಯೂ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಕಾಪುವಿನ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಹೊಸ ಮಾರಿಗುಡಿಯ ವ್ಯವ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಕಾಪು : ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಘೋಷಣೆ - ಬಿಜೆಪಿ ಹಿಂದುಳಿದ ಮೋರ್ಚಾದ ಕುಲಾಲ ಸಮುದಾಯದ ನಾಯಕರಿಂದ ಕೃತಜ್ಞತೆ

Posted On: 19-03-2023 12:21AM

ಕಾಪು : ರಾಜ್ಯ ಕುಂಬಾರ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪನೆಯ ಘೋಷಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಸಂತೋಷ್ ಕುಲಾಲ್ ಪಡುಮನೆ, ಕಾರ್ಯದರ್ಶಿ ಉದಯ ಕುಲಾಲ್ ಕಳತ್ತೂರು, ಕಾರ್ಯಕಾರಿಣಿ ಸದಸ್ಯರು ಗಣೇಶ್ ಕುಲಾಲ್ ವರ್ವಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾರ್ಕಳ : ಇನ್ನಾದಲ್ಲಿ ಸುಸಜ್ಜಿತ ರುದ್ರಭೂಮಿ ಮೋಕ್ಷಧಾಮ ಲೋಕಾರ್ಪಣೆ

Posted On: 18-03-2023 06:01PM

ಕಾರ್ಕಳ : ಮೂಲ ಸೌಕರ್ಯಗಳನ್ನು ಒದಗಿಸುವ ನಿರಂತರ ಪ್ರಯತ್ನಗಳು ಸ್ಥಳೀಯಾಡಳಿತ ಮಾಡಿದಾಗ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಜಿ.ಪಂ ಸದಸ್ಯರಾದ ಕೆದಿಂಜೆ ಸುಪ್ರಿತ್ ಶೆಟ್ಟಿ ಹೇಳಿದರು. ಅವರು ಇಂದು‌‌ ಇನ್ನಾ ಗ್ರಾಮ ಪಂಚಾಯತ್ ಸಾರ್ವಜಿನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರು ಹಾಗೂ ಗ್ರಾ.ಪಂ ಅಧ್ಯಕ್ಷರಾದ ಕುಶ ಆರ್ ಮೂಲ್ಯ ವಹಿಸಿದ್ದರು.

ಈ ಸಂದರ್ಭ ಸರಿತಾ ಶೆಟ್ಟಿ, ಮಾಜಿ ಜಿ.ಪಂ ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ, ತಾ.ಪಂ ಉಪಾಧ್ಯಕ್ಷರಾದ ಗೋಪಾಲ ಮೂಲ್ಯ, ಗ್ರಾ.ಪಂ ಉಪಾಧ್ಯಕ್ಷರಾದ ವಿಮಲ, ಪ್ರೇಮ್ ಕುಲಾಲ್, ಪಂಚಾಯತ್ ಕಾರ್ಯದರ್ಶಿ ರಮೇಶ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತ, ಅಮರನಾಥ ಶೆಟ್ಟಿ, ಜಯ ಎಸ್ ಕೋಟ್ಯಾನ್, ಪ್ರವೀಣ್ ಜೆ ಶೆಟ್ಟಿ, ಯು ಸುಬ್ರಮಣ್ಯ ತಂತ್ರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬೆಳ್ಳಣ್ ವಲಯ ಮೇಲ್ವಿಚಾರಕಿ ಭಾರತಿ, ಗ್ರಾಮಸ್ಥರಾದ ಗಣಪತಿ, ಸುರೇಶ್ ಮೂಲ್ಯ, ಪ್ರಭಾಕರ ಇನ್ನಾ, ದೀಪಕ್ ಕಾಮತ್, ರಮೇಶ್ ಮೂಲ್ಯ, ಲಕ್ಷ್ಮೀ ಕಾಂತ್ ರಾವ್, ಸುಜಾತ ಗಿರಿಯಪ್ಪ, ಅಪ್ಪಿ ಜೆ ಕರ್ಕೇರಾ ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಸ್ವಾಗತಿಸಿದರು. ಶಿಕ್ಷಕರಾದ ರಾಜೇಂದ್ರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ಶೆಟ್ಟಿ ದಡ್ಡು ವಂದಿಸಿದರು.

ಮಾರ್ಚ್ 23ರಿಂದ 26 : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸಮಾರಂಭ ; ಅನಂತೋತ್ಸವ 2023

Posted On: 18-03-2023 05:29PM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2023ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾರ್ಚ್ 23 ರಿಂದ 26ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಆಶಯದಂತೆ ಮಾ.17 ನಿಧನರಾದ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಪ್ರಾಧ್ಯಾಪಕ, ಕಾರ್ಯಕ್ರಮಗಳ ರೂವಾರಿ ಅನಂತೇಶ್‌ ರಾವ್‌ ಅವರ ನೆನಪಿಗಾಗಿ ವರ್ಣೋತ್ಸವ 2023ರ ಬದಲಾಗಿ ಅನಂತೋತ್ಸವ 2023 ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಮಾರ್ಚ್ 23ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೆ ಅನಂತೋತ್ಸವ 2023 ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ರಾಹುಲ್ ಕೋಟ್ಯಾನ್ ಮತ್ತು ನಿಖಿಲ್ ಆಚಾರ್ಯ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಜಗದೀಶ್ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿರುವುದು. ಅದೇ ದಿನ ಸಂಜೆ ಮನೋಂರಜನಾ ಕಾರ್ಯಕ್ರಮವು ನಡೆಯಲಿದೆ. ಮಾರ್ಚ್ 24ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪಯೋಕಾಯುಕ್ತ, ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ಭಾಗವಹಿಸಲಿದ್ದು, ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಮಾರ್ಚ್ 25ರಂದು ಬೆಳಗ್ಗೆ 9.30ರಿಂದ ಆಟೋ ಎಕ್ಸ್‌ಪೋ ವಾಹನ ಪ್ರದರ್ಶನ ನಡೆಯಲಿದೆ. ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ “ಮಹಿಷವಧೆ” ಹಾಗೂ “ಸಮಸಪ್ತಕರ ಕಾಳಗ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ 26 ಕಾಲೇಜು ಘಟಿಕೋತ್ಸವ ಕಾರ್ಯಕ್ರಮವು ನಡೆಯಲಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ವಿದ್ಯಾಶಂಕರ್ ಮುಖ್ಯ ಅತಿಥಿಗಳಾಗಿ, ಮಂಗಳೂರಿನ ಯುನಿಕೋರ್ಟ್ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಶೆಣೈ ಭಾಗವಹಿಸಲಿದ್ದಾರೆ. ಸಂಜೆ ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಸಂಜೆ 7ಗಂಟೆಗೆ ದೇಶದ ಪ್ರತಿಷ್ಟಿತ ಮ್ಯುಸಿಕಲ್ ಬ್ಯಾಂಡ್ ಸಂಸ್ಥೆಯಾದ “ಅಗಮ್' ತಂಡದವರಿಂದ ಸಂಗೀತ ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ. ಶೈಕ್ಷಣಿಕ ವರ್ಷ 2023 ರಿಂದ ಎಂಬಿಎ ಕೋರ್ಸ್ ನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಮಂಜುನಾಥ್, ಡಾ.ರವಿ ಪ್ರಭ, ಸಚಿನ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ಫಲಕ ಅಳವಡಿಸಲು ಅನುಮತಿ ಪಡೆಯಬೇಕು - ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 18-03-2023 02:14PM

ಉಡುಪಿ : ಜಿಲ್ಲೆಯ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯ ಸಭೆ ಸಮಾರಂಭಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಯಾವುದೇ ಪ್ರಚಾರ ಫಲಕಗಳು ಭಿತ್ತಿಪತ್ರಗಳು ಕರಪತ್ರಗಳು ಧ್ವನಿವರ್ಧಕಗಳ ಬಳಕೆ ಸೇರಿದಂತೆ ಮತ್ತಿತರ ಪ್ರಚಾರ ಕೈಗೊಳ್ಳುವ ಮುನ್ನ ನಿಗದಿತ ಪ್ರಾಧಿಕಾರದಿಂದ ಕಾನೂನುನಡಿಯಲ್ಲಿ ಅವಶ್ಯವಿರುವ ಅನುಮತಿ ಪತ್ರವನ್ನು ಪಡೆದು ಕಾರ್ಯಗತಗೊಳಿಸಬೇಕು. ಒಂದೊಮ್ಮೆ ಉಲ್ಲಂಘಿಸಿ ನಡೆದುಕೊಂಡಲ್ಲಿ ಅಂತಹವರ ವಿರುದ್ದ ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಯಾವುದೇ ರೀತಿಯ ಪ್ರಚಾರ ಫಲಕಗಳು ಸೇರಿದಂತೆ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಅನುಮತಿ ಪಡೆದು ಬಳಸಿದ್ದಲ್ಲಿ, ಅನುಮತಿಯ ಕಾಲಾವಧಿ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದ ಅವರು ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸಲು ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ ಎಂದರು.

ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ನೊಂದಾವಣಿ ಆಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು , ಹೆಸರು ಬಿಟ್ಟು ಹೋದಲ್ಲಿ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬೇಕು, ಮುಂದಿನ ವಾರದಲ್ಲಿ ಬಿ.ಎಲ್.ಓ ಗಳು ಹಾಗೂ ಚುನಾವಣಾ ಏಜೆಂಟರುಗಳ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಪ್ರತಿ ಮತದಾನದ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ವೀಕ್ಷಿಸಿ ಒಂದೊಮ್ಮೆ ಯಾವುದೇ ಸೌಕರ್ಯಗಳ ಕೊರತೆಯಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದ ಅವರು ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ , ಅಪರ ಜಿಲ್ಲಾಧಿಕಾರಿ ವೀಣಾ, ತಾಲೂಕು ಚುನಾವಣಾ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಂಟಕಲ್ಲು : ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ - ಸಂತಾಪ ಸೂಚಕ ಸಭೆ

Posted On: 18-03-2023 12:20PM

ಬಂಟಕಲ್ಲು : ಹೊನ್ನಾವರದಲ್ಲಿ ಶುಕ್ರವಾರ ರಸ್ತೆ ಅಪಘಾತದಿಂದ ಸಾವನ್ನಪ್ಪಿದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್ ರಿಗೆ ಸಂತಾಪ ಸೂಚಕ ಸಭೆ ಶನಿವಾರ ಜರಗಿತು.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮೆಕ್ಯಾನಿಕಲ್ ವಿಭಾಗದಲ್ಲಿ ಉತ್ತಮ ಪ್ರಾಧ್ಯಾಪಕನಾಗಿ ಸಂಸ್ಥೆಯ ಬಗೆಗಿನ ಅಪಾರ ಪ್ರೀತಿ ಮತ್ತು ಮಕ್ಕಳ ಬಗ್ಗೆ ಕಾಳಜಿ ಹೊಂದಿರತಕ್ಕಂತಹ ಅನಂತೇಶರ ಅಗಲುವಿಕೆ ಸಂಸ್ಥೆಗೆ, ಮಕ್ಕಳಿಗೆ ನೋವನ್ನುಂಟು ಮಾಡಿದೆ. ಅವರನ್ನು ಕಳೆದು ಕೊಂಡಂತಹ ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಹೇಳಿದರು.

ಈ ಸಂದರ್ಭ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ, ಉಪಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ, ಸಿಬ್ಬಂದಿ ವೃಂದ ಮತ್ತಿತರರು ಉಪಸ್ಥಿತರಿದ್ದರು.