Updated News From Kaup
ಕಾಪು : ಪಡುಕುತ್ಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ ಆಷಾಢ ಮಾಸದ ಆಚರಣೆ
Posted On: 12 Aug 2023, 05:12 PM
ಕಾಪು : ಶ್ರೀ ದುರ್ಗಾ ಮಹಿಳಾ ಮಂಡಳಿ ಪಡುಕುತ್ಯಾರು ಮತ್ತು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಇದರ ವತಿಯಿಂದ ಆಷಾಢ ಮಾಸದ ಆಚರಣೆಯು ಶ್ರೀ ದುರ್ಗಾ ದೇವಿ ಮಂದಿರದಲ್ಲಿ ಆಗಸ್ಟ್ 6ರಂದು ಜರಗಿತು. ಆಷಾಢ ಮಾಸದ ಆಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಹಿಳಾ ಮಂಡಳಿ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಆಚಾರ್ಯರವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ತುಳುನಾಡಿನ ಸಂಸ್ಕೃತಿಯಂತೆ ವಿವಿಧ ಖಾದ್ಯಗಳಲ್ಲಿ ಔಷಧೀಯ ಗುಣಗಳು ಹೊಂದಿದ್ದು ಆರೋಗ್ಯಕ್ಕೆ ಒಳ್ಳೆಯದು, ಮಕ್ಕಳು ಈ ವಿಚಾರವನ್ನು ತಿಳಿದುಕೊಂಡು ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ ಎoದು ತಿಳಿಸಿದರು. ಜ್ಯೋತಿ ಪಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಷಾಢ ಮಾಸದ ಆಚರಣೆಯ ಪ್ರಾಮುಖ್ಯತೆಯನ್ನು ಬಗ್ಗೆ ಹಲವಾರು ಸದಸ್ಯರು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ತಿಳಿಸಿದರು. ಸಭೆಯಲ್ಲಿ ಕೂಡುವಳಿಕೆಯ ಎಲ್ಲಾ ಸದಸ್ಯರು, ಸಂಘದ ಪದಾಧಿಕಾರಿಗಳು ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 30 ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ವೇದಿಕೆಯಲ್ಲಿ ಪಡುಕುತ್ಯಾರು ಗ್ರಾಮ ಮೋಕ್ತೇಸರರು, ಸಂಘದ ಗೌರವ ಸಲಹೆಗಾರರಾದ ಪ್ರಕಾಶ ಆಚಾರ್ಯ, ಶ್ರೀ ವಿಶ್ವಕರ್ಮಸಮಾಜ ಸೇವಾ ಸಂಘದ ಅಧ್ಯಕ್ಷರಾದ ನಾಗೇಶ್ ಆರ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಕಾಪು ಜಯರಾಮ ಆಚಾರ್ಯ, ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ಚಂದ್ರಕಲ ಎನ್ ಆಚಾರ್ಯ, ಕಾರ್ಯದರ್ಶಿ ಸುನೀತಾ ಎಸ್ ಆಚಾರ್ಯ, ಹಿರಿಯ ಮಹಿಳಾ ಸದಸ್ಯರಾದ ಶಾರದಾ ಎಸ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ, ಶಕುಂತಲಾ ಜಿ ಆಚಾರ್ಯ ಉಪಸ್ಥಿತರಿದ್ದರು. ಸುನಿತಾ ಎಸ್ ಆಚಾರ್ಯರವರ ಸ್ವಾಗತಿಸಿದರು. ಶ್ರೀಲತಾ ಪಿ ಆಚಾರ್ಯ ವಂದಿಸಿದರು. ಸೌಮ್ಯ ಡಿ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬೆಳಪು ವ್ಯವಸಾಯ ಸಹಕಾರಿ ಸಂಘ : ವಜ್ರ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ, ಸಹಕಾರಿ ಮಹಲ್ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 12 Aug 2023, 04:54 PM
ಬೆಳಪು : ಇಲ್ಲಿನ ವ್ಯವಸಾಯ ಸಹಕಾರಿ ಸಂಘ ಪಣಿಯೂರು ಸ್ವತಂತ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘವಾಗಿದೆ. ಬಡಾ, ಎಲ್ಲೂರು, ಬೆಳಪು ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ಧೇಶ ಹೊಂದಿ ಸ್ಥಾಪಿತವಾದ ಸಂಸ್ಥೆ ಇದಾಗಿದೆ. ಸಹಕಾರಿ ಸಂಘವು 4,350 ಸದಸ್ಯರನ್ನು ಹೊಂದಿದ್ದು, 50 ಕೋಟಿ ಠೇವಣಾತಿ ಹೊಂದಿ, 48 ಕೋಟಿ ರೂಪಾಯಿ ಸಾಲವನ್ನು ನೀಡಿದೆ. ಎ ಶ್ರೇಣಿಯ ಬ್ಯಾಂಕಿಂಗ್ ಮಾನ್ಯತೆ ಹೊಂದಿದ ಸಹಕಾರಿ ಸಂಘವಾಗಿದೆ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘ ಪಣಿಯೂರು ಇದರ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಪಣಿಯೂರು ಸಹಕಾರಿ ಸಂಘದ ಸಭಾಂಗಣದಲ್ಲಿ ಮಾಹಿತಿ ನೀಡಿದರು. ಅವರು ಸೆಪ್ಟೆಂಬರ್ 2, ಶನಿವಾರದಂದು ಬಡಾ ಗ್ರಾಮ ಉಚ್ಚಿಲ ಶಾಖೆಯ ಸಹಕಾರಿ ಮಹಲ್ ನಲ್ಲಿ ಜರಗಲಿರುವ ವಜ್ರ ಮಹೋತ್ಸವ ಸಂಭ್ರಮಾಚರಣೆ, ನವೀಕೃತ ಶಾಖೆ ಹಾಗೂ ಸಹಕಾರಿ ಮಹಲ್ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಜ್ರ ಮಹೋತ್ಸವ ಸವಿ ನೆನಪಿನ ಕಟ್ಟಡ ಸಹಕಾರಿ ಮಹಲ್, ಡಾ| ಎಂ ಎನ್ ರಾಜೇಂದ್ರ ಕುಮಾರ್ ಕಾನ್ಪರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ - ಭದ್ರತಾ ಕೊಠಡಿ ಉದ್ಘಾಟನೆ, ಸಂಸ್ಥೆಯ ಆರಂಭದಿಂದ ಇಂದಿನವರೆಗಿನ ಮಾಹಿತಿಯನ್ನೊಳಗೊಂಡ ವಜ್ರದರ್ಪಣ ಸ್ಮರಣ ಸಂಚಿಕೆ ಬಿಡುಗಡೆಯು ನಡೆಯಲಿದೆ ಎಂದರು. ಈ ಸಂದರ್ಭ ನಿರ್ದೇಶಕರುಗಳಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್ ಭಟ್, ಬಾಲಕೃಷ್ಣ ಎಸ್ ಆಚಾರ್ಯ, ಶೋಭಾ ಬಿ ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ.ಕ.ಜಿ.ಕೇ.ಸ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ ಉಚ್ಚಿಲ ಶಾಖಾ ಪ್ರಬಂಧಕ ನವೀನ್ ಕುಮಾರ್, ಸತೀಶ್ ಗುಡ್ಡೆಚ್ಚಿ ಉಪಸ್ಥಿತರಿದ್ದರು.
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ
Posted On: 11 Aug 2023, 06:40 PM
ಕಾರ್ಕಳ : ಕಂಪೆನಿ ಸೆಕ್ರೆಟರಿ ಸಂಸ್ಥೆಗಳಿಗೆ ನಡೆದ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಮಂಜುನಾಥ ಭಟ್, ಶ್ರೀಯಾ ಕೆ ಎಸ್, ಶ್ರಾವ್ಯ ಭಟ್ ಎಸ್, ಪ್ರಣೀತಾ, ಧನುಷ್ ಡಿ ಡಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಅನುಭವಿ ಉಪನ್ಯಾಸಕರ ತಂಡದೊಂದಿಗೆ ಕಾರ್ಯ ಪ್ರವೃತ್ತವಾಗಿರುವ ಸಂಸ್ಥೆ ತನ್ನ ಮೊದಲ ದಿನಗಳಿಂದಲೂ ವಾಣಿಜ್ಯ ವಿಭಾಗದಲ್ಲಿ ಸಿ.ಎ, ಸಿ.ಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ವಿಶೇಷ ತರಗತಿ ಮತ್ತು ತರಬೇತಿ ನೀಡುತ್ತಾ ಬಂದಿದ್ದು ಅತ್ಯುತ್ತಮ ಫಲಿತಾಂಶವೂ ದಾಖಲಾಗಿರುವುದನ್ನು ಸ್ಮರಿಸಬಹುದಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಸಂಯೋಜಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಪಡುಬಿದ್ರಿ : ತ್ಯಾಜ್ಯ ಸಮಸ್ಯೆ - ಪಡುಬಿದ್ರಿ ಗ್ರಾಪಂ ಎದುರು ಕಾಂಗ್ರೆಸ್ ಪ್ರತಿಭಟನೆ
Posted On: 11 Aug 2023, 06:33 PM
ಪಡುಬಿದ್ರಿ: ಕಾಂಗ್ರೆಸ್ ಸ್ಥಾನೀಯ ಸಮಿತಿಯು ತನ್ನ ಸ್ಥಳೀಯ ನಾಯಕರು, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರ ಬೆಂಬಲದೊಂದಿಗೆ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸುವಂತೆ, ಮುಂದೆ ಎಂದೂ ಗ್ರಾ. ಪಂ. ಆವರಣದಲ್ಲಿ ತ್ಯಾಜ್ಯಗಳ ರಾಶಿಯನ್ನು ಪರಿಸರ ಮಾಲಿನ್ಯವಾಗುವ ರೀತಿಯಲ್ಲಿ ಪೇರಿಸಿಡಕೂಡದೆಂಬಂತೆ ಪ್ರತಿಭಟನೆಯನ್ನು ಶುಕ್ರವಾರದಂದು ಹಮ್ಮಿಕೊಂಡಿತ್ತು. ಪಡುಬಿದ್ರಿ ಗ್ರಾ. ಪಂ. ಆವರಣದಲ್ಲಿನ ತ್ಯಾಜ್ಯ ಮುಕ್ತಿಗಾಗಿ ಕಾಂಗ್ರೆಸ್ ಪ್ರತಿಭಟನೆಯ ಕಾವನ್ನರಿತ ಬಿಜೆಪಿ ಬೆಂಬಲಿತ ಪಡುಬಿದ್ರಿ ಗ್ರಾ. ಪಂ. ಆಡಳಿತವು ಬೆಳ್ಳಂಬೆಳಿಗ್ಗಿನಿಂದಲೇ ಪಂಚಾಯತ್ ಎದುರಿನ ತ್ಯಾಜ್ಯಗಳನ್ನು ತೆರವುಗೊಳಿಸಲು ಮುಂದಾಯಿತು. ಆಗ ಕಾಂಗ್ರೆಸ್ ನಾಯಕರೂ ಪ್ರತಿಭಟನೆಯನ್ನು ಸೌಮ್ಯಗೊಳಿಸಿ ಮುಂದೆ ಪಡುಬಿದ್ರಿಯ ನಾಗರಿಕರಿಗೆ ಅನ್ಯಾಯವಾಗುವಂತೆ ಕಸದ ರಾಶಿಯನ್ನು ಪಂಚಾಯತ್ ಮುಂದೆ ಹಾಕಕೂಡದು. ಆದರೂ ಅದೇ ಚಾಳಿಯನ್ನು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್‌ಗೆ ಬೀಗ ಜಡಿದು ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ಮನವಿಯೊಂದನ್ನು ಸ್ಥಳಕ್ಕಾಗಮಿಸಿದ ಕಾಪು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹಾಗೂ ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಅವರಿಗೆ ಸಲ್ಲಿಸಿದರು. ಪಡುಬಿದ್ರಿ ಗ್ರಾ. ಪಂ. ತನ್ನ ತ್ಯಾಜ್ಯ ವಿಲೇವಾರಿಗಾಗಿ 15ಲಕ್ಷ ರೂ. ಅಂದಾಜು ಮೌಲ್ಯದ ಸ್ಕ್ರಬ್ಬರ್ ಯಂತ್ರವನ್ನು ಶೀಘ್ರವೇ ಅಳವಡಿಸಿಕೊಳ್ಳಲಿದೆ ಎಂದೂ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಕಾಂಗ್ರೆಸ್ ಧುರೀಣರಿಗೆ ಆಶ್ವಾಸನೆಯನ್ನಿತ್ತರು. ಪಡುಬಿದ್ರಿ ಗ್ರಾ. ಪಂ. ಧರಣಿಯ ವೇಳೆ ಕೆಪಿಸಿಸಿ ಆರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಡಿಸಿಸಿ ಉಪಾಧ್ಯಕ್ಷ ವೈ. ಸುಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೀಝ್ ಹುಸೈನ್, ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ, ಕಾಂಗ್ರೆಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಮಹಿಳಾ ಘಟಕಾಧ್ಯಕ್ಷೆ ಸುಚರಿತಾ ಅಮೀನ್, ನವೀನ್ ಎನ್. ಶೆಟ್ಟಿ, ಮಾಜಿ ಗ್ರಾ. ಪಂ. ಅಧ್ಯಕ್ಷೆ ಸಂಜೀವಿ ಪೂಜಾರ್ತಿ, ಗ್ರಾ. ಪಂ. ಸದಸ್ಯರು, ಗ್ರಾಮಸ್ಥರು ಜತೆಗಿದ್ದರು.
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ
Posted On: 09 Aug 2023, 09:40 PM
ಕುತ್ಯಾರು : ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಮಾತೃ ವಂದನಾ ಕಾರ್ಯಕ್ರಮ ಸಂಪನ್ನಗೊಂಡಿತು. ಮಾತೃ ವಂದನಾ ಕಾರ್ಯಕ್ರಮವನ್ನು ಪುರೋಹಿತರಾದ ಮೌನೇಶ್ ಶರ್ಮ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ, ವಿಧಾನಗಳಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ಕುಮಾರ್ ಬೆಳ್ಳೂರು ವಹಿಸಿದ್ದರು. ಮಾತೃ ವಂದನಾ ಕಾರ್ಯಕ್ರಮದ ಮಹತ್ವವನ್ನು ಲೋಲಾಕ್ಷರವರು ಸಮರ್ಪಕವಾಗಿ ತಿಳಿಸಿದರು. ಶಾಲಾ ತ್ರೈಮಾಸಿಕ ಚೊಚ್ಚಲ ಪತ್ರಿಕೆ ಚೈತನ್ಯವಾಣಿಯನ್ನು ಬಿಡುಗಡೆ ಗೊಳಿಸಲಾಯಿತು. ತ್ರೈಮಾಸಿಕ ಪತ್ರಿಕೆಯ ಮಹತ್ವವನ್ನು ರಮ್ಯಾ ತಿಳಿಸಿದರು. ಸಂಸ್ಥೆಯ ಗೌರವಾಧ್ಯಕ್ಷರಾದ ಶಂಭುದಾಸ್ ಗುರೂಜಿ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಕೋಶಾಧಿಕಾರಿ ಸೂರ್ಯ ಕುಮಾರ್, ಕಾರ್ಯದರ್ಶಿಯಾದ ಗುರುರಾಜ್ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ದಿವಾಕರ್ ಆಚಾರ್ಯ, ಮಾತೃ ಮಂಡಳಿಯ ಅಧ್ಯಕ್ಷರಾದ ಲತಾ ಸಂತೋಷ್ ಮತ್ತು ಪದಾಧಿಕಾರಿಗಳು, ಶಿಕ್ಷಕರು, ಮಾತೆಯರು, ವಿದ್ಯಾರ್ಥಿಗಳು, ಹಾಗೂ ಪೋಷಕರು ಭಾಗಿಯಾಗಿದ್ದರು. ಪ್ರಾಂಶುಪಾಲೆ ಸಂಗೀತಾ ಸ್ವಾಗತಿಸಿದರು. ಸುಧೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಂಜುನಾಥ ಶೇಟ್ ವಂದಿಸಿದರು.
ಆಗಸ್ಟ್ 11 : ಕಾಪುವಿನ ರಾಣ್ಯಕೇರಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
Posted On: 09 Aug 2023, 09:34 PM
ಕಾಪು : ಇಲ್ಲಿನ ರಾಣ್ಯಕೇರಿ ಅಂಗನವಾಡಿ ಹತ್ತಿರ ಮಾರಿಗುಡಿ ಹಾಲ್ ನಲ್ಲಿ ಆಗಸ್ಟ್ 11, ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ (ಬಿಪಿ, ಶುಗರ್, ಮೂತ್ರ, ಪ್ರೊಟೀನ್ ಮತ್ತು ಕಿಡ್ನಿ ಪರೀಕ್ಷೆ) ಜರಗಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಗೌರವ ಸಲಹೆಗಾರರಾಗಿ ಫಾರೂಕ್ ಚಂದ್ರನಗರ ಆಯ್ಕೆ
Posted On: 09 Aug 2023, 10:45 AM
ಕಾಪು : ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಇದರ ಗೌರವ ಸಲಹೆಗಾರರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪುವಿನ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರಕ್ಕೆ 15 ಲಕ್ಷ ರೂ ದೇಣಿಗೆ
Posted On: 08 Aug 2023, 10:23 PM
ಕಾಪು : ಪ್ರಥಮ ಹಂತದಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಗಲಕೋಟೆಯ ಇಳ್ಕಲ್ ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 15 ಲಕ್ಷ ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ಡಿ ಶಿವಾನಂದ ಪ್ರಭುರವರಿಗೆ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಮತ್ತು ಸಮಗ್ರ ಜೀರ್ಣೋದ್ಧಾರದ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಗಂಗಾಧರ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಧವ ಆರ್. ಪಾಲನ್, ಮನೋಹರ ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ್ ಅಮೀನ್, ರವೀಂದ್ರ ಎಂ, ಬಾಬು ಮಲ್ಲಾರ್, ಕಾಪು ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಯೋಜನಾಧಿಕಾರಿ ಜಯಂತಿ, ಕಾಪು ವಲಯದ ಮೇಲ್ವಿಚಾರಕರಾದ ಸರಿತಾ, ಸಿದ್ದಿದಾತ್ರಿ ತಂಡದ ಸಂಚಾಲಕರಾದ ಜಗದೀಶ್ ಮೆಂಡನ್ ಮತ್ತು ಪ್ರಬಂಧಕರಾದ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.
ಕಾರ್ಕಳ : ಸಿ ಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
Posted On: 08 Aug 2023, 05:05 PM
ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್ ಪೈ, ಹೆಗ್ಡೆ ಅನಿರುದ್ಧ್ ರಮೇಶ್, ಅಭಿಷೇಕ್ ಪಿ ಎಸ್, ವಿಂದ್ಯಾ ವಿನಯ್ ಹೆಗಡೆ, ಎಸ್ ಅನುರಾಜ್ ಇವರು ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ ಎ ಇಂಟರ್ ಮೀಡಿಯೆಟ್ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್ ಕೆ 261 ಅಂಕ, ಸುಮಾ 250 ಅಂಕ, ಸುಚಿತಾ ಬಿ ಸಿ 223 ಅಂಕ, ಅನಘಾ 219 ಅಂಕ, ಬಿ ಸಿದ್ದಾರ್ಥ್ ಪೈ 214 ಅಂಕ, ಹೆಗ್ಡೆ ಅನಿರುದ್ಧ್ ರಮೇಶ್ 210 ಅಂಕ, ಅಭಿಷೇಕ್ ಪಿ ಎಸ್ 209 ಅಂಕ, ವಿಂದ್ಯಾ ವಿನಯ್ ಹೆಗಡೆ 203 ಅಂಕ, , ಎಸ್ ಅನುರಾಜ್ 200 ಅಂಕವನ್ನು ಗಳಿಸುವ ಮೂಲಕ ಅಮೋಘ ಸಾಧನೆಗೈದಿದ್ದಾರೆ. ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿಯನ್ನೂ ಅತ್ಯಂತ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಸಂಸ್ಥೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಎಲ್ಲ ಉಪನ್ಯಾಸಕರು, ಸಂಯೋಜಕರು ಅಭಿನಂದಿಸಿದ್ದಾರೆ.
ಉಚ್ಚಿಲ : ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಕೂಟ
Posted On: 08 Aug 2023, 04:56 PM
ಉಚ್ಚಿಲ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಉಡುಪಿ ಮತ್ತು ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಮಂಗಳವಾರ ಪಡುಬಿದ್ರಿ ವೃತ್ತ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಕೂಟ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಜರಗಿತು. ಕ್ರೀಡಾಕೂಟವನ್ನು ಕಾಪು ಪುರಸಭಾ ಸದಸ್ಯ ಕಿರಣ್ ಆಳ್ವ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋತರೂ, ಗೆದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿಬೇಕು. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ, ಎಲ್ಲರೂ ಕ್ರೀಡಾ ಮನೋಭಾವರಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದರು. ವೇದಿಕೆಯಲ್ಲಿ ಮಹಾಲಕ್ಷ್ಮಿ ಶಾಲಾ ಸಂಚಾಲಕ ಗಂಗಾಧರ್ ಕರ್ಕೆರ ಹೊಸ ಬೆಟ್ಟು, ದಕ್ಷಿಣ ಕನ್ನಡ ಮೊಗವೀರ ಹಿತ ಸಾಧನಾ ವೇದಿಕೆಯ ಅಧ್ಯಕ್ಷ ಸರ್ವೋತ್ತಮ್ ಕುಂದರ್, ಯುವ ಜನ ಕ್ರೀಡಾಧಿಕಾರಿ ರೀತೇಶ್ ಶೆಟ್ಟಿ ಸೂಡ, ಬಡಾ ಗ್ರಾಮ ಪಂಚಾಯತ್ ಸದಸ್ಯೆ ವೆರೋನಿಕ ಬರ್ಬೋಜಾ, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷೆ ಪೂರ್ಣಿಮಾ ಕರ್ಕೇರಾ, ಮೊಗವೀರ ಹಿತ ಸಾಧನ ವೇದಿಕೆಯ ಕಾರ್ಯದರ್ಶಿ ಸುಧಾಕರ್ ಕರ್ಕೇರ, ಕೋಶಾಧಿಕಾರಿ ವೇದವ್ಯಾಸ ಬಂಗೇರ, ಮಾಜಿ ಸಂಚಾಲಕ ಎನ್ ಡಿ ಬಂಗೇರ, ಸುಜಿತ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯನಿ ಶಾಂತ ಶೆಟ್ಟಿಗಾರ್, ಶಾಲಾ ಮುಖ್ಯೋಪಾಧ್ಯಾಯ ಜೋಸೆಫ್ ಪೀಟರ್ ನಜ್ರೆತ್ ಮತ್ತಿತರರು ಉಪಸ್ಥಿತರಿದ್ದರು.
