Updated News From Kaup
ಕಾಪು : 80 ಬಡಗಬೆಟ್ಟು ಗ್ರಾಮ ಪಂಚಾಯತ್ ಗೆ ಶಾಸಕರ ಭೇಟಿ ; ವಿವಿಧ ಸವಲತ್ತು ವಿತರಣೆ ; ಅಹವಾಲು ಸ್ವೀಕಾರ
Posted On: 27 Jul 2023, 05:23 PM
ಕಾಪು : ಕ್ಷೇತ್ರದ ಶಾಸಕಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಜುಲೈ27ರಂದು 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದರು. ಶಾಸಕರು ಪಂಚಾಯತ್ ನ ಶೇ.25 ನಿಧಿಯಿಂದ ಮಂಜೂರಾದ ಮನೆ ರಿಪೇರಿಯ ಸಹಾಯಧನ ಹಾಗೂ ವೈದ್ಯಕೀಯ ಸಹಾಯಧನ ವಿತರಿಸಿ ಶೇ. 5 ನಿಧಿಯಿಂದ ಮಂಜೂರಾದ ವೈದ್ಯಕೀಯ ಸಹಾಯಧನ ವಿತರಣೆ ಮಾಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ 80 ಬಡಗಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು. ಈ ಸಂದರ್ಭ 80 ಬಡಗಬೆಟ್ಟು ಅಧ್ಯಕ್ಷರಾದ ಮಾಧವಿ ಆಚಾರ್ಯ, ಉಪಾಧ್ಯಕ್ಷರಾದ ನಿರೂಪಮಾ ಹೆಗ್ಡೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯರಾದ ಉಪೇಂದ್ರ ನಾಯಕ್, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಾರಾಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರ ಸುಭಾಸ್ ರೆಡ್ಡಿ, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್, ಗ್ರಾಮ ಆಡಳಿತಾಧಿಕಾರಿ ಗುರುರಾಜ್ ಹಾಗೂ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆ ; ಶೇ. 25 ಡಿವಿಡೆಂಡ್ ಘೋಷಣೆ
Posted On: 27 Jul 2023, 05:12 PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ 2022-23 ನೇ ವಾರ್ಷಿಕ ಮಹಾಸಭೆಯು ಜುಲೈ 26 ರಂದು ವೈ ಲಕ್ಷ್ಮಣ್ ಸಭಾಂಗಣ ಸಹಕಾರ ಸಂಗಮ, ಪ್ರಧಾನ ಕಚೇರಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇಲ್ಲಿ ಜರಗಿತು. ಸೊಸೈಟಿಯು 2022-23 ನೇ ಸಾಲಿನಲ್ಲಿ ಸಾಧಿಸಿರುವ ವಾರ್ಷಿಕ ವಹಿವಾಟಿನ ಬಗ್ಗೆ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ತಿಳಿಸಿದರು. ಈ ಸಂದರ್ಭ ಶೇ. 25 ಡಿವಿಡೆಂಡ್ ಅನ್ನು ಘೋಷಿಸಿದರು. ಸೊಸೈಟಿಯು 96.03% ಸಾಲ ವಸೂಲಾತಿಯೊಂದಿಗೆ ಸಮಗ್ರ ಅಭಿವೃದ್ಧಿಗಾಗಿ ಉಡುಪಿ ವಲಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 100 % ಸಾಲ ವಸೂಲಾತಿಯನ್ನು ಸಾಧಿಸುವಲ್ಲಿ ಸದಸ್ಯರ ಸಹಕಾರವನ್ನು ಕೋರಲಾಯಿತು. 2022-23 ನೇ ಸಾಲಿನಲ್ಲಿ ನಡೆಸಿರುವ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ವಿವರ ನೀಡಿದರು. ಸಹಕಾರ ಸಪ್ತಾಹದ ಅಂಗವಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟ 4 ಶವಗಳನ್ನು ಇಡುವ ಶೀತಲೀಕೃತ ಶವಗಾರ, ಪಡುಬಿದ್ರಿ ಆರಕ್ಷಕರ ಠಾಣೆಗೆ ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣಾ ಬೂತ್ ನೀಡಿರುವ ಬಗ್ಗೆ ತಿಳಿಸಿದರು. ಸುಮಾರು 1.5 ಎಕ್ರೆಗಿಂತ ಹೆಚ್ಚಿನ ಜಾಗದಲ್ಲಿ ಭತ್ತದ ಕೃಷಿ ಮಾಡುತ್ತಿರುವ 180 ಕ್ಕೂ ಹೆಚ್ಚು ರೈತರಿಗೆ ರೂ. 3000/- ದಂತೆ ಕೃಷಿ ಸಹಾಯಧನ ವಿತರಿಸಿರುವ ಬಗ್ಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ತೋಟಗಾರಿಕೆ ಕೃಷಿಯನ್ನು ನಿರ್ವಹಿಸುತ್ತಿರುವವರಿಗೂ ಕೂಡ ವಿಶೇಷ ಯೋಜನೆಯನ್ನು ರೂಪಿಸುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಸಾಯನಿಕ ಗೊಬ್ಬರ ಖರೀದಿಸುವ ರೈತ ಸದಸ್ಯರಿಗೆ 15% ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದರು. ಪಲಿಮಾರು ಹಾಗೂ ಹೆಜಮಾಡಿ ಶಾಖಾ ನವೀಕರಣ ಮಾಡುತ್ತಿದ್ದು, 5, 6 ತಿಂಗಳುಗಳಲ್ಲಿ ಕಾಮಗಾರಿಯು ಮುಗಿಯಲಿದ್ದು ಹವಾನಿಯಂತ್ರಿತ ಸುಸಜ್ಜಿತ ಹವಾನಿಯಂತ್ರಿತ ಶಾಖೆಯನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಸೊಸೈಟಿಯು ಲಾಭದಾಯಕ ಕೃಷಿಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಿದ್ದು, ಈ ಮಾಹಿತಿಯಿಂದ ಕೃಷಿಯಲ್ಲಿ ಉತ್ತಮ ಸಾಧನೆಯನ್ನು ಪಡೆಯುವ 5 ಮಂದಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಆಸಕ್ತರು ಹೆಸರು ನೋಂದಾಯಿಸಬೇಕಾಗಿ ವಿನಂತಿಸಿದರು. ಸೊಸೈಟಿಯು ನೀಡುತ್ತಿರುವ ವಿವಿಧ ಸೇವೆಗಳ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪಡುಬಿದ್ರಿಯ ಸಿಟಿ ಶಾಖೆಯಲ್ಲಿ ಕೃಷಿ ಉಪಕರಣದೊಂದಿಗೆ ಕೃಷಿ ಬಳಕೆಗೆ ಅಗತ್ಯವಿರುವ ಪೈಪ್ ಹಾಗೂ ಫಿಟ್ಟಿಂಗ್ಸ್ ಗಳನ್ನು ಕೂಡ ಮಾರಾಟ ಮಾಡಲಾಗುತ್ತಿದ್ದು, ಇದರೊಂದಿಗೆ ಚಿನ್ನಾಭರಣ ಶುದ್ಧತಾ ಪರಿಶೀಲನಾ ಸೇವೆಯನ್ನು ಕೂಡ ಸಿಟಿ ಶಾಖೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು. ಪಲಿಮಾರಿನಲ್ಲಿ ಹಾಗೂ ಹೆಜಮಾಡಿಯಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಕೃಷಿ ಉಪಕರಣ ಮಾರಾಟ ಮಳಿಗೆಯನ್ನು ಪ್ರಾರಂಭಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕರಾದ ರಸೂಲ್ ವೈ. ಜಿ, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ ಪಿ.ಬಿ, ರಾಜಾರಾಮ್ ರಾವ್, ಮಾಧವ ಆಚಾರ್ಯ, ಸ್ಟೇನಿ ಕ್ವಾಡ್ರಸ್, ಸುಚರಿತ ಎಲ್. ಅಮೀನ್, ಕುಸುಮ ಎಂ. ಕರ್ಕೇರ, ಕಾಂಚನ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣರಾವ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಷ್ಮಿತ ಪಿ. ಹೆಚ್ ಉಪಸ್ಥಿತರಿದ್ದರು. ಸೊಸೈಟಿಯ ನಿರ್ದೇಶಕಿ ಸುಚರಿತಾ ಎಲ್ ಅಮೀನ್ ಪ್ರಾರ್ಥಿಸಿದರು. ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ನಿರ್ದೇಶಕ ಗಿರಿಶ್ ಪಲಿಮಾರು ವಂದಿಸಿದರು.
ಜುಲೈ 28 : ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ। ಜಯಂತ್ ಪಡುಬಿದ್ರಿ ಸಂಸ್ಮರಣೆ – ದತ್ತಿನಿಧಿ ವಿತರಣೆ ಕಾರ್ಯಕ್ರಮ
Posted On: 27 Jul 2023, 01:04 PM
ಕಾಪು : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ। ಜಯಂತ್ ಪಡುಬಿದ್ರಿ ಸಂಸ್ಮರಣೆ – ದತ್ತಿನಿಧಿ ವಿತರಣೆ ಕಾರ್ಯಕ್ರಮ ಜುಲೈ 28, ಶುಕ್ರವಾರ ಬೆಳಿಗ್ಗೆ ಗಂಟೆ 11.30 ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು, ಪಲಿಮಾರು ಇಲ್ಲಿ ಜರಗಲಿದೆ. ದತ್ತಿನಿಧಿ ವಿತರಣೆ, ದತ್ತಿ ಉಪನ್ಯಾಸವನ್ನು ಜಾನಪದ ಚಿಂತಕರಾದ ಡಾ| ವೈ.ಎನ್. ಶೆಟ್ಟಿ, ಉಪನ್ಯಾಸವನ್ನು ಹಿರಿಯ ಪತ್ರಕರ್ತರಾದ ಪುಂಡಲೀಕ ಮರಾಠೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಹೆಜ್ಮಾಡಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಕುತ್ಯಾರು ಕೇಂಜ ಶ್ರೀ ಬ್ರಹ್ಮ ಬೈದೆರುಗಳ ಗರಡಿ - ಆಟಿ ತಿಂಗಳ ಅಗೆಲು ಸೇವೆ ಸಂಪನ್ನ
Posted On: 26 Jul 2023, 11:38 PM
ಕಾಪು : ತಾಲೂಕಿನ ಎಲ್ಲೂರು ಸೀಮೆಯ ಇತಿಹಾಸ ಪ್ರಸಿದ್ಧ ಕುತ್ಯಾರು ಕೇಂಜ ಗರಡಿಯ ದಿವ್ಯ ಸಾನಿಧ್ಯದಲ್ಲಿ ವರ್ಷಂಪ್ರತಿ ಜರಗುವ ಆಟಿ ತಿಂಗಳ ಅನ್ನ ನೈವೇದ್ಯದ ಅಗೆಲು ಸೇವೆ ಬುಧವಾರ ಸಂಪನ್ನಗೊಂಡಿತು. ತುಳುನಾಡಿನ ಗರಡಿಗಳಲ್ಲಿ ಎಲ್ಲೂರು ಸೀಮೆಯ ಕೇಂಜ, ಎಲ್ಲೂರು, ಪಣಿಯೂರು, ಕಳತ್ತೂರು, ಅಡ್ವೆ, ಕೊಳಚೂರು ಗರಡಿಗಳಲ್ಲಿ ಆಟಿ ತಿಂಗಳಲ್ಲಿ ಅಗೆಲು ಸೇವೆ ನಡೆಯುತ್ತದೆ. ಮೊದಲ ಅಗೆಲು ಸೇವೆ ಕೇಂಜ ಗರಡಿಯಲ್ಲಿ ನಡೆಯುತ್ತದೆ. ಆಟಿ ತಿಂಗಳಲ್ಲಿ ಶ್ರೀ ಬ್ರಹ್ಮ ಬೈದೆರುಗಳು ಕೇಂಜದ ಪವಿತ್ರ ಸತ್ಯದ ಮಣ್ಣಿನಲ್ಲಿ ಕಲೆ ಕಾರ್ನಿಕ ತೋರ್ಪಡಿಸಿ ನೆಲೆಯಾದ ದ್ಯೋತಕವಾಗಿ ಈ ದೇವತಾ ಕಾರ್ಯ ಜರಗುತ್ತಿರುವುದು ವಿಶೇಷವಾಗಿದೆ. ಈ ಸಂದರ್ಭ ಗರಡಿ ಮನೆ ಪ್ರಮುಖರು, ಊರಿನ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಕಳ : ಕುಲಾಲ ಸಂಘ ನಾನಿಲ್ತಾರ್ ವತಿಯಿಂದ ಆಗಸ್ಟ್ ತಿಂಗಳಲ್ಲಿ ಸರಣಿ ಕಾರ್ಯಕ್ರಮಗಳು
Posted On: 26 Jul 2023, 10:26 PM
ಕಾರ್ಕಳ : ತಾಲೂಕಿನ ನಾನಿಲ್ತಾರ್ ಕುಲಾಲ ಸಂಘದ ಆಶ್ರಯದಲ್ಲಿ ಆಗಸ್ಟ್ 6, ಭಾನುವಾರ ಆಟಿಡೊಂಜಿ ಕೂಟ, ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ, ಆಗಸ್ಟ್ 25 ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಸಂಘದ ಸಭಾಭವನದಲ್ಲಿ ನಡೆಯಲ್ಲಿದೆ ಎಂದು ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಪ್ರಕಟಣೆಯಲ್ಲಿ ತಿಳಿಸಿರುವರು.
ನಿರಂತರ ಮಳೆ : ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ (ಜು.27) ರಜೆ ಘೋಷಣೆ
Posted On: 26 Jul 2023, 08:50 PM
ಉಡುಪಿ : ಜಿಲ್ಲೆಯಲ್ಲಿ ನಾಳೆ (ಜುಲೈ 27) ಕೂಡಾ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಹೊರತುಪಡಿಸಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಹಾಗೂ ಪಿಯು ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜುಲೈ 29 : ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ
Posted On: 26 Jul 2023, 07:10 PM
ಕಾಪು : ಭಾರತದ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಮಣಿಪುರ ರಾಜ್ಯದಲ್ಲಿ ಎರಡು ಪಂಗಡಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಯು ತಾರಕಕ್ಕೇರಿ, ತೀವ್ರ ಹಿಂಸಾಚಾರಕ್ಕೆ ತಿರುಗಿ, ಅಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳು, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಿಂಸಾಕೃತ್ಯಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಮಸಿ ಬಳಿದಂತಾಗಿ, ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವಂತಾಗಿರುವುದು ವಿಪರ್ಯಾಸ. ಇಬ್ಬರು ಮಹಿಳೆಯರನ್ನು ಬಲಾತ್ಕಾರವಾಗಿ ಕೊಂಡೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿ, ವಿವಸ್ತ್ರಗೊಳಿಸಿ ಬಹಿರಂಗವಾಗಿ ಬೀದಿಯಲ್ಲಿ ಮೆರವಣಿಗೆ ನಡೆಸಿರುವ ವಿಡಿಯೋ ತುಣುಕು ಘಟನೆ ನಡೆದ ಬಹಳ ದಿನಗಳ ನಂತರ ಬೆಳಕಿಗೆ ಬಂದಿದೆ. ಆದರೆ ಆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ, "ಬೇಟಿ ಪಢಾವೋ- ಬೇಟಿ ಬಚಾವೋ" ಎಂಬ ಡೋಂಗಿ ಘೋಷಣೆಯ ಬಿ.ಜೆ.ಪಿ ನೇತೃತ್ವದ ಸರ್ಕಾರದ ಬೇಜವಾಬ್ದಾರಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ತೀರಾ ಖಂಡನೀಯ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಘಟನೆಯಿಂದಾಗಿ ದೇಶದ ಮಾನ ಹರಾಜಾಗುತ್ತಿದ್ದರೂ ಮೂಕ ಪ್ರೇಕ್ಷಕನಾಗಿ ಕುಳಿತಿರುವ ಸರ್ಕಾರದ ಬೇಜವಾಬ್ದಾರಿ ನಡೆಯನ್ನು, ತೀವ್ರ ತರಾಟೆಗೆ ತೆಗೆದುಕೊಂಡು, ಸರ್ಕಾರಕ್ಕೆ ತಪರಾಕಿ ಹಾಕಿದ ನಂತರ, ಚುನಾವಣಾ ಸಭೆಯಲ್ಲಿ, ವಿದೇಶ ಪ್ರವಾಸದಲ್ಲಿ ನಿರತರಾಗಿದ್ದ ಭಾರತದ ಪ್ರಧಾನಿಯು 78 ದಿವಸಗಳ ನಂತರ ಮೌನ ಮುರಿದಿರುವುದು, 'ಕೋಟೆ ದೋಚಿದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ' ಆಗಿರುವುದು ಮಹಿಳಾ ವಿರೋಧಿ ನಡೆಯ ಜೀವಂತ ಉದಾಹರಣೆ. ಸರ್ಕಾರದ ಈ ಅಮಾನವೀಯ ನಡೆಯನ್ನು ಖಂಡಿಸಿ, ರಾಕ್ಷಸೀ ಪ್ರವೃತ್ತಿ ಮೆರೆದು ಮಹಿಳೆಯರ, ಹಿರಿಯ ನಾಗರಿಕರ ಹಾಗೂ ಮಕ್ಕಳ ಮೇಲೆ ಮೃಗೀಯ ರೀತಿಯಲ್ಲಿ ದೌರ್ಜನ್ಯವೆಸಗಿದ ಚಾಂಡಾಲರ ಮೇಲೆ ಕಠಿಣವಾದ ಶಿಕ್ಷೆ ವಿಧಿಸುವಂತೆ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಿ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜುಲೈ 29, ಶನಿವಾರದಂದು ಪೂರ್ವಾಹ್ನ ಗಂಟೆ 10ಕ್ಕೆ ಕಾಪು ಪೇಟೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ. ಕಾಪು ಕಾಂಗ್ರೆಸ್ ಕಚೇರಿ ರಾಜೀವ್ ಭವನದಿಂದ ಕಾಲ್ನಡಿಗೆ ಮೂಲಕ ಕಾಪು ಪೇಟೆಯವರೆಗೆ ಮೆರವಣಿಗೆಯಲ್ಲಿ ಸಾಗಿ, ಕಾಪು ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ನೆರೆ ಸಂತ್ರಸ್ತರಿಗೆ ಗರಿಷ್ಟ ಪರಿಹಾರ ನೀಡುವಂತೆ ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ
Posted On: 26 Jul 2023, 06:53 PM
ಕಾಪು : ವಿಧಾನಸಭಾ ಕ್ಷೇತ್ರದ ಬಹುಭಾಗವು ಕಡಲ ಪ್ರದೇಶಗಳಿಗೆ ಹೊಂದಿಕೊಂಡಿರುವ ಭಾಗದಲ್ಲಿ ಜನರು ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಜೂನ್ ತಿಂಗಳಿನಿಂದ ಚಂಡಮಾರುತ ಹಾಗೂ ತೀವ್ರ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದು, ಜನರ ಆಸ್ತಿ-ಪಾಸ್ತಿಗಳು ನಷ್ಟ ಉಂಟಾಗಿರುತ್ತದೆ. ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ಗೃಹಪಯೋಗಿ ವಸ್ತುಗಳು, ಬಟ್ಟೆ ಬರೆಗಳಿಗೆ ಹಾನಿ ಉಂಟಾಗಿರುತ್ತದೆ. ಅಲ್ಲದೇ ತೀವ್ರ ತರಹದ ಮಳೆಯಿಂದ ವಾಸ್ತವ್ಯದ ಮನೆ ಭಾಗಶಃ ಹಾಗು ಪೂರ್ಣ ಹಾನಿಯಾಗಿದ್ದು, ಪರಿಹಾರ ನೀಡುವುದು ತೀರಾ ಅತ್ಯವಶ್ಯಕತೆ ಇರುತ್ತದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕೆ ಎ ಕೆಟಗರಿ ಅಡಿ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮನೆಗಳ ಭಾಗಶಃ ರಿಪೇರಿಗೆ ಬಿ ಕೆಟಗರಿ ಅಡಿ 3 ಲಕ್ಷ ಮತ್ತು ಗೃಹಪಯೋಗಿ ವಸ್ತುಗಳ ಹಾನಿಗೆ ಸಿ ಕೆಟಗರಿ ಅಡಿ 50 ಸಾವಿರ ರೂಪಾಯಿ ಅನುದಾನ ಸಂತ್ರಸ್ತರಿಗೆ ದೊರಕುತ್ತಿತ್ತು. ಆದ್ದರಿಂದ ಈ ಹಿಂದಿನಂತೆಯೇ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಧನ ಮಂಜೂರು ಮಾಡುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದರು.
ಕಾಪು : ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಬೆಟರ್ಮೆಂಟ್ ಕಮಿಟಿ ಸಭೆ
Posted On: 26 Jul 2023, 06:18 PM
ಕಾಪು : ಸರಕಾರಿ ಪದವಿ ಪೂರ್ವ ಕಾಲೇಜು, ಪಲಿಮಾರು ಇದರ ಕಾಲೇಜು ಬೆಟರ್ಮೆಂಟ್ ಕಮಿಟಿ ಸಭೆ ಜುಲೈ 26ರಂದು ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರು, ಕಾಲೇಜು ಬೆಟರ್ಮೆಂಟ್ ಕಮಿಟಿ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕಾಲೇಜು ಬೆಟರ್ಮೆಂಟ್ ಕಮಿಟಿ ಉಪಾಧ್ಯಕ್ಷರಾಗಿ ಪ್ರಸಾದ್ ಪಲಿಮಾರ್ ಅವರನ್ನು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಶೋಭಾ ಅವರನ್ನು ಪುನರ್ ಆಯ್ಕೆ ಮಾಡಲಾಯಿತು. ಈ ಸಂದರ್ಭ ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಉಪಾಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಯೇಶ್ ಪೈ, ಸುಜಾತಾ, ಪ್ರವೀಣ್ ಕುಮಾರ್, ರಶ್ಮಿ, ಪ್ರಾಂಶುಪಾಲರಾದ ಗ್ರೇಟ್ಟಾ ಮೋರಸ್ ಹಾಗೂ ಕಾಲೇಜು ಬೆಟರ್ಮೆಂಟ್ ಕಮಿಟಿ ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ : ಕಾಲೇಜ್ ಟಾಯ್ಲೆಟ್ ನಲ್ಲಿ ವಿಡಿಯೋ ಪ್ರಕರಣ - ಆಡಳಿತ ಮಂಡಳಿ, ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲು
Posted On: 26 Jul 2023, 03:26 PM
ಉಡುಪಿ : ಇಲ್ಲಿನ ಖಾಸಗಿ ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮಾ ಜಿ.ಬಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಹಿಂದೂ ಹುಡುಗಿಯರ ವಿಡಿಯೋ ತೆಗೆದು ವಾಟ್ಸಪ್ ಗುಂಪುಗಳಿಗೆ ಶೇರ್ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ನಿನ್ನೆಯಷ್ಟೇ ಉಡುಪಿ ಎಸ್ಪಿ ಪತ್ರಿಕಾಗೋಷ್ಠಿಯಲ್ಲಿ ಈ ತರಹದ ಯಾವುದೇ ವಿಡಿಯೋ ವೈರಲ್ ಆಗಿಲ್ಲ, ತಮಾಷೆಗಾಗಿ ವಿಡಿಯೋ ಮಾಡಲಾಗಿದ್ದು, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಕಾಲೇಜು ಆಡಳಿತ ಮಂಡಳಿಯು ಪತ್ರಿಕಾಗೋಷ್ಠಿ ನಡೆಸಿ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿ ದೂರು ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೀಡಿಯೋ ಮಾಡಿದ ಮೂವರು ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸಾಕ್ಷ್ಯನಾಶ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ಐಪಿಸಿ ಸೆಕ್ಷನ್ 509, 204, 175, 34 ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದೇ ಖುಷ್ಬೂ ಸುಂದರ್ ಉಡುಪಿಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ.
