Updated News From Kaup
ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಬ್ಯಾನರ್, ಕಟೌಟ್ಗಳ ಬಳಕೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಸೂಚನೆ

Posted On: 30-03-2023 10:27AM
ಉಡುಪಿ : ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾಚ್೯ 29ರಿಂದ ಅನ್ವಯವಾಗುವಂತೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಆದ್ದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ಚುನಾವಣಾ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಚಾರ, ಶುಭಕೋರುವ ಹಾಗೂ ಕಾರ್ಯಕ್ರಮಗಳ ಬಗ್ಗೆ ಬ್ಯಾನರ್, ಬಂಟಿಂಗ್ಸ್, ಕಟೌಟ್ ಅಳವಡಿಸಲು, ಭಿತ್ತಿ ಪತ್ರ ಹಂಚಲು, ಭಿತ್ತಿ ಪತ್ರಗಳನ್ನು ಗೋಡೆಗೆ ಅಂಟಿಸಲು ಹಾಗೂ ಗೋಡೆ ಬರಹ ಬರೆಯಲು ಸ್ಥಳಿಯಾಡಳಿತದಿಂದ ಅನುಮತಿ ನೀಡದಿರಲು ಆದೇಶಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
ಮಾಚ್೯ 30 : ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ

Posted On: 29-03-2023 05:09PM
ಕಾಪು : ತಾಲೂಕಿನ ಶಂಕರಪುರ ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯೊಂದಿಗೆ ವಿಶಿಷ್ಟವಾಗಿ ಶ್ರೀ ರಾಮನವಮಿಯ ಆಚರಣೆಯು ಶ್ರೀ ಸೌಭಾಗ್ಯ ಹೆಣ್ಣುಮಕ್ಕಳ ಭಾಗ್ಯೋದಯದ ಬೆಳಕು ಎಂಬ ಸೇವಾ ಕಾರ್ಯಕ್ರಮದ ಮೂಲಕ ಮಾಚ್೯ 30ರಂದು ಬೆಳಿಗ್ಗೆ 9 ಗಂಟೆಗೆ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಜರಗಲಿದೆ.
21 ಮಕ್ಕಳಿಗೆ ಶ್ರೀ ರಾಮನವಮಿಯಂದು ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಲಿದೆ.
ಈಗಾಗಲೇ ಎರಡು ವರುಷಗಳಿಂದ 330ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆಯನ್ನು ಏಕಜಾತಿ ಧರ್ಮ ಪೀಠದ ಸ್ಥಾಪಕರಾದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಲ್ಲಿ ನಡೆದುಕೊಂಡು ಬರುತ್ತಿದೆ.
ಮೇ 10 : ಕರ್ನಾಟಕ ವಿಧಾನಸಭಾ ಚುನಾವಣೆ, 13ಕ್ಕೆ ಫಲಿತಾಂಶ

Posted On: 29-03-2023 12:49PM
ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರಿಂದ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮೇ 10 ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13 ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಕರ್ನಾಟಕ ರಾಜ್ಯದಲ್ಲಿ 58,282 ಸಾವಿರ ಮತಗಟ್ಟೆ, ಒಂದು ಮತಗಟ್ಟೆಯಲ್ಲಿ 883 ಮತದಾರರಿಗೆ ಮತ ಚಲಾಣೆಗೆ ಅವಕಾಶವಿದೆ. 80 ವರ್ಷ ಮೇಲ್ಪಟ್ಟ ವಯೋಮಾನದವರು ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುವುದು. ಕರ್ನಾಟಕದಲ್ಲಿ ಈ ಬಾರಿ ಒಟ್ಟು 5.22 ಕೋಟಿ ಮತದಾರರಿದ್ದಾರೆ. ಇದರಲ್ಲಿ 2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ ಮತದಾರರಿದ್ದಾರೆ. ರಾಜ್ಯದಲ್ಲಿ ಒಟ್ಟು 58, 282 ಮತಗಟ್ಟೆ ಸ್ಥಾಪಿಸಲಾಗುವುದು. ನಗರಪ್ರದೇಶದಲ್ಲಿ 24,063 ಮತಗಟ್ಟೆ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆ ಇರಲಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.
ಏಪ್ರಿಲ್ 29 ರಂದು ಅದಮಾರು ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ ; ಮಾರ್ಚ್ 30 - ಕಾಲೇಜಿನಲ್ಲಿ ಪೂರ್ವಭಾವಿ ಸಭೆ

Posted On: 28-03-2023 09:32PM
ಕಾಪು : 1950ರಲ್ಲಿ ಅದಮಾರಿನ ಸುತ್ತಲಿನ ಎಲ್ಲಾ ಜನರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಸದುದ್ದೇಶದಿಂದ ಅಂದಿನ ಅದಮಾರು ಮಠಾಧೀಶರಾಗಿದ್ದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಅದಮಾರಿನಲ್ಲಿ ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ನಂತರ ಈ ಶಾಲೆ 1972 ರಲ್ಲಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿಗೆ ಮೇಲ್ದರ್ಜೆ ಗೇರಿತು. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಈ ಸಂಸ್ಥೆ ದೇಶವಿದೇಶಗಳಲ್ಲಿ ಲಕ್ಷಾಂತರ ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ. ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಕಟ್ಟಿದ ಈ ಸಂಸ್ಥೆಯನ್ನು ಅವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಇಲ್ಲಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದೊಂದಿಗೆ ಈ ಸಂಸ್ಥೆಯನ್ನು ಬಹಳಷ್ಟು ಎತ್ತರಕ್ಕೆ ಏರಿಸಿದರು. ಇಂದು 1700ಕ್ಕು ಅಧಿಕ ವಿದ್ಯಾರ್ಥಿಗಳು ಕೆಜಿಯಿಂದ ಪಿಯುಸಿಯ ತನಕ ವಿದ್ಯಾಭ್ಯಾಸವನ್ನು ಈ ಕ್ಯಾಂಪಸ್ ನಲ್ಲಿ ಪಡೆಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಬಂದ 220 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಾಗಿದ್ದುಕೊಂಡು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾಗಿರುವ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಸಂಸ್ಥೆಯನ್ನು ಒಂದು ಮಾದರಿ ಸಂಸ್ಥೆಯನ್ನಾಗಿ ಮಾಡುವ ನೆಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಬೇರೆ ಬೇರೆ ಊರಿನಲ್ಲಿ ಉದ್ಯೋಗದಲ್ಲಿರುವ ಈ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ತಾವು ಸಂಸ್ಥೆಯ ಬಗೆಗೆ ಬಹಳಷ್ಟು ಪ್ರೀತಿಯನ್ನು ಹೊಂದಿರುತ್ತೀರಿ ಎಂಬುದು ನಮಗೆ ತಿಳಿದಿದೆ. ಬಹಳ ಕಾಲದ ನಂತರ ನಿಮ್ಮ ಆಗಿನ ಸಹಪಾಠಿಗಳ ಜೊತೆ ಅದಮಾರು ಕಾಲೇಜಿನಲ್ಲಿ ನಿಮ್ಮ ಶಾಲಾ ಜೀವನದ ರಸಗವಳ ಸನ್ನಿವೇಶಗಳನ್ನು ಮೆಲುಕು ಹಾಕುವ ಒಂದು ಅಪೂರ್ವ ಕ್ಷಣಕ್ಕೆ ನಾವು ಒಂದು ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ. ಇದಕ್ಕಾಗಿ ಬರುವ 2023ರ ಏಪ್ರಿಲ್ 29, ಶನಿವಾರದಂದು ಸಾಯಂಕಾಲ 5ಗಂಟೆಗೆ ಸಂಸ್ಥೆಯಲ್ಲಿ ಒಂದು ಬೃಹತ್ ಹಳೆ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಮಾಚ್೯ 30ರಂದು ಹಳೆವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಖ್ಯಾತ ಶಿಕ್ಷಣ ತಜ್ಞರಿಂದ ಭಾಷಣ ಮತ್ತು ಅದಮಾರು ಶಿಕ್ಷಣ ಸಂಸ್ಥೆಯ ಹಿಂದಿನ ಹಾಗೂ ಇಂದಿನ ಸ್ಥಿತಿಗತಿಯ ಸಾಕ್ಷ್ಯ ಚಿತ್ರ, ಹೊಸ ಶಿಕ್ಷಣ ನೀತಿಗೆ ಅದಮಾರು ಶಿಕ್ಷಣ ಸಂಸ್ಥೆ ಸಿದ್ಧಗೊಂಡ ಬಗೆ, ಮತ್ತಿತರ ಕಾರ್ಯಕ್ರಮವಿದೆ. ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಸದಾಶಯವನ್ನು ಹೊಂದಲಾಗಿದೆ.
ಕಾರ್ಯಕ್ರಮಕ್ಕೆ ಎಲ್ಲಾ ಹಿಂದಿನ ಉಪನ್ಯಾಸಕರನ್ನು, ಶಿಕ್ಷಕರನ್ನು ಪ್ರಾಂಶುಪಾಲರನ್ನು ಆಹ್ವಾನಿಸಲಾಗಿದೆ. ಅಲ್ಲದೆ ಸಭಾ ಕಾರ್ಯಕ್ರಮದ ನಂತರ ಔತಣಕೂಟವನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸುವವರು ತಮ್ಮ ಆಗಮನವನ್ನು (9964141361) ಶ್ರೀಕಾಂತ ರಾವ್ ಇರವರಲ್ಲಿ ಖಾತ್ರಿಪಡಿಸಿಕೊಳ್ಳಬೇಕೆಂದು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು,ಶಿಕ್ಷಕರು, ಶಿಕ್ಷಕೇತರ ಬಂಧುಗಳು, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು, ಅದಮಾರು ಪ್ರಕಟಣೆಯಲ್ಲಿ ತಿಳಿಸಿರುವರು.
ಉಡುಪಿ : ಎಸ್.ಎಸ್.ಎಲ್.ಸಿ ಪರೀಕ್ಷೆ - ನಿಷೇಧಾಜ್ಞೆ

Posted On: 28-03-2023 04:17PM
ಉಡುಪಿ : ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 31 ರಿಂದ ಏಪ್ರಿಲ್ 15 ರ ವರೆಗೆ ಜಿಲ್ಲೆಯ ಒಟ್ಟು 55 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 144(1) ರಂತೆ ನಿಷೇಧಾಜ್ಷೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.
ಕಳೆದ ಬಾರಿ ಬಿಜೆಪಿಯ ಪ್ರಚಾರದಿಂದ ಸೋಲು ಈ ಬಾರಿ ಜನರು ಅಪಪ್ರಚಾರ ನಂಬುತ್ತಿಲ್ಲ : ವಿನಯ್ ಕುಮಾರ್ ಸೊರಕೆ

Posted On: 27-03-2023 06:23PM
ಕಾಪು : ಕಾಂಗ್ರೆಸ್ ಪಕ್ಷ ಎಪಿಎಲ್ ಬಿಪಿಎಲ್ ಎನ್ನದೆ ಹೊಸ ಆಶ್ವಾಸನೆ ಎಲ್ಲರಿಗೂ ನೀಡಲು ಸಿದ್ಧವಿದೆ. ವರ್ಷಕ್ಕೆ ರೂ. 48,000 ಪ್ರಯೋಜನ ನೀಡಲಿದ್ದೇವೆ. ಚುನಾವಣೆ ಘೋಷಣೆ ಪ್ರಾರಂಭವಾದ ನಂತರ ಚುನಾವಣಾ ಪ್ರಚಾರ ಮಾಡಲಿದ್ದೇವೆ. ಬೂತ್ ಮಟ್ಟದಲ್ಲಿ ಪ್ರತಿ ಮನೆಯನ್ನು ತಲುಪಲು ನಮ್ಮ ಕಾರ್ಯಕರ್ತರು ತಯಾರಾಗಿದ್ದಾರೆ. ವಿರೋಧ ಪಕ್ಷದ ಅಪಪ್ರಚಾರದಿಂದ ನಮ್ಮ ಪಕ್ಷಕ್ಕೆ ತೊಡಕಾಗಿತ್ತು. ಈ ಸಲ ಯಾವುದೇ ಅಪಚಾರ ಜನ ನಂಬುತ್ತಿಲ್ಲ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಪು ತಾಲೂಕಿನ 29 ಪಂಚಾಯತಿಗಳಲ್ಲಿ ಹಿರಿಯ ಕಾಂಗ್ರೆಸ್ಸಿಗರಿಗೆ ಉಸ್ತುವಾರಿ ನೀಡಿದ್ದೇವೆ. ಎಂಎಲ್ಎ, ಎಂಪಿ ಚುನಾವಣೆಗಳಲ್ಲಿ ಎಸ್ಡಿಪಿಐ ಪ್ರಭಾವ ಬೀರದು. ಕಳೆದ ಸಲ ಮೋದಿಗೆ ಒಂದು ಓಟು ನೀಡಿ ಎಂದಿದ್ದರು. ಮತದಾರರಿಗೆ ತಿಳಿದಿದೆ ಈ ಚುನಾವಣೆ ಮೋದಿಯವರ ಚುನಾವಣೆ ಅಲ್ಲ ಎಂದು. ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಜನರಿಗೆ ತಿಳಿದಿದೆ. ಕಾಪುವಿಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮಂಜೂರು ಮಾಡಿದ್ದು ಕಾಂಗ್ರೆಸ್. ಈಗಿನ ಬಿಜೆಪಿ ಶಾಸಕರು ನಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಕಾಪುವಿಗೆ ಬೇಕಾದಂತಹ 100 ಬೆಡ್ ಹಾಸ್ಪಿಟಲ್, ಸರ್ಕಾರಿ ಕಚೇರಿಗಳ ಕಾಂಪ್ಲೆಕ್ಸ್, ಎಲ್ಲಾ ಗ್ರಾಮಗಳನ್ನು ಸಂಪರ್ಕಿಸುವಂತಹ ಬಸ್ ನಿಲ್ದಾಣ ಮುಂತಾದ ಹಲವು ಯೋಜನೆಗಳನ್ನು ಮಾಡಲಿದ್ದೇವೆ.
ಕಳೆದ ಬಾರಿ ನನ್ನ ಕೊನೆಯ ಚುನಾವಣೆಯೆಂದು ನಿರ್ಧರಿಸಿದ್ದೆ ಸೋಲಾಯಿತು. ಐದು ವರ್ಷ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕದಿಂದಾಗಿ ಮತ್ತೊಮ್ಮೆ ಸರ್ವಾನುಮತದಿಂದ ಅಭ್ಯರ್ಥಿಯಾದೆ. ಸೋಲಿಸಿ ನಿವೃತ್ತಿ ಮಾಡಬೇಡಿ ಜನಸೇವೆ ಮಾಡಲು 5 ವರ್ಷ ಅವಕಾಶ ನೀಡಿ ಎಂದು ಜನರಲ್ಲಿ ವಿನಂತಿ ಮಾಡುತ್ತೇನೆ. ಬಿಜೆಪಿಯಲ್ಲಿದ್ದಂತೆ ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಾಧಿಕಾರ ಬೇಡವೆಂದವರು ಈಗ ಪ್ರಾಧಿಕಾರ ಎಲ್ಲಾ ಕಡೆ ಇರಬೇಕೆಂದು ಹೇಳುತ್ತಿದ್ದಾರೆ. ಸಮಸ್ಯೆ ಬಗ್ಗೆ ಹರಿಸದೆ, ಮಾಸ್ಟರ್ ಪ್ಲಾನ್ ಮಾಡಲಾಗಲಿಲ್ಲ. ಬಿಜೆಪಿ ಈಗ ಎಲ್ಲವನ್ನು ಘೋಷಣೆ ಮಾಡುತ್ತಿದೆ. ಕಳೆದ ಬಾರಿ ಬಿಲ್ಲವಕೋಶಕ್ಕೆ ಈ ಬಾರಿ ನಿಗಮ ಮಾಡಿದರೂ ಅನುದಾನ ಘೋಷಣೆ ಆಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಸಮಾಜದ ವಿವಿಧ ಜಾತಿಗಳ ನಿಗಮಗಳನ್ನು ಸ್ಥಾಪಿಸುವ ಯೋಚನೆ ಇದೆ ಎಂದರು.
ಹೆಜಮಾಡಿ : ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 5 ಲಕ್ಷ ರೂಪಾಯಿ ಪೋಲಿಸ್ ವಶಕ್ಕೆ

Posted On: 27-03-2023 06:07PM
ಹೆಜಮಾಡಿ : ಇಲ್ಲಿನ ಚೆಕ್ ಪೋಸ್ಟ್ ಬಳಿ ಪೋಲಿಸ್ ತಪಾಸಣೆ ವೇಳೆ ಯಾವುದೇ ದಾಖಲೆಗಳಿಲ್ಲದ 5 ಲಕ್ಷ ನಗದನ್ನು ಕಾರೊಂದರಿಂದ ವಶಪಡಿಸಲಾಗಿದೆ.
ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣಾ ಸಂಬಂದ ನಿಗಾ ವಹಿಸಲು ವಾಹನ ತಪಾಸಣೆ ಕರ್ತವ್ಯಕ್ಕೆ ನೇಮಿಸಿದಂತೆ ಕರ್ತವ್ಯದಲ್ಲಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಚಾಲಕನ ಎಡ ಬದಿಯ ಟೂಲ್ಸ್ ಬಾಕ್ಸ್ ಒಳಗಡೆ ಒಂದು ಕೇಸರಿ ಬಣ್ಣದ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು, ಪ್ರಸಾದ ಎಂಬ ನೀಲಿ ಬಣ್ಣ ಪ್ರಿಂಟ್ ಇರುವ ಕೈ ಚೀಲ ಇದ್ದು ಅದನ್ನು ಪರಿಶೀಲಿಸಿದಾಗ ಅದರೊಳಗೆ 500 ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟುಗಳಿರುವ ಒಟ್ಟು ಸೇರಿಸಿ ಬಂಡಲ್ ಮಾಡಿ ಇಟ್ಟಿರುವ ಹಣ ಕಂಡು ಬಂದಿದ್ದು, ಈ ಹಣದ ಕುರಿತು ಕಾರಿನ ಚಾಲಕ ಅಹಮ್ಮದ್ ಕಬೀರ್ ಹಾಗೂ ಕಾರಿನಲ್ಲಿ ಇದ್ದ ಅಬ್ದುಲ್ ಖಾದರ್ ಜೈಲಾನಿ ಎಂಬುವರನ್ನು ವಿಚಾರಿಸಿದಾಗ. ಈ ಹಣದ ಬಗ್ಗೆ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ರೂಪಾಯಿ 5,00,000/- ಮತ್ತು ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು : ಕುಂಜೂರಿನಲ್ಲಿ ಸಮವಸ್ತ್ರ ವಿತರಣೆ

Posted On: 26-03-2023 05:58PM
ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ಮಿತ್ರ ವೃಂದದ ಅಂಗ ಸಂಸ್ಥೆ ದುರ್ಗಾ ಮಿತ್ರ ವೃಂದದ ಮಹಿಳಾ ಘಟಕದ ಭಜನಾ ತಂಡದ 32 ಮಹಿಳಾ ಸದಸ್ಯರಿಗೆ ಹಾಗೂ 12 ಬಾಲಕ - ಬಾಲಕಿಯರಿಗೆ ಸುಮಾರು ನಲ್ವತ್ತು ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರವನ್ನು ವಿತರಿಸಲಾಯಿತು.

ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು ಸಮವಸ್ತ್ರದ ಪ್ರಾಯೋಜಕರು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಅರ್ಚಕರಾದ ಹರಿಕೃಷ್ಣ ಉಡುಪ, ಕೆ.ಎಲ್.ಕುಂಡಂತಾಯ ಅವರು ಸಮವಸ್ತ್ರ ವಿತರಿಸಿದರು. ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಟೀಚರ್ ಉಪಸ್ಥಿತರಿದ್ದರು.
ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯರು ಕಳೆದ ಒಂದು ವರ್ಷದಿಂದ ಕುಣಿತ ಭಜನೆಯನ್ನು ಶಕಿಲಾ ಟೀಚರ್ ಅವರಿಂದ ತರಬೇತಿ ಪಡೆಯುತ್ತಿದ್ದು ಹಲವು ಭಜನಾ ಸ್ಪರ್ಧೆಗಳಲ್ಲಿ, ಜಿಲ್ಲೆಯಲ್ಲದೆ ಉತ್ತರ ಕನ್ನಡದ ಕಾರವಾರದ ವರೆಗೆ ವಿವಿಧ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಮಾಚ್೯26 - ಎಪ್ರಿಲ್ 2 : ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ವಾರ್ಷಿಕ ನೇಮೋತ್ಸವ

Posted On: 26-03-2023 05:51PM
ಎರ್ಮಾಳು : ಸಂದು ದಾಂತಿ ಗರಡಿ ಎಂದೇ ಪ್ರಸಿದ್ಧಿ ಪಡೆದಿರುವ ತೆಂಕ ಎರ್ಮಾಳು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಾಚ್೯ 26ರಿಂದ ಎಪ್ರಿಲ್ 2ರ ವರೆಗೆ ನವೀಕೃತ ನಿರ್ಮಾಣಗಳ ಸಮರ್ಪಣೆ, ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಹಾ ಅನ್ನಸಂತರ್ಪಣೆ ಮತ್ತು ವಾರ್ಷಿಕ ನೇಮೋತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ವೇದ ಮೂರ್ತಿ ಗಣಪತಿ ಭಟ್ ಎರ್ಮಾಳು ಅವರ ನೇತೃತ್ವದಲ್ಲಿ ನಡೆಯಲಿದೆ.
ಮಾಚ್೯ 26ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಆರಂಭಗೊಳ್ಳಲಿದ್ದು, ಸಂಜೆ 4.30ರಿಂದ ಆಲಯ ಪರಿಗ್ರಹ, ದೇವತಾ ಪ್ರಾರ್ಥನೆ, ಪುಣ್ಯಾಹ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪೂಜೆ, ಸಪ್ತ ಶುದ್ಧಿ, ರಕ್ಷೋಭ್ಯ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ, ಪ್ರಾಕಾರ ಬಲಿ ಸೇವೆಗಳು ನಡೆಯಲಿದೆ.
ಮಾಚ್೯ 27ರಂದು ಬೆಳಿಗ್ಗೆ 6.30 ರಿಂದ ಗಣಹೋಮ, ಕಲಶಾಧಿವಾಸ ಹೋಮ, ದುರ್ಗಾ ಹೋಮ, 8 ಗಂಟೆಯಿಂದ ನಾಗಬನದಲ್ಲಿ ತನು ತಂಬಿಲ ಸೇವೆ ಮತ್ತು ಆಶ್ಲೇಷ ಬಲಿ, ಬೆಳಗ್ಗೆ 10.10ಕ್ಕೆ ವೃಷಭ ಲಗ್ನದಲ್ಲಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕುಂಭಾಭಿಷೇಕ, ಶ್ರೀ ಬೈದರ್ಕಳ ದರ್ಶನ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8.30ರಿಂದ ಗರಡಿ ಪ್ರವೇಶ ನಡೆಯಲಿದೆ.
ಮಾಚ್೯ 28 ರಂದು ರಾತ್ರಿ 7.30ಕ್ಕೆ ಅಗೇಲು ಸೇವೆ ನಡೆಯಲಿದೆ. ಮಾಚ್೯ 29 ರಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ರಿಂದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 11.50ಕ್ಕೆ ಶ್ರೀ ಬೈದರ್ಕಳರ ದರ್ಶನ ನಡೆಯಲಿದೆ. ಮಾಚ್೯ 30ರ ಸಂಜೆ 4 ಗಂಟೆಗೆ ಮಾಯಂದಲ ಕೋಲ, ರಾತ್ರಿ 9ಕ್ಕೆ ಪಿಲಿಚಂಡಿ ಕೋಲ ನಡೆಯಲಿದೆ. ಎಪ್ರಿಲ್ 2ರಂದು ಎರ್ಮಾಳು ಎಲ್ಲದಡಿ ಮನೆಯವರಿಂದ ಶುದ್ಧದ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದು ಅಪರಿಚಿತ ಯುವಕರು ಪರಾರಿ

Posted On: 26-03-2023 10:32AM
ಶಿರ್ವ : ವಿಳಾಸ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರು ಚರ್ಚಿನಲ್ಲಿ ಪೂಜೆ ಸಲ್ಲಿಸಿ ಮನೆಗೆ ತೆರಳುತ್ತಿರುವ ಮಹಿಳೆಯ ಸರ ಕಸಿದು ಪರಾರಿಯಾದ ಘಟನೆ ತುಂಡುಬಲ್ಲೆ ಲೆತ್ತಿ ಬಾಯಿ ಮನೆ ಬಳಿ ಸಂಭವಿಸಿದೆ.
ಶಿರ್ವ ಸೊರ್ಪು ನಿವಾಸಿ ಎಮಿಲಿಯನ್ ಸಲ್ದಾನ ಅವರು ಶಿರ್ವ ಚರ್ಚ್ ನಲ್ಲಿ ಪೂಜೆ ಮುಗಿಸಿ ತುಂಡು ಬಲ್ಲೆ ಬಳಿ ಬಸ್ಸಿನಿಂದಿಳಿದು ಮನೆ ಕಡೆ ಒಬ್ಬರೇ ತೆರಳುತ್ತಿದ್ದರು. ಆ ವೇಳೆ ಹೆಲ್ಮಟ್ ಧರಿಸಿ ಕಪ್ಪು ಬೈಕ್ ನಲ್ಲಿ ಬಂದ ಯುವಕರಿಬ್ಬರಲ್ಲಿ ಓರ್ವ ಮಹಿಳೆಯ ಬಳಿ ಬಂದು ಚೀಟಿ ತೋರಿಸಿ ತುಳುವಿನಲ್ಲಿ ಉಂದು ಏರೆನ ಇಲ್ಡ್ ಗೊತ್ತುಂಡೇ ಎಂದು ಕೇಳಿದ್ದಾನೆ. ಮಹಿಳೆ ಇಲ್ಲವೆಂದು ಹೇಳಿ ಮುಂದೆ ಹೋದಾಗ ಹಿಂದಿನಿಂದ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು ರೂ. 60,000 ಮೌಲ್ಯದ 12 ಗ್ರಾಮ್ ತೂಕದ ಕ್ರಾಸ್ ಪೇಂಡೆಂಟ್ ಇರುವ ಚಿನ್ನದ ಸರವನ್ನು ಕಸಿದಿದ್ದಾನೆ. ಆಗ ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದು ಸವಾರರಿಬ್ಬರೂ ತುಂಡುಬಲ್ಲೆ ಮುಖ್ಯರಸ್ತೆಯ ಕಡೆಗೆ ಪರಾರಿಯಾಗಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.