Updated News From Kaup
ಪಡುಬಿದ್ರಿ : ಬಿಲ್ಲವ ಸಮಾಜ ಸೇವಾ ಸಂಘ - 23ನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ

Posted On: 14-04-2023 12:28PM
ಪಡುಬಿದ್ರಿ : ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಏಪ್ರಿಲ್ 16, ಆದಿತ್ಯವಾರ 23ನೇ ವರ್ಷದ ಬ್ರಹ್ಮಶ್ರೀ ನಾರಾಯಣ ಗುರುಮೂರ್ತಿ ಪ್ರತಿಷ್ಠಾಪನಾ ಮಹೋತ್ಸವವು ಜರಗಲಿದೆ.
ಬೆಳಿಗ್ಗೆ ಗಂಟೆ 7ರಿಂದ 9 ರವರೆಗೆ ಗಣಹೋಮ ಹಾಗೂ ಕಲಶಾಭಿಷೇಕ, ಬೆಳಿಗ್ಗೆ 9:30ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1 ರಿಂದ ಅನ್ನ ಸಂತರ್ಪಣೆ, ಸಂಜೆ ಗಂಟೆ 6:30ಕ್ಕೆ ಮಹಾಮಂಗಳಾರತಿ ಜರಗಲಿದೆ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಕಟನೆ ತಿಳಿಸಿದೆ.
ಕಾಪು : ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

Posted On: 14-04-2023 12:20PM
ಕಾಪು : ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಇಂದು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ದೆಹಲಿ ವಿಧಾನಸಭಾ ಶಾಸಕರು ಹಾಗೂ ಚುನಾವಣಾ ಪ್ರವಾಸಿ ಪ್ರಭಾರಿ ವಿಜೇಂದರ್ ಗುಪ್ತ, ಶಾಸಕರಾದ ಲಾಲಾಜಿ ಮೆಂಡನ್, ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕ್ಷೇತ್ರದ ಅಧ್ಯಕ್ಷ ಶ್ರೀಕಾಂತ ನಾಯಕ್, ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಶ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ, ಮಂಗಳೂರು ವಿಭಾಗದ ಪ್ರಭಾರೀಗಳಾದ ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕ್ಷೇತ್ರ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್, ಹಿರಿಯರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಗಂಗಾಧರ್ ಸುವರ್ಣ, ವೀಣಾ ಶೆಟ್ಟಿ, ಶ್ಯಾಮಲ ಕುಂದರ್, ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಶೀಲಾ ಶೆಟ್ಟಿ, ನೀತಾ ಗುರುರಾಜ್, ಶಶಿಪ್ರಭ ಶೆಟ್ಟಿ, ಮಾಲಿನಿ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕೃಷಿಗೆ ತೊಡಗುವ ಸಂದೇಶವಿರುವ ಯುಗಾದಿ

Posted On: 14-04-2023 10:12AM
ಕೋಲ, ಬಲಿ, ಅಂಕ, ಆಯನಗಳ ಉತ್ಸಾಹ, ನಾಗ - ಬಹ್ಮಲೋಕ, ದೈವಗಳ ಸಾಮ್ರಾಜ್ಯ ಸೃಷ್ಟಿಯಾಗುತ್ತಾ ಪ್ರತಿ ರಾತ್ರಿಯೂ ದಿವ್ಯವಾಗುವ ಶ್ರಾಯ. ಇದಕ್ಕೆ ಪೂರಕವಾಗಿ ಒದಗಿ ಬಂದಿರುತ್ತದೆ ವಸಂತ ಋತುವಿನ ಬಿನ್ನಾಣ. ಈ ನಡುವೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’ ಸಮನಿಸುತ್ತದೆ. ಗೌಜಿ - ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ‘ಇಗಾದಿ’ ಸೌರ ಮಾನಿಗಳಿಗೆ ‘ವರ್ಷಾರಂಭ’ ಎಂಬ ಶ್ರದ್ಧೆಯೊಂದಿಗೆ ಆಚರಿಸಲ್ಪಡುತ್ತದೆ. ಆದರೆ ಕೃಷಿಯನ್ನು ಆಧರಿಸಿ ಜೀವನ ರೂಪಿಸಿಕೊಂಡ ಮಣ್ಣಿನ ಮಕ್ಕಳಿಗೆ ಕೃಷಿ ಕಾರ್ಯವನ್ನು ಆರಂಭಿಸುವ ದಿನ ಸೌರ ಯುಗಾದಿ. ಸೌರಪದ್ಧತಿಯಂತೆ ತುಳುವರ ಮೊದಲ ತಿಂಗಳು ‘ಪಗ್ಗು’. ಪಗ್ಗು ತಿಂಗಳ ಹದಿನೆಂಟು ಅಥವಾ ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಕೃಷಿಕನಿಗೆ ಸೌರ ಯುಗಾದಿಯಂದು ಸಾಂಕೇತಿಕವಾಗಿ ತನ್ನ ಚಟುವಟಿಕೆಗಳನ್ನು ಆರಂಭಿಸುವ ನಿಯಮ ರೂಢಗೊಂಡಿತ್ತು.
ಜಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರ ಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷ ಆರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ. ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. ತುಳುನಾಡಿನ ಉದ್ದಕ್ಕೂ ವೈವಿಧ್ಯತೆಯಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು’ ಎಂದೇ ವಿಶೇ?ಷವಾಗಿ ‘ಬಿಸು’ವಾಗಿ ಸ್ವೀಕರಿಸಲ್ಪಟ್ಟು ನಡೆಯತ್ತದೆ. ಆದರೆ ಕೃಷಿಕನ ಲಕ್ಷ್ಯವಿರುವುದು ಮುಂದಿನ ವರ್ಷದ ಬೇಸಾಯದ ಸ್ವರೂಪ ಹೇಗಿರಬೇಕು ಎಂದು ನಿರ್ಧರಿಸುವಲ್ಲಿ. ಅದಕ್ಕಾಗಿ ಆತ ‘ಯುಗಾದಿ ಫಲ’ ಕೇಳುವಲ್ಲಿ ಆಸಕ್ತನಿರುತ್ತಾನೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿ ಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವಿಷ್ಯವನ್ನು ತಿಳಿಯುವ ಕುತೂಹಲವೂ ರೈತನದ್ದಾಗಿರುತ್ತದೆ.
‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’ ಅಥವಾ ‘ಮಡಿಬಿದೆ’ಯನ್ನು ‘ಕೈಬಿತ್ತ್’ ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಅನುಸರಿಸುವ ಪದ್ಧತಿ ಇತ್ತು ಎಂದು ಹಿರಿಯ ಕೃಷಿಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ಕೃಷಿಯೇ ಅವಗಣಿಸಲ್ಪಡುತ್ತಿರುವ ಈ ಕಾಲಘಟ್ಟದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಪೂರ್ಣ ಪ್ರಮಾಣದ ಕೃಷಿಕ ದೊರೆಯಬಹುದು, ಆತನಲ್ಲಿ ಈ ಪರಂಪರೆ ಉಳಿದಿರಬಹುದು. ಭೂ ಸುಧಾರಣೆಯ ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಬೆನ್ನಿಮಲ್ಪುನಿ’ ಎಂಬ ನಿರ್ಣಯಕ್ಕೆ ಯುಗಾದಿ ನಿಗದಿತ ದಿನವಾಗಿತ್ತು. ಏಕೆಂದರೆ ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ ಭೂ ಒಡೆತನ ಉಳುವವನದ್ದಾಗಿರದಿದ್ದುದ ಕಮಲರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವೂ ಮರೆತುಹೋಗಿದೆ. ಆದರೆ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದ್ದಂತಿದೆ. ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಅಂದರೆ, ಅವರಿಗೆ ನಮಸ್ಕರಿಸುವುದೂ ಸತ್ಸಂಪ್ರದಾಯವಾಗಿದೆ. ಮನೆಮಂದಿಗೆ ಹಾಗೂ ಪೂರ್ಣ ಕಾಲಿಕ ಕೆಲಸದವರಿಗೂ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ ಒಂದು ಜನಪದ ಆಟವಾಗಿ, ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ. ಹಬ್ಬಗಳ ಆಚರಣೆಯ ಗುರಿ ‘ಆನಂದ’ವನ್ನು ಪಡೆಯುವುದು. ಆದರೆ ಯುಗಾದಿ ಸರಳ, ಭಾವನಾತ್ಮಕ ಆಚರಣೆಯಾಗಿ ನೆರವೇರುತ್ತದೆ. ಇಲ್ಲಿ ಹಳೆಯ ಕಹಿಯನ್ನು ಮರೆಯುವ, ‘ಸಿಹಿ’ಯನ್ನು ಬಯಸುವ ನಿರೀಕ್ಷೆ ಇದೆ. ಕಹಿಯಲ್ಲೂ ಸಿಹಿಯನ್ನು ಆನಂದಿಸುವ ಅಧ್ಯಾತ್ಮವಿದೆ. ಒಟ್ಟಿನಲ್ಲಿ ‘ಕರ್ತವ್ಯ’ಕ್ಕೆ ಎಚ್ಚರಿಕೆ ಇದೆ. ‘ತೊಡಗು’ ಎಂಬ ಸಂದೇಶವಿದೆ. ಅದೇನಿದ್ದರೂ ಕೃಷಿ ಆರಂಭಕ್ಕೆ ಇಗಾದಿ (ಯುಗಾದಿ ಅಥವಾ ಬಿಸು) ಎಂಬ ಅನುಸಂಧಾನವಿದ್ದಾಗ ಮಾತ್ರ. ಆದರೆ ಈ ಕಾಲದಲ್ಲೂ ‘ಇಗಾದಿ’ ನೆನಪಿದೆ, ಯುಗಾದಿ ಆಚರಿಸಲ್ಪಡುತ್ತಿದೆ, ‘ಬಿಸು ಕಣಿ’ಯ ದರ್ಶನ ಸಂಭ್ರಮದಿಂದ ನಡೆಯುತ್ತಿದೆ ಎನ್ನುವುದು ಮಾತ್ರ ಸಂತಸದ ಸಂಗತಿ. ವೈವಿಧ್ಯಮಯ ಕಲ್ಪನೆಯೊಂದಿಗೆ ಸೂಕ್ತ ಅನುಸಂಧಾನ ವಿಧಾನದಿಂದ ‘ಸೌರಯುಗಾದಿ’ ನೆರವೇರುವುದು. ಇದರ ಹಿನ್ನೆಲೆ ಕೃಷಿ ಆಧಾರಿತ ಬದುಕಿನ ನೋಟ.
* ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ (ನಮಸ್ಕರಿಸುವ) ಸಂದೇಶವಿದೆ. * ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. * ‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ. * ‘ವಿಷು’ ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ. * ಉತ್ತರದಿಂದ ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧ್ತವಿದೆ. * "ನಾಲೆರು ಮಾದಾವುನಿ, ಕೈಬಿತ್ತ್ ಪಾಡುನಿ" ಯುಗಾದಿಯ ಪರ್ವದಲ್ಲಿ ನಡೆಯುವ ಕೃಷಿ ಆರಂಭದ ಕಾರ್ಯ. * ಸೌರಯುಗಾದಿಯಲ್ಲಿ ಜಾನಪದ - ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮದ ಆಚರಣಾ ವಿಧಾನವಿದೆ. * ‘ಕಣಿ’ಯೊಂದಿಗೆ ಅಟ್ಟದ ಮೇಲಿನಲ್ಲಿರುವ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ(ಹೊಸತು)ವನ್ನು ಇಡುವುದು ರೂಢಿಯಾಗಿದೆ. * ಯುಗಾದಿ ಫಲ : ಸೇಮೆಯ ದೇವಾಲಯಗಳಲ್ಲಿ, ಗ್ರಾಮ ದೇವಸ್ಥಾನಗಳಲ್ಲಿ,ಐಗಳ ಮಠದಲ್ಲಿ, ಗೌರವಾನ್ವಿತರ ಮನೆಗಳಲ್ಲಿ "ಯುಗಾದಿಫಲ" ಓದುವ ಕ್ರಮವಿತ್ತು.ಅಲ್ಲಿಗೆ ಹಿರಿಯ ರೈತರು ತೆರಳಿ ತಮಗೆ ಬೇಕಾದ ಮಾಹಿತಿಗಳನ್ನುಪಡೆಯುತ್ತಿದ್ದರು. ಲೇಖನ : ಕೆ.ಎಲ್.ಕುಂಡಂತಾಯ
ಪಡುಬಿದ್ರಿ : ಗಾಂಜಾ ಸೇವನೆ - ಓರ್ವ ಪೋಲಿಸ್ ವಶಕ್ಕೆ

Posted On: 14-04-2023 10:03AM
ಪಡುಬಿದ್ರಿ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಠಾಣಾಧಿಕಾರಿ ಗಸ್ತಿನಲ್ಲಿದ್ದ ಸಮಯ ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ದಾವೂದ್ ಹಕೀಂ (24) ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ಮಣಿಪಾಲ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ದಾವೂದ್ ಹಕೀಂ ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದು ದೃಢಪಟ್ಟಿರುತ್ತದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಂದಿಕೂರು : ಆಚಾರ್ಯಪುರುಷ , ಯಕ್ಷಕಲಾ ಕುಸುಮ - ಗೌರವಾರ್ಪಣೆ, ಸಮ್ಮಾನ

Posted On: 13-04-2023 03:32PM
ನಂದಿಕೂರು : ಇಲ್ಲಿಯ ಭಾಗವತ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಸಮ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮವೂ 'ಮೋಹನ ರಾವ್ - ಜಯಲಕ್ಷ್ಮೀ ರಾವ್' ಸಂಸ್ಮರಣೆಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಭಾರತೀಯ ಋಷಿ ಪರಂಪರೆಯ ಸಾಂಸ್ಕೃತಿಕ ಆವರಣವನ್ನು ಮತ್ತೆ ಸ್ಥಾಪಿಸಿದ ನಾಲ್ಕು ವೇದ,ವೇದಾಂತ, ತರ್ಕ,ವ್ಯಾಕರಣ,ಪೌರೋಹಿತ್ಯ ,ಧರ್ಮಶಾಸ್ತ್ತಗಳಲ್ಲಿ ಉತ್ತೀರ್ಣರಾಗಿ ಭಾಗವತ,ಮಹಾಭಾರತ ಗ್ರಂಥಗಳನ್ನು ಅಧ್ಯಯನ ಮಾಡಿರುವ , ಶ್ರೀ ವಿದ್ಯಾಮಾನ್ಯರ್ತಿರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಜಿಲ್ಲೆಯ ಪ್ರಸಿದ್ಧ ವೈದಿಕ ವಿದ್ವಾಂಸರಿಂದ ಪಾಠಕೇಳಿದ, ಗುರುಮನೆ ಸ್ಥಾಪಿಸಿ ನಿಜ ಅರ್ಥದ ಗುರುವಾದ ವೇ.ಮೂ. ಪ.ಸು.ಲಕ್ಷ್ಮೀಶ ಆಚಾರ್ಯ ಅವರನ್ನು "ಆಚಾರ್ಯಪುರುಷ" ಎಂಬ ಉಪಾದಿಯೊಂದಿಗೆ ಗೌರವಿಸಲಾಯಿತು.
ಹವ್ಯಾಸಿ ಯಕ್ಷಗಾನ ಕಲಾವಿದ, ಕಲಾಪೋಷಕ, ಸಮಾಜ ಸೇವಕರಾಗಿ ಗುರುತಿಸಿಕೊಂಡು ಕರ್ನಿರೆಯಲ್ಲಿ ಯಕ್ಷಗುರುಗಳಾದ ಪು.ಶ್ರೀನಿವಾಸ ಭಟ್ಟ ಕಟೀಲು ಹಾಗೂ ಪುಚ್ಚೆಕೆರೆ ಕೃಷ್ಣ ಭಟ್ ಅವರ ಸಾರಥ್ಯದಲ್ಲಿ ಸಂಪನ್ನಗೊಂಡ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ತರಬೇತಿ ಪಡೆದು ಹಿಮ್ಮೇಳ, ನಾಟ್ಯ,ಅರ್ಥಗಾರಿಕೆಯ ಅಭ್ಯಾಸಮಾಡಿರುವ , ಸಂಘ ಸಂಸ್ಥೆಗಳ ಆಟ - ಕೂಟಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಶೈಲಿಯೊಂದಿಗೆ ಜನಪ್ರಿಯರಾಗಿದ್ದ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಅವರನ್ನು "ಯಕ್ಷಕಲಾ ಕುಸುಮ" ಎಂಬ ಉಪಾದಿಯೊಂದಿಗೆ ಸಮ್ಮಾನಿಸಲಾಯಿತು.
ಚತುರ್ವೇದಿ,ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವೇ.ಮೂ.ಪ್ರಭಾಕರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ನಂದಿಕೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧ್ವರಾಯ ಭಟ್ ಶುಭಹಾರೈಸಿದರು. ವೇ.ಮೂ.ವೆಂಕಟೇಶ ಪುರಾಣಿಕ ಅವರು ಆಶೀರ್ವದಿಸಿದರು. ನಿವೃತ್ತ ಉಪನ್ಯಾಸಕ, ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ ವೈ.ರಾಮಕೃಷ್ಣ ರಾವ್, ಪತ್ರಕರ್ತ ರಾಮಚಂದ್ರ ಆಚಾರ್ಯ,ವಿಶ್ವನಾಥ ಶೆಟ್ಟಿ ಕರ್ನಿರೆ, ಎ .ಪಿ. ಜೆನ್ನಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.
ಭಾಗವತ ಪ್ರತಿಷ್ಠಾನದ ನಾಗರಾಜ ರಾವ್ ಸ್ವಾಗತಿಸಿ, ವಂದಿಸಿದರು.ರಾಧಾಕೃಷ್ಣ ರಾವ್, ರಾಘವೇಂದ್ರ ರಾವ್, ಹರಿಕೃಷ್ಣ ರಾವ್, ಶೀಕಾಂತ ರಾವ್, ಅನುಪಮಾ ಪ್ರಭಾಕರ ಅಡಿಗ, ಅಮೃತಾ ಹರಿಕೃಷ್ಣ ರಾವ್ ಪಾಲ್ಗೊಂಡಿದ್ದರು. ವಿಜಯ ಶೆಟ್ಟಿ ಕೊಳಚೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗುರುದಕ್ಷಿಣೆ ತಾಳಮದ್ದಳೆ ನಡೆಯಿತು.
ರಾಜ್ಯ ವಿಧಾನಸಭೆ ಚುನಾವಣೆ : ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ

Posted On: 13-04-2023 03:24PM
ಕಾಪು : ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 10 ರಂದು ಮತದಾನ, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ. ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸಬಹುದು. ಆದ್ರೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಹೆಚ್ಚಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಶುಭ ದಿನ, ಘಳಿಗೆ ಇತ್ಯಾದಿಗಳನ್ನು ನೋಡುತ್ತಾರೆ. ಎಲ್ಲಾ ಪ್ರಕ್ರಿಯೆಯು ಮುಗಿದ ಬಳಿಕ ಪ್ರಚಾರದ ಭರಾಟೆಯೊಂದಿಗೆ ವಿಧಾನಸಭೆ ಚುನಾವಣೆ ರಂಗೇರಲಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಿವೆ.
ಕಾಪು : ನಾಗೇಶ್ ಸುವರ್ಣ ನಿಧನ

Posted On: 12-04-2023 09:46AM
ಕಾಪು : ಇಲ್ಲಿನ ಪುರಸಭೆಯ ಮಾಜಿ ಸದಸ್ಯ ನಾಗೇಶ್ ಸುವರ್ಣ (54) ಅವರು ಮಂಗಳವಾರ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು.
ಕಾಪು ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ಅವರು, ಕಾಪು ಗ್ರಾ.ಪಂ. ಸದಸ್ಯ, ಯುವವಾಹಿನಿ ಕಾಪು ಘಟಕದ ಸ್ಥಾಪಕಾಧ್ಯಕ್ಷ, ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಗರೋಡಿ ಸೇವಾ ಯುವ ಸಮಿತಿ ಅಧ್ಯಕ್ಷ, ಪಡು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ, ಕಾಪು ಬಿಲ್ಲವರ ಸಹಾಯಕ ಸಂಘದ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ನಾಗೇಶ್ ಸುವರ್ಣರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪಡುಬಿದ್ರಿ : ಚುನಾವಣೆಯ ಪ್ರಯುಕ್ತ ಪೋಲಿಸ್ ಪಥಸಂಚಲನ

Posted On: 11-04-2023 11:00PM
ಪಡುಬಿದ್ರಿ : ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಡುಬಿದ್ರಿಯಲ್ಲಿ ಶಿರ್ವ, ಕಾಪು, ಪಡುಬಿದ್ರಿ ಪೋಲಿಸರು ಹಾಗೂ ಸಿ ಆರ್ ಪಿ ತಂಡದಿಂದ ಇಂದು ಸಂಜೆ ಪಥಸಂಚಲನ ನಡೆಯಿತು.

ಪಥಸಂಚಲನವು ಕಾರ್ಕಳ ರಸ್ತೆಯಿಂದ ಮೊದಲ್ಗೊಂಡು ಪಡುಬಿದ್ರಿ ಪೇಟೆಯ ಮಾರ್ಗವಾಗಿ ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಹಿಂತಿರುಗಿದೆ.
ಈ ಸಂದರ್ಭ ಕಾರ್ಕಳ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ ಸಿ ಪುವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ ಹಾಗೂ ಮೂರು ಠಾಣೆಯ ಪೊಲೀಸರು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಶ್ಪಾಲ್ ಎ. ಸುವರ್ಣ ಆಯ್ಕೆ

Posted On: 11-04-2023 10:31PM
ಉಡುಪಿ : ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಯಶ್ಪಾಲ್ ಎ. ಸುವರ್ಣರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿದೆ.
ಉಡುಪಿ ನಗರಸಭೆಯಲ್ಲಿ 3 ಬಾರಿ ಅಜ್ಜರಕಾಡು ವಾರ್ಡಿನಿಂದ ಸದಸ್ಯರಾಗಿ ಸೇವೆ, ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ದುಡಿದ ಅನುಭವ, ರಾಜ್ಯ ಬಿಜೆಪಿ ಯುವ ಮೋರ್ಚ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದು, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಬಿಜೆಪಿ ಸಹಕಾರಿ ಹಾಗೂ ಮೀನುಗಾರಿಕಾ ಪ್ರಕೋಷ್ಟದ ಸದಸ್ಯರಾಗಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕರಾಗಿ, ಪ್ರಸ್ತುತ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅನುಭವದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಇವರ ಆಯ್ಕೆಯನ್ನು ಘೋಷಿಸಿದರು.
ಕಾಪು : ಬಿಜೆಪಿಯಿಂದ ಗುರ್ಮೆ ಸುರೇಶ್ ಶೆಟ್ಟಿ ಅಭ್ಯರ್ಥಿಯಾಗಿ ಆಯ್ಕೆ

Posted On: 11-04-2023 09:48PM
ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಮಾಜ ಸೇವಕ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.