Updated News From Kaup

ಕಾರ್ಕಳ : ಕುಲಾಲ ಸಂಘ ಬೋಳ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ - ವಾರ್ಷಿಕ ಮಹಾಸಭೆ

Thumbnail
Posted On: 05 Jun 2023, 06:19 PM

ಕಾರ್ಕಳ : ನೂರಾರು ಕುಟುಂಬಗಳ ಸದಸ್ಯರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡುವಾಗ ಒಮ್ಮತವೇರ್ಪಡದಿರುವುದು ಸಹಜ. ಆದರೆ ಉತ್ತಮ ಕಾರ್ಯ ಸಿದ್ಧಿಯಾಗಬೇಕಾದರೆ, ಇಂತಹ ಭಿನ್ನಾಭಿಪ್ರಾಯಗಳನ್ನು ಮೂಲದಲ್ಲಿಯೇ ಸರಿಪಡಿಸಿಕೊಂಡು ಏಕತೆಯಿಂದಿದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೊಸ್ಮಾರು ಕುಲಾಲ ಸಮಾಜ ಕಲ್ಯಾಣ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್ ಅಭಿಪ್ರಾಯಪಟ್ಟರು‌. ಅವರು ಕುಲಾಲ ಸಂಘ ಬೋಳದ ವತಿಯಿಂದ ಜೂ.4ರಂದು ನಡೆದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಂಭತ್ತನೇ ವರ್ಷದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೈವ ದೇವರ ಆರಾಧನೆ ಮಾತ್ರವಲ್ಲದೆ ಸೇವೆಯಲ್ಲಿಯೂ ಕುಲಾಲ ಸಮಾಜದ ಬಂಧುಗಳ ಪಾತ್ರ ಮಹತ್ವವಾದುದು. ಶ್ರದ್ಧಾ ಭಕ್ತಿಯಿಂದ, ಪ್ರಾಮಾಣಿಕತೆಯಿಂದ ದುಡಿಯುವ ಇಂತಹ ಸೇವಕರನ್ನು ಗುರುತಿಸಿ,ಗೌರವಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕೆಂದರು. ಸನ್ಮಾನ : ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 94.33% ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಚಿಂತನ್ ಕುಲಾಲ್ ರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕುಲಾಲ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಮಕ್ಕಳಿಗೆ ವಸಂತಿ ಮಹಾಬಲ ಮೂಲ್ಯರ ವತಿಯಿಂದ ಪುಸ್ತಕ ವಿತರಿಸಲಾಯಿತು. ಸಂಘದ ಅಧ್ಯಕ್ಷ ಗಣೇಶ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಮಹಾಬಲ ಮೂಲ್ಯ, ಗೌರವಾಧ್ಯಕ್ಷ ವಸಂತ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪವನ್ ಕುಮಾರ್ ಸ್ವಾಗತಿಸಿ, ವರದಿ ವಾಚಿಸಿದರು. ಶ್ರೀಶಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಕುಲಾಲ್ ವಂದಿಸಿದರು.

ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ನಲ್ಲಿ ವಿಶ್ವ ಪರಿಸರ ದಿನಾಚರಣೆ

Thumbnail
Posted On: 05 Jun 2023, 06:04 PM

ಕಾರ್ಕಳ : ಇನ್ನಾ ಗ್ರಾಮ ಪಂಚಾಯತ್ ಮತ್ತು ಕಾರ್ಕಳ, ಮೂಡುಬಿದ್ರೆ ತಾಲೂಕು ಅರಣ್ಯ ಇಲಾಖೆಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯು ಪಂಚಾಯತನ ಗೋಪಾಲ್ ಭಂಡಾರಿ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ಕುಶ ಆರ್ ಮೂಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯಾಧಿಕಾರಿ ನಾಗೇಶ್ ಎನ್ ಬಿಲ್ಲವ ಅವರು ಪರಿಸರ ಸರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರದ ಪ್ರೀತಿ ಬಾಲ್ಯದಿಂದಲೂ ಇರಬೇಕು. ಹಸಿರು ಮನೆ, ಹಸಿರು ಶಾಲೆ, ಹಸಿರು ಗ್ರಾಮಗಳು ಇಂದು ನಮ್ಮ ಅಗತ್ಯವಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇನ್ನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಅವರು ಪರಿಸರ ದಿನದ ಸಂದೇಶವನ್ನು ನೀಡಿ ಮಾಲಿನ್ಯವನ್ನು ಉಂಟುಮಾಡುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಅರಿವು ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ರೈತರಿಗೆ, ಶಕ್ತಿ ಸಂಜೀವಿನಿ ಒಕ್ಕೂಟದ ಎಲ್ಲ ಸದಸ್ಯರಿಗೆ, ಶಾಲೆಯ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಹಸಿರು ಗಿಡಗಳನ್ನು ಅರಣ್ಯ ಇಲಾಖೆಯ ವತಿಯಿಂದ ವಿತರಣೆ ಮಾಡಲಾಯಿತು. ಪರಿಸರದ ಬಗ್ಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ, ಪಂಚಾಯತ್ ಉಪಾಧ್ಯಕ್ಷೆ ಸರಿತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಕಾರ್ಕಳ ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾಲಕ್ಷ್ಮಿ ಪಂಚಾಯತ್ ಸದಸ್ಯರಾದ ವಿಮಲ ಚಂದ್ರಹಾಸ ಶೆಟ್ಟಿ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಟಪಾಡಿ : ಪಡುಕುತ್ಯಾರು ಆನೆಗುಂದಿ ಶ್ರೀ ಗಳ ಚಾತುರ್ಮಾಸ್ಯ ಜು 5ರಿಂದ ಸೆ.29 ; ಪೂರ್ವಭಾವಿ ಕ್ಷೇತ್ರ ಸಂದರ್ಶನ ಜೂ8ರಿಂದ 29

Thumbnail
Posted On: 05 Jun 2023, 05:56 PM

ಕಟಪಾಡಿ : ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಶೋಭಕ್ಕೃತ್ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು 2023 ಜುಲೈ 3 ರಿಂದ ಸೆಪ್ಟಂಬರ್ 29 ರ ವರೇಗೆ ಪಡು ಕುತ್ಯಾರಿನಲ್ಲಿ ನಡೆಯಲಿದೆ. ವರ್ಷಂಪ್ರತಿ ನಡೆಯುವ ಚಾತುರ್ಮಾಸ್ಯ ಪೂರ್ವಭಾವೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇಗುಲಗಳಲ್ಲಿ 2023 ಜೂನ್ 8 ರಿಂದ 29 ರವರೆಗೆ ಅಂಕೋಲಾ, ಕೊಲಕಾಡಿ, ಪಡುಪಣಂಬೂರು, ಹಳೆಯಂಗಡಿ, ಮಂಗಳೂರು, ಮಧೂರು, ಆರಿಕ್ಕಾಡಿ ಕಾರ್ಳೆ,ಬಂಗ್ರ ಮಂಜೇಶ್ವರ, ಕೋಟೆಕಾರು, ಕಾರ್ಕಳ, ಮೂಡಬಿದ್ರೆ, ಗೋಕರ್ಣ, ಭಟ್ಕಳ, ಬಾರ್ಕೂರು, ಉಪ್ರಳ್ಳಿ, ಕಟಪಾಡಿ, ಕಾಪು ಇಲ್ಲಿ ಕ್ಷೇತ್ರ ಸಂದರ್ಶನವು ನಡೆಯಲಿದೆ ಎಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಚ್ಚಿಲ : ಅಪಘಾತಕ್ಕೀಡಾಗಿ ಸಾವಾದ ವಾನರದ ಅಂತ್ಯ ಸಂಸ್ಕಾರ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Thumbnail
Posted On: 04 Jun 2023, 08:35 PM

ಉಚ್ಚಿಲ : ರಾಷ್ಟೀಯ ಹೆದ್ದಾರಿ 66ರ ಉಚ್ಚಿಲ ನಾರಾಯಣಗುರು ರಸ್ತೆ ಬಳಿ ರಸ್ತೆ ಅಪಘಾತದಲ್ಲಿ ಅಸುನೀಗಿದ ವಾನರನಿಗೆ ಭಜರಂಗದಳ ಹಾಗೂ ವಿಶ್ವ ಹಿಂದು ಪರಿಷದ್ ಕಾರ್ಯಕರ್ತರಿಂದ ಭಕ್ತಿ ಶ್ರದ್ಧಾ ಪೂರ್ವಕ ಅಂತ್ಯ ಸಂಸ್ಕಾರ ನಡೆಸಿದ ಘಟನೆಯು ಉಚ್ಚಿಲದಲ್ಲಿ ಶನಿವಾರ ನಡೆದಿದೆ. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟೀಯ ಹೆದ್ದಾರಿ 66ರಲ್ಲಿ ಕಾರೊಂದು ಡಿಕ್ಕಿ ಹೊಡೆದು ವಾನರ ಗಾಯಗೊಂಡಿತ್ತು. ಕೂಡಲೇ ಕಾರ್ಯಕರ್ತರು ಪಶು ಚಿಕಿತ್ಸಾಲಯಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪ್ರಯತ್ನ ಪಟ್ಟಿದ್ದಾರೆ ಚಿಕಿತ್ಸೆಗೆ ಸ್ಪಂದಿಸದ ವಾನರ ಅಸು ನೀಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಸಾವನ್ನು ಧೃಡಪಡಿಸಿದ್ದರು. ಬಳಿಕ ಪುರೋಹಿತರ ಮಾರ್ಗದರ್ಶನದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಮಹೇಶ್, ಸಂದೀಪ್, ವಿಶು, ಮನೋಜ್ ಸೇರಿ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿದರು.

ಪುಸ್ತಕದಲ್ಲಿದ್ದ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗುವುದು - ನ್ಯಾಯವಾದಿ ಎಂ ಗುರುಪ್ರಸಾದ್ ಮಂಡ್ಯ

Thumbnail
Posted On: 04 Jun 2023, 06:04 PM

ಮಂಗಳೂರು : ಕರ್ನಾಟಕ ಸಾಮಾಜಿಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಬರಹ ಪ್ರಕಾಶನ ಮಂಗಳೂರು ಸಾರಥ್ಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಜೂನ್ 03 ರಂದು ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯವಾದಿ ಗುರುಪ್ರಸಾದ್ ಮಾತನಾಡಿ ಪುಸ್ತಕದಲ್ಲಿರುವ ವಿಚಾರಗಳು ಮಸ್ತಕಕ್ಕೆ ಹೋದರೆ ಮಸ್ತಕವೇ ಒಂದು ಪುಸ್ತಕವಾಗಿ ರೂಪುಗೊಳ್ಳುತ್ತದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಇವನಾರವ ಇವನಾರವ ಎಂದೆನಿಸದೆ , ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತಾ ಜಗತ್ತಿನಲ್ಲಿ ಜಾತಿ ಧರ್ಮ ಮೇಲು ಕೀಳು ಎಂಬ ಭಾವನೆ ನಮ್ಮಲ್ಲಿರದೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಇರಬೇಕೆಂದು ಹೇಳಿದ್ದರು. ಅವರು ತಾಳೆಗರಿಯಲ್ಲಿ 900 ,ವರ್ಷಗಳ ಹಿಂದೆ ಬರೆದ ಎಷ್ಟೊಂದು ವಚನಗಳು ಇಂದು ನಮಗೆ ದಾರಿದೀಪವಾಗಿದೆ. ಆದುದರಿಂದ ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು ಎಂದರು. ನಾವು ಯಾವುದೇ ಶುಭ ಸಮಾರಂಭಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಾರ ತುರಾಯಿ ನೀಡುವ ಬದಲು ಉತ್ತಮ ಪುಸ್ತಕಗಳನ್ನು ನೀಡಬೇಕು. ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿ ಜ್ಞಾನ ಸಂಪಾದನೆಯಾಗುತ್ತದೆ ಎಂದರು. ಆ ಕಾಲದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಒಂದು ಪಾರ್ಲಿಮೆಂಟನ್ನೇ ರಚಿಸಿ ಮಹಿಳೆಯರು ಮನೆಯಲ್ಲಿ ಬಂಧಿಯಾಗಿರದೇ ಸ್ವತಂತ್ರವಾಗಿ ಇರಬೇಕೆಂದು ಬಯಸಿದ್ದರು. ಇದರ ದ್ಯೊತಕವಾಗಿ ಇಂದು ರಾಣಿ ಪುಷ್ಪಲತಾ ದೇವಿಯಂತವರು ಒಂದು ಸಂಸ್ಥೆಯನ್ನು ಸ್ಥಾಪಿಸಿ ಅಧ್ಯಕ್ಷರಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಯಿತು ಎಂದು ಹೇಳಿದರು. ಆ ಬಳಿಕ ರಾಣಿ ಪುಷ್ಪಲತಾ ದೇವಿಯವರ ವರ್ಣರಂಜಿತ ಚಿತ್ರ ಕವನಸಂಕಲನ "ಭೂರಮೆಯೊಡಲು" ಹಾಗೂ ಡಾ. ಆನಂದ ಬಂಜನ್ ರವರ "ತುಳುನಾಡ ವೈಭವ" ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತ ದೇಶದಾದ್ಯಂತ ಕನ್ನಡಕ್ಕಾಗಿ ದುಡಿದ ಸುಮಾರು 3500 ಪ್ರಮುಖರನ್ನು ಸನ್ಮಾನಿಸಿದ್ದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ| ಹೆಚ್ ಎಲ್ ಎನ್ ರಾವ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ| ಆನಂದ್ ಬಂಜನ್, ಕವಿಗೋಷ್ಟಿ ಅಧ್ಯಕ್ಷ ಡಾ| ಫ್ರಾನ್ಸಿಸ್ ಕ್ಸೇವಿಯರ್, NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕವಿಗೋಷ್ಠಿ ಸಂಚಾಲಕಿ ಸುಧಾ ಕಂದಕೂರ ಉಪಸ್ಥಿತರಿದ್ದರು. ರಾಜ್ ಸಂಪಾಜೆ ಮತ್ತು ರೇಖಾ ಸುರೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ತಿಕ್ ಡಾನ್ಸ್ ಅಕಾಡೆಮಿ ಬೆಂಗಳೂರು ಮತ್ತು ಶ್ರೀಮತಿ ಧನ್ಯ ಸಂತೋಷ್ ಸಾರಥ್ಯದ ಕೈರಾಳಿ ನಾಟ್ಯಾಲಯ ಹಾಗೂ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕವಿಗಳಿಗೆ ಮತ್ತು ಕಲಾವಿದರಿಗೆ ಪ್ರಶಂಸನಾ ಪತ್ರ ಮತ್ತು ಪುಸ್ತಕಗಳನ್ನು ನೀಡಲಾಯಿತು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು, ಶಿರ್ಡಿ ಸಾಯಿಬಾಬಾ ಕಾಲೇಜು ವಿದ್ಯಾರ್ಥಿಗಳಿಂದ ಆಗುಂಬೆ ಘಾಟ್ ಸ್ವಚ್ಛತೆ

Thumbnail
Posted On: 04 Jun 2023, 03:40 PM

ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಮತ್ತು ಶಿರ್ಡಿ ಸಾಯಿಬಾಬ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಆಗುಂಬೆಯ ಘಾಟಿಯ ಇಕ್ಕೆಲಗಳನ್ನು ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಈ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಅನನ್ಯ ಪ್ರಾಣಿ, ಪಕ್ಷಿ ಪ್ರಬೇಧಗಳಿವೆ. ನಾವು ಮಾಡುವ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಜೀವನ ದುಸ್ತರವಾಗುವಂತಾಗಿದೆ. ಆದ್ದರಿಂದ ನಾವು ಪ್ರಕೃತಿಯನ್ನು ಹಾಳುಗೆಡಹುವ ಕಾರ್ಯ ಬಿಟ್ಟು ಸಾಧ್ಯವಾದಷ್ಟು ಪರಿಸರದ ಸ್ವಚ್ಛತೆಗೆ ಆದ್ಯತೆಯಾಗುವಂತೆ ಬದುಕಬೇಕಾಗಿದೆ ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಹೇಳಿದರು. ನಾವು ಶಿಕ್ಷಿತರಾದರೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೇವೆ. ನಾವು ಬಳಸಿದ ತ್ಯಾಜ್ಯ ವಸ್ತುಗಳನ್ನು, ಕಸ, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಜವಾಬ್ದಾರಿಯಿಲ್ಲದೇ ಕಂಡಲ್ಲಿ ಎಸೆಯುತ್ತಿದ್ದೇವೆ. ಅದು ಕಾಡಿನ ಪರಿಸರವನ್ನು ಮಾಲಿನ್ಯಗೊಳಿಸಿ ಅಲ್ಲಿನ ಪ್ರಾಣಿಪಕ್ಷಿಗಳಿಗೂ ತೊಂದರೆಯುಂಟುಮಾಡುತ್ತಿದೆ. ಆದ್ದರಿಂದ ಪ್ರವಾಸಿ ಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸ್ವಂತ ಕಾಳಜಿಯಿಂದ ನಿರ್ಮಲವಾಗಿಡುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದು ಎನ್‌ ಎಸ್ ಎಸ್‌ ನ ಯೋಜನಾಧಿಕಾರಿಯಾದ ಶ್ರೀ ಉಮೇಶ್‌ ಕರೆ ನೀಡಿದರು. ಶಿರ್ಡಿ ಡಿಗ್ರಿ ಕಾಲೇಜಿನ ಆಶೀಶ್‌ ಶೆಟ್ಟಿ ಮಾತನಾಡಿ ಪ್ರತಿಯೊಬ್ಬರಿಗೂ ಸಾಮಾಜಿಕ ಪ್ರಜ್ಞೆಯಿರಬೇಕು. ಕೊಳಕು ಮಾಡುವ ಸಂಸ್ಕೃತಿ ನಿಲ್ಲಬೇಕು. ಎಲ್ಲರೂ ಬದುಕಿ ಬಾಳುವ ವಾತಾವರಣ ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕಾದ ಅನಿರ್ವಾಯತೆಯಿದೆ. ಪರಿಸರ ಪ್ರೀತಿ ಬೆಳೆಸೋಣ ಎಂದರು. ಈ ಸಂದರ್ಭದಲ್ಲಿ ಆಗುಂಬೆಯ ಘಾಟಿಯ ಆರಂಭದಿಂದ ಸೋಮೇಶ್ವರದವರೆಗೆ ಕ್ರಿಯೇಟಿವ್‌ ಕಾಲೇಜು ಹಾಗೂ ಶಿರ್ಡಿ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನೇರವೇರಿಸಿದರು. ಉಪನ್ಯಾಸಕರಾದ ಚಂದ್ರಕಾಂತ ಆಚಾರ್ಯ, ಶ್ರೀಮತಿ ಶ್ರೀನಿಧಿ, ಪ್ರಿಯಾಂಕ, ತಿಪ್ಪೇಸ್ವಾಮಿ, ಶಶಿಧರ ಭಟ್‌ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಹರೀಶ್‌, ಚ್ರೈತ್ರಾ, ಆರ್ ಎಫ್ ಒ ಗೌರವ್‌ ಹಾಗೂ ಅರಣ್ಯಾಧಿಕಾರಿಗಳು ಮತ್ತು ಶಿರ್ಡಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿದ್ದರು.

ಕಾಪು : ಶ್ರೀ ದೇವಿ ಫ್ರೆಂಡ್ಸ್ ಕಾಪು ಮಲ್ಲಾರ್ ರಾಣ್ಯಕೇರಿ - ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಸಮಾರಂಭ

Thumbnail
Posted On: 04 Jun 2023, 03:30 PM

ಕಾಪು : ಶ್ರೀ ದೇವಿ ಫ್ರೆಂಡ್ಸ್ ಕಾಪು ಮಲ್ಲಾರ್ - ರಾಣ್ಯಕೇರಿ ಇದರ ವತಿಯಿಂದ ರಾಣೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ಜರಗಿತು. ಕಾರ್ಯಕ್ರಮವನ್ನು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭ ರಾಣೆ ಸಮಾಜದ ಪ್ರಮುಖರಾದ ಜಯ ರಾಣ್ಯ, ಬಿ ಕೆ ಶ್ರೀನಿವಾಸ್, ರವೀಂದ್ರ ಮಲ್ಲಾರು, ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಮಾಜಿ ಗುರಿಕಾರ ಶೇಖರ ರಾಣ್ಯ, ದರ್ಶನ ಪಾತ್ರಿ ನಾರಾಯಣ, ಅರ್ಚಕರಾದ ಸೋಮನಾಥ, ಮಹಿಳಾ ಮಂಡಳಿ ಕಾರ್ಯದರ್ಶಿ ಗೀತಾ, ಶ್ರೀ ದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಶರತ್ ಎಸ್, ನಡು ಮಾರಿಯಮ್ಮ ದೇವಸ್ಥಾನದ ಗುರಿಕಾರರಾದ ಬಾಬು, ಶ್ರೀ ದೇವಿ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂದೇಶ್ ಪ್ರಾರ್ಥಿಸಿದರು. ಪ್ರಕಾಶ್ ಎಸ್ ನಿರೂಪಿಸಿದರು.

ಭರವಸೆ ನೀಡಿದ‌ 5 ಗ್ಯಾರಂಟಿ ಜಾರಿಗೆ ; ನುಡಿದಂತೆ ನಡೆದ ಕಾಂಗ್ರೆಸ್ ಸರಕಾರ - ರಮೀಜ್ ಹುಸೇನ್

Thumbnail
Posted On: 03 Jun 2023, 06:36 PM

ಪಡುಬಿದ್ರಿ : ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯ ಮಾತನ್ನು ಈಡೇರಿಸಿದ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರವರಿಗೆ ಅಭಿನಂದನೆಗಳು ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ತಿಳಿಸಿದ್ದಾರೆ. ಗ್ಯಾರಂಟಿ ಜಾರಿಗಳನ್ನು ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ ಗೊಳಿಸಿದ್ದಲ್ಲದೇ ಸಮಾನ್ಯ ಜನರಿಗೆ ಆಸರೆಯನ್ನು ನೀಡಿದೆ. ಜನ ಸಮಾನ್ಯರು ಬೆಲೆ ಏರಿಕೆ ಹಾಗು ಯುವ ಜನತೆ ನಿರುದ್ಯೋಗದ ಸಮಸ್ಯೆಯಿಂದ ತತ್ತರಿಸಿರುವ‌ ಈ ಸಂದರ್ಭದಲ್ಲಿ ಜನರ ಬದುಕಿಗೆ ಅಸರೆ ನೀಡಿದ‌ ಕಾಂಗ್ರೆಸ್ ‌ಸರಕಾರದ ಈ ಸಾಧನೆ ನಿಜವಾಗಿಯು ಶಾಘ್ಲನೀಯ. ಜನರ ಕಷ್ಟಕ್ಕೆ ಸ್ಪಂದಿಸುವ ‌ಸರಕಾರ ಎಂಬುದನ್ನು ಕಾಂಗ್ರೆಸ್ ಪಕ್ಷದ ‌ಸರಕಾರ ಸಾಬೀತು ಪಡಿಸಿದೆ ಎಂದು ರಮೀಜ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಟಪಾಡಿ : ತ್ರಿಶಾ ವಿದ್ಯಾ ಕಾಲೇಜು - ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ನಾಯಕತ್ವದ ಗುಣ, ಪ್ರೇರಣೆಯ ಕುರಿತ ಕಾರ್ಯಾಗಾರ

Thumbnail
Posted On: 03 Jun 2023, 06:30 PM

ಕಟಪಾಡಿ : ಮೇಜರ್ ರಾಧಾಕೃಷ್ಣ ಅವರಿಂದ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮ, ನಾಯಕತ್ವದ ಗುಣ ಮತ್ತು ಪ್ರೇರಣೆಯ ಕುರಿತಾದ ಕಾರ್ಯಾಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಯುವ ಜನಾಂಗದಲ್ಲಿ ಶಿಸ್ತು ಬಹಳ ಮುಖ್ಯ. ಸತತ ಪ್ರಯತ್ನದಿಂದ ಜೀವನದಲ್ಲಿ ಗೆಲುವು ಸಾಧ್ಯ ಎನ್ನುವುದನ್ನ ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಂದುರೀತಿ, ಉಪನ್ಯಾಸಕ‌ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಡುಪಿ : ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ

Thumbnail
Posted On: 03 Jun 2023, 05:20 PM

ಉಡುಪಿ : ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಶಾಸಕರ ಕಚೇರಿ ಉಡುಪಿಯಲ್ಲಿ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮತ್ತು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ರೋಗಿಗಳಿಗೆ ಸದ್ರಿ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಸಹಕಾರ ಹಾಗೂ ಸಲಹೆಗಳನ್ನು ವೈದ್ಯಾಧಿಕಾರಿಗಳು ನೀಡಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವೈದ್ಯಾಧಿಕಾರಿಯವರು ಸ್ಥಳೀಯ ಸಾರ್ವಜನಿಕರ ಹಾಗೂ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಔಷಧೋಪಚಾರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ನಾಗಭೂಷಣ್ ಉಡುಪ, ತಾಲ್ಲೂಕು ವೈದ್ಯಾಧಿಕಾರಿಗಳಾದ ವಾಸುದೇವ್ ಉಡುಪ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.