Updated News From Kaup

ಹೆಜಮಾಡಿ : ಬ್ರಹ್ಮಸ್ಥಾನದ ಬಳಿ ಬೆಂಕಿ ಅವಘಡ

Posted On: 03-01-2023 06:27PM

ಹೆಜಮಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ 5ನೇ ವಾರ್ಡ್ ಬ್ರಹ್ಮಸ್ಥಾನದ ದ್ವಾರದ ಬಳಿ ಸುಮಾರು ೫ ಎಕರೆ ಬಯಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗಲಿ ಸ್ಥಳೀಯರು , ಯುಪಿಸಿಎಲ್ ಅಗ್ನಿಶಾಮಕ ದಳದಿಂದ ಸಕಾಲಿಕ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಯಿತು.

ಪಕ್ಕದಲ್ಲಿ ಯಾವುದೇ ಮನೆ ಇಲ್ಲದ ಕಾರಣ ಯಾವುದೇ ಅವಘಡ ಸಂಭವಿಸಿಲ್ಲ.

ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಕುಮಾರ್ ಮಟ್ಟು, ಸಾಮಾಜಿಕ ಕಾರ್ಯಕರ್ತರಾದ ನಿತಿನ್ ಕುಮಾರ್ ಹೆಜಮಾಡಿ ಕೋಡಿ, ಅನಿಲ್ ಎಚ್ ಕುಂದರ್, ಕೃಷ್ಣರಾಜ ಭಟ್, ನವೀನ್ ಕುಮಾರ್, ಅಗ್ನಿ ಶಾಮಕ ದಳದ ಉಪ ಅಧಿಕಾರಿ ಶರಣ್ ಕುಮಾರ್ ಮಟ್ಟು, ಸಿಬ್ಬಂದಿಗಳಾದ ಶರಣಪ್ಪ ಮಾದಾರ್, ಲತೇಶ್ ಕರ್ಕೆರ, ಜೋಯಲ್ ಪ್ರಮೋದ್, ಗೌರವ್ ಪಾಂಡೆ ಮತ್ತು ಸ್ಥಳೀಯ ನಾಗರಿಕರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.

ಮಜೂರು : ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಲಶಾಭಿಷೇಕ, ನೇಮೋತ್ಸವ ಸಂಪನ್ನ

Posted On: 03-01-2023 02:06PM

ಕಾಪು : ಮಜೂರು ನಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಸ್ಥಾನದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಗಳ ಪುನಃ ಪ್ರತಿಷ್ಠೆಯು ಶ್ರೀನಿವಾಸ ಭಟ್ ಮಜೂರು ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಆ ಪ್ರಯುಕ್ತ ಬೆಳಗ್ಗೆ ಪ್ರತಿಷ್ಟಾ ಹೋಮ, ಪ್ರತಿಷ್ಠೆ, ದೈವದರ್ಶನ ಮತ್ತು ಕಲಶಾಭಿಷೇಕ ನಡೆದು ಬಳಿಕ ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಬಬ್ಬು ಸ್ವಾಮಿ, ತನ್ನಿಮಾನಿಗ ಹಾಗೂ ಪರಿವಾರ ದೈವಗಳ ನೇಮೋತ್ಸವ ವಿಜೃಂಭಣೆ ಯಿಂದ ನೆರವೇರಿತು.

ಸಾವಿರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಗಂಧಪ್ರಸಾಧ ಸ್ವೀಕರಿಸಿದರು.

ಒಬಿಸಿ ಕಮಲ ಟ್ರೋಫಿ - 2023 ;ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 03-01-2023 10:40AM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ಮಂಡಲ ಇದರ ವತಿಯಿಂದ ಜನವರಿ ತಿಂಗಳ 14 ರಂದು ಶಿರ್ವದ ಮಟ್ಟಾರುವಿನಲ್ಲಿ ನಡೆಯಲಿರುವ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಕಾಪು ಮಂಡಲ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ, ಹಿಂದುಳಿದ ಮೋರ್ಚಾ ಕಾಪು ಮಂಡಲದ ಪದಾಧಿಕಾರಿಗಳು, ಪಕ್ಷದ ನಾಯಕರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪಡುಬಿದ್ರಿ : ಕುಣಿತ ಭಜನಾ ಸ್ಪರ್ಧೆ - ಕುಣಿದು ಭಜಿಸಿರೋ - 2023 ಸಂಪನ್ನ

Posted On: 03-01-2023 10:33AM

ಪಡುಬಿದ್ರಿ : ಇಲ್ಲಿನ ಕಂಚಿನಡ್ಕದ ಶ್ರೀಸತ್ಯದೇವಿ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 28ನೇ ವರ್ಷದ ಮಹಾಪೂಜೆಯ ಅಂಗವಾಗಿ ಆಯೋಜಿಸಲಾದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ "ಕುಣಿದು ಭಜಿಸಿರೋ - 2023" ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ನಾಗಪಾತ್ರಿ ಸುರೇಶ್ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ.ಆರ್.ಮೆಂಡನ್, ಸುದರ್ಶನ್ ಎಂ ಮೂಡುಬಿದಿರೆ, ಗೀತಾಂಜಲಿ ಸುವರ್ಣ, ಶ್ರೀಕಾಂತ್ ನಾಯಕ್, ರವಿ ಶೆಟ್ಟಿ ಪಾದೆಬೆಟ್ಟು, ಗಾಯತ್ರಿ ಪ್ರಭು, ಸೌಮ್ಯಲತಾ ಶೆಟ್ಟಿ, ಕು.ಯಶೋದ, ಧಾರ್ಮಿಕ ಮುಖಂಡರಾದ ವಿಷ್ಣುಮೂರ್ತಿ ಆಚಾರ್ಯ, ಪ್ರಶಾಂತ್ ಶೆಣೈ, ಬಾಬು ಕೋಟ್ಯಾನ್, ಭಾಸ್ಕರ್ ಪಂಬದ, ಸುಧಾಕರ ಪಾತ್ರಿ, ರಾಜೇಂದ್ರ ಶೆಣೈ, ಶಶಿಧರ್ ಹೆಗ್ಡೆ ಅಡ್ವೆ, ಯುವರಾಜ್ ಕುಲಾಲ್, ಚಂದ್ರಹಾಸ ಭಂಡಾರಿ, ರಾಜೇಶ್ ಕೋಟ್ಯಾನ್, ರಾಜೇಶ್ ಉಚ್ಚಿಲ ಆಗಮಿಸಿ ಶುಭಹಾರೈಸಿದರು.

ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಕೇಮಾರು ಶ್ರೀಗಳಾದ ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಿಥುನ್.ಆರ್.ಹೆಗ್ಡೆ, ಯಶಪಾಲ್.ಎ.ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಶ್ರೀಶ ನಾಯಕ್ ಪೆರ್ಣಂಕಿಲ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನಚಂದ್ರ.ಜೆ.ಶೆಟ್ಟಿ, ನವೀನ್ ಶೆಟ್ಟಿ, ಜಯಕರ್ ಐರೋಡಿ, ಗೀತಾ ಅರುಣ್, ಕೃಷ್ಣ ಗುರುಸ್ವಾಮಿ, ಶಿವಪ್ಪ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.

ಕುಣಿತ ಭಜನಾ ಸ್ಪರ್ಧೆಯಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದು,ಪ್ರಥಮ ಬಹುಮಾನವನ್ನು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಿರಿಬೈಲ್ ಕಡ್ತಲ, ದ್ವಿತೀಯ ಬಹುಮಾನವನ್ನು ಬಾಲ ವಿಕಾಸ ಭಜನಾ ಮಂಡಳಿ ಹೊಸಬೆಟ್ಟು, ತೃತೀಯ ಬಹುಮಾನ - ಆಂಜನೇಯ ಭಜನಾ ಮಂಡಳಿ ಸಾಣೂರು ಕಾರ್ಕಳ ಹಾಗೂ ಸಮಾಧಾನಕರ ಬಹುಮಾನವನ್ನು ಶ್ರೀ ದುರ್ಗಾ ಭಜನಾ ಮಂಡಳಿ ಮುದರಂಗಡಿ ಮತ್ತು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳ ಉಜಿರೆ ಪಡೆದುಕೊಂಡರು.

ಗೆಳೆಯರ ಬಳಗ ಬಂಗ್ಲೆ ಮೈದಾನ ಕಾಪು : 31ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Posted On: 03-01-2023 10:24AM

ಕಾಪು : ಗೆಳೆಯರ ಬಳಗ ಬಂಗ್ಲೆ ಮೈದಾನ ಕಾಪು ಇದರ ವತಿಯಿಂದ 31ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಕಾಪು ಬಂಗ್ಲೆ ಮೈದಾನದಲ್ಲಿ ವೇದಮೂರ್ತಿ ಮಾನಿಯುರು ಮುಖ್ಯಪ್ರಾಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ 2022ನೇ ವರ್ಷದಲ್ಲಿ ಜಾನಪದ ಕಲಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಪು ತಾಲೂಕಿನ ಮೂಳೂರು ಗ್ರಾಮದ ದೈವ ನರ್ತಕ ಗುಡ್ಡ ಪಾಣಾರರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಬಳಗದ ಅಧ್ಯಕ್ಷರಾದ ಜಯ ವೈ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಚ್ಚೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಘುರಾಮ್ ನಾಯಕ್, ಕಾಪು ಪುರಸಭಾ ಬೀಡು ಬದಿ ವಾರ್ಡಿನ ಸದಸ್ಯರಾದ ಅನಿಲ್ ಕುಮಾರ್ ಮತ್ತು ಪೂಜಾ, ಅರ್ಚಕರಾದ ಮಾಣಿಯೂರು ಸೂರ್ಯಕಾಂತ ಆಚಾರ್ಯ ಉಪಸ್ಥಿತರಿದ್ದರು.

ಬಳಗದ ಸಂಚಾಲಕ ರವೀಂದ್ರ ಎಂ ಸ್ವಾಗತಿಸಿ ವಂದಿಸಿದರು. ತದನಂತರ ಶ್ರೀ ಲಕ್ಷಿಜನಾರ್ದನ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು ಹಾಗೂ ಅನ್ನಸಂತರ್ಪಣೆ ನಡೆಯಿತು.

ಕಾಪುವಿನ ಜನತೆಗೆ ಶುಭ ಸುದ್ದಿ : ನಿಮ್ಮ ಫಿಟ್ನೆಸ್ ಮತ್ತು ವೆಲ್ನೆಸ್ ಗಿದೆ ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್

Posted On: 31-12-2022 11:35PM

ಉಡುಪಿ ಜಿಲ್ಲೆಯ ಕಾಪುವಿನ ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ನಲ್ಲಿ ಕರಾಟೆ ಕ್ಲಾಸ್, ಯಕ್ಷಗಾನ ಕ್ಲಾಸ್, ಯೋಗ / ಕ್ರಾಸ್ ಫಿಟ್ ಕ್ಲಾಸ್, ಡ್ರಾಯಿಂಗ್ ಕ್ಲಾಸ್, ಡ್ಯಾನ್ಸ್ ಕ್ಲಾಸ್ ತರಗತಿಗಳನ್ನು ನಡೆಸಲಾಗುತ್ತಿದೆ.

ಮಾನಸಿಕ ಸುದೃಢತೆಯ ಜೊತೆಗೆ ದೈಹಿಕ ಸುದೃಢತೆ ಕಾಪಾಡುವ ದೃಷ್ಟಿಯಿಂದ ದೇಹ ತೂಕ ಹೆಚ್ಚಿಸಲು/ಕಡಿಮೆ ಮಾಡಲು, ಶಕ್ತಿ ಮತ್ತು ಚೈತನ್ಯ, ಹೃದಯದ ಆರೋಗ್ಯ, ಪಚನ ಆರೋಗ್ಯ, ಮೂಳೆ ಆರೋಗ್ಯ, ತ್ವಚೆಯ ಆರೋಗ್ಯ, ಕ್ರೀಡಾ ಪೋಷಣೆ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ತಿಳಿಸಲಾಗುವುದು.

80% ಪೌಷ್ಟಿಕಾಂಶ ಹಾಗೂ 20% ವ್ಯಾಯಾಮದೊಂದಿಗೆ ನಾವು ಸಹಾಯ ಮಾಡುತ್ತೇವೆ. ನಮ್ಮ ಉಚಿತ ತಪಾಸಣೆಗಾಗಿ ನಿಮ್ಮನ್ನು ಅಹ್ವಾನಿಸುತ್ತೇವೆ. ಮೂರು ದಿನದ ಉಚಿತ ಪ್ರಾಯೋಗಿಕ ತರಗತಿ ಇರುತ್ತದೆ. ಹೊಸ ವರ್ಷದ ನಿಮಿತ್ತ ಆಫರ್ ಕೂಡ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971735243, 7892821131 ವಿಳಾಸ : ಜನಾರ್ಧನ ಕಾಂಪ್ಲೆಕ್ಸ್ , ಮೊದಲ ಮಹಡಿ ಕಾಪು, ಉಡುಪಿ.

ಕಾಪು : ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯಚೈತನ್ಯ ಹೈಸ್ಕೂಲ್ ವಾರ್ಷಿಕೋತ್ಸವ

Posted On: 31-12-2022 11:24PM

ಕಾಪು : ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನ ವಾರ್ಷಿಕೋತ್ಸವವು ಡಿಸೆಂಬರ್ 31 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ್ವರರಾದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಶುಭಾಶೀರ್ವಚನವಿತ್ತರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಪೋಷಕರು ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಪರಸ್ಪರ ಸಂವಹನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಅಸೆಟ್ ನ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ್ ಆಚಾರ್ಯ ಶಿರ್ವ, ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ, ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ್ ಗುರೂಜಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೀಪಕ್ ಕಾಮತ್, ಶಾರದಾ ಕುತ್ಯಾರು ಉಪಸ್ಥಿತರಿದ್ದರು.

ಗುರುರಾಜ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗುರುದತ್ತ ಸೋಮಯಾಜಿ ವರದಿ ವಾಚಿಸಿದರು. ಸಂಸ್ಕೃತ ಶಿಕ್ಷಕ ಸಂದೀಪ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ಶ್ರುತಿ ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಕಾಪು : ಮಲ್ಲಾರು ರಾಣ್ಯಕೇರಿಯ ಹಳೆಮಾರಿಗುಡಿ ಬಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಮಹಾ ಪೂಜೆ ಸಂಪನ್ನ

Posted On: 31-12-2022 05:41PM

ಕಾಪು : ತಾಲೂಕಿನ ಮಲ್ಲಾರು ರಾಣ್ಯಕೇರಿಯ ಹಳೆಮಾರಿಗುಡಿ ಬಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಶನಿವಾರ ಶ್ರೀ ಸ್ವಾಮಿಗೆ ಮಹಾ ಪೂಜೆಯು ಗುರುಸ್ವಾಮಿಯಾದ ರವೀಂದ್ರ ಮಲ್ಲಾರು ನೇತೃತ್ವದಲ್ಲಿ ಜರಗಿತು.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯೂ ಜತಗಿತು. ಅಯ್ಯಪ್ಪ ಮಾಲಾಧಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ತ್ಯಾಜ್ಯ ನಿರ್ವಹಣೆ ಕುರಿತ ಕಿರುಚಿತ್ರ ಸಲ್ಲಿಕೆಗೆ ಅವಕಾಶ

Posted On: 29-12-2022 08:47PM

ಉಡುಪಿ : ಜಿಲ್ಲಾ ಪಂಚಾಯತ್ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಚಟುವಟಿಕೆ ಅನುಷ್ಠಾನವಾಗುತ್ತಿದ್ದು, ಒಣಕಸ ಹಾಗೂ ಹಸಿಕಸ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಲಾ 5 ನಿಮಿಷಗಳ ಅವಧಿಯ 3 ಕಿರುಚಿತ್ರಗಳನ್ನು ತಯಾರಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿ ಅಥವಾ ಮೊ.ನಂ: 9964443064 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ : ವಿಶ್ವ ಮಾನವ ದಿನಾಚರಣೆ

Posted On: 29-12-2022 08:42PM

ಉಡುಪಿ : ವಿಶ್ವ ಮಾನವ ಸಂದೇಶ ನೀಡಿದ ಕವಿ ಕುವೆಂಪು ಸದಾ ಸ್ಮರಣೀಯರು. ಅವರ ಸಾಹಿತ್ಯದಲ್ಲಿರುವ ಸಂದೇಶ ಸರ್ವ ಕಾಲಗಳಿಗೂ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದರು. ಅವರು ಇಂದು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪುರವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕವಿ ಕುವೆಂಪು ಅವರು ಮಹಾನ್ ಮಾನವತಾವಾದಿ. ಅವರ ಸಾಹಿತ್ಯ ಸಮಾಜದ ಎಲ್ಲಾ ಜನರಿಗೂ ಅತ್ಯುತ್ತಮ ಜೀವನ ಮಾದರಿಯನ್ನು ತೋರಿಸುತ್ತಿದ್ದು, ಸಾಹಿತ್ಯಗಳು ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಸಾಹಿತ್ಯ ಲೋಕದಲ್ಲಿ ಕನ್ನಡ ನಾಡಿಗೆ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾನ್ ಸಾಹಿತಿ ಕುವೆಂಪು. ಅವರು ರಚಿಸಿದ ನಾಡಗೀತೆಯನ್ನು ಪ್ರತಿನಿತ್ಯ ಹಾಡುವುದರ ಮೂಲಕ ಅವರನ್ನು ಪ್ರತಿದಿನ ಜ್ಞಾಪಿಸಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ಎಂ ಮಾತನಾಡಿ, ಯುಗದ ಕವಿ, ಜಗದ ಕವಿ ಎನಿಸಿಕೊಂಡ ಕುವೆಂಪುರವರು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಪ್ರೇರಿತರಾದವರು. ಕುವೆಂಪು ಅವರು ಅದ್ಭುತ ಪ್ರತಿಭೆ ಹೊಂದಿರುವ ಹಾಗೂ ಸಮಾಜದ ಸಾಕ್ಷಿ ಪ್ರಜ್ಞೆ ಇರುವ ಈ ನಾಡಿನ ಶ್ರೇಷ್ಠ ಕವಿ ಎಂದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಮುಂಡಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜು ಸಮನ್ವಯಾಧಿಕಾರಿ ಡಾ.ಎನ್.ಎಸ್ ಶೆಟ್ಟಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ವಿಶ್ವಾಸ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕಿ ನಳಿನಾದೇವಿ ಎಂ ಆರ್ ನಿರೂಪಿಸಿ, ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್ ವಂದಿಸಿದರು.