Updated News From Kaup
ನಾಟಕದ ಮೂಲಕ ಭಾಷೆಗಳಿಗೆ ಪ್ರಾಧ್ಯಾನತೆ : ರಾಧಾಕೃಷ್ಣ ಶ್ರೀಯಾನ್

Posted On: 01-02-2023 08:22PM
ಉಡುಪಿ : ನಿರಂತರ ಉದ್ಯಾವರ ಸಂಘಟನೆಯ ಮೂಲಕ ಈಗ ನಾಟಕಗಳು ಈ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದಿವೆ. ವಿವಿಧ ಭಾಷೆ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವ ಕೆಲಸವನ್ನು ನಿರಂತರ್ ಸಂಘಟನೆ ಮಾಡುತ್ತಿದೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ತಿಳಿಸಿದರು.

ನಿರಂತರ್ ಉದ್ಯಾವರ ಸಂಘಟನೆ ನೇತೃತ್ವದಲ್ಲಿ ಉದ್ಯಾವರದಲ್ಲಿ ನಡೆಯುತ್ತಿರುವ ಏಳು ದಿನದ ಬಹುಭಾಷಾ ನಾಟಕೋತ್ಸವದಲ್ಲಿ ದ್ವಿತೀಯ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಸಂಸ್ಥೆ ಪರಿಚಯ ಮತ್ತು ಕಲಾರಾಧನ್ ಇದರ ಅಧ್ಯಕ್ಷರಾಗಿರುವ ಅನಿಲ್ ಡೆಸಾ ಶಂಕರಪುರ, ಲಯನ್ಸ್ ಕ್ಲಬ್ ಬಂಟಕಲ್ ಬಿ ಸಿ ರೋಡ್ ಇದರ ಅಧ್ಯಕ್ಷ ಲ. ವಿಲ್ಫ್ರೆಡ್ ಪಿಂಟೊ, ರಂಗ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿಸೋಜಾ, ನಿರಂತರ್ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ, ಕಾರ್ಯದರ್ಶಿ ಒಲಿವೇರಾ ಮತಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಷನ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದಿ. ಲುವಿಸ್ ಪಿಂಟೋ ಸ್ಮರಣಾರ್ಥ ಅವರ ಪತ್ನಿ ವೆರೋನಿಕ ಪಿಂಟೊ ಮತ್ತು ಮಕ್ಕಳು ಪಾಂಬೂರು ಇವರು ಪ್ರಾಯೋಜಕತ್ವ ಮಾಡಿದ ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಶಂಕರಪುರದ ಕಲಾರಾಧನೆ ಸಂಸ್ಥೆಯ ಕೊಂಕಣಿ ನಾಟಕ ಕಾಮಿಲ್ ಕಾಲ್ವಾರ್ ಪ್ರದರ್ಶನಗೊಂಡಿತು. 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿದರು.
ಜೆಸಿಐ ಉಡುಪಿ : ನೂತನ ಪದಾಧಿಕಾರಿಗಳ ಪದ ಪ್ರಧಾನ

Posted On: 01-02-2023 08:16PM
ಉಡುಪಿ : ಜೆ ಸಿ ಐ ಉಡುಪಿ ಸಿಟಿ ಇದರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಜನವರಿ 31ರಂದು ಉದ್ಯಾವರ ನಿತ್ಯಾನಂದ ಆರ್ಕೆಡ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಹೋಂ ಡಾಕ್ಟರ್ ಫೌಂಡೇಶನ್ ಇದರ ಮುಖ್ಯಸ್ಥ ಡಾ|| ಶಶಿಕಿರಣ್ ಶೆಟ್ಟಿ ಸಮಾಜ ಸೇವೆ ಮಾಡಬೇಕಾದರೆ ಹಣ ಅಂತಸ್ತು ಬೇಕಾಗಿಲ್ಲ ಮುಖ್ಯವಾಗಿ ಮಾಡಬೇಕೆಂಬ ಮನಸಿದ್ದರೆ ಸಾಕು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂಪತ್ತು ಅದು ಮಾನವನ ವ್ಯಕ್ತಿತ್ವ ಈ ನಿಟ್ಟಿನಲ್ಲಿ ನಾವು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜದ ಪರಿವರ್ತನೆಗೆ ಕಾರಣರಾಗಬೇಕು ಈ ನಿಟ್ಟಿನಲ್ಲಿ ಹೋಮ್ ಡಾಕ್ಟರ್ ಫೌಂಡೇಶನ್ ಮತ್ತು ಜೆಸಿಐ ಉಡುಪಿ ಸಿಟಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮವಾದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ|| ಶಶಿಕಿರಣ್ ಶೆಟ್ಟಿ ಮತ್ತು ಟೌನ್ ಪೊಲೀಸ್ ಸ್ಟೇಷನ್ ನ ಸಹಾಯಕ ಪೊಲೀಸ್ ಅಧಿಕಾರಿ ಜಯಕರ ಐರೋಡಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಜೇಸಿ ಸಂಸ್ಥೆಯ ವಿಶೇಷತೆಯ ಬಗ್ಗೆ ಮಾತನಾಡಿದರು. ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಶುಭ ಹಾರೈಸಿದರು. ವಲಯ ಉಪಾಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಪದ ಪ್ರಧಾನ ಸಮಾರಂಭದ ಅಧಿಕಾರಿಯಾಗಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಡಾ| ವಿಜಯ್ ನೆಗಳೂರು ವಹಿಸಿ ವರದಿ ವಾಚಿಸಿ , ಎಲ್ಲರಿಗೂ ಗೌರವಿಸಿದರು.
ವೇದಿಕೆಯಲ್ಲಿ ಕಾಯ೯ದಶಿ೯ ಕಿರಣ್ ಭಟ್, ಮಹಿಳಾ ಜೇಸಿ ಡಾII ಚಿತ್ರಾ ನೆಗಳೂರು, ಉದಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷೆಯಾಗಿ ನೈನಾ ನಾಯಕ್ ಮತ್ತು ಅವರ ತಂಡದ ಪದ ಪ್ರಧಾನ ನೆರವೇರಿತು.ಈ ಸಂದಭ೯ದಲ್ಲಿ ನೂತನ ಸದಸ್ಯರಿಗೆ ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಮಾಡಲಾಯಿತು. ನೂತನ ಕಾಯ೯ದಶಿ೯ ಸಂಧ್ಯಾ ಕುಂದರ್ ವಂದಿಸಿದರು. ಪೂವ೯ ಅಧ್ಯಕ್ಷರುಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಉಚ್ಚಿಲ : ಯಶೋಭಿನಂದನ - ಸಹಕಾರ ರತ್ನ ಯಶ್‌ಪಾಲ್ ಸುವರ್ಣರಿಗೆ ಸನ್ಮಾನ ; ಮೊಗವೀರ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು : ಜಿ ಶಂಕರ್

Posted On: 01-02-2023 05:41PM
ಉಚ್ಚಿಲ : ಮೀನುಗಾರಿಕಾ ಫೆಡರೇಷನ್ ಮತ್ತು ಸಹಕಾರಿ ಸಂಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದ ಯಶ್ಪಾಲ್ ಸುವರ್ಣರು ಇನ್ನು ರಾಜಕೀಯವಾಗಿ ಬೆಳೆಯಬೇಕಾಗಿದೆ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರಕಲಿ. ರಾಜಕೀಯ ಪಕ್ಷಗಳು ಮುಂದಿನ ದಿನಗಳಲ್ಲಿ ಮೊಗವೀರ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ನಾಡೋಜ ಜಿ ಶಂಕರ್ ಹೇಳಿದರು.

ಅವರು ಸಹಕಾರ ರತ್ನ ಯಶ್‌ಪಾಲ್ ಎ.ಸುವರ್ಣ ಅಭಿನಂದನಾ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಎ. ಸುವರ್ಣ ಅವರಿಗೆ ಫೆ. 1ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಜರಗಿದ ಸಾರ್ವಜನಿಕ ಅಭಿನಂದನಾ ಸಮಾರಂಭ ಯಶೋಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಎ. ಸುವರ್ಣರನ್ನು ಸನ್ಮಾನಿಸಲಾಯಿತು.
ಉದ್ಯಮಿ ಆನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಮಹಾಸಂಸ್ಥಾನ ಮಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಜೇಸಿಐ - ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವ ಪುರಸ್ಕೃತರಾದ ಎಎಸ್ಐ ಗೋಪಾಲ್ ಶೆಟ್ಟಿಗಾರ್

Posted On: 31-01-2023 10:43PM
ಕಾಪು : ಪೊಲೀಸ್ ಇಲಾಖೆಯ ಟ್ರಾಫಿಕ್ ನಿರ್ವಹಣೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿರುವ ಪ್ರಸ್ತುತ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಉಪನಿರೀಕ್ಷಕ ಗೋಪಾಲ್ ಶೆಟ್ಟಿಗಾರ್ ಅವರನ್ನು ಕಾಪು ಜೇಸಿಐನ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಕಾಪು ಜೇಸಿಐನ ಅಧ್ಯಕ್ಷೆ ದೀಕ್ಷಾ ಆರ್. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಲಯಾಧ್ಯಕ್ಷ, ಪತ್ರಕರ್ತ ರಾಕೇಶ್ ಕುಂಜೂರು ಅಭಿನಂದನಾ ಭಾಷಣ ಮಾಡಿದರು. ಪೂರ್ವಾಧ್ಯಕ್ಷ ರಾಜೇಂದ್ರ ಬಿ.ಕೆ. ಸಮ್ಮಾನ ಪತ್ರ ವಾಚಿಸಿದರು. ಕಾಪು ಪೊಲೀಸ್ ಠಾಣೆಯ ಎಎಸ್‌ಐ ರಾಜೇಂದ್ರ ಮಣಿಯಾಣಿ, ಠಾಣಾ ಮೇಲ್ವಿಚಾರಕ ರವೀಂದ್ರ, ಕಾಪು ಜೇಸಿಐನ ಪೂರ್ವಾಧ್ಯಕ್ಷರಾದ ರಮೇಶ್ ನಾಯ್ಕ್, ವಿನೋದ್ ಕಾಂಚನ್, ಅರುಣಾ ಐತಾಳ್, ಕಾರ್ಯದರ್ಶಿ ಪ್ರಸಾದ್ ಆಚಾರ್ಯ, ಕೋಶಾಽಕಾರಿ ಸಂತೋಷ್ ಉಳಿಯಾರು, ಪದಾಧಿಕಾರಿಗಳಾದ ಶ್ರುತಿ ಶೆಟ್ಟಿ, ವಿಕ್ಕಿ ಪೂಜಾರಿ, ಪ್ರಕಾಶ್ ಆಚಾರ್ಯ ಹಾಗೂ ಪೊಲೀಸ್ ಠಾಣೆಯ ಸಿಬಂದಿಗಳು ಉಪಸ್ಥಿತರಿದ್ದರು.
ಉದ್ಯಾವರ : ಬಹುಭಾಷಾ ನಿರಂತರ್ ನಾಟಕೋತ್ಸವ ಉದ್ಘಾಟನೆ

Posted On: 31-01-2023 11:55AM
ಉಡುಪಿ : ನಾಟಕಗಳಿಂದ ಸಭಿಕರಿಗೆ ಉತ್ತಮ ಮೌಲ್ಯಗಳು ದೊರಕುತ್ತವೆ. ಉತ್ತಮ ನಾಟಕಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾಟಕ ಒಂದು ಪ್ರಬಲವಾದ ಮಾಧ್ಯಮ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಜೆವಿಯರ್ ದೇವಾಲಯದ ಪ್ರಧಾನ ಧರ್ಮ ಗುರು ವಂ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು.

ಉದ್ಯಾವರ ದೇವಾಲಯದ ವಠಾರದಲ್ಲಿರುವ ಐಸಿವೈಎಂ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ನಿರಂತರ್ ಉದ್ಯಾವರ ಸಂಘಟನೆಯ ಐದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಏಳು ದಿನಗಳ ಕಾಲ ನಡೆಯುತ್ತಿರುವ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ, 'ಸಹಕಾರ ರತ್ನ' ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ಏಳು ದಿನ ನಾಟಕ ಆಯೋಜನೆ ಮಾಡುವುದು ಅಷ್ಟು ಸುಲಭವಲ್ಲ. ಒಂದು ನಾಟಕದಿಂದ ಉತ್ತಮ ಸಂದೇಶ ದೊರಕಲು ಸಂಘಟಕರು ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತಹ ಉತ್ತಮ ಸಾಹಸಕ್ಕೆ ನಿರಂತರ್ ಉದ್ಯಾವರ ಮುಂದಡಿ ಇಟ್ಟಿದೆ ಎಂದರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಂಗ ನಿರ್ದೇಶಕ ನಾಗೇಶ್ ಕುಮಾರ್ ಉದ್ಯಾವರ, ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ ಕಾರ್ಯದರ್ಶಿ ಒಲಿವೀರ ಮಥಾಯಸ್ ಮತ್ತು ಸಂಚಾಲಕ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು. ಮೈಕಲ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭೂಮಿಗೀತಾ ತಂಡದಿಂದ 'ಹೇ ರಾಮ್' ಎನ್ನುವ ತುಳು ನಾಟಕ ಪ್ರದರ್ಶನಗೊಂಡಿತು. 600ಕ್ಕೂ ಅಧಿಕ ಸಭಿಕರು ಪ್ರಥಮ ದಿನದ ನಾಟಕೋತ್ಸವ ವೀಕ್ಷಿಸಿದರು.
ಕೆಮುಂಡೇಲು : ಹುತಾತ್ಮರ ದಿನಾಚರಣೆ

Posted On: 31-01-2023 11:49AM
ಪಡುಬಿದ್ರಿ : ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲದೇ ಸ್ವಾತಂತ್ರ್ಯ ನಂತರೂ ಹಲವಾರು ಹೋರಾಟಗಾರರು, ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಅವರೆಲ್ಲರ ಬಲಿದಾನವನ್ನು ನಾವು ಇಂದು ಸ್ಮರಿಸಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ , ಆಲೋಚನೆಗಳು ಮತ್ತು ಆದರ್ಶಗಳು ನವಭಾರತ ನಿರ್ಮಾಣಕ್ಕೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ಎಂದು ಉಪನ್ಯಾಸಕ ಹರೀಶ್ ಕೋಟ್ಯಾನ್ ನುಡಿದರು.

ನೆಹರೂ ಯುವ ಕೇಂದ್ರ, ಉಡುಪಿ, ಪಾಂಡುರಂಗ ಹವ್ಯಾಸಿ ಕಲಾ ಸಂಘ (ರಿ) ಕೆಮುಂಡೇಲು ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಾಂಡುರಂಗ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಾಲಕೃಷ್ಣ ಆಚಾರ್ ಕೊಲ್ಯ , ಉದ್ಯಮಿ ಚಂದ್ರಹಾಸ್ ಭಂಡಾರಿ, ಪಾಂಡುರಂಗ ಭಜನಾ ಮಂಡಳಿ ಕಾರ್ಯದರ್ಶಿ ಕೃಷ್ಣಾನಂದ ರಾವ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಬಾಪೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮರಿಗಾಗಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ನಿಶಾಂತ್ ಕುಲಾಲ್ ಸ್ವಾಗತಿಸಿ, ಸರ್ವಜ್ಞ ರಾವ್ ವಂದಿಸಿದರು, ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಶಿರ್ವ : ವಿಶ್ವ ಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗ ದಶಮಾನೋತ್ಸವ - ಕ್ರೀಡೋತ್ಸವ

Posted On: 31-01-2023 10:40AM
ಶಿರ್ವ : ಸಮಾಜ ಬೆಳೆಯಬೇಕಿದ್ದರೆ ನಾವು ಸಮಾಜಕ್ಕಾಗಿ ತ್ಯಾಗ ಮಾಡಬೇಕು ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕು ಎಂದು ಯುವ ಸಂಗಮದ ಸ್ಥಾಪಕರಾದ ಕಾಪು ಶ್ರೀಕಾಂತ ಆಚಾರ್ಯ ಅಭಿಪ್ರಾಯ ಪಟ್ಟರು.
ಅವರು ಶಿರ್ವ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗ ಇದರ ದಶಮಾನೋತ್ಸವದ ವತಿಯಿಂದ ಹಮ್ಮಿಕೊಂಡ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಗೌರವಾಧ್ಯಕ್ಷ ಸುರೇಶ ಆಚಾರ್ಯ, ದಶಮಾನೋತ್ಸವದ ಸಂಚಾಲಕ ಪ್ರಶಾಂತ ಆಚಾರ್ಯ, ಕ್ರೀಡಾಕೂಟದ ಪ್ರಾಯೋಜಕರಾಗಿರುವ ಸೀತಾರಾಮ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಟಪಾಡಿ : ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದ ಕೊರಗಜ್ಜ ಸನ್ನಿಧಿಗೆ ನಟಿ ಮೇಘ ಶೆಟ್ಟಿ ಭೇಟಿ

Posted On: 30-01-2023 01:24PM
ಕಟಪಾಡಿ : ಇಲ್ಲಿನ ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿನ ಕಾರ್ಣಿಕ ಪ್ರಸಿದ್ಧ ಕರಾವಳಿಯ ಅತ್ಯಂತ ನಂಬಿಕೆಯ ದೈವ ಕೊರಗಜ್ಜ ಸನ್ನಿಧಿಗೆ ಭಾನುವಾರ ಜೊತೆ ಜೊತೆಯಲಿ ಧಾರಾವಾಹಿಯ ನಾಯಕಿ ಮೇಘ ಶೆಟ್ಟಿ ಭೇಟಿ ನೀಡಿ, ಕೊರಗಜ್ಜನಲ್ಲಿ ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡರು.
ಮೇಘ ಶೆಟ್ಟಿಯವರು ಮಾಧ್ಯಮದವರೊಂದಿಗೆ ಮಾತನಾಡಿ, ಕಟಪಾಡಿ ಪೇಟೆಬೆಟ್ಟು ದೈವಸ್ಥಾನದಲ್ಲಿ ಕಾರ್ನಿಕ ಮೆರೆದ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಇಲ್ಲಿಯ ಕಾರ್ಣಿಕದ ಬಗ್ಗೆ ಕೇಳಿ ತಿಳಿದಿದ್ದೇನೆ. ಆದ್ದರಿಂದ ಇಲ್ಲಿಗೆ ಭೇಟಿ ನೀಡಿ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಈ ಸಂದರ್ಭ ಭಗವಾನ್ ಶ್ರೀ ಬಬ್ಬು ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಹರಿಶ್ಚಂದ್ರ ಪಿಲಾರ್, ತುಕಾರಾಂ ಉರ್ವ, ಗುರಿಕಾರರು ಮತ್ತು ಹತ್ತು ಸಮಸ್ತರು ಉಪಸ್ಥಿತಿ ಇದ್ದರು.
ಕಾಪು : ಜೇಸಿಐ ರಜತ ವರ್ಷಾಚರಣೆಯ ಸಮಾರೋಪ ; ಸನ್ಮಾನ ; ಸಾಂಸ್ಕೃತಿಕ ಕಾರ್ಯಕ್ರಮ

Posted On: 29-01-2023 10:06PM
ಕಾಪು : ಜಗತ್ತಿನ ಎಲ್ಲೆಡೆ ಕಾಡುತ್ತಿರುವ ಅಶಾಂತಿಯ ವಾತಾವರಣವನ್ನು ತೊಲಗಿಸುವಲ್ಲಿ ಜೇಸಿಐನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳ ಮಾರ್ಗದರ್ಶನ ಅತೀ ಅಗತ್ಯವಾಗಿದ್ದು, ಜಾಗತಿಕ ಶಾಂತಿ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ಜೇಸಿಐ ಸಂಸ್ಥೆ ವಿಶೇಷ ಕೊಡುಗೆ ನೀಡುವಂತಾಗಲಿ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಅವರು ಜನವರಿ 28 ರಂದು ಕಾಪು ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾಪು ಜೇಸಿಐನ ರಜತ ವರ್ಷಾಚರಣೆಯ ಸಮಾರೋಪ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರಜತ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರ್ಮೆ ಫೌಂಡೇಷನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಕಾಪು ಜೇಸಿಐ ಸಮಾಜಕ್ಕೆ ಉತ್ತಮ ನಾಯಕರನ್ನು, ತರಬೇತಿದಾರರನ್ನು, ಮಾರ್ಗದರ್ಶಕರನ್ನು ನೀಡುತ್ತಾ ಬಂದಿರುವ ಸಂಸ್ಥೆಯಾಗಿದೆ. ಇಪ್ಪತ್ತೈದು ವರ್ಷಗಳನ್ನು ತಪಸ್ಸಿನಂತೆ ಪೂರೈಸಿರುವ ಸಂಸ್ಥೆಯ ಆಶಯ ಮತ್ತು ಆಶೋತ್ತರಗಳನ್ನು ಈಡೇರಿಕೆಗೆ ಎಲ್ಲರ ಸಹಕಾರದ ಅಗತ್ಯತೆಯಿದೆ ಎಂದರು. ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಉಡುಪಿ ಜಿಲ್ಲೆ ಮತ್ತು ಕಾಪು ಜೇಸಿಐ ಸಂಸ್ಥೆಯು ಜತೆ ಜತೆಗೆ ರಜತ ವರ್ಷವನ್ನು ಪೂರೈಸುತ್ತಿದ್ದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಜೇಸಿಐನ ಮೂಲಕವಾಗಿ ವ್ಯಕ್ತಿತ್ವದ ನಿರ್ಮಾಣವಾಗುತ್ತಿದ್ದು ಈ ಮಾದರಿಯ ತರಬೇತಿ, ಮಾರ್ಗದರ್ಶನಗಳು ಸಮಾಜದ ಯುವಜನರಿಗೆ ನಿರಂತರವಾಗಿ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ರಜತ ವರ್ಷಾಚರಣೆ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಭಾಶಂಸನೆಗೈದರು. ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಜೇಸಿಐ ಆಡಳಿತ ನಿರ್ವಹಣಾ ಸಮಿತಿ ಸದಸ್ಯ ವೈ. ಸುಕುಮಾರ್, ಉದ್ಯಮಿ ಪ್ರಭಾಕರ ಪೂಜಾರಿ, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಜೇಸಿಐ ಕಟಪಾಡಿ ಅಧ್ಯಕ್ಷೆ ಜ್ಯೋತಿ ಶಂಕರ್ ಸಾಲ್ಯಾನ್, ಜೇಸಿಐ ಶಂಕರಪುರ ಜಾಸ್ಮಿನ್ ಅಧ್ಯಕ್ಷೆ ಮಾಲಿನಿ ಶೆಟ್ಟಿ, ನಟಿ ನವ್ಯಾ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಾಪು ಜೇಸಿಐನ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಹಾಗೂ ಕಾಪು ಜೇಸಿಐನ ನಿಕಟ ಪೂರ್ವಾಧ್ಯಕ್ಷ ಸುಜಿತ್ ಶೆಟ್ಟಿ, ವೈ. ಜಯಕರ್ ಎರ್ಮಾಳು ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಸಂಸ್ಥೆಯನ್ನು ಮುನ್ನಡೆಸಿದ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಸಮಿತಿ ಕೋಶಾಧಿಕಾರಿ ಸೌಮ್ಯ ರಾಕೇಶ್, ಕಾರ್ಯಕ್ರಮ ನಿರ್ದೇಶಕ ರಮೇಶ್ ನಾಯ್‌ಕ, ಜೇಸಿಐ ಕಾರ್ಯದರ್ಶಿ ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.
ರಜತ ವರ್ಷಾಚರಣೆ ಸಮಿತಿ ಕಾರ್ಯದರ್ಶಿ ಎಂ. ನೀಲಾನಂದ ನಾಯ್ಕ್ ಸ್ವಾಗತಿಸಿದರು. ಕಾಪು ಜೇಸಿಐ ಅಧ್ಯಕ್ಷೆ ದೀಕ್ಷಾ ಆರ್. ಕೋಟ್ಯಾನ್ ಸಮ್ಮಾನಿತರನ್ನು ಪರಿಚಯಿಸಿದರು. ಪೂರ್ವಾಧ್ಯಕ್ಷ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು. ನಿಕಟ ಪೂರ್ವಾಧ್ಯಕ್ಷ ಸುಜಿತ್ ಶೆಟ್ಟಿ ವಂದಿಸಿದರು.
ಕಾಪು : ಬೃಹತ್ ಉದ್ಯೋಗ ಮೇಳ ; ಕಂಪನಿಗಳು ಉದ್ಯೋಗದ ದಾರಿ ಕಲ್ಪಿಸಿ ಕೊಡಿ - ಕೂರ್ಮಾ ರಾವ್ ಎಂ

Posted On: 29-01-2023 04:00PM
ಕಾಪು : ಕೌಶಲ ಕರ್ನಾಟಕ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ ಬೆಂಗಳೂರು, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ಇದರ ಸಹಯೋಗದೊಂದಿಗೆ ಕಾಪು ಉದ್ಯೋಗ ಮೇಳವನ್ನು ಭಾನುವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕರ್ನಾಟಕದ ಸುಮಾರು 40 ಕಂಪನಿ ಗಳು ಈ ಮೇಳದಲ್ಲಿ ಭಾಗವಹಿಸಿವೆ. ಉದ್ಯೋಗ ನೀಡುವ ಕಂಪನಿಗಳು ದಾರಿ ಕಲ್ಪಿಸಿ ಕೊಡಿ, ಉತ್ತಮ ರೀತಿಯಲ್ಲಿ ಆಯ್ಕೆ ಮಾಡಿ ಅವರ ಜೀವನಕ್ಕೆ ಅವಕಾಶ ಮಾಡಿ ಕೊಡಿ, ಒಂದುಹಸಿದ ಹೊಟ್ಟೆಗೆ ಅನ್ನ ನೀಡಿದಲ್ಲಿ ಅದು ಕ್ಷಣಿಕ ಹಸಿವನ್ನು ನೀಗಿಸಬಹುದು. ಆದರೆ ಒಂದು ಉದ್ಯೋಗ ನೀಡಿದಲ್ಲಿ ಅದು ಜೀವನ ಪೂರ್ತಿ ಹಸಿವು ನೀಗಿಸಲು ಸಹಕಾರಿಯಾದೀತು. ಇಂದು ಇಲ್ಲಿಗೆ ಬಂದ ಎಲ್ಲರೂ ಉದ್ಯೋಗ ಪಡೆಯಲು ಅಸಾಧ್ಯ ಆದರೆ ಯಾರೂ ನಿರಾಶೆಪಡದಿರಿ. ಇನ್ನೂ ಅವಕಾಶ ದೊರೆಯುತ್ತವೆ ಎಂದರು.
ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ ದಿನನಿತ್ಯ ಹಲವಾರು ಉದ್ಯೋಗಾಕಾಂಕ್ಷಿಗಳ ಅರ್ಜಿಗಳು ಬರುತ್ತಿದ್ದ ಕಾರಣ ಸಚಿವರಾದ ಅಶ್ವಥ್ ನಾರಾಯಣ್ ಅಭಿಪ್ರಾಯದಂತೆ ಈ ಕಾಪು ಉದ್ಯೋಗ ಮೇಳ ಆಯೋಜಿಸಿದೆ. ಇದರ ಸದುಪಯೋಗವನ್ನು ಉದ್ಯೋಗಾಕಾಂಕ್ಷಿ ಗಳು ಪಡೆಯಲು ಕರೆಕೊಟ್ಟರು. ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ಹಾಜರಿದ್ದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕ ಗಿರಿಧರ್ ರಾವ್ ಇವರನ್ನು ಸನ್ಮಾನಿಸಲಾಯಿತು.
ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಕರ್ಣಿ, ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಹರ್ಷವರ್ಧನ್, ಕಿಶೋರ್ ಆಳ್ವ ಅಶೋಕ್ ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ, ಪ್ರಾಂಶುಪಾಲ ಸ್ಟೀವನ್ ಕ್ವಾರ್ಡಸ್, ಗಿರಿಧರ್ ರಾವ್ ಮುಂತಾದವರು ಉಪಸ್ಥಿತರಿದ್ದರು.