Updated News From Kaup

ಫೆ.20 : ಹೆಜಮಾಡಿಯಲ್ಲಿ ಕಾಪು ತಹಶೀಲ್ದಾರ್ ಗ್ರಾಮ ವಾಸ್ತವ್ಯ

Posted On: 19-02-2023 10:49AM

ಕಾಪು : ತಾಲೂಕಿನ ಹೆಜಮಾಡಿ ಗ್ರಾಮದಲ್ಲಿ ಫೆ.20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕಾಪು ತಾಲೂಕಿನ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆ ಎಂದು ಕಾಪು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

ಕಾಪು : ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆ - ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ

Posted On: 18-02-2023 03:40PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇವರು ಆಯೋಜಿಸಿದ ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆಯಲ್ಲಿ ಕಾಪು ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸ್ಪರ್ಧೆ ಯಲ್ಲಿ 20 ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಈ ಸ್ಪರ್ಧೆಯಲ್ಲಿ ಕಬ್ಸ್ ವಿಭಾಗದಲ್ಲಿ ಆಯುಷ್ ರೇಗನ್ ಮಿನೇಜಸ್ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಪಿ ಜಿ ಆರ್ ಸಿಂದ್ಯಾರವರು ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.

ಇವರು ರಾಜ್ಯ ಮಟ್ಟದ ಈ ಸ್ಪರ್ಧೆಯ ಸಲುವಾಗಿ ಕಾಪು ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.

ಕಾಪುವಿನ ಶಂಕರಪುರದ ಅಲ್ವೀನ್ ಮಿನೇಜಸ್ ಹಾಗೂ ಸುನೀತಾ ಮಿನೇಜಸ್ ದಂಪತಿಗಳ ಪುತ್ರನಾದ 9 ವರ್ಷದ ಆಯುಷ್ ರೇಗನ್ ಅವರು ಶಂಕರಪುರದ ಸೈಂಟ್ ಜಾನ್ಸ್ ಅಕಾಡೆಮಿಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರು ಗಾಯನಕ್ಕೆ ಒಲಿವರ್ ರೆಬೆಲ್ಲೋರವರಿಂದ ತರಬೇತಿ ಪಡೆದುಕೊಂಡಿದ್ದು, ಈ ಹಿಂದೆ ಉಡುಪಿ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಪ್ರಥಮ ಹಾಗೂ ಕೊಂಕಣಿ ನಾಟಕ ಸಭಾ ಮಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಅನೇಕ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಮಹಾಶಿವರಾತ್ರಿ : ಹಬ್ಬವಲ್ಲ, ’ವ್ರತ'

Posted On: 18-02-2023 03:27PM

'ಶಿವರಾತ್ರಿ' ಸಂಭ್ರಮಿಸುವ ಹಬ್ಬ ಅಲ್ಲ; ಉಪವಾಸವಿದ್ದು ಶಿವನನ್ನು ಅಭಿಷೇಕ, ಸಹಸ್ರನಾಮಾದಿಗಳಿಂದ ಸುಪ್ರೀತನನ್ನಾಗಿಸುವುದು, ಧ್ಯಾನಾಸಕ್ತರಾಗಿದ್ದು ರಾತ್ರಿ ಜಾಗರಣೆಯಲ್ಲಿರುವುದು, ಪ್ರದಕ್ಷಿಣೆ-ನಮಸ್ಕಾರ, ಬಿಲ್ವಾರ್ಚನೆ ಯಿಂದ ಮಹಾದೇವನನ್ನು ಆರಾಧಿಸುವ ವ್ರತ ವಿಶೇಷವಾಗಿ ’ಮಹಾ ಶಿವರಾತ್ರಿ’ ಪುರಾಣಕಾರರಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಶರಣಾರ್ಥಿ ಶರಣರಿಗೆ ಸರ್ವಮಂಗಲವನ್ನು ಅನುಗ್ರಹಿಸುವ ಮಂಗಲಕರನಾದ ಶರ್ವನು ಜನಮಾನಸಕ್ಕೆ ಸಮೀಪದ ದೇವರು. ವೇದಪೂರ್ವ ಕಾಲದಿಂದ ಈತನ ಅಸ್ತಿತ್ವವು ಗುರುತಿಸಲ್ಪಡುತ್ತದೆ. ವೇದಕಾಲದಲ್ಲಿ ಒಂದು ಸ್ವರೂಪವನ್ನು ಪಡೆದು ವೇದೋತ್ತರ ಕಾಲಕ್ಕಾಗುವಾಗ ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಲಯಾಧಿಕಾರಿಯಾಗಿ, ದೇವೋತ್ತಮನಾಗಿ, ಮಹಾಲಿಂಗನಾಗಿ, ಭೂವ್ಯೋಮ ವ್ಯಾಪಿಯಾದ ವಿರಾಟ್ ಪುರುಷನಾಗಿ ಪುರಾಣಗಳು ಕೊಂಡಾಡುವಂತಾಗುವುದನ್ನು ಗಮನಿಸಬಹುದು.

ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೇ ತೀವ್ರವಾದ ಪ್ರವೃತ್ತಿಯೂ ಶಂಕರನಲ್ಲಿ ಕಾಣಬಹುದು. ಗೊಂದಲಗಳ ಗೂಡಾಗಿ ಕಾಣುವ, ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ-ಶಿವಪರಿವಾರ ಸ್ವತಃ ದೇವದೇವನೇ ಮಾನವ ಕೋಟಿಗೆ ಒಂದು ಆದರ್ಶ ಸಂದೇಶವನ್ನು ನೀಡುವಂತಿದೆ. ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದ್ದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ, ಸ್ತುತಿ ಇತ್ಯಾದಿ. ಭಕ್ತಿಗೆ ಒಲಿದಾಗ ಬೇಡಿದ್ದನ್ನು ಅನುಗ್ರಹಿಸುವ ಶಿವನು ಕೆಲವೊಮ್ಮೆ ’ಬೋಳೆ ಶಂಕರ’ನೆಂದೇ ಗುರುತಿಸುವಷ್ಟು ಮುಗ್ಧನಾಗಿ ನಮ್ಮ ಮುಂದೆ ನಿಲ್ಲುತ್ತಾನೆ. ಕೋಪಗೊಂಡಾಗ ಬ್ರಹ್ಮಾಂಡ ಭಾಂಡವನ್ನೇ ಲಯಗೊಳಿಸುವ ಮಹಾಶಕ್ತಿಯಾಗಿ ವಿಜೃಂಭಿಸುತ್ತಾನೆ. ಅರ್ಧನಾರೀಶ್ವರನಾಗಿ ಗೃಹಸ್ಥನ ಬದುಕಿಗೆ ಮೇಲ್ಪಂಕ್ತಿಯಾಗಿರುವ ಪಾರ್ವತಿ ರಮಣನು ಮಾನವರಿಗೆ ಸಮೀಪದ ದೇವರಾಗಿ ಸುಲಭ ಸಾಧ್ಯನಾಗಿ ಕಥಾನಕಗಳಲ್ಲಿ ಚಿತ್ರಿತನಾಗಿರುವುದು ಆತನ ಜನಪ್ರಿಯತೆಗೆ ಕಾರಣವಿರಬೇಕು.

'ಮಹಾಪಾಪಗಳನ್ನು ಮಾಡಿ ಭವದ ಬಂಧನದಲ್ಲಿರುವ ನನ್ನನ್ನು ಲೋಕಕ್ಕೆ ಶಾಂತಿಯನ್ನು ಅನುಗ್ರಹಿಸುವ ದೇವನಾದ ನೀನು ಉದ್ಧರಿಸು’ ಎಂದು ಮಹಾಶಿವರಾತ್ರಿ ಪುಣ್ಯಕಾಲದ ಬೇಡಿಕೆಯಾಗಬೇಕೆಂದು ಶಾಸ್ತ್ರಗಳು ಸೂಚಿಸುತ್ತವೆ. ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷಪಾನ ಮಾಡಿದ ಸಂದರ್ಭ, ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲವೆಂದು ವಿವಿಧ ವ್ಯಾಖ್ಯಾನಗಳಿವೆ. ಈ ಶುಭದಿನ ಮಾಘಮಾಸದ ಬಹುಳ ಚತುರ್ದಶಿಯಂದು ಸನ್ನಿಹಿತವಾಗುತ್ತದೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವಧ್ಯಾನಸಕ್ತರಾಗುತ್ತಾ ’ಕಾಯಕವೇ ಕೈಲಾಸ’, ’ಶರಣು ಶರಣಾರ್ಥಿ’ ಎನ್ನೋಣ. ’ಓಂ ನಮಃ ಶಿವಾಯ’ ಪಠಿಸೋಣ.

ರುದ್ರ-ಪರ್ಜನ್ಯ : ಅನ್ನಾದ್ಭವಂತಿಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಬವಃ || ಅನ್ನ-ಜೀವರಾಶಿ, ಅನ್ನ-ಮಳೆ, ಮಳೆ-ಯಜ್ಞ ಈ ಸಂಬಂಧವನ್ನು ನಿರೂಪಿಸುವ ಈ ಶ್ಲೋಕವು ಯಜ್ಞದ ಪರಮಲಕ್ಷ್ಮವನ್ನು ವಿವರಿಸುತ್ತದೆ. ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ. ಶಿವ, ಸದಾಶಿವ, ಪರಶಿವ ಇವು ಪರಮಾತ್ಮನ ಮನೋಜ್ಞ ಹೆಸರುಗಳು. ಇವನು ’ರುದ್ರ’ನೂ ಹೌದು. ಮಳೆ ಸುರಿಸಿ ನೀರು ಕೊಡುವವನು, ಅಧಿಕ ಶಬ್ಧ ಮಾಡುತ್ತಾ ನೀರನ್ನು ಕೊಡುವವನು ಎಂಬುದು ’ರುದ್ರ’ ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ, ಮಳೆಗೆ ಪೂರಕವಾದ ಯಜ್ಞಕರ್ಮ. ಈ ಎರಡು ಸಿದ್ಧಾಂತಗಳಿಂದ ರುದ್ರದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ. ಮಳೆಯಿಂದ ಬೆಳೆ, ಬೆಳೆಯಿಂದ ಸಮೃದ್ಧಿ ತಾನೇ? ಲೋಕ ಸುಭಿಕ್ಷೆಗೆ ಲೋಕದ ತಂದೆಯನ್ನು ಆರಾಧಿಸುವುದು, ಆ ಮೂಲಕ ಕ್ಷೋಭೆಗಳಿಲ್ಲದ, ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೇ.... ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ.... ಲೇಖನ‌ : ಕೆ.ಎಲ್.ಕುಂಡಂತಾಯ

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ : ಭರವಸೆಯ ಒಪ್ಪಿಗೆ ನೀಡಿ ಬಜೆಟ್‌ನಲ್ಲಿ ವಂಚನೆ - ಪ್ರವೀಣ್ ಎಂ ಪೂಜಾರಿ

Posted On: 17-02-2023 10:42PM

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಕುರಿತು ಮುಖ್ಯಮಂತ್ರಿಯವರು ನೀಡಿದ ಭರವಸೆ ಸುಳ್ಳಾಗಿದೆ. ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಚಿವರಾದ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿಗೆ ಜ.5ರಂದು ಮನವಿ ಸಲ್ಲಿಸಿದ್ದ ಸಂದರ್ಭ ನಿಗಮ ಸ್ಥಾಪನೆಗೆ ಸ್ಪಷ್ಟ ಭರವಸೆಯ ಒಪ್ಪಿಗೆ ನೀಡಿ ಸೂಕ್ತ ಅನುದಾನದೊಂದಿಗೆ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೂ ಈ ಬಾರಿಯ ಬಜೆಟ್‌ನಲ್ಲಿ ಯಾವುದೆ ಕ್ರಮ ಕೈಗೊಳ್ಳದೆ ಮತ್ತೆ ಬಿಲ್ಲವ, ಈಡಿಗರಿಗೆ ಅನ್ಯಾಯವೆಸಗಿದ್ದಾರೆ.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯವಾಗಿದ್ದರೂ ಹಿಂದುಳಿದ ಸಮಾಜದ ನಮಗೆ ಅನ್ಯಾಯವಾಗಿದೆ. ಸಮಾಜದ ಮುಖಂಡರ ಸಭೆ ನಡೆಸಿ ನಿಯೋಗ ಕೊಂಡೊಯ್ದ ಮಾನ್ಯ ಸುನಿಲ್ ಕುಮಾರ್‌ರವರು ಹಾಗೂ ಆಶ್ವಾಸನೆಯನ್ನು ಸ್ವಾಗತಿಸಿ ಬೆಂಬಲಿಸಿದ ಜನಪ್ರತಿನಿಧಿಗಳೆಲ್ಲರೂ ಈ ಕುರಿತು ಸ್ಪಷ್ಟನೆ ನೀಡುವಂತೆ ಸಮಸ್ತ ಸಮಾಜಬಾಂಧವರ ಹಿತದಿಂದ ಆಗ್ರಹಿಸುತ್ತೇವೆಂದು ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಇದರ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಚುನಾವಣಾ ಬಜೆಟ್ ಅನುಷ್ಟಾನವಾಗಲಿ : ರಾಘವೇಂದ್ರ ಪ್ರಭು, ಕವಾ೯ಲು

Posted On: 17-02-2023 10:17PM

ಉಡುಪಿ : ಮುಖ್ಯಮಂತ್ರಿ ಅವರು ಮಂಡಿಸಿದ ಬಜೆಟ್ ಚುನಾವಣಾ ಸಮಯದಲ್ಲಿ ಆಗಿರುವುದರಿಂದ ಅದರ ಅನುಷ್ಠಾನ ಅಗತ್ಯವಾಗಿ ಆಗಬೇಕು ಎಂದು ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ಆಗ್ರಹಿಸಿದ್ದಾರೆ.

ಸಾಕಷ್ಟು ರೀತಿಯ ಘೋಷಣೆಗಳು ಈ ಸಮಯದಲ್ಲಿ ಬಜೆಟ್ ನಲ್ಲಿ ನೀಡಲಾಗಿದೆ ಮುಖ್ಯವಾಗಿ ರೈತ ಸಿರಿ ಯೋಜನೆ ನರೇಗಾ ಯೋಜನೆಗೆ 1000 ಕೋಟಿ ಮೀಸಲು ಶಾಲೆಗಳಲ್ಲಿ ಮೂಲಭೂತ ಅಭಿವೃದ್ಧಿಗೆ ಯೋಜನೆಗಳು ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಉತ್ತಮವಾದ ಬೆಳವಣಿಯಾಗಿದೆ. ರಾಜ್ಯದಲ್ಲಿ 438 ಗ್ರಾಮೀಣ ಹೊಸ ಕ್ಲಿನಿಕ್ ಸ್ಥಾಪನೆಗೆ ಯೋಜನೆ, ವಿವಿಧ ರೀತಿಯ ವಿಶ್ವವಿದ್ಯಾನಿಲಯ ಮತ್ತು ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆದ್ಯತೆ ನೀಡಿರುವುದು ಉತ್ತಮವಾದ ವಿಚಾರವಾಗಿದೆ. ನಮ್ಮ ಕರಾವಳಿ ಬಗ್ಗೆ ಚಿಂತನೆ ಮಾಡಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾ ಅಭಿವೃದ್ದಿ. ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಒಳಸಾರಿಗೆ ಸಂಪರ್ಕ ಕಲ್ಪಿಸಲು ಬಾರ್ಜ್ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಕ್ರಮ' ಮಂಗಳೂರು- ಹಂಗಾರಕಟ್ಟೆಯಲ್ಲಿ ಸಾರ್ವಜನಿಕ- ಖಾಸಗಿ ಲೈಟ್ ಕಾರ್ಗೋ ಟ್ರಾನ್ಸ್‌ಪೋರ್ಟ್‌ ಬೋಟ್ ಸೇವೆಗಳ ಪ್ರಾರಂಭ. ಮಂಗಳೂರು- ಕಾರವಾರ- ಗೋವಾ- ಮುಂಬಯಿ ಜಲಸಾರಿಗೆ ಅಭಿವೃದ್ಧಿ. ಕರಾವಳಿ ವಲಯ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಧಾರ್ಮಿಕ, ಸಾಹಸ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೂಪುರೇಷೆ ತಯಾರಿ ಉತ್ತಮ ಅಂಶ.

ಉಡುಪಿ, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿನ ವಸತಿ ಶಾಲೆಗಳ ಅಭಿವೃದ್ಧಿಗೆ ಒತ್ತು, ಕುಮಟಾದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ. ಕರಾವಳಿ ಮಲೆನಾಡಿಗೆ ‘ಸಹ್ಯಾದ್ರಿ ಸಿರಿ’ ಯೋಜನೆ ಜಾರಿ, ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಯೋಜನೆ ಆರಂಭಿಸಲಾಗಿದ್ದು, ಇದನ್ನು ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಮನ್ವಯಗೊಳಿಸಿ ಜಾರಿಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರವಾರದ ಸಮೀಪ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಅಲ್ಲದೇ ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಮಾರ್ಪಡಿಸಲು 40 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಘೋಷಿಸಿದ್ದು, ಉತ್ತಮ ಅಂಶವಾಗಿದೆ. ಏನೇ ಆಗಲಿ ಈ ಬಜೆಟ್ ದಾಖಲೆಯಲ್ಲಿರದೆ ಅನುಷ್ಟಾನಕ್ಕೆ ಬರಲಿ ಎಂದು ಎಲ್ಲರ ಆಶಯ ಎಂದಿದ್ದಾರೆ.

ತುಳು ಭಾಷೆಗೆ ಅಪಮಾನ : ಸಚಿವ ಮಾಧು ಸ್ವಾಮಿ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ - ವಿನೋದ್ ಶೆಟ್ಟಿ

Posted On: 17-02-2023 10:00PM

ಪವಿತ್ರವಾದ ತುಳುನಾಡಿನಲ್ಲಿ ದೈವರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದೇ ಪ್ರಕಾರ ತುಳುನಾಡ ನಲ್ಲಿ ತುಳು ಭಾಷೆಗೆ ಅದರದೇ ಆದ ಸಾವಿರಾರು ವರ್ಷಗಳ ವಿಶಿಷ್ಟವಾದ ಸ್ಥಾನಮಾನ ಗೌರವ ಆಚಾರ ವಿಚಾರ ಸಾಹಿತ್ಯ ಸಂಸ್ಕೃತಿ ಹಿನ್ನೆಲೆ ಇದೆ. ಪಂಚ ದ್ರಾವಿಡ ಭಾಷೆಗಳಲ್ಲಿಯೂ ತುಳು ಭಾಷೆ ಕೂಡ ಒಂದು. ತುಳು ಭಾಷೆಗೆ ತನ್ನದೇ ಆದ ಲಿಪಿ ಇದೆ. ರಾಜಕೀಯ ಕುತಂತ್ರದಿಂದ ಇನ್ನೂ ಕೂಡ ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಕೊಡಿಸಲು ವಿಫಲವಾಗಿದೆ ಎಂದು ಅಖಿಲ ಭಾರತ ತುಳುನಾಡ ದೈವರಾಧಾಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ತಿಳಿಸಿದ್ದಾರೆ.

ತುಳುನಾಡಿನಲ್ಲಿ ತುಳುವರೂ ಯಾವುದೇ ಕಷ್ಟ ಸಂದರ್ಭದಲ್ಲಿ, ಶುಭ ಸಂದರ್ಭದಲ್ಲಿ ಮೊದಲು ದೈವಗಳಿಗೆ ಹರಕೆ ಹೇಳುವುದು. ಕೈ ಮುಗಿಯುವುದು ತುಳುವರ ನಂಬಿಕೆ. ನಾವು ನಂಬಿದ ದೈವಗಳು ಅಭಯವಾಕ್ಯ ಕೊಡುವುದು ತುಳು ಭಾಷೆಯಲ್ಲಿ. ಅನಾದಿ ಕಾಲದಿಂದ ಬಂದಂತ ಪದ್ಧತಿ. ನಮ್ಮ ನಂಬಿಕೆಗೆ ನಮ್ಮ ಶ್ರದ್ಧಾ ಭಕ್ತಿ ನಮ್ಮ ಮಾತೃಭಾಷೆಗೆ ಅಪಹಾಸ್ಯ, ಅಪಮಾನ ಮಾಡಿದರೆ ನಾವು ತುಳುವರು ಸಹಿಸುವುದಿಲ್ಲ. ಆದ್ದರಿಂದ ವಿಧಾನಸಭಾ ಕಲಾಪದಲ್ಲಿ ಯು ಟಿ ಖಾದರ್ ಹೇಳಿಕೆಗೆ ಪ್ರತಿ ವಿರೋಧ, ಅಪಹಾಸ್ಯ, ದೈವ ದೇವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಕರ್ನಾಟಕ ಸರ್ಕಾರದ ಸಚಿವರಾದ ಮಾಧು ಸ್ವಾಮಿ ಅವರು ಸಮಸ್ತ ತುಳು ನಾಡಿನ ಒಂದು ಕೋಟಿ ಹೆಚ್ಚು ಜನಸಂಖ್ಯೆ ಇರುವ ತುಳುವರ ಮನಸ್ಸಿಗೆ ತುಳುವರ ನಂಬಿಕೆ, ಭಕ್ತಿ, ಶ್ರದ್ಧೆಗೆ, ದೈವರಾಧನೆಗೆ ಧಕ್ಕೆ ತಂದಿದ್ದಾರೆ, ಬೇಸರ ತಂದಿದ್ದಾರೆ.

ಇಷ್ಟರ ತನಕ ನಮ್ಮ ಕರಾವಳಿಯ ಶಾಸಕರು ಇದರ ವಿರುದ್ಧವಾಗಿ ಮಾತನಾಡಲಿಲ್ಲ. ಯಾಕೆ ಮೌನ ಈ ವಿಚಾರ ನಿಮಗೆ ಶೋಭೆ ತರುತ್ತದೆಯೇ? ಕರ್ನಾಟಕ ಸರ್ಕಾರದ ಸಚಿವರಾದ ಮಾಧು ಸ್ವಾಮಿ ಬಹಿರಂಗವಾಗಿ ತಪ್ಪು ಒಪ್ಪಿಕೊಳ್ಳಬೇಕು. ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿವಸಗಳಲ್ಲಿ ಇದರ ವಿರುದ್ಧವಾಗಿ ಪ್ರತಿಭಟನೆ ಮಾಡಲಾಗುವುದು. ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿರುತ್ತಾರೆ.

ಫೆಬ್ರವರಿ 18 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

Posted On: 17-02-2023 09:30PM

ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದೇವಳದಲ್ಲಿ ಫೆಬ್ರವರಿ 18ರ ಸಂಜೆ ಗಂಟೆ 4 ರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಜೆ ಗಂಟೆ 4 ರಿಂದ ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ, ಸಂಜೆ ಗಂಟೆ 5 ರಿಂದ ಶಿರ್ವ ಶ್ರೀ ಮಹಾಲಾಸ ನಾರಾಯಣಿ ಭಜನಾ ಮಂಡಳಿ ಸಂಜೆ ಗಂಟೆ 6 ರಿಂದ ಚಂದ್ರನಗರ ಶ್ರೀ ರಾಮ ಭಜನಾ ಮಂಡಳಿ, ರಾತ್ರಿ ಗಂಟೆ 7 ರಿಂದ ಕುತ್ಯಾರು ಗ್ರಾಮಸ್ಥರ ಭಜನಾ ಮಂಡಳಿ, ರಾತ್ರಿ ಗಂಟೆ 8 ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ನಂತರ ಸಣ್ಣ ರಂಗಪೂಜೆ ,ಫಲಾಹಾರ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಳತ್ತೂರು ಪ್ರಕಟಣೆಯಲ್ಲಿ ತಿಳಿಸಿರುವರು.

ಮಾರ್ಚ್ 11 : ಮಟ್ಟಾರಿನಲ್ಲಿ ಹಿಂದೂ ಹೃದಯ ಸಂಗಮ ; ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ

Posted On: 17-02-2023 09:08PM

ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಮಾರ್ಚ್ 11 ರಂದು ಹಿಂದೂ ಹೃದಯ ಸಂಗಮ ಕಾರ್ಯಕ್ರಮ‌ ಶಿರ್ವ ಗ್ರಾಮದ ಮಟ್ಟಾರ್ ನಲ್ಲಿ ಜರಗಲಿದೆ.

ಅಂದು ಸಂಜೆ 3 ಗಂಟೆಗೆ ದಶಮ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಬಾಲವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ‌ ನೀಡಲಿದ್ದು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ.

ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಅನ್ನ‌ ಸಂತರ್ಪಣೆ ಮತ್ತು ಶ್ರೀಕೃಷ್ಣ ಲೀಲೆ-ಕಂಸವಧೆ ಎಂಬ ಕಾಲಮಿತಿಯ ಯಕ್ಷಗಾನ ನಡೆಯಲಿದೆ‌.

ಉಡುಪಿ ‌ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಜೀನಲ್ ಗಾಲರಿಗೆ ಸನ್ಮಾನ

Posted On: 15-02-2023 09:50PM

ಉಡುಪಿ : ಎ.ಐ.ಸಿ.ಸಿ ಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಜೀನಲ್ ಗಾಲರಿಗೆ ಕೆ.ಪಿ.ಸಿ.ಸಿ ಕಚೇರಿ ಬೆಂಗಳೂರಿನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿಗಳಾದ ಫಾರೂಕ್ ಚಂದ್ರನಗರ, ಹಸನ್ ಮಣಿಪುರ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಇಸ್ಮಾಯಿಲ್ ಆತ್ರಾಡಿ ಉಪಸ್ಥಿತರಿದ್ದರು.

ಉಡುಪಿ : ರಾಜ್ಯಮಟ್ಟದ ‌ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಪ್ರಭಾ ಪತ್ರಿಕೆಗೆ ಗೌರವ ಸಮರ್ಪಣೆ

Posted On: 15-02-2023 09:38PM

ಉಡುಪಿ : ಜಿಲ್ಲೆಯಲ್ಲಿ ನೆರವೇರಿದ 'ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ - ೨೦೨೩' ಈ ಸದವಸರದಲ್ಲಿ ಶ್ರೀಕ್ಷೇತ್ರ ಕಟೀಲಿನಿಂದ ಪ್ರಕಟವಾಗುವ "ಯಕ್ಷಪ್ರಭಾ ಪತ್ರಿಕೆ"ಯನ್ನು ಗೌರವಿಸಲಾಯಿತು.

ಪತ್ರಿಕೆಯ ಗೌರವ ಸಂಪಾದಕ ವಿದ್ವಾನ್ ಹರಿನಾರಾಯಣದಾಸ ಅಸ್ರಣ್ಣ ಹಾಗೂ ಸಂಪಾದಕ ಕೆ.ಎಲ್.ಕುಂಡಂತಾಯ ಅವರು ಗೌರವವನ್ನು ಸ್ವೀಕರಿಸಿದರು.

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಶಿ, ಶಾಸಕ ಕೆ.ರಘುಪತಿ ಭಟ್‌, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌, ಸಮ್ಮೇಳನ ಕಾರ್ಯಾಧ್ಯಕ್ಷ ಡಾ| ಜಿ.ಎಲ್‌. ಹೆಗಡೆ, ಹಿರಿಯ ಕಲಾವಿದರಾದ ಡಾ| ಕೋಳ್ಯೂರು ರಾಮಚಂದ್ರ ರಾವ್‌, ಪಾತಾಳ ವೆಂಕಟರಮಣ ಭಟ್‌ ಉಪಸ್ಥಿತರಿದ್ದರು.