Updated News From Kaup

ಪಡುಬಿದ್ರಿ : ಚುನಾವಣೆಯ ಪ್ರಯುಕ್ತ ಪೋಲಿಸ್ ಪಥಸಂಚಲನ

Thumbnail
Posted On: 11 Apr 2023, 11:00 PM

ಪಡುಬಿದ್ರಿ : ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಡುಬಿದ್ರಿಯಲ್ಲಿ ಶಿರ್ವ, ಕಾಪು, ಪಡುಬಿದ್ರಿ ಪೋಲಿಸರು ಹಾಗೂ ಸಿ ಆರ್ ಪಿ ತಂಡದಿಂದ ಇಂದು ಸಂಜೆ ಪಥಸಂಚಲನ ನಡೆಯಿತು. ಪಥಸಂಚಲನವು ಕಾರ್ಕಳ ರಸ್ತೆಯಿಂದ ಮೊದಲ್ಗೊಂಡು ಪಡುಬಿದ್ರಿ ಪೇಟೆಯ ಮಾರ್ಗವಾಗಿ ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಹಿಂತಿರುಗಿದೆ. ಈ ಸಂದರ್ಭ ಕಾರ್ಕಳ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ ಸಿ ಪುವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ ಹಾಗೂ ಮೂರು ಠಾಣೆಯ ಪೊಲೀಸರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಶ್‌ಪಾಲ್‌ ಎ. ಸುವರ್ಣ ಆಯ್ಕೆ

Thumbnail
Posted On: 11 Apr 2023, 10:31 PM

ಉಡುಪಿ : ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಯಶ್‌ಪಾಲ್‌ ಎ. ಸುವರ್ಣರನ್ನು ಬಿಜೆಪಿ‌ ಪಕ್ಷ ಆಯ್ಕೆ ಮಾಡಿದೆ. ಉಡುಪಿ ನಗರಸಭೆಯಲ್ಲಿ 3 ಬಾರಿ ಅಜ್ಜರಕಾಡು ವಾರ್ಡಿನಿಂದ ಸದಸ್ಯರಾಗಿ ಸೇವೆ, ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ದುಡಿದ ಅನುಭವ, ರಾಜ್ಯ ಬಿಜೆಪಿ ಯುವ ಮೋರ್ಚ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದು, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಬಿಜೆಪಿ ಸಹಕಾರಿ ಹಾಗೂ ಮೀನುಗಾರಿಕಾ ಪ್ರಕೋಷ್ಟದ ಸದಸ್ಯರಾಗಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕರಾಗಿ, ಪ್ರಸ್ತುತ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅನುಭವದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಇವರ ಆಯ್ಕೆಯನ್ನು ಘೋಷಿಸಿದರು.

ಕಾಪು : ಬಿಜೆಪಿಯಿಂದ ಗುರ್ಮೆ ಸುರೇಶ್ ಶೆಟ್ಟಿ ಅಭ್ಯರ್ಥಿಯಾಗಿ ಆಯ್ಕೆ

Thumbnail
Posted On: 11 Apr 2023, 09:48 PM

ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಮಾಜ ಸೇವಕ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಏಪ್ರಿಲ್ 23, 24 : ಬೊಲ್ಲೆಟ್ಟು ಆಲಡೆಯಲ್ಲಿ ಆಯನೋತ್ಸವ - ಸಿರಿಗಳ ಜಾತ್ರೆ, ಮಹಾ ಅನ್ನ ಸಂತರ್ಪಣೆ

Thumbnail
Posted On: 11 Apr 2023, 06:05 PM

ಕಾಪು : ಇತಿಹಾಸ ಪ್ರಸಿದ್ಧ ಎಲ್ಲೂರು ಸೀಮೆಯ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಯಲ್ಲಿ ನಡೆಯುವ ಧ್ವಜಾರೋಹಣ ಪೂರ್ವಕ ವರ್ಷಾವಧಿ ಆಯನೋತ್ಸವ - ಸಿರಿಗಳ ಜಾತ್ರೆ ಹಾಗೂ ಮಹಾ ಅನ್ನಸಂತರ್ಪಣೆ ಏಪ್ರಿಲ್ 23, 24 ರಂದು ಜರಗಲಿದೆ. ಎಲ್ಲರೂ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಿರಿ ಕುಮಾರ ಭಜನಾ ಮಂಡಳಿ ಬೊಲ್ಲೆಟ್ಟು ಇದರ ಸರ್ವ ಸದಸ್ಯರು ತಿಳಿಸಿರುತ್ತಾರೆ.

ಬಂಟಕಲ್ಲು : ಪ್ರಾಧ್ಯಾಪಕಿ ರೆನಿಟಾ ಶರೋನ್ ಮೋನಿಸ್ ಅವರಿಗೆ ಪಿಎಚ್‌ಡಿ ಪದವಿ

Thumbnail
Posted On: 09 Apr 2023, 11:48 AM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರೆನಿಟಾ ಶರೋನ್ ಮೋನಿಸ್ ಇವರು ಎಮ್.ಐ.ಟಿ.ಇ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದ್ರಿ, ಮಂಗಳೂರು ಇಲ್ಲಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಆಶಾ ಕ್ರಾಸ್ಟಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಸ್ಟಿಮೇಟ್ ಆಫ್ ಅನ್‌ಸ್ಟಡಿ ಸ್ಟೆಬಿಲಿಟಿ ಡಿರೈವೆಟೀಸ್ ಫಾರ್ ಡೆಲ್ಟಾ ವಿಂಗ್ಸ್ ಇನ್ ಹೈ ಸ್ಪೀಡ್ ಫ್ಲೋ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಎಂ.ಎಸ್.ಆರ್.ಎಸ್ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ - ವಾರ್ಷಿಕೋತ್ಸವ

Thumbnail
Posted On: 09 Apr 2023, 11:18 AM

ಶಿರ್ವ : ಬ್ಯಾಂಕಿಂಗ್ ಕ್ಷೇತ್ರದ ಧುರೀಣ ಕೀರ್ತಿಶೇಷ ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ವಿಜಯ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿದ್ದ ಕಾಲಘಟ್ಟದಲ್ಲಿ ತುಳುನಾಡಿನ ವಿದ್ಯಾವಂತರನ್ನು ಕರೆ ಕರೆದು ಮನೆಗೊಬ್ಬರಂತೆ ಕೆಲಸ ನೀಡಿದವರು ಎಂದು ತುಂಗಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಶ ಸುಧಾಕರ್ ಹೆಗ್ಡೆಯವರು ನುಡಿದರು. ಅವರು ಎಪ್ರಿಲ್ 2ರಂದು ಮಲಾಡ್ ಪಶ್ಚಿಮದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರ್ಯಾಂಡ್ ಇಲ್ಲಿ ನಡೆದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದುವರಿದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದವರು ಇಂದು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳನ್ನು ಹಾಗೂ ನಮಗೆ ವಿದ್ಯೆ ನೀಡಿದ ಸಂಸ್ಥೆಗಳನ್ನು ಎಂದಿಗೂ ನಾವು ಮರೆಯಬಾರದು. ಉದಯ್ ಸುಂದರ್ ಶೆಟ್ಟಿಯವರ ದಕ್ಷ ಅಧ್ಯಕ್ಷತೆಯಲ್ಲಿ ಈ ಹಿರಿಯ ವಿದ್ಯಾರ್ಥಿಗಳ ಸಂಘವು ಬೆಳೆದು ಬಂದ ರೀತಿ ಮತ್ತು ತಾವು ಕಲಿತ ಕಾಲೇಜಿನ ಬಲವರ್ಧನೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಸಂಘದ ಸಲಹೆಗಾರ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಮಾತನಾಡಿ, ಸಂಘ ಸಂಸ್ಥೆಗಳ ಹುರುಪು ಉಲ್ಲಾಸ ಐದಾರು ವರ್ಷಗಳಲ್ಲಿ ಇಳಿಮುಖವಾಗುವುದನ್ನು ಕಾಣುತ್ತೇವೆ. ಆದರೆ ಈ ಹಳೆ ವಿದ್ಯಾರ್ಥಿ ಸಂಘದ ಉತ್ಸಾಹ ಕುಂದದೆ ಚಿಗುರುತ್ತಿರುವುದು ಮತ್ತು ಹದಿಮೂರು ವರ್ಷಗಳಲ್ಲಿ ಏರಿದ ಎತ್ತರ ಸಂತಸ ತಂದಿದೆ ಎಂದರು. ಸಂಘದ ಪೋಷಕರಾರದ ಪೆನಿನ್ಸುಲಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಸತೀಶ್ ಶೆಟ್ಟಿಯವರು, ಇಂದಿನ ಮಕ್ಕಳಿಗೆ ನಮ್ಮ ಊರಿನ ಶ್ರೀಮಂತ ಸಂಸ್ಕೃತಿಯನ್ನು ತೋರಿಸುವ, ತಿಳಿಸುವ ಅಗತ್ಯವಿದೆ ಎಂದರು. ಮಾರ್ಗದರ್ಶಕ, ಎಂ. ಎಸ್. ಆರ್. ಎಸ್. ಕಾಲೇಜಿನ ಮಾಜಿ ಪ್ರಾಧ್ಯಾಪಕ, ಪ್ರಸ್ತುತ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಎಸ್. ಎಂ. ಶೆಟ್ಟಿ ಕಾಲೇಜ್ ಪೊವೈ ಇಲ್ಲಿಯ ಪ್ರಾಂಶುಪಾಲರಾದ ಡಾ. ಶ್ರೀಧರ್ ಶೆಟ್ಟಿಯವರು ಮಾತನಾಡಿ, ಕೀರ್ತಿಶೇಷರಾದ ಮುದ್ದು ಶೆಟ್ಟಿ, ಸುಂದರ್ ರಾಮ್ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆಯವರಂಥ ಧೀಮಂತ ವ್ಯಕ್ತಿಗಳು ಸಮರ್ಪಣಾ ಭಾವದೊಂದಿಗೆ ಶಿರ್ವದಂಥ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿ ಬೆಳೆಸಿದ ವಿದ್ಯಾದೇಗುಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಬಿಸಿಯೂಟದ ವ್ಯವಸ್ಥೆ ವಿನೂತನವಾದುದು. ಅದನ್ನು ಉಳಿಸಿ ಬೆಳೆಸುವ ತೀವ್ರ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನನ್ನನ್ನೂ ಸೇರಿ ಎಲ್ಲರೂ ಉದಾರತೆಯಿಂದ ಆರ್ಥಿಕವಾಗಿ ಸ್ಪಂದಿಸಬೇಕೆಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷ, ಉದಯ್ ಸುಂದರ್ ಶೆಟ್ಟಿ ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಗಳೊಂದಿಗಿನ ಒಡನಾಟವು ನಮ್ಮ ವ್ಯಕ್ತಿತ್ವದಲ್ಲಿ ಅಮೂಲಗ್ರಹ ಬದಲಾವಣೆಗಳನ್ನು ತರಬಲ್ಲುದು. ನಮ್ಮ ಜೀವನದಲ್ಲಿ ಅನುಭವಿ ಹಾಗೂ ಮಾಗಿದ ವ್ಯಕ್ತಿಗಳಿಂದ ಕಲಿಯುವ ಜೀವನ ಮೌಲ್ಯಗಳನ್ನು ಯಾವ ವಿಶ್ವ ವಿದ್ಯಾಲಯಗಳು ಕಲಿಸಲಾರವು. ಸಂಘವು 2016ರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರಾಯೋಜಿಸುತ್ತಿರುವ ಬಿಸಿಯೂಟದ ಪ್ರಯೋಜನವನ್ನು 250 ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸದ ಸಂಗತಿ. ಪದಾಧಿಕಾರಿಗಳ ಸಾಂಘಿಕ ಪ್ರಯತ್ನ ಹಾಗೂ ಉದಾರತೆಯ ಫಲವಾಗಿ ಸಂಘವು 13 ವರ್ಷಗಳಲ್ಲಿ ಈ ಎತ್ತರಕ್ಕೆ ಏರಲು ಸಾಧ್ಯವಾಯಿತು. ಕೋವಿಡ್ ಸಂಕಷ್ಟದಲ್ಲಿ ನಾವೆಲ್ಲ ಪರಸ್ಷರ ಸಂಪರ್ಕದಲ್ಲಿದ್ದು ಸಹಕರಿಸುತ್ತಿದ್ದೆವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಧಾಕರ್ ಹೆಗ್ಡೆ ಹಾಗೂ ರಂಜನಿ ಸುಧಾಕರ್ ಹೆಗ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಜ್ಯೋತಿ ಶೆಟ್ಟಿ ಸೂಡ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಅಶೋಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀ ಸತೀಶ್ ಶೆಟ್ಟಿಯವರ ಪ್ರಾರ್ಥನಾ ಗೀತೆಯೊಂದಿಗೆ ನೆರೆದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಿ.ಎ. ರವಿರಾಜ್ ಶೆಟ್ಟಿಯವರು 2020 ರಿಂದ 2023ರ ಈ ವರೆಗಿನ ಸಂಘದ ಖರ್ಚು ವೆಚ್ಚಗಳ ವರದಿಯನ್ನು ವಾಚಿಸಿದರು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಎರಡು ವರ್ಷಗಳಲ್ಲಿ ಸಂಘವು ನಿರ್ವಹಿಸಿದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು. ಸಂಘದ ಸದಸ್ಯ ಹರೀಶ್ ಶೆಟ್ಟಿ ಪಂಜಿಮಾರು ಅವರ ಪ್ರತಿಭಾವಂತ ಮಗಳು ಡಾ. ಹರ್ಷಿತಾ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಅಭ್ಯಾಸದ ಕುರಿತಾಗಿ ಸಲಹೆಯನ್ನೂ ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಶಬುನ ಸತೀಶ್ ಶೆಟ್ಟಿ ಹಾಗೂ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಶೆಟ್ಟಿಯವರು ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಮೋಹನ್ ಶೆಟ್ಟಿ ಕಾಪು ಹಾಗೂ ಸಮನ್ವಯಕ ವಾಲ್ಟರ್ ಮಥಾಯಸ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಂಗೀತಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ ಶಿಬರೂರು ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿಯವರು ದೇವರನಾಮಗಳನ್ನು ಹಾಡಿದರು. ಸದಸ್ಯರ ಮತ್ತು ಅವರ ಮಕ್ಕಳ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸುರೇಶ್ ಶೆಟ್ಟಿಯವರು ನಡೆಸಿಕೊಟ್ಟರು. ಸಾಯಿ ಪ್ಯಾಲೇಸ್ ಹೋಟೆಲಿನ ಆದರಾತಿಥ್ಯದ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವರದಿ: ಉದಯ ಬಿ. ಶೆಟ್ಟಿ, ಪಂಜಿಮಾರು

ಕಾಪು : ಶಂಕರಪುರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

Thumbnail
Posted On: 07 Apr 2023, 03:53 PM

ಕಾಪು : ರೋಟರಿ ಕ್ಲಬ್ ಶಂಕರಪುರ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಜಂಟಿಯಾಗಿ ವಿಶ್ವ ಆರೋಗ್ಯ ದಿನಾಚರಣೆಯನ್ನು ರೋಟರಿ ಭವನ ಶಂಕರಪುರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಇದರ ಅಧ್ಯಕ್ಷರಾದ ಡಾ. ಪಿವಿ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ವಿಶ್ವ ಆರೋಗ್ಯ ದಿನಾಚರಣೆ ಹೇಗೆ ಪ್ರಾರಂಭವಾಯಿತು, ಆರೋಗ್ಯವೇ ಭಾಗ್ಯ ಎಂಬ ಉಪಯುಕ್ತ ಮಾಹಿತಿಗಳನ್ನು ನೀಡಿದರು. ಸನ್ಮಾನ : ಆಫೀಸರ್ ಇನ್ ಪಿ ಹೆಚ್ ಸಿ ಮೂಡಬೆಟ್ಟುವಿನ ಅನಿತಾ ಫರ್ನಾಂಡಿಸ್, ಆಶಾ ಕಾರ್ಯಕರ್ತೆ ಗಾಯತ್ರಿ ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಕೇಶವ ನಾಯಕ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಕಾರ್ಯದರ್ಶಿ ಡಾ. ಕೇಶವ ನಾಯಕ್, ಡಾ. ಶ್ರೀನಿವಾಸ್ ಭಟ್, ರೋಟರಿಯ ಕಾರ್ಯದರ್ಶಿ ಸಿಲ್ವಿಯಾ ಕಾಸ್ಟಲಿನೋ ಹಾಗೂ ರೋಟರಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿಕ್ಟರ್ ಮಾರ್ಟಿಸ್ ಪ್ರಾರ್ಥಿಸಿದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು.

ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಕಲಾವಿದ ನಲ್ಕ ಜಗದೀಶ ನಿಧನ

Thumbnail
Posted On: 07 Apr 2023, 03:36 PM

ಮುಲ್ಕಿ : ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಹಿರಿಯ ಕಲಾವಿದ ನಲ್ಕ ಜಗದೀಶ ( 56 ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸುಮಾರು 21 ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಲಾವಿದನಾಗಿ ದುಡಿದಿರುವ ಇವರು ಭಗವತಿ ಮೇಳದ ಪ್ರಸಿದ್ಧ ಪ್ರಸಂಗ ಭಗವತಿ ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರನ ಪಾತ್ರ, ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರ ನಿರ್ವಹಿಸಿದ್ದರು. ಕಾಸರಗೋಡು ತಾಲೂಕಿನ ನಲ್ಕದಲ್ಲಿ ಜನಿಸಿದ ಇವರು ಸಣ್ಣ ಪ್ರಾಯದಲ್ಲಿಯೇ ಯಕ್ಷಗಾನದ ಕಡೆಗೆ ಆಕರ್ಷಿತರಾಗಿದ್ದರು. ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು ಮತ್ತು ಗಂಡು ಮಗುವನ್ನು ಅಗಲಿದ್ದಾರೆ. ನಲ್ಕ ಜಗದೀಶರವರ ಅಕಾಲಿಕ ನಿಧನಕ್ಕೆ ಶ್ರೀ ಭಗವತೀ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಪ್ರಮುಖರು, ಮೇಳದ ಸಂಚಾಲಕರು, ಸಹಕಲಾವಿದರು, ಯಕ್ಷಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 11 ರಂದು ವಿದ್ಯುತ್ ವ್ಯತ್ಯಯ

Thumbnail
Posted On: 07 Apr 2023, 12:05 PM

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಎಪ್ರಿಲ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 33/11 ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ತಲ್ಲೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಹಾಗೂ 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಎಂ.ಯು.ಎಸ್.ಎಸ್ ನಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಮಾರ್ಗಗಳಾದ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಶಿರ್ವ, ಮಟ್ಠಾರು, ಪದವು, ಪಾಂಬೂರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು, ಬಡಾ ಮೂಳೂರು, ಬೆಳಪು, ಮಲ್ಲಾರು, ಅಬ್ಬೆಟ್ಟು, ಪಾದೂರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಚೇರ್ಕಾಡಿ, ಉಪ್ಪೂರು, ಹೊನ್ನಾಳ, ಕೊಳಲಗಿರಿ ಫೀಡರ್ ಮಾರ್ಗ ಹಾಗೂ 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಶಾಂತಿವನ ಫೀಡರ್ ಮಾರ್ಗ ಮತ್ತು 110/11 ಕೆ.ವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಮಂದಾರ್ತಿ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ.ರೋಡ್, ಕೋಟೆರೋಡ್, ನಿಡಂಬಳ್ಳಿ, ಕಲ್ಯಾಣಪುರ, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೇಲ್ಬೆಟ್ಟು, ಜಾತಾಬೆಟ್ಟು, ಹಾವಂಜೆ, ಮಂದಾರ್ತಿ, ಕಾಡೂರು, ತಂತ್ರಾಡಿ, ಹೆಗ್ಗುಂಜೆ, ಕಾಡೂರು, ನಡೂರು, ಹೆಬ್ಬಾಡಿ, ಗೋಪಾಲಪುರ, ಶಾಂತಿವನ, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಪ್ರಿಲ್ 11 : ಮಿನಿ ಉದ್ಯೋಗ ಮೇಳ

Thumbnail
Posted On: 07 Apr 2023, 11:51 AM

ಉಡುಪಿ : ಯುಕ್ತ ಕೌಶಲ್ಯ ತರಬೇತಿ ಕೇಂದ್ರ, ಪ್ರಕಾಶ್ ರಿಟೇಲ್, ಎಸ್.ಬಿ.ಐ ಲೈಫ್ ಇನ್ಶೂರೆನ್ಸ್, ಏಂಜೆಲ್ ಬ್ರೋಕಿಂಗ್ ಪ್ರೈ.ಲಿ. ಮತ್ತು ಮೆಡ್ ಪ್ಲಸ್ ಕಂಪನಿಗಳ ವತಿಯಿಂದ ಎಪ್ರಿಲ್ 11 ರಂದು ಬೆಳಗ್ಗೆ 10.30 ಕ್ಕೆ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ. ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.