Updated News From Kaup

ಕಾಪು ಶ್ರೀ ವೆಂಕಟರಮಣ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಸಂಭ್ರಮ

Posted On: 05-12-2022 10:33AM

ಕಾಪು : ಧನುರ್ಮಾಸದಲ್ಲಿ ಬರುವ ಶುದ್ಧ ದ್ವಾದಶಿಯಂದು ಮುಕ್ಕೋಟಿ ದ್ವಾದಶಿ ಆಚರಿಸುತ್ತಾರೆ. ಏಕಾದಶಿಯ ಮರು ದಿನ ದ್ವಾದಶಿ. ಮೂವತ್ತ್ಮೂರು ಕೋಟಿ ದೇವತೆಗಳು ಅಂದು ತಿರುಮಲದ ದೇವಾಲಯ ಪಕ್ಕದಲ್ಲಿರುವ ಸ್ವಾಮಿ ಪುಷ್ಕರಣಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ದರಿಂದ ಮುಕ್ಕೋಟಿ ದ್ವಾದಶಿ ಎಂಬ ಹೆಸರಿದೆ. ಹಲವಾರು ದೇವಾಲಯಗಳಲ್ಲಿ ಇದನ್ನು ಆಚರಿಸುತ್ತಾರೆ.

ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇವಾಲಯದಲ್ಲಿ ಪ್ರಾಥಕಾಲದಲ್ಲಿ ಪಟ್ಟದೇವರ ಸಹಿತ ಪುಷ್ಕರಣಯಲ್ಲಿ ಜಳಕಗೈದು ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿ ಹಗಲು ಉತ್ಸವ ಪೇಟೆಗೆ ಹೊರಡುವ ಮೂಲಕ ಅಲ್ಲಲ್ಲಿ ಮನೆಮಂದಿಗಳಿಂದ ಹಣ್ಣು ಕಾಯಿ ಸಹಿತ ಆರತಿ ಮಾಡಿ ಪೂಜೆ ಸಲ್ಲಿಸುತ್ತಾರೆ.

ಜಿ. ಜಗದೀಶ್ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ

Posted On: 04-12-2022 06:50PM

ಉಚ್ಚಿಲ : ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಜಗದೀಶ್ ಇಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರದರ್ಶನ ಪಡೆದರು.

ದ. ಕ. ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರನ್ನು ಬರ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ, ಶಂಕರ್ ಸಾಲ್ಯಾನ್, ದಿನೇಶ್ ಮುಳೂರು, ರಾಘವೇಂದ್ರ ಸುವರ್ಣ ಬೈಕಾಡಿ, ವಿಷ್ಣುಮೂರ್ತಿ ಉಪಾಧ್ಯಾಯ, ಶೇಖರ್ ಪುತ್ರನ್, ಸತೀಶ್ ಅಮೀನ್ ಪಡುಕರೆ ಮುಂತಾದವರು ಉಪಸ್ಥಿತರಿದ್ದರು.

ಜನವರಿ 21 : ಮಟ್ಟಾರುವಿನಲ್ಲಿ ಹೊನಲು ಬೆಳಕಿನ ಒಬಿಸಿ ಕಮಲ ಟ್ರೋಫಿ - 2023

Posted On: 04-12-2022 11:49AM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ವಿಧಾನ ಸಭಾ ಕ್ಷೇತ್ರದ ವತಿಯಿಂದ ಜನವರಿ 21 ರಂದು ಶಿರ್ವದ ಮಟ್ಟಾರು ಇಲ್ಲಿ ಪಿನ್ ಕೊಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ.

ಪ್ರಥಮ ಬಹುಮಾನ 25000 ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ 15000 ನಗದು ಹಾಗೂ ಶಾಶ್ವತ ಫಲಕ, ತೃತೀಯ ಬಹಮಾನ 10000 ಹಾಗೂ ಶಾಶ್ವತ ಫಲಕ ಜೊತೆಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಪಾಸರ್, ಬೆಸ್ಟ್ ಅಲ್ ರೌಂಡರ್, ಬೆಸ್ಟ್ ಲೀಬ್ರೋ ಪ್ರಶಸ್ತಿ ಒಳಗೊಂಡಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ಇದರ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಂಟಕಲ್ಲು : ನಾಗರಿಕ ಸೇವಾ ಸಮಿತಿಯಿಂದ ಅಂಚೆಯಣ್ಣನವರಿಗೆ ಅಭಿನಂದನೆ, ಬೀಳ್ಕೊಡುಗೆ

Posted On: 02-12-2022 03:36PM

ಬಂಟಕಲ್ಲು : ನಾಗರಿಕ ಸೇವಾ ಸಮಿತಿ ರಿ. ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಅಂಚೆ ಕಛೇರಿಯಲ್ಲಿ ಸುಮಾರು 8 ವರ್ಷದಿಂದ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ಚಿತ್ರಕಲಿ ಹಾಗೂ ಸುಮಾರು 20 ವರ್ಷಗಳಿಂದ ಹೇರೂರು ಅಂಚೆ ಕಛೇರಿಯಲ್ಲಿ ಪತ್ರ ಬಟಾವಾಡೆ ಮಾಡುತ್ತಿದ್ದ ಅಂಚೆಯಣ್ಣ ರಾಜೇಶ್ ಆಚಾರ್ಯ ಇವರು ತಮ್ಮ ವೃತ್ತಿಯಲ್ಲಿ ಅಂಚೆ ಇಲಾಖೆಯಿಂದ ಪದೋನ್ನತಿ ಹೊಂದಿ ಚಿತ್ರಕಲಿಯವರು ಶಂಕರಪುರ ಅಂಚೆ ಕಛೇರಿಗೆ ಹಾಗೂ ರಾಜೇಶ್ ರವರು ಕಟಪಾಡಿ ಅಂಚೆಕಛೇರಿಗೆ ವರ್ಗಾವಣೆ ಹೊಂದಿರುವ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿ ಬೀಳ್ಕೊಡುವ ಸರಳ ಕಾರ್ಯಕ್ರಮವು ಇಂದು ಬಂಟಕಲ್ಲು ಅಂಚೆ ಕಛೇರಿಯಲ್ಲಿ ಜರುಗಿತು.

ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇದರ ಅಧ್ಯಕ್ಷ ಕೆ ಆರ್ ಪಾಟ್ಕರ್ ಅಂಚೆಯಣ್ಣನವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಅಂಚೆಯಣ್ಣನವರು ಬಂಟಕಲ್ಲು ಪರಿಸರಕ್ಕೆ ನೀಡಿದ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿ ಅಭಿನಂದಿಸಿದರು. ಇದೇ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಕಂಠಪಾಠ ವಿಭಾಗದಲ್ಲಿ ದ್ವಿತೀಯಾ ಸ್ಥಾನ ಪಡೆದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾಳನ್ನು ನಾಗರಿಕ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆಯವರು ಶುಭಾಶಂಸನೆ ಮಾಡಿದರು.

ನಿವೃತ್ತ ಅಂಚೆ ಪಾಲಕ ಬಾಸ್ಕರ ಶೆಟ್ಟಿ, ಉದ್ಯಮಿ ರಾಮಚಂದ್ರ ನಾಯಕ್,ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಬಂಟಕಲ್ಲು ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್,ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೊ, ಮಜೂರು ಗ್ರಾಮ ಪಂ ಸದಸ್ಯೆ ಮಂಜುಳ ಆಚಾರ್ಯ, ಅಂಚೆ ಇಲಾಖೆಯ ಪ್ರಮೀಳಾ ಲೋಬೊ, ಬಂಟಕಲ್ಲು ಅಂಚೆಕಛೇರಿಯ ಅಂಚೆ ಪಾಲಕಿ ಲೂವಿಸ್ ಅರಾನ್ನಾ, ಮಮತಾ ಆಚಾರ್ಯ ಉದ್ಯಮಿ ರಾಮ ಶೆಟ್ಟಿ, ಜಯ ಶೆಟ್ಟಿ, ನಾಗರಿಕ ಸೇವಾ ಸಮಿತಿಯ ಜಗದೀಶ್ ಆಚಾರ್ಯ, ವಿರೇಂದ್ರ ಪಾಟ್ಕರ್, ವಿನ್ಸಂಟ್ ಕಸ್ತಲಿನೊ, ಮೂದಲಾದವರು ಉಪಸ್ಥಿತರಿದ್ದರು. ನಾಗರಿ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗೆದ್ದ ಮೇಲೆ ಯಾವುದೇ ಪಕ್ಷ ಬದಲಾಯಿಸುವುದಿಲ್ಲ ಎಂದು ಅಫಿಡವಿಟ್ ಪಡೆದುಕೊಳ್ಳುವ ಕಾನೂನು ರೂಪುಗೊಳ್ಳಬೇಕಿದೆ : ಜಸ್ಟಿಸ್ ಅರಳಿ ನಾಗರಾಜ್

Posted On: 02-12-2022 11:49AM

ಮಂಗಳೂರು : ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಸ್ಪರ್ಧಿಯಲ್ಲೂ ನಾನು ಗೆದ್ದು ಬಂದಮೇಲೆ ಯಾವುದೇ ಪಕ್ಷ ಬದಲಾಯಿಸುವುದಿಲ್ಲ ಎಂದು ಅಫಿಡವಿಟ್ ಪಡೆದು ಕೊಳ್ಳುವ ಕಾನೂನು ರೂಪುಗೊಳ್ಳಬೇಕಿದೆ ಎಂದು ಜಸ್ಟಿಸ್ ಅರಳಿ ನಾಗರಾಜ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮತ್ತು ರಾಷ್ಟ್ರೀಯ ಸೌಹಾರ್ದ ವೇದಿಕೆ ಬಿಜಾಪುರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 1ರಂದು ಬಿಜಾಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ದಲ್ಲಿ ಆಯೋಜಿಸಿದ್ದ "ಸಂವಿಧಾನದ ಆಶಯ ಈಡೇರಿದೆಯೇ? " - ವಿಚಾರ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.

ದೇಶ ನನಗೇನು ಕೊಟ್ಟಿದೆ ಎಂಬುದು ಮುಖ್ಯವಲ್ಲ ದೇಶಕ್ಕಾಗಿ ನಾನೇನು ಕೊಡಬಲ್ಲೆ ಎಂಬುದು ಮುಖ್ಯ , ಸ್ವಾತಂತ್ರ್ಯ ಪೂರ್ವಕ್ಕೆ ದೇಶ ಪ್ರೇಮ ಇತ್ತು . ಇತ್ತೀಚೆಗೆ ಸ್ವಾರ್ಥ ಪ್ರೇಮ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಇಂದು ಒಂದು ಪಕ್ಷ ಸೇರಿ ಗೆದ್ದುಬಂದವರು ಅವರಿಗೆ ಬೇಕಾದಂತೆ ಪಕ್ಷ ಬದಲಿಸಿ ಗೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಂವಿಧಾನದ ಆಶಯ ಈಡೇರಿದೆಯೋ ಇಲ್ಲವೋ ಎಂಬ ಪ್ರಶ್ನೆ ತಮ್ಮ ಮುಂದೆ ಇಡುತ್ತೇನೆ, ಮೂಕ ಪ್ರೇಕ್ಷಕನಾಗದೆ ಪ್ರಶ್ನೆಗಳನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಬ್ಯಾಂಕ್ ಬಾಲನ್ಸ್ ಮೊಬೈಲ್ನಲ್ಲಿ ನೋಡಿಕೊಳ್ಳ ಬಹುದು. ಆಯಸ್ಸು ಎಷ್ಟು ಎಂಬುದು ತಿಳಿದುಕೊಳ್ಳಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಯುವಜನತೆ ಅಲೋಚಿಸಬೇಕಿದೆ ಎಂದು ಜಸ್ಟಿಸ್ ಅರಳಿ ನಾಗರಾಜ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಸ್ಟಿಸ್ ವಸಂತ ಮುಳಸಾವಳಗಿ ಮಾತನಾಡಿ ಸಂವಿದಾನದ ಆಶಯಗಳು ಸ್ಪಷ್ಟವಾಗಿವೆ ಮತ್ತು ನಿಖರವಾಗಿವೆ. ಅವುಗಳನ್ನು ಜಾರಿಗೊಳಿಸುವ ನಮ್ಮ ವ್ಯವಸ್ಥೆ ಎಡವುತ್ತಿರುವುದರಿಂದ ಸಂವಿದಾನದ ಆಶಯ ಈಡೇರಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಯುವಜನತೆ ಜಾಗೃತರಾಗಿ ಕರ್ತವ್ಯ ನಿರ್ವಹಿಸಬೆಕಾಗಿದೆ.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಮತ್ತು ಸಾಹಿತಿ ವಿದ್ಯಾವತಿ ಅಂಕಲಗಿ, RSV ಸಂಸ್ಥಾಪಕಿ ರಾಜೇಶ್ವರಿ ಹಿಪ್ಪರಗಿ, ನಿರ್ದೇಶಕ ಜೆ.ಎಸ್. ಪಾಟೀಲ್, ಅಧ್ಯಕ್ಷ ಚಂದ್ರಶೇಖರ ಘಂಟಪ್ಪಗೋಳ, ಕಾರ್ಯದರ್ಶಿ ಫಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು. ಮಣಿಕಂಠ ಮಠಪತಿಯವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಚಂದ್ರಶೇಖರ ಘಂಟಪ್ಪಗೋಳ ಸ್ವಾಗತಿಸಿ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಪ್ರಸ್ತಾವನೆಗೈದರು. ರೋಹಿಣಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

ಯುವವಾಹಿನಿ ಪಡುಬಿದ್ರಿ ಘಟಕ : ಮಕ್ಕಳ ಹಬ್ಬ - ಕಲಾಶ್ರೀ, ಕಲಾರತ್ನ ಪ್ರಶಸ್ತಿ ಪ್ರದಾನ

Posted On: 02-12-2022 10:28AM

ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ಕೆಮುಂಡೇಲು ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಮಕ್ಕಳ ಹಬ್ಬ, ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ನವೆಂಬರ್ 20ರಂದು ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಇಲ್ಲಿ ಜರುಗಿತು. ಪುತ್ತಿಗೆ ಮಠ ಉಡುಪಿಯ ದಿವಾನರಾದ ನಾಗರಾಜ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಉಪಾಧ್ಯಕ್ಷರಾದ ಶಶಿಕಲಾ ಯಶೋಧರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೆಸಿಐ ಪಡುಬಿದ್ರಿ ಅಧ್ಯಕ್ಷ ಶರತ್ ಶೆಟ್ಟಿ, ರಿಲಾಯನ್ಸ್ ಇನ್ಫೋಕಾಂ. ಲಿಮಿಟೆಡ್ ಸೀನಿಯರ್ ಮೆನೇಜರ್ ರಮೇಶ್ ಪಿ. ಬಿ., ಶ್ರೀ ಪಾಂಡುರಂಗ ಭಜನಾ ಮಂಡಳಿ ಕೆಮುಂಡೇಲು ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶಾಂತಿ ಎಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ಯಾಮಲಾ ನಾಗರತ್ನ ರಾವ್, ಶಾಲಾ ವಿದ್ಯಾರ್ಥಿ ನಾಯಕ ಶ್ರೇಯಸ್ ಉಪಸ್ಥಿತರಿದ್ದರು. ಉದ್ಗಾಟನಾ ಸಮಾರಂಭದ ನಂತರ ಮಕ್ಕಳಿಗಾಗಿ ಅಭಿನಯ ಗೀತೆ, ಚಿತ್ರಕಲಾ ಸ್ಪರ್ಧೆ, ಛದ್ಮವೇಷ , ಕಥೆಹೇಳುವ ಸ್ಪರ್ಧೆ, ಭಾಷಣ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆ, ಛದ್ಮವೇಷ, ರಸಪ್ರಶ್ನೆ ಸಮೂಹ ನೃತ್ಯ, ಪ್ರಬಂಧ ಸ್ಪರ್ಧೆ ನಡೆಯಿತು.

ಸಮಾರೋಪ ಸಮಾರಂಭ: ಘಟಕದ ಉಪಾಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಅಧ್ಯಕ್ಷ ಉದಯ ಅಮೀನ್ ಮಟ್ಟು, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಬಿ. ಜೆ. ಪಿ. ಉಡುಪಿ ಜಿಲ್ಲೆ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಕೆ. ಕೋಟ್ಯಾನ್, ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಕಾರ್ಯದರ್ಶಿ ಕೃಷ್ಣಾನಂದ ರಾವ್, ಕೆಮುಂಡೇಲು ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಜಗನ್ನಾಥ ಶೆಟ್ಟಿ, ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಕಾರ್ಯದರ್ಶಿ ಡಾ. ಐಶ್ವರ್ಯ ಸಿ. ಅಂಚನ್ ಉಪಸ್ಥಿತರಿದ್ದರು. ಸನ್ಮಾನ, ಪ್ರಶಸ್ತಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಸಂಸ್ಥೆಗೆ ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿ (ರಿ.) ಕೆಮುಂಡೇಲು ಇವರ ವತಿಯಿಂದ ಸನ್ಮಾನ ನೆರವೇರಿತು. ಧೀರಜ್ ಯು ಆಚಾರ್ಯ ಕಲಾಶ್ರೀ ಪ್ರಶಸ್ತಿ, ಓಂಕಾರ್ ಎಸ್ ಜೋಗಿ ಕಲಾರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಘಟಕದ ಉಪಾಧ್ಯಕ್ಷರಾದ ಅಶ್ವಥ್ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಪ್ರಸ್ತಾವಿಸಿದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ರವಿರಾಜ್ ಎನ್ ಕೋಟ್ಯಾನ್ ವಾಚಿಸಿದರು. ಯಶೋದ ಮತ್ತು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಡಾ. ಐಶ್ವರ್ಯ ಸಿ ಅಂಚನ್ ವಂದಿಸಿದರು.

ಶಂಕರಪುರ : ನಶಾ ಮುಕ್ತ ಅಭಿಯಾನ

Posted On: 02-12-2022 09:33AM

ಶಂಕರಪುರ : ಭಾರತೀಯ ವೈದ್ಯಕೀಯ ಸಂಘ ಉಡುಪಿ ಹಾಗೂ ರೋಟರಿ ಕ್ಲಬ್ ಶಂಕರಪುರ ಜಂಟಿಯಾಗಿ ನಶಾ ಮುಕ್ತ ಅಭಿಯಾನ ಕಾರ್ಯಕ್ರಮವನ್ನು ಸೈಂಟ್ ಜಾನ್ಸ್ ಪಿಯು ಕಾಲೇಜ್ ಶಂಕರಪುರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಡಾ. ಪಿ ವಿ ಭಂಡಾರಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ನಡೆಸಿಕೊಟ್ಟರು.

ಐ ಎಂ ಎ ಕಾರ್ಯದರ್ಶಿ ಡಾ. ಕೇಶವ ನಾಯಕ್, ರೋಟರಿ ದಂಡಪಾಣಿ ಜಾರ್ಜ್ ಡಿಸಿಲ್ವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 180 ಮಕ್ಕಳು, ಶಿಕ್ಷಕರು, ರೋಟರಿಯ ಸದಸ್ಯರು, ಉಪಸ್ಥಿತರಿದ್ದರು.

ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಸೈಂಟ್ ಜಾನ್ಸ್ ಪಿಯು ಕಾಲೇಜ್ ಶಂಕರಪುರದ ಪ್ರಾಂಶುಪಾಲರಾದ ಪ್ರಿಯಾ ಕೆ ಡೇಸಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಅಧ್ಯಕ್ಷ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಕಸ್ಟಲೀನೋ ವಂದಿಸಿದರು.

ಉದ್ಯಮಿ ಜೋಸೆಫ್ ಮಥಾಯಸ್ ರವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Posted On: 02-12-2022 09:26AM

ದುಬೈನಲ್ಲಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ದುಬೈ ಕನ್ನಡಿಗರ ಸಹಕಾರದಲ್ಲಿ ದುಬೈ ಶೇಖ್ ರಶೀದ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿದ 'ವಿಶ್ವಕನ್ನಡ ಹಬ್ಬದಲ್ಲಿ' ಮೈಸೂರಿನ ಮಹಾರಾಜ ಯದುವೀರ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಅರಬ್ ರಾಷ್ಟ್ರದಲ್ಲಿ ಉದ್ಯಮವನ್ನು ಹೊಂದಿರುವ ಜೋಸೆಫ್ ಮಥಾಯಸ್ ಅವರಿಗೆ 'ಅಂತಾರಾಷ್ಟ್ರೀಯ ವಿಶ್ವ ಮಾನ್ಯ ಪ್ರಶಸ್ತಿ' ನೀಡಿ ಗೌರವಿಸಿದರು.

ಬಹುಮುಖ ಪ್ರತಿಭೆಯಾಗಿರುವ ಜೋಸೆಫ್ ಮಥಾಯಸ್ ರವರು ಮಂಗಳೂರಿನ ಅಶೋಕನಗರ ಯುವಕ ಸಂಘದ ಮಹಾಪೋಷಕರಾಗಿದ್ದು, ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಗೌರವ ಧನ, ಅಂಗವಿಕಲರಿಗೆ ಗಾಲಿ ಕುರ್ಚಿ, ಹೊಲಿಗೆ ಯಂತ್ರ, ಸೈಕಲ್ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಸಹಾಯಧನ ನೀಡುತ್ತಾ ಬಂದಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವನ್ನು ನೀಡುತ್ತಿರುವ ಜೋಸೆಫ್ ಮಥಾಯಸ್ ಉಡುಪಿಯ ಶಂಕರ್ ಪುರದ ನಿವಾಸಿಯಾಗಿದ್ದು, ಮಂಗಳೂರಿನಲ್ಲಿಯೂ ವಾಸ್ತವ್ಯವನ್ನು ಹೊಂದಿದ್ದಾರೆ.

ಅರಬ್ ರಾಷ್ಟ್ರದಲ್ಲಿ ಉದ್ಯಮವನ್ನು ಹೊಂದಿರುವ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನಟನೆ, ಸಂಗೀತ ಸಹಿತ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದೆ ಇರುವ ಇವರು ನಗುಮುಖದ ಸರಳ ವ್ಯಕ್ತಿತ್ವದವರು. ಇವರು ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಈ ಪ್ರಶಸ್ತಿ ಲಭಿಸಿದೆ.

ಕಾಪು : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

Posted On: 02-12-2022 09:23AM

ಕಾಪು : ರಕ್ತದಾನ ಶ್ರೇಷ್ಠವಾಗಿದೆ. ನಮ್ಮ ದೇಹದ ಬಗೆಗೂ‌ ನಾವು ಗಮನಹರಿಸಿ ಆ ಮೂಲಕ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ಮುಖ್ಯಸ್ಥರಾದ ಡಾ. ವೀಣಾ ಕುಮಾರಿ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು,ಕಾಲೇಜಿನ ಐಕ್ಯೂಎಸಿ ಘಟಕ, ಶ್ರೀದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘ ಕಾಪು, ಯುವ ರೆಡ್ ಕ್ರಾಸ್ ಘಟಕ, ಕಾಲೇಜು ಹಳೆ ವಿದ್ಯಾರ್ಥಿ ಸಂಘ, ಹೆಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರ ಉಡುಪಿ, ಇವರ ಸಹಯೋಗದೊಂದಿಗೆ ಡಿಸೆಂಬರ್ 1ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ವಹಿಸಿದ್ದರು.

ಈ ಸಂದರ್ಭ ಐಕ್ಯೂಎಸಿ ಸಂಚಾಲಕರಾದ ಡಾ.ರೋಶ್ನಿ ಯಶವಂತ್, ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಹೆಚ್‌ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಇದರ ಮ್ಯಾನೇಜರ್ ರಾಘವೇಂದ್ರ ರಾವ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ.ಸುಚಿತ್ರಾ ಎಸ್ ಆರ್, ಬೋಧಕ-ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಅಭಿವೃದ್ಧಿ ಸಮಿತಿಯವರು‌ ಉಪಸ್ಥಿತರಿದ್ದರು.

ದ್ವಿಚಕ್ರ ವಾಹನ ಸವಾರರಿಗೆ ತೊಂದರೆ : ಹೆದ್ದಾರಿ ಇಲಾಖೆ ನಿರ್ಲಕ್ಷ್ಯ

Posted On: 01-12-2022 05:52PM

ಪಡುಬಿದ್ರಿ : ಹಾಳಾದ ರಸ್ತೆಯನ್ನು ಸರಿ ಮಾಡದೆ ಸರಿ ಇದ್ದ ರಸ್ತೆಯನ್ನು ಯಂತ್ರದ ಮೂಲಕ ಡಾಂಬರು ತೆಗೆದು ಜೊತೆಗೆ ಡಾಂಬರು ಹುಡಿಯು ರಸ್ತೆಯಲ್ಲೇ ಇದ್ದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುವ ಸ್ಥಿತಿ ಪಡುಬಿದ್ರಿ ಸಮೀಪದ ಕಣ್ಣಂಗಾರುವಿನಿಂದ ಬೀಡುವರೆಗೆ ಒಂದು ಬದಿಯ ರಸ್ತೆಯಲ್ಲಿ ಕಾಣಬಹುದಾಗಿದೆ.

ಇದೇ ಭಾಗಲ್ಲಿ ಒಂದೆಡೆ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ಮತ್ತೊಂದೆಡೆ ರಸ್ತೆಯ ಈ ಸ್ಥಿತಿ ಜೊತೆಗೆ ಡಾಂಬರು ಹುಡಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದೆ. ರಾತ್ರಿ ವೇಳೆ ಇಂತಹ ಸ್ಥಿತಿ ಅಪಾಯಕಾರಿ ಆದಷ್ಟು ಬೇಗ ಡಾಂಬರೀಕರಣವಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.