Updated News From Kaup

ಕಾಪುವಿನ ಜನತೆಗೆ ಶುಭ ಸುದ್ದಿ : ನಿಮ್ಮ ಫಿಟ್ನೆಸ್ ಮತ್ತು ವೆಲ್ನೆಸ್ ಗಿದೆ ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್

Posted On: 31-12-2022 11:35PM

ಉಡುಪಿ ಜಿಲ್ಲೆಯ ಕಾಪುವಿನ ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ನಲ್ಲಿ ಕರಾಟೆ ಕ್ಲಾಸ್, ಯಕ್ಷಗಾನ ಕ್ಲಾಸ್, ಯೋಗ / ಕ್ರಾಸ್ ಫಿಟ್ ಕ್ಲಾಸ್, ಡ್ರಾಯಿಂಗ್ ಕ್ಲಾಸ್, ಡ್ಯಾನ್ಸ್ ಕ್ಲಾಸ್ ತರಗತಿಗಳನ್ನು ನಡೆಸಲಾಗುತ್ತಿದೆ.

ಮಾನಸಿಕ ಸುದೃಢತೆಯ ಜೊತೆಗೆ ದೈಹಿಕ ಸುದೃಢತೆ ಕಾಪಾಡುವ ದೃಷ್ಟಿಯಿಂದ ದೇಹ ತೂಕ ಹೆಚ್ಚಿಸಲು/ಕಡಿಮೆ ಮಾಡಲು, ಶಕ್ತಿ ಮತ್ತು ಚೈತನ್ಯ, ಹೃದಯದ ಆರೋಗ್ಯ, ಪಚನ ಆರೋಗ್ಯ, ಮೂಳೆ ಆರೋಗ್ಯ, ತ್ವಚೆಯ ಆರೋಗ್ಯ, ಕ್ರೀಡಾ ಪೋಷಣೆ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ತಿಳಿಸಲಾಗುವುದು.

80% ಪೌಷ್ಟಿಕಾಂಶ ಹಾಗೂ 20% ವ್ಯಾಯಾಮದೊಂದಿಗೆ ನಾವು ಸಹಾಯ ಮಾಡುತ್ತೇವೆ. ನಮ್ಮ ಉಚಿತ ತಪಾಸಣೆಗಾಗಿ ನಿಮ್ಮನ್ನು ಅಹ್ವಾನಿಸುತ್ತೇವೆ. ಮೂರು ದಿನದ ಉಚಿತ ಪ್ರಾಯೋಗಿಕ ತರಗತಿ ಇರುತ್ತದೆ. ಹೊಸ ವರ್ಷದ ನಿಮಿತ್ತ ಆಫರ್ ಕೂಡ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971735243, 7892821131 ವಿಳಾಸ : ಜನಾರ್ಧನ ಕಾಂಪ್ಲೆಕ್ಸ್ , ಮೊದಲ ಮಹಡಿ ಕಾಪು, ಉಡುಪಿ.

ಕಾಪು : ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯಚೈತನ್ಯ ಹೈಸ್ಕೂಲ್ ವಾರ್ಷಿಕೋತ್ಸವ

Posted On: 31-12-2022 11:24PM

ಕಾಪು : ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಇದರ ಆಡಳಿತಕ್ಕೊಳಪಟ್ಟ ಕುತ್ಯಾರಿನ ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲಿನ ವಾರ್ಷಿಕೋತ್ಸವವು ಡಿಸೆಂಬರ್ 31 ರಂದು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ್ವರರಾದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಶುಭಾಶೀರ್ವಚನವಿತ್ತರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮಾತನಾಡಿ, ಪೋಷಕರು ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಪರಸ್ಪರ ಸಂವಹನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಅಸೆಟ್ ನ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ್ ಆಚಾರ್ಯ ಶಿರ್ವ, ಪ್ರಧಾನ ಕಾರ್ಯದರ್ಶಿ ಗುರುರಾಜ ಆಚಾರ್ಯ, ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ್ ಗುರೂಜಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೀಪಕ್ ಕಾಮತ್, ಶಾರದಾ ಕುತ್ಯಾರು ಉಪಸ್ಥಿತರಿದ್ದರು.

ಗುರುರಾಜ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗುರುದತ್ತ ಸೋಮಯಾಜಿ ವರದಿ ವಾಚಿಸಿದರು. ಸಂಸ್ಕೃತ ಶಿಕ್ಷಕ ಸಂದೀಪ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ಶ್ರುತಿ ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಕಾಪು : ಮಲ್ಲಾರು ರಾಣ್ಯಕೇರಿಯ ಹಳೆಮಾರಿಗುಡಿ ಬಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಮಹಾ ಪೂಜೆ ಸಂಪನ್ನ

Posted On: 31-12-2022 05:41PM

ಕಾಪು : ತಾಲೂಕಿನ ಮಲ್ಲಾರು ರಾಣ್ಯಕೇರಿಯ ಹಳೆಮಾರಿಗುಡಿ ಬಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಶನಿವಾರ ಶ್ರೀ ಸ್ವಾಮಿಗೆ ಮಹಾ ಪೂಜೆಯು ಗುರುಸ್ವಾಮಿಯಾದ ರವೀಂದ್ರ ಮಲ್ಲಾರು ನೇತೃತ್ವದಲ್ಲಿ ಜರಗಿತು.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯೂ ಜತಗಿತು. ಅಯ್ಯಪ್ಪ ಮಾಲಾಧಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ತ್ಯಾಜ್ಯ ನಿರ್ವಹಣೆ ಕುರಿತ ಕಿರುಚಿತ್ರ ಸಲ್ಲಿಕೆಗೆ ಅವಕಾಶ

Posted On: 29-12-2022 08:47PM

ಉಡುಪಿ : ಜಿಲ್ಲಾ ಪಂಚಾಯತ್ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಚಟುವಟಿಕೆ ಅನುಷ್ಠಾನವಾಗುತ್ತಿದ್ದು, ಒಣಕಸ ಹಾಗೂ ಹಸಿಕಸ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಲಾ 5 ನಿಮಿಷಗಳ ಅವಧಿಯ 3 ಕಿರುಚಿತ್ರಗಳನ್ನು ತಯಾರಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿ ಅಥವಾ ಮೊ.ನಂ: 9964443064 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ : ವಿಶ್ವ ಮಾನವ ದಿನಾಚರಣೆ

Posted On: 29-12-2022 08:42PM

ಉಡುಪಿ : ವಿಶ್ವ ಮಾನವ ಸಂದೇಶ ನೀಡಿದ ಕವಿ ಕುವೆಂಪು ಸದಾ ಸ್ಮರಣೀಯರು. ಅವರ ಸಾಹಿತ್ಯದಲ್ಲಿರುವ ಸಂದೇಶ ಸರ್ವ ಕಾಲಗಳಿಗೂ ಪ್ರಸ್ತುತ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದರು. ಅವರು ಇಂದು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪುರವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕವಿ ಕುವೆಂಪು ಅವರು ಮಹಾನ್ ಮಾನವತಾವಾದಿ. ಅವರ ಸಾಹಿತ್ಯ ಸಮಾಜದ ಎಲ್ಲಾ ಜನರಿಗೂ ಅತ್ಯುತ್ತಮ ಜೀವನ ಮಾದರಿಯನ್ನು ತೋರಿಸುತ್ತಿದ್ದು, ಸಾಹಿತ್ಯಗಳು ನಮ್ಮ ಜೀವನದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಸಾಹಿತ್ಯ ಲೋಕದಲ್ಲಿ ಕನ್ನಡ ನಾಡಿಗೆ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾನ್ ಸಾಹಿತಿ ಕುವೆಂಪು. ಅವರು ರಚಿಸಿದ ನಾಡಗೀತೆಯನ್ನು ಪ್ರತಿನಿತ್ಯ ಹಾಡುವುದರ ಮೂಲಕ ಅವರನ್ನು ಪ್ರತಿದಿನ ಜ್ಞಾಪಿಸಿಕೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್ ಎಂ ಮಾತನಾಡಿ, ಯುಗದ ಕವಿ, ಜಗದ ಕವಿ ಎನಿಸಿಕೊಂಡ ಕುವೆಂಪುರವರು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಪ್ರೇರಿತರಾದವರು. ಕುವೆಂಪು ಅವರು ಅದ್ಭುತ ಪ್ರತಿಭೆ ಹೊಂದಿರುವ ಹಾಗೂ ಸಮಾಜದ ಸಾಕ್ಷಿ ಪ್ರಜ್ಞೆ ಇರುವ ಈ ನಾಡಿನ ಶ್ರೇಷ್ಠ ಕವಿ ಎಂದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಮುಂಡಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜು ಸಮನ್ವಯಾಧಿಕಾರಿ ಡಾ.ಎನ್.ಎಸ್ ಶೆಟ್ಟಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ವಿಶ್ವಾಸ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಉಪನ್ಯಾಸಕಿ ನಳಿನಾದೇವಿ ಎಂ ಆರ್ ನಿರೂಪಿಸಿ, ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್ ವಂದಿಸಿದರು.

ಜನವರಿ 6 : ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ಇನ್ನಂಜೆ - ಕಾಲಾವಧಿ ನೇಮೋತ್ಸವ

Posted On: 29-12-2022 02:30PM

ಕಾಪು : ತಾಲೂಕಿನ ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ, ಇನ್ನಂಜೆ ಇಲ್ಲಿನ ಕಾಲಾವಧಿ ನೇಮೋತ್ಸವ ಜನವರಿ 6, ಶುಕ್ರವಾರ ಜರಗಲಿದೆ.

ಬೆಳಿಗ್ಗೆ ಗಂಟೆ 8ಕ್ಕೆ ದೇವರ ಪ್ರಾರ್ಥನೆ, ಬೆಳಿಗ್ಗೆ ಗಂಟೆ 10ಕ್ಕೆ ನವಕ ಪ್ರಾಧನ ಹೋಮ ಕಲಶಾಭಿಷೇಕ, ಮಹಾಪೂಜೆ, ನಾಗತಂಬಿಲ, ಮಧ್ಯಾಹ್ನ ಗಂಟೆ 11.15ಕ್ಕೆ ತೋರಣ ಮೂಹೂರ್ತ, ಮಧ್ಯಾಹ್ನ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪ್ರಸಾದ ಆಗಮನ, ರಾತ್ರಿ ಗಂಟೆ 9.30ಕ್ಕೆ ಭಂಡಾರ ಇಳಿಯುವುದು ಮತ್ತು ಕಾಲಾವಧಿ ನೇಮೋತ್ಸವ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜನವರಿ 1 : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಕಾಪು ವಲಯ - ಹರಿವರಾಸನಂ ಶತಮಾನೋತ್ಸವ ; ವಿವಿಧ ಕಾರ್ಯಕ್ರಮಗಳು

Posted On: 29-12-2022 02:10PM

ಕಾಪು : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಕಾಪು ವಲಯದ ವತಿಯಿಂದ ಹರಿವರಾಸನಂ ಶತಮಾನೋತ್ಸವದ ನಿಮಿತ್ತ ವಿವಿಧ ಕಾರ್ಯಕ್ರಮಗಳು ಜನವರಿ 1, ಆದಿತ್ಯವಾರ ಕಾಪು ಲಕ್ಷ್ಮೀ ಜನಾರ್ದನ ದೇವಳದ ಸಭಾಭವನದಲ್ಲಿ ಜರಗಲಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಕಾಪು ವಲಯದ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಗುರುವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹರಿವರಾಸನಂ ಎಂಬ ಶೀರ್ಷಿಕೆಯಡಿ ಶ್ರೀ ಹರಿಹರಾತ್ಮಜ ಅಷ್ಟಕಂ ಶತಮಾನೋತ್ಸವ ಕಾರ್ಯಕ್ರಮವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಯೋಜಿಸಲಾಗಿದ್ದು, ಕಾಪುವಿನಲ್ಲೂ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 100 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು. ಅವರಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಜ.1ರಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ ಭಜನಾ ಕಾರ್ಯಕ್ರಮ ನಡೆದು, ಬಳಿಕ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 12.30 ರಿಂದ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಕಾಪು ನೇತೃತ್ವದಲ್ಲಿ 42ನೇ ವರ್ಷದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ರಿಂದ ಹರಿವರಾಸನಂ ನೃತ್ಯ ಕಾರ್ಯಕ್ರಮ, ಬಳಿಕ ಸಭಾಭವನದಲ್ಲಿ 3.00 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಮತ್ತು ಹಿರಿಯ ಗುರುಸ್ವಾಮಿಗಳಾದ ಏಕನಾಥ ಸ್ವಾಮಿ ಹೆಜಮಾಡಿ, ಗೋಪಾಲ ಗುರುಸ್ವಾಮಿ ಬೆಳಪು, ನಾರಾಯಣ ಗುರುಸ್ವಾಮಿ ಕಾಪು, ಗೋಪಾಲ ಗುರುಸ್ವಾಮಿ ಶಿರ್ವ, ಸುರೇಶ್‌ ಗುರುಸ್ವಾಮಿ ಕಟಪಾಡಿ ಮೊದಲಾದವರಿಗೆ ಗೌರವಾರ್ಪಣೆ ನಡೆಯಲಿದೆ.

ಕೋಟೆ ಪರೆಂಕುದ್ರು ಮಹಾಂಕಾಳಿ ಮಂತ್ರದೇವತೆ ಸನ್ನಿಧಿಯ ಧರ್ಮದರ್ಶಿ ಸುಧರ್ಮ ಶ್ರೀಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಯುವ ವಾಗಿ ಶ್ರೀಕಾಂತ್ ಶೆಟ್ಟಿ ಹರಿವರಾಸನಂ ಉಪನ್ಯಾಸ ನೀಡಲಿದ್ದಾರೆ. ಸಾಸ್ ಕಾಪು ವಲಯ ಅಧ್ಯಕ್ಷ ರಘುರಾಮ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರಾದ ಸುರೇಶ್‌ ಶೆಟ್ಟಿ ಗುರ್ಮೆ, ಎಸ್.ಎನ್. ಕೃಷ್ಣಯ್ಯ, ಜೆ ವಸಂತ್ ಕುಮಾರ್, ರಾಧಾಕೃಷ್ಣ ಮೆಂಡನ್, ವಾಸುದೇವ ಶೆಟ್ಟಿ, ಲೀಲಾಧರ ಶೆಟ್ಟಿ, ಮನೋಹರ ಶೆಟ್ಟಿ, ಡಾ| ಪ್ರಶಾಂತ್ ಶೆಟ್ಟಿ, ಪ್ರಭಾಕರ ಪೂಜಾರಿ, ನಡಿಕೆರೆ ರತ್ನಾಕರ ಶೆಟ್ಟಿ, ಜಯಂತಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಸಾಸ್) ಕಾಪು ವಲಯದ ಅಧ್ಯಕ್ಷ ರಘುರಾಮ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ, ಕಾರ್ಯದರ್ಶಿ ನಾಗೇಶ್, ಗೌರವಾಧ್ಯಕ್ಷ ನಾರಾಯಣ ಗುರುಸ್ವಾಮಿ ಉಪಸ್ಥಿತರಿದ್ದರು.

ಡಿಸೆಂಬರ್ 30ರಂದು ಸೋಮನಾಥ ಎಸ್.ಕರ್ಕೇರರ 'ಹನಿ-ಧ್ವನಿ' ಹನಿಗವನ ಸಂಕಲನ ಬಿಡುಗಡೆ

Posted On: 28-12-2022 08:33PM

ಕಾಪು : ಮೂಲತಃ ಕಾಪು ನಿವಾಸಿಯಾಗಿರುವ ಪ್ರಸ್ತುತ ಮುಂಬೈ ವಾಸಿಯಾಗಿರುವ ಲೇಖಕ ಹಾಗೂ ಕವಿ ಸೋಮನಾಥ ಎಸ್.ಕರ್ಕೇರರ ನೂರು ಹನಿಗವನಗಳ ಸಂಕಲನ 'ಹನಿ-ಧ್ವನಿ' ಇದರ ದ್ವಿತೀಯ ಮುದ್ರಣದ ಬಿಡುಗಡೆ ಸಮಾರಂಭವು ಶುಕ್ರವಾರ ಡಿಸೆಂಬರ್ 30 ರಂದು ಸಂಜೆ ಗಂಟೆ 6:30ಕ್ಕೆ ಚೆಂಬೂರಿನ ಫೈನ್ ಆರ್ಟ್ ಸೊಸೈಟಿಯ ಆರ್ ಸಿ ಎಫ್ ಸಭಾಂಗಣದಲ್ಲಿ ಜರಗಲಿದೆ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನಕ ಸಭಾ ಪರ್ಫಾಮಿಂಗ್ ಆರ್ಟ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಜರಗಲಿರುವ ಈ ಸಮಾರಂಭದಲ್ಲಿ ಸೋಮಯ್ಯಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಎಸ್ ಕೆ ಭವಾನಿಯವರು ಕೃತಿ ಬಿಡುಗಡೆ ಮಾಡಲಿದ್ದು ಕವಯಿತ್ರಿ, ಲೇಖಕಿ ಅನಿತಾ ಪೂಜಾರಿ ತಾಕೋಡೆ ಇವರು ಕೃತಿ ಪರಿಚಯ ಮಾಡಲಿದ್ದಾರೆ.

ನವಿ ಮುಂಬಯಿಯ ಅಕ್ಷರ ಗಂಗಾ ಪ್ರಕಾಶನದ ವತಿಯಿಂದ ಪ್ರಕಟಗೊಂಡ 'ಹನಿ-ಧ್ವನಿ'ಯ ಪ್ರಥಮ ಮುದ್ರಣವು 2020ರಲ್ಲಿ ಬಿಡುಗಡೆಗೊಂಡಿದ್ದು ಇದೀಗ ಇದರ ಎರಡನೇ ಮುದ್ರಣವು ಓದುಗರ ಕೈಸೇರುತ್ತಿದೆ. ಈ ಕೃತಿಯು ಈಗಾಗಲೇ ಕಳೆದ ಅಕ್ಟೋಬರ್ 21 ರಂದು ದುಬೈಯ ಬುರ್‌ಪ್ರಾಂತದ ಲಾಕ್ವೆಂಟಾ ಹೋಟೆಲ್‌ನಲ್ಲಿ ಬಿಡುಗಡೆಗೊಂಡಿದ್ದು ಇದೀಗ ಮುಂಬಯಿಯಲ್ಲಿ ಬಿಡುಗಡೆಗೊಳ್ಳಲಿದೆ.

ಈ ತನಕ ಸೋಮನಾಥ ಎಸ್. ಕರ್ಕೇರರ 'ಇಡ್ಲಿ ತಿನ್ನುವ ಸ್ಪರ್ಧೆ', 'ನುಂಗಣ್ಣ ಆಯೋಗದ ವರದಿ ' ಮತ್ತು 'ಹನಿ-ಧ್ವನಿ' ಎಂಬ ಮೂರು ಕನ್ನಡ ಕೃತಿಗಳು ಹೊರ ಬಂದಿದ್ದು ಇವರ ನಗೆ ಲೇಖನಗಳು, ಹನಿಗವನಗಳು, ಹನಿ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಕೋವಿಡ್ ಸೋಂಕಿನ ಬಗ್ಗೆ ಎಚ್ಚರವಹಿಸಿ, ಬೂಸ್ಟರ್ ಡೋಸ್ ತಪ್ಪದೆ ಪಡೆಯಿರಿ : ಜಿಲ್ಲಾಧಿಕಾರಿ ಕೂರ್ಮಾರಾವ್

Posted On: 28-12-2022 07:28PM

ಉಡುಪಿ : ಜಿಲ್ಲೆಯ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಅನ್ನು ತಪ್ಪದೇ ಪಡೆಯಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸಲಹೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಕೋವಿಡ್ ಮುನ್ನೆಚ್ಚರಿಕೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಸಾಮಾನ್ಯರು ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಆತಂಕ ಪಡದೇ ಸರಳ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಮಾಸ್ಕ್ಗಳನ್ನು ಧರಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಈಗಾಗಲೇ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವವರು ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದರು. ನಮ್ಮ ನೆರೆಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮಿತಿಮೀರಿದ್ದು, ನಮ್ಮ ದೇಶದಲ್ಲಿಯೂ ಹರಡುವ ಸಾಧ್ಯತೆ ಇರುವ ಹಿನ್ನಲೆ, ಅಗತ್ಯ ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದ್ದು, ಸರ್ಕಾರ ಮಾರ್ಗಸೂಚಿಗಳನ್ನು ಸಹ ಹೊರಡಿಸಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕು ಎಂದರು. ಆಸ್ಪತ್ರೆಗಳಿಗೆ ಬರುವ ಶೀತ, ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ರೋಗಿಗಳಿಗೆ, ಹೊರದೇಶದಿಂದ ಬಂದವರಿಗೆ, ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದ ಅವರು ಪಾಸಿಟಿವ್ ಫಲಿತಾಂಶ ಬಂದವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ ಶೇ.30 ರಷ್ಟು ಕೋವಿಡ್ ಬೂಸ್ಟರ್ ಡೋಸ್ಗಳನ್ನು ಪಡೆದಿದ್ದಾರೆ. ಪಡೆಯದೇ ಇರುವವರು ಆದ್ಯತೆಯ ಮೇಲೆ ಲಸಿಕೆಯನ್ನು ಪಡೆಯಬೇಕು. 60 ವರ್ಷ ಮೇಲ್ಪಟ್ಡವರಲ್ಲಿ ಶೇ.67 ರಷ್ಟು ಬೂಸ್ಟರ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಶತ 100 ರಷ್ಟು ನೀಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಪ್ರತೀ ಬುಧವಾರ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಬೇಕೆಂದು ಸೂಚನೆ ನೀಡಿದರು.

ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಠ ಸಂಖ್ಯೆಯ ಐಸೋಲೇಶನ್ ಬೆಡ್ಗಳನ್ನು ಮೀಸಲಿಡಬೇಕು ಎಂದ ಅವರು, ಪ್ರಕರಣಗಳ ಸಂಖ್ಯೆ ಏರಿಕೆಯಾದಲ್ಲಿ ನಿರ್ವಹಣೆಗೆ ಎಲ್ಲಾ ಹಂತಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸನ್ನದ್ಧರಾಗಿರಬೇಕು ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಹಾಗೂ ಆಕ್ಸಿಜಿನ್ ಪೂರೈಕಾ ಘಟಕಗಳ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ದುರಸ್ಥಿ ಅಗತ್ಯವಿದ್ದಲ್ಲಿ ಕೂಡಲೇ ಅವುಗಳನ್ನು ಸರಿಪಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿನಿಮಾ ಹಾಲ್, ಮಾಲ್, ಹೋಟೆಲ್ಗಳು ಸೇರಿದಂತೆ ಮತ್ತಿತರ ಒಳಾಂಗಣ ಪ್ರದೇಶದ ಚಟುವಟಿಕೆಗಳಲ್ಲಿ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದ ಅವರು, ಹೊರದೇಶದಿಂದ ಬಂದಿರುವವರ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಹಿತಿ ಪಡೆದು ಅವರ ಮೇಲೆ ನಿಗಾವಹಿಸಬೇಕು ಎಂದರು. ತಾಲೂಕು, ಗ್ರಾಮ ಪಂಚಾಯತ್ ಮಟ್ಟಗಳ ಸಮಿತಿಗಳು ಕಾರ್ಯಪ್ರವೃತ್ತವಾಗಬೇಕು ಎಂದ ಅವರು, ಕೋವಿಡ್ ರೋಗಿಗಳಿಗೆ ಚಿಕಿತ್ಸೆಗಳನ್ನು ನೀಡುವುದರ ಜೊತೆಗೆ ಟೆಲಿ ಮೆಡಿಸನ್ ಮೂಲಕ ಸಹ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 24*7 ಸಹಾಯವಾಣಿ ಸಂಖ್ಯೆ 9663950222, 9663957222 ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದು, ಈಗಾಗಲೇ ವಿತರಿಸಲಾಗುತ್ತಿದೆ. ಆದರೆ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಇರುವುದಿಲ್ಲ. ಅಗತ್ಯವಿರುವವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಗಧಿತ ಮೊತ್ತ ಪಾವತಿಸಿ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪಾಂಗಾಳ ಬ್ರಿಡ್ಜ್ ಬಳಿ ಖಾಲಿ ಟೆಂಪೋ ಪಲ್ಟಿ

Posted On: 28-12-2022 08:41AM

ಕಾಪು : ತಾಲೂಕಿನ ಪಾಂಗಾಳ ಗ್ರಾಮದ ಬ್ರಿಡ್ಜ್ ಬಳಿ ಟೆಂಪೋವೊಂದು ಮಂಗಳವಾರ ತಡರಾತ್ರಿ 2 ಗಂಟೆ ಹೊತ್ತಿಗೆ ಪಲ್ಟಿಯಾದ ಘಟನೆ ನಡೆದಿದೆ.

ಇಷ್ಟರವರೆಗೂ ಈ ವಾಹನವು ಇಲ್ಲೇ ಉಳಿದಿದ್ದು ಇನ್ನು ತೆರವುಗೊಳಿಸಿಲ್ಲ.