Updated News From Kaup

ಮೂಳೂರು : ಬೈಕ್ - ಟ್ಯಾಂಕರ್ ಅಪಘಾತ ; ಓರ್ವ ಸಾವು, ಮತ್ತೋರ್ವ ಗಂಭೀರ

Thumbnail
Posted On: 25 Mar 2023, 06:19 PM

ಮೂಳೂರು : ಕಾಪು ತಾಲೂಕಿನ ಮೂಳೂರಿನ ವೆಸ್ಟ್ ಕೋಸ್ಟ್ ನರ್ಸರಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಪಲ್ಸರ್ ಬೈಕ್ ಮತ್ತು ಟ್ಯಾಂಕರ್ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆ ಸಾಗುತ್ತಿತ್ತು. ಹಿಂಬದಿಯಿಂದ ಬಂದ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಭೇಟಿ ನೀಡಿದ್ದಾರೆ.

ಎರ್ಮಾಳು : ನಗ - ನಗದು ಕಳ್ಳತನ

Thumbnail
Posted On: 25 Mar 2023, 02:43 PM

ಎರ್ಮಾಳು : ಕಾಪು ತಾಲೂಕಿನ ತೆಂಕ ಎರ್ಮಾಳು ಗ್ರಾಮದ ಬೀಚ್‌ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದಕ್ಕೆ ಕಳ್ಳರು ನುಗ್ಗಿ‌ 1.40 ಮೌಲ್ಯದ ನಗ-ನಗದು ಕಳ್ಳತನಗೈದ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಗಳಾದ ನಿಂಗವ್ವ ಮತ್ತು ಆಕೆಯ ಪತಿ‌ ನಿನ್ನೆ ಬೆಳಿಗ್ಗೆ ಎಂದಿನಂತೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನದ ವೇಳೆ ನಿಂಗವ್ವ ಅವರ ಗಂಡ ವಾಪಾಸ್ಸು ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಕಳ್ಳರು ಕಪಾಟಿನಲ್ಲಿದ್ದ 1,10,000 ರೂ. ನಗದು ಹಾಗೂ 30,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಪೂಜಾ ಸಾಮಾಗ್ರಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ನಿಂಗವ್ವ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 26 : ಉದ್ಯಾವರದಲ್ಲಿ ಕೊಂಕಣಿ ಕವಿಗೋಷ್ಠಿ

Thumbnail
Posted On: 25 Mar 2023, 02:25 PM

ಉದ್ಯಾವರ : ನಿರಂತರ್ ಉದ್ಯಾವರ ಮತ್ತು ಪೊಯೆಟಿಕಾ ಮಂಗಳೂರು ಇವರ ನೇತೃತ್ವದಲ್ಲಿ ಪೊಯೆಟಿಕಾ ಕವಿಗೋಷ್ಠಿ 16 ಮಾರ್ಚ್ 26, ಆದಿತ್ಯವಾರ ಸಂಜೆ 4 ಗಂಟೆಗೆ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಡಿವೈನ್ ಗ್ಲೋರಿ ರೋಷನ್ ಕ್ರಾಸ್ಟೋ ಅವರ ನಿವಾಸದಲ್ಲಿ ಜರುಗಲಿದೆ. ಕಳೆದ ಐದು ವರ್ಷಗಳಲ್ಲಿ ವಿವಿಧ ತಂಡಗಳ 30 ಬಹುಭಾಷಾ ನಾಟಕಗಳನ್ನು ಉದ್ಯಾವರದಲ್ಲಿ ಪ್ರದರ್ಶನ ಮಾಡುವಲ್ಲಿ ನೇತೃತ್ವ ವಹಿಸಿದ ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವಂತ ಈ ಕವಿಗೋಷ್ಠಿಯಲ್ಲಿ, ಪ್ರತಿಷ್ಠಿತ ಪೊಯೆಟಿಕಾ ಕವಿ ತಂಡ ಸಹಭಾಗಿತ್ವ ವಹಿಸಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕೊಂಕಣಿ ಕವಿಗಳು ಭಾಗವಹಿಸುತ್ತಿರುವ ಈ ಕವಿಗೋಷ್ಠಿಯಲ್ಲಿ, ದೂರದ ಗೋವಾ ರಾಜ್ಯದಿಂದಲೂ ಕವಿಗಳು ಆಗಮಿಸುತ್ತಿರುವುದು ವಿಶೇಷ. 30 ಮಂದಿ ಯುವ ಮತ್ತು ಅನುಭವಿ ಕವಿಗಳು ತಮ್ಮ ಕವಿತೆಯನ್ನು ಕವಿಗೋಷ್ಠಿಯಲ್ಲಿ ಸಾದರಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರ ಪ್ರಕಟಣೆ ತಿಳಿಸಿದೆ.

ಮಾಚ್೯ 28 : ಉಡುಪಿಯಲ್ಲಿ‌ ನೇರ ಸಂದರ್ಶನ

Thumbnail
Posted On: 24 Mar 2023, 11:16 PM

ಉಡುಪಿ : ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಮಾರ್ಚ್ 28 ರಂದು ಬೆಳಗ್ಗೆ 10.30 ಕ್ಕೆ ನಗರದ ಶಾಂತ ಎಲೆಕ್ಟ್ರಿಕಲ್ಸ್ ಪ್ರೈ.ಲಿ., ಆಭರಣ ಜುವೆರ್ಸ್ ಹತ್ತಿರ, ಕಾರ್ಪೊರೇಶನ್ ಬ್ಯಾಂಕ್ ರೋಡ್, ಅನುಗ್ರಹ ಕಾಂಪ್ಲೆಕ್ಸ್ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ, ಬಿ.ಎ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ:8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಪು : ಪಡುಬಿದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಹೋರಾಟ ಸಮಿತಿಯಿಂದ ಆಗ್ರಹ ; ಮನವಿ ಸಲ್ಲಿಕೆ

Thumbnail
Posted On: 24 Mar 2023, 07:08 PM

ಬೆಳಪು : ಪಡುಬಿದ್ರಿ ರೈಲು ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲು ನಿಲುಗಡೆಗೊಳಿಸುವಂತೆ ಆಗ್ರಹಿಸಿ ಮತ್ತು ರೈಲ್ವೆ ನಿಲ್ದಾಣದ ರಸ್ತೆಯನ್ನು ಬೆಳಪು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕುರಿತಂತೆ ಮಾಚ್೯ 24ರಂದು ಹೋರಾಟ ಸಮಿತಿ ಸೇರಿದಂತೆ ಎಂಟು ಗ್ರಾಮಗಳ ಜನರು ಪ್ರತಿಭಟನಾ ಸಭೆ ನಡೆಸಿ ರೈಲ್ವೆ ಅಧಿಕಾರಿ ಗಣಪತಿ ನಾಯಕ್ ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಬೆಳಪು (ಪಡುಬಿದ್ರಿ) ರೈಲು ನಿಲ್ದಾಣ ಮೇಲ್ದರ್ಜೆ ಹೋರಾಟ ಸಮಿತಿ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪುವಿನಲ್ಲಿರುವ ರೈಲು ನಿಲ್ದಾಣಕ್ಕೆ ಪಡುಬಿದ್ರಿ ರೈಲು ನಿಲ್ದಾಣವೆಂದು ಹೆಸರಿಟ್ಟಿದ್ದಾರೆ. ಬೆಳಪು ಸುತ್ತ ಮುತ್ತ ಹಲವಾರು ಔದ್ಯೋಗಿಕ ಕೇಂದ್ರಗಳಿದ್ದು ಬೇರೆ ರಾಜ್ಯದ ಜನರಿಗೂ ಇದು ಅವಶ್ಯಕವಾದ ರೈಲು ನಿಲ್ದಾಣ. ಕಾಸರಗೋಡಿನಲ್ಲಿ ಪ್ರತಿ ನಿಲ್ದಾಣದಲ್ಲಿಯೂ ರೈಲು ನಿಲುಗಡೆ ಇದೆ ನಮ್ಮಲ್ಲಿ ಯಾಕಿಲ್ಲ. ಸುಮಾರು ವರ್ಷಗಳಿಂದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಮನವಿಗೆ ಒಂದು ತಿಂಗಳೊಳಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ರೈಲು ರೋಖೋ ಅನಿವಾರ್ಯ ಎಂದರು. ಈ ಸಂದರ್ಭ ಬೆಳಪು, ಉಚ್ಚಿಲ, ಮಲ್ಲಾರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ ಸದಸ್ಯರು, ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.

ಮಾಚ್೯ 27ರಿಂದ 29 : ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನ ಮಲ್ಲಾರು ರಾಣ್ಯಕೇರಿ, ಕಾಪು - ಪುನರ್ ಪ್ರತಿಷ್ಠೆ, ಕಾಲಾವಧಿ ರಾಶಿ ಮಾರಿ ಪೂಜೆ

Thumbnail
Posted On: 23 Mar 2023, 08:34 PM

ಕಾಪು : ಇಲ್ಲಿನ ಮಲ್ಲಾರು ರಾಣ್ಯಕೇರಿ ಕೋಟೆ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದಲ್ಲಿ ಮಾಚ್೯ 27, ಸೋಮವಾರ ಬೆಳಿಗ್ಗೆ ಪುನರ್ ಪ್ರತಿಷ್ಠೆ ಹಾಗೂ 28,ಮಂಗಳವಾರ ಹಾಗೂ 29, ಬುಧವಾರದಂದು ಕಾಲಾವಧಿ ರಾಶಿ ಮಾರಿಪೂಜೆಯು ಜರಗಲಿದೆ. ಮಾಚ್೯ 27,ಸೋಮವಾರ ಬೆಳಿಗ್ಗೆ ಗಂಟೆ 7:30ಕ್ಕೆ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 11ಕ್ಕೆ ಚಂಡಿಕಯಾಗ ಪೂರ್ಣಾಹುತಿ, ಗಂಟೆ 11:30ಕ್ಕೆ ಕಲಶಾಭೀಷೇಕ, ಮಧ್ಯಾಹ್ನ ಗಂಟೆ 12:30ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಮಾಚ್೯ 28, ಮಂಗಳವಾರ ಬೆಳಿಗ್ಗೆ ಗಂಟೆ 5ಕ್ಕೆ ಹೊರೆಕಾಣಿಕೆ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ ಗಂಟೆ 7:30ಕ್ಕೆ ಹೊರೆಕಾಣಿಕೆ ಕಟ್ಟೆಯಿಂದ ಮೆರವಣಿಗೆಯ ಮೂಲಕ ಶ್ರೀ ದೇವಿಯ ಸನ್ನಿಧಾನಕ್ಕೆ ಹೊರೆಕಾಣಿಕೆ ಹಾಗೂ ಶ್ರೀ ದೇವಿಯ ಬಿಂಬ ಬರುವುದು. ರಾತ್ರಿ ಗಂಟೆ 7:30 ರಿಂದ ರಾತ್ರಿ ಗಂಟೆ 8ರವರೆಗೆ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8:30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11:30ಕ್ಕೆಮಹಾಪೂಜೆ ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿಪೂಜಾ ಮಹೋತ್ಸವ ಜರಗಲಿದೆ. ಮಾಚ್೯ 29, ಬುಧವಾರ ಬೆಳಿಗ್ಗೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ ಗಂಟೆ 3ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಭಿಮಾನಿಗಳೆಲ್ಲರೂ ಈ ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಮಲ್ಲಾರು, ರಾಣ್ಯಕೇರಿ - ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆಡಳಿತ ವ್ಯವಸ್ಥೆಯು ಸಮಸ್ಯೆಗೆ ಪರಿಹಾರವಾಗಬೇಕು : ಸಚಿವ ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 23 Mar 2023, 07:38 PM

ಉಡುಪಿ : ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಅತ್ಯಂತ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸ್ನೇಹಿಯಾಗಿರಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಂದು, ಬ್ರಹ್ಮಾವರದಲ್ಲಿ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಾವರ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಿ, ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡುವ ಮನೋಭಾವವನ್ನು ಸಿಬ್ಬಂದಿಗಳು ಬೆಳೆಸಿಕೊಳ್ಳುವಂತೆ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ವಿನಾಯತಿಯ ನಂತರ ಕಂದಾಯ ಇಲಾಖೆಗೆ ನೀಡಿರುವ ಜಾಗವನ್ನು ಅರ್ಹರಿಗೆ 94 ಸಿ ಮತ್ತು 94 ಸಿಸಿ ಯಡಿಯಲ್ಲಿ ಆದ್ಯತೆಯ ಮೇಲೆ ಹಕ್ಕುಪತ್ರಗಳನ್ನು ನೀಡುವ ಕಾರ್ಯ ಆಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಾವರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಕಾಮಗಾರಿಗಳಿಗಾಗಿ 310 ಕೋಟಿ ರೂ. ಮತ್ತು 195 ಕೊಟಿ ರೂ. ಗಳ ಯೋಜನೆಯನ್ನು ಕೈಗೊಳ್ಳಲಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಾವರ ಸೀತಾನದಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ನೆರವಿನಿಂದ 5 ಎಕ್ರೆ ಪ್ರದೇಶದಲ್ಲಿ 100 ಬೆಡ್ ಸಾಮರ್ಥ್ಯದ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ನೂತನ ತಾಲೂಕು ಕೋರ್ಟ್ ಹಾಗೂ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ ಎಂದರು. ಪ್ರಸ್ತುತ ನೂತನ ತಾಲೂಕು ಆಡಳಿತ ಸೌಧದಲ್ಲಿ ಎಲ್ಲಾ ತಾಲೂಕು ಮಟ್ಟದ ಕಚೇರಿಗಳು ಒಂದೇ ಕಡೆ ಇರುವುದರಿಂದ ನಾಗರೀಕರಿಗೆ ಒಂದೇ ಕಡೆಯಲ್ಲಿ ಹಲವು ಸೌಲಭ್ಯಗಳು ಶೀಘ್ರದಲ್ಲಿ ದೊರೆಯಲಿದ್ದು, ಕಟ್ಟಡದಲ್ಲಿ ಪೀಠೋಪಕರಣ ಮತ್ತಿತರ ಸೌಲಭ್ಯಕ್ಕಾಗಿ ಹೆಚ್ಚುವರಿಯಗಿ 2.75 ಕೋಟಿ ರೂ. ಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಪಂಡರೀನಾಥ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಮ್ ಹಾಕೆ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಸಹನಾ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ವಂದಿಸಿದರು.

ಉಡುಪಿ : ಮಾಚ್೯ 24 - ಬ್ಯಾನರ್, ಕಟೌಟ್ಗಳ ತೆರವಿಗೆ ಕೊನೆ ದಿನ

Thumbnail
Posted On: 23 Mar 2023, 07:32 PM

ಉಡುಪಿ : ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023 ರ ಪ್ರಯುಕ್ತ ಉಡುಪಿ ನಗರಸಭೆಯಿಂದ ಅನುಮತಿ ನೀಡಿ ಅವಧಿ ಮುಗಿದಿರುವ ಹಾಗೂ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಕಟೌಟ್ಗಳನ್ನು ಮಾರ್ಚ್ 24 ರ ಒಳಗೆ ತೆರವುಗೊಳಿಸಬೇಕು. ಕಾರ್ಯಕ್ರಮ ನಡೆಸಲು ಹಾಗೂ ಬ್ಯಾನರ್ ಮತ್ತು ಕಟೌಟ್ಗಳನ್ನು ಅಳವಡಿಸಲು ನಗರಸಭೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ಸದರಿ ಬ್ಯಾನರ್, ಬಂಟಿಂಗ್ಸ್ ಹಾಗೂ ಹೋರ್ಡಿಂಗ್ಸ್ಗಳನ್ನು ಅನಧಿಕೃತವೆಂದು ಪರಿಗಣಿಸಿ, ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ : ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಳ ಜೀರ್ಣೋದ್ಧಾರ - ಶಂಕುಸ್ಥಾಪನೆ

Thumbnail
Posted On: 23 Mar 2023, 06:50 PM

ಉಡುಪಿ : ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ, ಸುಮಾರು 10ನೇ ಶತಮಾನದಲ್ಲಿ ಆಳುಪ ವಂಶದ ರಾಣಿ ಬಲ್ಲಾ ಮಹಾದೇವಿ ನಿರ್ಮಿಸಿದ ಇಲ್ಲಿನ ಪೆರ್ಣಂಕಿಲ ಗ್ರಾಮದ ಮಹಾಲಿಂಗೇಶ್ವರ - ಮಹಾಗಣಪತಿ ದೇವಳದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಶಂಕುಸ್ಥಾಪನೆ ನಡೆಯಿತು. ಊರಿನ ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜೀರ್ಣೋದ್ಧಾರ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಪೇಜಾವರ ಮಠದ ದಿವಾನರಾದ ಸುಬ್ರಹ್ಮಣ್ಯ ಭಟ್ ಸಗ್ರಿ, ದೇವಳದ ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ ಸರಳಾಯ, ದೇವಸ್ಥಾನದ ತಂತ್ರಿ ಮಧುಸೂದನ ತಂತ್ರಿ, ವ್ಯವಸ್ಥಾಪಕರಾದ ಸುರೇಶ ತಂತ್ರಿ, ಸಮಿತಿಯ ಪದಾಧಿಕಾರಿಗಳಾದ ಸುವರ್ಧನ ನಾಯಕ್, ಸದಾನಂದ ಪ್ರಭು, ವಸಂತ ಶೆಟ್ಟಿ ಕುದಿ, ಉಮೇಶ್ ನಾಯಕ್, ಮಹೇಶ್ ಕುಲಕರ್ಣಿ, ಸಂದೀಪ್ ನಾಯಕ್ ಹೆಬ್ಬಾಗಿಲು ಮುಂತಾದವರು ಉಪಸ್ಥಿತರಿದ್ದರು. ಸುಮಾರು 10 ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿರುವ ಈ ಜೀರ್ಣೋದ್ದಾರ ಕಾರ್ಯವು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಒಂದೇ ಪ್ರಾಕರದೊಳಗೆ ಪೂರ್ವಾಭಿಮುಖವಾಗಿ ಮಹಾಲಿಂಗೇಶ್ವರ ಮತ್ತು ಪಶ್ಚಿಮಾಭಿಮುಖವಾಗಿ ಉದ್ಭವ ಮಹಾಗಣಪತಿ ದೇವಾಲಯಗಳಿರುವುದು ಇಲ್ಲಿನ ವಿಶೇಷತೆಯಾಗಿದೆ.

ಕಾರ್ಕಳ ವಿಧಾನಸಭಾ ಕ್ಷೇತ್ರ : ಕಾಂಗ್ರೆಸ್ ನಿಂದ ಅನಿತಾ ಡಿಸೋಜ ರವರಿಗೆ ಟಿಕೆಟ್ ನೀಡಲು ಮನವಿ

Thumbnail
Posted On: 23 Mar 2023, 02:08 PM

ಕಾರ್ಕಳ : ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಮಯದಲ್ಲಿ ವಿವಿಧ ಪಕ್ಷಗಳು ಅಭ್ಯರ್ಥಿ ತನಕ್ಕಾಗಿ ಭಾರಿ ಕಸರತ್ತನ್ನು ಮಾಡುತ್ತಿವೆ. ಪ್ರತಿಷ್ಠಿತ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತರಲು ಹರಸಾಹಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಲವು ಬಾರಿ ಪ್ರತಿನಿಧಿಸಿದಂತ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ ಹೀನಾಯ ಪರಿಸ್ಥಿತಿಯಲ್ಲಿದೆ. ಇಂಧನ ಸಚಿವ ಬಿಜೆಪಿ ಪ್ರಮುಖ ಮುಖಂಡ ಸುನಿಲ್ ಕುಮಾರ್ ರವರ ಹಿಡಿತದಲ್ಲಿರುವಂತ ಕಾರ್ಕಳ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ ಗತ ಇತಿಹಾಸವನ್ನು ಮರಳಿ ತರುವಲ್ಲಿ ಹರಸಾಸಪಡುತ್ತಿದೆ. ಹೀನಾಯ ಪರಿಸ್ಥಿತಿಯಲ್ಲಿದ್ದರೂ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಕೊರತೆ ಇಲ್ಲ. ಐದಕ್ಕೂ ಅಧಿಕ ಅಭ್ಯರ್ಥಿಗಳು ಈಗಾಗಲೇ ತಮ್ಮ ಹೆಸರನ್ನು ಕೆಪಿಸಿಸಿಯಲ್ಲಿ ನೋಂದಾಯಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಈ ಬಾರಿ ಮಹಿಳೆಯರಿಗೆ ಅವಕಾಶ ಕೊಡಿ ಎಂಬ ಸದ್ದು ಎದ್ದಿದ್ದು, ಇದಕ್ಕೆ ಕ್ರೈಸ್ತ ಸಮಾಜ ಬಾಂಧವರ ಹಲವು ಸಂಘಟನೆಗಳು ಸಾತ್ ನೀಡಿವೆ. 20ಕ್ಕೂ ಅಧಿಕ ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿದಿರುವ, ಪ್ರಸ್ತುತ ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅನಿತಾ ಡಿಸೋಜರವರು ಈ ಬಾರಿ ಅಭ್ಯರ್ಥಿಯಾಗಲಿ ಎಂಬ ಸದ್ದು ಕಾರ್ಕಳದಲ್ಲಿ ಪ್ರತಿಧ್ವನಿಸುತ್ತಿದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅನಿತಾ ಡಿಸೋಜ, ಪಕ್ಷದ ಪರವಾಗಿ ವಿವಿಧ ಮಾಧ್ಯಮಗಳಲ್ಲಿ ತನ್ನ ಧ್ವನಿಯನ್ನು ಎತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಎರಡು ಪಕ್ಷಗಳಲ್ಲಿ ಮಹಿಳೆಯರಿಗೆ ಟಿಕೆಟ್ ದೊರಕುತ್ತಿಲ್ಲ. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ರವರಿಗೆ ಪಕ್ಷದಿಂದ ಟಿಕೆಟ್ ನೀಡಿದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬುದನ್ನು ನಿರೀಕ್ಷೆ ಮಾಡಬಹುದೆಂದು ಕ್ರೈಸ್ತ ಸಂಘಟನೆಗಳು ಒತ್ತಾಯಿಸಿವೆ. ಇವರು ಸಮಾಜ ಸೇವೆಯಲ್ಲಿ ಚಿರಪರಿಚಿತರು. ಬೆಳ್ಮಣ್ ಪರಿಸರದಲ್ಲಿ ಅಪಘಾತ ನಡೆದಾಗ ರಾತ್ರಿ ಹಗಲು ಯೆನ್ನದೆ ಮೊದಲು ನೆನೆಯುವ ಹೆಸರು ಇವರದ್ದು. ಎಷ್ಟೋಜನರನ್ನ ಅಪಘಾತವಾದಾಗ ಯಾವುದೇ ಫಲಾಪೇಕ್ಷೆ ಆಶಿಸದೆ ಆಸ್ಪತ್ರೆಗೆ ದಾಕಲಿಸಿದ ಉಧಾಹರಣೆಗಳು ಅದೆಷ್ಟೋ ಇವೆ. ಬೆಳ್ಮಣ್ ಪರಿಸರದಲ್ಲಿ ಬೆಳ್ಮಣ್ ಹೆಲ್ಪಿಂಗ್ ಹ್ಯಾಂಡ್ ಎಂಬ ವಾಟ್ಸಾಪ್‌ ಗುಂಪ್ಪನ್ನು ಹುಟ್ಟು ಹಾಕಿ ಬೆಳ್ಮಣ್ ಪರಿಸರದಲ್ಲಿ ಸಮಾರಂಭದಲ್ಲಿ ಹೆಚ್ಚಾಗಿ ಉಳಿದ ಆಹಾರವನ್ನು ಅಸಕ್ತರಿಗೆ, ನಿಗೃತಿಕರಿಗೆ ಹಾಗೂ ಅನಾತಾಶ್ರಮಗಳಿಗೆ ಕ್ಲಪ್ತ ಸಮಯದಲ್ಲಿ ತಲುಪಿಸಿ ಆಹಾರವನ್ನು ಪೋಲಾಗದ ರೀತಿಯಲ್ಲಿ ಸಹಕರಿಸುತ್ತಾರೆ. ದಾನಿಗಳಿಂದ ಬಟ್ಟೆ ಹಾಗೂ ಆಹಾರ ದಾನ್ಯಗಳನ್ನ ಒಟ್ಟು ಗೂಡಿಸಿ ಅಗತ್ಯವಿದ್ದವರಿಗೆ ತಲುಪಿಸುತ್ತಾರೆ. ಬೆಳ್ಮಣ್ಣಲ್ಲಿ ನಿರ್ಗತಿಕರನ್ನು ಆಶ್ರಮ ಹಾಗೂ ಪುನವಸತಿ ಕೇಂದ್ರಕ್ಕೆ ತಲುಪಿಸುವಲ್ಲಿ ಸಹಕರಿಸಿರುತ್ತರೆ. ಪರಿಸರದಲ್ಲಿ ಸ್ವಚ್ಚತೆಯ ಅರಿವು ಜನರಲ್ಲಿ ಮೂಡಿಸುವ ಉದ್ದೇಶದಿಂದ ಸ್ವಚ್ಚತಾ ತಂಡದ ಸಕ್ರೀಯ ಸದಸ್ಯೆಯಾಗಿ ಪ್ರತಿ ಭಾನುವಾರ ಸ್ವಚ್ಚತಾ ಕಾಯಕ್ರಮವನ್ನು ಯಶಸ್ಚಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಮದುವೆಯ ದಿನ ಬಡವರ್ಗದ ಎಷ್ಟೋ ಹೆಣ್ಣು ಮಕ್ಕಳನ್ನ ಬೆಳಗ್ಗಿನ ಜಾವ ಅವರ ಮನೆಗೆ ಹೋಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮದುಮಗಳನ್ನು ಚೆನ್ನಾಗಿ ಮದುವೆಗೆ ತಯಾರುಮಾಡಿ ಕಳುಹಿಸಿ ಕೊಟ್ಟಿರುವ ಇವರು ಕೊರೊನಾದ ಸಮಯದಲ್ಲಿ ದಾನಿಗಳಿಂದ 500ಕ್ಕೂ ಹೆಚ್ಚಿನ ಮನೆಗಳಿಗೆ ದಿನಸಿ ವಸ್ತುಗಳನ್ನು ಹಂಚಿರುತ್ತಾರೆ. ವೃದ್ದರಿಗೆ ಹಾಗೂ ಅಗತ್ಯವಿದ್ದವರಿಗೆ ಔಷದಿಯನ್ನ ತರಿಸಿ ಕೊಟ್ಟಿದ್ದು, ಕ್ಲಪ್ತ ಸಮಯದಲ್ಲಿ ಅಗತ್ಯ ಬಿದ್ದವರಿಗೆ ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಬೆಳ್ಮಣ್ ಪರಿಸರದಲ್ಲಿ ಕೂಲಿ ಕಾರ್ಮಿಕರಾಗಿ ಇದ್ದ ಉತ್ತರ ಭಾರತದ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಬೇಕಾದ ವ್ಯವಸ್ತೆಯನ್ನ ಮಾಡಲು ಸಹಕರಿಸಿದ್ದಾರೆ. ಎಷ್ಟೋ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅರಕ್ಷಕ ಠಾಣೆ ಕಾರ್ಕಳ, ಬೆಳ್ಮಣು ಸರಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಜೊತೆ 24 ಗಂಟೆಯೂ ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡಿದ ಕೀರ್ತಿ ಬೆಳ್ಮಣ್‌ ಪರಿಸರದಲ್ಲಿ ಇವರಿಗೆ ಸಲ್ಲಿತ್ತದೆ. ಸುಮಾರು 22 ಬಾರಿ ರಕ್ತದಾನ ಮಾಡಿ ಮಹಿಳೆಯರಿಗೆ ಸ್ಪೂರ್ತಿದಾತರಾಗಿದ್ದಾರೆ. ಚರ್ಚ್ ಪಾಲನ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿರುವ ಇವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳು ಮನವಿ ಮಾಡಿದೆ.