Updated News From Kaup

ಕಾಪು : ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಜಿಲ್ಲಾ ಚೇರ್ಮೆನ್ ಅಧಿಕೃತ ಭೇಟಿ

Thumbnail
Posted On: 20 Feb 2023, 01:39 PM

ಕಾಪು : ತಾಲೂಕಿನ ಶಂಕರಪುರ ಇನ್ನರ್ ವೀಲ್ ಕ್ಲಬ್ ಗೆ ಶುಕ್ರವಾರದಂದು ಇನ್ನರ್ ವೀಲ್ ಜಿಲ್ಲಾ ಚೇರ್ಮೆನ್ ಕವಿತಾ ನಿಯತ್ ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಂಕರಪುರದ ಮುಖ್ಯ ಬೆಳೆಯಾದ ಮಲ್ಲಿಗೆ ಕೃಷಿ ಹಾಗೂ ಹೂವಿನ ಬಗ್ಗೆ ಮತ್ತು ಶಂಕರಪುರ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉದಯೋನ್ಮುಖ ಸಂಗೀತಗಾರ ಆಯುಷ್ ರೇಗನ್ ಮಿನೇಜಸ್ ಹಾಗೂ ಶಿರ್ವದಲ್ಲಿ ವಿಭಿನ್ನ ಶಕ್ತಿಯ ಮಕ್ಕಳಿಗೆ ತರಬೇತಿ ಹಾಗೂ ತರಗತಿಯನ್ನು ನೀಡುತ್ತಿರುವ ವಿಶಿಷ್ಟ ಸಂಸ್ಥೆಯ ಸ್ಥಾಪಕಿ ಫ್ಲೋರಿನ್ ರಿಮಾ ಮಿನಜಸ್ ಅವರನ್ನು ಸನ್ಮಾನಿಸಲಾಯಿತು. ಸುಭಾಷ್ ನಗರ ಸರಕಾರಿ ಗುಡ್ಡೆ ಹಾಗೂ ಶಂಕರಪುರ ಪರಿಸರದಲ್ಲಿ ಅಡ್ಡರಸ್ತೆಯ ಗುರುತಿನ 9 ನಾಮಫಲಕಗಳನ್ನು ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸಿ. ಜಿ .ಆರ್. ದೀಪ ಭಂಡಾರಿ ಸಂಸ್ಥೆಯ ಗ್ರಹ ಪತ್ರಿಕೆ "ಹೊಂಗಿರಣ" ಅನ್ನು ಬಿಡುಗಡೆಗೊಳಿಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಕೊಂಡಾಡಿದರು. ರೋಟರಿ ಸದಸ್ಯರು, ಜೆಸಿಐ ಸದಸ್ಯರು, ವಿವಿಧ ಇನ್ನರ್ ವೀಲ್ ಕ್ಲಬ್ ಗಳಿಂದ ಆಗಮಿಸಿದ ಸದಸ್ಯರು ಉಪಸ್ಥಿತರಿದ್ದರು. ಎಲಿಸಾ ಮಾರ್ಟಿಸ್ ಪ್ರಾರ್ಥಿಸಿದರು. ಅಧ್ಯಕ್ಷರಾದ ಶಾಲಿನಿ ಚಂದ್ರ ಸ್ವಾಗತಿಸಿದರು. ಲೀನಾ ಮೆಂಡೋನ್ಸ ಕಾರ್ಯಕ್ರಮ ನಿರೂಪಿಸಿದರು. ಆಲಿಸ್ ರೋಡ್ರಿಗಸ್ ವಂದಿಸಿದರು.

ಕಾರ್ಕಳ : ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ

Thumbnail
Posted On: 20 Feb 2023, 12:54 PM

ಕಾರ್ಕಳ : ಇಲ್ಲಿನ ಕುಲಾಲ ಸಂಘ, ಕುಲಾಲ ಯುವ ವೇದಿಕೆ ವತಿಯಿಂದ ಕಾರ್ಕಳ ತಾಲೂಕಿನ ಬಳಿ ಇರುವ ಸರ್ವಜ್ಞ ಸರ್ಕಲ್ ನ ಸರ್ವಜ್ಞನ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸರ್ವಜ್ಞ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲ್, ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ದಿವಾಕರ್ ಬಂಗೇರ, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷರಾದ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಕುಲಾಲ್, ವಸಂತ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹೃದಯ ಕುಲಾಲ್, ವಿಜೇಶ್ ಕುಲಾಲ್, ಮಹಿಳಾ ಮಂಡಲದ ಸದಸ್ಯರು, ಯುವ ವೇದಿಕೆಯ ಸದಸ್ಯರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಟಪಾಡಿ ಸಮಾಜ ಸೇವಕ ಜಯರಾಜ ಕಟಪಾಡಿ, ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆ

Thumbnail
Posted On: 19 Feb 2023, 04:00 PM

ಉಡುಪಿ : ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಟಪಾಡಿಯ ಸಮಾಜ ಸೇವಕರಾದ ಜಯರಾಜ ಕಟಪಾಡಿ ಮತ್ತು ಸಂಗಡಿಗರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಜಯರಾಜ ಕಟಪಾಡಿ ಮತ್ತು ಸಂಗಡಿಗರಿಗೆ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭ ರಾಜ್ಯ ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಗಂಗಾಧರ ಬಿರ್ತಿ ಮತ್ತು ಮನ್ಸೂರ್ ಇಬ್ರಾಹಿಂ, ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವ ರಾವ್, ನಾಯಕರಾದ ಸಂಕಪ್ಪ ಎ, ಬಾಲಕೃಷ್ಣ ಆಚಾರ್ಯ ಕಬ್ಬೆಟ್ಟು, ಇಕ್ಬಾಲ್ ಅತ್ರಾಡಿ, ಅಶ್ರಫ್ ಪಡುಬಿದ್ರಿ, ಸಂಜಯ್ ಕುಮಾರ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ

Thumbnail
Posted On: 19 Feb 2023, 03:39 PM

ಕಾಪು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ರವಿವಾರ ಕಾಪು ಮಹಾದೇವಿ ಶಾಲೆಯ ಮೈದಾನದಲ್ಲಿ ಉದ್ಘಾಟನೆಗೊಂಡಿತು. ಹೆಜಮಾಡಿಯ ಉದ್ಯಮಿ ಗುಲಾಂ ಅಹಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತಾಡಿದ ಅವರು ಪತ್ರಕರ್ತರು ತಮ್ಮ ದೈನಂದಿನ ಕಾರ್ಯದ ಒತ್ತಡದ ನಡುವೆಯೂ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ವಿಷಯ. ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠೆ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹಮೀದ್ ಪಡುಬಿದ್ರಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ನಿರೂಪಿಸಿ, ವಂದಿಸಿದರು.

ಫೆ.20 : ಹೆಜಮಾಡಿಯಲ್ಲಿ ಕಾಪು ತಹಶೀಲ್ದಾರ್ ಗ್ರಾಮ ವಾಸ್ತವ್ಯ

Thumbnail
Posted On: 19 Feb 2023, 10:49 AM

ಕಾಪು : ತಾಲೂಕಿನ ಹೆಜಮಾಡಿ ಗ್ರಾಮದಲ್ಲಿ ಫೆ.20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ಕಾಪು ತಾಲೂಕಿನ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆ ಎಂದು ಕಾಪು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

ಕಾಪು : ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆ - ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ

Thumbnail
Posted On: 18 Feb 2023, 03:40 PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇವರು ಆಯೋಜಿಸಿದ ರಾಜ್ಯಮಟ್ಟದ ಗೀತಗಾಯನ ಸಂಗೀತ ಸ್ಪರ್ಧೆಯಲ್ಲಿ ಕಾಪು ಶಂಕರಪುರದ ಆಯುಷ್ ರೇಗನ್ ಮಿನೇಜಸ್ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆ ಯಲ್ಲಿ 20 ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ದಿಸಿದ್ದರು. ಈ ಸ್ಪರ್ಧೆಯಲ್ಲಿ ಕಬ್ಸ್ ವಿಭಾಗದಲ್ಲಿ ಆಯುಷ್ ರೇಗನ್ ಮಿನೇಜಸ್ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವೇಳೆ ಪಿ ಜಿ ಆರ್ ಸಿಂದ್ಯಾರವರು ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ. ಇವರು ರಾಜ್ಯ ಮಟ್ಟದ ಈ ಸ್ಪರ್ಧೆಯ ಸಲುವಾಗಿ ಕಾಪು ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಕಾಪುವಿನ ಶಂಕರಪುರದ ಅಲ್ವೀನ್ ಮಿನೇಜಸ್ ಹಾಗೂ ಸುನೀತಾ ಮಿನೇಜಸ್ ದಂಪತಿಗಳ ಪುತ್ರನಾದ 9 ವರ್ಷದ ಆಯುಷ್ ರೇಗನ್ ಅವರು ಶಂಕರಪುರದ ಸೈಂಟ್ ಜಾನ್ಸ್ ಅಕಾಡೆಮಿಯ 4 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರು ಗಾಯನಕ್ಕೆ ಒಲಿವರ್ ರೆಬೆಲ್ಲೋರವರಿಂದ ತರಬೇತಿ ಪಡೆದುಕೊಂಡಿದ್ದು, ಈ ಹಿಂದೆ ಉಡುಪಿ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ಪ್ರಥಮ ಹಾಗೂ ಕೊಂಕಣಿ ನಾಟಕ ಸಭಾ ಮಂಗಳೂರು ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಅನೇಕ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಗಾಯನ ಪ್ರತಿಭೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಮಹಾಶಿವರಾತ್ರಿ : ಹಬ್ಬವಲ್ಲ, ’ವ್ರತ'

Thumbnail
Posted On: 18 Feb 2023, 03:27 PM

'ಶಿವರಾತ್ರಿ' ಸಂಭ್ರಮಿಸುವ ಹಬ್ಬ ಅಲ್ಲ; ಉಪವಾಸವಿದ್ದು ಶಿವನನ್ನು ಅಭಿಷೇಕ, ಸಹಸ್ರನಾಮಾದಿಗಳಿಂದ ಸುಪ್ರೀತನನ್ನಾಗಿಸುವುದು, ಧ್ಯಾನಾಸಕ್ತರಾಗಿದ್ದು ರಾತ್ರಿ ಜಾಗರಣೆಯಲ್ಲಿರುವುದು, ಪ್ರದಕ್ಷಿಣೆ-ನಮಸ್ಕಾರ, ಬಿಲ್ವಾರ್ಚನೆ ಯಿಂದ ಮಹಾದೇವನನ್ನು ಆರಾಧಿಸುವ ವ್ರತ ವಿಶೇಷವಾಗಿ ’ಮಹಾ ಶಿವರಾತ್ರಿ’ ಪುರಾಣಕಾರರಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಶರಣಾರ್ಥಿ ಶರಣರಿಗೆ ಸರ್ವಮಂಗಲವನ್ನು ಅನುಗ್ರಹಿಸುವ ಮಂಗಲಕರನಾದ ಶರ್ವನು ಜನಮಾನಸಕ್ಕೆ ಸಮೀಪದ ದೇವರು. ವೇದಪೂರ್ವ ಕಾಲದಿಂದ ಈತನ ಅಸ್ತಿತ್ವವು ಗುರುತಿಸಲ್ಪಡುತ್ತದೆ. ವೇದಕಾಲದಲ್ಲಿ ಒಂದು ಸ್ವರೂಪವನ್ನು ಪಡೆದು ವೇದೋತ್ತರ ಕಾಲಕ್ಕಾಗುವಾಗ ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಲಯಾಧಿಕಾರಿಯಾಗಿ, ದೇವೋತ್ತಮನಾಗಿ, ಮಹಾಲಿಂಗನಾಗಿ, ಭೂವ್ಯೋಮ ವ್ಯಾಪಿಯಾದ ವಿರಾಟ್ ಪುರುಷನಾಗಿ ಪುರಾಣಗಳು ಕೊಂಡಾಡುವಂತಾಗುವುದನ್ನು ಗಮನಿಸಬಹುದು. ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೇ ತೀವ್ರವಾದ ಪ್ರವೃತ್ತಿಯೂ ಶಂಕರನಲ್ಲಿ ಕಾಣಬಹುದು. ಗೊಂದಲಗಳ ಗೂಡಾಗಿ ಕಾಣುವ, ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ-ಶಿವಪರಿವಾರ ಸ್ವತಃ ದೇವದೇವನೇ ಮಾನವ ಕೋಟಿಗೆ ಒಂದು ಆದರ್ಶ ಸಂದೇಶವನ್ನು ನೀಡುವಂತಿದೆ. ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದ್ದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ, ಸ್ತುತಿ ಇತ್ಯಾದಿ. ಭಕ್ತಿಗೆ ಒಲಿದಾಗ ಬೇಡಿದ್ದನ್ನು ಅನುಗ್ರಹಿಸುವ ಶಿವನು ಕೆಲವೊಮ್ಮೆ ’ಬೋಳೆ ಶಂಕರ’ನೆಂದೇ ಗುರುತಿಸುವಷ್ಟು ಮುಗ್ಧನಾಗಿ ನಮ್ಮ ಮುಂದೆ ನಿಲ್ಲುತ್ತಾನೆ. ಕೋಪಗೊಂಡಾಗ ಬ್ರಹ್ಮಾಂಡ ಭಾಂಡವನ್ನೇ ಲಯಗೊಳಿಸುವ ಮಹಾಶಕ್ತಿಯಾಗಿ ವಿಜೃಂಭಿಸುತ್ತಾನೆ. ಅರ್ಧನಾರೀಶ್ವರನಾಗಿ ಗೃಹಸ್ಥನ ಬದುಕಿಗೆ ಮೇಲ್ಪಂಕ್ತಿಯಾಗಿರುವ ಪಾರ್ವತಿ ರಮಣನು ಮಾನವರಿಗೆ ಸಮೀಪದ ದೇವರಾಗಿ ಸುಲಭ ಸಾಧ್ಯನಾಗಿ ಕಥಾನಕಗಳಲ್ಲಿ ಚಿತ್ರಿತನಾಗಿರುವುದು ಆತನ ಜನಪ್ರಿಯತೆಗೆ ಕಾರಣವಿರಬೇಕು. 'ಮಹಾಪಾಪಗಳನ್ನು ಮಾಡಿ ಭವದ ಬಂಧನದಲ್ಲಿರುವ ನನ್ನನ್ನು ಲೋಕಕ್ಕೆ ಶಾಂತಿಯನ್ನು ಅನುಗ್ರಹಿಸುವ ದೇವನಾದ ನೀನು ಉದ್ಧರಿಸು’ ಎಂದು ಮಹಾಶಿವರಾತ್ರಿ ಪುಣ್ಯಕಾಲದ ಬೇಡಿಕೆಯಾಗಬೇಕೆಂದು ಶಾಸ್ತ್ರಗಳು ಸೂಚಿಸುತ್ತವೆ. ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷಪಾನ ಮಾಡಿದ ಸಂದರ್ಭ, ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲವೆಂದು ವಿವಿಧ ವ್ಯಾಖ್ಯಾನಗಳಿವೆ. ಈ ಶುಭದಿನ ಮಾಘಮಾಸದ ಬಹುಳ ಚತುರ್ದಶಿಯಂದು ಸನ್ನಿಹಿತವಾಗುತ್ತದೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವಧ್ಯಾನಸಕ್ತರಾಗುತ್ತಾ ’ಕಾಯಕವೇ ಕೈಲಾಸ’, ’ಶರಣು ಶರಣಾರ್ಥಿ’ ಎನ್ನೋಣ. ’ಓಂ ನಮಃ ಶಿವಾಯ’ ಪಠಿಸೋಣ. ರುದ್ರ-ಪರ್ಜನ್ಯ : ಅನ್ನಾದ್ಭವಂತಿಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಬವಃ || ಅನ್ನ-ಜೀವರಾಶಿ, ಅನ್ನ-ಮಳೆ, ಮಳೆ-ಯಜ್ಞ ಈ ಸಂಬಂಧವನ್ನು ನಿರೂಪಿಸುವ ಈ ಶ್ಲೋಕವು ಯಜ್ಞದ ಪರಮಲಕ್ಷ್ಮವನ್ನು ವಿವರಿಸುತ್ತದೆ. ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ. ಶಿವ, ಸದಾಶಿವ, ಪರಶಿವ ಇವು ಪರಮಾತ್ಮನ ಮನೋಜ್ಞ ಹೆಸರುಗಳು. ಇವನು ’ರುದ್ರ’ನೂ ಹೌದು. ಮಳೆ ಸುರಿಸಿ ನೀರು ಕೊಡುವವನು, ಅಧಿಕ ಶಬ್ಧ ಮಾಡುತ್ತಾ ನೀರನ್ನು ಕೊಡುವವನು ಎಂಬುದು ’ರುದ್ರ’ ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ, ಮಳೆಗೆ ಪೂರಕವಾದ ಯಜ್ಞಕರ್ಮ. ಈ ಎರಡು ಸಿದ್ಧಾಂತಗಳಿಂದ ರುದ್ರದೇವರನ್ನು ಅಗ್ನಿ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ. ಮಳೆಯಿಂದ ಬೆಳೆ, ಬೆಳೆಯಿಂದ ಸಮೃದ್ಧಿ ತಾನೇ? ಲೋಕ ಸುಭಿಕ್ಷೆಗೆ ಲೋಕದ ತಂದೆಯನ್ನು ಆರಾಧಿಸುವುದು, ಆ ಮೂಲಕ ಕ್ಷೋಭೆಗಳಿಲ್ಲದ, ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೇ.... ಮಂಗಳಕರ ಮಹಾದೇವನನ್ನು ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ.... ಲೇಖನ‌ : ಕೆ.ಎಲ್.ಕುಂಡಂತಾಯ

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ : ಭರವಸೆಯ ಒಪ್ಪಿಗೆ ನೀಡಿ ಬಜೆಟ್‌ನಲ್ಲಿ ವಂಚನೆ - ಪ್ರವೀಣ್ ಎಂ ಪೂಜಾರಿ

Thumbnail
Posted On: 17 Feb 2023, 10:42 PM

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಕುರಿತು ಮುಖ್ಯಮಂತ್ರಿಯವರು ನೀಡಿದ ಭರವಸೆ ಸುಳ್ಳಾಗಿದೆ. ಸಮಾಜದ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಸಚಿವರಾದ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿಗೆ ಜ.5ರಂದು ಮನವಿ ಸಲ್ಲಿಸಿದ್ದ ಸಂದರ್ಭ ನಿಗಮ ಸ್ಥಾಪನೆಗೆ ಸ್ಪಷ್ಟ ಭರವಸೆಯ ಒಪ್ಪಿಗೆ ನೀಡಿ ಸೂಕ್ತ ಅನುದಾನದೊಂದಿಗೆ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೂ ಈ ಬಾರಿಯ ಬಜೆಟ್‌ನಲ್ಲಿ ಯಾವುದೆ ಕ್ರಮ ಕೈಗೊಳ್ಳದೆ ಮತ್ತೆ ಬಿಲ್ಲವ, ಈಡಿಗರಿಗೆ ಅನ್ಯಾಯವೆಸಗಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮಾಜದ ಅಭಿವೃದ್ಧಿ ಹಾಗೂ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ದೃಷ್ಟಿಯಿಂದ ನಿಗಮ ಸ್ಥಾಪನೆ ಅಗತ್ಯವಾಗಿದ್ದರೂ ಹಿಂದುಳಿದ ಸಮಾಜದ ನಮಗೆ ಅನ್ಯಾಯವಾಗಿದೆ. ಸಮಾಜದ ಮುಖಂಡರ ಸಭೆ ನಡೆಸಿ ನಿಯೋಗ ಕೊಂಡೊಯ್ದ ಮಾನ್ಯ ಸುನಿಲ್ ಕುಮಾರ್‌ರವರು ಹಾಗೂ ಆಶ್ವಾಸನೆಯನ್ನು ಸ್ವಾಗತಿಸಿ ಬೆಂಬಲಿಸಿದ ಜನಪ್ರತಿನಿಧಿಗಳೆಲ್ಲರೂ ಈ ಕುರಿತು ಸ್ಪಷ್ಟನೆ ನೀಡುವಂತೆ ಸಮಸ್ತ ಸಮಾಜಬಾಂಧವರ ಹಿತದಿಂದ ಆಗ್ರಹಿಸುತ್ತೇವೆಂದು ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಇದರ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಚುನಾವಣಾ ಬಜೆಟ್ ಅನುಷ್ಟಾನವಾಗಲಿ : ರಾಘವೇಂದ್ರ ಪ್ರಭು, ಕವಾ೯ಲು

Thumbnail
Posted On: 17 Feb 2023, 10:17 PM

ಉಡುಪಿ : ಮುಖ್ಯಮಂತ್ರಿ ಅವರು ಮಂಡಿಸಿದ ಬಜೆಟ್ ಚುನಾವಣಾ ಸಮಯದಲ್ಲಿ ಆಗಿರುವುದರಿಂದ ಅದರ ಅನುಷ್ಠಾನ ಅಗತ್ಯವಾಗಿ ಆಗಬೇಕು ಎಂದು ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು ಆಗ್ರಹಿಸಿದ್ದಾರೆ. ಸಾಕಷ್ಟು ರೀತಿಯ ಘೋಷಣೆಗಳು ಈ ಸಮಯದಲ್ಲಿ ಬಜೆಟ್ ನಲ್ಲಿ ನೀಡಲಾಗಿದೆ ಮುಖ್ಯವಾಗಿ ರೈತ ಸಿರಿ ಯೋಜನೆ ನರೇಗಾ ಯೋಜನೆಗೆ 1000 ಕೋಟಿ ಮೀಸಲು ಶಾಲೆಗಳಲ್ಲಿ ಮೂಲಭೂತ ಅಭಿವೃದ್ಧಿಗೆ ಯೋಜನೆಗಳು ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಉತ್ತಮವಾದ ಬೆಳವಣಿಯಾಗಿದೆ. ರಾಜ್ಯದಲ್ಲಿ 438 ಗ್ರಾಮೀಣ ಹೊಸ ಕ್ಲಿನಿಕ್ ಸ್ಥಾಪನೆಗೆ ಯೋಜನೆ, ವಿವಿಧ ರೀತಿಯ ವಿಶ್ವವಿದ್ಯಾನಿಲಯ ಮತ್ತು ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆದ್ಯತೆ ನೀಡಿರುವುದು ಉತ್ತಮವಾದ ವಿಚಾರವಾಗಿದೆ. ನಮ್ಮ ಕರಾವಳಿ ಬಗ್ಗೆ ಚಿಂತನೆ ಮಾಡಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾ ಅಭಿವೃದ್ದಿ. ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಒಳಸಾರಿಗೆ ಸಂಪರ್ಕ ಕಲ್ಪಿಸಲು ಬಾರ್ಜ್ ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಕ್ರಮ' ಮಂಗಳೂರು- ಹಂಗಾರಕಟ್ಟೆಯಲ್ಲಿ ಸಾರ್ವಜನಿಕ- ಖಾಸಗಿ ಲೈಟ್ ಕಾರ್ಗೋ ಟ್ರಾನ್ಸ್‌ಪೋರ್ಟ್‌ ಬೋಟ್ ಸೇವೆಗಳ ಪ್ರಾರಂಭ. ಮಂಗಳೂರು- ಕಾರವಾರ- ಗೋವಾ- ಮುಂಬಯಿ ಜಲಸಾರಿಗೆ ಅಭಿವೃದ್ಧಿ. ಕರಾವಳಿ ವಲಯ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಧಾರ್ಮಿಕ, ಸಾಹಸ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೂಪುರೇಷೆ ತಯಾರಿ ಉತ್ತಮ ಅಂಶ. ಉಡುಪಿ, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿನ ವಸತಿ ಶಾಲೆಗಳ ಅಭಿವೃದ್ಧಿಗೆ ಒತ್ತು, ಕುಮಟಾದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ. ಕರಾವಳಿ ಮಲೆನಾಡಿಗೆ ‘ಸಹ್ಯಾದ್ರಿ ಸಿರಿ’ ಯೋಜನೆ ಜಾರಿ, ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಯೋಜನೆ ಆರಂಭಿಸಲಾಗಿದ್ದು, ಇದನ್ನು ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಮನ್ವಯಗೊಳಿಸಿ ಜಾರಿಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ತಿಳಿಸಿದ್ದಾರೆ. ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರವಾರದ ಸಮೀಪ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಅಲ್ಲದೇ ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಮಾರ್ಪಡಿಸಲು 40 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಘೋಷಿಸಿದ್ದು, ಉತ್ತಮ ಅಂಶವಾಗಿದೆ. ಏನೇ ಆಗಲಿ ಈ ಬಜೆಟ್ ದಾಖಲೆಯಲ್ಲಿರದೆ ಅನುಷ್ಟಾನಕ್ಕೆ ಬರಲಿ ಎಂದು ಎಲ್ಲರ ಆಶಯ ಎಂದಿದ್ದಾರೆ.

ತುಳು ಭಾಷೆಗೆ ಅಪಮಾನ : ಸಚಿವ ಮಾಧು ಸ್ವಾಮಿ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ - ವಿನೋದ್ ಶೆಟ್ಟಿ

Thumbnail
Posted On: 17 Feb 2023, 10:00 PM

ಪವಿತ್ರವಾದ ತುಳುನಾಡಿನಲ್ಲಿ ದೈವರಾಧನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದೇ ಪ್ರಕಾರ ತುಳುನಾಡ ನಲ್ಲಿ ತುಳು ಭಾಷೆಗೆ ಅದರದೇ ಆದ ಸಾವಿರಾರು ವರ್ಷಗಳ ವಿಶಿಷ್ಟವಾದ ಸ್ಥಾನಮಾನ ಗೌರವ ಆಚಾರ ವಿಚಾರ ಸಾಹಿತ್ಯ ಸಂಸ್ಕೃತಿ ಹಿನ್ನೆಲೆ ಇದೆ. ಪಂಚ ದ್ರಾವಿಡ ಭಾಷೆಗಳಲ್ಲಿಯೂ ತುಳು ಭಾಷೆ ಕೂಡ ಒಂದು. ತುಳು ಭಾಷೆಗೆ ತನ್ನದೇ ಆದ ಲಿಪಿ ಇದೆ. ರಾಜಕೀಯ ಕುತಂತ್ರದಿಂದ ಇನ್ನೂ ಕೂಡ ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಕೊಡಿಸಲು ವಿಫಲವಾಗಿದೆ ಎಂದು ಅಖಿಲ ಭಾರತ ತುಳುನಾಡ ದೈವರಾಧಾಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ ತಿಳಿಸಿದ್ದಾರೆ. ತುಳುನಾಡಿನಲ್ಲಿ ತುಳುವರೂ ಯಾವುದೇ ಕಷ್ಟ ಸಂದರ್ಭದಲ್ಲಿ, ಶುಭ ಸಂದರ್ಭದಲ್ಲಿ ಮೊದಲು ದೈವಗಳಿಗೆ ಹರಕೆ ಹೇಳುವುದು. ಕೈ ಮುಗಿಯುವುದು ತುಳುವರ ನಂಬಿಕೆ. ನಾವು ನಂಬಿದ ದೈವಗಳು ಅಭಯವಾಕ್ಯ ಕೊಡುವುದು ತುಳು ಭಾಷೆಯಲ್ಲಿ. ಅನಾದಿ ಕಾಲದಿಂದ ಬಂದಂತ ಪದ್ಧತಿ. ನಮ್ಮ ನಂಬಿಕೆಗೆ ನಮ್ಮ ಶ್ರದ್ಧಾ ಭಕ್ತಿ ನಮ್ಮ ಮಾತೃಭಾಷೆಗೆ ಅಪಹಾಸ್ಯ, ಅಪಮಾನ ಮಾಡಿದರೆ ನಾವು ತುಳುವರು ಸಹಿಸುವುದಿಲ್ಲ. ಆದ್ದರಿಂದ ವಿಧಾನಸಭಾ ಕಲಾಪದಲ್ಲಿ ಯು ಟಿ ಖಾದರ್ ಹೇಳಿಕೆಗೆ ಪ್ರತಿ ವಿರೋಧ, ಅಪಹಾಸ್ಯ, ದೈವ ದೇವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಕರ್ನಾಟಕ ಸರ್ಕಾರದ ಸಚಿವರಾದ ಮಾಧು ಸ್ವಾಮಿ ಅವರು ಸಮಸ್ತ ತುಳು ನಾಡಿನ ಒಂದು ಕೋಟಿ ಹೆಚ್ಚು ಜನಸಂಖ್ಯೆ ಇರುವ ತುಳುವರ ಮನಸ್ಸಿಗೆ ತುಳುವರ ನಂಬಿಕೆ, ಭಕ್ತಿ, ಶ್ರದ್ಧೆಗೆ, ದೈವರಾಧನೆಗೆ ಧಕ್ಕೆ ತಂದಿದ್ದಾರೆ, ಬೇಸರ ತಂದಿದ್ದಾರೆ. ಇಷ್ಟರ ತನಕ ನಮ್ಮ ಕರಾವಳಿಯ ಶಾಸಕರು ಇದರ ವಿರುದ್ಧವಾಗಿ ಮಾತನಾಡಲಿಲ್ಲ. ಯಾಕೆ ಮೌನ ಈ ವಿಚಾರ ನಿಮಗೆ ಶೋಭೆ ತರುತ್ತದೆಯೇ? ಕರ್ನಾಟಕ ಸರ್ಕಾರದ ಸಚಿವರಾದ ಮಾಧು ಸ್ವಾಮಿ ಬಹಿರಂಗವಾಗಿ ತಪ್ಪು ಒಪ್ಪಿಕೊಳ್ಳಬೇಕು. ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂದಿನ ದಿವಸಗಳಲ್ಲಿ ಇದರ ವಿರುದ್ಧವಾಗಿ ಪ್ರತಿಭಟನೆ ಮಾಡಲಾಗುವುದು. ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿರುತ್ತಾರೆ.