Updated News From Kaup

ಫಲಿಮಾರು : ದೇವಳದ ಜೀರ್ಣೋದ್ಧಾರ ಸಹಾಯಾರ್ಥವಾಗಿ ನಾಟಕ ಪ್ರದರ್ಶನ

Posted On: 01-11-2022 10:05PM

ಫಲಿಮಾರು : ಶ್ರೀ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನ, ಕೊಡಂಚಾಲ, ಅವರಾಲು, ವಯಾ ಹೆಜಮಾಡಿ, ಫಲಿಮಾರು ಗ್ರಾಮ, ಉಡುಪಿ ಜಿಲ್ಲೆ ಇದರ ಜೀರ್ಣೋದ್ಧಾರ ಸಹಾಯಾರ್ಥವಾಗಿ ನವಂಬರ್ 5 ರ ಶನಿವಾರ ಸಂಜೆ 4.30 ಕ್ಕೆ ಸಂತಕ್ರೂಜ್ ನ ಬಿಲ್ಲವ ಭವನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿರುವ, ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದಲ್ಲಿ " ನಾಯಿದ ಬೀಲ..." ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಕ್ಷೇತ್ರದ ಭಕ್ತಾಭಿಮಾನಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಟಿಕೆಟ್ ಗಾಗಿ ಸಂಪರ್ಕಿಸಿ : ರವೀಂದ್ರ ಶಾಂತಿ : 9892865119, ಸುನಿಲ್ ಫಲಿಮಾರ್ : 9930029387 ಸಂತೋಷ್ ಸಾಲ್ಯಾನ್ : 7977286528

ಕಾಪು : ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ - ಕಾಂಗ್ರೆಸ್ ಪ್ರತಿಭಟನೆ

Posted On: 31-10-2022 04:59PM

ಕಾಪು : ಪಂಚಾಯತ್ ರಾಜ್ ಮಸೂದೆಗೆ ತಿದ್ದುಪಡಿ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ಕಾಪು ಕಾಂಗ್ರೆಸ್ ವತಿಯಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು.

ವ್ಯವಸ್ಥೆ ಗೆ ತಿದ್ದುಪಡಿ ತರುವ ಮೂಲಕ ಪಂಚಾಯತ್ ಗಳ ಅಧಿಕಾರವನ್ನು ಮೊಟಕುಗೊಳಿಸಿ ಜನತೆಗೆ ಅನ್ಯಾಯವೆಸಗಿದ್ದಾರೆ. ಸೋಮವಾರ ಕಾಪು ತಾಲೂಕು ಕಚೇರಿ ಮುಂಭಾಗ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಕರ್ನಾಟಕ ಸರ್ಕಾರವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ತನ್ನ ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದೆ. ಹದಿನೈದನೇ ಹಣಕಾಸು ಯೋಜನೆಯಡಿ ಯಾವುದೇ ಸವಲತ್ತುಗಳನ್ನು ಪಂಚಾಯತ್ ಗೆ ನೇರವಾಗಿ ಸರಬರಾಜು ಆಗುತ್ತಿತ್ತು. ಇದನ್ವಯ ಜಲಸಿರಿ ಕಾರ್ಯಕ್ರಮದ ಮುಖಾಂತರ ಕುಡಿಯುವ ನೀರಿನ ಸರಬರಾಜು ಮಾಡಲು ಅವಕಾಶ ನೀಡಿತು. ಆದರೆ ಈಗ ಬರೇ ಪೈಪ್ ಹಾಕುವ ಮುಖಾಂತರ ತನ್ನ ಸುಪರ್ದಿಯ ಕಂಪನಿಗೆ ಟೆಂಡರ್ ನೀಡಿ ಕೆಲಸ ಮಾಡುತ್ತಿದೆ. ಜಲಮೂಲವನ್ನು ಹುಡುಕಿ ಟ್ಯಾಂಕ್ ಗಳ ನಿರ್ಮಾಣದ ನಂತರ ಪೈಪ್ ಹಾಕುವುದು ವಾಡಿಕೆ. ಒಟ್ಟಾರೆಯಾಗಿ ಜನರ ದುಡ್ಡು ಪೋಲಾಗುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಪಂಚಾಯತ್ ಗಳಲ್ಲಿ ಶಾಸಕ,ಸಂಸದರ ಮೂಲಕ ಅನುದಾನ ಬರದೆ ನೇರವಾಗಿ ಪಂಚಾಯತ್ ಗೆ ಬರುವ ಹಾಗೆ ಆಗಬೇಕು ಎಂದರು. ಬಳಿಕ ಕಾಪು ತಹಶಿಲ್ದಾರರ ಅನುಪಸ್ಥಿತಿಯಲ್ಲಿ ಉಪ ತಹಶಿಲ್ದಾರ ಹರಿಪ್ರಸಾದ್ ಭಟ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,ಕಾಪು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ವೈ.ಸುಕುಮಾರ್, ಶೇಖರ್ ಹೆಜಮಾಡಿ,‌ನವೀನ್ ಶೆಟ್ಟಿ ,ಶೇಖಬ್ಬ ಉಚ್ಚಿಲ, ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಅದಮಾರು : ಐತಿಹಾಸಿಕ ಉಳಿಕೆಗಳ ರಕ್ಷಣೆ ಇಂದಿನ ಅಗತ್ಯ- ಪುರಾತತ್ವ ಸಂಶೋಧಕ ಸುಭಾಸ್

Posted On: 31-10-2022 10:23AM

ಅದಮಾರು : ಇತಿಹಾಸ ಸಂಶೋಧನೆ ಮತ್ತು ಗುರುತಿಸುವಿಕೆಯಿಂದ ನಮ್ಮ ಸಾಂಸ್ಕೃತಿಕ ಅರಿವು ವಿಸ್ತಾರವಾಗುತ್ತದೆ.ಆದುದರಿಂದ ಐತಿಹಾಸಿಕ ಮಹತ್ವವುಳ್ಳ‌ ಪುರಾತನ ಅವಶೇಷಗಳನ್ನು ಕಾಪಿಡಬೇಕಾದುದು ಇಂದಿನ ಅಗತ್ಯ ಎಂದು ಪುರಾತತ್ವ ಸಂಶೋಧಕ ಬಂಟಕಲ್ಲಿನ‌ ಸುಭಾಸ್ ನಾಯಕ್ ಅವರು ಹೇಳಿದ್ದಾರೆ. ಅವರು ಅದಮಾರಿನಲ್ಲಿ‌ ಆದರ್ಶ ಸಂಘಗಳ ಒಕ್ಕೂಟವು ಸ್ಥಳೀಯ ಸರ್ವೋದಯ ಸಮುದಾಯ ಭವನದಲ್ಲಿಆಯೋಜಿಸಿದ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ‌ಯ "ಐತಿಹಾಸಿಕ ಪರಂಪರೆ ಉಳಿಸಿ ಜನಜಾಗೃತಿ ಅಭಿಯಾನ" ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಪುರಾತನ ದೇವಾಲಯಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆಯುವ ಐತಿಹಾಸಿಕ ಮಹತ್ವದ ವಸ್ತುಗಳ ಅವಗಣನೆ, ಪರಿಸರದಲ್ಲಿರುವ ಕೋಟೆಕೊತ್ತಲಗಳ ನಾಶ,ಶಿಲಾಶಾಸನಗಳ ದಿವ್ಯನಿರ್ಲಕ್ಷ್ಯ,ನಾಣ್ಯಗಳ ದುರುಪಯೋಗ , ತಾಳೆಗರಿಗಳನ್ನು ರಕ್ಷಿಸದೆ ಇರುವುದು ಮುಂತಾದುದು ನಡೆಯುತ್ತಿವೆ.ಇಂತಹ ಐತಿಹಾಸಿಕ ಉಳಿಕೆಗಳನ್ನು ನಾಶಗೊಳಿಸದೆ ರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸುಭಾಸ್ ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಸುದರ್ಶನ ವೈ.ಎಸ್.ಅಧ್ಯಕ್ಷತೆ ವಹಿಸಿದ್ದರು.ಉದಯ ಕೆ.ಶೆಟ್ಟಿ ಎರ್ಮಾಳು ಅವರು ಉದ್ಘಾಟಿಸಿದರು.ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ , ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ,ಕೆ.ಎಲ್.ಕುಂಡಂತಾಯ, ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ,ಆದರ್ಶ ಮಹಿಳಾಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಲತಾ ಆರ್.ಆಚಾರ್ಯ ಅವರು ಉಪಸ್ಥಿತರಿದ್ದರು.

ಪ್ರಾಂಶುಪಾಲ ರಾಮಕೃಷ್ಣ ಪೈ ಅವರಿಗೆ ಗೌರವಾರ್ಪಣೆ : ಅದಮಾರಿನ ಆದರ್ಶ ಸಂಘಗಳ ಒಕ್ಕೂಟವು‌ ಅದಮಾರು ಪ.ಪೂ.ಕಾಲೇಜಿನ‌ ಪ್ರಾಂಶುಪಾಲರಾಗಿದ್ದು ನಿವೃತ್ತರಾಗಲಿರುವ ರಾಮಕೃಷ್ಣ ಪೈ ಅವರನ್ನು‌ಅಭಿನಂದಿಸಿ ಗೌರವಿಸಿತು. ಅದಮಾರಿನ ಶೈಕ್ಷಣಿಕ ಇತಿಹಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಿದ, ಅದಮಾರಿನ ನಿವಾಸಿಯೂ ಆಗಿದ್ದು ಜನಪ್ರೀತಿ ಪಡೆದ ಸರಳ,ಸಜ್ಜನ ರಾಮಕೃಷ್ಣ ಪೈ ಅವರನ್ನು ನಿವೃತ್ತ ಪ್ರಾಂಶುಪಾಲ ಬಿ.ಆರ್.ನಾಗರತ್ನ ಅವರು ಗೌರವಿಸಿದರು.ಶ್ರೀಮತಿ‌ ಶ್ಯಾಮಲಾ ನಾಗರತ್ನ ಅವರು ಅಭಿನಂದನೆಯ ಮಾತುಗಳನ್ನಾಡಿದರು. ಸಂತೋಷ ಜೆ.ಶೆಟ್ಟಿ ಸ್ವಾಗತಿಸಿದರು,ಲತಾ ಆರ್. ಆಚಾರ್ಯ ವಂದಿಸಿದರು.ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.

ಕಾಪು : ದೇಶದಲ್ಲಿ ಶೇ. 20 ರಷ್ಟು ರಕ್ತದ ಕೊರತೆಯಿದೆ : ಡಾ| ವೀಣಾ ಕುಮಾರಿ

Posted On: 30-10-2022 11:24PM

ಕಾಪು : ರಕ್ತದಾನ ಮಹಾದಾನವಾಗಿದ್ದು ದೇಶದಲ್ಲಿ ಶೇ.20ರಷ್ಟು ರಕ್ತದ ಕೊರತೆ ಕಾಡುತ್ತಿದೆ. ರಕ್ತದ ಅಲಭ್ಯತೆಯಿಂದಾಗಿ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದು ನಾವೆಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮತ್ತು ಜನರ ಜೀವವನ್ನು ಉಳಿಸಲು ಕೈಜೋಡಿಸಬೇಕಿದೆ ಎಂದು ಉಉಡಪಿ ಜಿಲ್ಲಾಸ್ಪತ್ರೆಯ ರಕ್ತ ನಿಧೀಕೇಂದ್ರದ ಮುಖ್ಯಸ್ಥೆ ಡಾ| ವೀಣಾ ಕುಮಾರಿ ಹೇಳಿದರು. ಕಾಪು ಧರಣಿ ಸಮಾಜ ಸೇವಾ ಸಂಘ, ಕಾಪು ಜೇಸಿಐ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಆಶ್ರಯದಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಮತ್ತು ರಕ್ತ ನಿಧಿಕೇಂದ್ರದ ಸಹಯೋಗದಲ್ಲಿ ಕಾಪು ವೀರಭದ್ರ ಸಭಾಭವನದಲ್ಲಿ ರವಿವಾರ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತ ಸಂಗ್ರಹದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಇದನ್ನು ಕಾಪಾಡಿಕೊಂಡು ಬರುವಲ್ಲಿ ಯುವಜನರ ಸಹಕಾರ ಅತೀ ಅಗತ್ಯವಾಗಿ ದೊರಕಬೇಕಿದೆ ಎಂದರು.

ಸಮ್ಮಾನ : ದಾಖಲೆಯ 60ನೇ ಬಾರಿ ರಕ್ತದಾನ ಮಾಡಿದ ಸೂರಿ ಶೆಟ್ಟಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ ಐವತ್ತಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ, ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ ಪಾದೂರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಮ್ ಅಧ್ಯಕ್ಷ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕರಂದಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ಶೆಟ್ಟಿ ಮೂಳೂರು ವಂದಿಸಿದರು.

ಪಡುಬಿದ್ರಿ : ಶ್ರೀ ವೆಂಕಟರಮಣ ದೇವಳಕ್ಕೆ ಪಾದಯಾತ್ರೆ ಕೈಗೊಂಡ ಶ್ರೀ ವಾಮನಾಶ್ರಮ ಸ್ವಾಮೀಜಿ ಭೇಟಿ

Posted On: 30-10-2022 01:44PM

ಪಡುಬಿದ್ರಿ : ವಿಶ್ವಪ್ರಸಿದ್ಧ ಗೋಕರ್ಣ ಸಮೀಪದ ಹಳದಿಪುರದ ವೈಶ್ಯ ವಾಣಿ ಸಮಾಜದ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಕಳೆದ ವಿಜಯದಶಮಿ ಅಕ್ಟೋಬರ್ ೫ ರಂದು ತಮ್ಮ ಶಿಷ್ಯರೊಂದಿಗೆ ಆದಿ ಶಂಕರಾಚಾರ್ಯರ ಮೂಲಸ್ಥಾನ ದಕ್ಷಿಣದ ಕೇರಳದ ಕಾವಡಿಯಿಂದ ಉತ್ತರದ ಕಾಶೀ ವಿಶ್ವನಾಥ ಕ್ಷೇತ್ರದವರೆಗೆ ಪಾದಯಾತ್ರೆ ಆರಂಭಿಸಿದ್ದು ರವಿವಾರ ಕಾಪು ತಾಲೂಕಿನ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ಕೊಟ್ಟರು.

ಈ ಸಂದರ್ಭ ಮಾಧ್ಯಮದವರೊಡನೆ ಮಾತನಾಡಿದ ಅವರು ಕಾಶಿಯಲ್ಲಿ ನಮ್ಮ ಸಂಸ್ಥಾನದ ಮೂಲಮಠ ಇದ್ದು ನಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆಯಿಂದ ಮೂಲ ಮಠವನ್ನು ಪುನರುತ್ಥಾನಗೊಳಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಅಕ್ಷಯ ತೃತೀಯ ಎಪ್ರಿಲ್ 23 ರಂದು ಕಾಶಿ ತಲುಪುವ ಯೋಜನೆ ಇದೆ ಎಂದು ಹೇಳಿದರು.

ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಶೆಣೈ ಸ್ವಾಮೀಜಿಯವರನ್ನು ಸ್ವಾಗತಿಸಿ ಬರ ಮಾಡಿಕೊಂಡರು. ವಿಶ್ರಾಂತಿ ನಂತರ ಸ್ವಾಮೀಜಿಯವರು ಕಾಪು ಕಡೆಗೆ ಪಾದಯಾತ್ರೆ ಬೆಳೆಸಿ ಇಂದು ಕಾಪು ಹಳೆ ಮಾರಿಗುಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ಈ ಸಂದರ್ಭ ಪಡುಬಿದ್ರಿ ಶ್ರೀ ವೆಂಕಟರಮಣ ದೇವಳ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ : ರೋಟರಿ ಕ್ಲಬ್ ಹಾಗೂ ಆರ್ ಸಿ ಸಿ ಜಂಟಿ ಆಶ್ರಯದಲ್ಲಿ ಭಜನಾ ಸ್ಪರ್ಧೆ -2022ಕ್ಕೆ ಚಾಲನೆ

Posted On: 30-10-2022 11:51AM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ರೋಟರಿ ಸಮುದಾಯದಳ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ರವಿವಾರ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ 6ನೇ ಬಾರಿಗೆ ಆಯೋಜಿಸಿದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ -2022 ನ್ನು ರೋಟರಿ ವಲಯ 5 ರ ಸಹಾಯಕ ಗವರ್ನರ್ ರೊ. ಡಾ.ಶಶಿಕಾಂತ್ ಕಾರಿಂಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ದೇವಳ, ಮಸೀದಿ, ಚಚ್೯ ಆರಾಧನಾ ಕೇಂದ್ರದಲ್ಲಿ ವಿವಿಧ ಆರಾಧನಾ ಕ್ರಮದ ಮೂಲಕ ದೇವರನ್ನು ಪ್ರಾರ್ಥಿಸುತ್ತೇವೆ. ಸಮಾಜದ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ದೇವರನ್ನು ಮುಟ್ಟಲು ಇರುವ ಮಾಧ್ಯಮವೇ ಭಜನೆ. ನಮ್ಮಲ್ಲಿ ಧನಾತ್ಮಕ ಶಕ್ತಿ ಮೂಡಲು ಭಜನೆಯಿಂದ ಸಾಧ್ಯ ಎಂದರು.

ಪಡುಬಿದ್ರಿ ಬೀಡಿನ ಬಲ್ಲಾಳರಾದ ರತ್ನಾಕರ್ ರಾಜ್ ಮಾತನಾಡಿ ಭಜನೆ ವಿಶೇಷವಾಗಿದೆ. ಈಗಿನ ಪರಿಸ್ಥಿತಯಲ್ಲಿ ನಮ್ಮ ಮನಸ್ಸಿನ ಒಳಿತಿಗಾಗಿ ಭಜನೆ ಅನಿವಾರ್ಯ. ಹಿಂದಿನ ಕಾಲದಲ್ಲಿ ಪ್ರತಿ ಮನೆ ಮನೆಗೂ ವರ್ಷಕ್ಕೆ ಒಂದು ಬಾರಿಯಾದರೂ ಭಜನಾ ಮಂಡಳಿಗಳು ಭಜನಾ ಸೇವೆಯ ಮೂಲಕ ಬರುತ್ತಿತ್ತು. ರೋಟರಿ ಪಡುಬಿದ್ರಿಯ ಕಾರ್ಯ ಶ್ಲಾಘನೀಯ ಎಂದರು.

ಪಡುಬಿದ್ರಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನವೀನ್ ಚಂದ್ರ ಸುವರ್ಣ ಅಡ್ವೆ, ವೈ. ಸುಕುಮಾರ್, ಗಣೇಶ್ ಆಚಾರ್ಯ ಉಚ್ಚಿಲ, ಪಿ ಕೃಷ್ಣ ಬಂಗೇರ, ರಮೇಶ್ ಯು., ಸಚ್ಚಿದಾನಂದ ವಿ. ನಾಯಕ್, ನಟರಾಜ್ ಪಿ.ಎಸ್, ಬಾಬು ಕೋಟ್ಯಾನ್,ಜ್ಯೋತಿ ಮೆನನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಕಾರ್ಯಕ್ರಮ ನಿರ್ದೇಶಕರಾದ ಯಶೋದ ಪಡುಬಿದ್ರಿ, ಪುಷ್ಪಲತಾ ಗಂಗಾಧರ್, ರಕ್ಷಿತಾ ಉಡುಪ, ಹೇಮಲತಾ ಸುವರ್ಣ, ಸುನಿಲ್ ಕುಮಾರ್, ಪವನ್ ಸಾಲ್ಯಾನ್ ಹಾಗೂ ರೋಟರಿ ಸದಸ್ಯರಾದ ಸುಧಾಕರ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಪಡುಬಿದ್ರಿ ರೋಟರಿ ಸಮುದಾಯ ಅಧ್ಯಕ್ಷೆ ದೀಪಾಶ್ರೀ ಕರ್ಕೇರ ಸ್ವಾಗತಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ತನಿಷಾ ಜಿ ಕುಕ್ಯಾನ್ ವಂದಿಸಿದರು.

ಕಾಪುವಿನಿಂದ ಮುಲ್ಕಿಗೆ ರಾಮನಾಮ ಸಂಕೀರ್ತನೆ ಪಾದಯಾತ್ರೆಗೆ ಚಾಲನೆ

Posted On: 30-10-2022 10:06AM

ಕಾಪು : ಇಲ್ಲಿನ ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ರಾಮನಾಮ ಸಂಕೀರ್ತನೆ ಪಾದಯಾತ್ರೆಗೆ ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮೂಲಕ ಚಾಲನೆ ನೀಡಲಾಯಿತು.

ಬಳಿಕ ಶ್ರೀ ಹಳೆಮಾರಿಗುಡಿಗೆ ತೆರಳಿ ಮುಲ್ಕಿಯತ್ತ ಪಾದಯಾತ್ರೆ ಸಾಗಿತು. ಈ ಪಾದಯಾತ್ರೆ ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿ ಬಳಿಕ ಹೆಜಮಾಡಿ ಲಕ್ಷ್ಮೀ ನಾರಾಯಣ ದೇವಸ್ಥಾನ ಆಗಿ ಟೋಲ್ ಗೇಟ್ ನಿಂದ ಹೊರೆ ಕಾಣಿಕೆಯೊಂದಿಗೆ ಮುಲ್ಕಿ ಒಳಲಂಕೆ ನರಸಿಂಹ ಸನ್ನಿಧಿಯಲ್ಲಿ ಸಮಾಪನ ಗೊಂಡು ಅಲ್ಲಿ ಜರಗುವ ದ್ವಾದಶ ಕೋಟಿ ರಾಮನಾಮ ತಾರಕ ಜಪಮಂತ್ರ ಯಾಗದಲ್ಲಿ ಪಾಲ್ಗೊಳ್ಳಲಿದೆ.

ಕಾಪುವಿನ ದೇವಳದ ಆಡಳಿತ ಮಂಡಳಿಯ ಸದಸ್ಯರು ಮತ್ತು ಜಿ.ಎಸ್.ಬಿ ಸಮಾಜದ ಭಜಕರು ಪಾಲ್ಗೊಂಡಿದ್ದರು.

ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ವಿಶ್ವರೂಪ ದರ್ಶನ

Posted On: 30-10-2022 09:56AM

ಪಡುಬಿದ್ರಿ : ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ಒಂದು ತಿಂಗಳ ನಗರ ಭಜನೆ ಮತ್ತು ಪ್ರತಿ ದಿನ ಜರಗುವ ಪಕ್ಷಿಜಾಗರ ಪೂಜಾ ವಿಜ್ರಂಭಣೆಯಿಂದ ಆಚರಿಸಲಾಯಿತು.

ರವಿವಾರ ಪ್ರಾತ:ಕಾಲದಲ್ಲಿ ದೇವಳವನ್ನು ದೀಪಾಲಂಕಾರಗೊಳಿಸಿ ವಿಶ್ವರೂಪ ದರ್ಶನವನ್ನು ಕಣ್ತುಂಬ ಕಾಣಲು ಊರ ಪರವೂರ ಭಕ್ತಾದಿಗಳು ಆಗಮಿಸಿದ್ದರು.

ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಪ್ರಶಾಂತ್ ಶೆಣೈ ಮತ್ತು ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಉದ್ಯಾವರ : ಗುಡ್ಡೆಯಂಗಡಿ ಫ್ರೆಂಡ್ಸ್‌ ವತಿಯಿಂದ ಪುನೀತ್‌ ರಾಜ್‌ ಕುಮಾರ್‌ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಂಜೆ

Posted On: 29-10-2022 08:47PM

ಉದ್ಯಾವರ : ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ರವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉದ್ಯಾವರದಲ್ಲಿ ಅಂಧರ ಗೀತ ಗಾಯನ ನಡೆಯಿತು. ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದ ಕಲಾವಿದರನ್ನು ಆಹ್ವಾನಿಸಿದ ಸಾಕಷ್ಟು ಸಮಾಜಮುಖೀ ಚಟುವಟಿಕೆ ನಿರತ ಗುಡ್ಡೆಯಂಗಡಿ ಫ್ರೆಂಡ್ಸ್‌ ಗುಡ್ಡೆಯಂಗಡಿ ವತಿಯಿಂದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಶನಿವಾರ ಸಂಜೆ ಉದ್ಯಾವರ ಗುಡ್ಡೆಯಂಗಡಿ ಇಮೇಜ್‌ ಬಿಲ್ಡಿಂಗ್‌ ಮುಂಭಾಗದಲ್ಲಿ ನಡೆಯಿತು.

ಉಡುಪಿ ಉದ್ಯಾವರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹವಾ ಇದ್ದು, ಪ್ರಕರಣವನ್ನು ಗುಡ್ಡೆಯಂಗಡಿ ಸಂಸ್ಥೆಯ ವತಿಯಿಂದ ಪ್ರಥಮ ವರ್ಷದ ಸ್ಮರಣೆ ನಡೆಸಿದ ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕಷ್ಣ ಶ್ರೀಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್, ದಿವಾಕರ ಬೊಳ್ಜೆ, ಫ್ರೀಡಾ ಡಿಸೋಜ, ಗಿರೀಶ್ ಸುವರ್ಣ, ಜುಡಿತ್ ಪಿರೇರಾ, ವನಿತಾ ಶೆಟ್ಟಿ, ಗುಡ್ಡೆಯಂಗಡಿ ಫ್ರೆಂಡ್ಸ್ ಪ್ರಮುಖರಾದ ಗಿರೀಶ್ ಕುಮಾರ್, ಲಕ್ಷ್ಮಣ ಸಂಪಿಗೆನಗರ, ರೋಯ್ಸ್ ಫೆರ್ನಾಂಡಿಸ್, ಸತೀಶ್ ಬೀರಪ್ಪಾಡಿ, ಕಿಶೋರ್, ಉದಯ, ಸುಧಾಕರ ಮತ್ತಿತ್ತರು ಉಪಸ್ಥಿತರಿದ್ದರು.

ಗುಡ್ಡೆಯಂಗಡಿ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ರಿಯಾಝ್ ಪಳ್ಳಿ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಹಾರಾಷ್ಟ್ರದ ಕಂದಾಯ ಸಚಿವರ ಭೇಟಿ

Posted On: 29-10-2022 08:29PM

ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಹಾರಾಷ್ಟ್ರ ರಾಜ್ಯದ ಕಂದಾಯ ಸಚಿವರು ಮತ್ತು ಶಿರಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಪತ್ನಿ ಶಾಲಿನಿತೈ ವಿಖೆ ಪಾಟೀಲ್ ಇವರು ಜೀರ್ಣೋದ್ಧಾರದ ಮುಂಬೈ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿಯವರೊಂದಿಗೆ ಭೇಟಿ ನೀಡಿದರು.

ಶ್ರೀ ದೇವಿಯ ಸನ್ನಿದಾನದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಾರ್ಥಿಸಿ ಶ್ರೀದೇವಿಯ ಅನುಗ್ರಹ ಪ್ರಸಾದವನ್ನು ನೀಡಲಾಯಿತು.

ನಂತರ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರು ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ರೀತಿಯಲ್ಲಿ ಇಲ್ಕಲ್ ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ದೇಗುಲದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಮಹಾರಾಷ್ಟ್ರದ ಹಾಗೂ ಶಿರಡಿಯ ಭಕ್ತರಿಗೂ ಮಾರಿಯಮ್ಮನ ದೇಗುಲ ನಿರ್ಮಾಣದ ಸುದ್ದಿಯನ್ನು ತಲುಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಆರ್ಥಿಕ ಸಮಿತಿಯ ಸಿದ್ಧಿಧಾತ್ರಿ ತಂಡದ ಸಂಚಾಲಕರಾದ ಸುಲೋಚನಾ ಕೆ ಸುವರ್ಣ, ದೇವಳದ ಸಿಬ್ಬಂದಿಗಳಾದ ಗೋವರ್ಧನ್ ಸೇರಿಗಾರ್ ಮತ್ತು ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.