Updated News From Kaup

ಉಳ್ಳೂರುಗುತ್ತು ಮನೆ ರಾಮಚಂದ್ರ ಶೆಟ್ಟಿ ನಿಧನ

Posted On: 12-11-2022 03:00PM

ಕಾಪು : ಉಳ್ಳೂರುಗುತ್ತು ಮನೆ ರಾಮಚಂದ್ರ ಶೆಟ್ಟಿಯವರು ಇಂದು ಬೆಳಗ್ಗೆ 9.04 ಕ್ಕೆ ಸ್ವಗೃಹ ಇನ್ನಂಜೆ ಉಂಡಾರು ಗುರುಕೃಪಾದಲ್ಲಿ ಅಸೌಖ್ಯದಿಂದಾಗಿ ದೈವಾಧೀನರಾದರು.

ಅವರ ಅಂತ್ಯ ವಿಧಿ ಕಾರ್ಯಗಳು ನಾಳೆ ಬೆಳಗ್ಗೆ 10.30ಕ್ಕೆ ಉಂಡಾರು ಗುರುಕೃಪಾ ಮನೆಯಲ್ಲಿ ನೆರವೇರಲಿದೆ.

ಮೃತರು 1 ಹೆಣ್ಣು, 3 ಗಂಡು ಮಕ್ಕಳನ್ನು, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಕ್ಕಳ ದಿನಾಚರಣೆ : ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ

Posted On: 11-11-2022 11:41PM

ಉಡುಪಿ : ಮಾನವ ಬಂಧುತ್ವ ವೇದಿಕೆ ಕರ್ನಾಟಕ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ಸಹಕಾರದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಚಿತ್ರ (ಡ್ರಾಯಿಂಗ್) ಬಿಡಿಸುವ ಇದೇ ನವೆಂಬರ್ 13 ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಉದ್ಯಾವರ ಝೇವಿಯರ್ ಸಭಾಭವನದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

3 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಒಂದರಿಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ 'ಪರಿಸರ', ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ 'ಸಂಭ್ರಮ', ಎಂಟರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ 'ಮಕ್ಕಳು ಕಂಡಂತೆ ನೆಹರು' ಎಂಬ ವಿಷಯಗಳ ಬಗ್ಗೆ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ.

3 ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು 3 ಸಮಾಧಾನಕರ ಬಹುಮಾನ ಮತ್ತು ನಗದು ನೀಡಲಾಗುತ್ತಿದ್ದು, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತದೆ. ಮಕ್ಕಳಿಗೆ ಬೆಳಗಿನ ಫಲಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧೆಯ ಅವಧಿ 2 ಗಂಟೆಗೆ ಮೀಸಲಾಗಿದ್ದು, ಸಂಘಟಕರು ಸ್ಪರ್ಧಿಗಳಿಗೆ ಡ್ರಾಯಿಂಗ್ ಹಾಳೆ ಮಾತ್ರ ವಿತರಿಸಲಿದ್ದಾರೆ. ಉಳಿದೆಲ್ಲ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು. ಹೆಸರು ನೋಂದಾಯಿಸಲು ಸ್ಥಳದಲ್ಲಿ ಅವಕಾಶ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ರಾಜ್ಯ ಸಮಿತಿಯ ಸದಸ್ಯರಾಗಿರುವ ಉದ್ಯಮಿ ರೊನಾಲ್ಡ್ ಮನೋಹರ್ ಕರ್ಕಡ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸಂಚಲನಾ ಸಮಿತಿ ಈಗಾಗಲೇ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಜೊತೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಭಾಗದ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಈಗಾಗಲೇ ಹಲವಾರು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಶಿರ್ವ : ಪ್ಲೇಸ್‌ಮೆಂಟ್ ಸ್ಕಿಲ್ ಮತ್ತು ಟ್ರೈನಿಂಗ್ ಕಾರ್ಯಗಾರ

Posted On: 11-11-2022 12:37PM

ಶಿರ್ವ : ವಿದ್ಯಾರ್ಥಿಗಳ ವೃತ್ತಿಜೀವನದ ಗುರಿಗಳನ್ನು ರೂಪಿಸುವಲ್ಲಿ ಉದ್ಯೋಗ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ನೇಮಕಾತಿಗಾಗಿ ತಮ್ಮ ಕ್ಯಾಂಪಸ್‌ಗೆ ಭೇಟಿ ನೀಡುವ ಉನ್ನತ ಸಂಸ್ಥೆಯಲ್ಲಿ ಸ್ಥಾನ ಪಡೆಯುವುದು ಪ್ರತಿಯೊಬ್ಬ ಕಂಪ್ಯೂಟರ್ ಪದವಿ ವಿದ್ಯಾರ್ಥಿಯ ಕನಸಾಗಿದೆ. ಈ ಪ್ರಮುಖ ಅಂಶವನ್ನು ಪರಿಗಣನೆಗೆ ಇಟ್ಟುಕೊಂಡು, ಪದವಿ ವಿದ್ಯಾರ್ಥಿಗಳಿಗೆ ತಮ್ಮ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವಿವಿಧ ಉದ್ಯಮಗಳಲ್ಲಿ ಉತ್ತಮ ಉದ್ಯೋಗವನ್ನು ಸಾಧಿಸಲು ತರಬೇತಿ ಮುಖ್ಯವಾಗಿದೆ ಎಂದು ಸಂತ ಮೇರಿ ಮಹಾ ವಿದ್ಯಾಲಯ,ಶಿರ್ವ ಮತ್ತು ಮೈಟ್ ಕಾಲೇಜು, ಮಿಜಾರು ನಡುವೆ ಒಡಂಬಡಿಕೆಯ ಅನುಸರಿಸಿ ಗಣಕ ವಿಜ್ಞಾನ ವಿಭಾಗ ಏರ್ಪಡಿಸಿದ ಪ್ಲೇಸ್‌ಮೆಂಟ್ ಸ್ಕಿಲ್ ಮತ್ತು ಟ್ರೈನಿಂಗ್ ಕಾರ್ಯಗಾರದಲ್ಲಿ ಮುಖ್ಯ ಅತಿಥಿ ಮಿಜಾರ್ ಮೈಟ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಅಕ್ಷತ್ರಾಜ್ ಜೈನ್ ಹೇಳಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು, ತಾಂತ್ರಿಕ ಪರಿಣತಿಯೊಂದಿಗೆ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ. ಈ ಅವಶ್ಯಕತೆಗಳನ್ನು ಪೂರೈಸಲು, ಉದ್ಯಮದ ಗುಣಮಟ್ಟಕ್ಕೆ ಸಮಾನವಾಗಿ ಕಂಪ್ಯೂಟರ್ ಪದವೀಧರರ ಸಾಮರ್ಥ್ಯವನ್ನು ಹೆಚ್ಚಿಸಲು ವೃತ್ತಿ ಮತ್ತು ಉದ್ಯೋಗ ಸಂಬಂಧಿತ ಚಟುವಟಿಕೆಗಳ ಬಗ್ಗೆ ಸಂಪೂರ್ಣ ತರಬೇತಿಯನ್ನು ಪಡೆದು ಅವರ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದೊಂದಿಗೆ ವಿವಿಧ ಕೌಶಲಗಳೊಂದಿಗೆ ತರಬೇತಿ ನೀಡುವುದು ಸಂಸ್ಥೆ ಹಾಗೂ ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ಡೈರೆಕ್ಟರ್ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ತಿಳಿಸಿದರು. ಮೈಟ್ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವರುಣ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಬಯೋಡೇಟಾ ಬರವಣಿಗೆ, ಆಪ್ಟಿಟ್ಯೂಡ್ ಟೆಸ್ಟ್, ಗುಂಪು ಚರ್ಚೆ, ಸಂದರ್ಶನವನ್ನು ಹೇಗೆ ಎದುರಿಸುವುದು ಸೇರಿದಂತೆ ಉದ್ಯೋಗ ಕೌಶಲ್ಯಗಳು. ಒಂದು ಅವಲೋಕನ ಮುಂದುವರಿಕೆಯಲ್ಲಿ ಪ್ರಸ್ತುತಿ ಕೌಶಲ್ಯಗಳು, ನಾಯಕತ್ವ ಕೌಶಲ್ಯಗಳು ಮತ್ತು ಸ್ವಯಂ ಪ್ರೇರಣೆ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳು ಬಗ್ಗೆ ತರಬೇತಿ ನೀಡುತ್ತಾರೆ.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ದಿವ್ಯಶ್ರೀ, ಸುಷ್ಮಾ,ಬಿಸಿಎ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಾದ ಅನುಪ್ ನಾಯಕ್ ಮತ್ತು ಅಲಿಸ್ಟರ್ ಕಾರ್ಯಾಗಾರದಲ್ಲಿ ಸಹಕರಿಸಿದರು. ಶ್ರಾವ್ಯ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು. ದೀಪ್ತಿ ವಂದಿಸಿದರು, ಛಾಯಾ ಕರ್ಕೇರ ಸ್ವಾಗತಿಸಿ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ನವೆಂಬರ್ 14 - 20 : 69 ನೇ ಅಖಿಲ ಭಾರತ ಸಹಕಾರ ಸಪ್ತಾಹ - ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ ವಿವಿಧ ಕಾರ್ಯಕ್ರಮಗಳು

Posted On: 11-11-2022 12:09PM

ಪಡುಬಿದ್ರಿ : 69ನೇ ಅಖಿಲ ಭಾರತ ಸಹಕಾರ ಸಪ್ತಾಹವು ನವಂಬರ್ 14ರಿಂದ 20ರವೆಗೆ ರಾಷ್ಟ್ರದಾದ್ಯಂತ ಆಚರಿಸಲಾಗುತಿದ್ದು ಇದರ ಅಂಗವಾಗಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಸಪ್ತಾಹದ 7 ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನವೆಂಬರ್ 14ರಂದು ಸೊಸೈಟಿಯ ಪ್ರಧಾನ ಕಚೇರಿಯ ವೈ ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ ಪಡುಬಿದ್ರಿ ಇಲ್ಲಿ ಅಪರಾಹ್ನ 3ಕ್ಕೆ ರೈತರ ಸಮಾವೇಶ ಹಾಗೂ ರೈತರಿಂದ ಡಾ| ಎಮ್ ಎನ್ ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ, ಕೃಷಿ ಸಹಾಯ ಧನ ವಿತರಣೆ, ಶೀತಲೀಕರಣ ಶವ ಪೆಟ್ಟಿಗೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರ ಕಾರ್ಯಕ್ರಮ ಜೊತೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕರಾದ ಡಾ| ಐ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸಹಕಾರ ಸೌಹಾರ್ದ ಮಹಾಮಂಡಳ ನಿ. ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ್ ಎಸ್ ಕೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಪಲಿಮಾರ್, ಮತ್ತು ಎ. ರಾಮಚಂದ್ರ ಆಚಾರ್ಯ ಇವರಿಗೆ ಗೌರವಾಭಿನಂದನೆಯು ಜರಗಲಿದೆ. ನವೆಂಬರ್ 15ರಂದು ಸೊಸೈಟಿಯ ಪ್ರಧಾನ ಕಚೇರಿಯ ವೈ ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ ಪಡುಬಿದ್ರಿ ಇಲ್ಲಿ ಪೂವಾಹ್ನ 11ಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಪಡುಬಿದ್ರಿ, ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವರ ಸಯುಕ್ತ ಆಶ್ರಯದಲ್ಲಿ ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ ಬಗ್ಗೆ ಸಹಕಾರಿಯವರಿಗೆ ತರಬೇತಿ ನವೆಂಬರ್ 16ರಂದು ಅಪರಾಹ್ನ 4ಕ್ಕೆ ಪಡುಬಿದ್ರಿಯ ಕಾರ್ಕಳ ವೃತ್ತದಲ್ಲಿ ಪಡುಬಿದ್ರಿ ಆರಕ್ಷಕರ ಠಾಣೆಗೆ ಧ್ವನಿವರ್ಧಕ ಹಾಗೂ ಸಂಚಾರ ನಿರ್ವಹಣೆ ಭೂತ್ ಹಸ್ತಾಂತರ. ನವೆಂಬರ್ 17ರಂದು ಸೊಸೈಟಿಯ ಪ್ರಧಾನ ಕಚೇರಿಯ ವೈ ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ ಪಡುಬಿದ್ರಿ ಇಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯ ಸೊಸೈಟಿ ನಿ. ಪಡುಬಿದ್ರಿ ಮತ್ತು ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ವಾರ್ತಾ ದಿನಪತ್ರಿಕೆ ಸಹಯೋಗದೊಂದಿಗೆ ಮಾಸ್ಟರ್ ಮೈಂಡ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸೂಕ್ತ ಡಿಜಿಟಲ್ ಕೈಪಿಡಿ ಯೋಜನೆ. ನವೆಂಬರ್ 19 ರಂದು ಪೂರ್ವಾಹ್ನ 10ಕ್ಕೆ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯ ಸೊಸೈಟಿ ನಿ. ಪಡುಬಿದ್ರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ, ಹಳೆ ವಿದ್ಯಾರ್ಥಿ ಸಂಘ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಇವರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದ ಶೀತಲೀಕೃತ ಶವಗಾರ ಉದ್ಘಾಟನೆ, ವೈದ್ಯಕೀಯ ಶಿಬಿರ. ನವೆಂಬರ್ 20ರಂದು ಸಹಕಾರ ಸಪ್ತಾಹದ ಸಮಾರೋಪ ಕಾರ್ಯಕ್ರಮ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ ಎಚ್, ನಿರ್ದೇಶಕರಾದ ಗಿರೀಶ್ ಪಲಿಮಾರ್, ಶಿವರಾಮ್ ಎನ್ ಶೆಟ್ಟಿ, ವಾಸುದೇವ ದೇವಾಡಿಗ, ಯಶವಂತ್ ಪಿ ಬಿ, ಸುಚರಿತ ಎಲ್ ಅಮೀನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ರಾವ್, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮ್ಯಾನೇಜರ್ ಪ್ರಭೋದ್ಚಂದ್ರ ಹೆಜಮಾಡಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಉಡುಪಿ : ಟಿ ಎ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮತದಾರದ ಜಾಗೃತಿ ಜಾಥ

Posted On: 10-11-2022 08:57PM

ಉಡುಪಿ : ಟಿ ಎ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟಿನ ಶಾಲೆಯಲ್ಲಿ ಮತದಾರದ ಜಾಗೃತಿ ಜಾಥ ನಡೆಯಿತು.

ಮುಖ್ಯ ಶಿಕ್ಷಕಿ ವಿನೋದ ಶೆಟ್ಟಿ ಯವರು ಶಾಲಾ ಮಕ್ಕಳಿಗೆ ಮತದಾರದ ಜಾಗೃತಿಯ ಬಗ್ಗೆ ಪ್ರಮಾಣ ವಚನ ಮಾಡಿಸಿದರು.

ಶಾಲಾ ಶಿಕ್ಷಕಿಯರು, ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಜಾಥದೊಂದಿಗೆ ಶಾಲೆಯ ಆಸುಪಾಸಿನ ಮನೆಗಳಿಗೆ ಹೋಗಿ ಮತದಾರರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದರು.

ಶಿರ್ವ ಸಂತ ಮೇರಿ ವಿದ್ಯಾಲಯಕ್ಕೆ ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಭೇಟಿ

Posted On: 10-11-2022 06:41PM

ಶಿರ್ವ: ಇಲ್ಲಿನ ಶಿರ್ವ ಸಂತ ಮೇರಿ ವಿದ್ಯಾಲಯಕ್ಕೆ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ, ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ಕೆ ಸಿಂಗ್ ಅವರ ಭೇಟಿ ನೀಡಿದರು. ಯುವ ಸೇನಾದಳದ ಕೆಡೆಟ್‍ಗಳನ್ನು ಉದ್ದೇಶಿಸಿ ಮಾತನಾಡುತ್ತಾ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್ ಸಿಸಿ ಸಹಾಯಕಾರಿ. ಎನ್‌ಸಿಸಿ ತರಬೇತಿಯಿಂದ ಕ್ಯಾಡೆಡ್ಗಳಲ್ಲಿ ದೇಶ ಸೇವೆ ಹಾಗೂ ಸಾಮಾಜಿಕ ಸೇವೆ ಮಾಡಲು ಪ್ರೇರೇಪಿಸುತ್ತದೆ. ಶಿಸ್ತುಬದ್ಧವಾದ ಜೀವನವನ್ನು ನಡೆಸಲು, ಉನ್ನತ ಉದ್ಯೋಗ ಪಡೆಯಲು ಕ್ಯಾಡೆಡ್ಗಳಿಗೆ ಎನ್‌ಸಿಸಿ ಒಂದು ವರವಾಗಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು, ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದೃಢರಾಗಲು ಎನ್‌ಸಿಸಿಯ ವಿವಿಧ ತರಬೇತಿಗಳಲ್ಲಿ ಭಾಗವಹಿಸಿ ಪಡೆದುಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಕ್ಯಾಡೆಟ್ ಗಳು ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಮೊನೀಸ್ ರವರ ಜೊತೆಗೆ ಸಂವಹನ ನಡೆಸಿದರು. ವೇದಿಕೆಯಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಉಡುಪಿಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಆರ್ ಎಸ್ ರಾವತ್, ಟ್ರೈನಿಂಗ್ ಜೆ ಸಿ ಓ ಸುಬೇದಾರ್ ಸಂತೋಷ್ ಕುಮಾರ್ ಮತ್ತು ಶಾಲೆ ವಿಭಾಗದ ಎನ್‌ಸಿಸಿ ಅಧಿಕಾರಿ ಸೆಕೆಂಡ್ ಆಫೀಸರ್ ಜಾನ್ ವಿಲಿಯಂ ವೇಗಸ್ ಉಪಸ್ಥಿತರಿದ್ದರು.

ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್, ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ ಹಾಗೂ ಕ್ಯಾಡೆಟ್ ಅನುಪ್ ನಾಯಕ್ ಸಹಕರಿಸಿದ್ದರು. ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮ ಶ್ರೀ ಸುದರ್ಶನ್ ವಂದಿಸಿ, ಜೂನಿಯರ್ ಅಂಡರ್ ಆಫೀಸರ್ ಲೋಬೋ ಆನ್ ರಿಯಾ ನೇವಿಲ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ : ಕಾನೂನು ಅರಿವು ಮತ್ತು ನಮಗೂ ಹಕ್ಕಿದೆ @75 ಕಾರ್ಯಕ್ರಮ

Posted On: 09-11-2022 05:21PM

ಕಾರ್ಕಳ : ನಮ್ಮ ದೇಶದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ನ್ಯಾಯದ ಹಕ್ಕನ್ನು ನೀಡಿದೆ. ಕಾನೂನಿನ ಅಡಿಯಲ್ಲಿ ಪ್ರತಿ ನಾಗರೀಕನೂ ಕಾನೂನಿಗೆ ತಲೆಬಾಗಿ ತನ್ನ ಸ್ವಾತಂತ್ರವನ್ನು ಅನುಭವಿಸಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಿ ನ್ಯಾಯಾಲಯದಲ್ಲಿ ನ್ಯಾಯ ಪಡೆಯುವ ವ್ಯವಸ್ಥೆಯೂ ಇದೆ. ಇದನ್ನು ದೇಶದ ನಾಗರೀಕರಾದ ನಾವೆಲ್ಲ ಅರ್ಥೈಸಿಕೊಂಡು ಕಾನೂನಿಗೆ ಗೌರವ ನೀಡಿ ಬದುಕಬೇಕಿದೆ ಎಂದು ವಕೀಲ ಪ್ರಸನ್ನ ಕರ್ಮರ್ಕರ್‌ ಹೇಳಿದರು.

ಅವರು ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದ ನಮಗೂ ಹಕ್ಕಿದೆ @ 75 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ನಾವೆಲ್ಲ ಕಾನೂನು ಮತ್ತು ಸಂವಿಧಾನದ ಆಶಯವನ್ನು ಗೌರವಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅಶ್ವಥ್‌ ಎಸ್.ಎಲ್‌, ಗಣಪತಿ ಕೆ.ಎಸ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶಾನ್‌ ಗೌಡ, ಉಪನ್ಯಾಸಕರಾದ ರಾಘವೇಂದ್ರ ರಾವ್‌, ಉಮೇಶ್‌, ಅಕ್ಷತಾ ಜೈನ್‌, ಚಂದ್ರಕಾಂತ್‌ ಉಪಸ್ಥಿತರಿದ್ದರು. ಉಮೇಶ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಅದಮಾರು : ಪಿಪಿಸಿ ವಿದ್ಯಾಸಂಸ್ಥೆಯಿಂದ ಮತದಾರ ಜಾಗೃತಿ ಜಾಥ

Posted On: 09-11-2022 04:42PM

ಅದಮಾರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಬುಧವಾರ ಮತದಾರರ ಜಾಗೃತಿ ಜಾಥ ಕಾರ್ಯಕ್ರಮ ಜರಗಿತು.

ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಶಿಕ್ಷಕರ ಸಹಿತ ಎಲ್ಲಾ ವಿದ್ಯಾರ್ಥಿಗಳು ಅದಮಾರು ಮದರಂಗಡಿ ರಸ್ತೆಯಿಂದ ಆದರ್ಶ ಯುವಕ ಮಂಡಲದವರೆಗೆ ಸಾಗಿ, ಅಲ್ಲಿಂದ ವಾಪಸಾಗಿ ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ ಜಾಥ ಸಮಾಪ್ತಿಗೊಳಿಸಿದರು.

ಈ ಸಂದರ್ಭ ಶಾಲೆಯ ಕನ್ನಡ ವಿಭಾಗದ ಉಪನ್ಯಾಸಕ ಜಯಶಂಕರ್ ಕಂಗಣ್ಣಾರುರವರು ಸಮರ್ಪಕ ಮಾಹಿತಿ ನೀಡಿದರು.

ಈ ಸಂದರ್ಭ ಪ್ರಭಾರ ಪ್ರಾಂಶುಪಾಲ ಸಂಜೀವ ನಾಯಕ್, ನಿಕಟ ಪೂರ್ವ ಪ್ರಾಂಶುಪಾಲ ರಾಮಕೃಷ್ಣ ಪೈ, ಮತದಾರ ಸುರಕ್ಷತಾ ಸಂಘದ ಸಂಚಾಲಕಿ ನವ್ಯ ಬಿ ಎಸ್, ವಿಜಯೇಂದ್ರ ಕುಮಾರ್, ಆದರ್ಶ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕರು ಮತ್ತು ಶಿಕ್ಷಕಿಯರು, 500ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಉದ್ಯಾವರ : ಕನಸಿನ ಮನೆಗೆ ಇನ್ವರ್ಟರ್ ಕೊಡುಗೆ

Posted On: 07-11-2022 09:15PM

ಉದ್ಯಾವರ : ಇಲ್ಲಿಯ ಸ್ನೇಹ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ನಾಗರಿಕರ ಕನಸಿನ ಮನೆಗೆ ಉದ್ಯಾವರ ಹಲೀಮಾ ಸಾಬ್ಜು ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಮತ್ತು ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ವತಿಯಿಂದ ಸುಮಾರು 60 ಸಾವಿರ ರೂ. ಅಧಿಕ ಮೌಲ್ಯದ ಇನ್ವರ್ಟರ್ ಹಾಗೂ ದಿನಬಳಕೆ ಸಾಮಗ್ರಿ ಗಳನ್ನು ಹಸ್ತಾಂತರಿಸಲಾಯಿತು. ಉದ್ಘಾಟಿಸಿ ಮಾತನಾಡಿದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಹಿರಿಯ ನಾಗರಿಕರಿಗೆ ಈ ಕನಸಿನ ಮನೆಯಲ್ಲಿ ನೆಮ್ಮದಿ ಸಿಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಾವರ ಜಾಮಿಯಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ರೆಹಮಾನಿ ಆಶೀರ್ವಚನದಲ್ಲಿ ಮಾತನಾಡಿ, ಬಾಲ್ಯ ಯೌವನ ದಾಟಿ ದೇಹದಲ್ಲಿ ಶಕ್ತಿ ಕುಂದಿದ ದೇವರ ಮಕ್ಕಳಿಗೆ ಆಸರೆಯಾಗಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ಹಾಜಿ ಅಬ್ದುಲ್ ಜಲೀಲ್ ಅವರು ಕೊಡುಗೆ ಮಾನವೀಯತೆಗೆ ಆದರ್ಶಪ್ರಾಯ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ದಾನಿ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಪಳ್ಳಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್, ಪ್ರಮುಖರಾದ ರಾದ ಸಚಿನ್ ಸಾಲ್ಯಾನ್ ಬೊಳ್ಜೆ, ಸಲ್ವದೊರ್ ದಾಂತಿ, ಕನಸಿನ ಮನೆ ಸಹಾಯಕಿ ಕವಿತಾ ನಾಯ್ಕ್ ಉಪಸ್ಥಿತರಿದ್ದರು.

ಸಮಾಜಸೇವಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನಸಿನ ಮನೆ ಮುಖ್ಯಸ್ಥೆ ಸೀಮಾ ದೇವಾಡಿಗ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಸಡಗರದ ದೀಪಾವಳಿ ಹಾಗೂ ತುಳಸಿ ಹಬ್ಬ

Posted On: 07-11-2022 08:45PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 5 ರಂದು ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಯಲು ಮತ್ತು ಹಬ್ಬಗಳ ಮಹತ್ವ ತಿಳಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ತಿಳಿಸಿದರು.

ಸಂಸ್ಥಾಪಕರಲ್ಲೊಬ್ಬರಾದ ಅಶ್ವಥ್‌ ಎಸ್‌ ಎಲ್‌ ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲು ಹಬ್ಬವು ಸಾಮರಸ್ಯವನ್ನು ತರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತೀಯ ಪರಂಪರೆಯನ್ನು ಬಿಂಬಿಸುವ ಉಡುಗೆ-ತೊಡುಗೆಗಳನ್ನು ಧರಿಸಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಥೆಯ ಸಂಸ್ಥಾಪಕರುಗಳಾದ ಡಾ. ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ ಕೆ, ವಿಮಲ್‌ ರಾಜ್‌, ಗಣಪತಿ ಕೆ ಎಸ್‌ ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು. ತದನಂತರ ಸಂಸ್ಥೆಯ ಆವರಣದಲ್ಲಿ ದೀವಟಿಗೆ ಬೆಳಕಿನಲ್ಲಿ , ಸುಡುಮದ್ದು ಪ್ರದರ್ಶನ ನಡೆಯಿತು.