Updated News From Kaup

ಪಡುಬಿದ್ರಿ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ ಡಿ ಟಿ ಯು) ವತಿಯಿಂದ ಗಣರಾಜ್ಯೋತ್ಸವ ಆಚರಣೆ

Thumbnail
Posted On: 26 Jan 2023, 07:11 PM

ಪಡುಬಿದ್ರಿ : ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್ ಡಿ ಟಿ ಯು) ವತಿಯಿಂದ ಪಡುಬಿದ್ರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಎಸ್ ಡಿ ಟಿ ಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಮಲ್ಲಾರ್ ಧ್ವಜಾರೋಹಣಗೈದರು. ಈ ಸಂದರ್ಭ ಮಾತನಾಡಿದ ಅವರು ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವದ ದಿನ ಪ್ರತಿ ಭಾರತೀಯನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಎಷ್ಟು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆಯೋ, ಅಷ್ಟೇ ಸಂಭ್ರಮದಿಂದ ದೇಶದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಯಾದ ಎಸ್ ಡಿ ಟಿ ಯು ಉಡುಪಿ ಜಿಲ್ಲೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಎಸ್ ಡಿ ಟಿ ಯು ಎಂಬುವುದು ಕಾರ್ಮಿಕರನ್ನು ಒಟ್ಟು ಗೂಡಿಸಿ ಅವರ ಹಕ್ಕು ಮತ್ತು ಅವಕಾಶಗಳಿಗಾಗಿ ಹೋರಾಟ ಮಾಡುವ ಒಂದು ಒಕ್ಕೂಟವಾಗಿದೆ. ಈ ನಿಟ್ಟಿನಲ್ಲಿ ಸಂವಿಧಾನ ನೀಡಿದ ಎಲ್ಲಾ ಹಕ್ಕುಗಳನ್ನು ಸದುಪಯೋಗಪಡಿಸಿ ಕಾರ್ಮಿಕರು ಸಮಾಜದಲ್ಲಿ ಉತ್ತಮ ಬದುಕನ್ನು ಸಾಧಿಸಲು ಎಸ್ ಡಿ‌ ಟಿ ಯು ಶ್ರಮಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಎಸ್ ಡಿ ಟಿ ಯು ಪಡುಬಿದ್ರಿ ಘಟಕದ ಅಧ್ಯಕ್ಷ ರಿಯಾಜ್ ಕಂಚಿನಡ್ಕ , ಪಡುಬಿದ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಹೈದರ್ ಕಂಚಿನಡ್ಕ, ಜಿಲ್ಲಾ ಸಮಿತಿ ಸದಸ್ಯ ಫಿರೋಜ್, ಅನ್ವರ್, ಎಸ್ ಡಿ ಪಿ ಐ ಪಡುಬಿದ್ರಿ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ, ಮತ್ತಿತರರು ಉಪಸ್ಥಿತರಿದ್ದರು.

ಜನವರಿ 29 : ಪೈಯ್ಯಾರು ಪಿ. ಕೆ. ಎಸ್ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪೂರ್ವಭಾವಿ ಸಭೆ

Thumbnail
Posted On: 26 Jan 2023, 03:22 PM

ಕಾಪು : ಕಳತ್ತೂರು ಪಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರು ಗೋಪಾಲ ಕೃಷ್ಣ ರಾವ್ ಇವರಿಗೆ ಗುರುವಂದನಾ ಕಾರ್ಯಕ್ರಮ ನಡೆಸುವ ಬಗ್ಗೆ ಶಾಲೆಯ ಹಳೆ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಪಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲಾ ಸಭಾ ಭವನದಲ್ಲಿ ಜನವರಿ 29, ಭಾನುವಾರ ಬೆಳಿಗ್ಗೆ 9.30 ಕ್ಕೆ ಜರಗಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಪಯ್ಯಾರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪಯ್ಯಾರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ: ಕಾಪು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ

Thumbnail
Posted On: 25 Jan 2023, 11:01 PM

ಕಾಪು : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕಿನ 2023-2024ನೇ ಅವಧಿಯ ನೂತನ ಅಧ್ಯಕ್ಷರಾಗಿ ನಸೀ‌ರ್ ಅಹಮದ್ ಆಯ್ಕೆಯಾಗಿದ್ದಾರೆ. ಕಾಪುವಿನಲ್ಲಿ ನಡೆದ ತಾಲೂಕು ಸಮಿತಿಯ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಈ ವೇಳೆ ಉಪಾಧ್ಯಕ್ಷರಾಗಿ ಮುಸ್ತಾಕ್ ಇಬ್ರಾಹಿಂ ಬೆಳಪು, ಕಾರ್ಯದರ್ಶಿಯಾಗಿ ರಿಯಾಜ್ ಅಹಮದ್ ನಜೀರ್ ಮುದರಂಗಡಿ, ಜೊತೆ ಕಾರ್ಯದರ್ಶಿಯಾಗಿ ವೈ. ಎಮ್ ಇಲಿಯಾಸ್ ಕಟಪಾಡಿ, ಕೋಶಾಧಿಕಾರಿಯಾಗಿ ಮೊಹಮ್ಮದ್ ಆಝಮ್ ಶೇಕ್ ಉಚ್ಚಿಲ ಹಾಗೂ ತಾಲೂಕು ಸಮಿತಿಯ ಸದಸ್ಯರಾಗಿ ಬಿ.ಎಮ್ ಮೊಯ್ದಿನ್ ಕಟಪಾಡಿ, ಅಬ್ದುಲ್ ರಜಾಕ್ ಕಟಪಾಡಿ, ಅಮೀರ್ ಹಂಝ ಕಾಪು, ರಮೀಜ್ ಹುಸೈನ್ ಪಡುಬಿದ್ರಿ, ಅಬ್ದುಲ್ ಹಮೀದ್ ಪಡುಬಿದ್ರಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಸುಲೇಮಾನ್ ಮಲ್ಲಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಬ್ದುರಹಮಾನ್ ಚಂದ್ರನಗರ, ಮೊಹಮ್ಮದ್ ಅಷ್ಪಾಕ್ ಮೊಹಸಿನ್ ಮಲ್ಲಾರ್, ಎಮ್. ಎಸ್. ಅಬ್ಬಾಸ್ ಹಾಜಿ ಕನ್ನಂಗಾರ್, ಅಬೂಬಕರ್ ಪಾದೂರ್ ಮತ್ತು ಸಿರಾಜ್ ಉಚ್ಚಿಲ, ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು. ಜಿಲ್ಲಾ ಸಮಿತಿಗೆ ಎಮ್. ಪಿ. ಮೊಯಿದಿನಬ್ಬ ಅಬ್ದುರಹಮಾನ್ ಕನ್ನಂಗಾರ್ ರವರು ಜಿಲ್ಲಾ ವತಿಯಿಂದ ನೇಮಿಸಲ್ಪಟ್ಟಿರುವರು. ಸಭೆಯಲ್ಲಿ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಎಸ್. ಕೆ. ಇಕ್ಬಾಲ್ ಉಪಸ್ಥಿತರಿದ್ದರು. ಅನ್ವರ್ ಅಲಿಯವರ ಕುರಾನ್ ಪಠಣದೊಂದಿಗೆ ಸಭೆ ಪ್ರಾರಂಭವಾಗಿ, ಜನಾಬ್ ಶಬೀಹ್ ಅಹಮದ್‌ ಕಾಝಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರಿಸ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಜಿಲ್ಲಾ ಉಪಾಧ್ಯಕ್ಷರಾದ ಸಲಾಹುದ್ದೀನ್ ಹೂಡೆ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು. ಹಾಲಿ ಅಧ್ಯಕ್ಷರಾದ ಶಭಿ ಅಹ್ಮದ್ ಖಾಝಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ರಿಯಾಜ್ ಅಹಮದ್ ನಜೀರ್ ವಂದಿಸಿದರು.

ಕಾಪು : ರಾಷ್ಟೀಯ ಮತದಾರರ ದಿನಾಚರಣೆ - ಪ್ರತಿಜ್ಞಾ ವಿಧಿ ; ಸನ್ಮಾನ

Thumbnail
Posted On: 25 Jan 2023, 10:52 PM

ಕಾಪು : ರಾಷ್ಟೀಯ ಮತದಾರರ ದಿನಾಚರಣೆ 2023 ಅಂಗವಾಗಿ ಕಾಪು ತಾಲೂಕು ಮಟ್ಟದ ಕಾರ್ಯಕ್ರಮವನ್ನು ಕಾಪುವಿನ ತಹಶೀಲ್ದಾರ್‌ ನೇತ್ರತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ಇಲ್ಲಿ ನಡೆಸಲಾಯಿತು. ಮತದಾನದ ಮಹತ್ವವನ್ನು ತಿಳಿಸಿ, ಪ್ರತಿಜ್ಞಾ ವಿಧಿಯನ್ನು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ವಿದ್ಯಾರ್ಥಿಗಳಿಗೆ ಬೋಧಿಸಿದರು. ಪ್ರಾಂಶುಪಾಲರಾದ ಸ್ಟೀವನ್‌ ಕ್ವಾಡ್ರಸ್‌ ಯುವ ಮತದಾರರಿಗೆ ಮತದಾನದ ಮಹತ್ವವನ್ನು ತಿಳಿಸಿದರು. ಸನ್ಮಾನ : ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓ ಮೇಲ್ವಿಚಾರಕರಾದ ಮಥಾಯಿ ಪಿ ಎಮ್‌, ಡೋಮಿನಿಕ್‌ ಡೇನಿಯಲ್‌ ಡಿಸೋಜಾ, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬಿ.ಎಲ್.ಓಗಳಾದ ಜೆಸುದಾಸ್‌ ಸೋನ್ಸ್‌ ಹಾಗೂ ಪೂರ್ಣಿಮಾ ಇವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ತಹಶೀಲ್ದಾರ್ ಕಛೇರಿ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು : ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

Thumbnail
Posted On: 24 Jan 2023, 07:38 PM

ಕಾಪು : ಇಲ್ಲಿನ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಮಂಗಳವಾರ ಜರಗಿತು. ಸಮಾರಂಭದಲ್ಲಿ ರಸಮಂಜರಿ, ಶಿಕ್ಷಕಿಯರ ನೃತ್ಯ, ಮಕ್ಕಳಿಂದ ಭಾರತದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಉದಯ ಕುಮಾರ್ ಇವರಿಂದ ಕ್ರಿಕೆಟ್ ಕೋಚಿಂಗ್ ಉದ್ಘಾಟನೆಗೊಂಡಿತು.ಸುಪರ್ಣಾ ಅವರಿಂದ ಜೀವನ ಕೌಶಲ್ಯ ಪುಸ್ತಕ ಬಿಡುಗಡೆ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಜೀವನದಲ್ಲಿ ಮೌಲ್ಯ, ಜ್ಞಾನ, ಕೌಶಲಗಳು ಮುಖ್ಯ. ಇದನ್ನು ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಕೆ.ಪಿ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರ್ಗವ ತಂತ್ರಿ, ಉಪ ಸಂಚಾಲಕರಾದ ಶ್ವೇತ, ಶಾಲಾ ಶಿಕ್ಷಕ ವೃಂದ, ಪೋಷಕರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಮ್ ಮತ್ತು ಶಿದ್ರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ : ಯುವಕರ ಕಣ್ಮಣಿ ನೇತಾಜಿ ಸುಭಾಶ್ಚಂದ್ರ ಬೋಸ್‌ ಜನ್ಮದಿನ ಆಚರಣೆ

Thumbnail
Posted On: 24 Jan 2023, 10:43 AM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪಿ ಯು ಕಾಲೇಜಿನಲ್ಲಿ ಜನವರಿ 23 ರಂದು ನೇತಾಜಿ ಸುಭಾಶ್ಚಂದ್ರ ಬೋಸ್‌ ರವರ ಜಯಂತಿ ಅಧಿಕೃತವಾಗಿ ಪರಾಕ್ರಮ್‌ ದಿವಸ್‌ ಆಚರಿಸಲಾಯಿತು. ಇಡೀ ಭಾರತದಲ್ಲಿ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿ ನಿಮ್ಮ ರಕ್ತ ನೀಡಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಸಿಡಿಲಬ್ಬರದ ಘರ್ಜನೆಯನ್ನು ಮಾಡಿದ ಅಪ್ರತಿಮ ಸಾಹಸಿ ನೇತಾಜಿಯವರ ದೇಶಪ್ರೇಮ ನಮಗೆ ಮಾದರಿಯಾಗಬೇಕು ಎಂದು ಹಿಂದಿ ಉಪನ್ಯಾಸಕ ವಿನಾಯಕ ಜೋಗ್‌ ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ನಂದೀಶ್‌ ಹೆಚ್‌ ಬಿ, ಉಮೇಶ್‌, ರಾಘವೇಂದ್ರ ಬಿ ರಾವ್‌, ಅಗ್ರಜ ರಾಘವ್‌, ಶಿವಕುಮಾರ್‌, ರಾಜೇಶ ಶೆಟ್ಟಿ, ಗಿರೀಶ್‌ ಭಟ್‌ ಹಾಗೂ ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಬಂಟಕಲ್ಲು : ವಿಕಾಸ ಸೇವಾ ಸಮಿತಿಯಿಂದ ಹೊಂಡಮಯ ರಸ್ತೆಗೆ ಕಾಂಕ್ರೀಟ್ ಹಾಕುವ ಕಾರ್ಯ ; ಗ್ರಾಮಸ್ಥರ ಮೆಚ್ಚುಗೆ

Thumbnail
Posted On: 22 Jan 2023, 07:32 PM

ಬಂಟಕಲ್ಲು : ನ್ಯೂ ಹೇರೂರು ಫ್ರೆಂಡ್ಸ್ ಮತ್ತು ವಿಕಾಸ ಸೇವಾ ಸಮಿತಿ ಇದರ ವತಿಯಿಂದ ಹೊಂಡಮಯ ರಸ್ತೆಗಳಿಗೆ ಕಾಂಕ್ರೀಟ್ ಹಾಕುವ ಶ್ರಮದಾನದಲ್ಲಿ ವಿಕಾಸ ಸೇವಾ ಸಮಿತಿಯು ಪಾಲ್ಗೊಂಡಿತು. ಈ ಸಂದರ್ಭ ವಿಕಾಸ ಸೇವಾ ಸಮಿತಿಯ ಅಧ್ಯಕ್ಷರಾದ ಮಾಧವಾಚಾರ್ಯರು ಮಾತನಾಡಿ ಸಂಘ ಸಂಸ್ಥೆಗಳು ಗ್ರಾಮಸ್ಥರು ವಿಶ್ವಾಸವನ್ನು ಗಳಿಸಿ ಸಮಾಜಮುಖಿ ಕಾರ್ಯಕ್ರಮ ನಡೆಸಿ ಸದೃಢವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು. ನಾನೇ ನಾನೇ ಎಂಬ ಅಹಂ ಮೆರೆತು ನಾವೆಲ್ಲ ಒಂದು ಎಂಬ ಭಾವನೆಯಿಂದ ನಮ್ಮ ಗ್ರಾಮ ಸ್ವಚ್ಛ ಗ್ರಾಮವಾಗಿ ಬೆಳೆಯಬೇಕೆಂದು ಅಧ್ಯಕ್ಷ ರಾಜೇಶ್ ಜೋಗಿ ಹೇಳಿದರು. ಕಳೆದ ಹಲವಾರು ತಿಂಗಳಿಂದ ವಾಹನಗಳಿಗೆ ರಸ್ತೆಯಲ್ಲಿ ಚಲಿಸಲು ಅಸಾಧ್ಯ ವಾಗುವುದನ್ನು ಮನಗಂಡು ಸುಮಾರು 20ಕ್ಕೂ ಮಿಕ್ಕಿ ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ, ಪಂಚಾಯತ್ ಸದಸ್ಯ ವಿಜಯ್ ಧೀರಜ್, ನ್ಯೂ ಹೇರೂರು ಫ್ರೆಂಡ್ಸ್ನ ಕೋಶಾಧಿಕಾರಿ ಸುಧೀರ್ ಪಾಲ್ಗೊಂಡಿದ್ದರು. ಈ ಶ್ರಮದಾನ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಜೆಪಿ ಕಾಪು ಮಂಡಲ : ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

Thumbnail
Posted On: 22 Jan 2023, 06:40 PM

ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ಇವರ ನೇತೃತ್ವದಲ್ಲಿ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಎರ್ಮಾಳು ಇಂಸ್ಟೆಂಟ್ ಸೀ ರೆಸಾರ್ಟ್‌ ನಲ್ಲಿ ಆದಿತ್ಯವಾರ ಜರಗಿತು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀಶ ನಾಯಕ್, ಗೀತಾಂಜಲಿ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ ಕೊಡಿಬೆಟ್ಟು, ಗೋಪಾಲಕೃಷ್ಣ ರಾವ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಹಾಗೂ ವೇದಿಕೆಯಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸುತ್ತಿರುವ ಪಕ್ಷದ ಪ್ರಮುಖರು, ಮಹಾಶಕ್ತಿ ಕೇಂದ್ರ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಸರ್ಗಾಂತರ್ಗತ "ಚೈತನ್ಯ" ಸಂಭ್ರಮಿಸುವ ಸನ್ನಿಧಾನ ಪಡುಬಿದ್ರಿಯ ಬ್ರಹ್ಮಸ್ಥಾನ

Thumbnail
Posted On: 21 Jan 2023, 06:59 PM

ಸಹಜ ನಿಸರ್ಗ ಮತ್ತು ‌ಅಲಂಕೃತ ನಿಸರ್ಗದ ಸನ್ನಿಧಿಗಳಲ್ಲಿ "ನಡುವಣಲೋಕ" ನಿರ್ಮಾಣವಾಗಬಲ್ಲುದು . "ಪ್ರಕೃತಿ" , ನಿಜವಾಗಿ ಸಂಭ್ರಮಿಸುವುದು ಅಲಂಕಾರದಲ್ಲಿ ಮತ್ತು ಅಲಂಕಾರ ರಹಿತ ಸ್ಥಿತಿಯಲ್ಲಿ . ಇಂತಹ ಒಂದು ಅಪೂರ್ವ ನೆಲೆಯಾಗಿ ಪಡುಬಿದ್ರಿಯ ಬ್ರಹ್ಮಸ್ಥಾನ ಪ್ರಕಟಗೊಳ್ಳುತ್ತದೆ . [ ಆದರೆ ಇಲ್ಲಿಯ ನೈಜ ಸೊಬಗನ್ನಾಗಲಿ‌, ಅಲಂಕೃತ ಚಿತ್ರಣವನ್ನಾಗಲಿ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿ ಕೊಂಡೊಯ್ಯುವಂತಿಲ್ಲ , ಆ ಭವ್ಯವನ್ನು ಪ್ರತ್ಯಕ್ಷ ಕಂಡೇ ಅನುಭವಿಸಬೇಕು . ಕಲಾವಿದರು ಬಿಡಿಸಿದ ಚಿತ್ರಗಳು ಇವೆ , ಅವುಗಳಷ್ಟೆ ಇಲ್ಲಿ ಸಿಗುವ ಅಭಿವ್ಯಕ್ತಿಗಳು . ಇದು ಇಲ್ಲಿಯ ಶಿಸ್ತು .] ನಿಸರ್ಗವು ನೈಜ ಸ್ಥಿತಿಯಲ್ಲಿ ಅಂದರೆ "ಇದ್ದಹಾಗೆ" ( ಅಲಂಕಾರ ರಹಿತ ) . ಅಲಂಕೃತ ಸ್ವರೂಪ ಎಂದರೆ ಮಾನವ ನಿರ್ಮಿತ ಅಲಂಕರಣದಲ್ಲಿ‌ ಎಂದು ಅರ್ಥೈಸಿಕೊಂಡರೆ ಈ ಎರಡೂ ಸ್ಥಿತಿಯಲ್ಲಿ‌ ತೆರೆದುಕೊಳ್ಳಬಲ್ಲುದು.ಈ ಸನ್ನಿಧಿಯಲ್ಲಿ ಸಾಧಕನು ತಾದಾತ್ಮ್ಯ ಸಾಧಿಸಬಲ್ಲ . ಇಲ್ಲಿಯ ಅಲಂಕರಣಗಳಿಲ್ಲದ ಸ್ಥಿತಿ , ಹಕ್ಕಿಗಳ ಇಂಚರದಲ್ಲಿಯೂ ಸೃಷ್ಟಿಯಾಗುವ ಮೌನ , ಪ್ರಕೃತಿಯ ರಮ್ಯಮನೋಹರ ನೋಟ ನಡುವಣ ಲೋಕಕ್ಕೆ ನಮ್ಮನ್ನು ಸುಲಭವಾಗಿ ಒಯ್ಯುವಂತಿರುತ್ತದೆ . ಅದೇ ನಿಸರ್ಗ ಹೂ ,ಹಣ್ಣು , ಫಲವಸ್ತುಗಳಿಂದ ಶೃಂಗಾರಗೊಂಡಾಗ ಮಂದ ಬೆಳಕಿನಲ್ಲಿ ಅಂದರೆ ಆರಾಧನೆ ಅಥವಾ ವಿಧಿಯಾಚರಣೆಗೆ ಅಣಿಯಾದಾಗ ಒಂದು ಅಲೌಕಿಕ ಲೋಕ ನಿರ್ಮಾಣವಾಗುತ್ತದೆ ಇದೇ ನಡುವಣಲೋಕ . ಇದು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಸಾಧ್ಯವಾಗುವ ಅಥವಾ ಸಿದ್ಧಿಯಾಗುವ "ದಿವ್ಯ"ದ ಸಾಕ್ಷಾತ್ಕಾರ . ಎರಡು ವರ್ಷಗಳಿಗೊಮ್ಮೆ "ಡಕ್ಕೆಬಲಿ" ಎಂಬ ಸೇವೆ ನಡೆಯುವ ಶ್ರಾಯದಲ್ಲಿ ಒಂದಷ್ಟು ದಿನ ಪ್ರಕೃತಿ ಶೃಂಗಾರಗೊಳ್ಳುತ್ತದೆ . ಉಳಿದ ದೀರ್ಘ ಅವಧಿಯಲ್ಲಿ ಸಹಜ ಸ್ಥಿತಿ ಇರುತ್ತದೆ .ಇದು ಏಕಾಂತದಲ್ಲಿ ನಮ್ಮನ್ನು‌ ನಾವೇ ಮರೆಯುವಂತಹ ಸ್ಥಿತಿ ತಲುಪಲು ಸಾಧ್ಯವಾಗುವ ಪ್ರಕೃತಿಯ ತಾಣ . ಗಿಡ , ಮರ ,ಬಳ್ಳಿ ,ಕಲ್ಲು ,ಬಂಡೆ , ಮಣ್ಣು ಮುಂತಾದ ನಿಸರ್ಗದ ಅವಿಭಾಜ್ಯ ಅಂಗಗಳಲ್ಲಿ‌ ಅಗೋಚರವಾದ ಶಕ್ತಿ ಇದೆ ಎಂಬ ಅನುಭವ ಸಿದ್ಧವಾದ ಪ್ರಾಚೀನರ‌ ನಂಬಿಕೆ ಮತ್ತು ಪದ್ಧತಿಗಳು ಚೈತನ್ಯವಾದವನ್ನವಲಂಬಿಸಿತ್ತು . ಇಂತಹ ಚೈತನ್ಯವನ್ನು ತನಗೆ ಬೇಕೆಂದಲ್ಲಿ ಒದಗಿಬರುವಂತೆ ಮಾಡಲು ಅವರು ಪೂಜಾವಿಧಾನವನ್ನು ಅನುಸರಿಸಿದರು ‌. ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ ಪೂಜೆಯಾಗುತ್ತಿರುವಂತೆ ಸಾನ್ಮಿಧ್ಯ ಒದಗಿಬರುವ ನಿಸರ್ಗಾಂತರ್ಗತವಾದ ಶಕ್ತಿಯನ್ನು ಒಪ್ಪಿದ ,ಸ್ವೀಕರಿಸಿದ ನಮ್ಮ ಪೂರ್ವಸೂರಿಗಳು ಪ್ರಕೃತಿಯ ಮಡಿಲಲ್ಲಿ ಇಂತಹ ಪೂಜಾಸ್ಥಾನಗಳನ್ನು ಕಲ್ಪಿಸಿದರು .ಈ ಪರಿಕಲ್ಪನೆಯಲ್ಲಿ ರೂಢಿಗೆ ಬಂದಿರುವ ಪ್ರಾಚೀನ ಆರಾಧನಾ ಸ್ಥಾನವೇ "ಪಡುಬಿದ್ರಿಯ ಬ್ರಹ್ಮಸ್ಥಾನ",ಅಥವಾ 'ಬೆರ್ಮಸ್ಥಾನ'. ಇಲ್ಲಿ ಎಲ್ಲವೂ ಬಟ್ಟಂಬಯಲು . ಆದರೆ ಏನೂ ಅರ್ಥವಾಗದ ಸಂಕೀರ್ಣ ಶ್ರದ್ಧಾಸ್ಥಾನ . ಇಲ್ಲಿ ಯಾವುದೇ ಕಟ್ಟಡಗಳಿಲ್ಲ ಆದರೆ "ಕಟ್ಟು ಕಟ್ಟಳೆ"ಯಂತೆ ಪೂಜಾ ವಿಧಿಗಳು ನಡೆಯುತ್ತಿರುವಂತೆ ನಂಬಿಕೆ ಒದಗಿ ಬರುತ್ತದೆ ಅಥವಾ ಇಚ್ಛಿತ ಸಂಕಲ್ಪ ಸನ್ನಿಹಿತವಾಗುತ್ತದೆ . ಅಂದರೆ ಇಲ್ಲಿ 'ಕಟ್ಟುಕಟ್ಟಳೆಗಳೇ' ಪ್ರಧಾನವಾಗುತ್ತಾ ಸಮಗ್ರ ವಿಧಿಗಳು ನಿರ್ವಹಿಸಲ್ಪಡುತ್ತವೆ . ಈ ಎಲ್ಲಾ ವಿಧಿವಿಧಾನಗಳು ತಂತ್ರ ರೂಪದವುಗಳು , ಮಂತ್ರ ಮುಖ್ಯವಾದವುಗಳಲ್ಲ . ಏಕೆಂದರೆ ಇದು ಪ್ರಾಚೀನವಾದುದು . ವೈದಿಕ ಪೂರ್ವದ ಸರಳ ,ಮುಗ್ಧ , ವಿಮರ್ಶೆಗಳಿಲ್ಲದ ಉಪಾಸನಾ ಕ್ರಮಗಳಿರುವ ನೆಲೆ . ಇದು ಪಡುಬಿದ್ರಿಯ ಬ್ರಹ್ಮಸ್ಥಾನ - ಬೆರ್ಮಸ್ಥಾನ. ಎರಡು ವರ್ಷಕ್ಕೊಮ್ಮೆ ನಡೆಯುವ ಡಕ್ಕೆಬಲಿ ಎಂಬ ಸೇವೆಯಿಂದ ಗುರುತಿಸಲ್ಪಡುವ ಒಂದು ನಿಸರ್ಗದ ಮಡಿಲು . ಈ ಡಕ್ಕೆಬಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಏಳು ಉತ್ಸವಗಳಲ್ಲಿ ಒಂದು . ಏಕೆಂದರೆ ಇಲ್ಲಿ ಯಾವುದೇ ವಿಕೃತಿಗಳಿಲ್ಲದ ಸೊಬಗಿನ ಪ್ರಕೃತಿ ಇದೆ .ಸಂಜೆಯಾಗುತ್ತಿರುವಂತೆ ಅಲಂಕಾರ ಆರಂಭವಾಗುತ್ತದೆ , ನಡು ಇರುಳಲ್ಲಿ ನಿಸರ್ಗ ಪೂರ್ಣ ಸೊಬಗಿನಿಂದ ವಿಜೃಂಭಿಸುತ್ತದೆ . ಆಗ 'ಕಟ್ಟು ಕಟ್ಟಳೆ'ಗಳು ನೆರವೇರುತ್ತವೆ ,‌ ಬೆಳಗಾಗುತ್ತಿರುವಂತೆ ಆರಾಧನೆ ಮುಗಿಯುತ್ತದೆ , ಪ್ರಕೃತಿ ಮತ್ತೆ ಅಲಂಕರಣಗಳನ್ನು ಕಳಚಿಕೊಂಡು ನೈಜ ಸ್ಥಿತಿಗೆ ಬರುತ್ತದೆ . ಇಂತಹ ರೂಪಾಂತರವು ಆರಾಧನಾ ಪರ್ವದಲ್ಲಿ ಮಾತ್ರ ಕಾಣಬಹುದಾದ ಇಲ್ಲಿಯ ವೈಶಿಷ್ಟ್ಯ . ಜಗದಗಲ ಹಬ್ಬಿರುವ ಚೈತನ್ಯವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ವಿಜೃಂಭಿಸುತ್ತದೆ . ಆ ಸ್ಥಳಗಳೇ ನಿಸರ್ಗದ ಅಚಿಂತ್ಯಾದ್ಭುತವಾದ ಸಾಮರ್ಥ್ಯಕ್ಕೆ ಒದಗಿದ ಸನ್ನಿಧಾನ .ಆದುದರಿಂದಲೇ ಇಲ್ಲಿ ಏಕಾಗ್ರತೆ ಸುಲಭ .ಮೌನದಲ್ಲಿ ಹೇಗೆ ಅನುಸಂಧಾನ ಲೀಲಾಜಾಲವಾಗಿ ಸಾಧಿಸಲ್ಪಡುತ್ತದೋ ಅಂತೆಯೇ ಗದ್ದಲಗಳಿದ್ದರೂ ಅವ್ಯಕ್ತ ಚೈತನ್ಯದೊಂದಿಗೆ ತಾದಾತ್ಮ್ಯ ಸಾಧ್ಯವಾಗುವುದು . ಈ ಸಿದ್ಧಿ ಪಡೆದವರು ಬಹುಮಂದಿ , ಆದರೆ ಈಗ ಬೆರಳೆಣಿಕೆಯಷ್ಟು ಮಾತ್ರ . ವೈಭವೀಕರಣಗೊಂಡ ನಂಬಿಕೆ , ಶ್ರದ್ಧೆ , ಸನ್ನಿಧಾನದ ದರ್ಶನ , ಸೇವಾ ಸಮರ್ಪಣೆ ಮುಂತಾದುವುಗಳು ಯಾವ ತಾದಾತ್ಮ್ಯವನ್ನೂ ಬಯಸುವುದಿಲ್ಲ ,‌ ಬದಲಿಗೆ ನಡವಳಿಕೆಗಳನ್ನು ಮಾತ್ರ ವ್ಯಕ್ತ ಪಡಿಸುತ್ತದೆ .ಆದುದರಿಂದ ನಿಸರ್ಗದೊಂದಿಗೆ ಒಳಗೊಳ್ಳುವ ಉಪಾಸನಾ ವಿಧಾನವೇ ಮರೆತಂತೆ . ಆದರೆ ಇದು ಪಡುಬಿದ್ರಿಯ ಬಟ್ಟಂಬಯಲಿನ , ಆದರೆ ಸಾಮರ್ಥ್ಯ( ಚೈತನ್ಯ) ಸಂಭ್ರಮಿಸುತ್ತಿರುವ ಬ್ರಹ್ಮಸ್ಥಾನದಲ್ಲಿ ಮಾತ್ರ ಜಾಗೃತವಾಗಿದೆ . ಎಷ್ಟು ಮಂದಿಗೆ ಸಾಕ್ಷಾತ್ಕಾರವಾಗಿದೆ ಗೊತ್ತಿಲ್ಲ . ಇಂತಹ ಧ್ಯಾನಾಸಕ್ತರು ಇಂದಿಗೂ ಇದ್ದಾರೆ . "ಬ್ರಹ್ಮಸ್ಥಾನ" ಎಂದರೇನು‌ ? : ಬೆಮ್ಮೆರ್ , ಬೆರ್ಮೆರ್ , ಬ್ರಹ್ಮೆರ್ ಎಂದು ತುಳುವರು ಸ್ವೀಕರಿಸಿರುವ , ಪ್ರಕೃತಿಯಲ್ಲಿ ಅಂತರ್ಗತವಾಗಿರುವ ಒಂದು ಶಕ್ತಿ .ಇದನ್ನು ರಕ್ಷಾ ಶಕ್ತಿಎಂದು ಪರಿಗ್ರಹಿಸಿದ ನಮ್ಮ ಪೂರ್ವ ಸೂರಿಗಳು ಕಾಲಾಂತರದಲ್ಲಿ ಬೆರ್ಮೆರ್ ಅಥವಾ ಬ್ರಮ್ಮೆರ್ ಪ್ರಧಾನವಾಗಿ ತಮ್ಮ ಆರಾಧನೆಗಳನ್ನು ನೇರ್ಪುಗೊಳಿಸಿದರು , ಅದರಂತೆ ರೂಢಿಗೆಬಂತು . 'ಬ್ರಹ್ಮೆರ್' ಅಥವಾ 'ಬೆಮ್ಮೆರ್' ಪ್ರಧಾನವಾಗಿರುವ ನೆಲೆಗಳನ್ನು ಬ್ರಹ್ಮಸ್ಥಾನವೆಂದು ಗುರುತಿಸಲು ಆರಂಭಿಸಿದ್ದು ಬಹುಶಃ ವೈದಿಕರ ಆಗಮನದ ಬಳಿಕ ಇರಬೇಕು . ಅದಕ್ಕೂ ಪೂರ್ವದಲ್ಲಿದ್ದ ಸಮೂಹ ಪೂಜಾ ಸ್ಥಾನಗಳೇ ಬೆರ್ಮಸ್ಥಾನ ಅಥವಾ ಬ್ರಹ್ಮಸ್ಥಾನಗಳು . ಸಮೂಹ ಪೂಜೆ ಎಂದರೆ ಆದಿಮ ಸಂಸ್ಕೃತಿಯಲ್ಲಿ ಆರಾಧಿಸಬೇಕೆಂದು ಬಯಸಿದ ಎಲ್ಲಾ ಶಕ್ತಿಗಳಿಗೆ ಒಂದು ವ್ಯವಸ್ಥೆಯ ಅಡಿಯಲ್ಲಿ ಸ್ಥಾನ ಕಲ್ಪಿಸಿದ್ದು , ವೈದಿಕದ ಆಗಮನದ ಬಳಿಕ ನಿಯಮ - ನಿಬಂಧನೆಗಳಿಗೆ‌ ಒಳಪಟ್ಟು ನಾವು ಈಗ ಕಾಣುವ ಬ್ರಹ್ಮಸ್ಥಾನಗಳು ಕಲ್ಪಿಸಲ್ಪಟ್ಟುವು . ಒಂದು ಒಪ್ಪಿಗೆಯಂತೆ ಬ್ರಹ್ಮಸ್ಥಾನ ಎಂದರೆ ಪಂಚ ದೈವಸ್ಥಾನಗಳು . ಆದರೆ ಅದು ಐದಕ್ಕೆ ಸೀಮಿತಗೊಳ್ಳುವ ಶಕ್ತಿಗಳ ನೆಲೆಯಲ್ಲ .ಬದಲಿಗೆ ಒಂದಷ್ಟು ದೈವಗಳು ಇಲ್ಲಿ ಸ್ಥಾನ ಪಡೆಯುತ್ತವೆ . ಬ್ರಹ್ಮ ಅಥವಾ ಬೆರ್ಮೆರ್ ಪ್ರಧಾನವಾಗಿ ಇಲ್ಲಿ ಎಲ್ಲಾ ಸನ್ನಿಧಾನಗಳು ಸನ್ನಿಹಿತವಾಗಿರುತ್ತವೆ . ಆದುದರಿಂದಲೇ ಇಂತಹ ಆರಾಧನಾ ಸ್ಥಾನಗಳು 'ಬ್ರಹ್ಮಸ್ಥಾನ'ಗಳು ಎಂದು ಗುರುತಿಸಲ್ಪಡುತ್ತವೆ . ಇತ್ತೀಚೆಗೆ ಜಿಲ್ಲೆಯ ಹಲವೆಡೆ ಇಂತಹ ಬ್ರಹ್ಮಸ್ಥಾನಗಳು 'ನಾಗಬ್ರಹ್ಮಸ್ಥಾನ'ಗಳಾಗಿ ಬದಲಾಗುತ್ತಿವೆ . ಬ್ರಹ್ಮ ಅಥವಾ ಬೆರ್ಮೆರ್ ಕುರಿತಂತೆ ಸ್ಪಷ್ಟವಾದ ಕಲ್ಪನೆ ದೊರೆಯದ ಕಾರಣ ಇಂತಹ ಬದಲಾವಣೆಗಳು ನಡೆಯುತ್ತವೆ ಎಂದನಿಸುತ್ತದೆ . ಅಂತೆಯೇ ಪಡುಬಿದ್ರಿಯಲ್ಲಿ ಇಂತಹ ಒಂದು ಸ್ಥಿತ್ಯಂತರ ಸಂಭವಿಸಿದ್ದು , "ಖಡ್ಗೇಶ್ವರೀ ಬ್ರಹ್ಮಸ್ಥಾನ"ವೆಂದು ಹೇಳಲಾಗುತ್ತಿದೆ ,ಆದರೆ "ಬ್ರಹ್ಮಸ್ಥಾನ" ಎಂಬ ಮೂಲದ‌ ಹೆಸರು ಬದಲಾಗಲೇ ಇಲ್ಲ ,ಇದು ಇಲ್ಲಿಯ ಶ್ರದ್ಧೆ , ಸಂಪ್ರದಾಯ ಬದ್ಧತೆ. ಒಂದು ಕಾಲದಲ್ಲಿ ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲೂ ಒಂಬತ್ತು ಮಂದಿ ಸ್ಥಾನಿಗಳು ( ಪಾತ್ರಿಗಳು ) ಬೇರೆಬೇರೆ ಹೆಸರಿನಲ್ಲಿ ಸನ್ನಿಧಾನದ ಮುಂದೆ ಪ್ರಕಟಗೊಳ್ಳುತ್ತಿದ್ದುದನ್ನು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ . ಯಾವುದೇ ರೀತಿಯಲ್ಲಿ ಸನ್ನಿಧಾನದ ಆಂತರ್ಯವನ್ನು ನಿರೂಪಿಸಲಾಗದೇ ಇರುತ್ತದೊ ಅದೇ ಆ ಸನ್ನಿಧಾನದ ಮಹತ್ವ . ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಹಲವು ಅವಶೇಷಗಳು ಏಳು - ಎಂಟು ಕಿ .ಮೀ . ವ್ಯಾಪ್ತಿಯಲ್ಲಿ ದೊರೆಯುತ್ತವೆ . ಪ್ರತಿ ವರ್ಷ ಆಟಿ ತಿಂಗಳಲ್ಲಿ ಒಂದು ದಿನ ( ಹದಿನಾರನೇ ದಿನ ) ಹೊಸ ಮರಳನ್ನು ಸಮುದ್ರತೀರದಿಂದ ತಂದು ಹಾಕುವ ಸಂಪ್ರದಾಯವಿದೆ . ಇಲ್ಲಿ ನಡೆಯುವ ವಿಧಿಯಾಚರಣೆಗಳೆಲ್ಲ "ಅವೈದಿಕ"ಗಳಾದರೂ ನಿರ್ವಹಿಸುವವರು ಮಾತ್ರ ವೈದಿಕರು . ಮೂಲ ದ್ರಾವಿಡ ಭಾಷೆಯ ಒಂದಷ್ಟು ಶಬ್ದಗಳು ವೈದಿಕರಿಂದ ಬ್ರಹ್ಮಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತವೆ . ಇಂತಹ ಹತ್ತಾರು ನಿರ್ವಹಣೆಗಳನ್ನು , ಸಂಪ್ರದಾಯಗಳನ್ನು ಗಮನಿಸಿದಾಗ ಪಡುಬಿದ್ರಿಯ ಬ್ರಹ್ಮಸ್ಥಾನದ ಪ್ರಾಚೀನತೆ ಇತಿಹಾಸಕಾಲಕ್ಕಿಂತಲೂ ಹಿಂದೆ ಹೋಗುತ್ತದೆ . ಹಾಗಾಗಿ ಆ ಸನ್ನಿಧಾನಕ್ಕೆ ಏನೆಂದು ಹೆಸರಿಸಿದರೂ ಸೂಕ್ತವಾಗದು .ಇದೇ ಇಲ್ಲಿಯ ಅಭೇದ್ಯವಾದ ಸನ್ನಿಧಾನ ವಿಶೇಷ . ಕಲ್ಪನೆಗೆ ನಿಲುಕದ ಸಂಕಲ್ಪಗಳಿರುವ ಪೂಜಾಸ್ಥಾನ . ಈ ಕುರಿತು ಸತ್ಯ ಶೋಧನೆ ಅನಗತ್ಯ . ಇದು ಕೇವಲ ಒಂದು ಗ್ರಹಿಕೆ ಮಾತ್ರ . ಡಕ್ಕೆಬಲಿ - ಬ್ರಹ್ಮಮಂಡಲ : ಡಕ್ಕೆಬಲಿ ಎಂದರೆ 'ಬೂತನಾಗರಿಗೆ ಮಂಡಲ ಬರೆದು ನಡೆಸುವ ಒಂದು ಬಗೆಯ ನೃತ್ಯರೂಪದ ಆರಾಧನೆ' ಎನ್ನುತ್ತದೆ ತುಳು ನಿಘಂಟು . ಇದನ್ನೇ ಬ್ರಹ್ಮಮಂಡಲ ಎನ್ನಲಾಗುತ್ತದೆ . ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲಿ ಒಂದು ಡಕ್ಕೆಬಲಿಯ ವಿಧಿವಿಧಾನವು ಎರಡು ವಿಭಾಗವಾಗಿ ನೆರವೇರುತ್ತದೆ . ರಾತ್ರಿ ಸುಮಾರು ಹತ್ತು - ಹನ್ನೊಂದು ಗಂಟೆಯಿಂದ ನಡೆಯುವುದು "ತಂಬಿಲ" , ಇದು ಮೊದಲ ಭಾಗ . ತಡ ರಾತ್ರಿಯ ಬಳಿಕ ಎರಡನೇ ಭಾಗವಾಗಿ ಡಕ್ಕೆಬಲಿ ಸಂಪನ್ನಗೊಳ್ಳುತ್ತದೆ . ರಾತ್ರಿ ತಂಬಿಲ ನವರಾತ್ರಿ ಹಾಗೂ ಮಾಮೂಲು ದಿನಗಳಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಹರಕೆಯಂತೆ ನಡೆಯುತ್ತಿರುತ್ತವೆ . ಆದರೆ ಅದಕ್ಕೆ ಡಕ್ಕೆಯವರು ಇರುವುದಿಲ್ಲ ,ಆದರೆ ದ್ವೈವಾರ್ಷಿಕ ಡಕ್ಕೆಬಲಿ ಸಂದರ್ಭದಲ್ಲಿ ಮಾಮೂಲಿನ ತಂಬಿಲವು ಡಕ್ಕೆಯವರ ಸಹಭಾಗಿತ್ವದಲ್ಲಿ ನೆರವೇರುತ್ತದೆ . ತಂಬಿಲ ಮುಗಿದ ಬಳಿಕ ಮಧ್ಯೆ ವಿಶ್ರಾಂತಿ ಇರುತ್ತದೆ . ಆವೇಳೆಯಲ್ಲಿ ಗುರಿಕಾರರು , ಅರ್ಚಕರು , ಪಾತ್ರಿಗಳು ,ಡಕ್ಕೆಯವರು , ಇತರ ಕಾರ್ಯನಿರ್ವಹಿಸುವವರು ಉಪಾಹಾರ ಸ್ವೀಕರಿಸುತ್ತಾರೆ . ಬಳಿಕ ಡಕ್ಕೆಯವರು ಮಂಡಲ ಬರೆಯುವ ಚಿಟ್ಟೆಯಲ್ಲಿ ಡಕ್ಕೆ ಬಲಿ ಮಂಡಲ ರಚಿಸಿ ಅಲಂಕರಿಸುತ್ತಾರೆ . ಈ ಮಂಡಲವು ಬ್ರಹ್ಮ ಪ್ರಧಾನವಾಗಿಯೇ ಇರುತ್ತದೆ . ಡಕ್ಕೆ ಬಲಿ ಆರಂಭವಾಗುವಾಗ ಡಕ್ಕೆಯವರ ಹಾಡು , ಅರ್ಧನಾರಿ ವೇಷ ಧರಿಸಿದ ವೈದ್ಯರು ಮಂಡಲ ಚಿಟ್ಟೆ - ಬ್ರಹ್ಮಸನ್ನಿಧಾನದ ನಡುವೆ ಕುಣಿಯುತ್ತಾರೆ . ಮತ್ತೆ ಪಾತ್ರಿಗಳ ಆವೇಶ , ಒಬ್ಬೊಬ್ಬರನ್ನಾಗಿ ಮಂಡಲದತ್ತ ಕರೆದೊಯ್ಯುವುದು , ಮಂಡಲ ಪ್ರದಕ್ಷಿಣೆ , ಅಲ್ಲಿ ಬೇರೆ ಬೇರೆ ವಿಧಿಗಳು ನಡೆದ ಬಳಿಕ ,ಮರಳಿ ಮೂಲ ಸನ್ನಿಧಾನದ ಎದುರಿಗೆ ಬಂದು ಪ್ರಸಾದ ವಿತರಣೆ ನಡೆಯುತ್ತದೆ .ಇದು ಸ್ಥೂಲವಾದ ವಿಧಿಯಾಚರಣೆಯ ವಿಧಾನ ಇನ್ನೂ ವಿಸ್ತಾರವಾಗಿ ನಡೆಯುತ್ತವೆ , ಅವುಗಳನ್ನು ನೋಡಿಯೇ ಗ್ರಹಿಸಬೇಕು . ಆಗಲೂ ಪೂರ್ಣವಾಗಿ ಅರ್ಥವಾಗದು, ಅದೇ ಪಡುಬಿದ್ರಿ ಬ್ರಹ್ಮಸ್ಥಾನದ ಸಾನ್ನಿಧ್ಯ ವಿಶೇಷ .ಇದಕ್ಕಿಂತ ಹೆಚ್ಚಿನ ವಿವರಣೆ ನೀಡಲಾಗದು . ನೀಡಲೂಬಾರದು . ಏಕೆಂದರೆ ಇದು "ನಿಸರ್ಗಾಂತರ್ಗತ ಬ್ರಹ್ಮಶಕ್ತಿ" ಸನ್ನಿಹಿತವಾದ ನೆಲೆ . ಡಕ್ಕೆಬಲಿ ಸಂದರ್ಭದಲ್ಲಿ ಮಾತ್ರ ನಿಸರ್ಗ ಒಂದು ರಾತ್ರಿಯ ಅವಧಿಗೆ ಅಲಂಕರಿಸಲ್ಪಡುತ್ತದೆ , ಬೆಳಗಾಗುವ ವೇಳೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ .ಇಂತಹ "ದರ್ಶನ" ಇಲ್ಲಿ ಮಾತ್ರ ಸಾಧ್ಯ. ವೀಳ್ಯೆದೆಲೆಯಲ್ಲಿ ಗಂಧ, ಮರಳು ಇಲ್ಲಿ ಪ್ರಸಾದ : ಆರಾಧನೆಯ ಸಂದರ್ಭಗಳಲ್ಲಿ‌ವೀಳ್ಯೆದೆಲೆಯಲ್ಲಿ ಗಂಧ ನೀಡುವುದು,(ಉಳಿದ ದಿನಗಳಲ್ಲಿ ಸನ್ನಿಧಾನಕ್ಕೆ ನಮಸ್ಕರಿಸುವಾಗ ಮೈಗೆ ಅಂಟಿಕೊಳ್ಳುವ ಮರಳು ಇಲ್ಲಿ ಪ್ರಸಾದ).ಅಡಿಕೆ ಮರದ ಹಾಳೆ ವೀಳ್ಯೆದೆಲೆಯ ಹರಿವಾಣವಾಗುವುದು, ತಾರತಮ್ಯಗಳಿಲ್ಲದ ಸಭಾ ವ್ಯವಸ್ಥೆ - ಎಂದರೆ ಆಸನಗಳಿಲ್ಲದೆ ನೆಲದಲ್ಲೆ ಕುಳಿತುಕೊಳ್ಳುವುದು , ದೊಂದಿ ಬೆಳಕಿಗೆ ಪ್ರಾಧಾನ್ಯ, ವೈಭವದ ವಾದ್ಯಗಳಿಗೆ ಅವಕಾಶವಿಲ್ಲದಿರುವುದು, ಯಾವುದೇ ವಿಧಿ ನಿರ್ವಹಣೆಯಲ್ಲಿ ರಾಜಿ ಸೂತ್ರವಿಲ್ಲ, ನಿಯಮದಂತೆ ನಡೆಯತಕ್ಕದ್ದು, ಕರ್ತವ್ಯಲೋಪದಲ್ಲಿ ಕ್ಷಮೆ ಇಲ್ಲದಿರುವುದು ಇವು ಇಲ್ಲಿಯ ವಿಶೇಷಗಳು. ಪಡುಬಿದ್ರಿಯ ಬ್ರಹ್ಮಸ್ಥಾನ ಅಂದರೆ ಖಡ್ಗೇಶ್ವರೀ ಬ್ರಹ್ಮಸ್ಥಾನ ಮತ್ತು ಅಲ್ಲಿ ನೆರವೇರುವ ಎಲ್ಲಾ ಸೇವಾದಿಗಳು ಪಡುಬಿದ್ರಿಯ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಜವಾಬ್ದಾರಿ ಮತ್ತು ನೇತೃತ್ವದಲ್ಲಿ ನೆರವೇರುತ್ತದೆ . ಸುಗಮ ನಿರ್ವಹಣೆಗೆ ವನದುರ್ಗಾ ಟ್ರಸ್ಟ್ ಇದೆ . ಲೇಖನ : ಕೆ.ಎಲ್.ಕುಂಡಂತಾಯ ರೇಖಾ ಚಿತ್ರ : ದಾಮೋದರ ರಾವ್

ಜನವರಿ 21 : ಉಡುಪಿ ಜಿಲ್ಲೆಯ ರಜತ ಮಹೋತ್ಸವ - ಕಾಪು ಕಡಲ ಕಿನಾರೆಯಲ್ಲಿ ಸಭಾ, ಸಾಂಸ್ಕೃತಿಕ, ಸಂಗೀತ ರಸಮಂಜರಿ ಕಾರ್ಯಕ್ರಮ

Thumbnail
Posted On: 20 Jan 2023, 11:45 PM

ಕಾಪು : ತಾಲೂಕು ಆಡಳಿತದ ವತಿಯಿಂದ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ ಜನವರಿ 21, ಶನಿವಾರ ಅಪರಾಹ್ನ 2.30 ಗಂಟೆಯಿಂದ ಕಾಪು ಕಡಲ ಕಿನಾರೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿವೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಅಪರಾಹ್ನ 2.30 ರಿಂದ 3.30 ರವರೆಗೆ ಸ್ತಬ್ಧ ಚಿತ್ರ ಮೆರವಣಿಗೆ ಕಾಪು ಪುರಸಭೆಯಿಂದ - ಕಾಪು ಪೇಟೆಯಾಗಿ - ಕಾಪು ಬೀಚ್ ಗೆ ಸಾಗಲಿದೆ. ಕಾಪು ಕಡಲ ಕಿನಾರೆಯಲ್ಲಿ ಅಪರಾಹ್ನ ಗಂಟೆ 3.30 ರಿಂದ 5 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 5 ಕ್ಕೆ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ಸಂಜೆ ಗಂಟೆ 6 ರಿಂದ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಹಾಗೂ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ.