Updated News From Kaup
ಇನ್ನಂಜೆ : ಸುವರ್ಣಮಹೋತ್ಸವ ಕಟ್ಟಡದ ವಿಜ್ಞಾಪನಾ ಪತ್ರ ಬಿಡುಗಡೆ

Posted On: 06-11-2022 06:31PM
ಇನ್ನಂಜೆ : ಇಲ್ಲಿನ ಇನ್ನಂಜೆ ಯುವಕ ಮಂಡಲ (ರಿ) ಇದರ ಸುವರ್ಣಮಹೋತ್ಸವ ಕಟ್ಟಡದ ವಿಜ್ಞಾಪನಾ ಪತ್ರವನ್ನು ಸೋದೆ ವಾದಿರಾಜ ಮಠದ ಯತಿಗಳಾದ ವಿಶ್ವವಲ್ಲಭ ತೀರ್ಥರು ಹಾಗೂ ಇನ್ನಂಜೆಯ ಉದ್ಯಮಿ ಗ್ರೇಗೊರಿ ಮಥಾಯಸ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಲಹಾ ಸಮಿತಿಯ ಸದಸ್ಯರುಗಳಾದ ನಂದನ್ ಕುಮಾರ್ ಮತ್ತು ರವಿವರ್ಮ ಶೆಟ್ಟಿ ಮತ್ತು ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಡಿಸೆಂಬರ್ 10 ರಂದು ಪಡುಬೆಳ್ಳೆಯಲ್ಲಿ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ

Posted On: 05-11-2022 10:10AM
ಕಾಪು : ಝಿಝೋ ಎಜುಕೇಶನ್ ಅರ್ಪಿಸುವ ಲೆಟ್ಸ್ ನಾಚೊ ಜಿಲ್ಲಾ ಮಟ್ಟದ ಸೊಲೊ ಮತ್ತು ಗುಂಪು ನೃತ್ಯ ಸ್ಪರ್ಧೆ 2022 ಡಿಸೆಂಬರ್ 10, ಶನಿವಾರ ಸಂಜೆ 6 ಗಂಟೆಗೆ ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಜರಗಲಿದೆ.
ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 8,000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4000 ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು. ಸೋಲೊ ವಿಭಾಗದಲ್ಲಿ 3,000 ನಗದು ಮತ್ತು ಟ್ರೋಫಿ, ದ್ವಿತೀಯ 1,500 ನಗದು ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು ಇರಲಿವೆ.
ನೋಂದಣಿ ಮಾಡಲು ಡಿಸೆಂಬರ್ 6 ಕಡೆಯ ದಿನವಾಗಿದ್ದು ಸೊಲೋ ವಿಭಾಗಕ್ಕೆ 200 ರೂ. ಮತ್ತು ಗುಂಪು ವಿಭಾಗಕ್ಕೆ 500 ರೂ. ನೋಂದಣಿ ಶುಲ್ಕ ಇರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7676921592 8746023845
ನವೆಂಬರ್ 6 : ಕಟಪಾಡಿಯ ಸುಭಾಸ್ ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ

Posted On: 04-11-2022 03:40PM
ಕಾಪು : ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಸಂಸ್ಥೆಯ ವತಿಯಿಂದ ಕಟಪಾಡಿ ಸುಭಾಸ್ ನಗರದ ಥಂಡರ್ಸ್ ಗ್ರಾಂಡ್ ಬೇ ಸಭಾಂಗಣದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಕೂಟ "ಕೊಂಪಿಟ್ -3.0" ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯತೀಶ್ ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರಾಟೆ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಪಡೆಯುವಲ್ಲಿ ಸಹಕಾರಿಯಾಗಲಿದೆ. ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಯಶ್ಪಾಲ್ ಎ ಸುವರ್ಣ, ನವೀನ್ ಅಮೀನ್ ಶಂಕರಪುರ ಇವರ ಮಾರ್ಗದರ್ಶನದಲ್ಲಿ ಕರಾಟೆ ಶಿಕ್ಷಕ ರವಿ ಸಾಲ್ಯಾನ್ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಒಂದು ದಿನದ ಪಂದ್ಯಾಕೂಟ ಜರಗಲಿದೆ. ಈ ಪಂದ್ಯಾಕೂಟ ದಲ್ಲಿ ರಾಜ್ಯದ ಅಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಯಶ್ಪಾಲ್ ಎ ಸುವರ್ಣ, ನವೀನ್ ಅಮೀನ್ ಶಂಕರಪುರ, ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಸಲಹೆಗಾರ ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ನವೆಂಬರ್ 6 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರರಿಗೆ ಹುಟ್ಟೂರ ಸನ್ಮಾನ

Posted On: 04-11-2022 02:29PM
ಕಾಪು : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಪು ತಾಲೂಕಿನ ಮೂಳೂರಿನ ಪಿಲಿ ಕೋಲ ನರ್ತಕರಾದ ಗುಡ್ಡ ಪಾಣಾರ ಅವರಿಗೆ ನವೆಂಬರ್ 6, ಆದಿತ್ಯವಾರದಂದು ಸಂಜೆ ಗಂಟೆ 3:30ಕ್ಕೆ ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ ಟೋಲ್ ಸಿಬ್ಬಂದಿಗೆ ಹಲ್ಲೆ, ಬೆದರಿಕೆ
Posted On: 04-11-2022 01:56PM
ಪಡುಬಿದ್ರಿ : ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಯೋರ್ವರಿಗೆ ಯುವಕರ ಗುಂಪೊಂದು ಎರಡು ಕಾರುಗಳಲ್ಲಿ ಬಂದು ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಮಟ್ಟಿ ಹೌಸ್ ನಿವಾಸಿ ಸುದೀಶ್ ಜೆ ಶೆಟ್ಟಿ ಇವರು ಹೆಜಮಾಡಿಯ ಟೋಲ್ಗೇಟಿನಲ್ಲಿ ಕೆಲಸ ಮಾಡಿಕೊಂಡಿದ್ದು ಅಕ್ಟೋಬರ್ 30 ರಂದು ರಾತ್ರಿ ಕರ್ತವ್ಯದಲ್ಲಿರುವ ಸಮಯ 11ಗಂಟೆಯ ವೇಳೆಗೆ ಹೆಜಮಾಡಿಯ ಸಂದೇಶ್ ಶೆಟ್ಟಿ, ಮನೋಜ್ ಸುವರ್ಣ, ಶ್ರೇಯಸ್ ದೇವಾಡಿಗ ಮುಕ್ಕ, ಜಯರಾಜ್ ಪೂಜಾರಿ ಹೆಜಮಾಡಿ, ಕೀರ್ತನ್ ಪೂಜಾರಿ ಕೊಪ್ಪಲ ಹೆಜಮಾಡಿ ಹಾಗೂ ಇತರೆ 3 ಜನರು ಎರಡು ಕಾರುಗಳಲ್ಲಿ ಹೆಜಮಾಡಿ ಟೋಲ್ಗೇಟ್ ಬಳಿ ಬಂದು ಸುದೀಶ್ ಜೆ ಶೆಟ್ಟಿ ಯನ್ನು ಏಕಾಏಕಿ ದೂಡಿ ಹಾಕಿ, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ ಎಂದು ಸುದೀಶ್ ಜೆ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ ಸಮಯ ಸುದೀಶ್ ಜೆ ಶೆಟ್ಟಿ ಗೆ ಪೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಪೋನ್ ಕರೆ ಸ್ವೀಕರಿಸದಿದ್ದಾಗ ಮೆಸೇಜ್ಗಳ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರನ್ನು ನೀಡಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಡಿಪಿಐ ಕಾಪು ಕ್ಷೇತ್ರದ ನೂತನ ಕಛೇರಿ ಉದ್ಘಾಟನೆ

Posted On: 04-11-2022 11:40AM
ಕಾಪು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಾಪು ಕ್ಷೇತ್ರದ ನೂತನ ಕಛೇರಿ ಕಾಪುವಿನ ಹಿರಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು.

ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಸಿವು ಮತ್ತು ಭಯ ಮುಕ್ತ ಸ್ವಾತಂತ್ರವೇ ಎಸ್ಡಿಪಿಐ ಪಕ್ಷದ ಉದ್ದೇಶ. ರಾಜಕೀಯದಲ್ಲಿ ನಿರಾಸೆ ಸಲ್ಲದು. ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇವೆ ಎಂ ಛಲ ನಮ್ಮಲ್ಲಿದ್ದರೆ, ವಿಜಯ ಪತಾಕೆ ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ವಹಿಸಿದ್ದರು. ಎಸ್ಡಿಪಿಐ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹನೀಫ್ ಮೂಳೂರು, ಅಬೂಬಕ್ಕರ್ ಪಾದೂರು, ಅಶ್ರಫ್ ಅಹಮದ್, ಸರಿತಾ, ಮಜೀದ್ ಪೊಲ್ಯ, ನೂರುದ್ದೀನ್ ಕಾಪು, ಆಸಿಫ್ ವೈಸಿ ಉಚ್ಚಿಲ ಹಾಗು ಅಝೀಝ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯರೆಡೆಗೆ ನಮ್ಮ ನಡಿಗೆ - ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದರಿಗೆ ಸನ್ಮಾನ

Posted On: 03-11-2022 08:56PM
ಪಡುಬಿದ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ವರ್ಷದ ಸಂಪದ 2022 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಕಾಪು ತಾಲೂಕು ಘಟಕದ ವತಿಯಿಂದ ನವಂಬರ್ 3ರಂದು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಕೆ. ಸದಾನಂದ ಕೃಷಿಯ ಜೊತೆಗೆ ಮೂರ್ತೆದಾರಿಕೆ, ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ನಮ್ಮ ಹಿರಿಯರ ಅನುಭವದ ಪಾಠಗಳು ನಮಗೆ ದಾರಿ ದೀಪವಾಗಿದೆ. ರೈತ ಸಂಘದ ಮೂಲಕ ಹಳ್ಳಿಗಳಲ್ಲಿ ಭೂ ಮಸೂದೆಯ ಬಗ್ಗೆ ಜನರಿಗೆ ತಿಳಿಸುವ ಕಾರ್ಯ, ಮೂರ್ತೆದಾರರ ಸಂಘಟನೆ, ಇತ್ಯಾದಿ ಕಾರ್ಯಗಳಲ್ಲಿ ಭಾಗವಹಿಸಿ, ಸಾಮಾಜಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಮೂಲಕ ಹಿಂದಿನಿಂದ ಬಹಳಷ್ಟು ಶ್ರಮವಹಿಸಿ ಕೃಷಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಹಿಂದಿನ ಪೀಳಿಗೆಯ ಅನುಭವಗಳು, ಕಾರ್ಯಗಳು, ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಶಿಸಿಹೋಗುತ್ತಿರುವ ಕೃಷಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿರುವ ಪಿ. ಕೆ. ಸದಾನಂದರು ನಮಗೆಲ್ಲರಿಗೂ ಆದರ್ಶರು. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಇಂತಹ ಸಾಧಕರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಅಚಾರ್ಯ ಇವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಬೆಂಗಳೂರು ತುಳು ಕೂಟ ಅಧ್ಯಕ್ಷ ದಿನೇಶ್ ಹೆಗ್ಡೆ, ವಿಶು ಕುಮಾರ್ ಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಗುರುರಾಜ್ ಪೂಜಾರಿ, ಸುಗಂಧಿ ಶ್ಯಾಮ್, ಕೇಶವ ಅಮೀನ್, ನವೀನ್ ಪೂಜಾರಿ, ಪ್ರಾಣೇಶ್ ಹೆಜಮಾಡಿ, ಭಾಸ್ಕರ, ನೀಲಾನಂದ ನಾಯ್ಕ್, ರಾಜೇಶ್, ಸುಂದರ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್. ಪಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ವಿದ್ಯಾಧರ ಪುರಾಣಿಕ್ ವಂದಿಸಿದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ ರಚನೆ : ರಾಜ್ಯ ಸರಕಾರಕ್ಕೆ ಗೀತಾಂಜಲಿ ಸುವರ್ಣ ಅಭಿನಂದನೆ

Posted On: 03-11-2022 06:00PM
ಉಡುಪಿ: ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ,ಬಿಲ್ಲವ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿರುವ ರಾಜ್ಯದಲ್ಲೇ ವಿಶಿಷ್ಠವಾದ ಶ್ರೀ ನಾರಾಯಣಗುರು ಅಭಿವೃದ್ಧಿ ಕೋಶವನ್ನು ಸ್ಥಾಪಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರನ್ನು ಹಿರಿಯ ಬಿಜೆಪಿ ನಾಯಕಿ ಮತ್ತು ಬಿಲ್ಲವ ಸಮುದಾಯದ ಮಹಿಳಾ ಮುಂದಾಳು ಗೀತಾಂಜಲಿ. ಎಂ.ಸುವರ್ಣ ಅಭಿನಂದಿಸಿದ್ದಾರೆ.
ಬಿಲ್ಲವ, ಈಡಿಗ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವರಿಗೆ ಈಗಾಗಲೇ ಶೈಕ್ಷಣಿಕ ಹಾಗೂ ಔದ್ಯೋಗಿಕ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಿರುವ ಬಿಜೆಪಿ ಸರಕಾರ, ನಾರಾಯಣಗುರು ವಸತಿ ಶಾಲೆ, ಕೋಟಿ- ಚೆನ್ನಯ್ಯ ಸೈನಿಕ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ ಅನೇಕ ಬೇಡಿಕೆಗಳನ್ನು ಈಡೇರಿಸಿದೆ.
ಬಿಲ್ಲವ ಸಮಾಜದ ಕೆಲವೇ ಮಂದಿ ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಸರಕಾರವನ್ನು ವಿರೋಧಿಸಿ ನೀಡುತ್ತಿರುವ ಹೇಳಿಕೆಗಳಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ , ಬಿಲ್ಲವ ಸಮುದಾಯದ ಜನತೆ ಬುದ್ಧಿವಂತರಿದ್ದು ಬಿಜೆಪಿ ಸರಕಾರಗಳ ಅವಧಿಯಲ್ಲಿ ಸಮುದಾಯಕ್ಕಾಗಿರುವ ಲಾಭಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಗೀತಾಂಜಲಿ ಎಂ.ಸುವರ್ಣ ತಿಳಿಸಿದ್ದಾರೆ.
ಸರಕಾರ ಕೊಟ್ಟಂತಹ ಈ ಒಂದು ಅಭಿವೃದ್ಧಿ ಕೋಶದಲ್ಲಿ ಧನಾತ್ಮಕವಾದ ಚಿಂತನೆಗಳಿವೆ. ಇದನ್ನು ಎಲ್ಲರೂ ಸೇರಿ ಒಳಿತನ್ನು ಮಾಡುವ ಬದಲು ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಹಾಕುವುದು ಒಳಿತಲ್ಲ. ಈ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನಮ್ಮ ಎಲ್ಲಾ ಬಿಲ್ಲವ/ಈಡಿಗ ಸಮುದಾಯದವರು ಪಡೆದುಕೊಳ್ಳ ಬೇಕು ಹಾಗು ಮುಂದೆಯೂ ಕೂಡಾ ಬಿಲ್ಲವ ಸಮುದಾಯದ ನ್ಯಾಯೋಚಿತ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸಲು ಬಿಜೆಪಿ ಪಕ್ಷ ಮತ್ತದರ ನೇತೃತ್ವದ ರಾಜ್ಯ ಸರಕಾರ ಕಟಿಬದ್ಧವಾಗಿದ್ದು ಬಿಲ್ಲವರು ಬಿಜೆಪಿ ಮತ್ತು ರಾಜ್ಯ ಸರಕಾರದ ವಿರುದ್ಧದ ಯಾವುದೇ ಷಡ್ಯಂತ್ರಗಳಲ್ಲಿ ಭಾಗಿಯಾಗಕೂಡದು ಎಂದು ಗೀತಾಂಜಲಿ ಎಂ.ಸುವರ್ಣ ಸಮಸ್ತ ಬಿಲ್ಲವ ಸಮುದಾಯವನ್ನು ವಿನಂತಿಸಿದ್ದಾರೆ.
ರೋಟರಿ ಶಂಕರಪುರ : ದೀಪಾವಳಿ ಆಚರಣೆ ; ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ

Posted On: 03-11-2022 05:53PM
ಕಾಪು : ರೋಟರಿ ಶಂಕರಪುರದ ವತಿಯಿಂದ ದೀಪಾವಳಿ ಆಚರಣೆ ಹಾಗೂ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3182 ರ ವಲಯ 5 ರ ಸಹಾಯಕ ಗವರ್ನರ್ ಡಾ| ಶಶಿಕಾಂತ ಕರಿಂಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳು ಸಾಮೂಹಿಕವಾಗಿ ದೀಪಗಳನ್ನು ಉರಿಸುವ ಮೂಲಕ ದೀಪಾವಳಿ ಶುಭಾಶಯ ವಿನಿಮಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರು ಅಂತರಾಷ್ಟ್ರೀಯ ರೋಟರಿಯು ಸಾಕ್ಷರತೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ರೋಟರಿ ಇಂಡಿಯಾ ಲಿಟರಸಿ ಮಿಷನ್ ಮೂಲಕ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳ ಸಬಲೀಕರಣ ಶಿಕ್ಷಣದ ಗುಣಮಟ್ಟದ ಪೂರಕ ಯೋಜನೆ, ತರಬೇತಿ ಮತ್ತು ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಹಾಗೂ ದೀಪಾವಳಿ ಹಬ್ಬದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ : ಪರಿಸರದ ವಿವಿಧ ಶಾಲೆಗಳ ಪ್ರತಿಭಾನ್ವಿತ ಶಿಕ್ಷಕರಾದ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಇನ್ನಂಜೆ ಸತೀಶ್ ನಾಯಕ್, ವಿದ್ಯಾವರ್ಧಕ ಹೈಸ್ಕೂಲ್ ಪಾಂಗಳ ಕಲ್ಯಾಣಿ, ಎಸ್ ವಿ ಎಚ್ ಹೈ ಸ್ಕೂಲ್ ಇನ್ನಂಜೆ ವಿಶ್ವನಾಥ ನಾಯ್ಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಚ್ಚಡ ಜಯಶ್ರೀ ಕೆ, ಸೈಂಟ್ ಜಾನ್ಸ್ ಅಕಾಡೆಮಿ ಹೈಸ್ಕೂಲ್, ಶಂಕರಪುರ ಸವಿತಾ ಮುರಳಿಧರ್, ಸೈಂಟ್ ಜಾನ್ಸ್ ಕನ್ನಡ ಮೀಡಿಯಂ ಹೈ ಸ್ಕೂಲ್ ಸುನೀತಾ ಲೀನಾ ಡಿಸೋಜ, ಇವರುಗಳಿಗೆ ನೇಶನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು.
ಸಭೆಯಲ್ಲಿ ರೇಣುಕಾ ಆರ್ ವಾಲ್ಮೀಕಿಯವರ ಮನವಿಯ ಮೇರೆಗೆ ಮಗುವಿನ ಚಿಕಿತ್ಸೆಗೆ ರೋಟರಿ ಟ್ರಸ್ಟ್ ವತಿಯಿಂದ 10,000 ರೂ ಚೆಕ್ ಅನ್ನು ಡಾ| ಶಶಿಕಾಂತ ಕರಿಂಕ ವಿತರಿಸಿದರು. ರೋಟರಿ ಶಂಕರಪುರದ ಜನಪಯೋಗಿ ಕಾರ್ಯಕ್ರಮಗಳಲ್ಲಿ ಒಂದಾದ ಉಚಿತ ಮಾನಸಿಕ ಶಿಬಿರವು ಪ್ರತಿ ತಿಂಗಳ ಮೊದಲ ಭಾನುವಾರ ಸುಮಾರು 18 ವರ್ಷಗಳಿಂದ ನಡೆಯುತಿದೆ, ಈ ಶಿಬಿರದ ಮೆಡಿಸಿನ್ ವಿಭಾಗವನ್ನು 18 ವರ್ಷಗಳ ಕಾಲ ಉಚಿತ ಸೇವೆಯನ್ನು ನೀಡುತ್ತಾ ಬಂದಿರುವ ನಾಗರಾಜ್ ಮೂರ್ತಿ ಹಾಗೂ ಅವರ ಧರ್ಮಪತ್ನಿಯವರನ್ನು ರೋಟರಿಯ ಎಲ್ಲಾ ಹಿರಿಯ ಸದಸ್ಯರು ಸೇರಿ ಸನ್ಮಾನಿಸಿದರು. ಎಡ್ವಿನ್ ನೋಯಲ್ ಡಿಸಿಲ್ವ ಪ್ರಾರ್ಥನೆಯನ್ನು ನೆರವೇರಿಸಿದರು.
ಅಂಥೋನಿ ಡೇಸಾ ರವರು ನೇಶನ್ ಬಿಲ್ಡರ್ ಅವಾರ್ಡ ಬಗ್ಗೆ ಮಾಹಿತಿ ನೀಡಿದರು. ಜೇರೋಮ್ ರೋಡ್ರಿಗಸ್ ರವರು ನಾಗರಾಜ್ ಮೂರ್ತಿಯವರನ್ನು ಪರಿಚಯಿಸಿದರು. ಮಾಲಿನಿ ಶೆಟ್ಟಿಯವರು ಡಾ. ಶಶಿಕಾಂತ್ ಕರಿಂಕರವರ ಪರಿಚಯವನ್ನು ವಾಚಿಸಿದರು, ವೇದಿಕೆಯಲ್ಲಿ ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ ಉಪಸ್ಥಿತರಿದ್ದರು. ಅಧ್ಯಕ್ಷ ಗ್ಲಾಡಸನ್ ಕುಂದರ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯ ಕಸ್ಟಲೀನೋ ವಂದಿಸಿದರು.
ಹೆಜಮಾಡಿ : ಅತ್ಯುತ್ತಮ ಶಿಕ್ಷಕಿಯೆಂದು ಕರೆಯಲ್ಪಡುತ್ತಿದ್ದ ಶಿಕ್ಷಕಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ

Posted On: 01-11-2022 10:20PM
ಹೆಜಮಾಡಿ : ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕಿಯೆಂದೇ ಕರೆಯಲ್ಪಡುತ್ತಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತೋಕೂರು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಹೆಜಮಾಡಿಯ ತನ್ನ ಗಂಡನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಹೆಜಮಾಡಿ ಟೋಲ್ ಬಳಿಯ ಚಿತ್ರಕೂಟ ಮನೆಯ ಸದಾಶಿವ ಗಡಿಯಾರ್ರವರ ಪತ್ನಿ, ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಜಯಂತಿ ಸದಾಶಿವ ಗಡಿಯಾರ್(೫೪) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ತನ್ನ ಸಹೋದರಿ ಮಾನಸಿಕ ಖಿನ್ನತೆಗೊಳಗಾಗಿದ್ದ ಸಂದರ್ಭ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದ ಜಯಂತಿಯವರು ಅವರು ಗುಣಮುಖರಾದ ಬಳಿಕ ತೀರಾ ಇತ್ತೀಚೆಗಷ್ಟೇ ಸ್ವಯಂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ೨೫ ದಿನಗಳ ಹಿಂದೆ ತನ್ನ ಮಗಳ ಮನೆ ಬೆಂಗಳೂರಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು. ಸೋಮವಾರವಷ್ಟೇ ಗಂಡನ ಜತೆಗೆ ಹೆಜಮಾಡಿಗೆ ಆಗಮಿಸಿದ್ದ ಅವರು ರಾತ್ರಿವರೆಗೂ ಖುಷಿಯಿಂದ ಇದ್ದರು. ಮುಂಜಾನೆ 3:30 ರ ಸಮಯ ಸದಾಶಿವ ಗಡಿಯಾರ್ ಎದ್ದು ನೋಡಿದ ಸಂದರ್ಭ ಅವರು ಕಾಣದಾದಾಗ ಬಾಗಿಲು ತೆರೆದು ಹೊರ ಬಂದ ಸಂದರ್ಭ ಮನೆ ಬಾವಿಗೆ ಹಾಸಲಾಗಿದ್ದ ಕಬ್ಬಿಣದ ಮುಚ್ಚಳ ತೆರೆದ ಸ್ಥಿತಿಯಲ್ಲಿತ್ತು. ಈ ಸಂದರ್ಭ ಮನೆಯಲ್ಲಿದ್ದ ಮಗ ರಾಧಾಕೃಷ್ಣ ಗಡಿಯಾರ್ನನ್ನು ಕರೆದು ಪರಿಶೀಲಿಸಿದಾಗ ಬಾವಿಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ತಕ್ಷಣ ರಾಧಾಕೃಷ್ಣ ಬಾವಿಗೆ ಹಾರಿ ತಾಯಿಯನ್ನು ಹಿಡಿದು ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿತ್ತು. ಇದೇ ಸಂದರ್ಭ ಪಕ್ಕದ ಟೋಲ್ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನೂ ಮೇಲಕ್ಕೆತ್ತಿದ್ದರು. ತಕ್ಷಣ ಜಯಂತಿಯವರನ್ನು ಆಸ್ಪತ್ರೆಗೆ ಕೊಂಡೊಯ್ದ ವೇಳೆ ಅದಾಗಲೇ ಅವರು ಮೃತಪಟ್ಟಿರುವುದು ದೃಢ ಪಟ್ಟಿತ್ತು.
ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಕೂರು ತಪೋವನ ಶಾಲೆಯಲ್ಲಿ ಕಳೆದ 26 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಯಂತಿಯವರು ಅತ್ಯುತ್ತಮ ಶಿಕ್ಷಕಿಯೆಂದೇ ಎಲ್ಲರಿಂದ ಪರಿಗಣಿಸಲ್ಪಟ್ಟಿದ್ದರು.