Updated News From Kaup

ಪಡುಬಿದ್ರಿ : ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಪಿ. ಕೆ. ಮುಹಿಯುದ್ದೀನ್ ಲಚ್ಚಿಲ್ ಆಯ್ಕೆ

Posted On: 04-09-2022 10:22PM

ಪಡುಬಿದ್ರಿ : ಇಲ್ಲಿನ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಪಿ. ಕೆ. ಮುಹಿಯುದ್ದೀನ್ ಲಚ್ಚಿಲ್ ಆಯ್ಕೆಯಾಗಿದ್ದಾರೆ. ಪಡುಬಿದ್ರೆಯ ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಅಬ್ದುಲ್ ಶುಕೂರ್, ಕಾರ್ಯದರ್ಶಿ ಶೇಖ್ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಹಾಜಿ ಎಸ್. ಪಿ. ಉಮರ್ ಫಾರೂಕ್, ಕೋಶಾಧಿಕಾರಿ ಹಾಜಿ ಎ. ಎಚ್. ಮುಹಮ್ಮದ್, ಸದಸ್ಯರಾಗಿ ನಝೀರ್ ಸಿ. ಪಿ. , ಅಕ್ಬರ್ ಪಿ. ಎಂ. , ಇಂತಿಯಾರ್, ಬೇಂಗ್ರೆ ಬಾಷಾ, ಮಜಲಕೋಡಿ ಮಯ್ಯದ್ದಿ, ಹಂಝ ಅಬ್ಬಾಸ್, ಲೆಕ್ಕ ಪರಿಶೋಧಕರಾಗಿ ಹಾಜಿ ಹಮ್ಮಬ್ಬ ಮೊಯ್ದಿನ್ ಆಯ್ಕೆಯಾಗಿದ್ದಾರೆ.  ಪಡುಬಿದ್ರೆ ಜುಮಾ ಮಸೀದಿಯ ಖತೀಬ್ ಹಾಜಿ ಎಸ್. ಎಂ, ಅಬ್ದುಲ್ ರಹಿಮಾನ್ ವಂದಿಸಿದರು.

ಕಳತ್ತೂರು : 32 ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ಸಂಪನ್ನ

Posted On: 04-09-2022 10:18PM

ಕಳತ್ತೂರು : ಕಾಪು ತಾಲೂಕಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಚಲಕಾಡು ಕಳತ್ತೂರು ಇವರ ನೇತೃತ್ವದಲ್ಲಿ ಶ್ರೀ ಶೈಲಾ ಮಂಟಪ ಪುಂಚಲಕಾಡು ಇಲ್ಲಿ ಶ್ರೀ ಕೇಶವ ತಂತ್ರಿ ಪೌರೋಹಿತ್ಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಂತರ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ವತಿಯಿಂದ ಯಕ್ಷಗಾನ ಬಯಲಾಟ ನಡೆಯಿತು.

ಸಾಯಂಕಾಲ ಚಿಂತನ ಚೆಂಡೆ ಬಳಗ ಮುಂಡ್ಕೂರು ಹಾಗೂ ವಾಸು ಪಣಿಯೂರು ಅವರಿಂದ ಬ್ಯಾಂಡ್ ಸೆಟ್, ಕ್ರೀಡಾ ಸ್ಪರ್ಧಿಗಳಿಗೆ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ ಜರಗಿತು. ಶ್ರೀ ದೇವರಿಗೆ ಸಂಜೆ ಪೂಜೆ ಮುಗಿದು ಅಪಾರ ಸಂಖ್ಯೆಯ ಭಕ್ತರೊಂದಿಗೆ ವಿಸರ್ಜನಾ ಮೆರವಣಿಗೆ ನಡೆಯ ನಂತರ ಗಣಪತಿ ವಿಗ್ರಹವನ್ನ ಕಳತ್ತೂರು ಅರಬಿಕಟ್ಟೆ ಹೊಳೆಯಲ್ಲಿ ಜಲ ಸ್ತಂಭನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶಿರ್ವ ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ

Posted On: 04-09-2022 10:11PM

ಶಿರ್ವ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಭಾನುವಾರ ಸಂಜೆ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ಶಿರ್ವ ಸಂತಮೇರಿ ಕಾಲೇಜಿನ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ನಿಸ್ವಾರ್ಥ ಸೇವೆಗೆ ಉತ್ತಮ ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳನ್ನು ಸಮಾಜದ ನಿರ್ಮಾತೃರನ್ನಾಗಿ ರೂಪಿಸುವವರು ಶಿಕ್ಷಕರು. ಶಿಕ್ಷಕರ ಕರ್ತವ್ಯಪ್ರಜ್ಞೆ, ಬದ್ಧತೆ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ಸಂತಮೇರಿ ಪದವಿ ಪೂರ್ವ ಕಾಲೇಜಿನ ಗಿಲ್ಬರ್ಟ್ ಪಿಂಟೊ, ಕ್ಲಾರಾ ಕುಟಿನ್ಹಾ, ಪ್ರೆಸಿಲ್ಲಾ ಮಚಾದೋ, ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಲಾವಣ್ಯವತಿಯವರನ್ನು ಸನ್ಮಾನಿಸಲಾಯಿತು. ಉಪಸ್ಥಿತರಿದ್ದ ಸರ್ವ ಶಿಕ್ಷಕ ಶಿಕ್ಷಕಿಯರನ್ನು ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು. ಶಿರ್ವ ಸಂತಮೇರಿ ಕಾಲೇಜಿನ ಬಿ.ಕಾಂ ರ‍್ಯಾಂಕ್ ವಿಜೇತೆ ವಿದ್ಯಾರ್ಥಿನಿ ಕುಮಾರಿ ರಕ್ಷಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತೆಯರಾದ ದೀಪಾಲಿ ಪಿ.ಕೊಟ್ಯಾನ್, ರವಿತೇಜ ಆರ್ ಕುಲಾಲ್, ಯತಿನ್ ಮೂಲ್ಯ, ಕುಮಾರಿ ಐಶ್ವರ್ಯ ಆಂಗ್ಲ ಮಾಧ್ಯಮ ಪಡುಬೆಳ್ಳೆ ಇವರನ್ನು ರೋಟರಿ ವಲಯ ಸಹಾಯಕ ಗವರ್ನರ್ ಡಾ. ಶಶಿಕಾಂತ ಕರೀಂಕರವರು ಅಭಿನಂದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿರ್ವ ಎಸ್‌ಬಿಐ ಶಾಖಾ ಹಿರಿಯ ಪ್ರಬಂಧಕ ನಿತ್ಯಾನಂದಮೂರ್ತಿ ಕೆ.ಎನ್‌ರವರನ್ನು ನೂತನ ಸದಸ್ಯರನ್ನಾಗಿ ಸ್ವಾಗತಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ವಹಿಸಿದ್ದರು.

ವೃತ್ತಿಸೇವಾ ನಿರ್ದೇಶಕ ಲೂಕಾಸ್ ಡಿಸೋಜ ಸ್ವಾಗತಿಸಿದರು.ಜಗದೀಶ ಶೆಟ್ಟಿ, ಮೆಲ್ವಿನ್ ಡಿಸೋಜ, ಅಶ್ವಿನಿ ಅರಾನ್ಹಾ, ವಿಲಿಯಮ್ ಮಚಾದೋ, ಮೈಕಲ್ ಮತಾಯಸ್ ಪರಿಚಯಿಸಿದರು. ಹಿಲ್ಡಾ ಮತಾಯಸ್ ನಿರೂಪಿಸಿದರು. ಸಾರ್ಜಂಟ್ ರೊನಾಲ್ಡ್ ಡಿಸೋಜ ಸಹಕರಿಸಿದರು. ಸಹ ಕಾರ್ಯದರ್ಶಿ ಅಮಿತ್ ಅರಾನ್ಹಾ ವಂದಿಸಿದರು.

2021-22ನೇ ಸಾಲಿನಲ್ಲಿ ಉಡುಪಿ ತಾಲೂಕಿಗೆ ಪ್ರಥಮ ಅತ್ಯುತ್ತಮ ಸಂಘ ಪ್ರಶಸ್ತಿ ಪುರಸ್ಕೃತ ಇನ್ನಂಜೆ ಹಾಲು ಉತ್ಪಾದಕರ ಸಂಘ

Posted On: 04-09-2022 05:04PM

ಕಾಪು : ಇನ್ನಂಜೆ ಹಾಲು ಉತ್ಪಾದಕರ ಸಂಘವು 2021 - 22ನೇ ಸಾಲಿನಲ್ಲಿ ಉಡುಪಿ ತಾಲೂಕಿಗೆ ಪ್ರಥಮ ಅತ್ಯುತ್ತಮ ಸಂಘವೆಂದು ಪ್ರಶಸ್ತಿ ಪಡೆದಿರುತ್ತದೆ.

ಮಂಗಳೂರಿನ ಕೊರ್ಡೆಲ್ ಹಾಲ್, ಚಚ್೯ಗೇಟ್ ಕುಲಶೇಖರದಲ್ಲಿ ನಡೆದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.) ಮಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇನ್ನಂಜೆ, ಹಾಲು ಉತ್ಪಾದಕರ ಸಹಕಾರ ಸಂಘವನ್ನು 2021-2022ನೇ ಸಾಲಿನ ಅತ್ಯುತ್ತಮ ಸಂಘವೆಂದು ಘೋಷಿಸಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ ಪಿ ಸುಚರಿತ ಶೆಟ್ಟಿಯವರಿಂದ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಹಾಗೂ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾದ ಎಸ್ ಬಿ ಜಯರಾಮ್ ರೈ, ಕೆ ಎಂ ಎಫ್ ನಿರ್ದೇಶಕರಾದ ದಿವಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಕೆ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕರಾದ ಡಿ ಅಶೋಕ, ವ್ಯವಸ್ಥಾಪಕರಾದ ಡಾ.ನಿತ್ಯಾನಂದ ಭಕ್ತ, ಮಾಜಿ ಅಧ್ಯಕ್ಷರು, ನಿರ್ದೇಶಕರು, ಉಪ ವ್ಯವಸ್ಥಾಪಕರು, ಒಕ್ಕೂಟದ ಅಧಿಕಾರಿ ವರ್ಗ, ಸಿಬ್ಬಂದಿ ಉಪಸ್ಥಿತರಿದ್ದರು.

ಪಡುಬಿದ್ರಿ : ಶ್ರೀ ಸಾಯಿ ಹಾರ್ಡ್‌ವೇರ್ಸ್ ಶುಭಾರಂಭ

Posted On: 04-09-2022 03:30PM

ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿರುವ ಕಾಮತ್ ಪೆಟ್ರೋಲ್ ಪಂಪ್ ಬಳಿಯ ನಬೀಲ್ ಕಾಂಪ್ಲೆಕ್ಸ್ ನಲ್ಲಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಮಾಲೀಕತ್ವದ ಶ್ರೀ ಸಾಯಿ ಹಾರ್ಡ್‌ವೇರ್ಸ್ ನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭ ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಡುಬಿದ್ರಿ ಉದ್ಯಮಿ ವೈ ಗೋಪಾಲ್ ಶೆಟ್ಟಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಎರ್ಮಾಳು ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಪುಣೆಯ ಉದ್ಯಮಿ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಡೆಗೋಡೆ ನಿರ್ಮಾಣಕ್ಕೆ ಧನಸಹಾಯ

Posted On: 04-09-2022 01:27PM

ಉಚ್ಚಿಲ : ಕಾಪು ತಾಲೂಕಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬಡಾ ಉಚ್ಚಿಲದ ತಡೆಗೋಡೆ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ರೂಪಾಯಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಯೋಜನಾಧಿಕಾರಿಯಾದ ಜಯಂತಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ : ಕಾಲಾವಧಿ ಹೂವಿನ ಪೂಜೆ

Posted On: 04-09-2022 12:58PM

ಎರ್ಮಾಳು : ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ ಇಲ್ಲಿ ರವಿವಾರ ಕಾಲಾವಧಿ ಹೂವಿನ ಪೂಜೆಯು ವಿಜ್ರಂಭಣೆಯಿಂದ ಜರಗಿತು.

ಈ ಸಂದರ್ಭ ಆಡಳಿತ ಮೊಕ್ತೇಸರರಾದ ವೈ ಜಯಕರ , ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಡುಬಿದ್ರಿ : ಮಾದಕ ವ್ಯಸನಿಗಳು ಪೊಲೀಸ್ ವಶಕ್ಕೆ

Posted On: 03-09-2022 10:09PM

ಪಡುಬಿದ್ರಿ : ಕಾಪು ತಾಲೂಕಿನ ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಈರ್ವರನ್ನು ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ಒರ್ವನನ್ನು ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಬಗ್ಗೆ ಅನುಮಾನಗೊಂಡು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಸ್ಟ್ 30ರಂದು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪುರುಷೋತ್ತಮ ಎ ಕಾಪು ತಾಲೂಕು ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಮಹಮ್ಮದ್‌ ಫವಾಜ್‌ (18), ಮಹಮ್ಮದ್‌ ಅಫ್ಜಲ್‌(22) ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಗುರುನಾಥ ಆರ್‌ (23) ಎಂಬುವವರ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು ಮೂವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ಸೆಪ್ಟೆಂಬರ್ 02 ರಂದು ವೈದ್ಯರು ದೃಢಪಡಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ಆರ್.ಐ.ಇ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ

Posted On: 02-09-2022 04:35PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಆರ್.ಐ.ಇ)ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಲಭಿಸಿದೆ.

ಮೂಲವಿಜ್ಞಾನ ಶಿಕ್ಷಣಕ್ಕೆ ಸೇರಬಯಸುವವರಿಗಾಗಿ ನಡೆಸಲಾಗುವ ರಾಷ್ಟ್ರಮಟ್ಟದ ಪರೀಕ್ಷೆಯಾದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬಿ ಎಸ್ ಸಿ ಪದವಿ ವಿದ್ಯಾಭ್ಯಾಸಕ್ಕೆ ನಡೆಸಲಾಗುವ ಪರೀಕ್ಷೆಯಲ್ಲಿ ಸುಜ್ಞಾನ್ ಎಂ ಆರ್ ಈ ಸಾಧನೆ ಮಾಡಿದ್ದಾರೆ.

ವಿಶೇಷವಾಗಿ ಪದವಿ ನಂತರ ಉಪನ್ಯಾಸಕರಾಗುವವರಿಗಾಗಿಯೇ ತರಬೇತಿ ನೀಡುವ ಸಂಸ್ಥೆಯಾಗಿರುವ ಆರ್ ಐ ಇ ನ ಅಡಿಯಲ್ಲಿ ಅತ್ಯುತ್ತಮ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಸುಜ್ಞಾನ್ ಎಂ.ಆರ್ ನ ಈ ಅಪೂರ್ವ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಸುಜ್ಞಾನ್ ತೀರ್ಥಹಳ್ಳಿಯ ರಾಜೇಂದ್ರ ಮತ್ತು ಸುಮಾ ದಂಪತಿಯ ಪುತ್ರ.

ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ಪುರಸ್ಕೃತರಾದ ತೋನ್ಸೆ ಆನಂದ್ ಎಂ.ಶೆಟ್ಟಿ

Posted On: 02-09-2022 03:59PM

ಕಾಪು : ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷರು-ಆಡಳಿತ ನಿರ್ದೇಶಕರಾದ ತೋನ್ಸೆಯ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಫೆಡರೇಶನ್ ಆಫ್ ವರ್ಲ್ಡ್ ಬಂಟ್‌ಸ್‌ ಅಸೋಸಿಯೇಶನ್‌ಸ್‌ನ ಟ್ರಸ್ಟಿ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ತೋನ್ಸೆ ಆನಂದ್ ಎಂ.ಶೆಟ್ಟಿಯವರು ಪುಣೆ ಟೈಮ್ಸ್ ಮಿರರ್ ಪ್ರಾಯೋಜಿತ ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್‌ ಕೊಶ್ಯಾರಿ ಅವರು ತೋನ್ಸೆ ಆನಂದ್ ಎಂ.ಶೆಟ್ಟಿಯವರಿಗೆ ಮಹಾರಾಷ್ಟ್ರ ಲೀಡರ್‌ಶಿಪ್ ಆವಾರ್ಡ್-2022 ನೀಡಿ‌ ಪುರಸ್ಕರಿಸಿದರು‌.