Updated News From Kaup
ಉಡುಪಿಯಲ್ಲಿ ನಡೆಯಲಿರುವ ಬೃಹತ್ ದುರ್ಗಾ ದೌಡ್ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ

Posted On: 02-09-2022 03:47PM
ಕಾಪು : ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ಉಡುಪಿಯಲ್ಲಿ ನಡೆಯಲಿರುವ ಬೃಹತ್ "ದುರ್ಗಾ ದೌಡ್" ಕಾರ್ಯಕ್ರಮದ ಸ್ಟಿಕ್ಕರ್ ಗಳನ್ನು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಕಾಪು ಪೇಟೆಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ರಿಂದ ಹೈಮಾಸ್ಕ್ ದೀಪ ಉದ್ಘಾಟನೆ

Posted On: 02-09-2022 03:31PM
ಕಾಪು : ಇಲ್ಲಿನ ಪುರಸಭಾ ವತಿಯಿಂದ ಮೂರು ಲಕ್ಷ ರೂ. ಅನುದಾನದಲ್ಲಿ ಕಾಪು ಪೇಟೆಯಲ್ಲಿ ನೂತನವಾಗಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಗುರುವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಪೇಟೆಯ ಮಾರುಕಟ್ಟೆಗೆ ಪ್ರವೇಶಿಸುವ ಪ್ರದೇಶವು ಸಂಪೂರ್ಣ ಕತ್ತಲಿನಲ್ಲಿದ್ದ ಈ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಮತ್ತು ಪುರಸಭಾ ಸದಸ್ಯರ ಬೇಡಿಕೆಯಿತ್ತು. ಅದರಂತೆ ಪುರಸಭೆ ಅಧಿಕಾರಿಗಳು ಕೂಡಾ ಪ್ರಸ್ತಾವನೆ ಸಲ್ಲಿಸಿದ್ದು ಅದರಂತೆ ಹೈಮಾಸ್ಕ್ ದೀಪ ಅಳವಡಿಸಲಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಇನ್ನೂ ಎರಡು ಪ್ರದೇಶಗಳಲ್ಲಿ ಹೈಮಾಸ್ಕ್ ದೀಪ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಶೈಲೇಶ್ ಅಮೀನ್, ರತ್ನಾಕರ ಶೆಟ್ಟಿ, ನಾಗೇಶ್, ಫರ್ಜಾನ, ಶೋಭಾ ಬಂಗೇರ, ರಾಧಿಕಾ ಸುವರ್ಣ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ಯೋಗೀಶ್ ರೈ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇಂಜಿನಿಯರ್ ನಯನ್ ತಾರಾ, ಕಾಪು ಪುರಸಭೆ ವ್ಯಾಪ್ತಿ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಸ್ಥಳೀಯರಾದ ಎಚ್. ಅಬ್ದುಲ್ಲಾ, ಅಬ್ದುಲ್ ನಜೀರ್, ಪಿ.ಕೆ. ಹೈದರ್ ಮಲ್ಲಾರು, ಜಗದೀಶ್ ಮೆಂಡನ್, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಮಂಗಳೂರು ಭೇಟಿ ; ಸಂಚಾರ ಬದಲಾವಣೆ ; ಸಾಲುಗಟ್ಟಿ ನಿಂತ ಘನ ವಾಹನಗಳು

Posted On: 02-09-2022 12:39PM
ಪಡುಬಿದ್ರಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಪಡುಬಿದ್ರಿ ಜಂಕ್ಷನ್ ಬಳಿ ಎಲ್ಲಾ ಸಾರ್ವಜನಿಕ ವಾಹನಗಳನ್ನು, ಘನ ವಾಹನಗಳನ್ನು ಕಾರ್ಕಳ ರಸ್ತೆಯ ಮೂಲಕ ಸಾಗಲು ತಿಳಿಸಲಾಗುತ್ತಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸರು ಸಾರ್ವಜನಿಕರಿಗೆ ತಿಳಿಯಲು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಡುಬಿದ್ರೆ ಜಂಕ್ಷನ್ ಮುಖಾಂತರ ಬೆಂಗಳೂರು ಮತ್ತು ಕೇರಳಕ್ಕೆ ಸಂಚರಿಸುವ ವಾಹನಗಳು ಬೆಳ್ಳಣ್ಣು - ಕಾರ್ಕಳ -ಬೆಳುವಾಯಿ- ಮೂಡಬಿದ್ರೆ– ಬಿ.ಸಿ.ರೋಡ್ ಮುಖೇನ ಸಂಚರಿಸಬೇಕೆಂದು ಪಡುಬಿದ್ರಿ ಜಂಕ್ಷನ್ ಬಳಿ ಬ್ಯಾನರ್ ಅಳವಡಿಸಿದ್ದಾರೆ.

ಹಲವಾರು ಚಾಲಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುವುದು ಕಂಡು ಬಂದಿದೆ. ಕಾರ್ಕಳ ರಸ್ತೆಯ ಇಕ್ಕೆಲಗಳಲ್ಲಿ ಘನವಾಹನಗಳು ಜಾಮ್ ಆಗಿದ್ದು, ವಾಹನ ಚಾಲಕರು ಬದಲಿ ಮಾರ್ಗವಾಗಿ ಸಂಚರಿಸುವುದು ವಿಳಂಬವಾಗುವುದರಿಂದ ಸಂಜೆ 6 ಗಂಟೆಯವರೆಗೆ ಕಾದು ನಂತರ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ. ಪಡುಬಿದ್ರಿ ಪಿಎಸ್ಐ ಪ್ರಕಾಶ್, ಸಾಲಿಯಾನ್ ದಿವಾಕರ್, ಹರೀಶ್, ರಾಜೇಶ್, ಹೈವೇ ಪಟ್ರೋಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಹೆದ್ದಾರಿಯಲ್ಲಿ ಬಂದೋಬಸ್ತ್ ಮಾಡುತ್ತಿದ್ದಾರೆ.
ಕಾಪು : ಅನಾರೋಗ್ಯದಿಂದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಯುವಕರು

Posted On: 02-09-2022 09:32AM
ಕಾಪು : ಇಲ್ಲಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ವಾಸವಾಗಿದ್ದ ಅನಾರೋಗ್ಯದಿಂದ ಇದ್ದ ಒಂಟಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಕಾಪುವಿನ ಯುವಕರು ಮಾನವೀಯತೆ ಮೆರೆದಿದ್ದಾರೆ.
ಆಶಾ ಕಾರ್ಯಕರ್ತೆ ಉಷಾ ಮಲ್ಲಾರು ಮಾಹಿತಿಯ ಮೇರೆಗೆ ಕಾಪುವಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಲೀಲಾವತಿ ಪೂಜಾರಿಯವರನ್ನು ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಮತ್ತವರ ತಂಡ ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಕ್ಕಳಿಲ್ಲದ ಲೀಲಾವತಿ ಪೂಜಾರಿಯವರ ಪತಿ ತೀರಿಕೊಂಡಿದ್ದು, ಕೊಂಬಗುಡ್ಡೆಯ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇದೀಗ ಅವರು ಅನಾರೋಗ್ಯಗೊಂಡಿದ್ದು, ವಾರೀಸುದಾರರಿಲ್ಲದ ಲೀಲಾವತಿಯವರನ್ನು ಪ್ರಶಾಂತ್ ಪೂಜಾರಿ ಮತ್ತು ಅವರ ಸಂಗಡಿಗರು ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂದರ್ಭ ಪುರಸಭಾ ಸದಸ್ಯ ಉಮೇಶ್ ಪೂಜಾರಿ ಮಲ್ಲಾರು, ಸಚಿನ್ ಶೆಟ್ಟಿ, ಶಿವಾನಂದ ಪೂಜಾರಿ, ಶ್ಯಾರೊನ್ ನಿಶಿತ ಮಲ್ಲಾರು, ಆಶಾ ಕಾರ್ಯಕರ್ತೆ ಉಷಾ ಮಲ್ಲಾರು, ಉಮೇಶ್ ಕರ್ಕೇರ, ಮಲ್ಲಾರು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸಹಕರಿಸಿದ್ದಾರೆ.
ಅದಮಾರು :ಶಾಲೆಗೆ ಸಿಡಿಲು ಬಡಿದು ಲಕ್ಷಾಂತರ ರೂ. ನಷ್ಟ

Posted On: 01-09-2022 05:16PM
ಅದಮಾರು : ಇಲ್ಲಿನ ೯೮ ವರ್ಷ ಪೂರೈಸಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಬುಧವಾರ ಚೌತಿ ಪ್ರಯುಕ್ತ ರಜೆ ಇದ್ದ ಕಾರಣ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಹಿಂಬದಿಯ ಗೋಡೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ವಿದ್ಯುತ್ ವಯರಿಂಗ್, ಸಿ ಸಿ ಕ್ಯಾಮರಾ, ಇನ್‌ವರ್ಟರ್, ಅಕ್ವಾಗಾರ್ಡ್ ಸಹಿತ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ನೀರಿನ ನಳ್ಳಿಗೆ ಹಾನಿ ಉಂಟಾಗಿ ಶಾಲೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿ ಮದ್ಯಾಹ್ನದ ಬಿಸಿಯೂಟ ಮಾಡುವಂತಿಲ್ಲ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿಯವರು ದೂರವಾಣಿಯ ಮೂಲಕ ವಿದ್ಯಾಂಗ ಇಲಾಖಾಧಿಕಾರಿ ಶಂಕರ ಸುವರ್ಣರವರನ್ನು ಸಂಪರ್ಕಿಸಿ, ಸಮಗ್ರ ಮಾಹಿತಿ ನೀಡಿದರು. ಅಧಿಕಾರಿಯವರು ಗುರುವಾರ ಶಾಲೆಗೆ ರಜೆ ಘೋಷಿಸಿದ್ದಾರೆ.
ಸ್ಥಳೀಯರಾದ ಸದಾನಂದ ಆಚಾರ್ಯರವರು ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಎಲ್ಲೂರು ಗ್ರಾಮಕರಣಿಕ ಸುನಿಲ್ ಭೇಟಿ ನೀಡಿ ನಷ್ಟದ ಅಂದಾಜನ್ನು ಕಾಪು ತಹಶಿಲ್ದಾರ್ ಅವರಿಗೆ ಕಳುಹಿಸಿದ್ದಾರೆ. ಈ ಸಂದರ್ಭ ಮುಖ್ಯ ಶಿಕ್ಷಕಿ ದೇವಿಕಾ, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಕುಂಜೂರು, ಸ್ಥಳೀಯರಾದ ಸಂತೋಷ್ ಶೆಟ್ಟಿ ಬರ್ಪಾಣಿ, ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರ : ಸೌಹಾರ್ದತೆಯ ಗಣೇಶೋತ್ಸವ

Posted On: 31-08-2022 09:52PM
ಉದ್ಯಾವರ : ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಫ್ರೆಂಡ್ಸ್ ಗಾರ್ಡನ್ ಅರೂರುತೋಟ ಸಂಪಿಗೆ ನಗರದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಧರ್ಮಗುರುಗಳು ಮತ್ತು ಕ್ರೈಸ್ತ ಬಾಂಧವರು ಭಾಗವಹಿಸಿ ಸೌಹಾರ್ದತೆ ಮೆರೆದರು.
ಇಪ್ಪತ್ತೈದು ವರ್ಷಕ್ಕೂ ಅಧಿಕ ಇತಿಹಾಸವಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉದ್ಯಾವರ ಮತ್ತು ಫ್ರೆಂಡ್ಸ್ ಗಾರ್ಡನ್ ಅರೂರುತೋಟದ ಸದಸ್ಯರು ಈ ಬಾರಿಯೂ ಅತ್ಯಂತ ವಿಜ್ರಂಭಣೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಸದಾ ಸೌಹಾರ್ದತೆಯಿಂದಿರುವ ಇಲ್ಲಿಯ ಕಾರ್ಯಕ್ರಮಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜ ಅವರು ಭಾಗವಹಿಸಿದ್ದರು.
ಹಿಂದೂ ಸಮಾಜ ಬಾಂಧವರಿಗೆ ಶುಭ ಹಾರೈಸಿ, ಗೌರವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿಸೋಜ, 20 ಆಯೋಗಗಳ ಸಂಯೋಜಕರಾದ ಜೆರಾಲ್ಡ್ ಪಿರೇರಾ, ಸೌಹಾರ್ದ ಸಮಿತಿಯ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ರೊನಾಲ್ಡ್ ಡಿಸೋಜ, ರೋಯ್ಸ್ ಫೆರ್ನಾಂಡಿಸ್, ಜೋನ್ ಗೋಮ್ಸ್, ಅನಿಲ್ ಡಿಸೋಜ, ಸುನಿಲ್ ಡಿಸೋಜ, ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.
ಫ್ರೆಂಡ್ಸ್ ಗಾರ್ಡನ್ ಅರೂರುತೋಟ ಇಲ್ಲಿಯ ಪ್ರಮುಖರಾದ ದಿನೇಶ್ ಜತ್ತನ್ನ, ಪ್ರದೀಪ್ ಸುವರ್ಣ, ಯೋಗೀಶ್ ಕೋಟ್ಯಾನ್, ಹರೀಶ್ ಕುಮಾರ್ ಸೌಂದರ್ಯ, ಗಣೇಶ್ ಕುಮಾರ್, ರಿಯಾಝ್ ಪಳ್ಳಿ, ಗಿರೀಶ್ ಕುಮಾರ್, ಉದ್ಯಾವರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರಾದ ಚೇತನ್ ಕುಮಾರ್ ಪಿತ್ರೋಡಿ, ಪ್ರಸಾದ್, ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಸೇವಕ ಮತ್ತು ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಶಂಕರಪುರ : 30ನೇ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ

Posted On: 30-08-2022 08:56PM
ಕಾಪು : 30ನೇ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ರೋಟರಿ ಶಂಕರಪುರದ ವತಿಯಿಂದ ಆಗಸ್ಟ್ 30ರಂದು ರೋಟರಿ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಲೀನಾ ಸಿಕ್ವೇರಾ ( principal Manipal School of nursing Manipal ) ರವರು ಸ್ತನ್ಯಪಾನ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವು ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಗ್ಲಾಡಿಸ್, ಕಾಂತಿ, ರೋಹಿಣಿ, ಯಮುನಾ. ಆಶಾ ಕಾರ್ಯಕರ್ತರಾದ ಗಾಯತ್ರಿ, ಪ್ರತಿಮಾ, ಸುಷ್ಮಾ ಹಾಗೂ ರೋಟರಿ ಸದಸ್ಯರುಗಳಾದ ಫ್ರಾನ್ಸಿಸ್ ಡೇಸ, ಜಾರ್ಜ್ ಡಿಸಿಲ್ವ, ಫ್ಲಾವಿಯ ಮೆನೇಜಸ್, ಅನಿಲ್ದಾ, ಇನ್ನರ್ವಿಲ್ ಸದಸ್ಯರುಗಳು, ಅಂಗನವಾಡಿ ಮಕ್ಕಳ ತಾಯಂದಿರುಗಳು ಉಪಸ್ಥಿತರಿದ್ದರು.
ಗೌರಿ - ಗಣೇಶ : ವಿಲಕ್ಷಣ ತಾಯಿ - ಮಗು

Posted On: 30-08-2022 05:44PM
ಸ್ತ್ರೀ ತನ್ನ ಬಯಕೆಯನ್ನು ಪುರುಷಾವಲಂಬನೆ ಇಲ್ಲದೆ ನೆರವೇರಿಸಿಕೊಳ್ಳುತ್ತಾಳೆ , ಮಗುವನ್ನು ಪಡೆಯುತ್ತಾಳೆ .ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ .ಅಸೂಯೆಗೊಳ್ಳುತ್ತಾನೆ . ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ .ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ . ಆದರೆ ಪ್ರಕರಣ ಸುಖಾಂತ್ಯವಾಗುತ್ತದೆ . ಕತ್ತರಿಸಲ್ಪಟ್ಟ ತಲೆಗೆ ಆನೆಯ ಮುಖ ಜೋಡಿಸಿ ಮಗು ಗಜಾನನನಾಗುತ್ತಾನೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ .ಇದು ಅನಿವಾರ್ಯವಾಗಿ ಅಲ್ಲ , ಪ್ರೀತಿಪೂರ್ವಕವಾಗಿ . ನಿಗ್ರಹಿಸಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ ,ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು . ಎಷ್ಟೇ ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ ,ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ .ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಅನಾವರಣಗೊಳ್ಳುತ್ತದೆ . ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ.
ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೆ 'ಅಕಾಲ'ದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ .ಈ ಘಟನೆ ಭೂಮಿ - ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು-ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ . ಬೇಟೆಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ .ಇತಿಹಾಸ ಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ .ಅನಂತರ ಇಲಿಯ ಸಾಂಗತ್ಯ ಸಿಗುತ್ತದೆ . ಆದರೆ ಕೃಷಿಯೇ ಪ್ರಧಾನವಾದಾಗ ಗಣಪ ಬಹುವಾಗಿ ಪೂಜಿಸಲ್ಪಡುತ್ತಾನೆ .ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ - ದಾರುಶಿಲ್ಪಗಳಲ್ಲಿ ಲಭ್ಯ. ( ಸಂಗ್ರಹ)
"ಸಾರ್ಪತ್ಯ ಆವೊಂದಿಪ್ಪೊಡು" : ಜನಪದರ ಹೆಣ್ಣು ಮೈಸಗೆಯನ್ನು ಶಿವ ಪ್ರೀತಿಸುವುದು .ತಾವರೆ ಹೂವಾಗುವುದು . ಗುಟ್ಟಿನಲ್ಲಿ ಜೊತೆಯಾಗುವುದು . ಮುಂದುವರಿಯುವ ಕತೆಯಲ್ಲಿ ಭಾಮಕುಮಾರನ ಜನನ .ಈತ ಗಜಮುಖನಾಗುವುದು ಪಾರ್ವತಿ ಮಗುವನ್ನು ಸಾಕುವುದು . ಪಾರ್ವತಿ ಸಹಜವಾಗಿ ಮೈಸಗೆಯನ್ನು ಸ್ವೀಕರಿಸುವುದು .ಪ್ರತಿ ಮನೆಯಲ್ಲೂ ಗಣಪತಿ ಪೂಜೆ ನಡೆಯಬೇಕು . ಅಲ್ಲೆಲ್ಲ ಗಣಪತಿ "ಸಾರ್ಪತ್ಯ ಆವೊಂದಿಪ್ಪೊಡು" ಎಂಬುದು ಶಿವನ ವರ . ಇದು ಭಾಮಕುಮಾರ ಸಂಧಿಯಲ್ಲಿ ಬರುವ ಕತೆ. ಗಣಪನ ಹೊಟ್ಟೆ : ಕಣಜ , ಕಣಜಕ್ಕೆ ಸುತ್ತುವ ಹಗ್ಗ ( ಪೆರ್ಮರಿ) ಇವು ಗಣಪತಿಯ ಹೊಟ್ಟೆ ಮತ್ತು ಹೊಟ್ಟೆಗೆ ಸುತ್ತಿದ ಸರ್ಪವನ್ನು ಸಾಂಕೇತಿಸುತ್ತವೆ. ಅಕ್ಕಿ - ಭತ್ತಕ್ಕೆ ಹಾಗೂ ಇತರ ಬೆಳೆಗಳಿಗೆ ಇಲಿಕಾಟ ಸಹಜ ( ಅರಿಬಾರ್ ಇತ್ತಿನಲ್ಪ ಎಲಿ ಪೆರ್ಗುಡೆ ಕಡಮೆನಾ ). ಇಂತಹ ಆಹಾರದ ರಕ್ಷಣೆಗಾಗಿ ಸರ್ಪ(ಹಗ್ಗ). ಗಣಪನ ಹೊಟ್ಟೆ ಕೃಷಿ ಸಮೃದ್ಧಿಯ ದಾಸ್ತಾನು. ಹೇಗಿದೆ ಜನಪದರ ಕಲ್ಪನೆ.
ಬೆಣಚುಕಲ್ಲಿನ 'ಬೆನಕ' : ಗಣಪತಿ ಬೇಟೆ ಸಂಸ್ಕೃತಿಯ ಪ್ರತಿನಿಧಿ : ಗಣಪನ ಮೂರ್ತಿ ಶಿಲ್ಪದಲ್ಲೆ ಪಾಚೀನತೆಯನ್ನು ಗುರುತಿಸುವ ಸಂಶೋಧಕರು ಇವನ ಅಸ್ತಿತ್ವಕ್ಕೆ ಅಥವಾ ಕಲ್ಪನೆಗೆ ಬೇಟೆ ಸಂಸ್ಕೃತಿಯಷ್ಟು ಪಾಚೀನತೆಯನ್ನು ಅಥವಾ ಅದಕ್ಕಿಂತಲೂ ಪೂರ್ವದ ಜನಜೀವನದ ಕಾಲದವರೆಗೆ ಒಯ್ಯುತ್ತಾರೆ .ಬೇಟೆ , ಬೇಟೆಗೆ ಬಳಸುತ್ತಿದ್ದ ಬೆಣಚುಕಲ್ಲು ಪ್ರಧಾನ ಆಯುಧ . ಇಲ್ಲಿಂದಲೇ ಬೆಣಚುಕಲ್ಲಿನಿಂದ "ಬೆನಕ" ಎಂದು ಪೂಜಿಸುವ ವಿಧಾನ ರೂಢಿಗೆ ಬಂದಿರಬಹುದು . ಈ ಶೈಲಿಯ ಪೂಜೆ ಈಗಲೂ ರೂಢಿಯಲ್ಲಿವೆ .ವೈಭವದ ಮೂರ್ತಿಗಳ ಭವ್ಯತೆಯ ನೇಪಥ್ಯದಲ್ಲಿ ಈ ಬೆನಕನಿದ್ದಾನೆ . ಬೇಟೆಯ ಕಾಲಘಟ್ಟದಲ್ಲಿ ಆನೆಯ ಕಲ್ಪನೆ ಬಂದಿರಬಹುದು . ಶ್ರಮ ಸಂಸ್ಕೃತಿ : ಶ್ರಮ ಸಂಸ್ಕೃತಿಯ ಸಂಕೇತವಾಗಿ ಗಣಪತಿ ಗುರುತಿಸಲ್ಪಡುವುದಿದೆ .ಶ್ರಮದಿಂದ ಮೈಬೆವರುತ್ತೆ , ಇದೇ ಮೈಯ ಮಣ್ಣಿಗೆ ಕಾರಣವಾಗುತ್ತದೆ . ಪಾರ್ವತಿಯ ಮೈಯ ಮಣ್ಣಿನಿಂದ ಗಣಪನ ಸೃಷ್ಟಿ .ಮಣ್ಣಿನ ಮಗನ ಕಲ್ಪನೆ ಎಷ್ಟು ಸುಂದರ . ಕಪಿಲ ವರ್ಣ , ಕಾವಿಬಣ್ಣ , ಮಣ್ಣಿನ ಬಣ್ಣ , ಧೂಮ್ರವರ್ಣ , ಕಪ್ಪು - ಕೆಂಪು ಬಣ್ಣಗಳ ಸಂಯುಕ್ತ ಇದೂ ಮಣ್ಣಿನ ಬಣ್ಣವೆ .ಇದು ವಿಘ್ನೇಶನ ಮೈ ಬಣ್ಣ . ಕೃಷಿ ಸಂಸ್ಕೃತಿ: "ಸೆಗಣಿಯ ಗಣಪಂಗೆ ಸಂಪಗೆಯರಳಲ್ಲಿ ಪೂಜಿಸಿದರೆ" ಭೂಮಿಯ ಫಲವತ್ತತೆಗಾಗಿ ಸೆಗಣಿ - ಕೃಷಿಗೆ ಪೂರಕವಾಗಿ ಒದಗಿದ ಪಶುಪಾಲನೆ. ಸೆಗಣಿಗೆ ಹಸಿರು ಗರಿಕೆಯನ್ನು ಇಟ್ಟು ಪೂಜಿಸುವ ಗಣಪತಿಯ ಕಲ್ಪನೆಯೊಂದಿದೆ . ಕಬ್ಬು ಪ್ರಧಾನವಾಗಿ ಆನೆಮುಖ ಹೊಂದಿರುವ ಸ್ವರೂಪದ ಆರಾಧನೆ . ಇವು ಜನಪದರ ಚಿಂತನೆಗಳು . (ಓದಿದ್ದು - ಗ್ರಹಿಸಿದ್ದು) ಲೇಖನ : ಕೆ.ಎಲ್.ಕುಂಡಂತಾಯ
ಉದ್ಯಾವರ : ಹಿರಿಯರ ದಿನಾಚರಣೆ

Posted On: 30-08-2022 10:32AM
ಉದ್ಯಾವರ : ಕೆಥೊಲಿಕ್ ಸಭಾ ಉದ್ಯಾವರ ಇವರ ನೇತೃತ್ವದಲ್ಲಿ ಸ್ತ್ರೀ, ಕುಟುಂಬ ಮತ್ತು ಯುವ ಆಯೋಗದ ಸಹಕಾರದೊಂದಿಗೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಯ ಹಿರಿಯರ ದಿನವನ್ನು ಝೇವಿಯರ್ ಸಭಾಭವನದಲ್ಲಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಫಾ. ಸ್ಟಾನಿ ಬಿ ಲೋಬೊ, ಸಹಾಯಕ ಧರ್ಮಗುರು ವಂ. ಫಾ. ಲಿಯೋ ಪ್ರವೀಣ್, ಕಾಪುಚಿನ್ ಧರ್ಮಗುರು ವಂ. ಫಾ. ಚಾರ್ಲ್ಸ್ ಸಲ್ದಾನ ಇವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು.
ಬಳಿಕ ಸ್ಥಳೀಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರನ್ನು ಅದ್ದೂರಿಯಾಗಿ ಸಭಾ ಭವನದ ಒಳಗೆ ಕರೆತರಲಾಯಿತು. ಹಿರಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದ ಸಂಘಟಕರು, ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಂ. ಫಾ. ಸ್ಟ್ಯಾನಿ ಬಿ ಲೋಬೊ, ದೇವಾಲಯದಲ್ಲಿ ವಿವಿಧ ಸೇವೆ ಸಲ್ಲಿಸಿದ ಎಲ್ಲ ಹಿರಿಯರನ್ನು ಸ್ಮರಿಸಿ ದರು. ಹಿರಿಯರ ಸಂಘಕ್ಕೆ ತಾವು ಸೇರ್ಪಡೆಯಾಗಿ, ಜೊತೆಯಾಗಿ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ಸ್ ಇನ್ ಸ್ಟಿಟ್ಯೂಷನ್ ನ ಡೀನ್ ಡಾ. ಉರ್ಬನ್ ಡಿಸೋಜ, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೋರೊನ್ನ, 20 ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ, ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಕಾರ್ಯದರ್ಶಿ ಟೆರೆನ್ಸ್ ಪಿರೇರಾ, ಉಸ್ತುವಾರಿ ಲಾರೆನ್ಸ್ ಡೇಸಾ, ಕುಟುಂಬ ಆಯೋಗದ ವಿಲ್ಫ್ರೆಡ್ ಕ್ರಾಸ್ಟೊ, ಸ್ತ್ರೀ ಆಯೋಗದ ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.
ಅನಿಲ್ ಮಿನೇಜಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈಕಲ್ ಡಿಸೋಜಾ ಮತ್ತು ಸ್ಟೀವನ್ ಕುಲಾಸೊ ಸಹಕರಿಸಿದರು. ಯುವ ಆಯೋಗ ಸಂಯೋಜಕ ರೋಯ್ಸ್ ಫೆರ್ನಾಂಡಿಸ್ ವಂದಿಸಿದರು.
ಕಲ್ಯಾಲು ಮನೆ ಕಮಲ ಪೂಜಾರ್ತಿ ಇನ್ನಿಲ್ಲ

Posted On: 29-08-2022 07:11PM
ಕಲ್ಯಾಲು ಮನೆ ಕಮಲ ಪೂಜಾರ್ತಿಯವರು (103 ವರ್ಷ) ಇಂದು ಬೆಳಗ್ಗೆ ದೈವಾದಿನರಾಗಿದ್ದಾರೆ. ಇವರು ದಿವಂಗತ ನರ್ವ ಪೂಜಾರಿಯವರ ಧರ್ಮಪತ್ನಿಯಾಗಿದ್ದು, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.