Updated News From Kaup
ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

Posted On: 28-08-2022 11:29PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಅತ್ಯುತ್ತಮ ಕೆಲಸ ಮಾಡಿ, ಇತ್ತೀಚಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ ಆರ್ ಪಾಟ್ಕರ್ ಅವರಿಗೆ ಬಂಟಕಲ್ಲಿನಲ್ಲಿ ಸುಮಾರು 12 ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು.
ಆಟೋ ರಿಕ್ಷಾ ಚಾಲಕ ಮಾಲಕ ಸಂಘ, ಅಯ್ಯಪ್ಪ ಭಕ್ತವೃಂದ, ರಾಜಪುರ ಸಾರಸ್ವತ ಯುವ ವೃಂದ, ದುರ್ಗಾ ಚಂಡೆ ಬಳಗ, ಗಣೇಶೋತ್ಸವ ಸಮಿತಿ, ಲಯನ್ಸ್ ಕ್ಲಬ್ ಜಾಸ್ಮಿನ್, ಲಯನ್ಸ್ ಕ್ಲಬ್ ಬಂಟಕಲ್ಲು, ಉಡುಪಿ ಕಿಸಾನ್ ಸಂಘ, ನಾಗರಿಕ ಸಮಿತಿ ಸಹಿತ 12 ವಿವಿಧ ಸಂಘ ಸಂಸ್ಥೆಯಿಂದ ಕೆಆರ್ ಪಾಟ್ಕರ್ ಹಾಗೂ ಅವರ ಧರ್ಮಪತ್ನಿ ಸಂಗೀತ ಪಾಟ್ಕರ್ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಕೆ ಆರ್ ಪಾಟ್ಕರ್ ಮಾತನಾಡಿ, ಜನರ ಪ್ರೀತಿಯಿಂದ ಹೃದಯ ತುಂಬಿ ಬರುತ್ತಿದೆ. ಸದಸ್ಯನಾಗಿ ಮುಂದುವರಿಯುವ ನನಗೆ ಗ್ರಾಮಸ್ಥರ ಸಹಕಾರ ಬೇಕು ಎಂದರು. ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಪು : ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೊಂದಿಗೆ ಡಿವೈಎಸ್ಪಿ ಸಮಾಲೋಚನ ಸಭೆ

Posted On: 28-08-2022 03:45PM
ಕಾಪು : ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸುವ ಕಾಪು, ಪಡುಬಿದ್ರಿ, ಶಿರ್ವ ಠಾಣಾವ್ಯಾಪ್ತಿಯ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಜೊತೆ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ರವರು ಶನಿವಾರ ಕಾಪು ವೀರಭದ್ರ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಸಿದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಚರಿಸುವ ಮಂಡಳಿಯವರು ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಬೇಕು. ಧ್ವನಿವರ್ಧಕದ ಬಳಕೆಯನ್ನು ಆದಷ್ಟು ಕಡಿಮೆ ಶಬ್ದದಲ್ಲಿ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಇತರ ಧರ್ಮೀಯರಿಗೆ ನೋವುಂಟುಮಾಡುವ ಕೆಲಸ ಮಾಡಬಾರದು. ಮೆರವಣಿಗೆಯ ಸಂದರ್ಭ ಅನ್ಯ ಜಾತಿಯವರ ವಿರುದ್ಧ ಪೋಷಣೆ ಕೂಗಬಾರದು ಎಂಬ ಹತ್ತು ಹಲವು ಮಾನದಂಡಗಳನ್ನು ಗಣೇಶೋತ್ಸವ ಸಮಿತಿಯವರಿಗೆ ನೀಡಿದ್ದಾರೆ.
ಈ ಸಂದರ್ಭ ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ, ಪ್ರೊಬೆಷನರಿ ಎಸ್ಐ ಮಹಾಂತೇಶ, ಕಾಪು, ಪಡುಬಿದ್ರಿ ಮತ್ತು ಶಿರ್ವ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೂಳೂರು : ಬಸ್ ಡಿಕ್ಕಿಯಾಗಿ ಮೀನು ಸಾಗಾಟ ವಾಹನ ಪಲ್ಟಿ ; ಎಸ್ಕೇಪ್ ಆಗಲು ಯತ್ನಿಸಿದ ಬಸ್ ಗೆ ಟೋಲ್ ನಲ್ಲಿ ತಡೆ

Posted On: 28-08-2022 09:31AM
ಮೂಳೂರು : ಕಾಪು ತಾಲೂಕಿನ ಮೂಳೂರಿನಲ್ಲಿ ಮೀನಿನ ವಾಹನಕ್ಕೆ ಟೂರಿಸ್ಟ್ ಬಸ್ ಡಿಕ್ಕಿಯಾದ ಪರಿಣಾಮ ಪಲ್ಟಿಯಾಗಿ ಮೀನಿನ ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಭಟ್ಕಳದಿಂದ ಕೇರಳಕ್ಕೆ ಮೀನು ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೊಗೆ ಹಿಂದಿನಿಂದ ಬರುತ್ತಿದ್ದ ಕರಾವಳಿಗರೇ ತುಂಬಿದ ಬಸ್ಸು ಡಿಕ್ಕಿಯಾದ ರಭಸಕ್ಕೆ ನಿಯಂತ್ರಣ ಕಳಕೊಂಡ ಗೂಡ್ಸ್ ವಾಹನ ರಸ್ತೆ ವಿಭಜಕ ಏರಿ ಮತ್ತೊಂದು ಪಾಶ್ವಕ್ಕೆ ಹೋಗಿ ಪಲ್ಟಿಯಾಗಿದೆ.
ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪ್ಲಾಜಾಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಟೋಲ್ ನಲ್ಲಿ ಬಸ್ ತಡೆಯಲಾಯಿತು. ರಸ್ತೆಯಲ್ಲೇ ಪಲ್ಟಿಯಾದ ವಾಹನ ಇದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಕಾಪು ಹಾಗೂ ಪಡುಬಿದ್ರಿ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಉಡುಪಿ : ಗ್ರಾಮ ಒನ್ ಯೋಜನೆ - ಒಂದೇ ಸೂರಿನಡಿ ಸೌಲಭ್ಯ

Posted On: 27-08-2022 04:56PM
ಉಡುಪಿ : ಜಿಲ್ಲೆಯಲ್ಲಿ ಗ್ರಾಮ ಒನ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ದೊರಕಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಎ.ಬಿ.ಎಚ್.ಎ. ಕಾರ್ಡ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಕಾರ್ಡ್ ಹೊಂದಿದ ಫಲಾನುಭವಿಗಳು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷ ರೂ. ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಹಾಗೂ ಚಿಕಿತ್ಸೆಯ ಮಾಹಿತಿಯೂ ಕೂಡ ದೇಶದ ಯಾವುದೇ ಭಾಗದಲ್ಲಿ ಆನ್ಲೈನ್ ಮೂಲಕ ಪಡೆಯಬಹುದಾಗಿದೆ. ಕಾರ್ಡ್ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಬ್ಯಾಂಕ್ ಗೆ ಹೋದ ವ್ಯಕ್ತಿ ನಾಪತ್ತೆ
 (1) (1).jpg)
Posted On: 27-08-2022 04:51PM
ಕಾಪು : ಇಲ್ಲಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ತಿಳಿಸಿದ ವ್ಯಕ್ತಿಯೋರ್ವರು ಮನೆಗೆ ಬಾರದೆ ಇದ್ದ ಘಟನೆ ಆಗಸ್ಟ್ 25 ರಂದು ನಡೆದಿದೆ.
ಹರಿಪ್ರಸಾದ್ ಎಂಬುವವರು ಇವರ ಮನೆಯಾದ ಶಂಕರ ನಿಲಯ ಶಿರಿಬೀಡು ಉಡುಪಿಯಿಂದ ಆಗಸ್ಟ್ 25 ರ ಬೆಳಿಗ್ಗೆ 08.45 ಗಂಟೆಗೆ ಕೆಲಸಕ್ಕೆಂದು ತೆರಳಿದ್ದು, ಮಧ್ಯಾಹ್ನ ಕಾಪುವಿನ ಬ್ಯಾಂಕ್ ಆಫ್ ಬರೋಡದ ಜುವೆಲ್ ಚೆಕ್ ಗಾಗಿ ಹೋಗುವುದಾಗಿ ಪತ್ನಿಯಲ್ಲಿ ತಿಳಿಸಿರುತ್ತಾರೆ. ನಂತರ ಇವರು ಸಂಜೆ 04 ಗಂಟೆಗೆ ಕರೆ ಮಾಡಿ ಬೇಗ ಮನೆಗೆ ಬರುವಂತೆ ತಿಳಿಸಿದ್ದಲ್ಲಿ ತಡವಾಗುವುದಾಗಿ ತಿಳಿಸಿರುತ್ತಾರೆ. ಬಳಿಕ ಪತ್ನಿಯ ಅತ್ತೆ ಕರೆ ಮಾಡಿ ಮನೆಗೆ ಬೇಗ ಬರುವಂತೆ ತಿಳಿಸಿರುತ್ತಾರೆ. ನಂತರ ಸಂಜೆ 7 ಗಂಟೆಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿರುವುದನ್ನು ಮನಗಂಡು ಶಿರ್ವ ಬ್ರಾಂಚ್ ಮ್ಯಾನೇಜರ್ ಗೆ ವಿಚಾರಿಸಿದಲ್ಲಿ ಹರಿಪ್ರಸಾದ್ ಸಂಜೆ 6 ಗಂಟೆಗೆ ಕಾಪುವಿನಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ.
ಈ ಬಗ್ಗೆ ಪರಿಚಯದವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ ಮನೆಗೂ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಉಚ್ಚಿಲ : ರೇಬೀಸ್ ಹಾಗೂ ಪ್ರಾಣಿಜನ್ಯ ರೋಗದ ಕುರಿತು ಮಾಹಿತಿ ಕಾರ್ಯಕ್ರಮ

Posted On: 27-08-2022 04:26PM
ಉಚ್ಚಿಲ : ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಾಪು, ಜಿಲ್ಲಾ ಪ್ರಾಣಿ ದಯಾ ಸಂಘ ಉಡುಪಿ ಇವರ ಸಹಯೋಗದೊಂದಿಗೆ ಸರಸ್ವತಿ ಮಂದಿರ ಹೈಸ್ಕೂಲ್ ಉಚ್ಚಿಲ, ರೋಟರಿ ಕ್ಲಬ್ ಉಚ್ಚಿಲ ಇವರ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ರೇಬೀಸ್ (ಹುಚ್ಚುನಾಯಿ ರೋಗ) ಹಾಗೂ ಪ್ರಾಣಿಜನ್ಯ ರೋಗದ ಕುರಿತು ಮಾಹಿತಿ ಕಾರ್ಯಕ್ರಮ ಸರಸ್ವತಿ ಮಂದಿರ ಹೈಸ್ಕೂಲ್ ಉಚ್ಚಿಲ ಇಲ್ಲಿ ಜರಗಿತು.
ಕಾಪುವಿನ ಪಶು ವೈದ್ಯರಾದ ಡಾ| ಅರುಣ್ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಉಚ್ಚಿಲ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಸತೀಶ್ ಕುಲಾಲ್ ವಹಿಸಿದ್ದರು.
ಹಿರಿಯ ಶಿಕ್ಷಕರಾದ ಸದಾಶಿವ ನಾಯಕ್, ಶಾಲಾ ವಿದ್ಯಾರ್ಥಿ ನಾಯಕ ಅಜ್ಜಯ್ಯ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಬಿ ಎಸ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಪಡುಬೆಳ್ಳೆಯಲ್ಲಿ ಉಡುಪಿ ವಲಯ ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟ

Posted On: 27-08-2022 07:58AM
ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತು ಸಾಕ್ಷಾರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ, ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ಶುಕ್ರವಾರ ಶಾಲಾ ಮೈದಾನದಲ್ಲಿ ಉಡುಪಿ ವಲಯ ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟ ಜರಗಿತು.
ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶಶಿಧರ್ ವಾಗ್ಲೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಕಾಪು ಚಂದ್ರಶೇಖರವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗೋಪಾಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಶುಭ ಹಾರೈಸಿದರು.
ಕಾಪು ಯುವಜನ ಸೇವಾ ಮತು ಕ್ರೀಡಾ ಇಲಾಖೆಯ ಅಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್. ಕೆ. ಸುವರ್ಣ, ಉಡುಪಿ ತಾಲ್ಲೂಕು ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಸಾಲಿಯಾನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನಕರ್ ಭಂಡಾರಿ, ಕನ್ನಡ ಮಾಧ್ಯಮ ಮುಖ್ಯ ಶಿಕ್ಷಕಿ ಉಷಾ. ಎಸ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಿನ್ ರಾಜ್ ಸಾಲಿಯಾನ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಸುಮಂಗಲ ವಂದಿಸಿದರು. ದೈಹಿಕ ಶಿಕ್ಷಕ ಸುರೇಶ ದೇವಾಡಿಗ ಕಾರ್ಯಕ್ರಮ ಸಂಯೋಜಿಸಿದರು. ವೀಣಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಹರೀಶ್ ಶೆಟ್ಟಿ, ಬೆಳ್ಳೆ ಪಂಚಾಯತ್ ಸದಸ್ಯರು, ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾಟದಲ್ಲಿ ಮೂಳೂರು ಅಲ್ ಇಶಾನ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆ ದ್ವಿತೀಯ ಬಹುಮಾನ ಪಡೆಯಿತು. ಅಲ್ ಇಶಾನ್ ಶಾಲೆಯ ಮಹಮ್ಮದ್ ಅನಸ್ ಬೆಸ್ಟ್ ಅಲ್ ರೌಂಡರ್ , ಮಹಮ್ಮದ್ ಸುಹಾನ್ ಬೆಸ್ಟ್ ಕ್ಯಾಚರ್ ಮತ್ತು ಕ್ರಿಶ್ಚಿಯನ್ ಪ್ರೌಢ ಶಾಲೆಯ ದೀಪಕ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
ಶಿರ್ವ : ಸುನೀಲ್ ಮಿಶ್ರಾಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ

Posted On: 27-08-2022 07:41AM
ಶಿರ್ವ : ಕರ್ನಾಟಕ ಲಲಿತಕಲಾ ಅಕಾಡೆಮಿಯ ೨೦೨೧-೨೨ನೇ ಸಾಲಿನ ಪ್ರಶಸ್ತಿಗೆ ಶಿರ್ವದ ಯುವ ಚಿತ್ರ ಕಲಾವಿದ ಸುನೀಲ್ ಮಿಶ್ರಾ ಆಯ್ಕೆಯಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಸಂಭ್ರಮದ ಆಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು.
ಪ್ರಶಸ್ತಿಯು ೨೫ ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಇವರ ಕಲಾಕೃತಿ ಹಾಗೂ ಪ್ರಶಸ್ತಿ ವಿಜೇತರಾದ ನಾಡಿನ ಇತರ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇಡಲಾಗಿದ್ದು, ಬಳಿಕ ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ಸ್೯ನಲ್ಲಿ ಪ್ರದರ್ಶನಗೊಳ್ಳಲಿದೆ. ಒಟ್ಟು ೮೫ ಕಲಾಕೃತಿಗಳ ಪೈಕಿ ಸುನೀಲ್ ಮಿಶ್ರಾ ಅವರ ಕಲಾಕೃತಿ ಸೇರಿದಂತೆ ೧೦ ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಕಲಾವಿದ, ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಬಿ. ಭಾಸ್ಕರನ್, ಹಿರಿಯ ಬರಹಗಾರ, ವಿಮರ್ಶಕ ಎಸ್.ದಿವಾಕರ್, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ, ರಿಜಿಸ್ಟಾçರ್ ಆರ್. ಚಂದ್ರಶೇಖರ್ ಮತ್ತು ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ. ಟಿ. ನಿಟ್ಟಾಲಿ ಉಪಸ್ಥಿತರಿದ್ದರು. ಸುನೀಲ್ ಮಿಶ್ರಾ ಅವರ ಕಂಚಿನ ಕಲಾಕೃತಿ ( ಹ್ಯೂಮನ್ ಮಾನ್ಯುಮೆಂಟ್ಸ್ ಫಾರ್ ಸೇಲ್) ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ೨೦೧೯ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಕ್ಕೆ ಆಯ್ಕೆಯಾಗಿತ್ತು.
೨೦೧೬ರಲ್ಲಿ ಯುನೆಸ್ಕೋ ವತಿಯಿಂದ ನಡೆದ ಇಂಟರ್ನ್ಯಾಷನಲ್ ಆರ್ಟ್ವೀಕ್ ಪ್ರದರ್ಶನದಲ್ಲಿ ಭಾಗವಹಿಸಿರುವುದಲ್ಲದೆ, ಅವರ ಕಲಾಕೃತಿ ಯುನೆಸ್ಕೋ ಮೂಲ ಸಂಸ್ಥೆಗೆ ಆಯ್ಕೆಯಾಗಿತ್ತು. ಬೆಂಗಳೂರು ಮಹಾನಗರದಲ್ಲಿದ್ದುಕೊಂಡು ಚಿತ್ರಕಲೆಯನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿರಿಸಿ ಕೊಂಡಿರುವ ಸುನೀಲ್ ಮಿಶ್ರಾ ಉಡುಪಿ ಜಿಲ್ಲೆಯ ಶಿರ್ವದಂತಹ ಗ್ರಾಮೀಣ ಪ್ರದೇಶದಲ್ಲಿ ಅರಳಿದ ಅಪ್ಪಟ ಗ್ರಾಮೀಣ ಪ್ರತಿಭೆ. ವಿದ್ಯಾರ್ಥಿ ದೆಸೆಯಿಂದಲೇ ಏಕವ್ಯಕ್ತಿ ಕಲಾ ಪ್ರದರ್ಶನ, ಗುಂಪು ಪ್ರದರ್ಶನ ನಡೆಸಿ ಯಶಸ್ವಿಯಾದ ಅವರು ರೇಖಾ ಚಿತ್ರ, ಶಿಲ್ಪಕಲೆ, ತೈಲವರ್ಣ, ಕಾಷ್ಠಶಿಲ್ಪ, ಟರ್ರಾ ಕೋಟಾ, ಮುಖವಾಡ ತಯಾರಿಕೆ, ಅಕ್ರಿಲಿಕ್ ಮಾಧ್ಯಮ, ಲೋಹ ಶಿಲ್ಪ (ಮಿಶ್ರಲೋಹ) ರಚಿಸುವುದರಲ್ಲಿ ಸಿದ್ಧ ಹಸ್ತರೆನಿಸಿಕೊಂಡಿದ್ದಾರೆ. ಶಿರ್ವದ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ , ಶಿರ್ವ ಸಂತ ಮೇರಿ ಶಿಕ್ಷಣಸಂಸ್ಥೆಯಲ್ಲಿ ಪ.ಪೂ.ಶಿಕ್ಷಣ ಪಡೆದು, ಉಡುಪಿಯ ಸಿ.ಕೆ.ಎಂ ಕಲಾಶಾಲೆಯಲ್ಲಿ ಕಲಾ ವ್ಯಾಸಂಗ ಮಾಡಿದ್ದರು. ಕೆಲಕಾಲ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
ಆಗಸ್ಟ್ 27 : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಾಜಕೀಯ ರಹಿತ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಗೆ ಅಭಿನಂದನಾ ಕಾರ್ಯಕ್ರಮ

Posted On: 25-08-2022 11:14PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ತಮ್ಮ ಅಧಿಕಾರ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿರ್ವ ಗ್ರಾಮದ ಅಭಿವೃದ್ಧಿಯ ಹರಿಕಾರ, ಜಾತಿ, ಧರ್ಮ, ರಾಜಕೀಯ ರಹಿತವಾಗಿ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಗಸ್ಟ್ 27, ಶನಿವಾರ ಸಂಜೆ 4ಕ್ಕೆ ಸಾರ್ವಜನಿಕ ಗಣೇಶೋತ್ಸವ ವೇದಿಕೆ, ಬಂಟಕಲ್ಲು ಇಲ್ಲಿ ನಡೆಯಲಿದೆ.
ಕೆ.ಆರ್. ಪಾಟ್ಕರ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಾದ ಬಸ್ಸು ನಿಲ್ದಾಣ, 4 ಸಣ್ಣ ಬಸ್ಸು ನಿಲ್ದಾಣಗಳು, 7 ಸಿಸಿ ಕ್ಯಾಮರಾ ಅಳವಡಿಕೆ, ಸ್ಮಶಾನ, ಧ್ವಜಸ್ತಂಭ, ಆರೋಗ್ಯ ಉಪಕೇಂದ್ರ, ಡಿಜಿಟಲ್ ಪಾವತಿ ವ್ಯವಸ್ಥೆ, ಸಂಜೀವೀನಿ ಸಂತೆಗಳ ಆರಂಭ, ಕಛೇರಿಯಲ್ಲಿ ಆಸನ ಸೌಲಭ್ಯ, ಬಸ್ಸು ನಿಲ್ದಾಣ ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಸ್ಸು ವೇಳಾಪಟ್ಟಿ ವ್ಯವಸ್ಥೆ, ಗ್ರಾಮಸಭೆ ನೇರ ಪ್ರಸಾರ, 8 ಹೈ ಮಾಸ್ಟ್ ದೀಪಗಳು, ಎಸ್ ಎಲ್ ಆರ್ ಎಮ್ ಘಟಕಕ್ಕೆ 12 ಲಕ್ಷ ಮೌಲ್ಯದ ದೊಡ್ಡ ವಾಹನ ಇತ್ಯಾದಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ಕೆಲಸ ಕಾರ್ಯಗಳಾಗಿವೆ.
ಅದೇ ದಿನ ಸಂಜೆ 3 :30 ರಿಂದ ಭಕ್ತಿ ರಸಮಂಜರಿ ಪ್ರಕಾಶ್ ಸುವರ್ಣ ಮತ್ತು ಬಳಗ ಕಟಪಾಡಿ ಇವರಿಂದ, ಸಂಜೆ 4:15 ರಿಂದ ಶ್ರೀ ಕೆ ಆರ್ ಪಾಟ್ಕರ್ ರವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವದ ಉಪ ಪ್ರಾಂಶುಪಾಲರಾದ ಪ್ರೊ. ಕೆ. ಜಿ. ಮಂಜುನಾಥ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.
ಸಂಜೆ 5:30 ರಿಂದ ಕುಂದಾಪುರದ ಮೂರು ಮುತ್ತು ತಂಡದವರಿಂದ " ಹಾಸ್ಯ ಸಂಜೆ " ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕ್ರಿಯೇಟಿವ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳ ಕೈಗಾರಿಕಾ, ಸಾಂಸ್ಕೃತಿಕ ಭೇಟಿ

Posted On: 25-08-2022 10:36PM
ಕಾರ್ಕಳ : ಕ್ರಿಯೇಟಿವ್ ಪಿ.ಯು ಕಾಲೇಜು, ಕಾರ್ಕಳ ಇದರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಗಸ್ಟ್ 23 ರಂದು ಕೈಗಾರಿಕಾ ಭೇಟಿ ಆಯೋಜಿಸಿತ್ತು.

ಕೈಗಾರಿಕೆಯಲ್ಲಿನ ಹಾಲು ಉತ್ಪಾದನಾ ಘಟಕದ ಪ್ರಕ್ರಿಯೆಗಳು, ಹಂತಗಳು, ಉತ್ಪಾದನಾ ವಿಧಾನಗಳು ಹಾಗೂ ಉತ್ಪನ್ನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಂಗ್ರಹಿಸಿದರು. ಬದುಕಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಪಠ್ಯದಲ್ಲಿನ ವಿಷಯಗಳ ಪ್ರಾಯೋಗಿಕ ಜ್ಞಾನವು ಮಹತ್ತರವಾದದ್ದು ಹಾಗೂ ಒಬ್ಬ ಯಶಸ್ವಿ ಉದ್ಯಮದಾರರನ್ನಾಗಿಸಲು ಸಹಾಯವಾಗಬಹುದು ಎಂಬ ಉದ್ದೇಶದಿಂದ ಈ ಭೇಟಿ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭ ಹಳೆಯ ಸಂಪ್ರದಾಯಕ ಕೃಷಿ ಮತ್ತು ಕೃಷಿಯೇತರ ಸಲಕರಣೆಗಳನ್ನು ವೀಕ್ಷಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿನ ಗುತ್ತಿನ ಮನೆಗೆ ಭೇಟಿ ನೀಡಲಾಗಿತ್ತು. ಇಲ್ಲಿನ ಹಳೆಯ ಗುತ್ತಿನ ಮನೆ, ದೈವದ ಮೂರ್ತಿಗಳು, ಕತ್ತಿ, ಅಕ್ಕಿಮುಡಿ, ತಿರಿ, ಜನಪದ ಕಲೆಗಳಾದ ಕೋಲ, ಯಕ್ಷಗಾನ ಇವುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್, ಉಮೇಶ್, ಚಂದ್ರಕಾಂತ್, ರಾಜೇಶ್ ಶೆಟ್ಟಿ, ಅಕ್ಷತಾ ಜೈನ್ ಹಾಗೂ ಭೋಧಕೇತರ ವೃಂದದವರು ಪಾಲ್ಗೊಂಡಿದ್ದರು.