Updated News From Kaup
ಕಾಪು : ಅಕ್ರಮ ಗೋ ಮಾಂಸ ಮಾರಾಟ : ಇಬ್ಬರು ಪೋಲಿಸ್ ವಶಕ್ಕೆ

Posted On: 11-07-2022 03:23PM
ಕಾಪು : ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಸೇತುವೆ ಬಳಿ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಶೈಲ ಡಿ. ಎಮ್ ಇವರು ಕರ್ತವ್ಯದಲ್ಲಿರುವ ಸಮಯ ಮಲ್ಲಾರು ಗ್ರಾಮದ ಪಕೀರ್ಣ ಕಟ್ಟೆಯಿಂದ ಮೂಳೂರು ಕಡೆಗೆ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ಸ್ಕೂಟರ್ ನಲ್ಲಿ 2 ಜನ ವ್ಯಕ್ತಿಗಳು ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ರೈಲ್ವೆ ಸೇತುವೆ ಬಳಿ ಹೋಗಿ ನಿಂತು ವಾಹನಗಳನ್ನು ಪರಿಶೀಲಿಸುತ್ತಿರುವಾಗ ಸ್ಕೂಟರ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿ ತಡೆದು ನಿಲ್ಲಿಸಿ ಸ್ಕೂಟರ್ ನ್ನು ಪರಿಶೀಲಿಸಿದಾಗ ಸ್ಕೂಟರ್ ನ ಮುಂಭಾಗದಲ್ಲಿ ಹಳದಿ ಮತ್ತು ಹಸಿರು ಬಣ್ಣದ ಪಾಲಿಥಿನ್ ಚೀಲದಲ್ಲಿ ಸುಮಾರು 15 ಕೆ.ಜಿಯಷ್ಟು ಮಾಂಸವಿದ್ದು, ಸ್ಕೂಟರ್ ಸವಾರ ಹಾಗೂ ಸಹ ಸವಾರನಲ್ಲಿ ಯಾವ ಮಾಂಸ ಎಂಬ ಬಗ್ಗೆ ವಿಚಾರಿಸಿದಾಗ ದನದ ಮಾಂಸ ಎಂದು ತಿಳಿದು ಬಂದಿದೆ.
ಹುಸೇನಬ್ಬ ಮತ್ತು ಶಂಶುದ್ಧೀನ್ ಪೋಲಿಸರು ವಶಪಡಿಸಿಕೊಂಡ ಆರೋಪಿಗಳು. ಇವರುಗಳು ಮಾಂಸ ಮಾರಾಟ ಮಾಡಲು ಯಾವುದೇ ಪರವಾನಗಿ ಹೊಂದಿಲ್ಲ ಹಾಗೂ ತಾವುಗಳು ಬೀದಿ ಬದಿಯಲ್ಲಿನ ದನವನ್ನು ಕಳವು ಮಾಡಿ, ಹಾಡಿಯಲ್ಲಿ ಮಾಂಸ ಮಾಡಿ ಮನೆ ಮನೆಗೆ ಮಾರಾಟ ಮಾಡುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಂದಿಕೂರು : ರಸ್ತೆ ಹೊಂಡ - ಬಾಳೆಗಿಡ ನೆಟ್ಟು ಪ್ರತಿಭಟನೆ

Posted On: 11-07-2022 02:41PM
ಪಡುಬಿದ್ರಿ : ಇಲ್ಲಿನ ರಾಜ್ಯ ಹೆದ್ದಾರಿಯಾದ ಕಾರ್ಕಳ ರಸ್ತೆಯ ನಂದಿಕೂರು ರೈಲ್ವೆ ಮೇಲ್ಸೇತುವೆಯಲ್ಲಿ ಹೊಂಡಮಯವಾಗಿದ್ದು ಸಂಚಾರಕ್ಕೆ ತೊಂದರೆಯಾಗಿ ಸಂಬಂಧಪಟ್ಟ ಇಲಾಖೆಗಳ ಮೌನದಿಂದ ಬೇಸತ್ತ ಸ್ಥಳೀಯರು ಬಾಳೆಗಿಡನೆಟ್ಟು ಜುಲೈ 10 ರಂದು ಪ್ರತಿಭಟಿಸಿದ್ದಾರೆ.
ಇಲ್ಲಿಯ ಹೊಂಡದಿಂದ ತೊಂದರೆಯಾಗಿದ್ದು ಮಳೆಗಾಲ ಆರಂಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹೊಂಡ ಮುಚ್ಚುವ ಕಾರ್ಯ ನಡೆಸಲಾಗಿದ್ದು, ಇದೀಗ ಮತ್ತೆ ಬೃಹತ್ ಗಾತ್ರದ ಹೊಂಡ ಬಿದ್ದು ಸಂಚಾರಕ್ಕೆ ತೊಡಕಾಗಿದೆ.
ಮಳೆಯಿಂದ ಸೇತುವೆಯಲ್ಲಿ ನೀರು ಕೂಡಾ ಸಮರ್ಪಕವಾಗಿ ಹರಿಯದೆ ಹೊಂಡ ದಲ್ಲಿ ನಿಂತು ಜನ ಹಾಗೂ ವಾಹನ ಸಂಚಾರಿಗಳಿಗೆ ಅಪಾಯ ತಂದೊಡ್ಡು ತ್ತಿದೆ. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಬಾಳೆಗಿಡ ನೆಟ್ಟು ಅಸಮಾಧಾನ ಹೊರಹಾಕಿದ್ದಾರೆ.
ಹೆಜಮಾಡಿ : ತೆಂಗಿನಮರ ಬಿದ್ದು ಮನೆಗೆ ಹಾನಿ
.jpg)
Posted On: 11-07-2022 02:29PM
ಹೆಜಮಾಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯ ಹೆಜಮಾಡಿ ಕೋಡಿ 7ನೇ ವಾರ್ಡಿನಲ್ಲಿ ಪಾರ್ವತಿ ಪುತ್ರನ್ ಅವರ ಮನೆಗೆ ಜುಲೈ 10ರಂದು ತೆಂಗಿನ ಮರ ಬಿದ್ದು ಸುಮಾರು ರೂ.50,000 ಅಂದಾಜು ನಷ್ಟವಾಗಿರುತ್ತದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಗ್ರಾಮ ಕರಣಿಕರಾದ ಶ್ರೀಕಾಂತ್, ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯರಾದ ಸುಜಾತಾ, ನಳಿನಾಕ್ಷಿ, ಶರಣ್ ಕುಮಾರ್ ಮಟ್ಟು, ಮತ್ತಿತರರು ಭೇಟಿ ನೀಡಿದರು.
ಶಂಕರಪುರ : ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ - ಕಂಡಡೊಂಜಿ ದಿನ

Posted On: 10-07-2022 10:05PM
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್, ಬಿಲ್ಲವ ಸಂಘ ಇನ್ನಂಜೆ, ಯುವತಿ ಮಂಡಲ (ರಿ.) ಇನ್ನಂಜೆ, ಯುವಕ ಮಂಡಲ (ರಿ.) ಇನ್ನಂಜೆ, ಇಂಡಿಯನ್ ಸೀನಿಯರ್ ಜೆಸಿಐ ಉಡುಪಿ ಟೆಂಪಲ್ ಸಿಟಿ ರಿಜನ್, ರೋಟರಿ ಸಮುದಾಯ ದಳ ಇನ್ನಂಜೆ, ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘ ಶಂಕರಪುರ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ ಕಂಡಡೊಂಜಿ ದಿನವು ಶಂಕರಪುರ ಮಾರ್ಕೆಟ್ ರೋಡ್ ತೆಂಡೆಮನೆ ಕೆಸರುಗದ್ದೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಯಸ್.ವಿ.ಎಚ್ ಕನ್ನಡ ಮಾಧ್ಯಮ ಪ್ರೌಢಶಾಲೆ ಇನ್ನಂಜೆಯ 85 %ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಎಸ್.ಎಸ್.ಎಲ್.ಸಿಯ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಾರ್ವಜನಿಕರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ , ಮುಖ್ಯ ಅತಿಥಿಗಳಾಗಿ ದಿನೇಶ್ ಶೆಟ್ಟಿ ಕಲ್ಯಾ, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಇನ್ನಂಜೆ ಯುವತಿ ಮಂಡಲದ ಅಧ್ಯಕ್ಷರಾದ ಆಶಾ ನಾಯಕ್, ಕಾರ್ಯದರ್ಶಿ ಲಕ್ಷ್ಮಿ.ವೈ. ನಾಯಕ್ , ಸ್ಥಾಪಕ ಅಧ್ಯಕ್ಷರಾದ ಸುಮಲತಾ, ಇತರೆ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ನಂದಳಿಕೆ : ಅಪಘಾತ - ಸಹೋದರರಿಬ್ಬರ ದುರ್ಮರಣ

Posted On: 10-07-2022 07:08PM
ಕಾರ್ಕಳ : ದ್ವಿಚಕ್ರ ವಾಹನವು ಕಾರಿಗೆ ಢಿಕ್ಕಿಯಾಗಿ ಸಹೋದರರಿಬ್ಬರು ಸಾವನ್ನಪ್ಪಿದ ಘಟನೆ ನಂದಳಿಕೆಯಲ್ಲಿ ನಡೆದಿದೆ.
ಸಹೋದರರಿಬ್ಬರು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಮೃತ ಸಂದೀಪ್ ಕುಲಾಲ್ ಜೇಸಿ ಸಂಸ್ಥೆಯಲ್ಲಿ ಕೋಶಾಧಿಕಾರಿ ಆಗಿದ್ದು, ಹಿಂದೆ ಜ್ಯೂನಿಯರ್ ಜೇಸಿ ಅಧ್ಯಕ್ಷ ಆಗಿ ಉತ್ತಮ ಸಾಧನೆ ಮಾಡಿದ್ದರು.
ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು - ಪೀನ ಕನ್ನಡಿಯ ಉದ್ಘಾಟನೆ
.jpg)
Posted On: 10-07-2022 06:35PM
ಕಾಪು : 25 ನೇ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಇರುವ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ.) ಬಂಟಕಲ್ಲು ಇದರ ಮೊದಲ ಯೋಜನೆ, 92 ಹೇರೂರು ಗ್ರಾಮದಲ್ಲಿ ಪೀನ ಕನ್ನಡಿ ಹಾಕುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ದುರ್ಗಾ ಮೆಟಲ್ ವರ್ಕ್ಸ್ ನ ಮಾಲೀಕರಾದ ಅನಿಲ್ ಕಲ್ಲುಗುಡ್ಡೆ ಇವರು ನೆರವೇರಿಸಿದರು.
ಆಳವಾದ ತಿರುವು ಈ ರಸ್ತೆಯಲ್ಲಿ ಇರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಆದುದರಿಂದ ಮಜೂರು ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಅವರ ಪ್ರಸ್ತಾವನೆಯ ಮೂಲಕ, ಶ್ರೀ ದುರ್ಗಾ ಮೆಟಲ್ ವರ್ಕ್ಸ್ ಅವರ ಪ್ರಾಯೋಜತ್ವ ದಲ್ಲಿ, ಈ ಯೋಜನೆಯನ್ನು ಬಂಟಕಲ್ಲು ರಿಕ್ಷಾ ಚಾಲಕರು ಕೈಗೆತ್ತಿಕೊಂಡಿದ್ದಾರೆ.
ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಈ ಸಂಘದ 25 ನೆ ವಾರ್ಷಿಕೋತ್ಸವ ದ ಪ್ರಯುಕ್ತ, ಈ ವರ್ಷದಲ್ಲಿ ಸುಮಾರು 25 ಕಾರ್ಯಕ್ರಮಗಳನ್ನ ಹಮ್ಮಿ ಕೊಳ್ಳುವ ಯೋಜನೆ ಮಾಡಿದ್ಧೇವೆ ಎಂದು ಅಧ್ಯಕ್ಷರು ತಿಳಿಸಿದರು. ಈ ಸಂದರ್ಭ ಸ್ಥಳೀಯರ ಸಹಕಾರವನ್ನು ಅವರು ಕೋರಿದರು.
ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿ ರಾಘವೇಂದ್ರ, ಮುದ್ದು ಮೂಲ್ಯ, ಸುರೇಶ್ ಕಲ್ಲುಗುಡ್ಡೆ, ನವೀನ್, ಸುರೇಶ್ ರಾವ್, ಅನಿಲ್ ಜಾನ್ಸನ್, ರಾಜೇಶ್ ಕುಂಜ ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಸ್ವಾಗತಿಸಿದರು. ವಿಜಯ್ ಧೀರಜ್ ಕಾರ್ಯಕ್ರಮ ನಿರೂಪಿಸಿದರು. ಶಿರ್ವ ಪಂಚಾಯತ್ ಸದಸ್ಯ ಸತೀಶ್ ಅರಸಿಕಟ್ಟೆ ವಂದಿಸಿದರು.
ಪ್ರತಿಭೆಗಳನ್ನು ಬರಹದ ಮೂಲಕ ಅನಾವರಣಗೊಳಿಸಿದ ಬರಹಗಾರ, ಕಲಾ ಸಂಘಟಕ - ಪ್ರಭಾಕರ ಬೆಳುವಾಯಿ

Posted On: 10-07-2022 03:56PM
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಲಾಡಿ ಮನೆ ದಿ. ಬಾಬು ಪೂಜಾರಿ ಹಾಗೂ ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನಮನೆ ಗೋಪಿ ಪೂಜಾರಿ ದಂಪತಿಗಳ ಮಗನಾಗಿರುವ ಪ್ರಭಾಕರ ಇವರು ಜೀವನಕ್ಕಾಗಿ ಮುಂಬೈ ನಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದರು ಆ ಬಿಡುವಿಲ್ಲದ ಜೀವನದ ನಡುವೆಯೂ ತನ್ನಲ್ಲಿ ಇರುವ ಪ್ರತಿಭೆನ ಬೆಳೆಸಿದ ಉತ್ಸಾಹಿ ಯುವ ಬರಹಗಾರ ಪ್ರಭಾಕರ್ ಬೆಳುವಾಯಿ. ವ್ಯಕ್ತಿ ಪರಿಚಯ, ನಾಟಕ ವಿಮರ್ಶೆ, ಕಥೆ, ಕವನ, ವೈಚಾರಿಕ ಲೇಖನಗಳ ಮೂಲಕ ಪರಿಚಯವಾದರು.

ತೆರೆಯ ಮರೆಯಲ್ಲಿ ಇರುವ ಮುಂಬೈ ಹಾಗೂ ತನ್ನ ತವರೂರಾದ ತುಳುನಾಡಿನ ಯುವ ಪ್ರತಿಭೆಗಳ ಪರಿಚಯಿಸುವುದರ ಜೊತೆಗೆ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟ ಒಬ್ಬ ಕಲಾ ಪೋಷಕ. ಅದೆಷ್ಟೋ ಸಾಹಿತಿಗಳು, ಕಲಾವಿದರು, ಕಲಾ ಪೋಷಕರು, ಸಮಾಜಸೇವಕರು, ವೀರ ಯೋಧರನ್ನೂ ಗುರುತಿಸಿ ಸನ್ಮಾನಿಸಿದ ಹೆಗ್ಗಳಿಕೆ ಇವರದು.

ಕಳೆದ 17 ವರ್ಷಗಳ ಹಿಂದೆ ನಮನ ಫ್ರೆಂಡ್ಸ್ ಮುಂಬಯಿ ಎಂಬ ಸಂಘ ಸಂಸ್ಥೆಯ ಮೂಲಕ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಇವರದು. ಹಾಗೆಯೇ ಅನೇಕ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಟ್ಟು. ಅನೇಕ ಸಂಘ ಸಂಸ್ಥೆಗಳಲ್ಲಿ ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡ ನಮ್ಮ ತುಳುನಾಡಿನ ಹೆಮ್ಮೆಯ ಯುವ ಮಾಣಿಕ್ಯ. ಅಷ್ಟು ಮಾತ್ರ ಅಲ್ಲದೆ 2018 ರಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಮಿಸ್ಟರ್ ಅಂಡ್ ಮಿಸ್ ಕರಾವಳಿ ಹಾಗೂ 2019 ರಲ್ಲಿ ಪುಣೆಯಲ್ಲಿ ಸೂರ್ಯ ಪೂಜಾರಿ ಇವರ ನೇತೃತ್ವದ ನಮ್ಮ ತುಳುವೆರ್ ಆಯೋಜನೆಯ ಮಿಸ್ಟರ್ ಅಂಡ್ ಮಿಸ್ ಫೇಸ್ ಆಫ್ ಕರ್ನಾಟಕ ಸೌಂದರ್ಯ ಸ್ಪರ್ಧೆಯ ಯಶಸ್ವಿನ ಮೂಲ ರೂವಾರಿ ಇವರೇ ಆಗಿದ್ದರು. ಉತ್ಸಾಹಿ ಯುವ ಬರಹಗಾರನ ಈ ಪ್ರತಿಬೆಗೆ ಅನೇಕ ಪ್ರಶಸ್ತಿ ಪುರಸ್ಕಾರ ದೊರಕಿದೆ. ಅಶ್ವಿನಿ ಪ್ರಕಾಶನ ಗದಗ ಆಯೋಜಿಸಿದ ಅಖಿಲ ಕರ್ನಾಟಕ ಸ್ವರಚಿತ ಕವನ ಸ್ವರ್ಧೆಯಲ್ಲಿ ಭಾಗವಹಿಸಿ ಬಹುಮಾನ ಮುಡಿಗೇರಿಸಿಕೊಂಡಿರುವುದು ಮಾತ್ರವಲ್ಲದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿಮಾನಕ್ಕೆ "ಸುಪ್ತ ಪ್ರತಿಭೆಗಳ ಪ್ರಕಟಕ", "ಪ್ರತಿಭಾ ವಲ್ಲಭ" ಹಾಗೆಯೇ ರಂಗ್ ಮಂಚ್ ಕಾಮ್ಗರ್ ಸಂಸ್ಥೆ(ರಿ.) ಆಶ್ರಯದಲ್ಲಿ ಜರುಗಿದ ಅನಘಾ ಇವೆಂಟ್ ಮತ್ತು ಡಿ. ಎಸ್ ಎಂಟರ್ಟೈನ್ಮೆಂಟ್ ಹಿಂದಿ ಮತ್ತು ಮರಾಠಿ ಸಿನಿಮಾ ತಂತ್ರಜ್ಞರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ "ಬ್ಯಾಕ್ ಸ್ಟೇಜ್ ಹೀರೊ-2019" ಹೀಗೆ ಅನೇಕ ಪ್ರಶಸ್ತಿ ಬಿರುದುಗಳು ದೊರಕಿದೆ ಇವರ ನಿಸ್ವಾರ್ಥ ಸೇವೆಗೆ. 2020 ಯಲ್ಲಿ ನಮನ ಫ್ರೆಂಡ್ಸ್ ಮುಂಬೈ ಇದರ 15 ನೇ ವಾರ್ಷಿಕೋತ್ಸವದ ಸಂಭ್ರಮ ಆಚರಣೆಯಲ್ಲಿ ರಾಷ್ಟ್ರ ಪ್ರೇಮ, ಮಾತೃ ಪ್ರೇಮ, ಕಲಾ ಪಪ್ರೇಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಇವರದು.

ಹೀಗೆ ತನ್ನ ಕಲಾಪ್ರೇಮದಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಹ ಸಿಗುವಂತಾಗಲಿ ದೇವರು ಇವರಿಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಇನ್ನಷ್ಟು ಒಳ್ಳೆಯ ಅವಕಾಶ ಸಿಗಲಿ. ಹಾಗೆಯೇ ಇವರು ನಂಬಿರುವ ನಾರಾಯಣ ಗುರು,ಕೋಟಿ ಚೆನ್ನಯ್ಯರ,ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತುಲ್ ,ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ವಿಶ್ವನಾಥ ಕ್ಷೇತ್ರ ಕಟಪಾಡಿ ದೇವರ ಅನುಗ್ರಹ ಸದಾ ಇವರ ಮೇಲಿರಲಿ. ಶುಭವಾಗಲಿ. ಬರಹ : ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್ )
ಪಡುಬಿದ್ರಿ : ಕಡಲ್ಕೊರೆತ ಸ್ಥಳಕ್ಕೆ ಶಾಸಕರ ಭೇಟಿ

Posted On: 10-07-2022 01:19PM
ಪಡುಬಿದ್ರಿ : ಕಾಪು ತಾಲೂಕಿನ ಹಲವೆಡೆ ಕಡಲ್ಕೊರೆತ ಉಂಟಾಗಿದ್ದು ಆ ಸ್ಥಳಗಳಿಗೆ ಮತ್ತು ಪಡುಬಿದ್ರಿಯಲ್ಲಿ ಕಡಲ್ಕೊರೆತಕ್ಕೆ ಒಳಗಾದ ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿದರು.
ಈ ಸಂದರ್ಭ ಬಂದರು ಹಾಗೂ ಮೀನುಗಾರಿಕಾ ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್, ಸಹಾಯಕ ಇಂಜಿನಿಯರ್ ಜಯರಾಜ್, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಉಪಾಧ್ಯಕ್ಷರಾದ ಯಶೋಧ ಪೂಜಾರಿ, ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಪಂಚಾಯತ್ ಸದಸ್ಯರುಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
'ಮುಖ್ಯಮಂತ್ರಿ ನಮ್ಮ ಮಾತು ಕೇಳುತ್ತಿಲ್ಲ' ಎಂದಾದರೆ ರಾಜೀನಾಮೆ ನೀಡಿ - ಡಾ.ಪ್ರಣಾವನಂದ ಸ್ವಾಮೀಜಿಯಿಂದ ಸಚಿವದ್ವಯರಿಗೆ ತಾಕೀತು

Posted On: 10-07-2022 12:28PM
ಮಂಗಳೂರು : ನಾರಾಯಣ ಗುರು ನಿಗಮ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟ ವಿಚಾರ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಬಿಲ್ಲವ ಸಮುದಾಯವನ್ನು ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ಸ್ಥಳೀಯ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಅವರನ್ನು ಕೇಳಿದರೆ, 'ಮುಖ್ಯಮಂತ್ರಿ ನಮ್ಮ ಮಾತು ಕೇಳುತ್ತಿಲ್ಲ' ಎನ್ನುತ್ತಿದ್ದಾರೆ. ಹಾಗಿದ್ದರೆ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದು ಅವರಿಗೆ ಹೇಳಿದ್ದೇನೆ. ಆದರೆ ಸ್ಪಂದನ ಸಿಗುತ್ತಿಲ್ಲ. ಬದಲಾಗಿ ಅವರು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮುದಾಯದ ಜನಪ್ರತಿನಿಧಿಗಳಾಗಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಲದ ರಾಷ್ಟ್ರೀಯ ಅಧ್ಯಕ್ಷ, ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಡಾ.ಪ್ರಣಾವನಂದ ಸ್ವಾಮೀಜಿ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕುಲಕಸುಬು ನಮ್ಮ ಹಕ್ಕು' ಎಂಬ ಘೋಷಣೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಚಿಂಚೋಳಿಯಿಂದ ಪಾದಯಾತ್ರೆ ನಡೆಸಿದೆ. ಆ ಸಂದರ್ಭದಲ್ಲೂ ರಾಜ್ಯದಲ್ಲಿ ಆಡಳಿತ ನಡೆಸುವ ಸಮುದಾಯ ಜನಪ್ರತಿನಿಧಿಗಳಾಗಿರುವವರು ಯಾರೂ ಸಹಕಾರ ನೀಡಿಲ್ಲ. ಇತ್ತೀಚೆಗೆ ಆಮರಣಾಂತ ಉಪವಾಸ ಕೈಗೊಂಡಿದ್ದೆ. ಆ ಸಂದರ್ಭ ಕೆಲ ಉತ್ತರ ಭಾಗದ ಜನಪ್ರತಿನಿಧಿಗಳು ನನ್ನನ್ನು ಭೇಟಿಯಾಗಿ ಜುಲೈ 5ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಅವರ ಒಂದು ಫೋನ್ ಕರೆಯೂ ಇಲ್ಲ. ಹಾಗಾಗಿ ಜುಲೈ 13ರಿಂದ ಉತ್ತರ ಕರ್ನಾಟಕದ 9 ಜನ ಜನಪ್ರತಿನಿಧಿಗಳ ಮನೆ ಎದುರು ಧರಣಿ ಕೂರಲಾಗುವುದು. ನಿರ್ಲಜ್ಜ ರಾಜಕಾರಣಿಗಳಿಗೆ ನಮ್ಮ ಸಮುದಾಯದ ಶಕ್ತಿಯನ್ನು ಮುಂದಿನ ದಿನಗಳಲ್ಲಿ ತೋರಿಸಲಿದ್ದೇವೆ ಎಂದು ಪ್ರಣಾವನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪ್ರತಿ ಮಾತು ಮಾತಿಗೂ ನಾರಾಯಣಗುರುಗಳ ನಾಲ್ಕು ಶಾಲೆ ಕಟ್ಟಿಸಿದ್ದೇವೆ ಎಂದು ಇಲ್ಲಿನ ಜನಪ್ರತಿನಿಧಿಗಳಾದ ಸುನೀಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಭಾಷಣದಲ್ಲಿ ಹೇಳುತ್ತಿರುತ್ತಾರೆ. ಇದು ಮೂಗಿಗೆ ತುಪ್ಪ ಸವರುವ ಯತ್ನವಷ್ಟೆ. ಕೋಟ ಶ್ರೀನಿವಾಸ ಪೂಜಾರಿ ಮೇಲೆ ಸಾಕಷ್ಟು ಗೌರವ ಇದೆ. ಆದರೆ ಸಮುದಾಯದ ನೋವಿನ ಎದುರು ಅವರ ಸರಳ ಸಜ್ಜನಿಕೆ ಯಾವುದೇ ಉಪಯೋಗಕ್ಕೆ ಬಾರದು. ಹಾಗಾಗಿ ಮುಂದಿನ ದಿನಗಳಲ್ಲಿ ಯುವಕರಿಗೆ ರಾಜಕೀಯ ಪ್ರಬುದ್ಧತೆ ನೀಡುವ ಜಾಗೃತಿ ನೀಡುವಲ್ಲಿ ನಾವು ಕಾರ್ಯಾಚರಣೆ ಮಾಡಲಿದ್ದೇವೆ ಎಂದು ಅವರು ಹೇಳಿದರು. ಪ್ರತಿಯೊಂದು ಸಮುದಾಯಕ್ಕೂ ನೋವು ಆದಾಗ ಅವರ ಸಮುದಾಯದ ನಾಯಕರು, ಜನಪ್ರತಿನಿಧಿಗಳು ಧ್ವನಿ ಎತ್ತಿ ಸರಕಾರದಿಂದ ಆಗಬೇಕಾದ್ದನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಸಮುದಾಯದ ಜನಪ್ರತಿನಿಧಿಗಳು ಮಾತ್ರ ಬಾಯಿ ಮುಚ್ಚಿ ಕುಳಿತಿದ್ದಾರೆ. ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 20ರಷ್ಟಿರುವ ಬಿಲ್ಲವ ಸಮುದಾಯ ಕರಾವಳಿ ಭಾಗದಲ್ಲಿ ಚುನಾವಣೆಯಲ್ಲೂ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹಾಗಿರುವಾಗ ಮುಂದಿನ ದಿನಗಳಲ್ಲಿ ನಾವು ನಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದೇವೆ ಎಂದರು.
ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್‌ರವರು ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭ ವಿವಿಧ ಸಮುದಾಯಗಳಿಗೆ ಆದ ನೋವಿನ ಬಗ್ಗೆ ಮೌನವಾಗಿದ್ದರು. ಸಿಎಂ ಜತೆ ಚರ್ಚಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ. ಆದರೆ ಕಯ್ಯಾರ ಕಿಂಞಣ್ಣ ರೈ ಅವರ ವಿಷಯ ಪ್ರಸ್ತಾಪ ಆದಾಗ ಸಮುದಾಯದ ನಾಯಕರು ಧ್ವನಿ ಎತ್ತಿದಾಗ ಅವರ ಸಮುದಾಯದ ಮನೆಗೆ ತೆರಳಿ ಸಂತೈಸುವ ಕೆಲಸ ಮಾಡಿದ್ದಾರೆ. ಅವರು ಹಿಂದೂವಾದಿಯೋ, ಜಾತಿಯವಾದಿಯೋ ಎಂಬುದು ಇದರಲ್ಲೇ ಸಾಬೀತಾಗಿದೆ. ಅವರಿಗಿಂತ ಇನ್ನೋರ್ವ ಜಾತಿವಾದಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುತ್ವದ ಹೋರಾಟ ಕೇವಲ ಹಿಂದುಳಿದ ವರ್ಗ ಅಥವಾ ದಲಿತ ವರ್ಗಕ್ಕತೆ ಮಾತ್ರ ಸೀಮಿತವಾಗಿಲ್ಲ. ಆದರೆ ರಾಜಕಾರಣ ಹಿಂದುಳಿದ ವರ್ಗವನ್ನು ಹಿಂದುತ್ವಕ್ಕಾಗಿ ಬಳಸಿಕೊಂಡಿದೆ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಉಳಿದ ವರ್ಗಗಳು ಸಾಮಾಜಿಕ, ರಾಜಕೀಯ ನ್ಯಾಯ ಪಡೆಯುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಹಿಂದುಳಿದ ವರ್ಗ, ದಲಿತ ವರ್ಗವನ್ನು ತುಳಿಯಲು ಹೊರಟರೆ ಹಿಂದೂ ಸಮಾಜ ಸಾಯಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಹಾಗೂ ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಜೆ, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.
ಜನರಿಂದ ಜನರಿಗಾಗಿರುವ ಸಹಕಾರಿ ಬ್ಯಾಂಕುಗಳು ಸಾರ್ವಜನಿಕರ ಸೇವೆಗೆ ಸದಾ ಸಿದ್ಧ : ಡಾ| ಎಮ್.ಎನ್. ರಾಜೇಂದ್ರ ಕುಮಾರ್
 (1) (1).jpg)
Posted On: 10-07-2022 12:23PM
ಪಡುಬಿದ್ರಿ : ಸಹಕಾರಿ ಕ್ಷೇತ್ರದ ಬ್ಯಾಂಕುಗಳು ನಮ್ಮಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ಅದರಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಕೂಡ ಒಂದಾಗಿದೆ. ನಮ್ಮವರೇ ಇರುವ ಸಹಕಾರಿ ಬ್ಯಾಂಕುಗಳನ್ನು ಬೆಳೆಸಬೇಕಾಗಿದೆ. ಹೊರ ರಾಜ್ಯದವರಿಂದ ಇಂದು ರಾಷ್ಟ್ರೀಕೃತ ಬ್ಯಾಂಕುಗಳು ತುಂಬಿದೆ. ಇಂತಹ ನಿಟ್ಟಿನಲ್ಲಿ ನಮ್ಮ ಯುವಜನಾಂಗ ಬ್ಯಾಂಕಿಂಗ್ ಕ್ಷೇತ್ರದತ್ತ ಗಮನಹರಿಸಬೇಕಾಗಿದೆ ಎಂದು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು. ಅವರು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ) ಇದರ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನೆ, ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲೋಕಾರ್ಪಣೆಯ ನಂತರ ಪ್ರಧಾನ ಕಚೇರಿ ಸಹಕಾರ ಸಂಗಮ ಇಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು ಶೇ. 25 ಡಿವಿಡೆಂಟ್ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಬೆಳವಣಿಗೆಗೆ ಸಿಬ್ಬಂದಿ ವರ್ಗದ ಸೇವಾಮನೋಭಾವವೇ ಕಾರಣವಾಗಿದೆ. ಜನರಿಂದ ಜನರಿಗಾಗಿ ಇರುವ ಬ್ಯಾಂಕ್ ಸಹಕಾರಿ ಬ್ಯಾಂಕುಗಳು. ಜನಸಾಮಾನ್ಯರ ಆರ್ಥಿಕ ಸದೃಢತೆಗೆ ಸಹಕಾರಿ ಬ್ಯಾಂಕುಗಳು ಸಹಕಾರಿ. ಉಳ್ಳವರಿಗೆ ಮಣೆ ಹಾಕುವ, ನಮ್ಮ ಭಾಷೆ, ಸಂಸ್ಕೃತಿ ತಿಳಿಯದ ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳು ಸಾರ್ವಜನಿಕರ ಸೇವೆಗೆ ಸದಾ ಸಿದ್ಧವಾಗಿದೆ. ಈ ಸಂದರ್ಭ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 5 ಲಕ್ಷ ನೀಡುವುದಾಗಿ ಹೇಳಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ ಗ್ರಾಹಕರ ಬಗೆಗೆ ಇರುವ ಕಾಳಜಿಯನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಇತರ ಬ್ಯಾಂಕುಗಳು ಕಲಿಯಬೇಕಾಗಿದೆ. ರೈತರಿಗೆ ಬೇಕಾದ ಕೃಷಿ ಉಪಕರಣ, ಹಡಿಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಬೇಕಾದ ಅನಿವಾರ್ಯತೆಯಿದೆ. ಇದು ಸಹಕಾರಿ ಬ್ಯಾಂಕುಗಳಿಂದ ಮಾತ್ರ ಸಾಧ್ಯ. ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದಿಂದಾಗಿ ಸುಮಾರು 50,000 ಕುಟುಂಬ ವರ್ಗಗಳು, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ವಿವಿಧ ಸೇವೆಗಳ ಉದ್ಘಾಟನೆ, ಲೋಕಾರ್ಪಣೆ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯನ್ನು, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕೃಷಿ ಸಾಮಾಗ್ರಿಗಳ ಮಳಿಗೆ, ಉಡುಪಿ ಶಾಸಕರಾದ ರಘುಪತಿ ಭಟ್ ಭತ್ತದ ಕೃಷಿಗೆ ಸಹಾಯಧನ ವಿತರಣೆಯನ್ನು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಚಿನ್ನಾಭರಣ ಶುದ್ಧತೆ ಪರೀಕ್ಷಿಸುವ ಯಂತ್ರ ಉದ್ಘಾಟಿಸಿದರು. ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಲೋಕಾರ್ಪಣೆ ಮಾಡಿದರು. ಸನ್ಮಾನ, ಸಹಾಯ ಧನ ವಿತರಣೆ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ| ಎಮ್.ಎನ್. ರಾಜೇಂದ್ರ ಕುಮಾರ್, ಕಾಪು ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಸಹಕಾರಿ ರತ್ನ ಪುರಸ್ಕೃತ ಚಿತ್ತರಂಜನ್ ಬೋಳಾರ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿವೃತ್ತ ಉದ್ಯೋಗಿ ರವೀಂದ್ರ ರಾವ್, ಪಲಿಮಾರು ಪಂಚಾಯತ್ ತ್ಯಾಜ್ಯ ವಿಲೇವಾರಿ ವಾಹನ ಚಾಲಕ ಮಹೇಶ್, ಗುತ್ತಿಗೆದಾರರಾದ ಪ್ರಣಾಮ್ ಜಿ. ಶೆಟ್ಟಿ, ಮತ್ತು ಮೊಹಮ್ಮದ್ ಇಮ್ತಿಯಾಜ್, ಚಿನ್ನಾಭರಣ ಶುದ್ಧತೆ ಯಂತ್ರದ ಪ್ರದೀಪ್ ಕುಮಾರ್, ತಂತ್ರಾಂಶ ತಜ್ಞ ವೀರೇಂದ್ರ ರಾವ್ ಅವರನ್ನು ಸನ್ಮಾನಿಸಲಾಯಿತು. ಭತ್ತದ ಕೃಷಿಗೆ ಸಹಾಯಧನ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ಬಂಟಕಲ್ ರಾಮಕೃಷ್ಣ ಶರ್ಮ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಪ್ರಭು, ಎರ್ಮಾಳು ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ನಿರ್ದೇಶಕರಾದ ವೈ.ಜಿ, ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ., ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್.ಅಮೀನ್, ಕುಸುಮಾ ಎಂ. ಕರ್ಕೇರ, ಮತ್ತು ಕಾಂಚನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಚಿತಾ ಪಿ.ಎಚ್., ಶಾಖಾ ವ್ಯವಸ್ಥಾಪಕಿ ಅನಸೂಯಾ ಶೆಣೈ ಉಪಸ್ಥಿತರಿದ್ದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ವಂದಿಸಿದರು. ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು.