Updated News From Kaup

92 ಹೇರೂರು : ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಗಾರ

Posted On: 04-07-2022 08:48PM

ಕಾಪು, ಜು.4 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಅಂಗನವಾಡಿ ಕೇಂದ್ರ 92 ಹೇರೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ 92 ಹೇರೂರು ಗ್ರಾಮದಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಸದಸ್ಯರಾದ ಮಂಜುಳ ಗಣೇಶ್ ನೆರವೇರಿಸಿ ಇಲಾಖೆಯಲ್ಲಿ ಸಿಗುವ ಮಾಹಿತಿಯನ್ನು ಹಾಗೂ ಸೇವೆಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಇವರು ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುವುದು. ಇದರ ಅಂಗವಾಗಿ ಜೂನ್ 27 ರಿಂದ ಜುಲೈ 10 ರವರೆಗೆ ಕುಟುಂಬ ಕಲ್ಯಾಣದ ಮಹತ್ವ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಸೇವೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಜೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಮಾತನಾಡಿ ಕುಟುಂಬ ಯೋಜನೆ ಅನುಸರಿಸುವುದರಿಂದ ಆದರ್ಶ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮುದಾಯ ಆರೋಗ್ಯ ಅಧಿಕಾರಿ ಡಯಾನ, ಆಶಾ ಕಾರ್ಯಕರ್ತೆ ವಿನೋದ, ಅಂಗನವಾಡಿ ಶಿಕ್ಷಕಿ ಬಬಿತ, ಸಹಾಯಕಿ ಪವಿತ್ರ, ಮಕ್ಕಳ ಪೋಷಕರು, ಗರ್ಭಿಣಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧಾ ನಿರೂಪಿಸಿ, ವಂದಿಸಿದರು.

ಕಲ್ಲುಗುಡ್ಡೆ ಕೊರಗಜ್ಜ ಸೇವಾಸಮಿತಿ ಅಧ್ಯಕ್ಷರಾಗಿ ಸುಧೀರ್ ಸೋನು ಪೂಜಾರಿ ಆಯ್ಕೆ

Posted On: 04-07-2022 08:28PM

ಕಾಪು : ಕೊರಗಜ್ಜ ಸೇವಾ ಸಮಿತಿ ಕಲ್ಲುಗುಡ್ಡೆ ಇದರ 2022-2024ನೇ ಸಾಲಿನ ಅಧ್ಯಕ್ಷರಾಗಿ ಸುಧೀರ್ ಸೋನು ಪೂಜಾರಿ, ಕಾರ್ಯದರ್ಶಿಯಾಗಿ ಅರವಿಂದ್ ಕೋಟ್ಯಾನ್ ಮತ್ತು ಕೋಶಾಧಿಕಾರಿಯಾಗಿ ಮನೋಹರ್ ಕಲ್ಲುಗುಡ್ಡೆ ಹಾಗೂ ಪದಾಧಿಕಾರಿಗಳನ್ನು ಜೂನ್ 29ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇವರುಗಳು ಎರಡು ವರ್ಷದವರೆಗೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೊರಗಜ್ಜ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪಡುಬಿದ್ರಿ : ರೋಟರಿ ಕ್ಲಬ್ ಪದಗ್ರಹಣ ; ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಗೀತಾ ಅರುಣ್

Posted On: 04-07-2022 07:30PM

ಪಡುಬಿದ್ರಿ : ಸ್ನೇಹ ಮತ್ತು ಏಕತೆಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಆರಂಭಗೊಂಡಿರುವ ರೋಟರಿಯು ಮುಂದೆ ಸೇವೆ ಮತ್ತು ವಿಭಿನ್ನತೆಯಲ್ಲಿ ಏಕತೆಯೊಂದಿಗೆ ಒಗ್ಗೂಡಿ ಮುನ್ನಡೆಯುತ್ತಿದೆ ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲೆ ಡಾ| ಪ್ರೀತಿ ಮೋಹನ್ ಹೇಳಿದರು. ಅವರು ಶನಿವಾರ ಪಡುಬಿದ್ರಿಯ ರೋಟರಿ ಕ್ಲಬ್ ಪಡುಬಿದ್ರಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾದ ಗೀತಾ ಅರುಣ್ ಅವರ ಪದಗ್ರಹಣ ಸಮಾರಂಭದ ಪದಪ್ರಧಾನ ಅಧಿಕಾರಿಯಾಗಿ ಮಾತನಾಡಿದ ಅವರು, ಸಮುದಾಯದ ಅವಶ್ಯಕತೆಗಳನ್ನು ಗ್ರಹಿಸಿ ಜನಸೇವೆಗೈಯ್ಯವುದೇ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಸ್ಪಂದನಾ ಗೃಹಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತಾಡಿದ ವಲಯ ಸೇನಾನಿ ವಿಘ್ನೇಶ್ ಶೆಣೈ ನೂತನ ಪಡುಬಿದ್ರಿ ರೋಟರಿ ತಂಡಕ್ಕೆ ಶುಭ ಹಾರೈಸಿದರು. ನೂತನ ಅಧ್ಯಕ್ಷೆಯಾಗಿ ಪದಗ್ರಹಣವನ್ನು ಮಾಡಿದ ಗೀತಾ ಅರುಣ್ ತಮ್ಮ ತಂಡದ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಪಡುಬಿದ್ರಿ ರೋಟರಿ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆಯನ್ನು ವಹಿಸಿ ತನ್ನ ಒಂದು ವರ್ಷದ ಅವಧಿಯಲ್ಲಿ ತನಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಇಂಟರ್ಯಾಕ್ಟ್ ಕ್ಲಬ್ಬಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ದಿ| ವೈ. ಹಿರಿಯಣ್ಣ ಮತ್ತು ದಿ| ಮೀರಾ ಹಿರಿಯಣ್ಣ ಸ್ಮಾರಕ ರೋಲಿಂಗ್ ಶೀಲ್ಡನ್ನು ಎರ್ಮಾಳು ಬಡಾ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗವು ತನ್ನದಾಗಿಸಿಕೊಂಡಿತು. ಪ್ರತಿಭಾವಂತ ಯುವ ಸಾಧಕರಾಗಿರುವ ರೂಪಾ ವಸುಂಧರ ಆಚಾರ್ಯ, ಸ್ವಾತಿ ಗಣೇಶ್, ವೈಷ್ಣವಿ ರಾವ್, ಸುಶ್ಮಿತಾ ದೇವಾಡಿಗ, ಧನುಷ್ ಸಾಲ್ಯಾನ್, ಯಶಸ್ವಿನಿ ಭಂಡಾರಿ, ಶ್ಲಾಘ ಸಾಲಿಗ್ರಾಮ ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಗೆ ನೂತನ ಸದಸ್ಯರನ್ನಾಗಿ ರಂಜನಿ, ಸುನಿಲ್ ಕುಮಾರ್, ಗಣೇಶ್ ಶೆಟ್ಟಿಗಾರ್ ಹಾಗೂ ದಿನೇಶ್ ಪೂಜಾರಿ ಅವರನ್ನು ಅತಿಥಿಗಳು ಸೇರ್ಪಡೆಗೊಳಿಸಿದರು.

ಮಹಮ್ಮದ್ ನಿಯಾಜ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಬಿ. ಎಸ್. ಆಚಾರ್ಯ ವರದಿ ವಾಚಿಸಿದರು. ಯಶೋದಾ ಹಾಗೂ ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು

ಉದ್ಯಾವರ : ಮಳೆಗಾಲದ ಸಮಸ್ಯೆ - ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದಿಂದ ಪಂಚಾಯತ್ಗೆ ಮನವಿ

Posted On: 04-07-2022 07:01PM

ಉದ್ಯಾವರ : ಇಲ್ಲಿನ ಕುಟುಂಬವೊಂದರ ಹಿರಿಯ ನಾಗರಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಮಳೆಗಾಲದಲ್ಲಿ ತುಂಬಿ ಹರಿಯುವ ನೀರಿನಿಂದ ನಡೆದಾಡಲು ಆಗುವ ಅಡೆತಡೆಗಳ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉದ್ಯಾವರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು.

ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವ ನೀರಿನಿಂದ ನಡೆದಾಡಲು ಕಷ್ಟಕರ ಜೀವನವಾಗಿದೆ. ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಮಕ್ಕಳು ಹಾಗೂ ಹಿರಿಯ ನಾಗರಿಕರ ಪ್ರಾಣಕ್ಕೆ ಕುತ್ತು ತರುವ ಹಾಗೂ ರಾತ್ರಿ ಹೊತ್ತಿನಲ್ಲಿ ವಿಷ ಜಂತುಗಳ ಆಟ ಹೆಚ್ಚಾಗಿರುವುದರಿಂದ ಪ್ರಾಣಕ್ಕೆ ಅಪಾಯ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಲ್ಲಿ ಓಡಾಡುವುದರಿಂದ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ರೋಗ ಬರುವಂತಹ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಸ್ಥಳೀಯ ಪಂಚಾಯತಿ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ಎರಡು ವರ್ಷದ ಹಿಂದೆ ಗಮನಕ್ಕೆ ತಂದಿರುತ್ತೇವೆ. ಆದರೆ ಇದುವರೆಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಸ್ಥಳಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಸಮಸ್ಯೆಗೊಳಗಾದ ಕುಟುಂಬ ವರ್ಗ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ದೈವಾರಾಧಕರಿಗೆ ವಿಶೇಷ ಪಿಂಚಣಿ : ಜಯನ್ ಮಲ್ಪೆ ಆಗ್ರಹ

Posted On: 04-07-2022 05:46PM

ಶಿರ್ವ : ಜೀವನವಿಡೀ ದೈವಾರಾಧನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ದೈವಾರಾಧಕರಿಗೆ ಇಳಿ ವಯಸ್ಸಿನಲ್ಲಿ ಸರಕಾರ ವಿಶೇಷ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ದಲಿತ ಚಿಂತಕ, ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಜು. ೩ರಂದು ಮೂಡುಬೆಳ್ಳೆ ಕಾಡಬೆಟ್ಟು ಪಂಜುರ್ಲಿ ದೈವಸ್ಥಾನದ ಆವರಣದಲ್ಲಿ ಪಾಣಾರಾ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬೆಳ್ಳೆ ಘಟಕ ಮತ್ತು ಗಾಂಧೀ ವಿಚಾರ ವೇದಿಕೆ ಉಡುಪಿ ಜಿಲ್ಲಾ ಘಟಕ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 'ಸನ್ಮತಿ' ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಖ್ಯಾತ ಮನೋವೈದ್ಯರಾದ ಡಾ. ಪಿವಿ ಭಂಡಾರಿ ಮಾತನಾಡಿ, ಹೆಚ್ಚುತ್ತಿರುವ ಕೀಳರಿಮೆಯ ಮನಸ್ಥಿತಿಗೆ ಜನರು ಪರಸ್ಪರ ಹೋಲಿಕೆ ಮಾಡಿಕೊಳ್ಳುತ್ತಿರುವುದೇ ಕಾರಣವಾಗಿದ್ದು, ವ್ಯಕ್ತಿಯು ತನ್ನನ್ನು ಇರುವಂತೆ ಸ್ವೀಕರಿಸಿ ಮುನ್ನಡೆದಾಗ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹೇಳಿದರು. ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಕಾನೂನು ಅರಿವು ಮೂಡಿಸಿದರು. ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಶುಭಾಶಂಸನೆಗೈದರು. ಪಾಣಾರ ಸಂಘದ ಹಿರಿಯ ದೈವಾರಾಧಕ ಶಿವ ಪಾಣಾರ ಶಿರ್ವ ಅವರನ್ನು ಸಮ್ಮಾನಿಸಲಾಯಿತು.

ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣೇಶ ಗಂಗೊಳ್ಳಿ ಅವರು ಗೀತ ಗಾಯನ ನಡೆಸಿಕೊಟ್ಟರು. ಸುದೀಪ್ ಭೀಮವಾಣಿ ಮೊಳಗಿಸಿದರು. ಪಾಣಾರ ಸಂಘದ ಗೌರವಾಧ್ಯಕ್ಷ ಸುಧಾಕರ ಪಾಣಾರ, ಪಂಜುರ್ಲಿ ದೈವಸ್ಥಾನದ ಪರಿಚಾರಕ ಶೇಖರ ಪಾಣಾರ್, ಉದ್ಯಮಿ ಎ.ಕೆ. ಆಳ್ವಾ, ಸಾಹಿತಿ ಆರ್.ಡಿ. ಪಾಂಬೂರು, ಗಾಂಧಿ ವಿಚಾರ ವೇದಿಕೆಯ ಕಟೀಲು ಸೀತ್ಲ ರಂಗನಾಥ ರಾವ್ ಉಪಸ್ಥಿತರಿದ್ದರು.

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಸ್ವಾಗತಿಸಿ ನಿರೂಪಿಸಿದರು. ಗಾಂಧಿ ವಿಚಾರ ವೇದಿಕೆ ಉಡುಪಿ ಘಟಕದ ಅಧ್ಯಕ್ಷೆ ಸೌಜನ್ಯಾ ಶೆಟ್ಟಿ ವಂದಿಸಿದರು.

ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಕೊಂಡ ಸಿನಿ ಶೆಟ್ಟಿ

Posted On: 04-07-2022 12:17PM

ಉಡುಪಿ : ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ವಿ.ಎಲ್.ಸಿ.ಸಿ ಫೆಮಿನಾ ಇಂಡಿಯಾ 2022 ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಕಾಪು ತಾಲೂಕಿನ ಇನ್ನಂಜೆಯ ಮಡುಂಬುವಿನ ಸಿನಿ ಶೆಟ್ಟಿ ಅವರ ಮಿಸ್ ಇಂಡಿಯಾ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರು ಮುಂಬೈಯ ನಿವಾಸಿಯಾಗಿದ್ದು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ್ ಕೋರ್ಸ್ ನ ವ್ಯಾಸಂಗ ನಡೆಸುತ್ತಿರುವ ಇವರು. 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇವರು ಕಾಪು ತಾಲೂಕಿನ ಇನ್ನಂಜೆಯ ಮಡುಂಬುವಿನ ಉದ್ಯಮಿ ಸದಾನಂದ ಶೆಟ್ಟಿ ಮತ್ತು ಹೇಮ ಶೆಟ್ಟಿ ದಂಪತಿಗಳ ಪುತ್ರಿ.

ಕಕ್ಕುಂಜೆ : ಕಳವುಗೈದವರ ಬಂಧನ

Posted On: 03-07-2022 05:33PM

ಉಡುಪಿ : ತಾಲೂಕಿನ ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆ ಎಂಬಲ್ಲಿ 9 ಪವನ್ ತೂಕದ ರೂಪಾಯಿ 3,15,000 ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಈ ಪ್ರಕರಣವಾಗಿತ್ತು. ಮನೆಯೊಡತಿ ಪ್ರಮೀಳ ಬಂಗೇರರವರು ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

ಪ್ರಕರಣದಲ್ಲಿ ಆರೋಪಿಗಳಾದ ಕಕ್ಕುಂಜೆ ಗ್ರಾಮದ ಸಂತೋಷ್ ಪೂಜಾರಿ (36) ಮತ್ತು ಕಟಪಾಡಿ ಮಟ್ಟುವಿನ ರಾಕೇಶ್ ಪಾಲನ್ (37)ನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಎನ್‌. ವಿಷ್ಣುವರ್ಧನ್‌ ಆದೇಶದಂತೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಿದ್ದಲಿಂಗಪ್ಪ, ಡಿವೈಎಸ್‌ಪಿ ಸುಧಾಕರ ಸದಾನಂದ ನಾಯ್ಕ್ ನಿರ್ದೇರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿರವರ ಮಾರ್ಗದರ್ಶನದಂತೆ ಪಿ.ಎಸ್‌.ಐ ಮಹೇಶ್ ಟಿ.ಎಮ್, ಪ್ರಸಾದ್‌ಕುಮಾರ್‌ ಕೆ. ಪಿ.ಎಸ್‌.ಐ ತನಿಖೆ, ಪಿ.ಎಸ್.ಐ ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಅರುಣ್ , ಸತೀಶ್ ಬೆಳ್ಳೆ , ಕಿರಣ್ ರವರು ಸಹಕರಿಸಿದ್ದರು.

ಯುವಸೇನೆ ಮಡುಂಬು ನೂತನ ಅಧ್ಯಕ್ಷರಾಗಿ ಸುನಿಲ್ ಸಾಲಿಯಾನ್

Posted On: 03-07-2022 04:38PM

ಇನ್ನಂಜೆ : ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ವಲಯದಲ್ಲಿ ತನ್ನಿಂದ ಆದ ಸೇವೆಯನ್ನು ಮಾಡಿಕೊಂಡು ಇತರ ಸಂಸ್ಥೆಗಳಿಗೆ ಮಾದರಿಯಾಗಿರುವ ಯುವಸೇನೆ ಮಡುಂಬು (Y. S. M Friends) ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್ ಸಾಲಿಯಾನ್ , ಕಾರ್ಯದರ್ಶಿಯಾಗಿ ಸಚಿನ್ ಸಾಲಿಯಾನ್ ಹಾಗೂ ಕೋಶಾಧಿಕಾರಿಯಾಗಿ ಪೃಥ್ವಿರಾಜ್ ಶೆಟ್ಟಿ ಇವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು : ಪ್ರವಾಹದ ಕಾರಣ ದೋಣಿಯನ್ನು ದಡದ ಮೇಲೆತ್ತುವಾಗ ನೀರಿನ‌ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ

Posted On: 03-07-2022 08:04AM

ಮಂಗಳೂರು : ಅರ್ಕುಳ ಗ್ರಾಮದ ಶಶಿರಾಜ್ ಧಕ್ಕೆ ಯಲ್ಲಿ ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಉಪಯೋಗಿಸುತ್ತಿದ್ದ ದೋಣಿಯನ್ನು ಪ್ರವಾಹದ ಕಾರಣ ದಡಕ್ಕೆ ಮೇಲೆತ್ತುವಾಗ ನೀರಿನ ರಭಸಕ್ಕೆ ದೋಣಿ ಸಮೇತ ಕೊಚ್ಚಿಹೋಗಿ ಇಬ್ಬರು ಪಾರಾದರೆ, ವ್ಯಕ್ತಿಯೋರ್ವನು ಕೊಚ್ಚಿಹೋದ ಘಟನೆ ಅಡ್ಯಾರ್-ಪಾವೂರು ಬ್ರಿಡ್ಜಿನ ಸಮೀಪ ನಡೆದಿದೆ.

ನೇತ್ರಾವತಿ ನದಿಯಲ್ಲಿ ವಿಪರೀತ ನೀರು ಇದ್ದು, ಉತ್ತರ ಪ್ರದೇಶ ಮೂಲದವರಾದ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರುಗಳು ದೋಣಿ ಸಮೇತ ನದಿಯ ನೀರಿನ‌ ರಭಸಕ್ಕೆ ಕೊಚ್ಚಿಕೊಂಡು ಹೋಗಿರುತ್ತಾರೆ. ಅದರಲ್ಲಿ ಅಡ್ಯಾರ್-ಪಾವೂರು ಬ್ರಿಡ್ಜಿನ ಅಡಿಯಲ್ಲಿ ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ರವರು ಈಜಿ ದಡ ಸೇರಿದ್ದು, ರಾಜು ಸಾಹ್ ಎಂಬವರು ನೀರಿನ‌ ರಭಸಕ್ಕೆ ನಾಪತ್ತೆಯಾಗಿರುತ್ತಾರೆ. ಆಸಿಫ್ & ಇಸಾಕ್ ಎಂಬವರು ದೋಣಿಯ ಮಾಲಕರಾಗಿರುತ್ತಾರೆ.

ಕಾರವಾರ : ಅಸ್ವಸ್ಥರಾಗಿದ್ದ ಅರವತ್ತು ವರ್ಷ ಪ್ರಾಯದ ವೃದ್ಧನ ರಕ್ಷಣೆ

Posted On: 03-07-2022 07:59AM

ಉಡುಪಿ : ಹೊಸ ಬೆಳಕು ಆಶ್ರಮ ಮಣಿಪಾಲ ಇವರ ವಿನಂತಿಯ ಮೇರೆಗೆ,ಕಾರವಾರ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ತಂಗುದಾಣದಲ್ಲಿ ಅಸ್ವಸ್ಥರಾಗಿದ್ದ ಸುಮಾರು ಅರವತ್ತು ವರ್ಷ ಪ್ರಾಯದ ಒಂಪ್ರಕಾಶ್ ಎಂಬುವವರನ್ನು ಈಶ್ವರ್ ಮಲ್ಪೆರವರು ಸತ್ಯದ ತುಳುವೆರ್ (ರಿ) ಉಡುಪಿ- ಮಂಗಳೂರು ಸಂಸ್ಥೆಯ ಸಂಸ್ಥಾಪಕರಾಗಿರುವ ಪ್ರವೀಣ್ ಕುರ್ಕಾಲುರವರ ಹಾಗು ವಿಜಯ್ ಕೋಟ್ಯಾನ್ ಜೊತೆಗೆ, ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ಸೇರಿಸಿದರು.

ಈ ಸಂದರ್ಭದಲ್ಲಿ ಹೊಸ ಬೆಳಕು ಆಶ್ರಮದ ಮುಖ್ಯಸ್ಥರಾಗಿರುವ ಪೂರ್ಣಿಮ, ವಿನಯಚಂದ್ರ, ಗೌರೀಶ್, ಕಾರವಾರ ಪೊಲೀಸ್ ಠಾಣಾಧಿಕಾರಿ ಹಾಗೂ ಮಲ್ಪೆ ಪೊಲೀಸ್ ಠಾಣಾಧಿಕಾರಿ ಶಕ್ತಿವೇಲು ಸಹಕರಿಸಿದ್ದರು.